ಪದದೋಷಗಳು ಕನ್ನಡವನ್ನು ವಿರೂಪಗೊಳಿಸದಿರಲಿ…

ವೀಣಾ ಪಿ

ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ
ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮೋಕ್ಷವ
ಗಳಿಸಿಕೊಂಡೊಡೆ ಸಾಲದೇ…?

ಎಂದು ಕವಿ ಮಹಲಿಂಗರಂಗ ಅನುಭವಾಮೃತ ಕೃತಿಯಲ್ಲಿ ಪ್ರಶ್ನಿಸಿರುವುದು ಸರ್ವದಾ ಸಮ್ಮತವಾಗಿದೆ. ಕನ್ನಡಿಗರೆಲ್ಲರ ಆತ್ಮಿಕ ಭಾಷೆಯಾಗಿರುವ ಕನ್ನಡ ನಾಡು ನುಡಿ ಕುರಿತಾದ ಪ್ರೇಮ, ಅಭಿಮಾನ ಹಾಗೂ ಕನ್ನಡತನವನ್ನು ಮೆರೆವ ಪರಮೋಚಿತ ಗುಣ ಸರ್ವದಾ ಅಪೇಕ್ಷಣೀಯವಾದದ್ದು. ಅಂತೆಯೇ ಈ ಗುಣೋನ್ಮಣಿಗಳೆಂದು ಬೀಗುತ್ತಾ ಕನ್ನಡಿಗರು ತೋರುವ ರೋಷಾವೇಷದ ನಡೆ-ನುಡಿಗಳಿಗೆ ಬರವೇನಿಲ್ಲ. ಕನ್ನಡಾಭಿಮಾನ ಅನೇಕ ಬಾರಿ ಅನ್ಯ ಭಾಷೆಯನ್ನು ಪರಮ ದ್ವೇಷದಿಂದ ಕಾಣುವಷ್ಟಾಗುವ ಸಂದರ್ಭಗಳಿಗೂ ಸಾಕ್ಷಿಯಾಗಿರುವುದು ಅನುಭವದ ಸಂಗತಿಯೇ.

ಹೀಗೆ ಕನ್ನಡ ಭಾಷೆಗಾಗಿ ಹೋರಾಟ, ಚಳುವಳಿ, ಅನ್ಯ ಭಾಷಾ ವಿರೋಧ, ದೊಂಬಿಗಳನ್ನು ಹೊರತುಪಡಿಸಿ ಕನ್ನಡತನವನ್ನು ಉಳಿಸಿ-ಬೆಳೆಸುವಲ್ಲಿ ಕನ್ನಡಿಗರ ಕರ್ತವ್ಯಪರ ಪಾತ್ರವೇನೆಂಬುದು ಚರ್ಚಾರ್ಹ. ಅಂತಹ ಗಂಭೀರ ಆಲೋಚನೆಗಳ ವೇಳೆ ಕೆಲವೊಮ್ಮೆ ಕನ್ನಡಿಗರೇ ಕನ್ನಡ ಬಳಕೆಯಲ್ಲಿ ತೋರುವ ದೋಷಗಳು ಅಪಾರ್ಥಗೊಂಡು ನಗೆ ಪಾಟಲಿಗೀಡಾಗುವಂತೆ ಆಗುವುದು ಖೇದಕರ ಸಂಗತಿ. ಅಂಥದ್ದೊಂದು ಖೇದ ಭಾವ ಮೂಡಿಸಿದ ಭಿತ್ತಿಪತ್ರವೊಂದರ ಬಗ್ಗೆ ಬರೆಯಲೇಬೇಕಾದುದು ಅಗತ್ಯವೆನ್ನಿಸಿ ಲೇಖನಿ ಕೈಗೆತ್ತಿಕೊಂಡಿದ್ದೇನೆ.

ಈ ಬಗ್ಗೆ ಬರೆಯಬೇಕೋ? ಬೇಡವೋ? ಎಂಬ ಗೊಂದಲವೂ ಮನದಲ್ಲಿದೆ. ’ನಮ್ಮದೇ ತಪ್ಪನ್ನು ಹೀಗೆ ಜಗಜ್ಜಾಹೀರುಗೊಳಿಸಿ ನಮ್ಮನ್ನೇ ನಾವು ಅವಮಾನಿಸಿಕೊಳ್ಳಬೇಕೆ?’ ಎಂಬುದು ಕಾಡುತ್ತಿರುವ ಪ್ರಶ್ನೆ. ’ತಪ್ಪುಗಳು ಗೋಚರಿಸಿದಾಗ ತಿದ್ದದೇ, ತಿದ್ದಿಕೊಳ್ಳದೇ ತಪ್ಪುಗಳು ನಮ್ಮದೆಂಬ ಕಾರಣಕ್ಕೆ ಮುಚ್ಚಿಕೊಂಡು ಬಿಟ್ಟರೆ ಹಾಗೆ ಉಳಿದ ತಪ್ಪುಗಳೇ ಸರಿಗಳೇನೋ ಎಂಬಷ್ಟು ಮಟ್ಟಕ್ಕೆ ಭ್ರಮಿತರಾಗುವಂತಾದೀತೆಂಬ ಆತಂಕದಿಂದ ಬರೆಯುತ್ತಿದ್ದೇನೆ. ತಪ್ಪುಗಳನ್ನು ತಿದ್ದುವ ಕಾಯಕ (ಉಪನ್ಯಾಸಕ ವೃತ್ತಿ) ನನ್ನದಾಗಿರುವುದರಿಂದಲೋ ಏನೋ ಲೋಪವನ್ನು ಅವಗಣಿಸಿ ಬಿಡಲಾಗುತ್ತಿಲ್ಲ. ಇಲ್ಲವೇ ತಪ್ಪಾಗಿ ಬರೆದದ್ದನ್ನು ನೋಡಿ ಮುಸಿ-ಮುಸಿ ನಕ್ಕು ಸುಮ್ಮನಾಗಲೂ ಸಾಧ್ಯವಾಗುತ್ತಿಲ್ಲ.

ಹೇಳಹೊರಟಿರುವುದು ದಾವಣಗೆರೆ ಜಿಲ್ಲೆಯ ಬಾತಿ ಗ್ರಾಮದ ಗ್ರಾಮ ಪಂಚಾಯಿತಿಯಿಂದ ಪ್ರಕಟಿಸಲ್ಪಟ್ಟ ಭಿತ್ತಿಪತ್ರವೊಂದರ ದೋಷದ ಕುರಿತು. ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾರ್ಗದ ಸಂಪೂರ್ಣ ಜನಜಂಗುಳಿಯ ಬಾತಿ ಗ್ರಾಮದ ಪ್ರವೇಶ ಭಾಗದಲ್ಲಿ; ಅಲ್ಲದೇ ಪಬ್ಲಿಕ್ ಶಾಲೆಯ ಪ್ರವೇಶ ದ್ವಾರದಲ್ಲಿ ಹಾಗೂ ಹಿಂಬದಿಯ ಪ್ರಧಾನ ದೃಗ್ಗೋಚರ ಮುಖ್ಯ ಗೋಡೆಯ ಮೇಲೆ ಕೂಡಾ! ಆ ಮಾರ್ಗ ಹೋಕರಿಗೆಲ್ಲಾ ಕಂಡೇ ತೀರುವಂತೆ ನಾಲ್ಕೈದು ಕಡೆ ಈ ಭಿತ್ತಿಪತ್ರ ಪ್ರದರ್ಶಿಸಲ್ಪಟ್ಟಿದೆ.

ಗ್ರಾಮ ಪಂಚಾಯಿತಿ, ದೊಡ್ಡಬಾತಿ ಪ್ರಕಟಣೆ – ಎಂಬ ಘೋಷ ವಾಕ್ಯದೊಂದಿಗೆ ಪ್ರದರ್ಶಿಸಲ್ಪಟ್ಟಿರುವ ಭಿತ್ತಿ ಪತ್ರದ ಒಕ್ಕಣೆ ಹೀಗಿದೆ: “ದೊಡ್ಡಬಾತಿ ಸರ್ಕಾರಿ ಶಾಲಾ ಆವರಣದಲ್ಲಿ ನೈರ್ಮಲ್ಯ ಮಾಡುವವರ ಭಾವ ಚಿತ್ರಗಳನ್ನು ಮೇಲೆ ಇರುವ ಬಾಕ್ಸ್‌ಲ್ಲಿ ಹಾಕಲಾಗುವುದು. ಆದ್ದರಿಂದ ಯಾರು ಶಾಲೆಯಲ್ಲಿ ನೈರ್ಮಲ್ಯ ಮಾಡಬಾರದೆಂದು ಪ್ರಕಟಿಸಿದೆ.” ಇದರೊಟ್ಟಿಗೆ ಭಿತ್ತಿಪತ್ರದ ಮೇಲ್ಭಾಗದಲ್ಲಿ ಮೂರು ಖಾಲಿ ಇರುವ ಚೌಕಾಕೃತಿಗಳನ್ನು ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ಪ್ರದರ್ಶಿಸಿರುವುದು ಸಹಜವಾಗಿ ಗಮನ ಸೆಳೆಯುತ್ತದೆ.

ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ಬಾತಿಯ ಕರ್ನಾಟಕ ಪಬ್ಲಿಕ್ ಶಾಲೆಯ ನೈರ್ಮಲ್ಯ ಕಾಪಾಡುವುದಕ್ಕೆ ಸಂಬಂಧಿಸಿದ ಈ ಭಿತ್ತಿಪತ್ರದ ಒಕ್ಕಣೆಯ ವಿಚಾರ ಅಯೋಮಯವಾಗಿದೆ! ’ನೈರ್ಮಲ್ಯʼ ಪದದ ಅಸಂಬದ್ಧ ಬಳಕೆ ಈ ಭಿತ್ತಿಪತ್ರ ಪ್ರಕಟಿಸಿರುವವರ ಕನ್ನಡ ಭಾಷಾ ಜ್ಞಾನದ ಕೊರತೆಯನ್ನು ತೋರುತ್ತದೆಯಲ್ಲದೇ, ಭಿತ್ತಿಪತ್ರದ ಉದ್ದೇಶಿತ ಯತ್ನದ ಸಾಫಲ್ಯತೆಗೇ ಕುಂದು ತಂದು, ನೈರ್ಮಲ್ಯದ ಕುರಿತ ಪಾಠವನ್ನೂ ಅನಿವಾರ‍್ಯಗೊಳಿಸಿದೆ.

ನೈರ್ಮಲ್ಯವೆಂದರೆ ಸರಳವಾಗಿ ನಿರ್ಮಲೀಕರಣ, ಶುಚೀಕರಣ ಎಂದರ್ಥ. ಶುಚಿಯಾದ, ಚೊಕ್ಕಟತನದಿಂದ ಕೂಡಿದ ಆರೋಗ್ಯಕರ ಸ್ಥಿತಿಯನ್ನು ’ನೈರ್ಮಲ್ಯ’ ಎಂಬ ಪದ ಪ್ರತಿನಿಧಿಸುತ್ತದೆ. ಯಾವುದೇ ಕಲ್ಮಶ, ಕಲಬೆರಕೆ, ಮಾಲಿನ್ಯಗಳಿಲ್ಲದ; ಶುದ್ಧತೆ ಹಾಗೂ ಸ್ವಚ್ಛತೆಯಿಂದ ಕೂಡಿರುವ ಪರಿಶುದ್ಧ ಗುಣಮಟ್ಟ ಅಥವಾ ಸ್ಥಿತಿಯನ್ನು ನೈರ್ಮಲ್ಯ ಸೂಚಿಸುತ್ತದೆ. ’ನೈರ್ಮಲ್ಯ’ ಎಂಬುದು ತ್ಯಾಜ್ಯ ವಸ್ತುಗಳ ಅಪಾಯಗಳೊಂದಿಗಿನ ಮಾನವ ಸಂಪರ್ಕವನ್ನು ತಡೆಗಟ್ಟುವುದರ ಮೂಲಕ ಆರೋಗ್ಯವನ್ನು ಪ್ರವರ್ತಿಸುವ ವಿಧಾನವಾಗಿದೆ. ನೈರ್ಮಲ್ಯದ ಪರಿಕಲ್ಪನೆಯು ಸಾಮೂಹಿಕ, ಕುಟುಂಬ ಮತ್ತು ಶಾಲಾ ನೈರ್ಮಲ್ಯದ ಜೊತೆಗೆ ಪರಿಸರ, ನೀರು, ಗಾಳಿ, ಆಹಾರ ಮುಂತಾದ ಮಾನವ ಜೀವನದ ಎಲ್ಲಾ ಕ್ಷೇತ್ರಗಳ ನೈರ್ಮಲ್ಯಕ್ಕೆ ಅನ್ವಯಿಸುತ್ತದೆ. ನೈರ್ಮಲ್ಯ ರಕ್ಷಣೆ ಅತ್ಯಗತ್ಯ ಅಲ್ಲದೇ ಅನಿವಾರ‍್ಯ ಕೂಡಾ. ಇಲ್ಲಿನ ಭಿತ್ತಿಪತ್ರದ ಪ್ರಕಟಣೆಯ ಹಿಂದಿನ ಉದ್ದೇಶವೂ ಇದೇ. ಆದರೆ ಪ್ರಕಟಿಸಿರುವವರ ಭಾಷಾ ಜ್ಞಾನದ ಲೋಪ ಅನರ್ಥಕ್ಕೆಡೆ ಮಾಡಿದೆ. ಇಷ್ಟೂ ಸಾಮಾನ್ಯ ಜ್ಞಾನವಿರುವುದಿಲ್ಲವೇ? ಎಂಬ ಖೇದಕ್ಕೂ ಕಾರಣವಾಗಿದೆ. ’ನೈರ್ಮಲ್ಯʼ ಎಂಬ ಪದವು ಗ್ರಾಮ ಪಂಚಾಯಿತಿಯ ಕಾರ‍್ಯವಹಿಗಳಲ್ಲಿ ನಿತ್ಯ ಬಳಕೆಯಲ್ಲಿರುವಂತದ್ದು. ಉದಾಹರಣೆಗೆ, ಗ್ರಾಮ ನೈರ್ಮಲ್ಯ ಯೋಜನೆ, ಕರ್ನಾಟಕ ರಾಜ್ಯ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣಾ ನೀತಿ, ಕರ್ನಾಟಕ ರಾಜ್ಯ ಗ್ರಾಮೀಣ ನೈರ್ಮಲ್ಯ ಕಾರ‍್ಯತಂತ್ರ, ಹೀಗೆ… ಇಷ್ಟಿದ್ದಾಗ್ಯೂ, ’ನೈರ್ಮಲ್ಯʼ ಪದದ ಅರ್ಥವನ್ನೇ ಅಪಾರ್ಥಗೊಳಿಸುವಂತೆ ಪ್ರಕಟಿಸಿರುವುದು, ಪ್ರಕಟಣೆಯಲ್ಲಾದ ಲೋಪದ ಕುರಿತು ಯಾರೂ ಲಕ್ಷ್ಯವಹಿಸದೇ ತಿಂಗಳಾದರೂ ಹಾಗೆಯೇ ಉಳಿಸಿಕೊಂಡಿರುವುದು ನಿಜಕ್ಕೂ ಇರಿಸುಮುರಿಸಿನ ಸಂಗತಿ.

ಈ ಭಿತ್ತಿಪತ್ರವನ್ನು ಕಂಡೊಡನೆಯೇ ನಾನು ಹೀಗೆ ಬರವಣಿಗೆಗೆ ತೊಡಗಿರುವುದಲ್ಲ. ಕಾರಣ, ದೂರದ ಆಸೆ! – ಈ ಭಿತ್ತಿಪತ್ರದಲ್ಲಿನ ದೋಷವನ್ನು ಸರಿಪಡಿಸಲು ಯಾರಾದರೂ ಕ್ರಮ ಕೈಗೊಳ್ಳುವರೋ.. ಎಂದು. ಹೇಗೆ ಸರಿಪಡಿಸಲಾದೀತು? ನೈರ್ಮಲ್ಯಕ್ಕೆ ವಿರುದ್ಧ ಪದ ಅನೈರ್ಮಲ್ಯ. ಹಾಗಾಗಿ, ಭಿತ್ತಿ ಪತ್ರದಲ್ಲಿರುವ ’ನೈರ್ಮಲ್ಯʼ ಪದದ ಪಕ್ಕದಲ್ಲಿ ’ಅʼ ಸೇರಿಸಿ ’ಅನೈರ್ಮಲ್ಯ’ ಎಂದು ಸೇರಿಸಿದರೆ ಆದ ಲೋಪ ಸ್ವಲ್ಪ ಬಗೆ ಹರಿದೀತು.. ಇದೊಂದು ಸರಳ ಪರಿಹಾರವೂ ಕೂಡಾ! ಹೀಗೇನಾದರೂ ಆಲೋಚಿಸಿ ಸರಿಪಡಿಸುವರೇನೋ ಎಂಬ ನಿರೀಕ್ಷೆ.. ಸರಿಪಡಿಸಿದ್ದಾರೆಯೇ? ಎಂಬ ಒತ್ತಾಸೆಯಿಂದ ಹರಿಹರದಿಂದ ದಾವಣಗೆರೆಗೆ ಪ್ರಯಾಣಿಸುವಾಗಿನ ನನ್ನ ನಿತ್ಯದ ನಿರುಕಿಗೆ ನಿರಾಸೆಯೇ ಕಟ್ಟಿಟ್ಟ ಬುತ್ತಿ!

ಇಲ್ಲಿ ದೋಷ ಸರಿ ಪಡಿಸಬೇಕಾದವರು ಯಾರು? ಭಿತ್ತಿಪತ್ರ ಪ್ರಕಟಿಸಿದ ಗ್ರಾಮ ಪಂಚಾಯಿತಿಯವರೇ ಹೊಣೆ ಹೊರಬೇಕಲ್ಲವೇ? ಜೊತೆಗೆ ಕರ್ನಾಟಕ ಪಬ್ಲಿಕ್ ಶಾಲೆಯೊಂದರ ಶಾಲಾ ನೈರ್ಮಲ್ಯಕ್ಕೆ ಸಂಬಂಧಿಸಿ ಶಾಲೆಯಲ್ಲಿಯೂ ಪ್ರಕಟಿಸಲಾದ ಭಿತ್ತಿಪತ್ರದ ಬಗ್ಗೆ ಶಾಲಾಡಳಿತಕ್ಕೂ ಜವಾಬ್ದಾರಿಯಿರಬೇಕಲ್ಲವೇ? ’ಕರ್ನಾಟಕ ಪಬ್ಲಿಕ್ ಶಾಲೆʼ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶೈಕ್ಷಣಿಕ ಸಂಸ್ಥೆಗಳನ್ನು ಆಡಳಿತಾತ್ಮಕ, ಶೈಕ್ಷಣಿಕ ಮತ್ತು ಕ್ರಿಯಾತ್ಮಕ ಸಂಯೋಜನೆಯೊಂದಿಗೆ ಒಟ್ಟುಗೂಡಿಸಿ ಉತ್ಕೃಷ್ಟ ದರ್ಜೆಯ ಸೌಲಭ್ಯಗಳನ್ನೊಳಗೊಂಡ ಮಾದರಿ ಶಾಲೆಯನ್ನಾಗಿ ರೂಪಿಸಲು ಉದ್ದೇಶಿಸಿದ ಕರ್ನಾಟಕ ಸರ್ಕಾರದ ಯೋಜನೆಯ ಮಹತ್ವಾಕಾಂಕ್ಷಿ ಸರ್ಕಾರಿ ಸಾಂಸ್ಥಿಕ ವ್ಯವಸ್ಥೆ ಎಂಬುದು ಇಲ್ಲಿ ಗಮನಾರ್ಹ. ಇಲ್ಲಿ ಕಾರ‍್ಯನಿರ್ವಹಿಸುತ್ತಿರುವ ಯಾರೊಬ್ಬ ಶಿಕ್ಷಕರಾಗಲೀ, ಉಪನ್ಯಾಸಕರಾಗಲೀ, ಪ್ರಾಚಾರ್ಯರಾಗಲೀ ಇಷ್ಟು ದಿನಗಳಾದರೂ ಈ ಭಿತ್ತಿಪತ್ರದಲ್ಲಿರುವ ಅಪಾರ್ಥಕರ ದೋಷವನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲವೆಂದಾದರೆ, ಅದು ಅವರ ಲಕ್ಷ್ಯಕ್ಕೆ ಬಂದಿಲ್ಲವೋ? ಅಥವಾ ಅಲಕ್ಷ್ಯ ಧೋರಣೆಯೋ? ಎಂಬ ಸಂದೇಹದೊಂದಿಗೆ ಆತಂಕವೂ ಅಧಿಕಗೊಳ್ಳುತ್ತದೆ. ಅಲ್ಲದೇ ಗ್ರಾಮದ ಸುಶಿಕ್ಷಿತ ಸಾರ್ವಜನಿಕರೂ ಕೂಡಾ ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ಹೊಂದಿರುವುದೇಕೆಂಬ ಪ್ರಶ್ನೆಯೊಂದಿಗೆ ವಿಷಾದವೇರ್ಪಡುತ್ತದೆ.

ಕನ್ನಡ ಭಾಷಿಕ ಭಿತ್ತಿ ಪ್ರಕಟಣೆಗಳಲ್ಲಿ ಕನ್ನಡ ಭಾಷೆಯ ಅಸ್ಮಿತೆಯ ಗೌರವಾಭಿಮಾನ ಕಾಯುವಿಕೆಯ ಅಂಶವೂ ಆದ್ಯತೆಯಾಗಿರುವುದರಿಂದ ವಿಶೇಷ ಜವಾಬ್ದಾರಿ ಹಾಗೂ ಜಾಗ್ರತೆ ಅತ್ಯಗತ್ಯವೆಂಬುದನ್ನು ಈ ಪ್ರಕರಣ ಎತ್ತಿ ತೋರಿದೆ. ಕನ್ನಡ ನಾಡು, ನುಡಿ, ಅಸ್ಮಿತೆಗಳನ್ನುಳಿಸಬೇಕಾದ ಕನ್ನಡಿಗರಿಂದಲೇ ಅಜ್ಞಾನವಶಾತ್ ಏರ್ಪಡುವ ಪದದೋಷಗಳು ಕನ್ನಡವನ್ನು ವಿರೂಪಗೊಳಿಸದಿರಲಿ; ಪರಿಸರದ ನೈರ್ಮಲ್ಯದೊಂದಿಗೆ ಭಾಷೆಯ ನೈರ್ಮಲ್ಯವೂ ಸಾಧಿಸಲ್ಪಡಲಿ; ಕನ್ನಡವನ್ನು ಶ್ರದ್ಧೆ ಮತ್ತು ಅಸ್ಥೆಗಳಿಂದ ತಪ್ಪಿಲ್ಲದಂತೆ ಕಲಿತು ಬಳಸುವಂತಾಗಲಿ; ಈ ಬರಹವನ್ನೋದಿದ ತರುವಾಯವಾದರೂ ಆ ಭಿತ್ತಿಪತ್ರ ತೆರವುಗೊಂಡು ಲೋಪ-ದೋಷವಿಲ್ಲದ ಭಿತ್ತಿಪತ್ರ ಪ್ರಕಟಿಸಲ್ಪಡಲಿ; ಇಲ್ಲವೇ ಇದೇ ಭಿತ್ತಿಪತ್ರದಲ್ಲಿ ಸರಿಪಡಿಸಲು ಅವಕಾಶವಿರುವ ರೀತಿಯನ್ನು ಅನುಸರಿಸಿ ಪ್ರದರ್ಶಿಸಲ್ಪಡಲಿ ಎಂಬುದು ಕನ್ನಡದ ಬಗ್ಗೆ ಅತ್ಯಭಿಮಾನವುಳ್ಳ ನನ್ನ ಮನದ ಹಂಬಲ.

‍ಲೇಖಕರು Admin

October 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಮುರಲೀಧರ ಲೋಕಿಕೆರೆ

    ನೈರ್ಮಲ್ಯ ಮಾಲಿನ್ಯ ಮಾಡಬಾರದು ಎಂದು ಬರೆವ ಉದ್ದೇಶ ಇದ್ದಿರಬಹುದು. “ಮಾಲಿನ್ಯ” ಪದ ಲಿಪಿ-ಕಾರನ ಅವಸರದಲ್ಲಿ ಬಿಟ್ಟು ಹೋಗಿದೆ. ತಿದ್ದುಪಡಿ ಮಾಡುವ ಬಗ್ಗೆ ಆ ಶಾಲೆ ಮುಖ್ಯ ಉಪಾಧ್ಯಾಯರಿಗೆ ತಿಳಿಸಬಹುದು.

    ಪ್ರತಿಕ್ರಿಯೆ
    • ವೀಣಾ ಪಿ.

      ಪ್ರತಿಕ್ರಿಯೆಗೆ ಧನ್ಯವಾದಗಳು. ನನ್ನ ದುಗುಡವೇನೆಂದರೆ ಶಾಲಾವರಣದಲ್ಲೇ ಇರುವ ನಿತ್ಯವೂ ಎಲ್ಲರಿಗೂ ಕಾಣುವಂತಿರುವ ಆ ದೋಷಪೂರಿತ ಭಿತ್ತಿಪತ್ರದ ತಿದ್ದುಪಡಿ ಬಗ್ಗೆ ಅಲ್ಲಿನ ಶಿಕ್ಷಕರು ಹೊಂದಿರುವ ಅಸಡ್ಡೆಯೇ ಆಗಿದೆ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: