ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಇದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.
ಅಂಕಣ – ೨ ೧
ಕೃತಿ –ಅಪ್ರತಿಮ ಪಟೇಲ್
ಲೇಖಕರು – ಕೆ.ಎನ್.ರೆಡ್ಡಿ
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಆಗಿಹೋದ ಹಲವು ಮುಖ್ಯಮಂತ್ರಿಗಳಲ್ಲಿ ಜೆ.ಎಚ್. ಪಟೇಲ್ ಅವರು ಅಪರೂಪದ, ವರ್ಣರಂಜಿತ, ವಿಕ್ಷಿಪ್ತ ವ್ಯಕ್ತಿತ್ವದ ರಾಜಕೀಯ ಮುತ್ಸದ್ದಿ. ಸಮಾಜವಾದಿ ಹಿನ್ನೆಲೆಯಿಂದ ಬಂದ ನೇತಾರರು. ಉತ್ತಮ ವಾಕ್ಚಾತುರ್ಯ ಹೊಂದಿದ ನೇರ, ನಿರ್ಬಿಡೆಯ ಮಾತುಗಾರ.ವ್ಯಂಗ್ಯ, ವಿಡಂಬನೆ ಯೊಂದಿಗೆ ಹಾಸ್ಯಪ್ರಜ್ಞೆ ಹೊಂದಿದ ಮೋಡಿಗಾರ.ಎಂದೂ ತನ್ನ ರಾಜಕೀಯ ಜೀವನದಲ್ಲಿ ಸ್ವಹಿತಾಸಕ್ತಿ, ಸ್ವಜನಪಕ್ಷಪಾತ, ಕುಟುಂಬ ರಾಜಕಾರಣ ಮಾಡದ ನಿರ್ಮೊಹಿ ನಾಯಕ. ಅವರಿಗೆ ತನ್ನದೆ ಕೆಲವು ನ್ನೂನ್ಯತೆಗಳ ಮದ್ಯೆ ಜನ ಮೆಚ್ಚಿದ ನೇತಾರನಾಗಿ ಸದಾ ಸ್ಮರಣೆಯಲ್ಲಿ ಉಳಿಯುವ ರಾಜಕೀಯ ಧುರೀಣರು ಜೆ.ಎಚ್.ಪಟೇಲ್.
ಕೆ.ಎನ್.ರೆಡ್ಡಿ ಅವರು ಕೇವಲ ಪಟೇಲ್ ರ ಜೀವನ ಚರಿತ್ರೆ ದಾಖಲಿಸುವ ಪ್ರಯತ್ನ ಮಾಡದೆ, ಅವರ ಬದುಕಿನ ಕೆಲವು ಘಟನಾವಳಿಗಳನ್ನು ಅವರ ಸಮಕಾಲೀನರ ಮೂಲಕ ಅರಿತು,ಇನ್ನು ಕೆಲವು ತಮ್ಮ ಸ್ವ ಅನುಭವದ ಮೂಲಕ ತಿಳಿದು, ( ಲೇಖಕರು ಪತ್ರಕರ್ತರಾಗಿದ್ದರಿಂದ) ಮಾಹಿತಿ ಕಲೆಹಾಕಿ ಅಪರೂಪದ ಸಂಗತಿಗಳ ಮಾಹಿತಿ ನೀಡುವಲ್ಲಿ ಯಶ ಕಂಡಿದ್ದಾರೆ. ಪಟೇಲ್ ರ ಬದುಕೆ ವರ್ಣಮಯ,ರಂಜನೀಯ.ಹಾಗಾಗಿ ಕಾಲ ಕಳೆದಂತೆ ಅವರ ಬದುಕಿನ ಘಟನಾವಳಿಗಳು ಏನೆಲ್ಲಾ ರೆಕ್ಕೆ ಪುಕ್ಕಕಟ್ಟಿಕೊಂಡು ಹೊಸ ರೂಪ ಪಡೆಯುವ ಬದಲು ಅವುಗಳಿಗೆ ಅಧಿಕೃತ ಮುದ್ರೆ ಒತ್ತಿದಂತೆ ,ಒಡನಾಡಿಗಳು ನೀಡಿದ ಮಾಹಿತಿಗೆ ಅಕ್ಷರ ರೂಪ ನೀಡಿ ಚಾಕ್ಷುಷಗೊಳಿಸಿದ್ದಾರೆ.
ಪಟೇಲ್ ರ ಜೀವನದ ಮರೆಯಲಾರದ ಪ್ರಸಂಗಗಳು ೩೦೦ ಪುಟಗಳಷ್ಟಿದ್ದು,ಎಲ್ಲವೂ ಒಂದೇ ಗುಕ್ಕಿನಲ್ಲಿ ಮುಗಿಸಬಹುದು. ಬರವಣಿಗೆ ಸರಳ ಬಾಷೆಯಲ್ಲಿದ್ದು, ಯಾವುದೇ ಅಡೆತಡೆ ಇಲ್ಲದೆ ಓದಿಸಿಕೊಂಡು ಹೋಗುವುದು. ಓದಿದ ನಂತರ ಮತ್ತೆ ಮತ್ತೆ ಮೆಲುಕು ಹಾಕುವಂತೆ ,ಮನಸ್ಸು ಹಗುರಾಗುವಂತಿದೆ ಈ ಕೃತಿ ಲೋಕ. ಪಟೇಲರ ಹಾಸ್ಯ ಪ್ರಜ್ಞೆ, ಸಮಯಪ್ರಜ್ಞೆ ಮತ್ತು ಲೋಕಾನುಭವ ಎಲ್ಲವೂ ಮೆಚ್ಚುವಂತದ್ದು.
ಸಮಾಜವಾದಿ ಹಿನ್ನೆಲೆಯ ಪಟೇಲ್ ರು ನಡೆ- ನುಡಿ ಒಂದಾಗಿಸಿಕೊಂಡವರು. ತತ್ವ ಸಿದ್ಧಾಂತವನ್ನು ರೂಡಿಸಿಕೊಂಡವರು. ಅವರ ಬದುಕಿನ ರೋಚಕ ಘಟನೆಗಳನ್ನು ಗಮನಿಸುವುದಾದರೆ, ಶ್ರೀಮಂತ ಜಮೀನ್ದಾರಿ ಕುಟುಂಬದ ಅವರು ಪಕ್ಷದ ಉಳಿವಿಗಾಗಿ ಅಪ್ಪ ಕೊಟ್ಟ ಹೊಸ ಕಾರನ್ನು ಮಾರಾಟ ಮಾಡಿ, ಆ ಹಣವನ್ನು ಪಕ್ಷಕ್ಕೆ ನೀಡಿ ಬಸ್ಸಿನಲ್ಲಿ ಊರಿಗೆ ಮರಳಿದವರು,
ವಿದೇಶಿ ಪ್ರವಾಸಕ್ಕೆ ಹೋದಾಗ ಹೆಂಡತಿ ,ಸೆಕ್ರೆಟರಿ, ಸ್ನೇಹಿತೆ ಎಂದು ಭೇದ ಮಾಡದೆ ಎಲ್ಲರ ಖರ್ಚಿಗೂ ಸಮಾನವಾಗಿ ಹಣ ನೀಡಿದವರು.
ತಮ್ಮ ಮಗ ತನ್ನನ್ನು ಎಂ.ಎಲ್ಸಿ ಮಾಡೆಂದಾಗ ಮೊದಲು ನಿನ್ನ ಬಲದಿಂದ ಮುನ್ಸಿಪಲ್ ಕಾರ್ಪೊರೇಶನ್ ಮೆಂಬರ್ ಅಗಿ ಬಾ ನಂತರ ನೋಡುವೆ ಎಂದು ನೇರವಾಗಿ ಹೇಳಿದವರು.
ಮದರ್ ತೆರೇಸಾ ತೀರಿದಾಗ, ಅಸೆಂಬ್ಲಿಯಲ್ಲಿ ನುಡಿನಮನ ಸಲ್ಲಿಸುವ ಸಂದರ್ಭದಲ್ಲಿ ಎಲ್ಲಾ ನೇತಾರರು ಅವರಂತಾಗಬೇಕು,ಅವರ ಹೆಜ್ಜೆಯಲ್ಲಿ ನಡೆಯಬೇಕು ಎಂದು ಹೇಳಿದರು. ಆಗ ಪಟೇಲ್ ರು ಅವರಂತೆ ಆಗಲು ಸಾಧ್ಯವಿಲ್ಲ, ಅವರ ಹೆಜ್ಜೆಯಲ್ಲಿ ನಡೆಯಲು ಆಗದು ಕಾರಣ ಅಂತಹ ತ್ಯಾಗಮಯಿ, ಜೀವ ಪರ ಕಾಳಜಿಯುಳ್ಳ ವ್ಯಕ್ತಿ ಮತ್ತೆ ಹುಟ್ಟಿ ಬರಲಿ ಎನ್ನಬಹುದು ಹೊರತಾಗಿ ಅವಂರಂತಾಗುವುದು ಸಾಮಾನ್ಯ ಸಂಗತಿಯಲ್ಲ ಎಂದು ತಮ್ಮ ಇತಿಮಿತಿ ಮತ್ತು ವ್ಯಕ್ತಿಯ ಶ್ರೇಷ್ಠತೆಯ ಬಗ್ಗೆ ಮಾತನಾಡಿದವರು.
ಲೋಕಸಭೆಯಲ್ಲಿ ಮೊಟ್ಟ ಮೊದಲು ಕನ್ನಡದಲ್ಲಿ ಮಾತನಾಡಿ ಕನ್ನಡ ಪರ ನಿಜ ಕಾಳಜಿ ತೋರಿಸಿದ ಬಾಷಾಭಿಮಾನಿ.
ಒಮ್ಮೆ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ, ಶಸ್ತ್ರಚಿಕಿತ್ಸೆಗೆ ಒಳಪಡುವ ಮುನ್ನ, ತಮ್ಮ ಗನ್ ಮ್ಯಾನ್ ನಿಗೆ ಆರ್ಥಿಕ ಸಂಕಷ್ಟವಿದ್ದ ಕಾರಣ ಆತನಿಗೆ ಸಹಾಯ ಮಾಡುವಂತೆ ಆಪ್ತ ಸ್ನೇಹಿತನಿಗೆ ಹೇಳಿದ್ದು ಅವರ ಸೂಕ್ಷ್ಮತೆಯ ನೋಟ, ಕಾಳಜಿ ಅರಿವಿಗೆ ಬರುವುದು.
ಹೀಗೆ ಹತ್ತು ಹಲವು ಸಂಗತಿಗಳು ಈ ಕೃತಿ ಯಲ್ಲಿ ದಾಖಲಾಗಿದ್ದು, ಅದರಲ್ಲೂ ಅವರ ಮಾತಿನ ಧಾಟಿ,ನೇರವಾಗಿ ಹೇಳಿ ಅದನ್ನು ಸಮರ್ಥಿಸುವ ಚಾಕಚಕ್ಯತೆ,ಎದೆಗಾರಿಕೆ ಎಲ್ಲವೂ ಮೆಚ್ಚುವಂಥದ್ದು.
ಸಂದರ್ಭಾನುಸಾರ ಕತೆ ಹೇಳುವ, ಪುರಾಣ ಪ್ರಸಂಗಗಳನ್ನು ಉಲ್ಲೇಖಿಸುವ ಜಾಣ್ಮೆ ಉಳ್ಳವರು. ಎಂದೂ ದ್ವೇಷ ರಾಜಕಾರಣ, ವೈರತ್ವ ,ಹಗೆ ಬೆಳಸಿಕೊಳ್ಳದೆ,ಯೋಗ್ಯರನ್ನು ಗುರುತಿಸುವ, ನಂಬಿದವರನ್ನು ಕೈ ಹಿಡಿಯುವ ಅಪರೂಪದ ವ್ಯಕ್ತಿ.ಹಾಗಂತ ಅವರನ್ನು ಆದರ್ಶದ ತಕ್ಕಡಿಯಲ್ಲಿಟ್ಟು ಲೇಖಕರು ತೂಗಿಲ್ಲ.ಅವರ ಓರೆಕೋರೆಗಳನ್ನು, ಇತಿಮಿತಿಗಳನ್ನು ಹೇಳುತ್ತಲೇ ,ಅವರ ದಿಟ್ಟ ನಿರ್ಧಾರಗಗಳು ತೊಟ್ಟ ನಿಲುವುಗಳನ್ನು ಪಾರದರ್ಶಕವಾಗಿ ಚಿತ್ರಿಸಿದ್ದಾರೆ.
ಇದು ಕೇವಲ ಪಟೇಲ್ ರ ರಾಜಕೀಯ ಬದುಕಿನ ಒಳನೋಟ ನೀಡುವ ಕೃತಿ ಆಗಿರದೆ,ಅವರ ಕಾಲದ ರಾಜಕೀಯ ಚಿತ್ರಣ ,ಅವರ ಸಮಕಾಲೀನ ನಾಯಕರ ಪರಿಚಯ, ಅವರ ವ್ಯಕ್ತಿತ್ವದ ಬಿಂಬಗಳು ಇಲ್ಲಿ ಹಣಕಿ ಹಾಕುತ್ತವೆ. ಜೊತೆಗೆ ಮುಂದಿನ ಪೀಳಿಗೆಗೆ ರಾಜಕೀಯ ಇತಿಹಾಸವನ್ನು ಅರಿಯುವ ಪೂರಕ ಆಕರ ಗ್ರಂಥವಾಗಿ ಕೂಡ ಈ ಕೃತಿ ಮಾಹಿತಿ ನೀಡಬಲ್ಲದು.
ಇಂದಿನ ರಾಜಕೀಯ ವ್ಯವಸ್ಥೆ,ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿದ ನೇತಾರರು, ದ್ವೇಷ ರಾಜಕೀಯದ, ಕಲುಷಿತ ಮನಸ್ಸುಗಳ ಮಧ್ಯೆ, ಪಟೇಲರ ವ್ಯಕ್ತಿತ್ವ ಭಿನ್ನವಾಗಿ ಕಾಣುತ್ತದೆ. ಹಾಗಾಗಿ “ಅಪ್ರತಿಮ ಪಟೇಲ್” ಒಂದು ಅಪರೂಪ, ಸಂಗ್ರಹ ಯೋಗ್ಯ ಕೃತಿಯಾಗಿದೆ.






0 Comments