ಮಳೆಹನಿ ನಿಂತರೂ, ಮರದ ಹನಿ ನಿಲ್ಲದು!

ಮಣ್ಣೆ ಮೋಹನ್

ಕೋವಿಡ್ ಆರ್ಭಟ ಸ್ವಲ್ಪ ತಿಳಿಯಾಗಿದೆ. ಹಾಗೆಂದು ಆತಂಕವೇನು ದೂರವಾಗಿಲ್ಲ. ಮೂರನೇ ಅಲೆ ಮನೆಯ ಹೊಸಿಲಿನಲ್ಲಿ ಕಾಯುತ್ತಿದೆ ಎಂದು ತಜ್ಞರ ಎಚ್ಚರಿಕೆ. ಕೋವಿಡ್ ನಿಂದ ಮೃತಪಟ್ಟವರ ದುರಂತ ಕಥೆ ಒಂದೆಡೆಯಾದರೆ, ಅವರಿಗಾಗಿ ಲಕ್ಷಾಂತರ ರೂಗಳನ್ನು ಕಳೆದುಕೊಂಡು ಬರಿಗೈಯಾಗಿರುವ ಸಾವಿರಾರು ಜನರ ಸಂಕಷ್ಟದ ಮಾಲೆ ಮುಂದಿನ ದಿನಗಳಲ್ಲಿ ತೆರೆದುಕೊಳ್ಳಲಿದೆ

. ಕೋವಿಡ್ ಸಾವಿನ ಮಳೆಯಿಂದ ತಪ್ಪಿಸಿಕೊಳ್ಳಲು ವ್ಯಾಕ್ಸಿನ್ ಬಂದಿದೆ. ಆದರೆ ಕೋವಿಡ್ ನಿಂದ ಸಂಕಷ್ಟಕ್ಕೊಳಗಾದವರ ಮರದ ಹನಿಯಿಂದ ತಪ್ಪಿಸಿಕೊಳ್ಳಲು ಏನೂ ಇಲ್ಲವಾಗಿದೆ. ಹಾಗಾಗಿ ಮಳೆ ಹನಿ ನಿಂತರೂ, ಮರದ ಹನಿ ಸದ್ಯಕ್ಕಂತೂ ನಿಲ್ಲುವುದಿಲ್ಲ.

ಕುಟುಂಬವೊಂದರ ಕಥೆಯನ್ನು ನೀವೆಲ್ಲ ಪತ್ರಿಕೆಯಲ್ಲಿ ಓದಿದ್ದೀರಿ. ಹೆಂಡತಿಯನ್ನು ಉಳಿಸಿಕೊಳ್ಳಲು ಇದ್ದ ಒಂದು ಎಕರೆ ಜಮೀನನ್ನು 6 ಲಕ್ಷ ರೂ.ಗಳಿಗೆ ಮಾರಿ, ಅದರಲ್ಲಿ ನಾಲ್ಕು ಲಕ್ಷ ರೂ.ಗಳನ್ನು ಆಸ್ಪತ್ರೆಗೆ ಖರ್ಚು ಮಾಡಿದರೂ ಹೆಂಡತಿ ಬದುಕುಳಿಯದೆ ದುರಂತ ಅಂತ್ಯ ಕಂಡ ಕುಟುಂಬದ ಕರುಣಾಜನಕ ಕಥೆ ಎಂಥಹವರನ್ನು ಮನಮಿಡಿಯುವಂತೆ ಮಾಡುತ್ತದೆ. ವಿಧಿಯ ಕ್ರೂರ ಅಟ್ಟಹಾಸ ಅಷ್ಟಕ್ಕೆ ನಿಲ್ಲದೆ ಆಕೆಯ ಗಂಡನಿಗೆ ಮತ್ತು ಅವರ ಇಬ್ಬರು ಮಕ್ಕಳಿಗೂ ಕೋವಿಡ್ ಸೋಂಕು ತಗಲಿದ್ದು ವರದಿಯಾಗಿತ್ತು. ಆನಂತರ ಏನಾಯಿತೋ ತಿಳಿಯದು.

ಇದೀಗ ಈ ಕುಟುಂಬದ ಮುಂದಿನ ಕಥೆಯೇನಿರಬಹುದು.
ಸಾಧ್ಯತೆ 1: ಉಳಿದ 2 ಲಕ್ಷ ರೂ ಗಳಲ್ಲಿ ಏನು ಮಾಡುವುದೆಂದು ತೋಚದೆ ಸತ್ತರೂ ಪರವಾಗಿಲ್ಲವೆಂದು ಮೂರು ಜನ ಆಸ್ಪತ್ರೆಗೆ ಹೋಗದೆ ಮನೆಯಲ್ಲಿ ಉಳಿದಿರಬಹುದು.
ಸಾಧ್ಯತೆ 2: ಮಕ್ಕಳಾದರೂ ಉಳಿಯಲಿ ಎಂಬ ಕರುಳ ಕುಡಿಯ ವಾತ್ಸಲ್ಯದಿಂದ ಮಕ್ಕಳನ್ನು ಮಾತ್ರ ಆಸ್ಪತ್ರೆಗೆ ಸೇರಿಸಿ ಆ ವ್ಯಕ್ತಿ ಮನೆಯಲ್ಲೇ ಉಳಿದಿರಬಹುದು. ಹೀಗೆ ಮಾಡಿದರೆ ಮಕ್ಕಳ ಆಸ್ಪತ್ರೆಯ ಬಿಲ್ ಕಟ್ಟಲು ಮತ್ತೆ ಸಾಲ ಮಾಡಬೇಕಾಗುತ್ತದೆ. ಅದೂ ಆತ ಸೋಂಕಿನಿಂದ ಬದುಕುಳಿದರೆ ಮಾತ್ರ.
ಸಾಧ್ಯತೆ 3: ಸರ್ಕಾರ ಅಥವಾ ದಾನಿಗಳು ಸಹಾಯ ಮಾಡಿ ಮೂರು ಜನರನ್ನು ಉಳಿಸಬಹುದು

ಒಂದು ವೇಳೆ ಮೂರನೆಯ ಸಾಧ್ಯತೆ ನಿಜವಾಗಿ ಅವರು ಉಳಿದುಕೊಂಡರೆಂದು ಇಟ್ಟುಕೊಳ್ಳೋಣ. ಅವರ ಮುಂದಿನ ಭವಿಷ್ಯದ ಕಥೆಯೇನು? ಉಳುಮೆ ಮಾಡಿ ಬದುಕೋಣ ವೆಂದರೆ ಆಸ್ತಿ ಇಲ್ಲ. ಕೂಲಿ ಮಾಡಿ ಬದುಕಲು ಹೋದರೆ ಮೂರು ಜನರಿಗಾಗುವಷ್ಟು ಕೂಲಿ ದೊರೆಯುವುದಿಲ್ಲ. ಶಾಲೆಗೆ ಕಳಿಸಲಾಗದೆ ತನ್ನ ಮಕ್ಕಳೊಡನೆ ಆತ ಕೂಲಿಗೆ ಹೋಗಬೇಕಾಗುತ್ತದೆ. ಅಥವಾ ತಾನು ಮಾತ್ರ ಕೂಲಿಗೆ ಹೋಗಿ ಆ ಮಕ್ಕಳನ್ನು ಬೇರೆಯವರ ಮನೆ ಕೆಲಸಕ್ಕೆ ಕಳಿಸಬೇಕಾಗುತ್ತದೆ.

ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದರೂ ಅವರ ಹೊಟ್ಟೆಬಟ್ಟೆಗಾದರೂ ಹಣ ಬೇಕಲ್ಲವೆ? ಇವನೊಬ್ಬನೇ ದುಡಿದ ಹಣದಲ್ಲಿ ಮನೆಯ ಬಾಡಿಗೆ ಕಟ್ಟಿ ಉಳಿದೆಲ್ಲವನ್ನೂ ನಿಭಾಯಿಸುವುದಾದರೂ ಹೇಗೆ? ಏನೇ ಮಾಡಿದರೂ ಆ ಕುಟುಂಬದ ದುರಂತ ಬದುಕು ಎಂದೂ ಮುಗಿಯದ ಕಥೆ.

ಒಂದು ಕುಟುಂಬದ ಒಂದು ರೀತಿಯ ಕಥೆ ಇದಾದರೆ ಇಂತಹ ನೂರಾರು ಕುಟುಂಬಗಳ ನೂರಾರು ತರಹದ ಕಥೆಗಳು ನಮಗೆ ಕಾಣಸಿಗುತ್ತವೆ. ಕೆಲವರು ಇದ್ದಬದ್ದ ಆಸ್ತಿ, ಒಡವೆ, ವಸ್ತುಗಳನ್ನೆಲ್ಲ ಮಾರಿ ತಮ್ಮವರನ್ನು ಉಳಿಸಿಕೊಂಡಿದ್ದಾರೆ. ಆದರೆ ಅವರಿಗೆ ಮುಂದಿನ ದಾರಿ ಕಾಣದಾಗಿದೆ. ಇಲ್ಲಿಯವರೆಗೂ ತಕ್ಕಮಟ್ಟಿಗೆ ಬದುಕುತ್ತಿದ್ದವರು ಇದೀಗ ಬೇರೆಯವರ ಬಳಿ ಹೋಗಿ ಕೈಚಾಚಿ ನಿಂತುಕೊಳ್ಳುವಂತ ಧಾರುಣ ಪರಿಸ್ಥಿತಿ ಬಂದೊದಗಿದೆ. ಮನೆಯ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ ಹೆಂಡತಿ ಇಲ್ಲವಾಗಿ ಅನೇಕ ಗಂಡಸರು ದಿಕ್ಕೇ ತೋಚದಂತಾಗಿದ್ದಾರೆ. ಹಾಗೆಯೇ ಆಸರೆಯಾಗಿದ್ದ ಗಂಡ ಇಲ್ಲವಾಗಿ ಅನೇಕ ಹೆಂಗಸರು ಮುಂದಿನ ದಾರಿಯ ಬಗ್ಗೆ ಕಂಗಾಲಾಗಿದ್ದಾರೆ. ತಾನು ಮತ್ತು ತನ್ನ ಮಕ್ಕಳ ಹೊಟ್ಟೆ ಹೊರೆಯುವುದಲ್ಲದೆ ಅವರನ್ನು ಓದಿಸುವ, ಅವರ ಭವಿಷ್ಯ ರೂಪಿಸುವ ಗುರುತರ ಜವಾಬ್ದಾರಿಯನ್ನು ಆಕೆ ನಿಭಾಯಿಸುವುದಾದರು ಹೇಗೆ? ಆ ದೇವರೇ ಬಲ್ಲ.

ಇನ್ನು ಕೆಲವು ಕುಟುಂಬಗಳಲ್ಲಿ ದುಡಿಯುತ್ತಿದ್ದ ಮಕ್ಕಳು ಬಲಿಯಾಗಿ ವಯಸ್ಸಾದ ಅಪ್ಪ-ಅಮ್ಮಂದಿರು ಅನಾಥರಾಗಿದ್ದಾರೆ. ಈಗ ಅವರ ಗತಿ ಏನು? ತಮ್ಮ ಜೀವನದ ಕೊನೆಯ ಕಾಲಘಟ್ಟದಲ್ಲಿ ಮಕ್ಕಳ ಆಸರೆಯಲ್ಲಿ ಬದುಕಬೇಕಾದ ಅವರಿಗೆ ಯಾರು ದಿಕ್ಕು? ಅಕ್ಕಪಕ್ಕದವರು ಒಂದೆರಡು ವಾರ ಅಥವಾ ಒಂದೆರಡು ತಿಂಗಳು ನೋಡಿಕೊಳ್ಳಬಹುದು. ಅವರಿಗೂ ಅವರದೇ ಆದ ನೂರೆಂಟು ಸಮಸ್ಯೆಗಳಿರುತ್ತವೆ. ಉಳಿದಂತೆ ಅವರು ಏನು ಮಾಡಬೇಕು? ಸಂತೋಷದಿಂದ ಬದುಕಿ ಬಾಳುವ ಸಂದರ್ಭದಲ್ಲಿ, ನೋವಿನಲ್ಲಿಯೇ ದಿನನಿತ್ಯ ಕೈತೊಳೆಯುವಂತ ಸ್ಥಿತಿ ಅವರದಾಗಿದೆ. ಇನ್ನು ನಾಲ್ಕಾರು ವರ್ಷ ಬದುಕಬಹುದಾಗಿದ್ದ  ಅವರುಗಳ ಆಯುಷ್ಯ ಕೇವಲ ನಾಲ್ಕಾರು ತಿಂಗಳಿಗೆ ಕ್ಷೀಣಿಸಬಹುದು ಅಲ್ಲವೇ?

ತಂದೆ ತಾಯಿಗಳು ಇಬ್ಬರೂ ಇಲ್ಲವಾಗಿ ಎರಡು ತಿಂಗಳ ಹಸುಗೂಸೊಂದು ಬದುಕುಳಿದಿರುವ ಕಥೆಯನ್ನು ನಾವು ಪತ್ರಿಕೆಗಳಲ್ಲಿ ಓದಿದ್ದೇವೆ. ಅದೇನೋ ಏನೂ ತಿಳಿಯದ ಕಂದಮ್ಮ. ಯಾರಾದರೂ ದತ್ತು ಪಡೆದು ಸಾಕಬಹುದು.ಆದರೆ ದೊಡ್ಡ ಮಕ್ಕಳು ಕೂಡ ತಬ್ಬಲಿಗಳಾಗಿದ್ದಾರೆ. ಅವರೆಲ್ಲರಿಗೆ ಜೀವನ ಕಟ್ಟಿ ಕೊಡುವವರು ಯಾರು? ಆ ಮುಗ್ಧಮನಸ್ಸುಗಳ ಮೇಲೆ ಆಗಬಹುದಾದ ಪರಿಣಾಮವಾದರೂ ಎಂತಹದು? ಯೋಚಿಸಲೂ ಭಯವಾಗುತ್ತದೆ.

ಇದೆಲ್ಲ ಸಾವು ಮತ್ತು ಅದರ ಸುತ್ತ ಹುಟ್ಟಿಕೊಂಡ ದುರಂತಮಯ ಬದುಕಿನ ಚಿತ್ರಣವಾದರೆ, ಇನ್ನೊಂದೆಡೆ ಬದುಕಿರುವವರ ಮತ್ತೊಂದು ರೀತಿಯ ದುರಂತವನ್ನು ನಾವು ಕಾಣಬಹುದು. ಇದು ಸಾವಿನ ಮೆರವಣಿಗೆ ನಡೆಸಿದ ಕೊರೋನಾ ಎಂಬ ಸುನಾಮಿ, ಯುದ್ಧಾನಂತರದ ರುದ್ರಭೂಮಿಯನ್ನು ಸೃಷ್ಟಿಸಿ ಹೋದಂತಾಗಿದೆ.

ಬ್ಯಾಂಕಿನಿಂದ ಸಾಲ ಪಡೆದು ಅಥವಾ ಕೈ ಸಾಲ ಪಡೆದು ಸಣ್ಣಪುಟ್ಟ ವ್ಯಾಪಾರ, ಅಂಗಡಿ-ಮುಂಗಟ್ಟು ಆರಂಭಿಸಿದ್ದವರ, ನಡೆಸುತ್ತಿದ್ದವರ ಕಥೆಯೇನು? ಇನ್ನು ಮೇಲಿನ ಸ್ತರಕ್ಕೆ ಹೋದರೆ ಕಚೇರಿಗಳು,ಕಾರ್ಖಾನೆಗಳು, ಶಾಲಾ-ಕಾಲೇಜು, ಇತರೆ ಉದ್ದಿಮೆಗಳನ್ನು ಆರಂಭಿಸಿದ್ದವರ, ನಡೆಸುತ್ತಿದ್ದವರ ಕಥೆ ಇನ್ನೊಂದು ರೀತಿಯದ್ದು. ಈ ಜನಸಮುದಾಯವನ್ನು ನಂಬಿಕೊಂಡು ದೊಡ್ಡಮಟ್ಟದ ಹೂಡಿಕೆ ಮಾಡಿದ್ದ ಹೋಟೆಲುಗಳ, ರೆಸಾರ್ಟ್ ಗಳ, ಚಿತ್ರಮಂದಿರಗಳ ಕಥೆಯೂ ಭಿನ್ನವಾಗೇನೂ ಇಲ್ಲ. 

ವಾಹನಗಳನ್ನು ಕೊಂಡು ಬಾಡಿಗೆ ಓಡಿಸುತ್ತಿದ್ದವರ, ಕ್ಯಾಬ್ ಚಾಲಕರ, ಆಟೋ ಚಾಲಕರ, ಖಾಸಗಿ ಶಾಲಾ ಶಿಕ್ಷಕರ, ದಿನಗೂಲಿ ಕಾರ್ಮಿಕರ, ಬೀದಿ ಬದಿ ವ್ಯಾಪಾರಿಗಳ  ಬದುಕು ಮೂರಾಬಟ್ಟೆಯಾಗಿದೆ. ಇವರ ಮುಂದಿನ ಕಥೆಯೇನು? ಇವರುಗಳಲ್ಲಿ ಕೆಲವರು ಉಳ್ಳವರು ಇರಬಹುದು. ಅಂತಹವರಿಗೆ ಸಂಕಷ್ಟದ ಬಾಧೆ ಅಷ್ಟಾಗಿ ತಟ್ಟದಿರಬಹುದು. ಆದರೆ ಬಹಳಷ್ಟು ಜನಕ್ಕೆ ತೊಂದರೆಯಾಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.

ಇದೀಗ ಲಾಕ್ ಡೌನ್ ತೆರವುಗೊಂಡರೂ ಇವರೆಲ್ಲರ ಸಮಸ್ಯೆ ಬಗೆಹರಿಯುವುದಿಲ್ಲ. ಸಾಫ್ಟ್ ವೇರ್ ನವರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಕೈತುಂಬಾ ಸಂಬಳ ಪಡೆಯುತ್ತಿದ್ದ ಅವರಿಂದ ವ್ಯಾಪಾರ-ವಹಿವಾಟು ಜೋರಾಗಿ ನಡೆಯುತ್ತಿತ್ತು. ವೀಕೆಂಡ್ ಗಳಲ್ಲಿ  ಮಾರುಕಟ್ಟೆಯಲ್ಲಿ ಕಳೆ ಇರುತ್ತಿತ್ತು. ಅವರ ಸಂಬಳಗಳು ಕಡಿತಗೊಂಡಿರುವುದರಿಂದ, ಅವರುಗಳು ತಮ್ಮ ತಮ್ಮ ಊರಿನ ಮನೆಗಳಿಂದಲೇ ಕೆಲಸ ನಿರ್ವಹಿಸುತ್ತಿರುವುದರಿಂದ ಎಲ್ಲಾ ವ್ಯಾಪಾರಸ್ಥರಿಗೆ ಬಲವಾದ ಹೊಡೆತವೇ ಬಿದ್ದಿದೆ.

ಮಕ್ಕಳ ವಿದ್ಯಾಭ್ಯಾಸದ ಕಾರಣಕ್ಕಾಗಿ ನಗರಗಳಿಗೆ ಬಂದು, ಬಾಡಿಗೆ ಮನೆಗಳಲ್ಲಿದ್ದು, ಯಾವುದೋ ಕೆಲಸ ಮಾಡಿಕೊಂಡಿದ್ದವರು, ಶಾಲೆಗಳು ಇಲ್ಲದ್ದರಿಂದ, ಕೆಲಸಗಳು ಇಲ್ಲದ್ದರಿಂದ ಬಾಡಿಗೆ ಕಟ್ಟಲಾಗದೆ ಊರುಗಳಿಗೆ ವಾಪಸ್ ಹೋಗಿದ್ದಾರೆ. ಸಣ್ಣಪುಟ್ಟ ವ್ಯಾಪಾರೋದ್ಯಮ ಮಾಡುತ್ತಿದ್ದವರು, ಸಣ್ಣ ಕಾರ್ಖಾನೆಗಳಿಗೆ ಹೋಗುತ್ತಿದ್ದವರು ಕೆಲಸ ಕಳೆದುಕೊಂಡು ನಗರಗಳ ಸಹವಾಸವೇ ಬೇಡವೆಂದು ಶಾಶ್ವತವಾಗಿ ಹಳ್ಳಿಗಳಿಗೆ ತೆರಳಿರುವ ಉದಾಹರಣೆಗಳು ಹೇರಳವಾಗಿವೆ.

ಸಾವಿರಾರು ಸಂಖ್ಯೆಯಲ್ಲಿರುವ ಈ ಜನರಿಂದ ಆಗುತ್ತಿದ್ದ ವ್ಯಾಪಾರ-ವಹಿವಾಟು ಕೂಡ ಅಷ್ಟರಮಟ್ಟಿಗೆ ಸ್ಥಗಿತಗೊಂಡಿದೆ. ಹಾಗೆಯೇ ಬೇರೆ ರಾಜ್ಯಗಳಿಂದ ಇಲ್ಲಿಗೆ ವಲಸೆ ಬಂದು ನಾನಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು ಸಹ ಊರಿಗೆ ಹೋಗಿದ್ದರಿಂದ ಅವರಿಂದ ನಡೆಯುತ್ತಿದ್ದ ವ್ಯಾಪಾರವು ನೆಲಕಚ್ಚಿದೆ.ಇವರನ್ನೆಲ್ಲ ನಂಬಿಕೊಂಡು ಫ್ಲಾಟ್ ಗಳನ್ನು ಕಟ್ಟುತ್ತಿರುವ ಅಪಾರ್ಟ್ಮೆಂಟ್ ಗಳ ಕಥೆಯೂ ಇದೇ ಆಗಿದೆ.

ಹೊಸದಾಗಿ ಆರಂಭಿಸಿದ ಬಹಳಷ್ಟು ಉದ್ದಿಮೆಗಳು ಮುಚ್ಚಲ್ಪಟ್ಟಿವೆ. ಹಳೆಯ ಉದ್ದಿಮೆಗಳಲ್ಲಿ ಅರ್ಧದಷ್ಟು ಖಾಲಿಯಾಗಿವೆ. ಅವುಗಳನ್ನು ನಂಬಿಕೊಂಡಿದ್ದ ಉದ್ಯೋಗದಾತರು ಮನೆ ಸೇರುವಂತಾಗಿದೆ. ಅವರ ಮುಂದಿನ ಗತಿ ಏನು? ಉದ್ಯೋಗ ಉಳಿಸಿಕೊಂಡವರು ತಮ್ಮ ಸಂಬಳದಲ್ಲಿ ಕಡಿತ ಮಾಡಿಸಿಕೊಂಡು ಕೊಟ್ಟಷ್ಟು ಪಡೆಯುವಂತಾಗಿದೆ. ಕೈತುಂಬಾ ಸಂಪಾದನೆ ಇದ್ದಾಗ ನೂರೆಂಟು ಕಮಿಟ್ಮೆಂಟ್ ಮಾಡಿಕೊಂಡಿದ್ದ ಅವರೆಲ್ಲ ಇದೀಗ ಪರಿತಪಿಸುವಂತಾಗಿದೆ. ಹಿಮಾಲಯದೆತ್ತರಕ್ಕೆ ಬೆಳೆದು ನಿಂತಿರುವ ಈ ನಿರುದ್ಯೋಗದ ಸಮಸ್ಯೆಗೆ ಪರಿಹಾರವೇನು? 

ಮೂರು ತಿಂಗಳೊ,ಆರು ತಿಂಗಳೊ, ವರ್ಷವೊ ಕಷ್ಟಪಟ್ಟು ಬೆಳೆದ ರೈತ ಲಾಕ್ ಡೌನ್ ಸಮಯದಲ್ಲಿ ಕೊಳ್ಳುವವರಿಲ್ಲದೆ ಕೈಚೆಲ್ಲಿ ಕುಳಿತ ಕಥೆ ಎಲ್ಲರಿಗೂ ತಿಳಿದಿದೆ. ಅವನ ಅಷ್ಟೂ ದಿನಗಳ ಶ್ರಮಕ್ಕೆ ಪ್ರತಿಫಲವಾದರೂ ಏನು? ಈಗಿನ ಬೆಳೆಯ ಬೀಜಕ್ಕೆ, ಗೊಬ್ಬರಕ್ಕೆ ಮಾಡಿದ್ದ ಸಾಲ ಮತ್ತು ಮುಂದಿನ ಬೆಳೆ ಬೆಳೆಯಲು ಬಂಡವಾಳ ಕೂಡಿಸುವುದಾದರೂ ಹೇಗೆ? ಇಂತಹ ಹತ್ತಾರು ದುರಂತಗಳ ಸರಮಾಲೆಯೇ ನಮ್ಮ ಕಣ್ಣೆದುರಿಗಿದೆ.

ರೈತರು ಕೇವಲ 2-3 ಲಕ್ಷ ರೂಪಾಯಿಗಳ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದ ಸರಣಿ ವರದಿಗಳು ನಮ್ಮ ನೆನಪಿನಲ್ಲಿವೆ. ಇದೀಗ ಕೋವಿಡ್ ನಿಂದ ಸಂಕಷ್ಟಕ್ಕೊಳಗಾದವರ, ಸಾಲ ಮಾಡಿಕೊಂಡವರ ಕಥೆಯು ಆ ರೀತಿ ಆಗುವುದು ಬೇಡ.ನಮ್ಮ ಜನ ಮರ್ಯಾದೆಗೆ ಅಂಜುವವರು. ಅವರು ಸಾವನ್ನು ಸ್ವೀಕರಿಸುತ್ತಾರೆಯೇ ಹೊರತು ಅವಮಾನವನ್ನು ಎಂದಿಗೂ ಸಹಿಸುವುದಿಲ್ಲ. ರೈತರ ಸಾಲಮನ್ನಾ ಆದ ನಂತರ ಅವರ ಸಾವಿನ ಸರಣಿ ತುಂಡರಿಸಿದ್ದಂತೂ ದಿಟ.

ಕೊರೋನಾದ ಎರಡು ಅಲೆಗಳ ಆರ್ಭಟವೇ ಇಷ್ಟೊಂದು ಅವಾಂತರಕ್ಕೆ  ಕಾರಣವಾಗಿದೆಯೆಂದ ಮೇಲೆ ಮೂರನೇ ಅಲೆಯ ಹೊಡೆತ ಎಷ್ಟೊಂದು ಭೀಬತ್ಸತೆಯಿಂದ ಕೂಡಿರುತ್ತದೆಂಬುದು ಕಲ್ಪನೆಗೂ ನಿಲುಕದ್ದು. ಈ ಸಂಕಷ್ಟದ ಕಾಲಘಟ್ಟ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ತಜ್ಞರ ವರದಿಗಳನ್ನು ಗಮನಿಸಿದಾಗ ಕೊರೋನಾದ ಅಣ್ಣ- ತಮ್ಮಗಳು, ಅಕ್ಕ-ತಂಗಿಯರು, ಬಂಧು-ಬಾಂಧವರೆಲ್ಲ ನಮ್ಮ ಮೇಲೆ ದಾಳಿ ಮಾಡಲು ಸಜ್ಜಾಗಿ ನಿಂತಿದ್ದಾರೆ. ಇದನ್ನು ಮನದಟ್ಟು ಮಾಡಿಕೊಂಡು ಎಲ್ಲರೂ ಆದಷ್ಟು ಶೀಘ್ರ ಲಸಿಕೆ ಪಡೆದು, ಆನಂತರವೂ ಎಚ್ಚರಿಕೆಯಿಂದ ಇರುವುದೊಂದೇ ಇದಕ್ಕಿರುವ ಏಕೈಕ ಪರಿಹಾರ.

ಇದೀಗ ಸರ್ಕಾರ ಮಾಡಲೇಬೇಕಾದ ಕೆಲಸವೊಂದಿದೆ. ರಾಜ್ಯಾದ್ಯಂತ ಮನೆಮನೆ ಸಮೀಕ್ಷೆ ಮಾಡಿಸಿ, ಈ ದುರಂತ ಚಿತ್ರಣದ ವಿವರಗಳನ್ನು ಸಂಗ್ರಹಿಸಬೇಕಾಗಿದೆ. ಇಂತಹ ಸಂಕಷ್ಟಕ್ಕೆ ಸಿಲುಕಿದವರ ಶ್ರೇಯೋಭಿವೃದ್ಧಿಗೆಂದೇ ನಿಗಮವನ್ನು ಮಾಡಿ, ಪ್ರಾಮಾಣಿಕರನ್ನು, ಮಾನವೀಯ ಪ್ರಜ್ಞೆ ಇರುವವರನ್ನು ನೇಮಿಸಿ, ಅದರ ಮೂಲಕ ಅವರಿಗೆ ಆಸರೆಯಾಗುವಂತಹ ಯೋಜನೆಗಳನ್ನು ತ್ವರಿತವಾಗಿ ರೂಪಿಸಿ, ಯುದ್ಧದೋಪಾದಿಯಲ್ಲಿ ಕಾರ್ಯಗತಗೊಳಿಸಬೇಕಾಗಿದೆ.

ಯಾವುದೇ ಕಾರಣಕ್ಕೂ ಅವರುಗಳು ನಿರಾಶರಾಗಿ ಆತ್ಮಹತ್ಯೆಯ ಹಾದಿ ಹಿಡಿಯದಂತೆ ನೋಡಿಕೊಳ್ಳಬೇಕಾಗಿದೆ. ಮಳೆಹನಿ ನಿಲ್ಲಲು ವ್ಯಾಕ್ಸಿನ್ ಬಂದಂತೆ ಮರದ ಹನಿ ನಿಲ್ಲಲು ಆಕ್ಷನ್ ತೆಗೆದುಕೊಳ್ಳುವ ಕಾಲ ಇದಾಗಿದೆ. ಮಳೆಹನಿ ನಿಂತರೂ ಮರದ ಹನಿ ನಿಲ್ಲದೆಂಬ ಎಚ್ಚರ ನಮ್ಮೆಲ್ಲರಿಗಿರಲಿ. ಈ ಕಠಿಣ ಸಮಯದಲ್ಲಿ ನಿರ್ಲಕ್ಷ್ಯ ವಹಿಸಿ ಸರ್ಕಾರ ಸುಮ್ಮನೆ ಕುಳಿತರೆ ಬಹು ಧಾರುಣ ಸಾವಿನ ಸರಮಾಲೆಯನ್ನು ನೋಡುವ ದೌರ್ಭಾಗ್ಯ ನಮ್ಮದಾಗಲಿದೆ. ಅದಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ.

‍ಲೇಖಕರು Admin

July 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: