ಮಮತಾ ಅರಸೀಕೆರೆ ಓದಿದ ಬರಗೂರರ ‘ಶಬರಿ’

ಮಮತಾ ಅರಸೀಕೆರೆ

ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಶಬರಿ ಕಾದಂಬರಿ ಹಿಡಿದು ಕುಳಿತೆ. ಈ ರೀತಿಯ ಕಾದಂಬರಿ ಓದಲು ತೊಡಗುವುದೆಂದರೆ ಒಂದು ಮಾನಸಿಕ ತಯಾರಿ ಅಗತ್ಯ. ಅಲ್ಲಿನ ಭಾಷೆ, ವಿಚಾರಗಳು, ಅವುಗಳ ವಿಭಿನ್ನ ಧ್ವನಿ ಎಲ್ಲವನ್ನೂ ಗ್ರಹಿಸಿ ಓದುವುದು ಸುಲಭವಲ್ಲ. ಯಾವುದೇ ಗಂಭಿರ ಪುಸ್ತಕ ಓದುವಾಗಲೂ ತಯಾರಿ ಅಗತ್ಯವೆ. ಸಾಮಾನ್ಯ ಓದು ಆಗಬಾರದು ಅದೊಂದು ಗ್ರಹಿಕೆಯ ಓದಾಗಬೇಕು. ಕಣ್ಣಾಡಿಸುವುದಕ್ಕೂ ಒಳಗಿಳಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ.

ಆನಂತರವೂ ಅದರ ಪ್ರತಿಫಲನದ ಉದ್ದೇಶ ಈಡೇರದಿದ್ದರೆ ಅದು ನಮ್ಮ ಮಿತಿಯೇ ಹೌದು ಶಬರಿ ಕಾದಂಬರಿ ಓದುತ್ತಿದ್ದಂತೆ ಬರಗೂರರ ಆಶಯವನ್ನೆಲ್ಲ ಅರಿತಂತಾಯಿತು. ಅವರೆದುರು ಕುಳಿತು ಭಾಷಣವನ್ನೇ ಕೇಳಿದಂತಾಯಿತು. ಕಾದಂಬರಿಯ ನೆಪದಲ್ಲಿ ಅವರು ತಾವು ಹೇಳಬೇಕಾದದ್ದನ್ನ ಹೇಳಿಬಿಟ್ಟಿದ್ದಾರೆ. ಸಮ ಸಮಾಜದ ಆಶಯ, ವ್ಯವಸ್ಥೆ ಹಾಗೂ ವಿಡಂಬನೆ, ಶೋಷಣೆ, ಸುಧಾರಣೆ, ಅಧಿಕಾರಶಾಹಿ, ಸಂಘರ್ಷ-ತಾಕಲಾಟ, ಹೋರಾಟ ಹಾಗೂ ಅದರಲ್ಲಿ ತೊಡಗುವವರ ಸಂಕಟ ಸಮಸ್ಯೆ, ಅವುಗಳಿಂದಾಗುವ ಪರಿಣಾಮಗಳು, ಮೂಢನಂಬಿಕೆ, ಭೂ ಹೋರಾಟ, ಪ್ರೀತಿ ಪ್ರೇಮ, ಸಾಕ್ಷರತೆ, ಪ್ರಗತಿಗಾಮಿಗಳು ಅವರ ಉದ್ದೇಶಗಳು, ಹೋರಾಟದ ಫಲಿತಾಂಶಗಳು, ಎಲ್ಲವನ್ನೂ ಇಷ್ಟಿಷ್ಟೇ ಆದರೆ ರುಚಿಕಟ್ಟಾಗಿ ಉಣಬಡಿಸಿದ್ದಾರೆ.

ಭಯೋತ್ಪಾದಕತೆ, ಯುದ್ಧ, ಜಾತಿ ಕೋಮು, ಧರ್ಮ, ಮೊದಲಾದವುಗಳ ಬಗ್ಗೆ ಸ್ಪಷ್ಟತೆ ನೀಡಿದ್ದಾರೆ. ಎಲ್ಲಕಿಂತ ಇಷ್ಟವಾದದ್ದು ವ್ಯವಸ್ಥೆಯನ್ನು ವ್ಯಾಖ್ಯಾನಿಸಿದ್ದರ ಬಗೆ. ವ್ಯವಸ್ಥೆ ಸಂಚಾರಿ ಭಾವದ ರೀತಿಯಲ್ಲ. ಸ್ಥಿರಭಾವದ್ದು. ಪರವಿರೋಧದ ಅಂಗಗಳೂ ವ್ಯವಸ್ಥೆಯಡಿಯಲ್ಲಿ ಬರುತ್ತವೆ ಅನ್ನುವುದು. ಶಬರಿ ಕಾದಂಬರಿಯ ನಾಯಕಿ ರಾಮಾಯಣದ ಶಬರಿಯಲ್ಲ, ಆಕೆ ಇಲ್ಲಿ ಬುಡಕಟ್ಟು ಸಮುದಾಯದವಳು. ಶಬರಿಯಾಗದೇ ಸಂಘರ್ಷ ಸಾಧ್ಯವಿಲ್ಲ ಎನ್ನುವ ಮಾತುಗಳ ಮೂಲಕ ಪುರಾಣದ ಶಬರಿಯ ಬದುಕಿನ ರೀತಿ, ಕಾಯುವಿಕೆಯ ಸಂಗತಿಯನ್ನ ಇಲ್ಲಿ ರೂಪಕವಾಗಿ ಬಳಸಿಕೊಳ್ಳಲಾಗಿದೆ.

ಶಬರಿ ಎಂಬ ಹೆಣ್ಣುಮಗಳದು ಇಲ್ಲಿ ಗಟ್ಟಿ ಪಾತ್ರ, ಆಕೆಯ ಮಾರ್ಗದರ್ಶನದಲ್ಲೂ ಆಕೆಯ ಸಮುದಾಯ ಮುನ್ನಡೆಯುತ್ತದೆ, ಮತ್ತು ಹೆಣ್ಣುಮಗಳೊಬ್ಬಳನ್ನು ಮುಗ್ಧಳಾಗಿ ಚಿತ್ರಿಸಿರುವಂತೆಯೇ, ಆಲೋಚನಾಪರಳನ್ನಾಗಿ ಮಾರ್ಪಡಿಸುವುದು, ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಹೆಣ್ಣಮಗಳಿಗೆ ಕಾದಂಬರಿ ನೀಡುವ ಪ್ರಾಶಸ್ತ್ಯ ಹಾಗೂ ಲೇಖಕರ ನಿಲುವು.  ಬುಡಕಟ್ಟು ಸಮುದಾಯದ ಹಟ್ಟಿಯ ಜನರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಅಧಿಕಾರಶಾಹಿ ಮಾಡುವ ಪ್ರಯತ್ನಗಳು, ಅವರ ಕೈಗೆ ಅನಿವಾರ್ಯವಾಗಿ ಸಿಲುಕಿ ತಾವು ನರಳುತ್ತಿದ್ದೇವೆ ಎಂಬುದನ್ನೂ ಅರಿಯದ ಅಮಾಯಕ ಜನ.

ಕನಸೂ ಕೂಡ ಬೀಳುವುದಿಲ್ಲ ಅನ್ನುತ್ತಲೇ ಬೇರೆಯವರ ಜಮೀನಿನಲ್ಲಿ ದುಡಿದು ತಮ್ಮ ಹೊಟ್ಟೆ ಹೊರೆದುಕೊಳ್ಳುವ, ದೊಡ್ಡವರ ಆಶ್ರಯದಲ್ಲೇ ತಮ್ಮೆಲ್ಲ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಮಂದಿ ಈ ಹಟ್ಟಿಯಲ್ಲಿದ್ದಾರೆ. ಅಲ್ಲೊಂದು ವಿಚಿತ್ರ ರಿವಾಜಿದೆ. ಹಟ್ಟಿಯ ಯಾವುದೇ ಹೆಣ್ಣುಮಗಳ ಮದುವೆಯಾದರೂ ಮೊದಲ ರಾತ್ರಿಯನ್ನು ದೇವಸ್ಥಾನದಲ್ಲಿ ದೇವರೊಂದಿಗೆ ಕಳೆಯಬೇಕೆಂದು ನಂಬಿಸಿ ವ್ಯವಸ್ಥಿತವಾಗಿ ಸಂಚು ರೂಪಿಸಿ ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳುತ್ತಿದ್ದ ದುರ್ಮಾರ್ಗರೇ ಹುಟ್ಟು ಹಾಕಿದ ಪದ್ದತಿಯಿತ್ತು. ಚಂದ್ರು ಶಬರಿ ಪ್ರೀತಿಸಿದ ಹುಡುಗ. ಅವ ಹಟ್ಟಿಯಲ್ಲಿ ಬದಲಾವಣೆಯ ಆಶಯ ಬಯಸುವ ಬಿಸಿರಕ್ತದವ. ಶಬರಿಯ ಮದುವೆ ಚಂದ್ರನೊಂದಿಗೆ ಆದಾಗ ಈ ದುರಾಚರಣೆಗೆ ಆಕೆ ಬಲಿಯಾಗುವುದನ್ನು ತಪ್ಪಿಸಲು ಹೋದ ಆತ ದೇವಸ್ಥಾನದ ಬಾಗಿಲಲ್ಲೆ ಸಾವನ್ನಪ್ಪಿರುತ್ತಾನೆ.

ದೇವರ ಶಾಪಕ್ಕೆ ಗುರಿಯಾಗಿ ಸತ್ತನೆಂದು ಪ್ರಚಾರ ಮಾಡುತ್ತಾ ದುರುಳರು ತಮ್ಮ ಸಮರ್ಥನೆಗೆ ಮತ್ತೊಂದು ಪುರಾವೆ ಒದಗಿಸುತ್ತಾರೆ. ಚಂದ್ರನ ಮದುವೆಗೆ ಬಾರದೇ ತಪ್ಪಿಸಿಕೊಂಡಿದ್ದ, ಹಟ್ಟಿಯ ಬಗ್ಗೆ ಚಂದ್ರನಿಂದ ಕೇಳಿ ಅರಿತಿದ್ದ ಸೂರ್ಯ ಈ ಘಟನೆ ನಡೆದ ನಂತರ ಹಟ್ಟಿಗೆ ಕಾಲಿಡುತ್ತಾನೆ. ಅಲ್ಲಿನ ಪರಿಸರವನ್ನು ಸಮಗ್ರ ಪರಿಶೀಲಿಸಿ ಬದಲಾವಣೆಗೆ ಕೈ ಹಚ್ಚುತ್ತಾನೆ. ನಿಧನಿಧಾನವಾಗಿ ಅವರಲ್ಲಿಯೇ ಬೆರೆತು ಅವರಂತೆಯೇ ಆಗಿ ಹೋಗಿ ಎಲ್ಲರ ವಿಶ್ವಾಸಗಳಿಸಿ ಅವರಲ್ಲಿ ಅಕ್ಷರಜ್ಞಾನ ತುಂಬುತ್ತಾ, ಮೌಢ್ಯತೆಯನ್ನು ಅಳಿಸುವ ಪ್ರಯತ್ನ ಮಾಡುತ್ತಾ, ಅವರ ದುಡಿಮೆಯ ಪಾಲಾಗಿ ಬರಬೇಕಿದ್ದ ಭೂಮಿಯ ಒಡೆತನವನ್ನು ದಕ್ಕಿಸಲು ಹೋರಾಡುತ್ತಾ ಈ ಎಲ್ಲಕ್ರಿಯೆಗಳಲ್ಲಿ ಹಟ್ಟಿ ಮಂದಿಯನ್ನು ತೊಡಗಿಸುತ್ತಾ ಅರಿವಿನ ಕಿಡಿಯನ್ನು ಹೊತ್ತಿಸಲು ತೀವ್ರ ಪ್ರಯತ್ನ ಮಾಡುತ್ತಾನೆ.

ಆ ಮಂದಿಯೂ ಧೈರ್ಯ, ಉತ್ಸಾಹದಿಂದ ಮುನ್ನುಗ್ಗಿ, ಇವನ ಪ್ರಾಮಾಣಿಕತೆಯನ್ನು ಗುರುತಿಸಿ ಸ್ಪಂದಿಸುತ್ತಾರೆ. ಈ ನಡುವೆ ಅವನಿಗೆ ಸಹಾಯಕನಾಗಿ ಬರುವ ಗೆಳೆಯ ನವಾಬ ಊರಿನ ಪೂಜಾರಪ್ಪನ ಮಗಳು ಗೌರಿಯಲ್ಲೂ , ಶಬರಿ ಸೂರ್ಯನಲ್ಲೂ ಪ್ರೀತಿಗೆ ಬೀಳುತ್ತಾರೆ. ಧರ್ಮ ವ್ಯತ್ಯಾಸದ ವಿಷ ತುಂಬಲು ಪ್ರಯತ್ನಿಸಿದ ದೊಡ್ಡವರ ಹುನ್ನಾರಕ್ಕೆ ಬೀಳದೆ, ಯಾವುದೇ ಅಳುಕಿಲ್ಲದೆ ಹಟ್ಟಿ ಜನ ಗೌರಿಯನ್ನು ನವಾಬನೊಂದಿಗೆ ವಿವಾಹ ಮಾಡಿಕೊಟ್ಟರೆ, ಸೂರ್ಯನದೊಂದು ಅಂಶ ಶಬರಿಯಲ್ಲಿ ನೆಲೆಗೊಳ್ಳುತ್ತದೆ. ಮದುವೆಯಾಗುವ ಇಚ್ಛೆಯಿದ್ದರೂ ಸೂರ್ಯ ಈಗಾಗಲೇ ಸಂಚಿನಿಂದ ಕೊಲೆ ಕೇಸೊಂದರಲ್ಲಿ ಸಿಕ್ಕಿಕೊಂಡಿರುತ್ತಾನೆ. ಭೂ ಹೋರಾಟದ ಸಂದರ್ಭದಲ್ಲಿ ಆತನನ್ನು ಜೈಲಿಗೆ ಹಾಕಿ ಅಲ್ಲಿಯೇ ಕೊಂದು ಮುಗಿಸಿ ನೇಣು ಹಾಕಿಕೊಂಡು ಸತ್ತನೆಂದು ಸುದ್ದಿ ಹಬ್ಬಿಸಲಾಗುತ್ತದೆ. ಊರಿನ ಸರ್ಕಾರಿ ಜಮೀನೊಂದನ್ನು ಬಹುರಾಷ್ಟ್ರೀಯ ಕಂಪನಿಗಳ ದಾಳಿಯಿಂದ ತಪ್ಪಿಸಲು, ಊರಿನ ದೊಡ್ಡವರ, ಜೋಯಿಸನ ಅಟ್ಟಹಾಸವನ್ನು ಮಣಿಸಲು, ಕ್ಷೇತ್ರದ ಎಂಎಲ್‍ಎಯವರ ಲಾಭಕೋರತನವನ್ನ ಮಟ್ಟಹಾಕುವ ಸಲುವಾಗಿ ದನಿಯೆತ್ತಿದ್ದ ಸೂರ್ಯ ಅನ್ಯಾಯವಾಗಿ ಅಸ್ತಂಗತನಾಗಬೇಕಾಗುತ್ತದೆ.

ಇತ್ತ ಅವನಿಗಾಗಿ ಕಾದು ಸೋತ ಶಬರಿ ಪುರಾಣದ ಶಬರಿಯ ಹಾಗೇ ಕಾಯುವಿಕೆಯನ್ನು ಮುಂದುವರೆಸಿದರೂ ನಿರೀಕ್ಷಿತ ಫಲಿತಾಂಶ ಕಾಣದೆ ಸೋಲಬೇಕಾಗುತ್ತದೆ. ಅವಳ ಬದುಕಿನಲ್ಲಿ ಹಣಕುವ ಸೂರ್ಯ-ಚಂದ್ರರು ಹಟ್ಟಿಯಲ್ಲಿ ಮಿಣುಕು ದೀಪದಷ್ಟು ಬೆಳಕು ತಂದರೂ, ವೈಯಕ್ತಿಕವಾಗಿ ಬೆಳಕು ಕಾಣಿಸದೇ ಶಾಶ್ವತವಾಗಿ ಮರೆಯಾಗುವ ಸ್ಥಿತಿಯನ್ನು ಸೂಚ್ಯವಾಗಿ ಕಾಣಿಸಲಾಗಿದೆ. ಆದರೆ ಅಲ್ಲಿಯವರೆಗೆ ಶಬರಿ ಮುಗ್ಧಳಂತೆ ಕಂಡರೂ ತನ್ನ ಅರಿವನ್ನು ಜಾಗೃತಗೊಳಿಸಿಕೊಂಡು ಸೂರ್ಯನೊಂದಿಗೆ ಹೋರಾಡುತ್ತಾಳೆ. ತನ್ನವರ ಸುಧಾರಣೆ ಶ್ರೇಯಸ್ಸಿಗಾಗಿ ಸೆಣಸುತ್ತಾಳೆ. ಶಾಲೆ ಕಟ್ಟುವಾಗಿನ ಸಂದರ್ಭ, ನಾಯಕ ನಾಯಕಿಯರ ಸಣ್ಣಪುಟ್ಟ ಪ್ರೀತಿ ಪ್ರಸಂಗಗಳು, ಅರಿವನ್ನು ಹೆಚ್ಚಿಸುವಾಗಿನ ಘಟನೆಗಳು ಕಾದಂಬರಿಯಲ್ಲಿನ ವಿಷಾದವನ್ನ ಕಡಿಮೆಗೊಳಿಸುತ್ತವೆ. ಶಬರಿ ಈಗಾಗಲೇ ಸಿನೆಮಾವೂ ಆಗಿದೆ. ಸಿನೆಮಾಗೆ ಬೇಕಾದ ಅಂಶಗಳು ಬರವಣಿಗೆಗೆ ಹೆಚ್ಚು ಅಗತ್ಯವಿಲ್ಲವೇನೊ ಅನ್ನುವಂತೆ ಅಧಿಕ ಉದ್ವೇಗಕ್ಕೆ ಅವಕಾಶವಿಲ್ಲದ, ಸಿಡಿಯುವ ಸಂದರ್ಭ ಬಂದರೂ ಹೆಚ್ಚು ಆರ್ಭಟದ ಚಿತ್ರಣ ಕಾಣದಂತಹ ರೂಪಣೆಗಳನ್ನು ನಿರೂಪಿಸಲಾಗಿ ಅಂತಹ ಪರಿಸ್ಥಿತಿಯಲ್ಲಿ ಘಟನೆಗಳೇ ಆ ವಾತಾವರಣವನ್ನು ಅದೇ ತೀವ್ರತೆಯಲ್ಲಿ ಕಾಣಿಸುವಂತೆ ಚಿತ್ರಿಸಲಾಗಿದೆ. ಕಾದಂರಿಯ ಅಂತ್ಯ ಮನಕಲಕುವಂತದು.

ತನ್ನ ತಂದೆಯ ನಂತರ ಸೂರ್ಯನ ಸಾವು ತಂದ ಆಘಾತದ ನಂತರವೂ ಇದು ಅಂತ್ಯವಲ್ಲ ಆರಂಭ ಎನ್ನುವಂತೆ ಶಬರಿ ಸೂರ್ಯನ ಚೀಲವನ್ನು ಹೆಗಲಿಗೆ ಹಾಕಿಕೊಂಡು ಹೊರಡುತ್ತಾಳೆ. ಅಕ್ಕನ ವಚನದೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ. ಬಹಳ ಸಶಕ್ತ ಹಾಗೂ ಪರಿಣಾಮಕಾರಿ ಸಾಲುಗಳು ಇಲ್ಲಿ ಗಮನ ಸೆಳೆದವು. ನಿರಾಕಾರ ಆಕಾರವಾಗಲು ನಡೆಸುವ ಸೆಣಸೇ ಒಂದು ಚರಿತ್ರೆ. ಹೊರಗಿನ ಮಾತು ಮಳೆ ಗಾಳಿಗೆ ಸಿಗುತ್ತವೆ. ಒಳಗಿನದ್ದು ಮೌನದಲ್ಲೆ ಗಟ್ಟಿಯಾಗುತ್ತವೆ. ಕ್ರಿಯೆಯಿಲ್ಲದ ಕಾಯುವಿಕೆ ಅಲ್ಲ, ಒಳ್ಳೆದಿನ ಬರುತ್ತದೆ ಅನ್ನೋ ಆಶಾವಾದದ ಕಾಯುವಿಕೆ ಬಾಯಿಪಾಠ ಮಾಡಿದ್ದನ್ನೇ ಪದೇಪದೇ ಹೇಳ್ತಾ ಮಂತ್ರವಾದಿಗಳಾಗಬಾರದು ಕಾಲನ ಕಂತುಗಳಲ್ಲಿ ಬಂದು ಕಂಗೆಡಿಸುವ ಒಂಟಿತನ ಬಾಳಿನ ಬಂಜೆತನವಾಗಬಾರದು ಪಂಚೇಂದ್ರಿಯಗಳ ಮೂಲಕ ಪೊರೆಕಳಚಿಕೊಂಡು ಸ್ವತಂತ್ರವಾಗುವುದೇ ಪ್ರಥಮ ಹೋರಾಟ ವಿವೇಕ ಔಚಿತ್ಯ ಉಳಿಸಿಕೊಂಡರೆ ಪ್ರೀತಿ ಹೋರಾಟದ ವಿರೋಧಿ ಅಲ್ಲ ಸಮಾಜ ಬದಲಾವಣೆ, ಪರಿಸರ ಪ್ರಜ್ಞೆ ಬೇರೆ ಬೇರೆ ದಾರಿ ಹಿಡಿದಿದೆ. -ಹೀಗೆ, ದಾಖಲಿಸುತ್ತಾ ಹೋದರೆ ಇಡೀ ಪುಸ್ತಕದ ವ್ಯಾಖ್ಯಾನಗಳನ್ನೇ ದಾಖಲಿಸಬೇಕಾದೀತು. ಶಬರಿ ಇಲ್ಲಿ ಸ್ತ್ರೀ ಸ್ವಾತಂತ್ರ್ಯದ ಪ್ರತೀಕವೂ, ಹೋರಾಟದ ಹಾದಿಯೂ ಅಂತಃಕರಣದ ಪ್ರತಿನಿಧಿಯೂ, ಬಿಡುಗಡೆಯ ಹಾದಿಯೂ ಆಗಿದ್ದಾಳೆ. ಕಾದಂಬರಿ ಈ ಒಟ್ಟು ಆಶಯದಲ್ಲಿ ಕಟ್ಟಿಕೊಳ್ಳುತ್ತಾ ಸಾಗಿದೆ.

‍ಲೇಖಕರು nalike

May 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. NV Vasudeva Sharma

    ʼಶಬರಿʼಯನ್ನು ಸೊಗಸಾಗಿ ಪರಿಚಯಿಸಿದ್ದೀರಿ ಮಮತಾ. ಭಾರತದ ಸಾಮಾಜಿಕ ಮತ್ತು ರಾಜಕೀಯ ಅದರ ಸುತ್ತಲೂ ಗಿರಕಿ ಹೊಡೆಯುವ ಆರ್ಥಿಕ ಪರಿಸ್ಥಿತಿಗಳು, ಅಲ್ಲಿನ ಮೋಸ, ವಂಚನೆ, ಪಟ್ಟಭದ್ರ ಹಿತಾಸಕ್ತಿಗಳ ಮೇಲ್ಗೈ, ಇಷ್ಟೆಲ್ಲದರ ನಡುವೆಯೂ ಅನ್ಯಾಯವಾದಾಗ ಸಿಡಿದೇಳುವ, ಪ್ರಶ್ನಿಸುವ ಮನಸ್ಥಿತಿಗಳನ್ನು ಪರಿಚಯಿಸುವ ʼಶಬರಿʼ ಸೊಗಸಾಗಿದೆ. ಪ್ರಾಯಶಃ ಇಂತಹ ಪರಿಸ್ಥಿತಿ ಜಗತ್ತಿನ ಎಲ್ಲೆಡೆಯೂ ತೀರಾ ಇತ್ತೀಚಿನವರೆಗೂ ಇದ್ದುದು, ಇರುವುದನ್ನು ವಿವಿಧ ಸಾಹಿತ್ಯ ಕೃತಿಗಳು ದಾಖಲಿಸಿವೆ. ಅವುಗಳಲ್ಲಿ ನನಗೆ ಪ್ರಮುಖವಾಗಿ ಕಾಣುವುದು, ನಿರಂಜನರ ʼಮೃತ್ಯುಂಜಯʼ. ಹೋರಾಟವನ್ನು ಹೊಸಕಿ ಹಾಕಿಬಿಟ್ಟೆವು ಎಂದು ಆಡಳಿತ ವರ್ಗ ಅಥವಾ ಅಧಿಕಾರಶಾಹಿ ಅಂದುಕೊಳ್ಳುತ್ತದೆ. ಆದರೆ ಹೋರಾಟದ ಕಿಡಿ ಸದಾ ಕಾಲಕ್ಕೂ ಇರುತ್ತದೆ. ಸೊಗಸಾಗಿ ಪುಸ್ತಕ ಪರಿಚಯಿಸಿದ್ದೀರಿ. ಅಭಿನಂದನೆಗಳು – ತಮಗೆ, ಇದನ್ನು ಪ್ರಕಟಿಸಿದ ಅವಧಿಗೆ ಮತ್ತು ಕಾದಂಬರಿ ಕೊಟ್ಟಿರುವ ಪ್ರೊ. ಬರಗೂರು ರಾಮಚಂದ್ರಪ್ಪನವರಿಗೆ.

    ಮೂರು ತಿಂಗಳ ಹಿಂದೆ ನಾನು ಮತ್ತು ನನ್ನ ಇಬ್ಬರು ಸಹೋದ್ಯೋಗಿಗಳು ತುಮಕೂರು ಮಾರ್ಗವಾಗಿ ಹೊರಟಿದ್ದೆವು. ಒಂದು ಯುವ ಬಳಗದೊಡನೆ ಮಕ್ಕಳ ಹಕ್ಕುಗಳ ತರಬೇತಿ ನಮ್ಮ ಉದ್ದೇಶವಾಗಿತ್ತು. ಹಾದಿಯಲ್ಲಿ ತುಮಕೂರಿಗೆ ಮೊದಲು ಒಂದು ಹೊಟೆಲ್‌ನಲ್ಲಿ ಬೆಳಗಿನ ಉಪಹಾರಕ್ಕಾಗಿ ನಿಂತೆವು. ನಾವು ಒಂದು ಟೇಬಲ್‌ ಎದುರು ಕುಳಿತ ಮೇಲೆ ಪಕ್ಕದ ಟೇಬಲ್‌ನಲ್ಲಿ ಶ್ರೀ ಬರಗೂರರು ಕಂಡರು. ನಾನು ಎದ್ದು ಹೋಗಿ ನಮಸ್ಕರಿಸಿ, ʼತಮಗೆ ನನ್ನ ಪರಿಚಯವಿರುವುದಿಲ್ಲ. ನಿಮ್ಮ ಕೃತಿಗಳ ಮೂಲಕ ನೀವು ನನಗೆ ಗೊತ್ತುʼ ಎಂದು ಪರಿಚಯ ಮಾಡಿಕೊಂಡೆ. ಅವರು ಕುಳಿತದ್ದೆಡೆಯಿಂದ ಎದ್ದು ನಮಸ್ಕರಿಸಿ ನಮ್ಮ ಬಗ್ಗೆ ಕೇಳಿದರು. ನಮ್ಮ ಕೆಲಸದ ಕ್ಷೇತ್ರ ʼಮಕ್ಕಳು, ಮಕ್ಕಳ ಹಕ್ಕುʼ ಎಂದು ತಿಳಿದು ಸಂತೋಷ ಪಟ್ಟರು. ನೆನಪಾಯಿತು ಸೇರಿಸಿದ್ದೇನೆ.

    ಪ್ರತಿಕ್ರಿಯೆ
  2. Kotresh T A M Kotri

    ಓದಬೇಕೆನಿಸಿದೆ..
    ಪುಸ್ತಕ ಪರಿಚಯ ಚೆನ್ನಾಗಿದೆ

    ಪ್ರತಿಕ್ರಿಯೆ
  3. Girijashastry

    ಶಬರಿ ಓದಬೇಕೆನಿಸಿದೆ. ಚೆಂದದ ಪರಿಚಯ

    ಪ್ರತಿಕ್ರಿಯೆ
  4. KALLESH KUMBAR

    ಮಮತಾ ಅವರು ‘ಶಬರಿ’ ಕಾದಂಬರಿಯ ಹೊಳಹುಗಳನ್ನು ಪರಿಶೋಧಿಸುತ್ತಲೇ, ಅದರ ಸಾರವನ್ನೂ ಸಹ ಈ ಲೇಖನದಲ್ಲಿ ಹಿಡಿದಿಟ್ಟಿದ್ದಾರೆ. ಇಲ್ಲಿ, ಶಬರಿ ಕಾದಂಬರಿಯ ಕೊನೆಯ ನಂತರವೂ ಹೋರಾಡುತ್ತ, ಅದರ ಫಲದ ನಿರೀಕ್ಷೆಯಲ್ಲಿ ಕಾಯುವ ಕ್ರಿಯೆಗೆ ತನ್ನನ್ನು ತಾನು ಅಳವಡಿಸಿಕೊಳ್ಳುವುದು ಗೆಲುವಿನ ಆಶಾವಾದವಲ್ಲದೇ ಮತ್ತೇನೂ ಅಲ್ಲ! ಲೇಖಕಿಗೆ ಅಭಿನಂದನೆಗಳು..
    # ಕಲ್ಲೇಶ್ ಕುಂಬಾರ್, ಹಾರೂಗೇರಿ

    ಪ್ರತಿಕ್ರಿಯೆ
  5. ಸುಜಾತ ಲಕ್ಷ್ಮೀಪುರ

    ಶಬರಿ ಕಾದಂಬರಿಯ ಒಳತಿರುಳನ್ನು ಚಂದಗೆ ಹಿಡಿದಿದ್ದೀರ ಮಮತಾ.ವಿಮರ್ಶಾತ್ಮಕ ಲೇಖನ. ಓದುತ್ತಲೇ ಕಾದಂಬರಿಯ ಮುಖ್ಯಪಾತ್ರಗಳ ಮೂಲಕ ಒಟ್ಟು ಕತೆಯ ಗ್ರಹಿಕೆ ಸಾಧ್ಯವಾಗುವಂತಿದೆ.ಪುರಾಣದಲ್ಲಿನ ಕಾಯುವ ಶಬರಿಗೂ ಈ ಶಬರಿಗೂ ನಡುವೆ ಇರುವ ಸೂಕ್ಷ್ಮವಾದ ಎಳೆ,ಕಾದಂಬರಿ ಶಬರಿಯು ಅಂತ್ಯದಲ್ಲಿ ಕಾದು,ಮಾಗಿ,ಒಳಗೆ ಗಟ್ಟಿಯಾಗಿ,ದಿಟ್ಡವಾಗಿ ಹೆಜ್ಜೆ ಇಡುವ ಮುಕ್ತಾಯ ದಲ್ಲಿ ಹೊಸ ಆರಂಭ ಎನ್ನುವ ಮಾತು ಸತ್ಯ ಅನ್ನಿಸುತ್ತದೆ.ಅರ್ಥಪೂರ್ಣ ವಿಮರ್ಶಾ ಬರಹವಿದೆ.ಕಾದಂಬರಿಗೆ ಕನ್ನಡಿ ಹಿಡಿದಂತಿದೆ.

    ಪ್ರತಿಕ್ರಿಯೆ
  6. Prof BASAVARAJ donur

    ಶಬರಿಯ ಮರು ಓದಿಗೆ ನಿಮ್ಮ ಮಾತುಗಳು ಪ್ರೇರಕವಾಗಿವೆ. ಈ ಕಾದಂಬರಿಯ ಬಗ್ಗೆ ಇನ್ನಷ್ಟು ವಿವರ ಒದಗಿಸಬಹುದು. ನಾನು ಈ ಕಾದಂಬರಿಯನ್ನು ಕನಿಷ್ಠ ಐದು ಬಾರಿ ಓದಿದ್ದೇನೆ. ಕಾರಣ ಅಂದರೆ ಇದನ್ನು ಇಂಗ್ಲಿಷ್ ಗೆ ಅನುವಾದ ಮಾಡಬೇಕಾಗಿತ್ತು. ಅರವಿಂದ ಮಿತ್ರ ನನ್ನ ಜೊತೆ ಕೈಜೋಡಿಸಿದರು.
    ಇಂದಿರಾ ಗಾಂಧಿ ರಾಷ್ಟ್ರೀಯ ಆದಿವಾಸಿ ವಿವಿಯ ವಿಶ್ರಾಂತ ಕುಲಪತಿ ತೇಜಸ್ವಿ ಕಟ್ಟೀಮನಿಯವರು ಈ ಕಾದಂಬರಿಯನ್ನು ಇಂಗ್ಲಿಷ್ ಗೆ ಅನುವಾದಿಸಲು ನನಗೆ ಸೂಚಿಸಿದರು. ಆದಿವಾಸಿ ವಿವಿಯಿಂದ ಇದನ್ನು ಪ್ರಕಟಿಸುವ ಯೋಜನೆ ಅವರು ಹಾಕಿಕೊಂಡಿದ್ದರು. ಇದನ್ನು ಅನುವಾದಿಸಿ ಮುದ್ರಣಕ್ಕೆ ಕಳಿಸಲು ಒಂದು ವರ್ಷ ಬೇಕಾಯಿತು.
    ಬರಗೂರರ ಕಾದಂಬರಿಯನ್ನು ಇಂಗ್ಲಿಷ್ ಓದುಗರು ಸ್ವೀಕರಿಸಿದ್ದಾರೆ. ಕರ್ನಾಟಕದ ಎರಡು ವಿಶ್ವವಿದ್ಯಾಲಯಗಳಲ್ಲಿ ಇದು ಪಠ್ಯವಾಗಿದೆ.
    ನಿಮಗೆ ಅಭಿನಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: