ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್ಲೆಟ್’ ವೆಬ್ಸೈಟ್ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ನ್ಯಾಯಾಂಗ ನಿಂದನೆಗೆ ಒಳಗಾಗದಂತೆ, ವ್ಯವಸ್ಥೆಯ ಲೋಪದೋಷಗಳನ್ನು ಲಘು ಹಾಸ್ಯದಲ್ಲಿ ವಿಮರ್ಶಿಸುವ ಇವರ ಚುರುಕಾದ ಬರವಣಿಗೆ ಕಾನೂನು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಗಮನ ಸೆಳೆದಿದೆ.
ಕೋರ್ಟಿನ ಗಂಭೀರ ವಾದ-ಪ್ರತಿವಾದಗಳ ನಡುವೆಯೂ ಅಕ್ಷರಗಳನ್ನೇ ಆತ್ಮಬಲವಾಗಿಸಿಕೊಂಡಿರುವ ಅಪರೂಪದ ಪ್ರತಿಭೆ ಪೃಥ್ವಿ ಸೂರಿ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಬೆಳೆದು, ಹಾಸನದಲ್ಲಿ ಕಾನೂನು ಪದವಿ ಪಡೆದ ಇವರು, ‘ಜನಮಿತ್ರ’ ಪತ್ರಿಕೆಯ ಮೂಲಕ ಅಕ್ಷರ ಫ಼್ಲೋಕಕ್ಕೆ ಕಾಲಿಟ್ಟರು. ಪ್ರಸ್ತುತ ಬೆಂಗಳೂರಿನ ಉಚ್ಚ ನ್ಯಾಯಾಲಯದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಬಾಂಬೆ ಉಚ್ಚ ನ್ಯಾಯಾಲಯದ ವಕೀಲರು, ರಾಜು ಜೆ಼ಡ್. ಮೋರೆ ಅವರ ಇಂಗ್ಲಿಷ್ ನ Fun In Law ಘನ ನ್ಯಾಯಾಲಯದ ಲಘು ಹಾಸ್ಯ ಬರಹಗಳು
ಇನ್ನು ಮುಂದೆ ಕನ್ನಡಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಪೃಥ್ವಿ ಸೂರಿ ಅವರಿಂದ ಅಂಕಣವಾಗಿ ಬರಲಿದೆ.
ಮೂಲ – ರಾಜು ಜೆ಼ಡ್. ಮೊರೆ
ಕನ್ನಡಕ್ಕೆ – ಪೃಥ್ವಿ ಸೂರಿ
ಅಂಕಣ – 14
ಇದು ಇಬ್ಬರು ವಕೀಲರ ಕತೆ.
ಈ ಕತೆಗಾಗಿ ನಾವು ಅವರನ್ನು ‘ಕಾಳಪ್ಪ’ ಮತ್ತು ‘ವೀರಣ್ಣ’ ಎಂದು ಕರೆಯೋಣ. ಇಬ್ಬರೂ ಒಳ್ಳೆಯ ಗೆಳೆಯರು. ವೀರಣ್ಣ ಕಾಳಪ್ಪನಿಗಿಂತ ಸುಮಾರು ಹತ್ತು ವರ್ಷ ದೊಡ್ಡವರಾಗಿದ್ದರು.
ಇಬ್ಬರೂ ಕಾರ್ಮಿಕ ಕಾನೂನಿನ ವಕೀಲರು. ಮಹಾನಗರದ ಸುತ್ತಮುತ್ತಲಿನ ಕಾರ್ಮಿಕ ಮತ್ತು ಕೈಗಾರಿಕಾ ನ್ಯಾಯಾಲಯಗಳು ಹಾಗೂ ನ್ಯಾಯಮಂಡಳಿಗಳಲ್ಲಿ ವೃತ್ತಿ ನಿರ್ವಹಿಸುತ್ತಿದ್ದರು. ಇಬ್ಬರೂ ಹೆಚ್ಚಾಗಿ ಕಾರ್ಮಿಕರ ಪರವಾಗಿ ಮತ್ತು ಅವರನ್ನು ಬೆಂಬಲಿಸುವ ಕಾರ್ಮಿಕ ಸಂಘಗಳ ಪರವಾಗಿ ನ್ಯಾಯಾಲಯದಲ್ಲಿ ಪ್ರತಿನಿಧಿಸುತ್ತಿದ್ದರು.
ಎಂಬತ್ತರ ದಶಕದ ಮಧ್ಯದಲ್ಲಿ ನಾನು ಬಾಂಬೆ ವಕೀಲರ ಸಂಘಕ್ಕೆ ಸೇರಿದಾಗ, ಹೈಕೋರ್ಟಿನ ಕಾರ್ಯಪಟ್ಟಿಯಲ್ಲಿ ಕಾರ್ಮಿಕ ಮತ್ತು ಕೈಗಾರಿಕಾ ವಿವಾದಗಳೇ ತುಂಬಿರುತ್ತಿದ್ದವು.
ಆ ದಿನಗಳಲ್ಲಿ ಕಮ್ಯುನಿಸಂನ ಆಕರ್ಷಣೆ ಇನ್ನೂ ಮಾಸಿರಲಿಲ್ಲ. ಈ ಇಬ್ಬರು ವಕೀಲರು ಕೆಳ ನ್ಯಾಯಾಲಯಗಳಲ್ಲಿ, ಅಂದರೆ ಕಡಿಮೆ ಸಂಬಳ ಮತ್ತು ಬಿಡುವಿಲ್ಲದ ಕೆಲಸಗಳ ಒತ್ತಡದಲ್ಲಿದ್ದ ನ್ಯಾಯಾಧೀಶರ ಮುಂದೆ, ಶ್ರೀಮಂತ ಮಾಲೀಕರ ವಿರುದ್ಧದ ಕಠಿಣ ಹೋರಾಟಗಳಲ್ಲಿ ಸಾಮಾನ್ಯವಾಗಿ ಗೆಲ್ಲುತ್ತಿದ್ದರು.
ಹೆಚ್ಚಾಗಿ ಮಾಲೀಕರೇ ಇರುತ್ತಿದ್ದ ಎದುರು ಪಕ್ಷದವರು ಆ ತೀರ್ಪುಗಳನ್ನು ತಪ್ಪದೆ ಮೇಲ್ಮನವಿ ನ್ಯಾಯಾಲಯಗಳಲ್ಲಿ ಪ್ರಶ್ನಿಸುತ್ತಿದ್ದರು, ನಂತರ ಹೈಕೋರ್ಟಿನಲ್ಲಿ ರಿಟ್ ಅರ್ಜಿಗಳನ್ನು ಹಾಕುತ್ತಿದ್ದರು.
ವಿಚಾರಣಾ ನ್ಯಾಯಾಲಯದಲ್ಲಿ ಕಾರ್ಮಿಕರ ಪರವಾಗಿ ವಾದಿಸಿದ ವಕೀಲರೇ ಹೈಕೋರ್ಟಿನಲ್ಲೂ ಆಗಾಗ್ಗೆ ಹಾಜರಾಗುತ್ತಿದ್ದರು. ಅವರ ಕಕ್ಷಿದಾರರಿಗೆ ಹೈಕೋರ್ಟಿನ ಪರಿಣಿತ ವಕೀಲರನ್ನು ನೇಮಿಸಿಕೊಳ್ಳುವುದು ದುಬಾರಿ ಕನಸಾಗಿತ್ತು. ಆ ಕಾಲದಲ್ಲಿ ಪದಾಂಕಿತ ಹಿರಿಯ ವಕೀಲರ ಶುಲ್ಕ ಇಂದಿನಂತೆ ಆಕಾಶದೆತ್ತರಕ್ಕೆ ಇರುತ್ತಿರಲಿಲ್ಲವಾದರೂ ಬಡವರ ಜೇಬಿಗೆ ಅದು ದೊಡ್ಡ ಮೊತ್ತವೇ ಆಗಿತ್ತು.
ಹಿರಿಯ ವಕೀಲರು ಮಾಲೀಕರ ಪರವಾಗಿ ಹಾಜರಾಗಲು ಇಷ್ಟಪಡುತ್ತಿದ್ದರು. ಅವರಿಗೆ ನ್ಯಾಯಾಧೀಶರು ‘ಅಮಿಕಸ್ ಕ್ಯೂರಿ’ಯಾಗಿಯೋ ಅಥವಾ ಕಾನೂನು ನೆರವಿನ ಅಡಿಯಲ್ಲಿ ಬಡ ಕಾರ್ಮಿಕರ ಪರವಾಗಿ ವಾದಿಸಲು ನೇಮಕ ಮಾಡುತ್ತಾರೆ ಎನ್ನುವುದೇ ಭಯವಾಗುತ್ತಿತ್ತು. ಮ್ಯಾನೇಜ್ಮೆಂಟ್ಗಳು ಕಾರ್ಖಾನೆಯಲ್ಲಿ ಶ್ರಮಿಸುವ ಕಾರ್ಮಿಕರಿಗೆ ಹಣ ಕೊಡುವುದಕ್ಕಿಂತ ಹೆಚ್ಚಾಗಿ ತಮಗಾಗಿ ನ್ಯಾಯಾಲಯದಲ್ಲಿ ಶ್ರಮಿಸುವ ವಕೀಲರಿಗೆ ಸಂಭಾವನೆಯ ರೂಪದಲ್ಲಿ ಹಣ ನೀಡಲು ಇಷ್ಟಪಡುತ್ತಿದ್ದರು.
ದಿನ ಕಳೆದಂತೆ ಹೈಕೋರ್ಟಿನಲ್ಲಿ ಕೆಲಸ ಹೆಚ್ಚಾದಂತೆ, ಕಾಳಪ್ಪ ಮತ್ತು ವೀರಣ್ಣ ಹೈಕೋರ್ಟ್ ಪ್ರಕರಣಗಳ ಮೇಲೆ ಗಮನ ಹರಿಸಲು ಪ್ರಾರಂಭಿಸಿದರು. ಅವರ ಚೇಂಬರ್ ಜೂನಿಯರ್ಗಳು ಕೆಳಹಂತದ ನ್ಯಾಯಾಲಯ ಮತ್ತು ನ್ಯಾಯಮಂಡಳಿಗಳ ದೈನಂದಿನ ಪ್ರಕರಣಗಳನ್ನು ನೋಡಿಕೊಳ್ಳುತ್ತಿದ್ದರು.
ಕಾಳಪ್ಪ ಅವರು ತಮ್ಮದೇ ಜಾತಿಯ ಪ್ರಭಾವಿ ನ್ಯಾಯಮೂರ್ತಿಯೊಬ್ಬರ ಗಮನ ಸೆಳೆದರು. ಆ ನ್ಯಾಯಮೂರ್ತಿಯವರ ಶಿಫಾರಸ್ಸಿನ ಮೇರೆಗೆ, ಈ ಕಾರ್ಮಿಕ ವಕೀಲರನ್ನು ಬಾಂಬೆ ಹೈಕೋರ್ಟ್ನಲ್ಲಿ ‘ಅಸಿಸ್ಟೆಂಟ್ ಗೌರ್ನಮೆಂಟ್ ಪ್ಲೀಡರ್’ (AGP) ಆಗಿ ನೇಮಿಸಲಾಯಿತು.
ಕ್ರಮೇಣ, ಎಲ್ಲಾ ಕಾರ್ಮಿಕ ಮತ್ತು ಕೈಗಾರಿಕಾ ಪ್ರಕರಣಗಳು ಈ ಎಜಿಪಿ (AGP) ಕಾಳಪ್ಪ ಅವರಿಗೆ ಹಂಚಿಕೆಯಾಗತೊಡಗಿದವು. ತಮ್ಮ ಗಾಡ್ಫಾದರ್ ಆಗಿದ್ದ ನ್ಯಾಯಮೂರ್ತಿಯವರು ಕಾರ್ಮಿಕ ವಿಷಯಗಳ ಪೀಠದಲ್ಲಿದ್ದಾಗ ಕಾಳಪ್ಪ ಗೆಲ್ಲುವುದು ಖಚಿತವಾಗಿರುತ್ತಿತ್ತು. ಇದರ ಪರಿಣಾಮವಾಗಿಯೇ, ಅನೇಕ ಖಾಸಗಿ ಪ್ರಕರಣಗಳೂ ಇವರ ಹುಡುಕಿ ಬರಲಾರಂಭಿಸಿದವು. ಕಾಳಪ್ಪ ಇದಾದ ಕೆಲ ದಿನಗಳ ಅಂತರದಲ್ಲೇ ವೃತ್ತಿಯಲ್ಲಿ ಭದ್ರವಾಗಿ ನೆಲೆ ನಿಂತರು.
ನಂತರ ರಾಜ್ಯ ಸರ್ಕಾರದ ‘ಕಾನೂನು ಮತ್ತು ನ್ಯಾಯಾಂಗ ಇಲಾಖೆ’ಯಿಂದ ಒಂದು ವಿಲಕ್ಷಣ ಅಧಿಕೃತ ಸುತ್ತೋಲೆ ಹೊರಬಂದಿತು. ಅದರಲ್ಲಿ ಬಾಂಬೆ ಹೈಕೋರ್ಟ್ನಲ್ಲಿ ರಾಜ್ಯ ಸರ್ಕಾರವು ಕಕ್ಷಿದಾರರಾಗಿರುವ ಎಲ್ಲಾ ಕಾರ್ಮಿಕ ಮತ್ತು ಕೈಗಾರಿಕಾ ಪ್ರಕರಣಗಳನ್ನು, ಈ ಯುವ ಎಜಿಪಿ ಅವರ ಸಾಮರ್ಥ್ಯ ಮತ್ತು ಪರಿಣತಿಯನ್ನು ಪರಿಗಣಿಸಿ ಅವರಿಗೆ ನೀಡಬೇಕು ಎಂದು ಅದರಲ್ಲಿ ತಿಳಿಸಲಾಗಿತ್ತು. ಸುತ್ತೋಲೆಯಲ್ಲಿ ಎಜಿಪಿ ತಮ್ಮ ಖಾಸಗಿ ಪ್ರಕರಣಗಳನ್ನು ಮುಂದುವರಿಸಲು ಅವಕಾಶ ನೀಡಲಾಗಿತ್ತು, ಆದರೆ ಕಾರ್ಮಿಕ ವಿವಾದಗಳಿಗೆ ಸಂಬಂಧಿಸಿದ ಖಾಸಗಿ ಪ್ರಕರಣಗಳನ್ನು ತೆಗೆದುಕೊಳ್ಳದಂತೆ ನಿರ್ಬಂಧ ವಿಧಿಸಲಾಗಿತ್ತು.
ಈ ಸುತ್ತೋಲೆ ಎಜಿಪಿ ಅವರಿಗೆ ದೊಡ್ಡ ತಲೆನೋವಾಗಿ ಕಾಣಿಸಿತು! ಕಾಳಪ್ಪ ಅವರ ಬಹುತೇಕ ಖಾಸಗಿ ಪ್ರಕರಣಗಳೆಲ್ಲವೂ ಕಾರ್ಮಿಕ ವಿವಾದಗಳಿಗೆ ಸಂಬಂಧಿಸಿದ್ದಾಗಿತ್ತು. ಇದನ್ನು ಅವರು ಅನ್ಯಾಯ ಎಂದು ಭಾವಿಸಿದರು. ಮೊದಲು ಸರ್ಕಾರದ ವಿರುದ್ಧ ಪ್ರತಿಭಟಿಸಬೇಕೆಂದು ನಿರ್ಧರಿಸಿದರು, ಅವರ ಗಾಡ್ಫಾದರ್ ನ್ಯಾಯಮೂರ್ತಿಯವರು ತಕ್ಷಣ ಕಾಳಪ್ಪರನ್ನು ತಡೆದು, ತಮ್ಮ ಪರಿಣತಿಯ ಕ್ಷೇತ್ರದಲ್ಲಿ ಸರ್ಕಾರದ ಪರವಾಗಿ ನಿರಂತರವಾಗಿ ಹಾಜರಾಗುವುದು ಹೈಕೋರ್ಟಿನ ಹಲವು ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಈ ಪ್ರಕ್ರಿಯೇ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಳ್ಳಲು ದಾರಿಯಾಗುತ್ತದೆ ಎಂದೂ ವಿವರಿಸಿದರು. ತನ್ನ ವೃತ್ತಿಜೀವನದ ಹಾದಿಯನ್ನು ತಮ್ಮ ಜಾತಿಯ ಹಿರಿಯರು ಈಗಾಗಲೇ ರೂಪಿಸಿಬಿಟ್ಟಿದ್ದಾರೆ ಎಂಬುದು ಆ ಯುವ ವಕೀಲರಿಗೆ ಅರ್ಥವಾಯಿತು.
ಆದರೂ ಖಾಸಗಿ ಕಕ್ಷಿದಾರರನ್ನು ಕಳೆದುಕೊಳ್ಳುವುದು ಅವರಿಗೆ ಸುತಾರಾಂ ಇಷ್ಟವಿರಲಿಲ್ಲ. ಈ ಸಂದರ್ಭದಲ್ಲಿ ಅವರ ಸ್ನೇಹಿತ ವಕೀಲ ವೀರಣ್ಣ ಸಹಾಯಕ್ಕೆ ಬಂದರು. ಕಾಳಪ್ಪ ಅವರ ಎಲ್ಲಾ ಖಾಸಗಿ ಪ್ರಕರಣಗಳನ್ನು ವೀರಣ್ಣ ಅವರಿಗೆ ವರ್ಗಾಯಿಸಲು ನಿರ್ಧರಿಸಲಾಯಿತು. ಹೊಸ ಕಕ್ಷಿದಾರರು ನೇರವಾಗಿ ಬಂದರೂ ಅವರನ್ನು ಗೆಳೆಯನ ಬಳಿಗೆ ಕಳುಹಿಸುವುದೆಂದೂ ತೀರ್ಮಾನವಾಯಿತು. ವೀರಣ್ಣ ಅವರು ಸಮರ್ಥರಾಗಿದ್ದರೂ, ಅವರ ಸಮುದಾಯವು ವಕೀಲ ವೃತ್ತಿಯಲ್ಲಿ ಅಷ್ಟು ಪ್ರಭಾವ ಹೊಂದಿರಲಿಲ್ಲ. ಆದ್ದರಿಂದ ವೀರಣ್ಣ ವಯಸ್ಸು ಮತ್ತು ಅನುಭವದಲ್ಲಿ ಹಿರಿಯರಾಗಿದ್ದರೂ, ಯುವ AGP ಕಾಳಪ್ಪನಿಗಿಂತ ಅವರಿಗೆ ಕಡಿಮೆ ಕೆಲಸ ಇತ್ತು. ಹೀಗಾಗಿ ಈ ವ್ಯವಸ್ಥೆ ಅವರಿಗೆ ಲಕ್ಷ್ಮೀದೇವಿಯ ವರದಂತಾಯಿತು. ಕಕ್ಷಿದಾರರು ಮತ್ತು ಪ್ರಕರಣಗಳು ವರ್ಗಾವಣೆಯಾದ ಕೂಡಲೇ ಅವರ ಕೈಯಲ್ಲಿ ನೂರಕ್ಕೂ ಹೆಚ್ಚು ಪ್ರಕರಣಗಳಿದ್ದವು, ಹಾಜರಾತಿಯ ಶುಲ್ಕ ಜೇಬಿಗೆ ಹರಿದುಬರುತ್ತಿತ್ತು.
ಕಾಳಪ್ಪ ಅವರು ಹಿಂದೆ ಅರ್ಜಿದಾರರ ಪರ ಹಾಜರಾಗಿದ್ದ ಪ್ರಕರಣಗಳಲ್ಲಿ ಸರ್ಕಾರದ ಪರ ಹಾಜರಾಗುವಂತಿರಲಿಲ್ಲ, ನಿಜ. ಆದರೆ ಪರಸ್ಪರ ಲಾಭದ ಷರತ್ತುಗಳ ಮೇಲೆ ಹೊಚ್ಚ ಹೊಸ ಕಕ್ಷಿದಾರರನ್ನು ಗೆಳೆಯನ ಬಳಿಗೆ ಕಳುಹಿಸಲು ಯಾವ ಅಡ್ಡಿಯೂ ಇರಲಿಲ್ಲ. ಆದರೆ, ಕಕ್ಷಿದಾರರಿಗೆ ವೀರಣ್ಣ ಅವರ ಡ್ರಾಫ್ಟಿಂಗ್ ಹೈಕೋರ್ಟಿಗೆ ಬೇಕಾದ ಗುಣಮಟ್ಟದ್ದಾಗಿಲ್ಲ ಎಂದು ಅನ್ನಿಸಿತು. ಆಗ ಕಾಳಪ್ಪ ಕೇವಲ ಕಕ್ಷಿದಾರರನ್ನು ಕಳುಹಿಸುವುದಕ್ಕಷ್ಟೆ ಸೀಮಿತವಾಗದೆ, ತಾವೇ ಅರ್ಜಿಗಳನ್ನು ಸಿದ್ಧಪಡಿಸಿ ವೀರಣ್ಣನಿಗೆ ಕಳುಹಿಸಲು ಪ್ರಾರಂಭಿಸಿದರು! ವೀರಣ್ಣ ಆ ಅರ್ಜಿಗಳನ್ನು ನೇರ ತಮ್ಮ ಜೂನಿಯರ್ಗಳ ಮೂಲಕ ಫೈಲ್ ಮಾಡಿಸುತಿದ್ದರು.
ಯಾವ ಪ್ರಕರಣಗಳಲ್ಲಿ ರಾಜ್ಯ ಸರ್ಕಾರವು ಎದುರುದಾರರಾಗಿರುತ್ತಿತ್ತೋ (ಹೆಚ್ಚಾಗಿ ಅವುಗಳೆಲ್ಲ ಔಪಚಾರಿಕವಾಗಿರುತ್ತಿತ್ತು), ಅಂತಹ ಪ್ರಕರಣಗಳಲ್ಲಿ ತಾವೇ ಸಿದ್ಧಪಡಿಸಿದ ಅರ್ಜಿಗಳ ವಿರುದ್ಧ ಸರ್ಕಾರದ ಪರವಾಗಿ ಕಾಳಪ್ಪ ಹಾಜರಾಗುತ್ತಿದ್ದರು! ಖಾಸಗಿ ಕಕ್ಷಿದಾರರಿಂದಲೂ ಈ ಸೇವೆಗಾಗಿ ಅವರು ಶುಲ್ಕ ಪಡೆಯುತ್ತಿದ್ದರು. ಸರ್ಕಾರವೂ ಆ ಪ್ರಕರಣಗಳಲ್ಲಿ ಅವರ ಸೇವೆಗೆ ಹಣ ಕೊಡುತ್ತಿತ್ತು! ಇದು ಕಾಳಪ್ಪ ಅವರಿಗೆ ‘ಒಂದೇ ಪ್ರಕರಣ, ಎರಡು ಲಾಭ’ದ ಯೋಜನೆಯಾಯಿತು.
ಮೊದಲು ಕಾಳಪ್ಪ ಮತ್ತು ವೀರಣ್ಣನ ನಡುವೆ ಶುಲ್ಕದ ಹಂಚಿಕೆ ಶೇಕಡ 50 ರ ಅನುಪಾತದಲ್ಲಿತ್ತು. ಆದರೆ ಎಜಿಪಿ ಅವರು ಖಾಸಗಿ ಕಕ್ಷಿದಾರರಿಗೆ ಹೆಚ್ಚುವರಿ ‘ಸೇವೆಗಳನ್ನು’ ನೀಡಲು ಪ್ರಾರಂಭಿಸಿದರು. ಸಾಮಾನ್ಯವಾಗಿ ಸರ್ಕಾರದ ವಕೀಲರು ಕೇವಲ ಮೂಕಪ್ರೇಕ್ಷಕರಾಗಿ ನ್ಯಾಯಾಲಯದ ಆದೇಶಕ್ಕೆ ಬದ್ಧ ಎಂದಷ್ಟೇ ಹೇಳುತ್ತಿದ್ದರು, ಆದರೆ ಇಲ್ಲಿ ಕಾಳಪ್ಪ ಅವರು ತಾವೇ ಸಿದ್ಧಪಡಿಸಿದ ಅರ್ಜಿಗಳಿಗೆ ಪೂರಕವಾಗಿ ಸರ್ಕಾರದ ಪರವಾಗಿ ಅಫಿಡವಿಟ್ಗಳನ್ನು ಸಲ್ಲಿಸಲು ಪ್ರಾರಂಭಿಸಿದರು! ಅಂದರೆ ಅವರು ಬರೆದ ಅರ್ಜಿಯಲ್ಲಿನ ಆಧಾರಗಳನ್ನು ಬೆಂಬಲಿಸಲು ತಮ್ಮ ಎಲ್ಲ ಕಾನೂನು ಕೌಶಲ ಬಳಸಿದರು!
ಇದು ಕ್ರಿಕೆಟ್ ಆಟದ ನಿಯಮಕ್ಕೆ ಸರಿಹೊಂದುತ್ತಿರಲಿಲ್ಲ ನಿಜ. ಆದರೆ, ಆ ದಿನಗಳಲ್ಲಿ ಯಾರೂ ಯಾರ ಮೇಲೂ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡುತ್ತಿರಲಿಲ್ಲ. ಈ ಉದಾತ್ತ ವೃತ್ತಿಯಲ್ಲಿ ಮೌನವಾಗಿರುವುದೇ ವೃತ್ತಿಯ ಶ್ರೇಷ್ಠ ಸಂಪ್ರದಾಯ ಎಂದು ಭಾವಿಸಲಾಗಿತ್ತು. ಕೆಲವು ಸಂದರ್ಭಗಳಲ್ಲಿ ನ್ಯಾಯಾಲಯವು ಸರಿಯಾದ ತೀರ್ಮಾನಕ್ಕೆ ಬರಲು ಕಾಳಪ್ಪ ಅವರ ಸಹಾಯ ಕೇಳುತ್ತಿತ್ತು. ಅವರು ಅತ್ಯಂತ ನಾಜೂಕಾಗಿ ತಮ್ಮ ಸ್ನೇಹಿತ ವೀರಣ್ಣನಿಗೆ ಸಹಾಯವಾಗುವಂತೆ ವಾದ ಮಂಡಿಸುತ್ತಿದ್ದರು! ಕಕ್ಷಿದಾರರಿಗೆ ಫಲಿತಾಂಶ ಮುಖ್ಯವಾಗಿದ್ದರಿಂದ ಅವರು ಈ ‘ಹೆಚ್ಚುವರಿ ಸೇವೆ’ಗೂ ಹಣ ನೀಡಲು ಹಿಂಜರಿಯುತ್ತಿರಲಿಲ್ಲ.
ನೈತಿಕತೆ ಕೇವಲ ಪುಸ್ತಕಗಳಲ್ಲಿರಲಿ, ಹೇಗಾದರೂ ಮಾಡಿ ಗೆಲ್ಲಬೇಕು ಎಂಬುದೇ ಗುರಿಯಾಗಿತ್ತು. ಹೀಗಾಗಿ ಕಕ್ಷಿದಾರರಿಗೆ ಇದು ಒಳ್ಳೆಯ ‘ಪ್ಯಾಕೇಜ್ ಡೀಲ್’ ಆಗಿತ್ತು. ಅರ್ಜಿಯನ್ನು ಸಿದ್ಧಪಡಿಸುವವರು ಎಜಿಪಿ ಕಾಳಪ್ಪ, ಫೈಲ್ ಮಾಡುವುದು ವೀರಣ್ಣ, ಮತ್ತು ಅದಕ್ಕೆ ಬೆಂಬಲವಾಗಿ ಸರ್ಕಾರದ ಪರವಾಗಿ ಅಫಿಡವಿಟ್ ಸಲ್ಲಿಸುವವರು ಮತ್ತೆ ಕಾಳಪ್ಪ! ಬೌಲರ್ ತಾನೇ ಆಗಿದ್ದು, ಇದು ಎಂಡ್ ಬದಲಿಸಿ ಬೌಲಿಂಗ್ ಮಾಡಿದಂತೆ ಇತ್ತು. ಅಂತಿಮವಾಗಿ ನ್ಯಾಯಮೂರ್ತಿಗಳ ಆಶೀರ್ವಾದದೊಂದಿಗೆ ಬಯಸಿದ ಫಲಿತಾಂಶ ಸಿಗುತ್ತಿತ್ತು. ಕಾನೂನಿನ ಈ ರೇಖಾಗಣಿತದಲ್ಲಿ, ನ್ಯಾಯದ ಈ ಬೀಜಗಣಿತ ಬಯಸಿದ ಫಲಿತಾಂಶ ಕೊಡುತ್ತಿತ್ತು. ಇದೆಲ್ಲವೂ ಕೇವಲ ‘ಕ್ಯೂ ಇ ಡಿ’ (QED – Quite Easily Done) ಎನ್ನುವಂತೆ ಸುಲಭವಾಗಿ ನಡೆಯುತ್ತಿತ್ತು.
ಶ್ರಮಜೀವಿ ಕಾಳಪ್ಪ ಅವರು ಕಾರ್ಮಿಕ ಕಾನೂನಿನ ಎಲ್ಲ ಶಾಖೆಗಳಲ್ಲಿ ತಮ್ಮ ಪರಿಣತಿಗಾಗಿ ಬೇಗ ಮನ್ನಣೆ ಪಡೆದರು. ಕಾಳಪ್ಪ ಅವರ ಈ ‘ಸಾಮರ್ಥ್ಯ’ ಹಿರಿಯ ನ್ಯಾಯಮೂರ್ತಿಗಳ ಗಮನ ಸೆಳೆಯಿತು. ಅವರ ಗಾಡ್ಫಾದರ್ ಕೊಲಿಜಿಯಂನಲ್ಲಿದ್ದಾಗ ಕಾಳಪ್ಪ ಅವರನ್ನು ನ್ಯಾಯಾಧೀಶರನ್ನಾಗಿ ನೇಮಿಸುವ ಶಿಫಾರಸ್ಸು ಮಾಡಿದಾಗ, ಅದು ಸುಲಭವಾಗಿ ಅಂಗೀಕಾರವಾಯಿತು. ಕಾಳಪ್ಪ ಅವರು ಕೇವಲ 45 ನೇ ವಯಸ್ಸಿನಲ್ಲಿ ಹೈಕೋರ್ಟ್ ನ್ಯಾಯಾಧೀಶರಾದರು. ಅವರು ದೀರ್ಘಕಾಲ ಕಾರ್ಮಿಕ ವಿವಾದಗಳಲ್ಲಿ ಸರ್ಕಾರದ ವಕೀಲರಾಗಿದ್ದ ಕಾರಣ, ಅವರನ್ನು ಅರೆಕಾಲಿಕವಾಗಿ ನೆರೆ ರಾಜ್ಯದ ಹೈಕೋರ್ಟ್ಗೆ ವರ್ಗಾಯಿಸಲಾಯಿತು.
ಈ ಮಧ್ಯೆ ಅವರ ನಿಷ್ಠಾವಂತ ಸ್ನೇಹಿತ ವೀರಣ್ಣ ಅವರ ವೃತ್ತಿಜೀವನವು ಭರ್ಜರಿಯಾಗಿ ಬೆಳೆಯಿತು. ಇದಕ್ಕೆ ಹೆಚ್ಚಿನ ಕಾರಣ, ಈಗ ನ್ಯಾಯಾಧೀಶರಾಗಿದ್ದ ಅವರ ಗೆಳೆಯ AGP ಕಾಳಪ್ಪ ಅವರ ಹಿಂದಿನ ಕಕ್ಷಿದಾರರ ಬಳಗವಾಗಿತ್ತು. ವೀರಣ್ಣ ಅವರಿಗೆ ಆಗಲೇ 55 ವರ್ಷ ದಾಟಿತ್ತು. ಪದಾಂಕಿತವಾಗಿರದಿದ್ದರೂ ಅವರನ್ನು ಎಲ್ಲರೂ ಹಿರಿಯ ವಕೀಲರಂತೆ ಕಾಣಲಾಗುತ್ತಿತ್ತು. ಅದು ಅವರಿಗೆ ಆರಾಮದಾಯಕವಾಗಿಯೂ ಒಳ್ಳೆಯ ಸ್ಥಾನದಂತಿತ್ತು. ಕಾಳಪ್ಪ ಅವರು ನ್ಯಾಯಾಧೀಶರಾದ ಎರಡು ವರ್ಷಗಳ ನಂತರ, ಅಂದು ಕೇಂದ್ರದಲ್ಲಿದ್ದ ಸಮಾಜವಾದಿ ಮೈತ್ರಿ ಸರ್ಕಾರವು ಕಾರ್ಮಿಕರ ಪರವಾಗಿರುವ ನ್ಯಾಯಾಧೀಶರನ್ನು ನೇಮಿಸಲು ನಿರ್ಧರಿಸಿತು. ಆಗ ಕಾಳಪ್ಪ ಅವರು ತಮ್ಮ ಸ್ನೇಹಿತ ವೀರಣ್ಣ ಅವರ ಹೆಸರನ್ನು ಶಿಫಾರಸ್ಸು ಮಾಡಿದರು. 55 ವರ್ಷ ದಾಟಿದವರನ್ನು ಸಾಮಾನ್ಯವಾಗಿ ನೇಮಕ ಮಾಡುವ ಅವಕಾಶವಿರದಿದ್ದರೂ, ವೀರಣ್ಣ ಅವರ ನೇಮಕಾತಿ ನಡೆಯಿತು.
ಶೀಘ್ರದಲ್ಲೇ ನ್ಯಾಯಮೂರ್ತಿ ಕಾಳಪ್ಪ ನೆರೆಯ ರಾಜ್ಯದಿಂದ ತಮ್ಮ ಮೂಲ ಹೈಕೋರ್ಟಿಗೆ ಮರಳಿ, ತಮ್ಮ ಹಳೆಯ ಗೆಳೆಯ ನ್ಯಾಯಮೂರ್ತಿ ವೀರಣ್ಣ ಅವರೊಂದಿಗೆ ಸಹ ನ್ಯಾಯಾಧೀಶರಾಗಿ ಪೀಠ ಹಂಚಿಕೊಂಡರು. ಅವರ ಜೂನಿಯರ್ಗಳು ತಮ್ಮ ತಮ್ಮ ಸೀನಿಯರ್ಗಳ ಮುಂದೆ ಹಾಜರಾಗುತ್ತಿರಲಿಲ್ಲ. ಆದರೆ, ಒಬ್ಬರ ಕೋರ್ಟಿನಲ್ಲಿ ಇನ್ನೊಬ್ಬರ ಜೂನಿಯರ್ಗಳು, ಹೆಚ್ಚುವರಿ ಗೊಬ್ಬರ ಪಡೆದ ಗಿಡಗಳಂತೆ ಚೆನ್ನಾಗಿ ಬೆಳೆದರು.
ನ್ಯಾಯಮೂರ್ತಿ ಕಾಳಪ್ಪ ಅವರು ತಮ್ಮ 45ನೇ ವಯಸ್ಸಿನಲ್ಲೇ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದು ಮತ್ತು ಸರಿಯಾದ ಸಮಯಕ್ಕೆ ಸರಿಯಾದ ಸ್ಥಳಗಳಲ್ಲಿ ಇದ್ದ ಜಾತಿ ಸಂಪರ್ಕಗಳ ಕಾರಣದಿಂದಾಗಿ ಅವರು ಹೈಕೋರ್ಟಿನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾದರು, ನಂತರ ಬೇರೆ ಕೆಲವು ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಯೂ ಆದರು.
ಉನ್ನತ ಸ್ಥಾನಗಳಲ್ಲಿದ್ದ ಅವರ ಜಾತಿ ಸಂಪರ್ಕಗಳು, ಅವರು ಇನ್ನೂ ದೊಡ್ಡ ಪಾತ್ರಕ್ಕೆ ಅರ್ಹರೆಂದು ತೀರ್ಮಾನಿಸಿದವು. ಹೀಗೆ ನ್ಯಾಯಮೂರ್ತಿ ಕಾಳಪ್ಪ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಪಡೆದು, ಹಲವು ವರ್ಷ ಸೇವೆ ಸಲ್ಲಿಸಿದರು.
ಅವರು ಈಗ ನಿವೃತ್ತರಾಗಿದ್ದಾರೆ.
ಅವರ ನಿಷ್ಠಾವಂತ ಗೆಳೆಯ ನ್ಯಾಯಮೂರ್ತಿ ವೀರಣ್ಣ ಕೂಡ ಹೈಕೋರ್ಟ್ ನ್ಯಾಯಾಧೀಶರಾಗಿ ನಿವೃತ್ತರಾಗಿದ್ದಾರೆ. ಅವರ ಮಕ್ಕಳು ಮತ್ತು ಜೂನಿಯರ್ಗಳು ನಮ್ಮ ಉದಾತ್ತ ವೃತ್ತಿಯಲ್ಲಿ ಚೆನ್ನಾಗಿ ನೆಲೆಯೂರಿದ್ದಾರೆ. ‘ಬಡ್ತಿ’ ಎಂಬ ಕೈಗೆಟುಕದ ಅದೃಷ್ಟದೇವತೆ ತಮ್ಮತ್ತ ಕರುಣೆಯ ನೋಟ ಬೀರಲಿ ಎಂದು ತಾಳ್ಮೆಯಿಂದ ಕಾಯುತ್ತಿದ್ದಾರೆ.
ಮಧ್ಯಸ್ಥಿಕೆ (ಆರ್ಬಿಟ್ರೇಷನ್) ಎಂಬುದು ಕುಳಿತಲ್ಲೇ ಹಣ ತರುವ ಕಾಮಧೇನುವಾಗಿದೆ. ನಿವೃತ್ತ ನ್ಯಾಯಮೂರ್ತಿಗಳೆಲ್ಲರೂ ಸೇವೆಯಲ್ಲಿದ್ದಾಗ ಕಳೆದ ಜೀವನಕ್ಕಿಂತ ನಿವೃತ್ತಿಯಲ್ಲಿ ಹೆಚ್ಚು ಸಂತೋಷದ ಮತ್ತು ಹೆಚ್ಚು ಲಾಭದಾಯಕ ಜೀವನ ನಡೆಸುವಂತೆ ನೋಡಿಕೊಳ್ಳುತ್ತದೆ. ನ್ಯಾಯಮೂರ್ತಿ ಕಾಳಪ್ಪ ಮತ್ತು ನ್ಯಾಯಮೂರ್ತಿ ವೀರಣ್ಣ, ಹಲವರಂತೆ, ಅನೇಕ ಮಧ್ಯಸ್ಥಿಕೆ ಕೇಂದ್ರಗಳ ಪ್ಯಾನೆಲ್ಗಳಲ್ಲಿದ್ದಾರೆ. ಈ ‘ಪ್ಯಾಕೇಜ್ ಡೀಲ್’ಗಳು ಆರ್ಬಿಟ್ರೇಷನ್ನಲ್ಲೂ ನಡೆಯುತ್ತವೆಯೇ ಎಂದು ಆಶ್ಚರ್ಯಪಡದಂತೆ ವೃತ್ತಿಯ ಮರ್ಯಾದೆ ನಮ್ಮನ್ನು ತಡೆಯುತ್ತದೆ!






0 Comments