ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕವಿತೆ -ಗಾಂಧಿ ನೀ ಮೂಡುವುದೇ ಇಲ್ಲ…

ಮಲ್ಲಿಕಾರ್ಜುನಗೌಡ ತೂಲಹಳ್ಳಿ

ಈ ವಿದೇಶಿ ಕಾರುಗಳಲಿ
ನಿನ್ನ ಖಾದಿಯುಟ್ಟು
ತಿರುಗುವ ಮಂದಿ
ಅದೆಷ್ಟೇ
ನುಣ್ಣಗೆ ಮಾತು ಕಡೆದರೂ
ಗಾಂಧಿ ನೀ ಮೂಡುವುದೇ ಇಲ್ಲ

ನಿನ್ನ ಕೊನೆಯ ಸ್ವರ
ರಕ್ತದ ಕಲೆಗಟ್ಟಿ
ನೆಲವ ನೂರು ಹೋಳಾಗಿಸಿ
ಕಾದಾಡುವ ಕಾಲೊಳಗೆ
ಇನ್ನೂ ನರಳುತ್ತಲೇ ಇದೆ

ಪೂರ್ವ ಪಶ್ಚಿಮ
ಉತ್ತರ ದಕ್ಷಿಣಕೂ
ನೀನು ಹಾಸಿ ಹೊಕ್ಕಿದ ನೂಲು
ಈಗ ಗಂಟು ಗಂಟು

ಈಗೆಲ್ಲಿರುವೆ ಗಾಂಧಿ
ಯಾವ ಗುಡ್ಡದ ಬಂಡೆ ಬುಡದಿ
ಬುದ್ಧನೊಂದಿಗೆ ಕುಳಿತು
ನಿಡುಸುಯ್ಯುತಿರುವೆ?
ಅಥವಾ
ಅಂಬೇಡ್ಕರರ
ಪ್ರಶ್ನೆ ಮೊನಚಿಗೆ
ಕಣ್ಣನಿಟ್ಟು
ಯಾವುದಾದರೂ
ಹೊಸ ಮುಲಾಮು ಕಂಡೆಯೇನು?

ನೋಟಿನಾಟದ ಬಯಲು
ಕಾದು ಕೊಲ್ಲುವ ಸಂಚು
ಗಾಯದ ಮೇಲೆ ಗಾಯ
ಮೈತುಂಬ ಕೀವು

ಇಳಿದು ಬಾ ಎನ್ನಲೆ ಬಾಪು
ತಕ್ಕಡಿಯ ಬೀದಿಗಳ ಮಧ್ಯೆ
ನಿನ್ನ ಪ್ರತಿಮೆಗರ್ಪಿಸಿದ ಹಾರವ ಕಂಡು
ಬಿಕ್ಕಿದಿರೆಂಬ ಕಲಮಲದಲಿ
ನನ್ನ ಮಗನ ಕೈಯಲ್ಲೊಂದು
ನೀ ನೇದು ಕೊಟ್ಟ
ಬಿಳಿ ವಸ್ತ್ರ ಕೊಟ್ಟಿರುವೆ
ಹಾಗೆಯೇ ಸಾಬರಮತಿ ಹಾದಿಯ
ನಕ್ಷೆ ಕೂಡ

‍ಲೇಖಕರು Admin

3 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading