ಮಷೀನು ನಂಬದ ಮನುಷ್ಯರೂ; ಮನುಷ್ಯರನ್ನು ನಂಬದ ಮಷೀನುಗಳೂ..

ಇಲೆಕ್ಟ್ರಾನಿಕ್ ಮತದಾನ ಯಂತ್ರಗಳು ಸುದ್ದಿ ಮಾಡುತ್ತಿವೆ. ಈ ಯಂತ್ರಗಳನ್ನು ತಿರುಚಲು ಸಾಧ್ಯ ಇದೆ ಎಂದು ಕೆಲವರು ಶಂಕೆ ವ್ಯಕ್ತಪಡಿಸುತ್ತಿದ್ದರೆ, ಸರ್ಕಾರ ಮತ್ತು ಚುನಾವಣಾ ಆಯೋಗ ಅದು ಅಸಾಧ್ಯ ಎಂದು ಹೇಳುತ್ತಿದೆ. ದಿಲ್ಲಿಯ ಮುಖ್ಯಮಂತ್ರಿ ತಾನು ಸ್ವತಃ  ಈ ಯಂತ್ರಗಳನ್ನು ತಿರುಚಲು 10 ವಿಧಾನಗಳನ್ನು ಬಲ್ಲೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಉತ್ತರ ಪ್ರದೇಶದ ಚುನಾವಣೆಗಳ ಬಳಿಕ ಈ ಯಂತ್ರಗಳ ಬಗ್ಗೆ ಸಂಶಯದ ಬೀಜವೊಂದನ್ನು ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ.

ಕೇಂದ್ರದಲ್ಲಿ ಈಗ ಇರುವುದು “ಇಲೆಕ್ಟ್ರಾನಿಕ್ ಯುಗದ” ಸರ್ಕಾರ ಆಗಿರುವ ಕಾರಣ, ಈ ಸಂಶಯದ ಬೀಜ ತಾನಾಗಿಯೇ ಮೊಳೆಯಲಾರಂಭಿಸಿದೆ. ಚುನಾವಣೆಯ ಚರಿತ್ರೆಯನ್ನು ಗಮನಿಸಿದರೆ, ಮತಪತ್ರದ ಮೇಲೆ ಮುದ್ರೆ ಒತ್ತುವ ಕಾಲದಲ್ಲೂ ಚುನಾವಣಾ ಅಕ್ರಮಗಳು ನಡೆದಿವೆ; ಬಳಿಕ ಮತಯಂತ್ರಗಳಲ್ಲೂ ಬಲಾತ್ಕಾರದ ಮತಗಳನ್ನು ಒತ್ತಿದ ಪ್ರಕರಣಗಳು ಬೆಳಕಿಗೆ ಬಂದದ್ದಿದೆ. ಹೇಗಾದರೂ ಚುನಾವಣೆ ಗೆಲ್ಲಲೇ ಬೇಕು ಎಂಬವರಿಗೆ ದಾರಿಗಳು ನೂರಾರು.

ಬೆಂಗಳೂರಿನ BEL,  ಹೈದರಾಬಾದಿನ ECI ಗಳಲ್ಲಿ ನಿರ್ಮಾಣಗೊಳ್ಳುವ ಮತಯಂತ್ರಗಳನ್ನು ಕೇಂದ್ರ ಚುನಾವಣಾ ಆಯೋಗ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಬಳಸುತ್ತಿದೆ. ಈ ಯಂತ್ರಗಳಲ್ಲಿ 3 ವಿಧ. M1, M2, M3.  ಇವುಗಳಲ್ಲಿ M1  ಎಂಬುದು 2006ರ ತನಕ ಬಳಕೆಯಲ್ಲಿದ್ದ ಯಂತ್ರ. M2 ಎಂಬುದು 2006-2013 ತನಕ ಬಳಕೆಯಲ್ಲಿದ್ದ ಯಂತ್ರವಾಗಿದ್ದರೆ, M3  2014ರ ಬಳಿಕ ಉತ್ಪಾದನೆಗೆ ಸಿದ್ಧಗೊಳ್ಳುತ್ತಿರುವ ಯಂತ್ರ.

ಮೈಕ್ರೋಚಿಪ್ ಗಳು ಸಾಧಾರಣ ಮನುಷ್ಯರ ಅರಿವಿಗೆ ಮೀರಿದ “ಮ್ಯಾಜಿಕ್” ತುಣುಕುಗಳಾಗಿದ್ದು, ಅವುಗಳ ಸಾಧ್ಯತೆ-ಸಂಭಾವ್ಯತೆ ಅಪಾರ. ಈವತ್ತು ಇಲೆಕ್ಟ್ರಾನಿಕ್ ಮತಯಂತ್ರಗಳ ಮೇಳೆ ಸಂಶಯ ಹುಟ್ಟುವುದಕ್ಕೆ ಮೂಲ ಕಾರಣಗಳೂ ಈ ಮೈಕ್ರೋಚಿಪ್ ಗಳು ಹೊಂದಿರುವ ಸಾಧ್ಯತೆಗಳೇ. EVMಗಳ ಬಗ್ಗೆ ಜನರಿಗಿರುವ ಸಂಶಯಗಳನ್ನು ದೂರಮಾಡಲು ಶುಕ್ರವಾರ (ಎಪ್ರಿಲ್ 14)  ಚುನಾವಣಾ ಆಯೋಗ ಬಹಳ ವಿಸ್ತ್ರತವಾದ ಪ್ರಶ್ನೋತ್ತರಿಯೊಂದನ್ನು ಪ್ರಕಟಿಸಿದೆ. ಅದರ ಲಿಂಕ್ ಇಲ್ಲಿದೆ: (http://eci.nic.in/eci_main1/ current/FAQ-English14012017. pdf)

ಈ EVM  ಯಂತ್ರಗಳು ಇಂಟರ್ನೆಟ್ಟಿಗಾಗಲೀ, ಬೇರಾವುದೇ ಪರಿಕರಗಳಿಗಾಗಲೀ ಸಂಪರ್ಕ ಹೊಂದಿಲ್ಲದ ಸ್ವತಂತ್ರ ಯಂತ್ರಗಳಾಗಿರುವುದರಿಂದ ಮತ್ತು ಅವುಗಳ ಸುರಕ್ಷೆ, ಚುನಾವಣೆಗಳ ವೇಳೆ ಹಂಚಿಕೆ, ಮತದಾನದ ಬಳಿಕ ಅವುಗಳ ಕಾವಲು ಮತ್ತು ಆ ಬಳಿಕ ಅವುಗಳಿಂದ ದತ್ತಾಂಶ ಸ್ವೀಕಾರ ಚುನಾವಣಾ ಆಯೋಗದ ಸುಪರ್ದಿಯಲ್ಲೇ ನಡೆಯುತ್ತದೆ; ಅವಕ್ಕೆಲ್ಲ ಸೂಕ್ತ ನಿಯಮಾವಳಿಗಳಿದ್ದು, ಆ ನಿಯಮಗಳನ್ನು ಪಾಲಿಸಿದರೆ ವಂಚನೆ ಅಸಾಧ್ಯ ಎಂಬುದು ಚುನಾವಣಾ ಆಯೋಗದ ನಿಲುವು.

ಭಾರತದಲ್ಲಿ ‘ಕಾರ್ಯಾಂಗ’ ಎಂಬುದು ಮುಂದೆ ಬಂದರೆ ಹಾಯುವ, ಹಿಂದೆ ಬಂದರೆ ಒದೆಯುವ ಸಕಲ ಸಾಮರ್ಥ್ಯಗಳೂ ಇರುವ “ಪಾಪದ” ಗೋವು. ಅದು ಯಾವಾಗ ಹಾಯುತ್ತದೆ/ಹಾಯಬೇಕು ಮತ್ತು ಯಾವಾಗ ಒದೆಯುತ್ತದೆ/ಒದೆಯಬೇಕು ಎಂದು ನಿರ್ಧರಿಸುವುದು ‘ಶಾಸಕಾಂಗ’. ಇದು ಅಧಿಕ್ರತವಾಗಿ ‘ಸತ್ಯ’; ಅನಧಿಕ್ರತವಾಗಿ ‘ಸತ್ಯೋತ್ತರ’. ಈ ಕಾರಣದಿಂದಾಗಿಯೇ ಎಲ್ಲೋ ಒಬ್ಬರು ಮಾಯಾವತಿ, ಇನ್ನೆಲ್ಲೋ ಒಬ್ಬರು ಕೇಜ್ರಿವಾಲ್  EVM ಬಗ್ಗೆ ಮಾತನಾಡಿದಾಗ ಅದು ದೇಶವ್ಯಾಪಿ ಸುದ್ದಿ ಆಗುತ್ತಿದೆ.

ಈ ನಡುವೆ ಗಮನಿಸಬೇಕಾದ ಇನ್ನೊಂದು ಸಂಗತಿ ಇದೆ. ಅದೆಂದರೆ, ನಮ್ಮ ದೇಶದಲ್ಲಿ ಮತದಾನ ಯಂತ್ರಗಳಿರುವುದು ಕೇಂದ್ರ ಚುನಾವಣಾ ಆಯೋಗದ ಬಳಿ ಮಾತ್ರ ಅಲ್ಲ. ರಾಜ್ಯ ಸರ್ಕಾರಗಳ ಬಳಿಯೂ ಪ್ರತ್ಯೇಕ EVMಗಳಿವೆ. ಅವುಗಳನ್ನು ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಳ ವೇಳೆ ಬಳಸಲಾಗುತ್ತಿದೆ ಮತ್ತು ಕೇಂದ್ರ ಚುನಾವಣಾ ಆಯೋಗ ಈ ರಾಜ್ಯ ಮಾಲಕತ್ವದ EVMಗಳ ಬಗ್ಗೆ ತನ್ನ ಜವಾಬ್ದಾರಿ ಏನಿಲ್ಲ ಎಂಬುದನ್ನೂ ಸ್ಪಷ್ಟವಾಗಿ ಹೇಳುತ್ತದೆ. ಹೆಚ್ಚಿನಂಶ ಇದು ಈ ಇಡಿಯ ವಿವಾದದಲ್ಲಿ gray ಏರಿಯಾ. ಈ ನಡುವೆ ಕರ್ನಾಟಕದ ಮಾಹಿತಿ –ತಂತ್ರಜ್ನಾನ ಸಚಿವ ಪ್ರಿಯಾಂಕ ಖರ್ಗೆ ಅವರಂತೂ EVM ಗಳ ಹ್ಯಾಕತಾನ್ ನಡೆಸುವ ಸೂಚನೆ ಕೊಟ್ಟಿದ್ದಾರೆ.

ವಿದೇಶಗಳಲ್ಲಿ ಯಾಕೆ EVM ಬಳಕೆ ಆಗುತ್ತಿಲ್ಲ ಎಂಬ ಪ್ರಶ್ನೆ ಆಗಾಗ ಏಳುತ್ತಿದೆ. ಆದರೆ, ವಿದೇಶಗಳಲ್ಲಿ ಬಳಕೆ ಆಗಿ ವಿಫಲಗೊಂಡ EVMಗಳು ಕಂಪ್ಯೂಟರಿಗೆ ಸಂಪರ್ಕ ಇರುವ ಮಾದರಿಗಳಾಗಿದ್ದು, ಅವುಗಳಲ್ಲಿ ತಿರುಚುವ ಸಾಧ್ಯತೆಗಳಿವೆ. ಸ್ವತಂತ್ರ ಯಂತ್ರಗಳಲ್ಲಿ ಆ ಸಾಧ್ಯತೆ ಕಡಿಮೆ ಎನ್ನುತ್ತದೆ ಚುನಾವಣಾ ಆಯೋಗ. ದೇಶದಲ್ಲಿರುವ 14  ಲಕ್ಷದಷ್ಟು EVMಗಳನ್ನು ತಿರುಚುವುದು ವಾಸ್ತವದಲ್ಲಿ ಸಾಧ್ಯವಿಲ್ಲ ಎಂಬುದು ಆಯೋಗದ ಖಚಿತ ನಿಲುವು.

ಈ ಎಲ್ಲ ಬೆಳವಣಿಗೆಗಳ ಹಿಂದೆ, ಚುನಾವಣಾ ವ್ಯವಸ್ಥೆಯ ಬಗ್ಗೆಯೇ ಸಂಶಯ ಹುಟ್ಟಿಸುವ ಒಂದು ಪ್ರಯತ್ನ ಇರುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಪ್ರತೀಬಾರಿ ಈ ಚರ್ಚೆ ಬಂದಾಗ ಕೇವಲ ಸೋತವರ ಗೊಣಗಾಟದಲ್ಲಿಯೇ ಅದು ಮುಗಿದುಹೋಗುತ್ತಿತ್ತು. ಆದರೆ ಈ ಬಾರಿ ಮಾಧ್ಯಮಗಳೂ ಈ ಸೊಲ್ಲನ್ನೆತ್ತಿಕೊಂಡು ರಾಗವಾಗಿ ಹಾಡಲಾರಂಭಿಸಿವೆ. ಇವಕ್ಕೆಲ್ಲ ಅಂತಿಮ ಫಲಾನುಭವಿಗಳು ಯಾರೆಂಬುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ.

‍ಲೇಖಕರು avadhi

April 17, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: