ಮಳೆ ಅಂದ್ರೆ ಹೀಗೇನೇ….
-1-
ಮಳೆ ಅಂದ್ರೆ ಹೀಗೆ
ಇಳೆಗೂ ಸಂಭ್ರಮ ಇಮ್ಮಡಿ
ಮುಗಿಲ ಕಾತುರ ನೆಲಕ್ಕೆ ಅಪ್ಪಳಿಸಿದಂತೆ
ಭೂಮಿ ತಾಯಿಗೆ ಮಳೆ ಸೀರೆ ಉಡಿಸಿದಂತೆ
ಮಳೆ ಅಂದ್ರೆ ಹೀಗೇನೇ
ಮಕ್ಕಳು ಉಟ್ಟಬಟ್ಟೆಯಲ್ಲಿ
ಕುಣಿದು ಕುಪ್ಪಳಿಸಿದಂತೆ
ಅಡಿಕೆ ಹಾಳಿ,ಗೋಣಿ ಕೊಪ್ಪೆ ಹೊದ್ದು
ಗದ್ದೆಗೆ ನಡೆದಂತೆ
ಹರೆಯದ ಚರಿತ್ರೆ ಹಿಂಗಾಲಿನಲಿ
ಬಾಲ್ಯಕ್ಕೆ ಚಲಿಸಿದಂತೆ

ಮಳೆ ಅಂದ್ರೆ ಹೀಗೇನೇ
ಭೂಮಿ ನಕ್ಕಂತೆ
ನೆನೆಪುಗಳು ಮೊಳಕೆಯೊಡೆದಂತೆ
ಹಸಿರುಟ್ಟು ಸಂಭ್ರಮಿಸಿ ಹಬ್ಬಮಾಡಿದಂತೆ
ಮಳೆ ಅಂದ್ರೆ ಹೀಗೇನೇ
ನೇಗಿಲಿಗೂ ಸೊಗಸು
ಭೂಮಿ ಸೀಳುವ ಆತನಿಗೂ ಒಳಗೊಳಗೇ ಹಿಗ್ಗು
ಹಸಿ ಮೇವು ತಿನ್ನುವ ಹಸುವಿಗೂ ಕಾತುರ
ಮಳೆ ಅಂದ್ರೆ ಹೀಗೇನೇ
ನೆಲ ಮುಗಿಲಿನ ಮುಗಿಯದ ಧಾರಾವಾಹಿ
ಅಡುಗೆ ಮನೆಯ ಹುಡುಗಿಗೆ
ನಲ್ಲ ಬೆಲ್ಲ ತರುವ ಬಯಕೆ
-2-
ನೀನು ಕಳೆದು ಹೋದೆ ಎಂದೇ ಭಾವಿಸಿದ್ದೆ
ಹನಿಹನಿ ಮಳೆಯಾಗಿ ಎದೆಗಿಳಿದೆ
ನೆನೆಪುಗಳ ಗೋರಿ ಕಟ್ಟಿಬಿಟ್ಟಿದ್ದೆ
ಗೋರಿಯ ಸುತ್ತ ಸುರಿದ ಮಳೆ
ಹಸಿರಾಯಿತು ಚಿಗುರೊಡೆಯಿತು
ನೀನು ಗೋರಿಯ ಪಕ್ಕದ ದಾರಿಯಲ್ಲಿ ನಡೆದೆ
ಮರಗಿಡಗಳಲ್ಲಿ ರಾಗಗಳು ಹುಟ್ಟಿದವು
ಎಷ್ಟೋದಿನಗಳ ನಂತ್ರ ಹೊರಳಿ ನೋಡಿದೆ
ಮಾತು ಬಾರದ ಭೂಮಿ ಪಲ್ಲವಿಸಿತು
ಹೆಜ್ಜೆ ಸದ್ದು ಗೆಜ್ಜೆ ಸದ್ದು ಮರಳಿದವು
ಕಣ್ಣಲ್ಲಿ ಹೊಸ ಆಶಯಗಳು ಕುಡಿಯೊಡೆದವು

-3-
ಮುಂಜಾನೆಯಿಂದ ಭಾರೀ ಮಳೆ
ಭೋರ್ಗರೆಯುತ್ತಿದೆ ಆಕಾಶ
ನೀನು ಸಿಟ್ಟಾಗಿ ಗುಡುಗಿದಾಗ
ತೋದು ತೊಪ್ಪೆಯಾಗುವುದು ಮಾತ್ರ
ನನಗೆ ಉಳಿದ ದಾರಿ
-4-
ಹಗಲು ಕಾಯಿಸಿದ ಮುಗಿಲು
ಸಂಜೆಯಾಗುತ್ತಿದ್ದಂತೆ
ಮಳೆ ಸುರಿಸುತ್ತಿದೆ
ಭುವಿಗೆ ಕ್ಷಮೆ ಕೇಳಿದಂತೆ
-5-
ರಾತ್ರಿಯೆಲ್ಲಾ ಸುರಿದ ಮಳೆಗೆ
ಮೈಮುಖ ತೊಳೆದುಕೊಂಡ ಭೂಮಿ
ಉಲ್ಲಾಸದಿ ನಗುತ್ತಿತ್ತು
-6-
ರಾತ್ರಿಯೆಲ್ಲಾ ಕಣ್ಣೀರಿಟ್ಟ ಆಕಾಶ
ಬೆಳಗಾದರೂ ಕವಿದ ಮೋಡಗಳಿಂದ
ಮುಖ ದುಮುಗುಡುತ್ತಿತ್ತು
ಮೈ ಇನ್ನು ಬಿಗುವಾಗಿತ್ತು
ಥೇಟ್ ನಿನ್ನಂತೆ






0 Comments