ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡು ಹೂವಿನ ಸೊಲ್ಲು : ಕಾಣದ ಕಡಲಿಗೆ ಹಂಬಲಿಸಿದೆ ಮನ…

ರೇಣುಕಾ ನಿಡಗುಂದಿ

ನಾನು ಜನ್ಮದಲ್ಲಿ ಮೊಟ್ಟಮೊದಲು ಕಡಲು ಕಂಡದ್ದೇ ಗೋಕರ್ಣದಲ್ಲಿ. ಅಪ್ಪನ ಕೈ ಹಿಡಿದು ಆಗಾಧವಾದ ಕಡಲ ನೀಲಿಗೆ ಕಾಲು ತಾಕಿದ್ದೆ ಅದು ನನ್ನನ್ನು ಸೆಳೆದುಕೊಂಡು ಎತ್ತಲೋ ಸಾಗುತ್ತಿರುವಂತೆ ಮತ್ತು ಭೂಮಿಯನ್ನೆಲ್ಲ ಸುತ್ತಿತ್ತಿದ್ದೇನೆಂಬಂತೆ ಹೆದರಿದ್ದೆ. ಗಟ್ಟಿಯಾಗಿ ಅಪ್ಪ ಹಿಡಿದುಕೊಂಡಿದ್ದರು ನನ್ನ ಕೈ. ಅಬ್ಬಾ ಕಣ್ಣು ಹಾಯಿಸಿದಲ್ಲೆಲ್ಲಾ ಕಡುನೀಲಿ ಕಡಲೇ. ನಿರಂತರವಾಗಿ ಉಕ್ಕಿ ಸೊಕ್ಕಿ, ಎದ್ದೆದ್ದು ಹಾಗೇ ಮುಗುಚಿಕೊಂಡು ಉರುಳಿ ಉರುಳಿ ಬೀಳುವ ತೆರೆಗಳು, ಅಲೆಯಲೆಯಾಗಿ ಜೀವಲಯದಂತೆ ದಡಕ್ಕೆ ಅಪ್ಪಳಿಸಿ ಕಿರಿ ಕಿರಿದಾಗಿ ಕಡಲಲ್ಲೇ ಅಳಿದುಹೋಗುವ ಅಲೆಗಳು ವಿಸ್ಮಯ ಹುಟ್ಟಿಸಿದ್ದವು. ಕಡಲಿಗೆ ಸೊಕ್ಕುವ ಅಬ್ಬರ, ಅಲೆಗಳಿಗೆ ಹುಚ್ಚೆದ್ದು ಕುಣಿದು ಸಾಗುವ ಉಬ್ಬರ. ಕಾಡುವ ಕಡಲಾಗಿ ಕಡಲು ನನ್ನೊಳಗೆ ಇಳಿದದ್ದೇ ಆಮೇಲೆ. ಆ ಕಡಲು ನನ್ನನ್ನು ಬಿಡಲಿಲ್ಲ. ಮತ್ತೆ ಗೋವೆಯಲ್ಲಿ ಮೂರು ವರ್ಷ ಇರುವ ಅವಕಾಶ ಬಂದೊದಗಿದ್ದೂ ಕಡಲೇ ನನ್ನನ್ನು ತನ್ನೆಡೆಗೆ ಕರೆಯಿತು ಎಂದುಕೊಂಡೆ. ಆದರೆ ಅದು ನನ್ನನ್ನು ಕವಿತೆಯಾಗಿಸಿತು, ಹಾಡಾಗಿಸಿತು, ತೊರೆಯಾಗಿಸಿತು, ಮಗುವಾಗಿಸಿತು ಮತ್ತೆ ನನ್ನನ್ನು ತನ್ನ ಕಪ್ಪು ಕನ್ನಡಿಯಲ್ಲಿ ಬಿಂಬಿಸಿ ನನ್ನನ್ನೇ ನನಗೆ ಪರಿಚಯಿಸಿತು. ಕಡಲಿಗೆ ಯಾಕಿಷ್ಟು ಸೆಳೆತ? ಯಾಕೆ ಪ್ರೀತಿ ಹುಟ್ಟಿತು ಅಂದರೆ ಉತ್ತರ ಸಿಗದ ಪ್ರೀತಿ ಅಷ್ಟೇ!

ಎಷ್ಟು ಸಲ ಕಡಲ ಸ್ನಾನಕ್ಕಿಳಿದು ಇಡೀ ಸಾಗರದ ಮೈಯನ್ನು ಹೊನ್ನಬಣ್ಣದಲ್ಲಿ ಅದ್ದಿದ ರವಿಯನ್ನು ಬಾಚಿಕೊಂಡಿಲ್ಲ. ಅಲೆಗಳ ಉಪ್ಪುಪ್ಪು ನೊರೆಯಲ್ಲಿ ಮಿಂದಿಲ್ಲ. ಕಡಲ ಸ್ನಾನ ಮಾಡಿ ಹಾಗೇ ಒದ್ದೆಬಟ್ಟೆಯಲ್ಲೇ ಮನೆ ಹತ್ತಿರದ ಝರಿಯಲ್ಲಿ ಹೋಗಿ ಸಿಹಿನೀರ ಸ್ನಾನ ಮಾಡುವುದೆಂದರೆ ಅದು ಯಾವುದೋ ಕಿನ್ನರಲೋಕದಲ್ಲಿ ವಾಸಿಸುತ್ತಿದ್ದೆಂಬ ಕನಸು. ಜೊತೆಗೆ ಬೇಲಾ, ಗುಡಿಯಾ, ರೋಜ್ ಎಲ್ಲ ಗೆಳತಿಯರೊಡನೆ ಮರಳ ದಂಡೆಯಲ್ಲಿ ಹೊತ್ತು ಕಂತುವವರೆಗೂ ಆಟವಾಡುವುದೂ ಅಷ್ಟೇ ಹಿತವಾಗಿರುತ್ತಿತ್ತು. ರಾತ್ರಿಯ ಮಿಣುಕುಹುಳು, ಕಡಲು, ಕವಿತೆ, ಗೆಳತಿಯರು,ಆಟ- ಓದು ಎಂಬ ನನ್ನದೇ ಹೊಸಲೋಕದಲ್ಲಿ ನಾನಿದ್ದುಬಿಟ್ಟಿದ್ದರೆ ನನಗೆ ಇನ್ನೊಂದು ಲೋಕದ ಪರಿಚಯವೇ ಆಗುತ್ತಿದ್ದಿಲ್ಲ. ಕತ್ತಲ ಕ್ಷಿತಿಜದಲ್ಲಿ ಆರತಿಯೆತ್ತುವ ಮಿಂಚುಹುಳಗಳನ್ನೂ ಕಂಡದ್ದು ಇಲ್ಲಿನ ಇರುಳಲ್ಲೇ. ನನಗೋ ಕಡಲೆಂದರೆ ಪ್ರೀತಿ, ಕಡಲೆಂದರೆ ಕವಿತೆ, ಕಡಲೆಂದರೆ ನನ್ನ ಏಕಾಂತದ ಪ್ರೇಮಿಯಾಗಿತ್ತು, ವಿರಹಿಯಾಗಿತ್ತು. ‘ಕಾಣದ ಕಡಲಿಗೆ ಹಂಬಲಿಸಿದೆ ಮನ ,ಕಾಣಬಲ್ಲನೆ ಒಂದು ದಿನ ….ಕಡಲನು ಕೂಡಬಲ್ಲನೆ ಒಂದು ದಿನ’ ಇದು ನನಗೇ ಬರೆದ ಸಾಲುಗಳಂತೆ ಕಾಡುತ್ತಿತ್ತು. ನೂರೆಂಟು ಬಣ್ಣಗಳನ್ನು ಮೂಡಿಸಿತ್ತು.
ರಾತ್ರಿಯ ನೀರವತೆಯಲ್ಲಿ ಕಡಲು ಬರೀ ಮಾತಾಡುತ್ತದೆ, ಮೊರೆತದ ಜೋಗುಳ ಕಿವಿಗೊಟ್ಟು ಕೇಳುತ್ತ ನಿದ್ದೆಹೋಗುತ್ತಿದ್ದೆ. ರಾತ್ರಿಯಷ್ಟೇ ಯಾಕೆ, ಅದು ಇಡೀ ದಿನ ಮಾತಾಡುತ್ತದೆ. ಯಾವಾಗಬೇಕಾದರೂ ಹೊರಗಿನ ಸದ್ದನ್ನು ಅಡಗಿಸಿ ಮನಸ್ಸಿನ ಕಿಟಕಿಯನ್ನು ತೆರೆದರೆ ಅದು ನನ್ನೊಂದಿಗಷ್ಟೇ ಮಾತಾಡುತ್ತಿರುವಂತೆ ಅನಿಸುತ್ತದೆ. ಮಟ ಮಟ ಮಧ್ಯಾಹ್ನದ ನೀರವತೆಯಲ್ಲಿ ಕವಿತೆ ಬರೆಯುತ್ತ ಕೂತಾಗಲೂ ಹಾಗೇ ಅನಿಸುತ್ತಿತ್ತು. ನಾನು ಮತ್ತು ಕಡಲು ಇಬ್ಬರೂ ತಳಮಳಿಸುತ್ತಿದ್ದೇವೆಂಬಂತೆ. ನನ್ನೊಂದಿಗೆ ಬರೀ ಕಡಲು. ಥೇಟ್ ಹಾಗೇ ಟೆಸ್ಸಿಯ ಅಣ್ಣನನ್ನು ನೋಡಿದಾಗಲೂ ಅನಿಸುತ್ತಿತ್ತು. ಮಾತಾಡದಿದ್ದರೂ ಮಾತಾಡುತ್ತಿರುವಂತೆ. ಕಣ್ಣುಗಳು ನೋಡುತ್ತಿರುವಂತೆ. ನನಗೇ ಏನೋ ಹೇಳುತ್ತಿರುವಂತೆ, ನಾನು ಕೇಳಿಸಿಕೊಂಡಂತೆ. ಅಂಗ್ರೇಜಿ ಹ್ಯಾಟ್ ಹಾಕ್ಕೊಂಡು, ಟೀ ಶರ್ಟ್ ಮತ್ತು ಶಾರ್ಟ್ಸ್ ನಲ್ಲಿ ಓಡಾಡುತ್ತಿದ್ದ ಕೆನಿಯನ್ನು ಹುಡುಕಬೇಕಿದ್ದಿಲ್ಲ. ಅವನು ಕಡಲ ಕಿನಾರೆಯಲ್ಲಿ ಹುಟ್ಟಿ ಬೆಳೆದಿದ್ದಾನೆಂಬುವಂತೆ ಅಲ್ಲಿಯೇ ಸಿಗುತ್ತಿದ್ದ. ಇವನ ತಾಯಿ ಮರ್ ಮೇಡ್ ಇರಬೇಕು ಎಂದು ಟೆಸ್ಸಿ ಹೇಳಿ ನಗುತ್ತಿದ್ದಳು. ಆಸ್ಪೆತ್ರೆಯೊಂದರಲ್ಲಿ ನರ್ಸ ಆಗಿದ್ದ ಟೆಸ್ಸಿ ಇದ್ದಕ್ಕಿದ್ದಂತೆ ಟೈಫಾಯಿಡ್ ಆಗಿ ನಾನು ಹಾಸಿಗೆ ಹಿಡಿದಾಗ ಮನೆಗೆ ಬಂದು ಚುಚ್ಚುಮದ್ದು ಕೊಟ್ಟು ಹೋಗುತ್ತಿದ್ದಳು. ನನಗೆ ಹಿರಿಯಕ್ಕನಂತೆ ಪುಡಿಂಗ್ ಕಲಿಸಿದ್ದಳು. ಹೀಗೆ ನಾವಿಬ್ಬರೂ ಅವಳ ಕಿಚನ್ನಿನಲ್ಲಿ ಮತ್ತೇನನ್ನೋ ಪಕಾಯಿಸುತ್ತಿರುವಾಗಲೇ ಕೆನಿ ಬಂದಿದ್ದ. ಒಳಗೇ ಬಾರದೇ ಹೊರ ಜಗುಲಿಯ ಮೇಲೆ ಕುಳಿತು – “ಮೊಗ್ ತುಜೋ ಕಿತ್ಲೋ ಆಶೆಲೋ ….” ಹಾಡಿಕೊಳ್ಳುತ್ತಿದ್ದ. ಟೆಸ್ಸಿಯೇ ಕಿವಿಯಲ್ಲಿ ಉಸುರಿದ್ದಳು ಅದು ಪ್ರೀತಿಯ ಹಾಡು ಅಂತಾ. ನಾನು ಕೊಂಕಣಿಯ ನರ್ಸರಿಯಲ್ಲಿದ್ದೆ. ಹೇಗೆ ಅರ್ಥವಾಗಬೇಕು ? ಸುಮ್ಮನೆ ನಕ್ಕಿದ್ದೆ ! ಜಟಿಲ ಕಾನನದ ಕುಟಿಲ ಪತಗಳಲಿ ಹರಿವ ತೊರೆಯು ನಾನು….ಎಂದಿಗಾದರೂ ಕಾಣದ ಕಡಲನು ಸೇರಬಲ್ಲೆನೇನು ? ಕಡಲು ಎದುರಿಗೆ ಇತ್ತು. ತೊರೆಗೆ ತೊರೆದು ಹರಿಯುವ ಹಮ್ಮು.
ಮೀನುಗಾರರು ಮಳೆಗಾಲದಲ್ಲಿ ದೋಣಿಯನ್ನು ಎಳೆದು ಕಿನಾರೆಯಲ್ಲಿ ನಿಲ್ಲಿಸಿರುತ್ತಿದ್ದರು. ಅದರ ನೀರಲ್ಲಿ ನೆನೆದು ಕರ್ರಗಾಗಿಹೋದ ಕಟ್ಟಿಗೆ ಹಾಗು ಕಡಲ ಒಡಲಿನ ಸತ್ತ ಸಸ್ಯ -ಜೀವಜಂತುಗಳ ವಿಚಿತ್ರ ವಾಸನೆಯಲ್ಲಿ ಮನ ಮರಳುತ್ತಿತ್ತು. ಮೀನಿಗಾರರ ಬಲೆಯಲ್ಲಿ ರಾಶಿ ರಾಶಿ ಇನ್ನು ಜೀವವಿರುವ ಮೀನುಗಳು ಚಟಪಟ ಪುಟಿದು ನಿಶ್ಚೇತನಗೊಳ್ಳುವ ಜೀವಗಳು ಕಾಡುತ್ತಿದ್ದವು. ಚಳಿಗಾಲದಲ್ಲಿ ಶಾಂತವಾಗಿ ನೀಲಿ ಒಡಲಿನ ಕೆಂಪು ಸೂರ್ಯನ ಚೆಲುವು ತುಂಬಿಕೊಳ್ಳುವ ಕಡಲೀಗ ತಾಂಡವವಾಡುತ್ತಿದೆ. ಮಳೆಗಾಲದಲ್ಲಿ ಕಡಲಿನ ರುದ್ರರೂಪ ಬೆಚ್ಚುವಂತಿರುತ್ತದೆ. ಕವ್ವನೆ ಕವಿದ ಮಾಹಾಕಾಯದ ಮೋಡಗಳ ಹಿನ್ನೆಲೆಯಲ್ಲಿ ಕಡಲೂ ಮಾಹಾ ತೆರೆಗಳನ್ನು ಹುಚ್ಚೆದ್ದು ಕುಣಿಸುತ್ತ ಅಬ್ಬರಿಸುತ್ತಿತ್ತು. ಮಿಂಚಿದಾಗೆಲ್ಲ ಇನ್ನೇನು ಬಾನು ಕಡಲು ಬಿರಿದು ಒಂದಾಗುತ್ತವೆಯೋ ಎನ್ನುವ ತಲ್ಲಣ. ಮೊರೆಮೊರೆದು ಭೋರ್ಗರೆಯುವ ಕಡಲು ಮತ್ತು ಮಳೇ ಒಂದೆ ರೀತಿಯಾಗಿರುತ್ತವೆ.
ಅವತ್ತೂ ಹೀಗೆ ತುಂತುರು ತುಂತುರಾಗಿದ್ದ ಮಳೆ ಒಮ್ಮೆಲೆ ಭೀಭೀತ್ಸವಾಗಿ ಸುರಿಯತೊಡಗಿತ್ತು. ಎತ್ತರದ ದಿಬ್ಬದ ಮೇಲೆ ತೆಂಗಿನ ಮಡಲುಗಳನ್ನು ಹೊದ್ದ ರೆಸ್ಟೋರೆಂಟು ಯಾತ್ರಿಕರಿಲ್ಲದೇ ಇಸ್ಪೀಟು ಆಡುವ ತಾಣವಾಗಿತ್ತು. ಗುಳೆಹೋದ ಊರಿನಂತೆ ಇಡೀ ಕಿನಾರೆಯಲ್ಲ ಬೊಕೋ ಎನ್ನುತ್ತಿತ್ತು. ಪಡ್ಡೆ ಹುಡುಗರ ಗುಂಪು ಬೀಯರ್ ಕುಡಿಯುತ್ತ ಮಸ್ತಿ ಮಾಡುತ್ತಿದ್ದರು. ಸಂಜೆ ಮಳೆ ಇಳಿದು ಕತ್ತಲು ಕವಿಯುವ ಹೊತ್ತಿಗೆ ಒಂದು ಆಘಾತದ ಸುದ್ದಿ ಕೇಳಿ ಮತ್ತೆ ಕಡಲ ಕಿನಾರೆಗೆ ಓಡಿದೆ….ತೊರೆಯೊಂದು ಕಡಲಿಗೆ ಧುಮುಕಲು ಹೊರಟಂತೆ. ಮಳೆ ಸುರಿದು ಬರಿದಾಗಿತ್ತು. ಕ್ಷಿತಿಜದಲ್ಲಿ ಜೀವಬತ್ತಿ ಹೊತ್ತಿತ್ತಿರುವಂತೆ ಚೆಂಬೆಳಕು ಕ್ಷೀಣವಾಗಿ ಹರಡಿತ್ತು. ಮಳೆಯ ರುದ್ರರಮಣೀಯತೆಯಲ್ಲಿ ಈಜಲು ಹೋಗಿದ್ದ ಕೆಲವರು ಮರಳಿ ಬಂದರೂ ಕೆನಿ ಬಂದಿರಲಿಲ್ಲ. ಆ ಪುಟ್ಟ ಊರಿನ ಜನವೆಲ್ಲ ಕಿನಾರೆಯಲ್ಲಿ ನೆರೆದಿದ್ದರು. ದೇಹವನ್ನು ಹುಡುಕಲು ಹೋದವರಿಗಾಗಿ ಕಾಯುತ್ತ. ಸಮುದ್ರದ ಒಳಗಿನ ಕೊಳೆತ ರಾಶಿ ರಾಶಿ ಸಸ್ಯ, ಕಸ ಕಡ್ದಿ, ಕಟ್ಟಿಗೆ ತುಂಡುಗಳು ಅಸಹ್ಯವಾಗಿ ಹರಡಿಕೊಂಡು ಬಿದ್ದ ಕಿನಾರೆಯಲ್ಲಿ ಕಾಲುಗಳು ಎತ್ತಿಡಲಾಗದ ಭಾರದಲ್ಲಿ ಹಸಿ ಮರಳಲ್ಲಿ ಕುಸಿಯುತ್ತಿದ್ದವು. ಏಡಿಗಳು ಪಾದಗಳನ್ನು ತಾಕಿ ಜೀವಭಯದಲ್ಲಿ ಕಣ್ಣು ಪಿಳುಕುವಷ್ಟರಲ್ಲಿಯೇ ಮರಳಲ್ಲಿ ಮಾಯವಾಗಿರುತ್ತಿದ್ದವು. ಆ ದೊಡ್ದ ಜನಜಾತ್ರೆಯಲ್ಲಿ ಕೆನಿಯನ್ನು ನುಂಗಿದ ಕಡಲನ್ನು ನೋಡುವುದೇ ಬೇಡವೆಂದು ಎದೆಯಲ್ಲಿ ಮೊರೆಯುತ್ತಿದ್ದ ಕಡಲನ್ನು ಹೊತ್ತು ಬಂದೆ, ಕಡಲ ಸೆರೆಯನ್ನು ತೊರೆಯಲೆಂತು ತಿಳಿಯದೇ…….
ಈಗ ಕಡಲು ಕಾಣದಷ್ಟು ದೂರ…..
 

‍ಲೇಖಕರು G

2 November, 2013

4 Comments

  1. bharathi b v

    Endinanthe Ninna lahari tumba aaptha ….

  2. bharathi b v

    lahari yaavaagloo ninninda tumba chennagi moodi baratte renoo …

  3. ರಮೇಶ್ ಹಿರೇಜಂಬೂರು

    ಕಡಲಿನ ಇಡೀ ಚಿತ್ರಣ ತುಂಬಾ ಚೆನ್ನಾಗಿದೆ. ಕಡಲನ್ನು ವರ್ಣಿಸುತ್ತಲೇ ತಮ್ಮ ಮನದಾಳದ ಭಾವಗಳನ್ನು ಬಿಂಬಿಸಿದ್ದೀರಿ. “ನನಗೋ ಕಡಲೆಂದರೆ ಪ್ರೀತಿ, ಕಡಲೆಂದರೆ ಕವಿತೆ, ಕಡಲೆಂದರೆ ನನ್ನ ಏಕಾಂತದ ಪ್ರೇಮಿಯಾಗಿತ್ತು, ವಿರಹಿಯಾಗಿತ್ತು. ಎನ್ನುವಾಗ” ಕಡಲಿನ ಬಗೆಗಿನ ಪ್ರೀತಿ, ವ್ಯಾಮೋಹ ಬಿಂಬಿತವಾದರೆ, “ಕೆನಿಯನ್ನು ನುಂಗಿದ ಕಡಲನ್ನು ನೋಡುವುದೇ ಬೇಡವೆಂದು ಎದೆಯಲ್ಲಿ ಮೊರೆಯುತ್ತಿದ್ದ ಕಡಲನ್ನು ಹೊತ್ತು ಬಂದೆ”,ಹಾಗೂ “ಈಗ ಕಡಲು ಕಾಣದಷ್ಟು ದೂರ…..” ಎನ್ನುವ ಕೊನೆಯ ಸಾಲುಗಳು ಕಡಲಿನ ಬಗ್ಗೆ ಲೇಖಕಿಗೆ ಇರುವ ವ್ಯಾಮೋಹ ಜತೆಗಿನ ಬೇಸರವನ್ನೂ ಏಕಕಾಲಕ್ಕೆ ಹರವಿಬಿಡುತ್ತವೆ. ಉತ್ತಮ ಲೇಖನ.
    -ರಮೇಶ್ ಹಿರೇಜಂಬೂರು

  4. nagraj.harapanahalli

    ಕಳೆದ 20 ವರ್ಷಗಳಿಂದ ಕಡಲನ್ನು ಧ್ಯಾನಿಸುತ್ತಲೇ ಇದ್ದೇನೆ..ಅದು ಹೊಳೆಯಿಸಿದ , ಕೊಟ್ಟ ಅರ್ಥ ನೂರಾರು ಎದೆಯಲ್ಲಿ ಹಾಡಾಗಿವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading