
ಮಹಮ್ಮದ್ ರಫೀಕ್ ಕೊಟ್ಟೂರು
——
ಅವನ ಕ್ಯಾನ್ವಾಸಿನ ತುಂಬಾ
ಗೆರೆಗಳು
ನೀಳವಾದವು ಅದರ ಮಗ್ಗುಲು ಡೊಂಕಾದವು
ಚಿಕ್ಕ ದೊಡ್ಡ ಗೆರೆಗಳು ಅಕ್ಕಪಕ್ಕ
ಕೈಯ ಬ್ರಷ್ ಹಿಡಿದು ಬಣ್ಣದೊಳದ್ದಿ
ಅವನೇ ಹೇಳಿದ
ನೀಳವಾದದವು ಪುರುಷನಂತಿವೆ
ಡೊಂಕಾದವು ಹೆಣ್ಣಿನಂತೆ ಕಾಣುತ್ತವೆ
ಅಲ್ಲವೇ?
ಅದೇಕೆ ಹಾಗೆ? ನಾನೆಂದೆ

ಬಳ್ಳಿಯಂತೆ
ಡೊಂಕು ಸೌಂದರ್ಯವೆಂದ,
ಮರದಂತೆ
ಸೆಟೆದು ನಿಲ್ಲುವುದು ಗಂಡಿನ ಗುಣ ನಾನೆಂದೆ ಕುಹಕದಿಂದ,
ನಕ್ಕು ಅವನು ತಲೆದೂಗಿದ
ಇಲ್ಲ ಹಾಗಲ್ಲ
ಅದು ಗಂಡಿನ ಯೋಜಿತ ಯೋಚನೆ
ಬಾಗಿಸುವುದು ಅವನ ಮನದೊಳಗವಿತಿದೆ
ಖಂಡಿಸಿ ತುಂಡರಿಸಿದೆ
ಮುಂದುವರಿದು
ಆಕಾಶ ಬರೆದು ಗಂಡೆಂದ
ಅದಕೆ ನಾನೇ ಹೇಳಿದೆ
ಇಲ್ಲ ಇದು ಹಾಗಲ್ಲ
ಮೇಲಿರುವುದೆಲ್ಲಾ ಗಂಡು
ಹರಿಯುವ ನೀರು ಹೆಣ್ಣಾಗಿ
ಸುರಿಯುವ ಮೇಘ ಗಂಡಾದಂತೆ
ಓಹೋ! ಅದಕೇ
ವೃತ್ತವ ತೋರಿ ಭೂಮಿಯೂ ಹೆಣ್ಣೆಂದು
ತನ್ನ ಅವತರ್ಕಕೆ ಗಹಗಹಿಸಿ
ಗಂಡಿನಂತೆ ಠೇಂಕರಿಸಿ ನೀ ನಿಜವೆಂದ !






0 Comments