ಗೆದ್ದ ‘ರಾಬರ್ಟ್’ ‌

ಗೊರುರು ಶಿವೇಶ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷೆಯ ಚಿತ್ರ ರಾಬರ್ಟ್ ಬಿಡುಗಡೆಯಾಗಿದೆ. 2019ರಲ್ಲಿ ಬಿಡುಗಡೆಯಾದ ಜೊತೆಗೆ ಅಪಾರ ಯಶಸ್ಸು ಸಾಧಿಸಿದ ಯಜಮಾನ ಹಾಗೂ ಕುರುಕ್ಷೇತ್ರ ಸಿನಿಮಾಗಳ ಪ್ರಭಾವ ಈ ಸಿನಿಮಾದ ಮೇಲೆ ಸಹಜವಾಗಿ ಆಗಿದೆ. ತಮ್ಮ ಹಿಂದಿನ ಚೌಕ ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ತರುಣ್ ಸುಧೀರ್ ಈ ಚಿತ್ರದ ನಿರ್ದೇಶಕ. ಅದೇ ಚಿತ್ರದಲ್ಲಿ ಒಂದು ಪ್ರಭಾವಿ ಪಾತ್ರವನ್ನು ಗೌರವ ನಟರಾಗಿ ನಿರ್ವಹಿಸಿದ್ದ ದರ್ಶನ್ ಪಾತ್ರದ ಹೆಸರು ಕೂಡ ರಾಬರ್ಟ್.

ಡಿ ಬಾಸ್ ದರ್ಶನ್ ಅವರನ್ನು ಚೌಕದ ಕೇಂದ್ರವಾಗಿಟ್ಟುಕೊಂಡು ಡೈರೆಕ್ಷನ್, ಡೈಲಾಗ್, ಡಾನ್ಸ್ ಮತ್ತು ದೋಸ್ತ್ ಸೆಂಟಿಮೆಂಟ್ ಎಂಬ 4 ಅಡಿಗಳ ಮೇಲೆ ಸುಂದರ ಮನರಂಜನೆಯ ಭವನ ರೂಪಿಸಿದ್ದಾರೆ ತರುಣ್ ಸುಧೀರ್. ಇದಕ್ಕೆ ಛಾಯಾಗ್ರಹಣ, ಸಂಗೀತ, ಹಾಡುಗಳು ಮತ್ತು ಹರಿತವಾದ ಸಂಕಲನ ಪೂರಕವಾಗಿ ಮನೆಯ ಒಳಹೊರಗನ್ನು ಸುಂದರವಾಗಿ ಅಲಂಕರಿಸಿರುವುದಲ್ಲದೆ ಮನೆಯ ಆಕರ್ಷಣೆಯನ್ನು ಹೆಚ್ಚಿಸಿದೆ.  

ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರಿಬ್ಬರನ್ನು ರಂಜಿಸುವ ಗುರಿಯಾಗಿಟ್ಟುಕೊಂಡು ರಚಿಸಿರುವ ಕಥೆ, ಅಭಿಮಾನಿಗಳು ಹಾಗೂ ಸಾಮಾನ್ಯ ಪ್ರೇಕ್ಷಕರು ಇಬ್ಬರನ್ನು ಸಮನಾಗಿ ಆಕರ್ಷಿಸುತ್ತದೆ. ಎರಡು ಭಿನ್ನ ಶೇಡುಗಳ ಕಥೆಯುಳ್ಳ ಚಿತ್ರಗಳು ಇತ್ತೀಚೆಗೆ ಸಾಮಾನ್ಯ ಹಾಗೂ ಇತ್ತೀಚಿನ ಟ್ರೆಂಡ್ ಕೂಡ ಹೌದು. ಮೊದಲಾರ್ಧದಲ್ಲಿ ರಾಘವನ್ ಆಗಿ ದ್ವಿತೀಯಾರ್ಧದಲ್ಲಿ ರಾಬರ್ಟ್ ಆಗಿ ಸಮಾನ ಶ್ರದ್ಧೆಯಿಂದ ಪಾತ್ರ ನಿರ್ವಹಿಸಿರುವ ದರ್ಶನ್ ನೋಡುಗರ ಮನವನ್ನು ಗೆದ್ದಿದ್ದಾರೆ.

ಮಗುವನ್ನು ವಿವಿಧ ಕೋನಗಳಲ್ಲಿ ಚಿತ್ರೀಕರಿಸಿ ತಾಯಿಯ ಮುಂದೆ ಇಟ್ಟಂತೆ ದರ್ಶನ್ ಅವರನ್ನು ಭಿನ್ನಭಿನ್ನ ಪಾತ್ರಗಳಲ್ಲಿ ಪ್ರೇಕ್ಷಕರ ಎದುರು ತೆರೆದಿಟ್ಟಿದ್ದಾರೆ ನಿರ್ದೇಶಕರು. ಒಂದು ದೃಶ್ಯದಲ್ಲಿ ದಶಕಂಠ ರಾವಣನಾಗಿ ಅಬ್ಬರಿಸುವ ನಾಯಕ ಮತ್ತೊಂದು ಸನ್ನಿವೇಶದಲ್ಲಿ ವಿನಯವೇ ಮೂರ್ತಿವೆತ್ತಂತ ಕೆಲಸಗಾರ, ಮತ್ತೊಂದು ಕಡೆ ಮಾತನಾಡುವಾಗ ಉಗ್ಗುವ ತಂದೆ.. ಹೀಗೆ ವಿಭಿನ್ನ ಪಾತ್ರಗಳು ಪಾತ್ರಧಾರಿಗೆ ಸವಾಲು ಕೂಡ. ಅದನ್ನು ದರ್ಶನ್ ಸಮರ್ಥವಾಗಿ ನಿರ್ವಹಿಸಿದ್ದಾರೆ.

ಚೌಕದಲ್ಲಿ ತಂದೆ ಮಗಳ ಬಾಂಧವ್ಯ ವಿದ್ದರೆ ಇಲ್ಲಿ ತಂದೆ-ಮಗನ ಬಾಂಧವ್ಯವಿದೆ. ಕಳೆದುಹೋದ ಮಗುವನ್ನು ಹುಡುಕುವ ತಂದೆಯ ಉದ್ವೇಗ, ಕಾತರ, ಹತಾಶೆ, ದುಃಖ ಚಿತ್ರದಲ್ಲಿ ಮನೋಜ್ಞವಾಗಿ ಮೂಡಿಬಂದಿದೆ. ಸ್ನೇಹಿತರ ನಡುವಿನ ಸ್ನೇಹ, ಸಂಬಂಧ, ಸಹವರ್ತಿಗಳಲ್ಲಿ ಅನುಕಂಪ, ಪ್ರೀತಿ‌.. ಹೀಗೆ ಹತ್ತು ಹಲವು ಭಾವನಾತ್ಮಕ ಸಂಬಂಧಗಳು ಈ ಚಿತ್ರದಲ್ಲಿ ಮೇಳೈಸಿವೆ. 

ಸೆಂಟಿಮೆಂಟ್, ಸಾಹಸ, ರೋಚಕತೆ ಹದವಾಗಿ ಬೆರೆತ ಸಿನಿಮಾದಲ್ಲಿ ಹಾಡುಗಳು ಹಾಗೂ ಹಾಡುಗಳ ಚಿತ್ರೀಕರಣ ವಿಶೇಷವೆನಿಸುತ್ತದೆ‌. ನಾಯಕಿಗೆ ಇಲ್ಲಿ ಹೆಚ್ಚು ಕೆಲಸವಿಲ್ಲದಿದ್ದರೂ ಡಾನ್ಸ್ ಗಳಲ್ಲಿ ಗಮನ ಸೆಳೆಯುತ್ತಾರೆ. ಶಿವರಾಜ್ ಕೆ ಆರ್ ಪೇಟೆಗೆ ಇಲ್ಲಿ ವಿಭಿನ್ನ ಪಾತ್ರವಿದ್ದು ಅದನ್ನು ಅವರು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ನಾಯಕ ಪಾತ್ರದಂತೆಯೇ ಪ್ರತಿ ನಾಯಕರ ಪತ್ರಗಳು ವಿಜೃಂಭಿಸಿದಾಗಲೇ ಚಿತ್ರ ಕಳೆಗಟ್ಟುವುದು. ಇಲ್ಲಿ ಖಳನಾಯಕ ಪಾತ್ರದ ಜಗಪತಿಬಾಬು, ರವಿಶಂಕರ್ ಅವರ ಪಾತ್ರಗಳಿಗೂ ಒಳ್ಳೆ ಮೈಲೇಜ್ ಸಿಕ್ಕಿದೆ. ಗಂಭೀರ ಸನ್ನಿವೇಶದಲ್ಲಿ ಚಿಮ್ಮಿ ಬರುವ ಹಾಸ್ಯ ರವಿಶಂಕರ್ ಅವರ ಹಿಂದಿನ ಅಧ್ಯಕ್ಷ ಚಿತ್ರವನ್ನು ನೆನಪಿಸುತ್ತದೆ. ವಿನೋದ್ ಪ್ರಭಾಕರ್ಗೂ ಇಲ್ಲಿ ಗಮನಾರ್ಹ ಪಾತ್ರ ಸಿಕ್ಕಿದ್ದು ಅದನ್ನು ಚೆನ್ನಾಗಿ ನಿರ್ವಹಿಸಿದ್ದಾರೆ ಕೂಡ‌.

ಪ್ರತಿ ಸನ್ನಿವೇಶದ ಕೊನೆಗೊಂದು ತಿರುವು, ಆ ತಿರುವಿನ ಅಂಚಿನಲ್ಲಿ ಕಾಣಸಿಗುವ ಮತ್ತೊಂದು ದಾರಿ, ಹೀಗೆ ಪ್ರೇಕ್ಷಕರನ್ನು ಅಂದಾಜಿಗೆ ಸಿಲುಕಿಸುತ್ತ, ಮತ್ತೊಮ್ಮೆ ದಾರಿ ತಪ್ಪಿಸುತ್ತಾ ಕರೆದೊಯ್ಯುವಲ್ಲಿ ನಿರ್ದೇಶಕರ ಜಾಣ್ಮೆ ಅಡಗಿದೆ. ಈ ಕಾರಣಕ್ಕಾಗಿ ಒಂದು ಮೆಚ್ಚುಗೆಯ ಅಭಿನಂದನೆ.

ಕರೋನಾ ಗಾತ್ರದಿಂದ ಇಡೀ ಚಿತ್ರೋದ್ಯಮ ಅದರಲ್ಲೂ ಕನ್ನಡ ಚಿತ್ರೋದ್ಯಮ ಸಂಪೂರ್ಣವಾಗಿ ನಲುಗಿದೆ. ಒಂದು ವರ್ಷಗಳ ಕಾಲ ಮುಚ್ಚಿದ್ದ ಚಿತ್ರಮಂದಿರಗಳು ಈಗ ಕೊಂಚ ಆತಂಕದಲ್ಲೇ ಬಾಗಿಲು ತೆರೆದಿವೆ. ಚಿತ್ರಮಂದಿರವನ್ನು ನೆಚ್ಚಿರುವ ಚಿತ್ರಮಂದಿರದ ಕಾರ್ಮಿಕರು, ವಿರಾಮದಲ್ಲಿ ಭೇಟಿಕೊಡುವ ರಿಫ್ರೆಶ್ಮೆಂಟ್ ಅಂಗಡಿಯಾತ, ಬೈಸಿಕಲ್, ಸ್ಕೂಟರ್ ತಂಗುದಾಣಗಳು, ಥಿಯೇಟರ್ ಸುತ್ತ ಪಾನಿ ಪುರಿ, ಬೇಲ್ ಪುರಿ ಎಗ್ ರೈಸ್ ಮಾರುವ ತಳ್ಳುಗಾಡಿ ಯವರು, ಬ್ಲ್ಯಾಕ್ ಟಿಕೆಟ್ ಮಾರುವವರು.. ಒಂದು ಸಮುದಾಯ ತಮ್ಮ ಜೀವನಕ್ಕಾಗಿ ಸ್ಟಾರ್ ನಟರ ಉತ್ತಮ ಚಿತ್ರಗಳ  ಬಿಡುಗಡೆಯನ್ನು ಕಾಯುತ್ತಿರುತ್ತದೆ.

ಮೆಗಾಸ್ಟಾರ್ ಚಿತ್ರಕ್ಕಾಗಿ ಹರಿದುಬರುವ ಲಕ್ಷ ಲಕ್ಷ ಪ್ರೇಕ್ಷಕರು ಕೇವಲ ನಿರ್ಮಾಪಕರ ಹಣದ ಚೀಲವನ್ನಷ್ಟೇ ತುಂಬದೇ ಪರೋಕ್ಷವಾಗಿ ಇಂತಹ ನೂರಾರು ತುತ್ತಿನ ಚೀಲಕ್ಕೆ ನೆರವಾಗಬಲ್ಲರು. ಎಲ್ಲ ರಾಜ್ಯಗಳ ಭಾಷೆಗಳಿಗಿಂತ ದುರ್ಬರ ಸ್ಥಿತಿಯನ್ನು ಕನ್ನಡ ಚಿತ್ರರಂಗ ಇಂದು ಎದುರಿಸುತ್ತಿದೆ. ಒಂದೆಡೆ ಡಬ್ಬಿಂಗ್ ಮೂಲಕ ಇತರ ಭಾಷಾ ಚಿತ್ರಗಳು ಮತ್ತು ಸೀರಿಯಲ್ಲುಗಳು ಕನ್ನಡ ಕಿರುತೆರೆಯನ್ನು ಆಕ್ರಮಿಸಿವೆ. ಇನ್ನೊಂದೆಡೆ ಪ್ರೇಕ್ಷಕರ ಕೊರತೆಯನ್ನು ಎದುರಿಸುತ್ತಿರುವ ಚಿತ್ರಮಂದಿರಗಳು. ಇಂತಹ ಸಂದರ್ಭದಲ್ಲಿ ರಾಬರ್ಟ್ ಚಿತ್ರದ ಯಶಸ್ಸು, ಹರಿದುಬರುತ್ತಿರುವ ಜನಸಾಗರ ಭರವಸೆಯ ಬೆಳಕನ್ನು ನೀಡಿದೆ.

‍ಲೇಖಕರು Avadhi

March 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: