ಸೋಜಿಗವಲ್ಲ…!

ಕಾಂತರಾಜು ಕನಕಪುರ

ಮನೆಯ ಒಳಕೋಣೆಗೆ ಕದವಿಕ್ಕಿ
ಆನ್ಲೈನ್ ತರಗತಿಯಲ್ಲಿ
ಲಿಂಗ ಸಮಾನತೆಯ ಕುರಿತು
ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ
ಬೋಧಿಸುತ್ತಿದ್ದ ಮೇಷ್ಟ್ರ ಮಡದಿ
ಅದನ್ನು ಕೇಳಿ ಕಣ್ಣೀರಾದದ್ದು ಸೋಜಿಗವಲ್ಲ…!

ಸಮಾಜದಲ್ಲಿ ಅಸಮಾನತೆಯನ್ನು
ಸಂಪೂರ್ಣವಾಗಿ ತೊಲಗಿಸಬೇಕು ಎಂದು
ಹೋರಾಟದ ವೇದಿಕೆಯಲ್ಲಿ ಕಿಡಿಕಾರುತಿದ್ದವನ
ಹೊಲದಲ್ಲಿ ಗುಡಿಸಲು ಕಟ್ಟಿಕೊಂಡಿದ್ದ ನಿರ್ಗತಿಕ
ಕುಟುಂಬ ಜಾಗ ಖಾಲಿಮಾಡಿದ್ದು ಸೋಜಿಗವಲ್ಲ…!

ಮನದ ಮುಂದಣ ಆಸೆಯೇ ಮಾಯೆ
ಎಂಬುದನ್ನು ಸರ್ವರೂ ತಲೆದೂಗುವಂತೆ
ವಿವರಿಸುತ್ತಿದ್ದ ಬುದ್ಧಿಯವರು,
ತಮ್ಮ ಸುಂದರಿ ಶಿಷ್ಯೆಯ ಸಂಗಡ
ಸಿಕ್ಕಿಬಿದ್ದ ವಿಷಯ ಸವಿವರವಾಗಿ
ಮಾಧ್ಯಮಗಳಲ್ಲಿ ಬಿತ್ತರಗೊಂಡದ್ದು ಸೋಜಿಗವಲ್ಲ…!

ಊರ ಮಂದಿಯ ಜಗಳ ಜಂಜಡಗಳಿಗೆ
ಒತ್ತರಿಸಿವನ ಹೊಲ ಹಾಳು
ಮಚ್ಚರಿಸಿದವನ ಮನೆ ಹಾಳು ಎಂದು
ಬುದ್ಧಿ ಹೇಳುತಿದ್ದ ಊರ ಗೌಡರ
ಹೊಲ ಮನೆ ಎರಡೂ ಹಾಳಾದದ್ದು ಸೋಜಿಗವಲ್ಲ…!

ನಮಗೆ ಗ್ರಾಹಕನೇ ದೇವರು
ದೇವರಿಗೆ ದ್ರೋಹ ಬಗೆದವರುಂಟೇ?
ಹೀಗೆ ಅಂಗಡಿಗೆ ಆಗಮಿಸಿದವರ ಹಣೆಗೆ
ತಮ್ಮ ಹಣೆಯ ನಾಮವನ್ನು ವರ್ಗಾಯಿಸುತಿದ್ದ
ಮಹಡಿ ಮನೆಯ ಶೇಟ್ ಜೀ ರೋಗಗಳ
ಗೂಡಾಗಿ ಕೊರಗುವುದು ಸೋಜಿಗವಲ್ಲ…!

ಕಿಡಿಯನು ಕೆಂಡಮಾಡಿ
ಉರಿಯನು ಊರಿಗೆ ಹಚ್ಚಿ
ತಾನು ಬೆಚ್ಚಗಿದ್ದವನ ಮನೆ ಮಗ
ಕಿಚ್ಚಿನಲಿ ಸುಟ್ಟು ಬೂದಿಯಾದುದು ಸೋಜಿಗವಲ್ಲ…!

ಕನ್ನಡಿಯನೊರೆಸಿ
ಮುಖದ ಧೂಳನು ಮರೆಸುವ ಮಂದಿ
ಹೆಣೆದ ಬಲೆಯೊಳಗೆ ಹೆಣವಾಗುವುದು
ಯಾವತ್ತಿಗೂ ಸೋಜಿಗವಲ್ಲ…!

‍ಲೇಖಕರು Admin

July 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: