ಮರೆತೇನಂದರ ಮರೆಯಲಿ ಹೆಂಗಾ…

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ-

೧೯೮೯.ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ .ಎಂ.ಐ.ಸವದತ್ತಿ ಅವರು ಕುಲಪತಿ ಆಗಿದ್ದ ಕಾಲ.ನಾನು ಆಗ ಅಲ್ಲಿ ಕನ್ನಡ ವಿಭಾಗದ ಮುಖ್ಯಸ್ಥನಾಗಿದ್ದೆ.ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಂಗಕಲೆಗಳ ಅಧ್ಯಯನ ಕೇಂದ್ರ ಆಗಬೇಕು ಎಂಬ ಒತ್ತಾಸೆಯನ್ನು ಕೊಟ್ಟವರು ಆಗ ನಮ್ಮಲ್ಲಿ ಸೆನೆಟ್ ಸದಸ್ಯರಾಗಿದ್ದ ರಂಗಭೂಮಿ ನಿರ್ದೇಶಕ ಪ್ರೊ.ಉದ್ಯಾವರ ಮಾಧವಾಚಾರ್ಯ.ಕುಲಪತಿಗಳು ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಹೇಳಿದರು.ನಾನು ಬಿ.ವಿ.ಕಾರಂತ,ಕೆ.ವಿ.ಸುಬ್ಬಣ್ಣ ಮತ್ತು ಚಂದ್ರಶೇಖರ ಕಂಬಾರ ಅವರ ಹೆಸರುಗಳನ್ನು ಕೊಟ್ಟೆ .’ಇವರೆಲ್ಲಾ ನಮ್ಮ ಸಭೆಗಳಿಗೆ ಬರುತ್ತಾರಾ?’ಎನ್ನುವ ಸಂಶಯ ಕುಲಪತಿಗಳಿಗೆ ಇತ್ತು.’ನಾನು ಕರೆಸುತ್ತೇನೆ  ‘ಎಂದು ಅವರಿಗೆ ಭರವಸೆ ಕೊಟ್ಟೆ.ಕಾರಂತ,ಸುಬ್ಬಣ್ಣ,ಕಂಬಾರರನ್ನು ಫೋನಿನಲ್ಲಿ ಸಂಪರ್ಕಿಸಿದೆ.ಎಲ್ಲರೂ ಪ್ರೀತಿಯಿಂದ ಒಪ್ಪಿಕೊಂಡರು.ಅವರ ಅನುಕೂಲ ನೋಡಿಕೊಂಡು ಕೊಣಾಜೆಯಲ್ಲಿ ಒಂದು ದಿನ ಸಭೆ ಗೊತ್ತು ಮಾಡಿದೆ. ಸುಬ್ಬಣ್ಣ ಫೋನ್ ಮಾಡಿ  ಹೇಳಿದರು :’ಉಬ್ಬಸ ಜಾಸ್ತಿ ಆಗಿದೆ.ನನ್ನ ಸಲಹೆಗಳನ್ನು ಬರೆದು ಕಳುಹಿಸುತ್ತೇನೆ.’ಎಂದು.ಹಾಗೆಯೇ ಬರೆದೂ ಕಳುಹಿಸಿದರು. ಸಭೆಗೆ ಬಿ.ವಿ.ಕಾರಂತ,ಕಂಬಾರ,ಉದ್ಯಾವರ ಮಾಧವ ಆಚಾರ್ಯ  ಬಂದರು.ಇಡೀ ದಿನ ಸಮಾಲೋಚನೆ ನಡೆಯಿತು.ರಂಗಕಲೆಯ ಕೋರ್ಸ್ ಗಳ ರೂಪುರೇಷೆ ರೂಪು ತಾಳಿತು.ಕಾರಂತ ಮತ್ತು ಕಂಬಾರರು ಒಂದು ಬಯಲು ರಂಗಮಂದಿರ ಕ್ಯಾಂಪಸ್ ನಲ್ಲಿ ಆಗಬೇಕು ಎಂದರು.ನಾವು ಕ್ಯಾಂಪಸ್ಸಿನಲ್ಲಿ  ಸುತ್ತಾಡಿದೆವು.ಕೊನೆಗೆ ಮುರಕಲ್ಲಿನ ಒಂದು ತಿಟ್ಟನ್ನು ಅವರಿಬ್ಬರೂ ಆಯ್ಕೆ ಮಾಡಿದರು.ಅಲ್ಲಿ ಇಬ್ಬರೂ ಅತಿ ಸಂಭ್ರಮದಿಂದ ನಿಂತು ಕೂತು ಓಡಾಡಿ ,ಒಂದು ಮಾನಸಿಕ ರಂಗಭೂಮಿಯನ್ನೇ  ನಿರ್ಮಾಣಮಾಡಿದರು .ಆ ದಿನದ   ಸಭೆಯ ಕೆಲವು ಹಳೆಯ ಫೋಟೋಗಳನ್ನು ಇಲ್ಲಿ ಕೊಟ್ಟಿದ್ದೇನೆ.ನನ್ನ ಸಹಿತ ಫೋಟೋದಲ್ಲಿ ಇರುವವರನ್ನು ಗುರುತು ಹಿಡಿಯುವದು ಕಷ್ಟವಾಗಿದೆ! ನಮ್ಮ ವರದಿಯು ಹಣದ ಕೊರತೆಯ ಕಾರಣವಾಗಿ ಅನುಷ್ಠಾನ ಆಗಲಿಲ್ಲ.ಆದರೆ ಆ ದಿನದ ಲವಲವಿಕೆಯ ಸಂತಸದ ನೆನಪುಗಳನ್ನು ‘ಮರೆತೆನೆಂದರ  ಮರೆಯಲಿ ಹೆಂಗಾ !’

ಇನ್ನೊಂದು ಬಾರಿ ಕಂಬಾರರು ನಮ್ಮ ಕನ್ನಡ ವಿಭಾಗಕ್ಕೆ ಬಂದಿದ್ದಾಗ ಮಂಗಳೂರು ಆಕಾಶವಾಣಿಯವರು ಅವರ ಸಂದರ್ಶನ ಮಾಡಲು ನನ್ನನ್ನು ಹೇಳಿದರು .ಸಂದರ್ಶನದ ನಡುವೆ ನನಗೆ ಪ್ರಿಯವಾದ ಅವರ ‘ಮರತೆನೆಂದರ ಮರೆಯಲಿ ಹೆಂಗ ಮಾವೊತ್ಸೆತುಂಗ ‘ಕವನ ಹಾಡಲು ಹೇಳಿದೆ.ಇದು ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಕತೆ.ತಮ್ಮ ಜನಪದ ಕಂಠದಿಂದ ಅದ್ಭುತವಾಗಿ  ಹಾಡಿದರು.ಈ ಕವನವನ್ನು ನಾನು ಮಂಗಳೂರು ವಿವಿಯ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕನಾಗಿದ್ದ ಸಂದರ್ಭದಲ್ಲಿ ತರಗತಿಯಲ್ಲಿ ಪ್ರತೀ ವರ್ಷ ಓದುತ್ತಿದ್ದೆ.ಸಾಹಿತ್ಯ ವಿಮರ್ಶೆಯ ತರಗತಿಯಲ್ಲಿ ಎಜ್ರಾ ಪೌಂಡ್ ನ ಲೊಗೊಪೋಯಿಯ ,ಮೆಲೊಪೋಯಿಯ ಮತ್ತು ಫೆನೋಪೋಯಿಯಗಳಿಗೆ ಕನ್ನಡದ ನಿದರ್ಶನ ಕೊಡುವಾಗ ಕಾವ್ಯದ ಗೇಯತೆಯ ಗುಣಕ್ಕೆ ಉದಾಹರಣೆಯಾಗಿ ಕಂಬಾರರ ‘ಮರತೆನೆಂದರ ಮರೆಯಲಿ ಹೆಂಗಾ’ ಕವನವನ್ನು ನರಸಣ್ಣರ (ಬುಡುಬುಡಿಕೆಯವರ) ಧಾಟಿಯಲ್ಲಿ ವಾಚಿಸುತ್ತಿದ್ದೆ.ಮೈ ಮರೆಸುವ ಗುಂಗು ಹಿಡಿಸುವ ಧಾಟಿ ಆ ಕವನದ ಅರ್ಥಕ್ಕೆ ಹೇಗೆ ಹೊಂದುತ್ತದೆ ಎನ್ನುವುದನ್ನು ವಿವರಿಸುತ್ತಿದ್ದೆ.ವಿದ್ಯಾರ್ಥಿಗಳು ಖುಷಿ ಪಡುತ್ತಿದ್ದರು.

೧೯೯೧.ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ‘ಪ್ರಸಾರಾಂಗ’ವನ್ನು ಆರಂಭಿಸಬೇಕು ಎಂದು ಕುಲಪತಿ ಸವದತ್ತಿ ಅವರಿಗೆ ದುಂಬಾಲು ಬಿದ್ದಾಗ ಅದರ ಹೊಣೆಯನ್ನು ನನ್ನ ತಲೆಗೆ ಕಟ್ಟಿ ,ಅನುದಾನ ಇಲ್ಲದೆ ಆರಂಭಿಸಲು  ಹೇಳಿದರು.ಪ್ರಸಾರಾಂಗದ ಮೊದಲ ಉಪನ್ಯಾಸಗಳನ್ನು ಪುತ್ತೂರಿನಲ್ಲಿ ಏರ್ಪಾಡು ಮಾಡಿದೆ.ಮೊದಲ ಉಪನ್ಯಾಸ ಕೊಡಲು ಕಂಬಾರರನ್ನು ಕರೆದೆ.ಅವರು ಆಗತಾನೆ ‘ಕನ್ನಡ ವಿಶ್ವವಿದ್ಯಾಲಯ’ದ ವಿಶೇಷ ಅಧಿಕಾರಿ ಆಗಿದ್ದರು.ನನ್ನ ಒತ್ತಾಯಕ್ಕೆ ಮಣಿದು ಪುತ್ತೂರಿಗೆ ಬಂದರು.’ರಂಗಭೂಮಿ’ಯ ಬಗ್ಗೆ ಅವರ ಉಪನ್ಯಾಸ .ಕುಲಪತಿ ಸವದತ್ತಿ ಅವರದ್ದು ಕಂಬಾರರ  ಜೊತೆಗಿನ ಇನ್ನೊಂದು ಉಪನ್ಯಾಸ ,’ವಿಜ್ಞಾನ ಮತ್ತು ಸಾಹಿತ್ಯ’ದ ಬಗ್ಗೆ ಕನ್ನಡದಲ್ಲಿ.ಸ್ವಾಗತ ಭಾಷಣ ಮಾಡುತ್ತಾ ನಾನು’ವಿಶೇಷಾಧಿಕಾರಿ ಕಂಬಾರರು ಕನ್ನಡ ವಿಶ್ವವಿದ್ಯಾಲಯ’ದ ಕುಲಪತಿಗಳಾಗಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ನಿಜದ ರಂಗಭೂಮಿಯನ್ನು ಕಟ್ಟಬೇಕು’ಎಂದು ಹೇಳಿದೆ.ಕಾರ್ಯಕ್ರಮದ ಬಳಿಕ ಪುತ್ತೂರಿನ ಹೋಟೆಲ್ ಒಂದಕ್ಕೆ ಊಟಕ್ಕೆ ಹೋದೆವು.ಕಂಬಾರರು,ನಾನು,ಆಗ ನನ್ನ ಸಹೋದ್ಯೋಗಿಗಳಾಗಿದ್ದ ಅಧ್ಯಾಪಕ ಮಿತ್ರರು ಪುರುಷೋತ್ತಮ ಬಿಳಿಮಲೆ ಮತ್ತು ಚಿನ್ನಪ್ಪ ಗೌಡ ಇದ್ದರು.ಊಟದ ನಡುವೆ ಪೂರ್ತಿ ಕನ್ನಡ ವಿವಿಯನ್ನು ಕಟ್ಟುವ ಬೆಳೆಸುವ ಮಾತುಗಳದ್ದೆ ರಿಂಗಣ.ತಾವು ಕುಲಪತಿ ಆದ ಬಳಿಕ ನಾನು ಅಲ್ಲಿಗೆ ಪ್ರೊಫೆಸರ್ ಆಗಿ ಬರಬಹುದೇ ಎಂದು ಕೇಳಿದರು.ಬರಬೇಕು ಎನ್ನುವ ಒತ್ತಾಸೆ ಅವರ ಮಾತಿನಲ್ಲಿ ಇತ್ತು.ನಾನು’ ಒಲ್ಲೆ ‘ ಎಂದೆ.ನಾನು ನಡೆಸಬೇಕಾದ ಕನ್ನಡ ವಿಭಾಗ,ನಾನೇ ಹುಟ್ಟು ಹಾಕಿದ ಪ್ರಸಾರಾಂಗ,ತುಳು ಪೀಠ ,ಆರಂಭಿಸಬೇಕಾದ ಶಿವರಾಮ ಕಾರಂತ ಪೀಠ -ಇವನ್ನೆಲ್ಲಾ ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ‘ಬರಲು ಸಾಧ್ಯವಾಗುವುದಿಲ್ಲ ಎಂದೆ.ಮತ್ತೆ ಕಂಬಾರರು ಬಿಳಿಮಲೆ ಮತ್ತು ಚಿನ್ನಪ್ಪ ಗೌಡರನ್ನು ಅಲ್ಲಿಗೆ ಸೆಳೆಯಲು ಪ್ರಸ್ತಾವ ಮಾಡಿದರು.ಅವರಿಬ್ಬರೂ ಹೋದರೆ ನಾನು ಕನ್ನಡ ವಿಭಾಗ ನಡೆಸುವುದು ಬಹಳ ಕಷ್ಟ ಎಂದೆ.ಆದರೆ ಅದು ಅವರ ನಿರ್ಧಾರಕ್ಕೆ ಬಿಟ್ಟದ್ದು ಎಂದೂ ಹೇಳಿದೆ.ಆ ಕುರಿತು ಮಾತುಕತೆ ಅಲ್ಲಿಗೇ ನಿಂತಿತು.ಮುಂದೆ ಬಿಳಿಮಲೆ ಕನ್ನಡ ವಿಶ್ವವಿದ್ಯಾಲಯಕ್ಕೆ ಹೋದರು.ಕನ್ನಡ ವಿವಿಗೆ ಶೈಕ್ಷಣಿಕ ಸಾಂಸ್ಕೃತಿಕ ಘನತೆ ತಂದುಕೊಟ್ಟರು.ಮುಂದೆ ದೆಹಲಿಗೆ ಹೋಗಿ ಕನ್ನಡಕ್ಕೆ ರಾಷ್ಟ್ರೀಯ ಅನನ್ಯತೆಯ ಶಕ್ತಿ ತಂದುಕೊಟ್ಟರು.ಚಿನ್ನಪ್ಪ ಗೌಡರು ನನ್ನ ಜೊತೆಗೆಯೇ  ಮಂಗಳೂರು ವಿವಿಯಲ್ಲಿ ಉಳಿದರು.ಈಗ ಅಲ್ಲಿ ಕುಲಸಚಿವರಾಗಿದ್ದಾರೆ.

ಆ ಘಟನೆ ನಡೆದು ಹದಿಮೂರು ವರ್ಷಗಳ ಬಳಿಕ ನಾನೂ ಕನ್ನಡ ವಿಶ್ವವಿದ್ಯಾಲಯಕ್ಕೆ ಹೋದೆ -೨೦೦೪ರ ಸಪ್ಟಂಬರದಲ್ಲಿ. ೨೦೦೭ರ ಜೂನ್ ಕೊನೆಯ ವರೆಗೆ ಅಲ್ಲಿ ಇದ್ದೆ.ಆಗ ಕಂಬಾರರು ಅಲ್ಲಿ ವ್ಯಕ್ತಿಯಾಗಿ ಇರಲಿಲ್ಲ.ಆದರೆ ಅಲ್ಲಿನ ಕಟ್ಟಡ  ಜನರು ಪುಸ್ತಕಗಳು ವೇಷಭೂಷಣ ನುಡಿಹಬ್ಬ -ಎಲ್ಲೆಲ್ಲೂ ಕಂಬಾರರು ಕಾಣಿಸುತ್ತಿದ್ದರು.ನಾನು ಬೆಳಗ್ಗೆ ಕ್ಯಾಂಪಸ್ ನಲ್ಲಿ ವಾಕಿಂಗ್ ಹೋಗುತ್ತಿದ್ದಾಗ ನವಿಲುಗಳು ಹಿಂಡುಗಟ್ಟಿ ನನ್ನ ದಾರಿಗೆ ಅಡ್ಡವಾಗಿ ಬಂದು ಕುಣಿಯುತ್ತಿದ್ದುವು.ಆಗ ನನಗೆ ನೆನಪಾಗುತ್ತಿದ್ದದ್ದು ಕಂಬಾರರ ‘ನವಿಲೇ ನವಿಲೇ ‘ಕವನದ ಸಾಲುಗಳು :

‘ನವಿಲೇ ನವಿಲೇ ಚೆ೦ದೊಲ್ಳೆ  ನವಿಲೇ

ನಾದಗಳು ನುಡಿಯಾಗಲೇ

ಹಾಡಾದ ನುಡಿಯೊಳಗೆ ಬೆಳಕಾಡಿ ಹಾಡಿನ

ಆಚೆ ಸೀಮೆಯ ತೋರಲೇ ‘

 

 

‍ಲೇಖಕರು avadhi

September 20, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. D.RAVIVARMA

    SIR,TUMBA MANAMUTTUVAHAGE KAMBARARA BAGGE BAREDIDDERI, NAANU HEGGODINA SAMSKRITI SHIBIRADALLI KAMBARARANNU MODALU NODIDDU,ADINA AVARU TAMMA KATTE PANGEYALLI,SHIVAPURADA BAGGE MATABADIDAGA,MUKA VISMITANAGIDDE, KAMBARARA MATU MUGIDA NANTARA SUBBANNA ENDINANTE ELE TINNUTTA” JEEVAMANADALLE NEEVU KELADA MATANNU INDU KELIDDERI ENDARU” NAANU ESTU THRILL AGIDDENENDARE RATRI AVARA ROOMGE HOGI MATTOMME MATANADI BANDE, IVARU BARI BARAHAGARARALLA, IVARIGONDU,HALAHALIKE,TALAMALA, HAGU EE NADINA DESI BADUKU KALEDUHOGUTTIRUVA BAGGE HASAHANE,EE NADINA BAGGE ONDU SUNDARA VISION,ELLAVU ITTU,OFCOURSE KELAVOMME, AVELLA BRAMANIRASANEGALE AGABAHUDU,BUT AVARA KAVYADA MODIGANTU NAANU MARULAGIDDENE.AVARA NATAKADA HADUGALANNU AGAGGE HADIKOLLUTTENE,OBBA MUGDA MANASINA,EE NELADA VASANEYANNU HEERIDA OBBA MANAVATAVADI ANTALE NANA ANISIKE,PRASHASTI BANDAGA MATRA OBBA MANUSYA,OBBA BARHAGARA DODDAVANAGALLA,NAMAGELLA ANNA KODUVA RAITA,NAMMA BATTEGALANNU OLEDUKOTTU,NAMMANNU SUNDARAVAGI KANISUVA DARGI,SUNDARA CHAPPALI,BOOTU HOLEDU KODUVA CHAMMARA,AVARYARU PRASHASTIGE ARHARALLAVE, KAMBARARA FAN NANU,AVARIGE EE MOLAKA NANU KELODISTE EE DIL MANGE MOORE
    D.RAVI VARMA HOSPET

    ಪ್ರತಿಕ್ರಿಯೆ
  2. subbanna mattihalli

    sir idi kannadada parampareyannu eraka
    vaagisi nirmisida murthy kambaararu.
    kannada janapada vartamaanadalli hosa
    jeeva padedaddu avarinda. Kambararinda
    innu ondishtu krutigalu mudi barali.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: