ಮಸಣದ ಮಡಿಲೊಳ ಲಾಲಿ ಹಾಡು

ಸುನಿಲ್ ಕೇಸರಿ

‘ನಾಗರ ಹೆಡೆ ಹಂಗ ಇಬ್ಬರಣ್ಣರುತಮ್ಮ
ನೀನ್ಯಾಕೆ ಬಡತನ ಬಯಸುತಿ ನನ ಮಗಳೇ’

ಸರಿಸುಮಾರು ೮-೯ ವರ್ಷಗಳ ಹಿಂದೆ ಮಧ್ಯೆರಾತ್ರಿ ೨-೩೦ಕ್ಕೆ ಸರಿಯಾಗಿ ಮನೆಯ ಹಿಂದೆ ಮತ್ತೊಬ್ಬರ ಮನೆಯ ಪಡಸಾಲೆಯಲ್ಲಿ ಒಬ್ಬ ಹೆಂಗಸು

‘ಊಹೂ… ಊಹೂ…’

ಹುಚ್ಚಿಯಂತೆ ಏನನ್ನೋ ಬಡಬಡಿಸುತ್ತಾ ಅಳುತ್ತಿದ್ದಳು. ದಿನವೂ ಆಕೆಯದ್ದು ಇದೇ ಗೋಳಾಗಿದ್ದರಿಂದ ಅಕ್ಕಪಕ್ಕ ಮನೆಯವರಿಗೆ ನಿದ್ದೆ ಭಂಗದಿಂದ ಆಕೆಯ ತಂಗಿ-ತಮ್ಮರಿಗೆ ನಿಮ್ಮಕ್ಕಳನ್ನ ಆಕೆ ಊರಿಗೆ ಕಳಿಸಲು ಹೇಳಿದರು. ಇದ್ದಕ್ಕಿದ್ದಂತೆ ಆಕೆಯ ಅಳು ನಿಂತಿತು. ಅಂದು ಆ ಮಧ್ಯ ರಾತ್ರಿಯಲಿ ಅವಳಕ್ಕ ಒಬ್ಬಳು ಬಂದು ಕೆನ್ನೆಕೆನ್ನೆಗೆ ಪಟೇರ್‌ ಎಂದು ಬಾರಿಸಿದಳು.

‘ಅಯ್ಯೋ ಲೌಡಿ ತಿಂದ್‌ ಮೇಲೆ ಸುಮ್ಮನೆ ಬಿದ್ಕಳಕ್ಕಾಗಲ್ವಾ’, ಎಂದು ಬಯ್ಯುತ್ತ ಹೊಡೆಯುತ್ತಾ ಆಕೆಯನ್ನ ಸುಮ್ಮನೆ ಮಾಡುತ್ತಿದ್ದರೂ. ಮತ್ತೆ ಕೆಲವು ದಿನಗಳು ಕಳೆದಾಗ ಮತ್ತೆ ಅದೇರಾಗ ಅದೇ ಹಾಡು ಕೆಲವೊಮ್ಮೆ ಆಕೆಗೆ ಸಿಗುತ್ತಿದ್ದ ಹೊಡೆತಗಳು ವಿಪರೀತವಾಗುತ್ತಿದ್ದವು. ಆ ಹಿಂಸೆಯನ್ನು ತಾಳಲಾರದೆ ತನಗಾದ ನಷ್ಟವ ಮರೆತು ತನ್ನ ಕುಡುಕ ಗಂಡನ ಮನೆಯ ಹಿಂಸೆಯೇ ಮೇಲು ಎಂದು ಮಧ್ಯರಾತ್ರಿ ಬರಿಗಾಲಿನಲ್ಲಿ ಊರಿಂದ ಊರಿಗೆ ಹುಚ್ಚಿಯಂತೆ ರಾತ್ರೊರಾತ್ರಿ ನಡೆದು ಹೊಗುತಿದ್ದಳು.

ಸುಮಾರು ೩೫ ವರ್ಷಗಳ ಹಿಂದೆ ತಾಳಿಕಟ್ಟಿ ಕಾವಲು ಎಂಬ ಗ್ರಾಮವೊಂದರಲ್ಲಿ ಒಂದು ಕುಟುಂಬ ಗಂಡ ಹೆಂಡತಿಗೆ ನಾಕು ಜನ ಹೆಣ್ಣುಮಕ್ಕಳು, ಇಬ್ಬರು ಗಂಡು ಮಕ್ಕಳು… ಆ ಹೆಣ್ಣು ಮಕ್ಕಳಲ್ಲಿ ದೊಡ್ಡವಳೆ ‘ದೇವೀರಮ್ಮ’. ಈಕೆಯನ್ನ ಹೊರತುಪಡಿಸಿ ಎಲ್ಲರೂ ತುಂಟಾಟ  ಸಂತಸದಲ್ಲಿ ಬೆಳೆದರು. ಈಕೆ ಮಾತ್ರ ಯಾವಾಗಲು ಮುದ್ದೆಯಂತೆ ಗುಂಡಗೆ ಸುಮ್ಮನೆ ಇರುವ ಸ್ವಭಾವ. ಹೆಚ್ಚು ಮಾತನಾಡುವ ಸ್ವಭಾವದವಳಲ್ಲಾ.  ಕೈಲಿದ್ದ ತಿಂಡಿಯನ್ನ ತಮ್ಮತಂಗಿಯರು ಕಿತ್ತುಕೊಂಡರೂ ಎಂದೂ ಕೋಪಗೊಂಡವಳಲ್ಲ. ಕಡುಬಡತನದಲ್ಲಿನ ಹಬ್ಬದ ದಿನ ಹೊಸಬಟ್ಟೆಇಲ್ಲದಿದ್ದಾಗಲೂ ಎಂದೂ ಹೊಸ ಬಟ್ಟೆಯನ್ನ ಬೇಕೆಂದು ಹಠಮಾಡಿದವಳಲ್ಲಾ. ಜುಮುಕಿ, ಸರ, ಕಡಗ ಬೇಕೆಂದು ಅತ್ತವಳಲ್ಲ ಇಂಜಿನಿಯರ್, ಡಾಕ್ಟರ್‌ನಂತಹ ಗಂಡ ಬೇಕೆಂದು ಮುನಿಸಿಕೊಂಡವಳಲ್ಲಾ…

ಇಂತಹ ದೇವೀರಮ್ಮನ ಹೊರತು ಪಡಿಸಿ ಉಳಿದ ತಂಗಿಯರಿಗೆ ಕೋಗಿಲೆ ಗೂಡಿನಂತಹ ಗಂಡನ ಮನೆ ಸಿಕ್ಕಿತು. ಆದರೂ ಅವರಲ್ಲಿ ಬಡತನಕ್ಕೆ ಕೊರತೆ ಇರಲಿಲ್ಲ. ಆದರೆ ದೇವೀರಮ್ಮಳಿಗೆ ಮಾತ್ರ ಬಂಡಿಕುಡುಕ ಗಂಡನ ಕೈಹಿಡಿವ ಯೋಗವಿತ್ತು ಹಿಡಿದಳು. ನಾಕು ಜನರೆದುರು ತಲೆ ಎತ್ತಿ ನಡೆಯಲು ಕೂಲಿನಾಲಿ ಮಾಡಿಯಾದರೂ ಮನೆಯೊಂದನ್ನ ಕಟ್ಟಿ ಮಕ್ಕಳಿಗೆ ಭವಿಷ್ಯ ರೂಪಿಸುವ ಕನಸ ಹೊತ್ತು ಕಡುಬಡತನದ ತನ್ನ ತವರು ಗುಡಿಸಲು ಮನೆಯನ್ನ ತೊರೆದು ಮಹಾಲಕ್ಷ್ಮೀಯಾಗಿ ಗಂಡನ ಹಳೆಯ ಗುಡಿಸಲೊಳಗೆ ದೀಪ ಹಚ್ಚಲು ಹೊರಟಳು. ಮದುವೆಯಾಗಿ ಹೋದ ಮಗಳಿಗೆ ಶಾಸ್ತ್ರೋಕ್ತವಾಗಿ ಏನೇನೋ ಮಾಡಬೇಕಲ್ಲಾ ಅದನ್ನೆಲ್ಲಾ ಆಕೆಯ ಹೆತ್ತವರು ಮಾಡಿದರು.

ಮದುವೆಯಾಗಿಒಂದೇ ವಾರಕ್ಕೆ ದೇವಿರಮ್ಮ ಮತ್ತೊಬ್ಬರ ಹೊಲದಲ್ಲಿ ಕೂಲಿಗೆ ಹೊರಟಳು. ಗಂಡನದೂ ಕೂಲಿ ಜೀವನವೇ ಬಿರುಬಿಸಿಲಿನ ಧಗೆಯಲ್ಲಿಯೂ ಕೂಲಿನಾಲಿ ಮಾಡಿಬಂದರೂ ಎಂದೆಂದೂ ತನ್ನಗಂಡ ಕೂಲಿಗೆ ಕಳಿಸಿದನೆಂಬ ಕೋಪವಿರಲಿಲ್ಲ.  ಒಂದು ಕಡೆ ಕುಡಿದು ಬರುವ ಗಂಡ ಗುಡಿಸಲಲ್ಲಿ ಮಲಗಿದ್ದರೆ, ಮಧ್ಯರಾತ್ರಿಯವರೆಗೂ ಈಕೆ ಮನೆಯ ಮುಸರಿ, ನೆಲವೊರಸೋ ಕೆಲಸವನ್ನು ಬುಡ್ಡಿಯ ಬೆಳಕಲ್ಲಿ ಮಾಡಿ ಮುಗಿಸುವಷ್ಟರಲ್ಲಿ ಸೊಂಟ ಬಿದ್ದೋಗಿರುತ್ತಿತ್ತು. ಅಷ್ಟೆ ಅಲ್ಲ ಬೆಳಿಗ್ಗೆ ೬ಕ್ಕೆ ಏಳಬೇಕು, ಮುದ್ದೆ ಮಾಡಿಚಟ್ನಿನ ಸಿಲ್ವರ್‌ಬಾಕ್ಸ್ ನಲ್ಲಿ ತುಂಬಿಕೊಂಡು ಕೂಲಿಗೆ ಹೊರಡಬೇಕು ಇದು ಆಕೆಯ ದಿನಚರಿ ಅಷ್ಟರ ಮಟ್ಟಿಗೆ ಆ ಬಡತನ ಅವಳಲ್ಲಿತ್ತು.

ಬೆಳಿಗ್ಗೆ ಸೂರ್ಯ ಹುಟ್ಟುವ ಮುಂಚೆಯೇ ಎದ್ದು, ಅರಿದಿದ್ದ ಸೀರೆ ಸೆರಗ ಸರಿಮಾಡಿಕೊಂಡು ಹಟ್ಟಿ ಕಸ ಹೊಡೆದು, ನೀರ ಚುಮುಕಿಸಿ ರಂಗೋಲಿ ಬಿಟ್ಟರೆ, ಈಕೆಯ ರಂಗೋಲಿಯೇ ಆ ಸೂರ್ಯ ರಾಯನಿಗೆ ಪ್ರೀತಿಯ ಸುಪ್ರಭಾತ. ಅದೆಷ್ಟು ಚೆನ್ನಾಗಿ ಇದ್ದಿಲಲ್ಲಿ ಹಲ್ಲುಜ್ಜಿ, ಮುಖ ತೊಳೆದು, ಗುಡಿಸಲು ಮೂಲೆಯಲ್ಲಿ ಇದ್ದ ‘ತಾಳಘಟ್ಟ ದೊಡ್ಡಮ್ಮ’ ದೇವಿಗೆ ದೀಪ ಹಚ್ಚಿ, ಹಣೆಯ ತುಂಬ ಊರ ಅಡ್ಡಾರದುಂಡಾಗಿ ಕೆಂಪು ಕುಂಕುಮ ಇರಿಸಿಕೊಂಡು ಹೊರಗೆ ಬಂದು ನಿಂತರೆ, ಆಕೆಯ ಹಣೆಯೊಳ ಆ ಕೆಂಪು ಕುಂಕುಮ ಆ ಸೂರ್ಯನನ್ನೇ ನಾಚಿಸುವಷ್ಟು ಸಂಸ್ಕೃತಿಯ ಮಗಳಾಕೆ.

ಅಕ್ಕಪಕ್ಕದ ಮನೆಯ ಹೆಂಗಸರಜೊತೆಗೆಅದೇ ಕೂಲಿಗೆಲಸ ಸುಡುಬಿಸಿಲೆಲ್ಲಾ ದುಡಿದು ಸಂಜೆ ಮನೆಗೆ ಬರುಷ್ಟರಲ್ಲಿ ಮೈಹಣ್ಣಾಗಿ ಹೋಗುತ್ತಿತ್ತುಹಣ್ಣಾಗಿದ್ದ ಆ ದೇಹ ಕುಡಿದ ಗಂಡನ ಒದೆಗಳಿಂದ ಇನ್ನೂ ಮಾಗಿ ಹಣ್ಣಾಗಿ ಹೋಗುತಿತ್ತು, ಕುಡಿದ ಅಮಲಿನಿಂದ ತನ್ನೋಡತಿಯ ಸಿಕ್ಕಾಬಟ್ಟೆ ಜಡಿಯುವುದರ ಜೊತೆಗೆ ಆ ಬೈಗುಳಗಳೂ.

ಅಕ್ಕಪಕ್ಕದವರು ‘ಯಾವ ಪಾಪ ಮಾಡಿ, ಇವನ್ ಕೈಲಿಸಿಕಾಕ್ಕಂತೋ ಈ ಮಗಾ’ ಅಂತ ಅನುಕಂಪ ಪಡುವಂತಿತ್ತು, ದಿನಗಳು ಕಳೆದಂತೆ ಬಡತನಕ್ಕೆ ಕೊನೆಯೇ ಇಲ್ಲ ಅದರೊಳಗೆ ಹುಟ್ಟುವ ಮಕ್ಕಳಿಗೂ ಕೊನೆಯ ಇಲ್ಲ ಎಂಬಂತೆ ಒಂದಲ್ಲ, ಎರಡಲ್ಲಾ, ಮೂರು ಮಕ್ಕಳಾದವ., ೨ ಹೊಟ್ಟೆಗೆ ಮೂರೊತ್ತಿನ ಊಟಕ್ಕೆ ಹೆಣಗಬೇಕಿದ್ದ ಸಂಸಾರ ಈಗ ಆರು ಹೊಟ್ಟೆಗೆ..! ಕೈರಟ್ಟೆಯಲ್ಲಿನ ತ್ರಾಣ ಹೋಗುವಂತೆ ಕೆಲಸ ಮಾಡುತ್ತಾಳೆ, ಗಂಡಸರ ಜೊತೆಗೆ ಮಣ್ಣಡಕುವ ಕೆಲಸಕ್ಕೂ ಹೊರಟಳು..! ಬೆಳೆಯೋ ಮಕ್ಕಳು ಸರಿಯಾಗಿ ಊಟವಿಲ್ಲದೇ ಕಂದಿದ್ದವು.

ಗಂಡನ ಮನೆಗೆ ಬರುವಾಗ ಹೊಸಮನೆ ಕಟ್ಟಿಸಿಮಕ್ಕಳಿಗೆ ಒಳ್ಳೆಯ ಭವಿಷ್ಯ ಕಟ್ಟಿಕೊಡುವ ಆಸೆಯ ಹೊತ್ತು ಬಂದ ದೇವೀರಮ್ಮಳಿಗೆ, ಈ ಬಡತನದ ಹೊರೆಯನ್ನ ಹೊರಲಾಗುತ್ತಿಲ್ಲ. ದೇವರ ದಯೆ ಎಂಬಂತೆ ಸರ್ಕಾರದಿಂದ ಮನೆಯಿಲ್ಲದವರಿಗೆ ಮನೆಗಳು ಮಂಜೂರಾದವು. ಮನೆ ಕಟ್ಟಲು ಹಣವನ್ನು ಪಡೆಯಲು ಕೆಲವರ ಕೈ ಬೆಚ್ಚಗೆ ಮಾಡಲು ಹಣವನ್ನುಕೊಡಬೇಕಿತ್ತು. ಇಂತಹ ಸಮಯದಲ್ಲಿಯೂ ಆ ಕುಡುಕ ಗಂಡನ ಸಹಕಾರವಿರಲಿಲ್ಲ… ಕುಡಿಯುವುದೇ ಒಂದು ಜಗತ್ತು. ಸಂಸಾರ ಕಲ್ಪನೆಯ ಲೋಕವಾಗಿತ್ತು.

ಅರಮನೆ ಅಲ್ಲದಿದ್ದರೂ ಕಾಗೆ ಗೂಡಿನಂತಹ ಮನೆಯಾದರೂ ಮಾಡಿಕೊಳ್ಳಬೇಕು ಎಂಬ ಬಯಕೆ ಅವಳಲ್ಲಿ ತುಡಿಯುತ್ತಿತ್ತು. ತನ್ನಲ್ಲಿದ್ದಎಲ್ಲಾ ಒಡವೆಗಳನ್ನು ಮಾರಿ ಮನೆ ಕಟ್ಟಲು ಮುಂದಾದಳು. ಅದರಲ್ಲಿ ಅರ್ಧಕ್ಕರ್ಧ ಹಣ ಲಂಚಕೋರರ ಪಾಲಾಯಿತು. ಅಳಿದುಳಿದ ಹಣದಲ್ಲಿ ಇಂಚು ಇಂಚಾಗಿ ಮನೆಯೇಳಲಾರದೇ ಏಳುತ್ತಿತ್ತು. ಸಾಲ ಮಾಡಿದಳು  ಕೊನೆಗೆ ಎರಡೇ ಎರಡು ಕೋಣೆ ಇರುವ ಮನೆ ರೆಡಿಯಾಯಿತು. ಪುಟ್ಟ ಮನೆ- ಆ ಮನೆಗೆ  ಸಿಮೆಂಟಿನ ಮೆತ್ತಿಗೆಯೂ ಇರಲಿಲ್ಲ. ಬೆಳಕ ಹರಿಸುವ ವಿದ್ಯುತ್‌ ಇರಲಿಲ್ಲ ವಿಪರ್ಯಾಸವೆಂದರೆ ಗುಡಿಸಲಿನಿಂದ ಹಂಚಿನ ಮನೆಗೆ ಬಂದರೂ, ಮನೆಯ ಬೆಳಕಾಗಿ ಆ ‘ಬುಡ್ಡಿ ದೀಪವೇ ಆಧಾರವಾಯಿತು’ಸಾಲ ಭಾದೆ ಹೆಚ್ಚಾಗುತ್ತಿತ್ತು. ಎದೆಯ ಮಟ್ಟಕ್ಕೆ ಬಂದಗಂಡು ಮಕ್ಕಳನ್ನು ಶಾಲೆ ಬಿಡಿಸಿ ಕೂಲಿಗೆ ಕೊಂಡೊಯ್ದಳು. ಬಡತನ ಮಕ್ಕಳಿಗೆ ಒಂದು ನೀಲಿ ನಿಕ್ಕರನ್ನ ಕೊಡಿಸುವಷ್ಟೂ ಹಣವಿರಲಿಲ್ಲ. ಅದರಲ್ಲಿ ಈ ಸಾಲದ ಬಾಧೆಯಿಂದ ಎರಡು ಗಂಡು ಮಕ್ಕಳು ಅವ್ವನ ಜೊತೆಗೆ ಕೂಲಿನಾಲಿ ಮಾಡಿ ಸಾಲ ತೀರುತ್ತಾ ಬಂದಿತ್ತು.

ಹಬ್ಬ ಹರಿದಿನಗಳಲ್ಲಿ ಅಕ್ಕಪಕ್ಕದ ಮನೆಯಲ್ಲಿ ಹೋಳಿಗೆ ಊಟವಾದರೆ ಈ ಮನೆಯಲ್ಲಿ ‘ಅಕ್ಕಿ ಪಾಯಸ’ದೂಟ. ಎಲ್ಲರೂ ಹೊಸ ದಿರಿಸಿನಲ್ಲಿ ಬಂದರೆ, ಈಕೆಯ ಮಕ್ಕಳಿಗೆ ಆ ಭಾಗ್ಯವಿರಲಿಲ್ಲ… ದಿನವೂ ಬಡತನದ ಬೇಗೆಯಲ್ಲಿ ಬೆಂದಒಬ್ಬ ಮಗ ಎಲ್ಲರನ್ನೂ ತೊರೆದೋದ. ಹಾಡಿ ನಲಿಯಬೇಕಿದ್ದ ವಯಸ್ಸಿನಲ್ಲಿ ದಿನವೂ ಕೂಲಿ ಕೂಲಿ, ಮಕ್ಕಳಾದ್ರು ಎಷ್ಟು ತಾನೇ ಮಾಡಿಯಾರು… ಹೀಗೆಯೇ ಬದುಕು ಸಾಗುತ್ತಿತ್ತು. ಎರಡು ವರ್ಷಗಳ ನಂತರ ಮನೆಯ ಆಧಾರವಾಗಿದ್ದ ದೇವಿರಮ್ಮಳ ದೇಹಶಕ್ತಿ ಕುಸಿದಿತ್ತು. ದಷ್ಟಪುಷ್ಟವಾಗಿದ್ದ ದೇವೀರಮ್ಮಳ ದೇಹಕರಗುತ್ತಿತ್ತು.

ಹೀಗಿರುವಾಗ ಒಂದು ರಾತ್ರಿ ಇದ್ದಕ್ಕಿದ್ದಂತೆ ಆಕೆಯ ಗಂಡ ನೋವಿನಿಂದ ಚೀರುತ್ತಾನೆ. ಏನು ಮಾಡುವುದು ತಿಳಿಯಲಿಲ್ಲ. ಹೊಟ್ಟೆಯ ಬಲಭಾಗದಲ್ಲಿ ಸ್ವಲ್ಪ ಊದಿದ್ದ ಬಾವಿತ್ತು. ಬೆಳಿಗ್ಗೆ ಊರ ಗ್ರಾಮದೇವತೆ ‘ದೊಡ್ಡಮ್ಮದೇವಿ’ಯ ಕೇಳಿದರು ಸದ್ಯದರಲ್ಲಿ ವಾಸಿಯಾಗುತ್ತದೆ ಎಂದಪ್ಪಣೆ ನೀಡಿತ್ತು. ಆದರೆ ಅವನ ಪರಿಸ್ಥಿತಿ ತೀರ ಬಿಗಡಾಯಿಸಿ ಹೋಯಿತು. ಹೀಗಿರುವಾಗ ಬೇರೆ ದಾರಿ ಕಾಣದೇ ಹೊಳಲ್ಕೆರೆಯ ಸರ್ಕಾರಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಯಿತು. ಅಲ್ಲಿನ ಸ್ಕ್ಯಾನಿಂಗ್‌ನಿಂದ ಹೊಟ್ಟೆಯಗಡ್ಡೆ ಇದ್ದು, ಆಪರೇಷನ್ ಮಾಡಿತೆಗೆಯಬೇಕು ಎಂದು ಡಾಕ್ಟರ್ ಹೇಳಿದರು. ಸರಿ ಸುಮಾರು ಖರ್ಚು ೪ ರಿಂದ ೫ ಸಾವಿರ ರೂಪಾಯಿಗಳು ಆಗಬಹುದೆಂದು ಎಂದರು.

ದೇವೀರಮ್ಮ ತಡ ಮಾಡಲಿಲ್ಲ. ಮನೆಯ ಸಾಲವನ್ನುಇನ್ನೂ ತೀರಿಸಿರಲಿಲ್ಲ. ಅಂತಹದ್ದರಲ್ಲಿ ಮತ್ತೆ ಸಾಲ…!!! ಆದರೂ ಕೆಲವರ ಕಾಲಿಡಿದು ಬೇಡಿ ೪-೫ ಸಾವಿರ ಹೊಂಚುವಷ್ಟರಲ್ಲಿ ಸಾಕಾಗಿ ಹೋದಳು. ಅಲ್ಲಿಂದ ೧೦-೧೫ ದಿನಗಳವರೆಗೆ ಆಸ್ಪತ್ರೆಯಲ್ಲಿರಬೇಕಿತ್ತು. ಇತ್ತ ಎಲ್ಲ ಖರ್ಚು ಸೇರಿ ಇನ್ನೂ ೪ ಸಾವಿರ ಹೆಚ್ಚು ಬೇಕಾಯಿತು. ಬರಿಗೈಯಲ್ಲಿ ಮನೆಗೆ ಬರುತ್ತಾಳೆ. ಮನೆಯಲ್ಲಿ ಏನೂ ಅರಿಯದ ಎರಡು ಮಕ್ಕಳ ಬಾಡಿದ ಮುಖ ಏನೂ ತೋಚುತ್ತಿಲ್ಲ. ಇನ್ನೆರಡು ದಿನ ಕಳೆದರ ತುಂಬಿದ ಉಗಾದಿ ಹಬ್ಬ, ಮನೆಯಲ್ಲಿ ಏನೂ ಇಲ್ಲ. ಗಂಡನನ್ನ ಮನೆಗೆ ಕರೆತರಲು ಇನ್ನೂ ೪ ಸಾವಿರ ರೂಪಾಯಿ ಎಲ್ಲಿಂದತರಲಿ ಎಂದು ಕೈ ಹೊತ್ತಿಕೊಂಡು ಕುಳಿತಳು. ಮನೆಯಲ್ಲಿ ಉಣ್ಣಲಿಕ್ಕಾಗಿ ೪ ಚೀಲ ರಾಗಿಯಿತ್ತು. ಉಳಿದದ್ದು ಅಷ್ಟು ಮಾತ್ರ ಎಂದು ಕ್ವಿಂಟಾಲ್‌ಗೆ ೪೦೦/-ರಂತೆ ಮಾರಿದಳು. ರೂ.೧೬೦೦/- ತೆಗೆದುಕೊಂಡ ಆಕೆ, ಇನ್ನೂ ರೂ.೨೪೦೦/- ಹಣವಿಲ್ಲ. ಮುಂದೇನಾದರೂ ಆಗಲಿ, ದೇವಿ ದೊಡ್ಡಮ್ಮ ಇದ್ದಾಳೆ ಅಂತ ೧೬೦೦/- ಹಣವನ್ನು ಕೈಲಿ ಹಿಡಿದು, ಆಸ್ಪತ್ರೆಗೆ ಬಂದುಕ್ಯಾಷಿಯರ್ ಬಳಿ ಅದನ್ನು ಕಟ್ಟುತ್ತಾಳೆ. ಅವನು ‘ಉಳಿದರೂಇನ್ನು ೨೪೦೦/- ಯಾರ್‌ಕಟ್ತಾರೆ’ ಎಂದ.

‘ಅಪ್ಪಾ, ನನ್ಬಳಿ ಇಷ್ಟೇ ಇರದು, ನಾಳೆ ತುಂಬಿದಂತಹ ಉಗಾದಿ ಹಬ್ಬ. ಮನೆಯಲ್ಲಿ ಎರಡು ಮಕ್ಳಿದಾವೆ. ಅಪ್ಪನ್ನ ಕರಕೊಂಡು ಬರ‍್ತೀನಿ ಅಂತ ಹೇಳ್‌ ಬಂದಿನಿ. ದಮ್ಮಯ್ಯ ಡಿಸ್‌ಚಾರ್ಜ್ ಮಾಡಿ ಬಿಡಪ್ಪಾ’

‘ನಿನ್ನಂತರ್ ನೂರ್‌ಜನ ನೋಡಿನಿ, ತೆಪ್ಪಗೆದುಡ್ಡುಕಟ್ಟೋಗು’ ಎಂದು ನುಡಿದ. ಆ ತಾಯಿ ಕಣ್ಣಲ್ಲಿ ನೀರು ತುಂಬಿಕೊಂಡು ಒಂದು ಮೂಲೆಯಲ್ಲಿ ಕೂತ್ಕಂಡ್ ಅಳ್‌ತಿದಾಳೆ. ಅದೇ ಸಮಯಕ್ಕೆ ಅಲ್ಲಿಗೆ ಗಂಡನಿಗೆ ಆಪರೇಷನ್ ಮಾಡಿದ ಶಂಕರಪ್ಪ ಡಾಕ್ಟರ್ ಬರ‍್ತಾರೆ. ಮೊದಲಿನಂದಿಲೂ ಆ ತಾಯಿ ಕಷ್ಟ ನೋಡಿದಅವರು ಮರುಗಿ, ಸ್ವತಃಕೈಯಾರೆ ೨೪೦೦/- ರೂಪಾಯಿಗಳನ್ನು ಕಟ್ಟಿ, ಇಬ್ಬರನ್ನೂ ಮನೆಗೆ ಕಳಿಸಿಕೊಟ್ಟರು.

ದಿನದಿಂದ ದಿನಕ್ಕೆ ದೇವೀರಮ್ಮ ಕುಗ್ಗಿ ಹೋಗಿಯೇ ಬಿಟ್ಟಳು. ಅಕ್ಕಪಕ್ಕದ ಮನೆಯಲ್ಲಿ ಇವಳ ಮಗಳವಾರೆಗಿನ ಹೆಣ್ಣು ಮಕ್ಕಳ ಮದುವೆಯಾಯಿತು. ಆದರೆ ಈಕೆ ಮಗಳಿಗಾಗಲಿಲ್ಲ. ಮನೆಯ ಜವಾಬ್ದಾರಿ ಹೊರಬೇಕಿದ್ದ ಗಂಡು ಮಕ್ಕಳು ಮೈಮರೆತು ದೂರಾದರು. ಗಂಡ ಇದ್ದೂ ಇಲ್ಲದಂತಾದಳು.  ದಿನವೂ ಚಿಂತೆಯೆಂಬುದು ಅವಳನ್ನು ಆವರಿಸುತ್ತಿತ್ತು ಬರಬರುತ್ತಾ ನಿದ್ದೆ ಮಾಯವಾಯಿತುಹಗಲಿರುಳೂ ಮಗಳ ಚಿಂತೆಯಾಯಿತುಮಗಳು ಕೂಲಿ ಮಾಡಿಕೊಂಡು ಬಂದು ಮನೆಯವರನ್ನು ಸಾಕುವ ಪರಿಸ್ಥಿತಿ ಎದುರಾಯಿತು. ಇದನ್ನುಕಂಡ ಹೆತ್ತ ಕರುಳು ವಿಪರೀತ ಮರುಕ ಪಡುತ್ತ, ದಿನವೂ ಕರಗುತ್ತಿತ್ತು ಮಗಳನ್ನು ತಲೆ ಬಾಚಿ, ಆಸರೆತೆಗೆಯೋ ಚಾಳಿ ಮಾತ್ರ ದೇವೀರಮ್ಮ ಮರೆಯಲಿಲ್ಲ…!!! ಬಾಯಿ ತುಂಬಾ ಎಲೆಅಡಿಕೆ ಮಾತ್ರ ಇರುತ್ತಿತ್ತು. ಊಟವೇನೂ ಅಷ್ಟು ಸೇರದಂತಾಯಿತು. ಮಗಳನ್ನು ತೊಡೆಯ ಮೇಲೆ ಹಾಕಿಕೊಂಡು,

‘ನಾಗರ ಹೆಡೆ ಹಂಗ ಇಬ್ಬರಣ್ಣರುತಮ್ಮ
ನೀನ್ಯಾಕೆ ಬಡತನ ಬಯಸುತಿ ನನ ಮಗಳೇ’

ಎಂದು ಲಾಲಿ ಹಾಡನ್ನು ಆ ತಾಯಿ ಹಾಡುತ್ತಿದ್ದರೆ ಮಗಳಿಗೆ ಸಿರಿತನದ ಸರ್ವಸುಖ ಆ ಕನಸುಭರಿತ ಹಾಡಿನಲ್ಲಿ ಸಿಗುತ್ತಿತ್ತು. ದಿನದಿನಕ್ಕೂ ಚಿಂತೆಯಿಂದ ರಾತ್ರಿಯೆಲ್ಲ ಬಡಬಡಿಸುತ್ತಿದ್ದ ದೇವೀರಮ್ಮಳಿಗೆ ಎಲ್ಲರೂ ‘ಹುಚ್ಚಿ’ ಪಟ್ಟಕಟ್ಟಿದ್ದರು. ಹೌದು, ಆಕೆ ಹುಚ್ಚಿಯೇ. ಹೆತ್ತ ಮಗಳನ್ನು ಗಂಡನ ಮನೆಗೆ ಸೇರಿಸುವ ಕನಸನೊತ್ತೇ ಹುಚ್ಚಿ ತಾಯಿಯಾದಳು. ಅದ್ಯಾವ ಕಾಲದಲ್ಲೋ ತನ್ನತಂಗಿಯರು ದೇವೀರಮ್ಮನ ಬಳಿ ಹಣವನ್ನು ಸಾಲವಾಗಿ ಪಡೆದಿದ್ದರಂತೆ. ಅದನ್ನು ತಗೊಂಡಬಂದ್ ನಿನ್ ಮದುವೆ ಮಾಡ್ತಿನಿ ಎಂಬ ಕೊನೆ ಆಸೆಯಿಂದ‌ ತನ್ನ ತವರೂರಿಗೆ ಬಂದಾಗ, ಅಲ್ಲಿ ಅವಳ ಆಸೆಗೆ ನೀರೆರೆಚುವಂತಾಗುತ್ತಿತ್ತು.

ಅವರಲ್ಲಿಯೂ ಕಿತ್ತು ತಿನ್ನುವ ಬಡತನ. ದೇವೀರಮ್ಮತನ್ನ ಹೆತ್ತವರು ‘ಹನುಮಂತಪ್ಪ ಕೆಂಚ ರಂಗಮ್ಮ’ನ ಬಳಿ ಹೇಳಿಕೊಂಡಾಗಲೂ ಏನು ಪ್ರಯೋಜನವಿರಲಿಲ್ಲ. ಅವರಿಗಾಗಲೇ ಹಣ್ಣು ಮುದುಕರು. ಮಗಳ ಗೋಳನ್ನು ನೋಡಲಾಗದೇ ‘ನಿನ್ನೂರಿಗೆ ಹೋಗಿಬಿಡು’ ಎಂದೇಳಿದರು. ದೇವೀರಮ್ಮ ಹೋಗುತ್ತಲೇ ಇರಲಿಲ್ಲ. ಆಕೆಯ ಹಠಮಾರಿತನ, ರಾತ್ರಿಯೆಲ್ಲ ಅಳುತ್ತಾ ಬಡಬಡಿಸುವ ಆ ತಾಯಿಯ ಅಂತಃಕರಣ, ಮನೆಯಲ್ಲಿ ಸಿರಿತನ ಇದ್ದವರ ಪಾಲಿಗೆ ಹುಚ್ಚಂತೆ ಕಾಣಿಸುತ್ತಿತ್ತು.

ಕೆಲವರು ಹುಚ್ಚಿಯೆಂದು ಬಾಯಿಗೆ ಬಂದಂತೆ ಮಾತಾಡಿದರು, ಹೊಡೆದರು. ಯಾವಾಗ ತಂಗಿಯರು ಹೊಡೆದರೋ ಆ ಮುಗ್ಧ ಹುಚ್ಚು ತಾಯಿ ಕಾಲಿಗೆ ಚಪ್ಪಲಿಯಿಲ್ಲದೇ, ಕಲ್ಲು ಮುಳ್ಳಿನ ಹಾದಿಯಲ್ಲಿ ಮದ್ಯರಾತ್ರಿ ಊರು ಬಿಟ್ಟು ಹೋಗುತ್ತಿದ್ದಳು. ಇದಾಗಿ ಕೆಲವು ದಿನಗಳು ಕಳೆದವು. ದೇವೀರಮ್ಮ ಸಂಪೂರ್ಣ ಕುಗ್ಗಿ, ಅನ್ನನೀರು ಸೇರುತ್ತಿಲ್ಲ, ಕಂಗಳಲ್ಲಿ ಕನಸು ಮಾತ್ರ ಬತ್ತುತ್ತಿಲ್ಲ. ಎಲ್ಲರೂ ಈಕೆ ಉಳಿಯಲ್ಲ, ಮನೆ ಹೊರಗೆ ಹಾಕಿ… ಎಂದಾಗ, ಮನೆಯಲ್ಲಿದ್ದ ಮಗಳ ವ್ಯಥೆ ಹ್ಯಾಗಿರಬಾರದು.

ಅಂತೂ ಕೊನೆಗೆ ‘ತಾಳಘಟ್ಟದ ದೊಡ್ಡಮ್ಮದೇವಿ’ಯ ಅಪ್ಪಣೆ ಕೇಳಿದಾಗ, ‘ದೇವೀರಮ್ಮ ಉಳಿಯಲಾರಳು’ ಎಂದು ಅಪ್ಪಣೆಯಾಯಿತು. ಇನ್ನೂ ಕೆಲವರು ‘ಕೊನೇ ಪಕ್ಷ ಆಕೆಯನ್ನು ಇನ್ನೂ ಒಂದು ವಾರದ ತನಕ ಉಳಿಸಿಕೊಡವ್ವಎಂದು ಪ್ರಾರ್ಥಿಸಿದರು. ಅದೊಂದು ದಿನ ಕಿರಿಯ ಮಗ ಮದ್ಯಾಹ್ನದ ವೇಳೆಗೆ ಊರಿಗೆ ಬಂದ. ಮಗಳಿದ್ದಳು. ಎಲ್ಲಾರ ಮದ್ಯೆ ಮಗನ ಮುಖ, ಮಗಳ ಕಣ್ಣೀರು ನೋಡುತ್ತ, ಆ ಮಹಾನ್ ಸಾಧ್ವಿ ತಾಯಿ ಕೊನೆಯುಸಿರೆಳೆದಳು. ಬಂಧುಗಳೆಲ್ಲ ಬಂದರು, ಹಿರಿಯ ಮಗನಿಗೆ ವಿಷಯವನ್ನು ದೂರವಾಣಿಯ ಮೂಲಕ ಮುಟ್ಟಿಸಿದರು. ‘ಆ ಊರು, ಆ ಮನೆ ಅವಳಿಂದ ನಾನೇನು ಸುಖ ಕಂಡಿಲ್ಲ, ಆಕೆ ಯಾರೋ ನನಗೆ ಗೊತ್ತಿಲ್ಲ, ನೀವೇ ಮಣ್ಣು ಮಾಡಿ’ ಎಂದ ಮಹಾನುಭಾವ.

ಗಂಡನ ಮನೆಗೆ ಹೋಗುವಾಗ ಪ್ರತಿಯೊಬ್ಬತಾಯಿ ಮಗಳಿಗೆ ಸೀರೆ ಉಡಿಸಿ, ಅರಿಶಿನ ಕುಂಕುಮ ನೀಡಿ ಕಳಿಸುವ ಸಂಪ್ರದಾಯ ನಮ್ಮ ಮಣ್ಣಿನದು. ಅಂತಯೇಮಗಳು ತೀರಿದಾಗಲೂ ತಾಯಿ ತವರ ಸೀರೆ ಹೊದಿಸಿ ಕಳಿಸುವ ಸಂಸ್ಕಾರ ನಮ್ಮದು. ಆದರೆ ಈ ತಾಯಿ ತನ್ನ ಮಗಳಿಗೆ ಸೀರೆ ಉಡಿಸಿ, ಅರಿಶಿನ ಕುಂಕುಮ ತೊಡಿಸಿ, ಮಗಳ ಕಳಿಸಬೇಕೆಂದಿದ್ದ ಕನಸನ್ನ ಕಮರಿಸಿಕೊಂಡು ಕೊನೆಗಾಲದಲ್ಲಿ ತಾಯಿಯಂತೆ ನೋಡಿಕೊಂಡ, ಮಗಳಿಂದಲೇ ಅರಿಶಿನ ಕುಂಕುಮ ಪಡೆದು, ಬಾರದ ಲೋಕಕ್ಕೆ ಚೈತ್ರಯಾತ್ರೆ ಹೊರಟಳು. ಇಂದಿಗೆ ದೇವೀರಮ್ಮ ಮಣ್ಣಾಗಿ ನಾಲ್ಕೈದು ವರ್ಷ ಆದರೂ ಮನೆಯಲ್ಲಿ ಅದೇ ವಾತಾವರಣ. ಮಗಳ ಮದುವೆಯಿಲ್ಲ ತಂದೆ ಕುಡಿತ ಬಿಟ್ಟಿಲ್ಲ. ಪ್ರಜ್ಞೆ ಮರೆತ ಅಣ್ಣಂದಿರು ಬುದ್ಧಿ ಕಲಿತಿಲ್ಲ. ಇಷ್ಟೆಲ್ಲದರ ನಡುವೆಯೂ ನೊಂದುಕೊಳ್ಳುವ ಮಗಳಿಗೆ ಮಸಣದ ಮಡಿಲಿನಿಂದ ಆ ತಾಯಿಹೃದಯ

‘ನಾಗರ ಹೆಡೆ ಹಂಗ ಇಬ್ಬರಣ್ಣರುತಮ್ಮ
ನೀನ್ಯಾಕೆ ಬಡತನ ಬಯಸುತಿ ನನ ಮಗಳೇ’ ಎಂದು ಲಾಲಿ ಹಾಡುತ್ತಿದೆ…!

‍ಲೇಖಕರು Avadhi

May 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: