ಮರಕೋತಿ ಭಾರತಿ

ಗುರುರಾಜ ಕುಲಕರ್ಣಿ

‘ಮರಕೋತಿ ನಮ್ಮಸಂಸ್ಕೃತಿ ‘ ಎಂಬ ಹ್ಯಾಷ್‌ಟ್ಯಾಗ್‌ ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗುತ್ತಿರುವುದನ್ನು ನೋಡಿ ನನಗೆ ಬಹಳ ಆಶ್ಚರ್ಯ ಆಗಿತ್ತು. ನಮ್ಮ ಈ ಕಾಂಕ್ರೀಟು ಕಾನನದಲ್ಲಿ ಮರಗಳನ್ನೇ ಮರೆತು ಬಿಡುವ ದಿನಗಳು ಬರುತ್ತಿವೆ, ನಮ್ಮ ಮಕ್ಕಳು ಆಟ ಆಡುವುದು ಎಂದರೆ ‘ಪಬ್‌ಜಿ’ ಎಂಬ ಕಂಪ್ಯೂಟರ್ ‌ಗೇಮು ಎಂದುಕೊಳ್ಳುತ್ತಿವೆ. ಇಂತಹ ಸಮಯದಲ್ಲಿ ಮರದ ಒಂದು ಟೊಂಗೆಯಿಂದ ಇನ್ನೊಂದು ಟೊಂಗೆಗೆ, ಮರದಿಂದ ಮರಕ್ಕೆ ಜಿಗಿಯುತ್ತಾ ಆಡುವ ಮರಕೋತಿ ಆಟ ಇಷ್ಟು ಜನಪ್ರಿಯ ಆಗಿರುವ ವಿಷಯ ಖುಷಿಕೊಟ್ಟಿತು.‌

ಆ ಹ್ಯಾಷ್ ಟ್ಯಾಗ್ ಬಗ್ಗೆ ಜಾಲಾಡಿದಾಗ ಮುಂದಿನ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ‘ಅಖಿಲ ಭಾರತ ಮರಕೋತಿ ಉತ್ಸವ’ ನಡೆಯುತ್ತಿರುವುದಾಗಿಯೂ, ಆ ಉತ್ಸವದಲ್ಲಿ ಭಾಗವಹಿಸಲು ದೇಶದ ವಿವಿಧೆಡೆಯಿಂದ ಮರಕೋತಿ ಪ್ರಚಾರಕರೂ, ಮರಕೋತಿ ಅಭಿಮಾನಿಗಳೂ ಬರುತ್ತಿದ್ದಾರೆಂದೂ, ಅದಕ್ಕಾಗಿಯೇ ಈ ಮರಕೋತಿ ನಮ್ಮಸಂಸ್ಕೃತಿ ಹ್ಯಾಷ್‌ಟ್ಯಾಗ್‌ ಹಬ್ಬ ನಡೆಯುತ್ತಿದೆ ಎಂದು ತಿಳಿದು ಬಂದಿತ್ತು.

ನನಗೂ ನಮ್ಮ ಗ್ರಾಮೀಣ ಕ್ರೀಡೆಗಳು ತಮ್ಮ ಹೊಳಪು ಕಳೆದುಕೊಂಡು, ಹೊಸ ಪೀಳಿಗೆಯ ಮಕ್ಕಳು ಸ್ವಾದಗೇಡಿಗಳಾಗಿ ದರಿದ್ರದ ಮೋಬೈಲುಗಳಲ್ಲಿ ಹೂತು ಹೋಗುವುದು ನೋಡಿ ರೋಸಿ ಹೋಗಿತ್ತು. ಈಗ ಮರಕೋತಿಗೆ ಮರುಜೀವ ಬರುತ್ತಿರುವುದು ನೋಡಿ ಸಂತೋಷವಾಯಿತು. ಹೀಗಾಗಿ ಮರಕೋತಿ ಉತ್ಸವದ ಬಗ್ಗೆ ಆಸಕ್ತಿ ಹೊಂದಿ, ಅದರ ಬಗ್ಗೆ ಹುಡುಕತೊಡಗಿದೆ.. ಎಲ್ಲಿ ಅಂತೀರಾ? ಅದೇ ದರಿದ್ರ ಫೋನಿನಲ್ಲಿ! ಇನ್ನೂ ತಮಾಷೆಯ ವಿಷಯವೆಂದರೆ ಹುಡುಕಿದಾಗ ಸಿಕ್ಕಿದ್ದು ‘ಮರಕೋತಿ ಜ್ಯೋತಿ’ ಎಂಬ ಮೋಬೈಲು ಅಪ್ಲಿಕೇಶನ್ನು! ಆಟದ ಬಗ್ಗೆ ತಿಳಿಯಲು ಅದು ಕೈದೀವಿಗೆಯಂತೆಯೇ ಇದೆ.

ಮರಕೋತಿ ಆಟವನ್ನು ಪುನರುಜ್ಜೀವನಗೊಳಿಸಬೇಕೆಂದು ಪಣ ತೊಟ್ಟಿರುವ ‘ಮರಕೋತಿ ಭಾರತಿ’ ಎಂಬ ಸಂಸ್ಥೆ ಈ ಅಪ್ಲಿಕೇಶನನ್ನು ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡಿದೆ. ಅದರಲ್ಲಿ ಮರಕೋತಿ ಆಟದ ನಿಯಮಗಳು, ಆಟದ ವಿಡಿಯೋಗಳು, ‘ಮರಕೋತಿ ಭಾರತಿ’ ಸಂಸ್ಥೆಯ ಇತಿಹಾಸ ಇತ್ಯಾದಿಗಳನ್ನು ತುಂಬ ಚೆನ್ನಾಗಿ ಸಂಗ್ರಹಿಸಿದ್ದಾರೆ. ‘ಅಖಿಲ ಭಾರತ ಮರಕೋತಿ ಉತ್ಸವ’ ನಡೆಯುತ್ತಿರುವುದು ಅದೇ ‘ಮರಕೋತಿ ಭಾರತಿ’ ಸಂಸ್ಥೆ. ಉತ್ಸವದ ಎಲ್ಲಾ ವಿವರಗಳು ‘ಮರಕೋತಿ ಜ್ಯೋತಿ’ ಆಪ್ಪ್‌ನಲ್ಲಿ ಅಚ್ಚುಕಟ್ಟಾಗಿ ಸಿಗುತ್ತವೆ.

ಮರಕೋತಿ ಆಟದ ಬಗ್ಗೆ ಖ್ಯಾತನಾಮರು ಹೇಳಿದ ಮೆಚ್ಚುಗೆಯ ನುಡಿಗಳು ಆಪ್ಪ್‌ನಲ್ಲಿ ನನ್ನ ಕಣ್ಣು ಸೆಳೆದವು.

ಕಾರ್ಪೋರೇಟ್‌ ಆಧ್ಯಾತ್ಮ ಗುರು ಮಂಗೇಶ ಮುಸುವದೇವನ್‌ ಅವರ ಹೇಳಿಕೆ ‘ಮರಕೋತಿ ಆಟ ನಿಜಕ್ಕೂ ದೇವಕ್ರೀಡೆ’ ಎಂದು ಓದಿ ನನಗೆ ಸಮಾಧಾನವಾಯಿತು. ಯಾಕೆ ಅಂತೀರಾ? ದೇವಕ್ರೀಡೆ ಅಂದರೆ ಏನು – ದೇವರ ಆಟ. ‘ದೇವರ ಆಟ ಬಲ್ಲವರಾರು?’, ‘ಬೊಂಬೆ ಆಡ್ಸೋನು ಮ್ಯಾಲೆ ಕುಂತವನು’ ಇತ್ಯಾದಿ ಹಾಡುಗಳನ್ನು ನೀವು ಕೇಳಿಯೇ ಇರುತ್ತೀರಿ. ನಾನು ಕೂಡ ದೇವರಿಗೆ ಬೇರೆ ಏನೂ ಕೆಲಸವಿಲ್ಲದೇ ನಮ್ಮನ್ನು ಚದುರಂಗದ ಕಾಯಿಗಳಂತೆ ಆಟ ಆಡಿಸುವುದೇ ಅವನ ಹವ್ಯಾಸ ಎಂದು ಇಲ್ಲಿಯವರೆಗೆ ತಿಳಿದಿದ್ದೆ.

ಈಗ ದೇವರಿಗೆ ಮರದಿಂದ ಮರಕ್ಕೆ ಹಾರುತ್ತಾ ಆಡುವ ಆಟವೂ ಇರುವುದರಿಂದ ಹುಲುಮನುಜರ ಜೀವನದಲ್ಲಿ ಆಟ ಆಡುವುದು ಕಡಿಮೆ ಮಾಡುತ್ತಾನೆ ಎಂದು ಅನಿಸಿ ಸಮಾಧಾನವಾಯಿತು. ಅದೂ ನಮ್ಮ ಗುರು ಮಂಗಿ ಮುಸುವದೇವನ್‌ ಹೇಳಿದ್ದಾರೆ ಎಂದ ಮೇಲೆ ನಿರಾಳ ಆಗದೇ ಇದ್ದೀತೆ? ನನ್ನ ಕಣ್ಣ ಸೆಳೆದ ಇನ್ನೊಂದು ಹೇಳಿಕೆ ಡಾ.ಸುಗ್ರೀವನ್ ಸ್ವಾಮಿ ಅವರದು- ‘ದೇಶದ ಪರಂಪರೆ ಪುನರುತ್ಥಾನಕ್ಕೆ ದೇಶದೆಲ್ಲೆಡೆ ಮರಕೋತಿ ಅಭಿಯಾನವನ್ನು ನಡೆಸಬೇಕು’. ಖ್ಯಾತ ಆರ್ಥಿಕ ತಜ್ಞರಾಗಿದ್ದ ಡಾ. ಸ್ವಾಮಿಯವರು ಈಗ ಒಂದು ರಾಜಕೀಯ ಪಕ್ಷದಿಂದ ಇನ್ನೊಂದಕ್ಕೆ ಜಿಗಿದು, ನಂತರ ಮುಗಿದೊಂದಕ್ಕೆ ಹಾರಿ ಅಧಿಕಾರ ಸಂಪಾದಿಸಿಕೊಂಡಿದ್ದಾರೆ. ಹೀಗಾಗಿ ಮರಕೋತಿಯ ಬಗ್ಗೆ ಬಹು ಅನುಭವಿಕರಾದ ಅವರ ನಿಲುವು ಸರಿಯೇ ಇದ್ದೀತು ಎಂದುಕೊಂಡೆ. 

ನನ್ನ ಮೆಚ್ಚಿನ ಕಾದಂಬರಿಕಾರ ಬಾಲಪ್ಪ ಅವರದೂ ಒಂದು ಅನಿಸಿಕೆ ಇದೆ: ‘ಪಿಟಿ ಮಾಸ್ಟರುಗಳಿಗೆ ಮರಕೋತಿ ಬಗ್ಗೆ ಅರಿವಿಲ್ಲ. ಅವರು ಈ ಆಟವನ್ನು ಕಲಿಯದೆ ಇದ್ದುದರಿಂದ ಮರಕೋತಿ ಮರೆಯಾಗುವ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ನಮ್ಮ ದೇಶದ ಶಿಕ್ಷಣ ನೀತಿಯನ್ನು ನಿರ್ಧಸಿದ ಅಂದಿನ ಪ್ರಧಾನಿಯೇ ಕಾರಣ’. ಬಾಲಪ್ಪನವರು ಯಾವಾಗಲೂ ‘ಓಲ್ಡ್‌ ಈಸ್‌ ಗೋಲ್ಡ್’ ತತ್ವ. ಅವರು ಮದುವೆಯಾಗುವಾಗಲೂ ಹುಡುಕಿ ಹುಡುಕಿ ಮುದುಕಿಯನ್ನು ಮದುವೆಯಾಗಿದ್ದರು ಎಂಬ ಮಾತಿದೆ. ಅವರಿಗೆ ಪುರಾತನ ಕ್ರೀಡೆಯಾದ ಮರಕೋತಿ ಆಟ ಇಷ್ಟ ಅನ್ನೋದರಲ್ಲಿ ಯಾವ ವಿಶೇಷವಿಲ್ಲ. ಆದರೆ ಈಗ್ಯಾಕೋ ಅವರಿಗೆ ತಮ್ಮ ಹೆಂಡತಿಗಿಂತ ದೇಶದ ಮೊದಲ ಪ್ರಧಾನಿ ಬಗ್ಗೆ ಹೆಚ್ಚು ಪ್ರೀತಿ, ಅದಕ್ಕೆ ಅವರನ್ನು ಪೆಟ್ರೋಲು ರೇಟು ಜಾಸ್ತಿಯಾದಾಗ, ಚೀನಾ ನಮ್ಮ ಗಡಿ ಒತ್ತುವರಿ ಮಾಡಿಕೊಂಡಾಗ, ರೈತರು ಪ್ರತಿಭಟನೆ ಮಾಡುವಾಗ ಕೂಡ ಅವರಿಗೆ ಅದು ಮೊದಲ ಪ್ರಧಾನಿಯದೇ ತಪ್ಪು ಎಂದು ಅವರು ನೆನೆಸಿಕೊಂಡಿದ್ದರು. ಇನ್ನು ಮರಕೋತಿ ಜನರಿಗೆ ಮರೆವಾಗಿದೆ ಎನ್ನುವಲ್ಲಿ ಅವರು ಮೊದಲ ಪ್ರಧಾನಿಯ ಕೈವಾಡ ಕಂಡದ್ದರಲ್ಲಿ ವಿಶೇಷವಿಲ್ಲ.

ʼಮರಕೋತಿ ಭಾರತಿʼ ಸಂಸ್ಥೆಯ ಬಗ್ಗೆ ಕೊಟ್ಟಿರುವ ಮಾಹಿತಿಯೂ ಉಪಯುಕ್ತವಾಗಿದೆ, ಅದನ್ನೇ ಸಂಕ್ಷಿಪ್ತವಾಗಿ ಇಲ್ಲಿ ಹೇಳುತ್ತೇನೆ.

 ಮರಕೋತಿ ಭಾರತಿ’ಯ ಯಶೋಗಾಥೆ:

ಎಪ್ಪತ್ತರ ದಶಕದ ಕೊನೆಯ ಭಾಗದಲ್ಲಿ ವ್ಯಾಸಂಗವನ್ನು ಮುಗಿಸಿದ ಮಲೆನಾಡಿನ ಒಬ್ಬ ತರುಣ, ಮರಳಿ ತನ್ನೂರಿಗೆ ಹೋಗಿದ್ದ. ತಮ್ಮ ತೋಟದಲ್ಲಿ ಅಡ್ಡಾಡುವಾಗ ತಾವು ಚಿಕ್ಕವರಾಗಿದ್ದಾಗ ಮರಕೋತಿ ಆಡುತ್ತಿದ್ದದುದನ್ನು ನೆನೆಸಿಕೊಂಡರು. ಮರಕೋತಿ ಆಟ ಆಧುನಿಕ ಆಟಗಳ ಭರಾಟೆಯಲ್ಲಿ ಮರೆಯಾಗಿ ಹೋಗುತ್ತಿರುವುದಕ್ಕೆ ಮಮ್ಮಲ ಮರುಗಿದರು. ಮರಕೋತಿಗೆ ಗತವೈಭವವನ್ನು ಮರಳಿ ತರುವ ಸಂಕಲ್ಪ ಮಾಡಿದರು.

ಈ ವಿಷಯವನ್ನು ಸಮಾಜದ ಕೆಲವು ಪ್ರಮುಖರ ಜೊತೆಯಲ್ಲಿ ಹಂಚಿಕೊಂಡರು. ಅವರಲ್ಲೊಬ್ಬರು, ‘ನಿಮ್ಮ ಮರಕೋತಿ ಆಟವನ್ನು ಯಾರು ಆಡುತ್ತಾರೆ? ಅದರ ಮಹತ್ತಿನ ಬಗ್ಗೆ ಯಾರಿಗೆ ಗೊತ್ತು ? ಎಲ್ಲರೂ ಕ್ರಿಕೆಟ್ಟು, ಫುಟ್ಬಾಲು, ಟೆನ್ನಿಸ್ಸುಗಳ ಹಿಂದೆಯೇ ಓಡುತ್ತಿದ್ದಾರೆ. ಮೊದಲು ಮರಕೋತಿ ಆಡುವವರನ್ನೂ ಮತ್ತು ಅದರ ಬಗ್ಗೆ ಮಾತನಾಡುವವರನ್ನು ನಿರ್ವಿುಸಿ’ ಎಂದು ಸಲಹೆಯಿತ್ತರು.

ಹೀಗಾಗಿ ಆ ಯುವಕ ಬೇರೆ ಬೇರೆ ಭಾಷೆಗಳಲ್ಲಿ ಉಪಲಭ್ಯವಿರುವ ಮರಕೋತಿ ಆಟದ ವಿಧಾನಗಳ ಅಧ್ಯಯನ ಮಾಡಿದರು. ಅದಕ್ಕನುಸಾರ ಜನಸಾಮಾನ್ಯರಿಗೆ ಅಲ್ಪಾವಧಿಯಲ್ಲಿ ಮರಕೋತಿ ಕಲಿಸಲು ಹಗಲಿರುಳು ಶ್ರಮವಹಿಸಿ ವಿನೂತನ ಕಲಿಕಾವಿಧಾನವನ್ನು ತಯಾರಿಸಿ ಆಧುನಿಕ ಜಗತ್ತಿಗೆ ಪರಿಚಯಿಸಿದರು. ಅದರ ಪ್ರಕಾರ ಮರಕೋತಿ ಆಡಲು ಮರವೇ ಇರಲೇಬೇಕು ಎಂಬ ಕಟ್ಟರ್‌ ನಿಯಮ ತೆಗೆದು ಹಾಕಿ, ಫುಟ್ಬಾಲು ಗೋಲ್‌ಪೋಸ್ಟ್‌, ವಾಲಿಬಾಲ್‌-ಟೆನಿಸ್‌ ಕಂಬಗಳು, ಆಟದ ಮೈದಾನದಲ್ಲಿರುವ ಸಿಂಗಲ್‌ ಬಾರ್-ಡಬಲ್‌ ಬಾರ್‌ಗಳನ್ನೂ ಮರಕೋತಿ ಆಡಲು ಉಪಯೋಗಿಸಬಹುದೆಂದು ತಿದ್ದುಪಡಿ ಮಾಡಲಾಯಿತು.

ನಾಡಿನ ಹಲವೆಡೆ ಮರಕೋತಿ ಆಟ ಕಲಿಸಲು ಶಿಬಿರಗಳನ್ನು ಮಾಡಲಾಯಿತು. ಅನೇಕರು ಮರಕೋತಿಯನ್ನು ಕಲಿತು ಆಡಲು ಪ್ರಾರಂಭಿಸಿದರು. ಇದು ಭಾರೀ ಯಶಸ್ಸನ್ನು ಗಳಿಸಿತು. ಈ ಶಿಬಿರಗಳ ಕಾರಣದಿಂದ ಮರಕೋತಿ ಆಟ ತುಂಬ ಕಠಿಣ ಎಂಬ ಭಾವನೆ ನಿಧಾನಕ್ಕೆ ದೂರವಾಗುತ್ತಾ ಬಂತು. ‘ಮರಕೋತಿ ಭಾರತಿ’ ಆರಂಭದಿಂದಲೇ ಜಾತಿಮತ ಭೇದವಿಲ್ಲದೆ ಎಲ್ಲರಿಗೂ ಮರಕೋತಿ ಆಟ ಕಲಿಸುತ್ತಿದ್ದರಿಂದ ಬಹುಬೇಗ ಜನಪ್ರಿಯವಾಯಿತು.

ಅಂದು ಹಲವು ಜನರ ಅಪಹಾಸ್ಯದ ನಡುವೆಯೂ ಕಂಡ ಕನಸು ನನಸು ಮಾಡಿಕೊಳ್ಳಲು ಹಗಲಿರುಳು ದುಡಿದು ಇಂದು ಯಶಸ್ಸು ಕಂಡಿರುವವರೇ ಶ್ರೀ ಹನುಮಂತ ಶಾಸ್ತ್ರಿಗಳು.

ಕಳೆದ 35 ವರ್ಷಗಳಿಂದ ಮರಕೋತಿ ಕಾರ್ಯಕ್ಕಾಗಿ ಹಗಲಿರುಳೆನ್ನದೆ ಜಗತ್ತಿನಾದ್ಯಂತ ನಿರಂತರ ಪ್ರವಾಸ ಮಾಡುತ್ತಿರುವ ಶಾಸ್ತ್ರಿಗಳು, ಇಂದಿಗೂ ನೂತನ ತಂತ್ರಗಳನ್ನು ರೂಪಿಸಿ ಮರಕೋತಿ ಕ್ಷೇತ್ರಕ್ಕೆ ನೀಡುತ್ತಿದ್ದಾರೆ. ಮರಕೋತಿ ಬಗ್ಗೆ ಕನ್ನಡ ಮತ್ತು ಇಂಗ್ಲೀಷಿನಲ್ಲಿ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ನಾಡಿನಾದ್ಯಂತ ಮರಕೋತಿ ಶಿಬಿರಗಳನ್ನು ನಡೆಸಲು ಇವರೊಟ್ಟಿಗೆ ಅಂದಿನಿಂದ ಇಂದಿನವರೆಗೆ ನಾಡಿನ ನೂರಾರು ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಕಷ್ಟಸಾಧ್ಯವಾದ ಈ ಕಾರ್ಯವನ್ನು ತಮ್ಮ ಜೀವನದ ಕಾರ್ಯವೆಂದೇ ಇವರೆಲ್ಲ ಸ್ವೀಕರಿಸಿದವರು. ಸಂಕಲ್ಪಿಸಿದ ಕಾರ್ಯವನ್ನು ಮುನ್ನಡೆಸಲು ಅನೇಕ ರೀತಿಯ ಚಟುವಟಿಕೆಗಳನ್ನು, ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಯಪ್ರವೃತ್ತರಾಗುತ್ತಿದ್ದರು. ಒಂದರ್ಥದಲ್ಲಿ ಈ ಯುವಪಡೆ ಶೂನ್ಯದಿಂದ ಸೃಷ್ಟಿಯನ್ನು ಮಾಡಿತು ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ.

ಕಳೆದ ವರ್ಷ ಹನುಮನಹಳ್ಳಿಯಲ್ಲಿ ನಡೆದ ಮರಕೋತಿ ಶಿಬಿರದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಪೂಜ್ಯ ಶ್ರೀ ಪವಮಾನತೀರ್ಥ ಶ್ರೀಪಾದರು ಅದನ್ನು ಮರಕೋತಿ ಗ್ರಾಮವನ್ನಾಗಿ ಮಾಡಬೇಕು ಎಂಬ ಅಪೇಕ್ಷೆಯನ್ನು ಗ್ರಾಮವಾಸಿಗಳಲ್ಲಿ ವ್ಯಕ್ತಪಡಿಸಿದ್ದರು. ಅದರ ಫಲವಾಗಿ ಇಂದು ಜಗತ್ತಿನ ಮೊದಲ ಮರಕೋತಿ ಗ್ರಾಮವೆಂಬ ಹೆಗ್ಗಳಿಕೆಗೆ ಹನುಮನಹಳ್ಳಿ ಪಾತ್ರವಾಗಿದೆ. ಇಂದು ಇಂತಹ ಹತ್ತಾರು ಗ್ರಾಮಗಳು ದೇಶಾದ್ಯಂತ ರೂಪುಗೊಳ್ಳುತ್ತಿವೆ.

‘ಮರಕೋತಿ ಭಾರತಿʼಯವರು ಮಾಡ್ತಾ ಇದ್ದದ್ದು ನನಗೆ ತೀರಾ ಮೂರ್ಖತನದ ಕೆಲಸ ಅನ್ನಿಸಿತ್ತು. ನಮ್ಮ ನಗರಗಳಲ್ಲಿ ಈಗಾಗಲೇ ಇರುವ ಫುಟ್ಬಾಲ್ – ಹಾಕಿ ಗೋಲ್ ಪೋಸ್ಟಗಳನ್ನೂ ಉಪಯೋಗಿಸಿ ಮರಕೋತಿ ಗಳನ್ನಾಡಿ. ಆದರೆ ಹಾಕಿ – ಫುಟ್ಬಾಲ್ ಗಳನ್ನೂ ಆಡಬೇಡಿ ಅನ್ನೋದು, ಮುನ್ಸಿಪಾಲ್ಟಿಯವರು ಚೆನ್ನಾಗಿ ಖರ್ಚು ಮಾಡಿ ಪಾರ್ಕುಗಳಲ್ಲಿ ವ್ಯಾಯಾಮ ಮಾಡಲೆಂದು ಹಾಕಿರುವ ಸಿಂಗಲ್ – ಬಾರ್, ಡಬಲ್-ಬಾರ್  ಮರಕೋತಿ ಆಡಲು ಉಪಯೋಗಿಸಿ ಎನ್ನುವುದು  ತಲೆ ಕೆಟ್ಟವರ ಐಡಿಯಾ ಎನ್ನಿಸಿತು. ನಮ್ಮ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಆಡಲು, ಅಂದರೆ ಬಾಯಿಯಿಂದ ಮಾತ್ನಾಡಲಷ್ಟೇ ಅಲ್ಲ, ತಮಗೆ ಬೇಕಾದ ಆಟ ಆಡಲು ಸ್ವಾತಂತ್ರ್ಯವಿದೆ. ಹಿಂಗಾಗಿ ಅವರಿಗೆ ಬೇಕಾದದ್ದು ಮಾಡಲಿ ಎಂದುಕೊಂಡಿದ್ದೆ.

ಆದರೆ ‘ಮರಕೋತಿ ಭಾರತಿ’ಯ ಮೂರ್ಖತನದ ಪರಿಣಾಮ ನನಗೆ ವೈಯಕ್ತಿಕವಾಗಿ ತಟ್ಟುತ್ತದೆ ಎಂದು ಕೊಂಡಿರಲಿಲ್ಲ. ಈಗ ಜಗತ್ತು ಚಿಕ್ಕದಾಗಿದೆ. ಎಲ್ಲೋ ಯಾರೋ ‘ಆಕ್ಷಿ’ಎಂದು ಮೊದಲು ಬಾರಿ ಸೀತಿದ್ದು, ಕೆಲವೇ ದಿನಗಳಲ್ಲಿ ನಮ್ಮದೇ ಬೀದಿಯ ಕೊರೋನಾ ಕೇಸಾಗಿ ಪರಿವರ್ತನೆಯಾದದ್ದನ್ನು ನಾವು ಈಗ ನೋಡಿದ್ದೇವೆ. ಹೀಗಾಗಿ ಮರಕೋತಿಯ ಹುಚ್ಚಿನ  ಝಳ ನನಗೆ ಬಡಿಯಲು ಬಹಳ ಸಮಯ ಹಿಡಿಯಲಿಲ್ಲ. ಅದಾಗಿದ್ದು ಹೀಗೆ –

ನನ್ನದು ಮೂಲತಃ ಬಯಲು ಸೀಮೆಯ ಒಂದೂರು. ನಮ್ಮೂರ ಕಡೆ ಗಿಡಮರಗಳು ಕಡಿಮೆ. ಬಹಳಷ್ಟು ಕರಿಜಾಲಿ ಪೀಕಜಾಲಿಯ ಮುಳ್ಳಿರುವ ಮರಗಳೇ. ಹೀಗಾಗಿ ಬಾಲ್ಯದಲ್ಲಿ ನನಗೆ ಮರಕೋತಿ ಆಡುವ ಅವಕಾಶಗಳು ಇರಲೇ ಇಲ್ಲ. ಅಲ್ಲಲ್ಲಿ ಹುಣಸೇಮರ, ಮಾವಿನಮರಗಳು ಇದ್ದರೂ ಅವುಗಳನ್ನು ಏರಿ ಮರಕೋತಿ ಆಡುವಷ್ಟು ಅವಕಾಶ ಮರಗಳ ಮಾಲೀಕರು ನಮಗೆ ಕೊಡುತ್ತಿರಲಿಲ್ಲ! ನಾವು ಕೂಡ ಸಿಕ್ಕ ಅವಕಾಶದಲ್ಲಿ ಹುಚ್ಚುಚ್ಚಾರ ಆಟ ಆಡುತ್ತ ಕಳೆಯದೇ ಕೈಗೆ ಸಿಕ್ಕಷ್ಟು ಹಣ್ಣು ಕಾಯಿ ಹರಿದುಕೊಂಡು ಕಿಸೆ ತುಂಬಿಸಿಕೊಂಡು ಪಲಾಯನ ಮಾಡುತ್ತಿದ್ದೆವು! ಒಟ್ಟಿನಲ್ಲಿ ಹೇಳಬೇಕೆಂದರೆ ನಮ್ಮ ಬಾಲ್ಯದಲ್ಲಿ ದೇವಕ್ರೀಡೆಯಾಡದೇ ಮನುಷ್ಯಕ್ರೀಡೆಗಳಾದ ಕುಂಟಾಟ, ಚಿಣ್ಣಿ-ಫಣಿ, ಗೋಲಿಗುಂಡಾ, ಬುಗುರಿ ಆಡುತ್ತಾ ನಂತರ ಕಬಡ್ಡಿ-ಖೋಖೋಗಳಿಗೆ ಭಡ್ತಿ ಪಡೆದಿದ್ದೆವು. ಅದರಲ್ಲೂ ಕಬಡ್ಡಿಯಲ್ಲಂತೂ ನಮಗೆ ವಿಶೇಷ ಆಸಕ್ತಿ. ನಮ್ಮ ಶಾಲೆಯ ಹುಡುಗರು ಜಿಲ್ಲಾ ಮಟ್ಟದವರೆಗೆ ಪಂದ್ಯಾಟದಲ್ಲಿ ಗೆದ್ದು ಬೀಗಿದ್ದೆವು.

ಓದು ಮುಗಿದು ಬಾಳ ಹೊಳೆಯಲ್ಲಿ ಈಸುತ್ತಾ ಒಬ್ಬೊಬ್ಬರು ಒಂದೊಂದು ಕಡೆ ದಡ ಸೇರಿದ ಮೇಲೆ, ಒಂದು ದಿನ ಶಾಲೆಯಲ್ಲಿ ನಮ್ಮ ಕಬಡ್ಡಿ ತಂಡದ ನಾಯಕನಾಗಿದ್ದ ಮುರುಗೇಶಿ ನಮ್ಮೆಲರ ಫೋನ್ ನಂಬರುಗಳನ್ನು ಕೂಡಿಹಾಕಿ ವಾಟ್ಸಆಪ್ ಗ್ರೂಪ್ ಮಾಡಿದ. ಅದಕ್ಕೆ ನಾವು ಜಿಲ್ಲಾ ಮಟ್ಟದಲ್ಲಿ ಶೀಲ್ದು ಗೆದ್ದು ತೆಗೆಸಿಕೊಂಡಿದ್ದ ಫೋಟೋವನ್ನೇ ಡಿಪಿ ಮಾಡಿ ಗುಂಪಿಗೆ ‘ಕಬಡ್ಡಿ ಕೂಟ’ ಎಂದು ಹೆಸರಿಟ್ಟ. ಬಹಳ ದಿನಗಳ ನಂತರ ಸಂಪರ್ಕಕ್ಕೆ ಬಂದ ನಾವೆಲ್ಲಾ ಬಹಳ ಉತ್ಸಾಹದಿಂದ ವಾಟ್ಸಆಪ್ ನಲ್ಲಿ ಮಾತನಾಡಿಕೊಂಡೆವು.

ನಾವೆಲ್ಲಾ ಕಾಲೇಜು ಸೇರಿದ ತಕ್ಷಣ ಆಟಕ್ಕೆ ಟಾಟಾ ಹೇಳಿದ್ದರೆ, ಮುರುಗೇಶಿ ಮಾತ್ರ ಕಬಡ್ಡಿಯನ್ನು ಆಡುತ್ತಾ ಮುಂದುವರೆದು ಯೂನಿವರ್ಸಿಟಿ ಬ್ಲೂ  ಆಗಿ ಸ್ಪೋರ್ಟ್ಸ್ ಕೋಟಾದಲ್ಲಿ ಸರಕಾರೀ ನೌಕರಿ ಹಿಡಿದಿದ್ದ. ಎಲ್ಲರೂ ಮದುವೆಯಾಗಿ ಎಲ್ಲರಿಗೂ ಮಕ್ಕಳೂ ಆಗಿದ್ದವು. ತಮ್ಮ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ನಮ್ಮ ಈ ಹೊಸ ವಾಟ್ಸಪ್ಪ್ ಗ್ರೂಪನ್ನು ಎಲ್ಲರೂ ಉಪಯೋಗಿಸತೊಡಗಿದೆವು. ರಮೇಶ ಮಗ ಪಿಯಾನೋ ನುಡಿಸುವ ವಿಡಿಯೋ ಹಾಕಿದರೆ, ಹನುಮಂತ ತನ್ನ ಮಗಳು ಹಾಡುವ ವಿಡಿಯೋ ಶೇರ್ ಮಾಡಿದ್ದ. ಬಸವರಾಜ ಮಗ ಮ್ಯಾಜಿಕ್ ಮಾಡುವದನ್ನು ವಿಡಿಯೋ ಮಾಡಿ ಹಾಕಿದ್ದ. ಎಲ್ಲರಿಗಿಂತ ಹೆಚ್ಚು ಮೆಚ್ಚುಗೆ ಪಡೆದದ್ದು ಮುರುಗೇಶಿಯ ಇಬ್ಬರೂ ಹೆಣ್ಣು ಮಕ್ಕಳು ಮಲ್ಲಕಂಬದ ಕಸರತ್ತು ಮಾಡುತ್ತಿದ್ದ ವಿಡಿಯೋ. ಆ ಇಬ್ಬರೂ ಪೋರಿಯರು ರಾಜ್ಯ ಮಟ್ಟದ ಮಲ್ಲಕಂಬ ಸ್ಪರ್ಧೆಯಲ್ಲಿ ಗೆದ್ದಿದ್ದ ಸುದ್ದಿಯು ದಿನ ಪತ್ರಿಕೆಯಲ್ಲಿ ಬಂದಿದ್ದನ್ನು ಮುರುಗೇಶ ಹಂಚಿಕೊಂಡಿದ್ದ.

ವಾಟ್ಸಆಪ್ ನ ಹೊಸ ಹುರುಪು ಮಾಸುತ್ತಾ ಬಂದಂತೆ ಮೆಸೇಜ್ ಗಳೂ ಕಡಿಮೆಯಾಗತೊಡಗಿದವು. ಆವಾಗ ಈವಾಗ ಯಾರಿಗಾದರೂ ಹುಟ್ಟು ಹಬ್ಬದ ಶುಭಾಶಯ, ಮದುವೆ ವಾರ್ಷಿಕೋತ್ಸವದ  ಶುಭಾಶಯಗಳಿಗೆ ವಾಟ್ಸಪ್ಪ್ ಸೀಮಿತವಾಗಿತ್ತು.

ಇಂತಹ ದಿನಗಳಲ್ಲಿಯೇ ಮುರುಗೇಶಿ ‘ಮರಕೋತಿ ಭಾರತಿ’ ಸಂಸ್ಥೆ ಸೇರಿದ್ದು, ಮತ್ತು ಅದರ ಹುಚ್ಚೇರಿಸಿಕೊಂಡು ಅದಕ್ಕೆ ಸಂಬಂಧಿಸಿದ ಹುಚ್ಚುಚ್ಚಾರ ಮೆಸೇಜುಗಳನ್ನು ನಮ್ಮ ‘ಕಬಡ್ಡಿ ಕೂಟ’ ಗುಂಪಿಗೆ ಫಾರ್ವಾರ್ಡ್ ಮಾಡತೊಡಗಿದ್ದು. ಅವನನ್ನು ʼಮರಕೋತಿ ಭಾರತಿʼ ಯ ಜಿಲ್ಲಾ ಸಂಚಾಲಕನಾಗಿ ನೇಮಿಸಿದ್ದರಂತೆ. ನಿಯತ್ತಾಗಿ ಸರಕಾರಿ ನೌಕರಿಗೆ ಇಷ್ಟು ವರ್ಷ ದುಡಿದರೂ ಒಂದು ಪ್ರಮೋಷನ್ ಕೂಡ ಸಿಕ್ಕಿಲ್ಲ, ‘ಮರಕೋತಿ ಭಾರತಿ’ ಅನಾಯಾಸವಾಗಿ ಜಿಲ್ಲಾ ಸಂಚಾಲಕನ ಹುದ್ದೆ ಕೊಟ್ಟಿದೆ ಎಂದು ಆ ಸಂಸ್ಥೆಯ ಬಗ್ಗೆ ಅವನಿಗೆ ಬಹಳ ಕೃತಜ್ಞತೆ. ಪ್ರತಿ ತಿಂಗಳೂ ‘ಮರಕೋತಿ ಭಾರತಿʼಯ ಶಿಬಿರಗಳು ಎಲ್ಲಿ ನಡೆಯುತ್ತಿವೆ ಮತ್ತು ಅವುಗಳನ್ನು ಸೇರಲು ಯಾರನ್ನು ಸಂಪರ್ಕಿಸಬೇಕು ಮುಂತಾದ ಮಾಹಿತಿಗಳಿದ್ದ ಪೋಸ್ಟರುಗಳನ್ನು ಗುಂಪಿಗೆ ಹಾಕುತ್ತಿದ್ದ. ನಮ್ಮೆಲ್ಲರಿಗೂ, ಮಕ್ಕಳನ್ನು ‘ಮರಕೋತಿ ಭಾರತಿʼಗೆ ಸೇರಿಸಲು ತಲೆ ತಿನ್ನುತ್ತಿದ್ದ.

ಒಂದು ಸಲ ‘ನಾಸಾದ ವಿಜ್ಞಾನಿಗಳು’ ಮರಕೋತಿ ಆಡುವ ಮಕ್ಕಳ ಬೆಳವಣಿಗೆ ಸಾಧಾರಣ ಮಕ್ಕಳ ಬೆಳವಣಿಗೆಗಿಂತಾ 30 ಪ್ರತಿಶತ ಹೆಚ್ಚಿರುತ್ತದೆ ಮತ್ತು ಅವರ ಐಕ್ಯೂ ಉಳಿದವರಿಗಿಂತ ಸರಾಸರಿ ೧೦ ಪಾಯಿಂಟಿನಷ್ಟು ಹೆಚ್ಚಾಗಿರುತ್ತದೆ ಎಂದು ಸಂಶೋಧನೆಯಿಂದ ಕಂಡುಕೊಂಡಿದ್ದಾರೆ’ ಎಂಬ ಮೆಸೇಜನ್ನು ಫಾರ್ವರ್ಡ್ ಮಾಡಿದ್ದ. ಬಹುತೇಕ ಅವನ ಮೆಸೇಜುಗಳಿಗೆ ಉತ್ತರಿಸುವ ಗೋಜಿಗೆ ಹೋಗದ ನಾನು ಅವತ್ತು, ‘ಮರಕೋತಿ ಆಡುವ ಮಕ್ಕಳು ಆಡದ ಮಕ್ಕಳಿಗಿಂತ ಬೇಗ ಬೆಳೆಯುತ್ತಾರೆ.

ಮರಕೋತಿ ಅಷ್ಟೇ ಅಲ್ಲ ಯಾವುದೇ ಆಟ ಆಡುವ ಮಕ್ಕಳು ಚಟುವಟಿಕೆ ಇಲ್ಲದವರಿಗಿಂತ ಆರೋಗ್ಯವಾಗಿರುತ್ತಾರೆ ಇದನ್ನು ಯಾವುದೇ ಸಂಶೋಧನೆ ಇಲ್ಲದೆಯೇ ಹೇಳಬಹದು. ಇನ್ನು ಐಕ್ಯೂ ವಿಷಯದ ಬಗ್ಗೆ ನನಗೆ ಅನುಮಾನವಿದೆ. ಉಪಗ್ರಹ ಹಾರಿಸಬೇಕಾದ ನಾಸಾದ ವಿಜ್ಞಾನಿಗಳು ಮರದಿಂದ ಮರಕ್ಕೆ ಹಾರುವ ಮಕ್ಕಳ ಐಕ್ಯೂವನ್ನು ಸರಿಯಾಗಿ ಅಳೆಯಬಲ್ಲರೇ?’ ಎಂದು ಒಂದು ಸ್ಮೈಲಿ ಎಮೋಜಿ ಹಾಕಿದ್ದೆ. ಮುರುಗೇಶ ಅದರಿಂದ ಒಂಚೂರು ಬೇಜಾರು ಮಾಡಿಕೊಂಡಿದ್ದ ಅನಿಸುತ್ತೆ, ಸ್ವಲ್ಪ ದಿನ ‘ಕಬಡ್ಡಿ ಕೂಟ’ ಶಾಂತವಾಗಿತ್ತು.

ಒಂದು ದಿನ ‘ಮರಕೋತಿ ಭಾರತಿ’ಯ ಸ್ಥಾಪಕರಾದ ಹನುಮಂತ ಶಾಸ್ತ್ರಿಗಳಿಗೆ ಪ್ರಶಸ್ತಿ ಬಂದದ್ದರ ನಿಮಿತ್ತ ಮುರುಗೇಶಿ ತಾನು ಬರೆದ ಲೇಖನವನ್ನು ಗುಂಪಿಗೆ ಕಳುಹಿಸಿದ. ಶಾಸ್ತ್ರಿಗಳನ್ನು ಯದ್ವಾ-ತದ್ವಾ ಹೊಗಳಿ ಬರೆದಿದ್ದ ಆ ಬರಹ ಯಾವುದೋ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಪತ್ರಿಕೆಯ ಕಟಿಂಗನ್ನೇ ಮುರುಗೇಶಿ ನಮಗೆ ಕಳುಹಿಸಿದ್ದ. ಅದರಲ್ಲಿ ಶಾಸ್ತ್ರಿಗಳನ್ನು ಕಾಡಿನಲ್ಲಿ ಶಕುಂತಲೆಯನ್ನು ಬೆಳೆಸಿದ ಕಣ್ವರಂತೆ, ಜನರ ಅನಾದರದ ಕಾಡಿನಲ್ಲಿ ಕಳೆದು ಹೋಗಿದ್ದ ಮರಕೋತಿ ಆಟವನ್ನು ಬೆಳೆಸಿದವರು ಎಂದು ವರ್ಣಿಸಿದ್ದ. ಗಂಗೆಯನ್ನು ದೇವಲೋಕದಿಂದ ಕರೆತಂದ ಭಗೀರಥನಂತೆಯೇ ಶಾಸ್ತ್ರಿಗಳು ಹಳೆಯ ನೆನಪುಗಳಲ್ಲಿ ಹುದುಗಿ ಹೋಗಿದ್ದ ಮರಕೋತಿ ಆಟವನ್ನು ಭಗೀರಥ ಪ್ರಯತ್ನದಿಂದ ಮರಳಿ ತರುತ್ತಿದ್ದಾರೆ ಎಂದು ಹೇಳಿದ್ದ.

ನನಗೋ ಶಾಸ್ತ್ರಿಗಳು ಮರಕೋತಿ ಆಟವನ್ನು ಇತ್ತ ಹಳೆಯ ಆಟವೂ ಅಲ್ಲ, ಇತ್ತ ಹೊಸಾ ಆಟವೂ ಅಲ್ಲ ಎಂಬ ತ್ರಿಶಂಕು ಸ್ಥಿತಿಗೆ ತಂದ ವಿಶ್ವಾಮಿತ್ರನಂತೆ ಕಾಣುತ್ತಿದ್ದರು. ‘ಹುಟ್ಟು-ಬೆಳೆ-ಅಳಿ’ ಎಂಬ ನಿಸರ್ಗ ನಿಯಮದಂತೆ ತನ್ನ ಕೊನೆ ಕಂಡಿರುವ ಮರಕೋತಿಗೆ ಬೇರೆ ಯಾವುದೋ ರೂಪ ಕೊಟ್ಟು ಅದು ಪರಂಪರೆಯ ರಕ್ಷೆ ಎನ್ನುವುದು ಮೂರ್ಖತನ ಎನ್ನಿಸಿತು. ಅದಕ್ಕಿಂತಾ ಹೆಚ್ಚ್ಚಾಗಿ ಮುರುಗೇಶಿಯಂತಹ ಹಲವಾರು ಜನರ ಶಕ್ತಿಯನ್ನು ತಮ್ಮ ತಲೆಕೆಟ್ಟ ಯೋಜನೆಗಳಿಗೆ ಹಾಳು ಮಾಡುತ್ತಿರುವ ಶಾಸ್ತ್ರಿಗಳ ಬಗ್ಗೆ ಬೇಜಾರೇ ಆಗಿತ್ತು. ಆದರೂ ಶಾಸ್ತ್ರಿಗಳಿಗೆ ಪ್ರಶಸ್ತಿಗಾಗಿ ಅಭಿನಂದನೆ, ಮುರುಗೇಶಿಯ ಬರಹ ಪ್ರಕಟವಾಗಿದ್ದಕ್ಕೆ ಅಭಿನಂದನೆ ಹೇಳಿ ಮೆಸೇಜು ಬರೆದೆ. ವಾಟ್ಸಾಪ್‌ ಗುಂಪಿನ ಬಹುತೇಕರು ಥಂಬ್ಸ್ಅಪ್ ಕೊಟ್ಟಿದ್ದರು.

ಕೆಲದಿನಗಳ ಬಿಟ್ಟು ಮುರುಗೇಶಿ ಗ್ರೂಪಿನಲ್ಲಿ ‘ಮರಕೋತಿ ಆಟವೇ ಜಗತ್ತಿನ ಎಲ್ಲ ಆಟಗಳ ತಾಯಿ’ ಎಂಬ ಲೇಖನವನ್ನು ಕಳುಹಿಸಿದ. ‘ಮರಕೋತಿ ಭಾರತಿʼ ಯ ಕಾರ್ಯಕರ್ತರೊಬ್ಬರು ಬರೆದ ಬರಹವದು. ಅದರಲ್ಲಿ ಪ್ರಾಚೀನ ಸಾಹಿತ್ಯಿಕ ಕೃತಿಗಳಲ್ಲಿ ಮರಕೋತಿ ಆಟದ ಉಲ್ಲೇಖವಿರುವ ಬಗ್ಗೆ ಹೇಳಿತ್ತು. ಆಧುನಿಕ ಆಟಗಳಾದ ಕ್ರಿಕೆಟ್ಟು, ಫುಟ್ಬಾಲು, ಹಾಕಿಯಿಂದ ಹಿಡಿದು, ಟೇಬಲ್ ಟೆನಿಸ್, ಬಿಲಿಯರ್ಡ್ಸ್, ಸ್ನೂಕರ್‌ ಗಳವರೆಗೆ ಹ್ಯಾಗೆ ಮರಕೋತಿ ಆಟದ ಅಂಶಗಳಿವೆ ಎಂದು ಅಪದ್ಧವಾಗಿ ವಿವರಿಸಿತ್ತು. ಸ್ವಲ್ಪ ತಲೆ ಇರೋ ಯಾರಾದರೂ ಅದನ್ನು ಓದಿದ್ದರೂ ಅದರ ಬಂಡವಾಳಕ್ಕಾಗಿ ನಕ್ಕು ಬಿಡುತ್ತಿದ್ದರು. ನಾನು ಕೂಡ ನಕ್ಕೆನಾದರೂ ಮುರುಗೇಶಿಗೆ ಒಂಚೂರು ವಿವೇಕ ಹೇಳೋಣ ಎಂದು ಕೊಂಡೆ. ‘ಜಗತ್ತಿನ ಹಲವಾರು ಆಟಗಳು ಹಲವಾರು ಮೂಲಗಳಿಂದ ಬಂದಿರಬಹುದು.

ಆಯಾ ಭಾಗದ ಕಾಲ-ಪರಿಸರದನುಗುಣವಾಗಿ ಆಯಾ ಆಟಗಳು ಬೆಳೆದು ಬಂದಿರುತ್ತವೆ. ಉದಾಹರಣೆಗೆ ಹಿಮವನ್ನೇ ಕಾಣದ ನಮ್ಮ ಪ್ರದೇಶದಲ್ಲಿ ಐಸ್ ಹಾಕಿ ಆಟವೇ ಅಪರಿಚಿತ. ಹಾಗೆಯೇ ಅಷ್ಟಾಗಿ ಬಿಸಿಲೇ ಕಾಣದ ನಾಡುಗಳಲ್ಲಿ ನಮ್ಮಲ್ಲಿನ ಬಹುತೇಕ ಹೊರಾಂಗಣ ಆಟಗಳು ಇರದೇ ಇರಬಹುದು. ಹಿಂಗಾಗಿ ಎಲ್ಲಾ ಆಟಗಳಿಗೆ ಒಂದೇ ಗಂಗೋತ್ರಿ ಎನ್ನುವುದು ಸರಿಯಲ್ಲ’ ಎಂದು ನಾನು ಬರೆದೆ. ಅದಕ್ಕೆ ಮುರುಗೇಶಿ ‘ಮಂಗನಿಂದ ಮಾನವ ಎನ್ನುವ ವಿಕಾಸವಾದವನ್ನು  ನೀ ಒಪ್ಪುತ್ತೀಯಾದರೆ ಮರಕೋತಿಯಿಂದ ಮಾನವನ ಎಲ್ಲಾ ಆಟಗಳು ಬಂದಿವೆ ಎಂದು ಒಪ್ಪಲೇ ಬೇಕು. ಮಾನವ ಮಂಗನಾಗಿದ್ದಾಗ ಮರಕೋತಿ ಆಡದೇ ಐಸ್ ಹಾಕಿ ಆಡುತ್ತಿದ್ದನಾ? LOL’ ಎಂದು ಎಮೋಜಿ ಹಾಕಿದ. ನಾನು ಏನೋ ಕೆಲಸ ಬಂದದ್ದರಿಂದ ಅದನ್ನು ಅಲ್ಲಿಗೇ ಬಿಟ್ಟಿದ್ದೆ.

ಮುಂದೊಂದು ದಿನ ಮುರುಗೇಶಿ ತನ್ನ ಇಬ್ಬರೂ ಮಕ್ಕಳೂ ‘ಜಯತು ಜಯತು ಮರಕೋತಿ’ ಹಾಡು ಹಾಡುವ ವಿಡಿಯೋ ಕಳುಹಿಸಿದ್ದ. ಅದು  ‘ಮರಕೋತಿ ಭಾರತಿ’ಯ ಸಂಸ್ಥಾ ಗೀತೆ. ಹಾಡಿನ ಸಾಹಿತ್ಯವೇನೋ ಚೆನ್ನಾಗಿತ್ತಾದರೂ, ಮಲ್ಲಕಂಬದ ಪೋರಿಯರ ಗಂಟಲು ಸಂಗೀತಕ್ಕೆ ಅಷ್ಟು ತಕ್ಕುದಾಗಿರಲಿಲ್ಲ. ಆದರೆ ಮುಂದೆ ಕೆಲದಿನಗಳಲ್ಲಿ ಬಂದ ಆ ಪೋರಿಯರು ಮರಕೋತಿ ಆಟ ಆಡುವ ಗತ್ತಿನ ವಿಡಿಯೋದಲ್ಲಿ ಅವರು ಮಲ್ಲಕಂಬದಲ್ಲಿ ಸಾಧಿಸಿದ ಪ್ರಾವೀಣ್ಯ ಬಹಳ ಉಪಯೋಗಕ್ಕೆ ಬಂದದ್ದು ಎದ್ದು ಕಾಣುತ್ತಿತ್ತು.

ಮಲ್ಲಕಂಬದಲ್ಲಿ ಏನೋ ಸಾಧಿಸಬಹುದಾಗಿದ್ದ ಈ ಹುಡುಗಿಯರನ್ನು ಈ ಅವಿವೇಕಿ ಮುರುಗೇಶಿ ಮರಕೋತಿಗೆ ಕಡ್ಡಾಯ ಮಾಡಿದ್ದಾನೋ ಎಂದು ನನಗೆ ಅನುಮಾನ ಬಂತು. ಏನಾದರೂ ಆಗಲಿ ಎಂದು ಆ ಪೋರಿಯರ ಕಸರತ್ತು ನನಗೆ ಹಿಡಿಸಿದ್ದರಿಂದ ಮನಸ್ಸಿನಿಂದ ಮೆಚ್ಚಿ ಬರೆದೆ. ಅದಕ್ಕೆ ಉತ್ತರಿಸುತ್ತಾ ಮುರುಗೇಶಿ ತಾನೂ ತನ್ನ ಶ್ರೀಮತಿಯವರೂ ಮಕ್ಕಳಿಗೆ ಮರಕೋತಿ ತರಬೇತಿ ಕೊಡುತ್ತಿರುವದಾಗಿಯೂ, ತನ್ನ ಶ್ರೀಮತಿಯವರೂ ‘ಮರಕೋತಿ ಭಾರತಿ’ಯ ಮಹಿಳಾ ವಿಭಾಗವಾದ ‘ಗರತಿ ಮರಕೋತಿ’ಯ ಸದಸ್ಯರು ಎಂದು ಬರೆದ. ನಾನು ಕೋತಿ ತಾನು ಕೆಡುವುದಲ್ಲದೇ ವನವನ್ನೂ ಕೆಡಿಸುವಂತೆ ಮುರುಗೇಶಿ ತನ್ನ ಜೊತೆಗೆ ತನ್ನ ಕುಟುಂಬಕ್ಕೂ ಮರಕೋತಿಯ ಹುಚ್ಚು ಹಚ್ಚಿದ್ದಾನೆ ಎಂದು ಕೊಂಡೆ.

* * * * *

ಒಂದು ಭಾನುವಾರ ಬೆಳಿಗ್ಗೆ ಎದ್ದು ನಾನು ವಾಟ್ಸಪ್ಪು ತೆರೆದರೆ ಮುರುಗೇಶಿ ನಮ್ಮ ಕಬಡ್ಡಿ ಗುಂಪಿನ ಹೆಸರನ್ನು ‘ಕಬಡ್ಡಿ ಕೂಟʼ ದಿಂದ ‘ಮರಕೋತಿ ಮಂಡಲಿ’ ಎಂದು ಬದಲಾಯಿಸಿಬಿಟ್ಟಿದ್ದಾನೆ! ಡಿಪಿಯನ್ನೂ ಬದಲಾಯಿಸಿ, ನಾವು ಕಬಡ್ಡಿಯಲ್ಲಿ ಕಪ್ಪು ಗೆದ್ದ ಫೋಟೋದ ಬದಲಾಗಿ ಆ ಹನುಮಂತಶಾಸ್ತ್ರಿಯ ಫೋಟೋ ಹಾಕಿದ್ದಾನೆ. ನನಗೋ ಉರಿದು ಹೋಯಿತು. ಅವನಿಗೆ ಅನ್ನಕ್ಕೆ ಮಾರ್ಗ ಮಾಡಿದ್ದೇ ಕಬಡ್ಡಿ ಆಟ, ಗುಂಪಿನ ನಾವೆಲ್ಲಾ ಒಂದುಗೂಡಿದ್ದೆ ಕಬಡ್ಡಿಯಿಂದ, ಅದರ ಹೆಸರನ್ನೇ ತೆಗೆದು ಹಾಕಿದ್ದಾನೆ. ಅವನೊಬ್ಬನನ್ನು ಬಿಟ್ಟು ಉಳಿದವರ್ಯಾರೂ; ‘ಮರಕೋತಿ ಭಾರತಿ’ಯ ಸದಸ್ಯರಲ್ಲ. ಅದು ಹ್ಯಾಗೆ ಇಡೀ ಗುಂಪಿನ ಹೆಸರನ್ನು ‘ಮರಕೋತಿ ಮಂಡಲಿ’ ಎಂದು ಬದಲಾಯಿಸಿದಾ? ನನ್ನ ರಕ್ತ ಕುದ್ದು ಹೋಯಿತು.

ಆದರೂ ಮುರುಗೇಶಿಗೆ ತಿಳಿ ಹೇಳಿ, ಅವನನ್ನು ತಿಡುವದು ನನಗೆ ಸಾಧ್ಯವಿಲ್ಲ ಅಷ್ಟು ದಿನಗಳ ಅನುಭವದಿಂದ ಎನ್ನಿಸಿತು. ಅದಲ್ಲದೇ ದಿನದಿನವೂ ಈ ಮರಕೋತಿಯ ಬಗೆಗಿನ ಹಚ್ಚುಚ್ಚಾರ ವಿಷಯವನ್ನು ಓದಿದರೆ ನನ್ನದೇ ತಲೆ ಕೆಟ್ಟುಹೋಗುವದು ಎನಿಸಿತು. ಕೊನೆಗೆ ವಿಚಾರಮಾಡಿ ‘ಆಫೀಸಿನ ಕೆಲಸದ ಒತ್ತಡದಿಂದ ನಾನು ವಾಟ್ಯಾಪ್ಪ್ ಉಪಯೋಗಿಸುವದನ್ನು ನಿಲ್ಲಿಸುತ್ತಿದೇನೆ, ವಾಟ್ಸಪ್ಪ್ ನ್ನು ನನ್ನ ಫೋನಿನಿಂದ ತೆಗೆದು ಹಾಕುತ್ತಿದ್ದೇನೆ’ ಎಂದು ಗುಂಪಿಗೆ ಬರೆದು, ವಾಟ್ಸಪ್ಪನ್ನು ಫೋನಿನಿಂದ ಕಿತ್ತಾಕಿ ನಿಟ್ಟುಸಿರು ಬಿಟ್ಟೆ.

‍ಲೇಖಕರು Avadhi

May 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: