ಮನ ಸೆಳೆವ ‘ಪೂರ್ವಿಯ‌ ವಿಮಾನಯಾನ’

ಕೆ ಎನ್‌ ಮಹಾಬಲ

ಶ್ರೀ ನಾಗರಾಜ ಶೆಟ್ಟಿಯವರದು ಶಿಶುಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತವಾದ ಹೆಸರು. ಇದುವರೆಗೆ ಹಲವಾರು ಶಿಶುಸಾಹಿತ್ಯಗಳ ಸಂಗ್ರಹವನ್ನು ಹೊರತಂದಿದ್ದು ಇತ್ತೀಚೆಗೆ ‘ಪೂರ್ವಿಯ ವಿಮಾನಯಾನ‌’ ಎಂಬ ಮಕ್ಕಳ ಪದ್ಯಗಳ ಸಂಗ್ರಹವನ್ನು ಪ್ರಕಟಿಸಿದ್ದಾರೆ.

 25 ಪದ್ಯಗಳ ಈ ಸಂಗ್ರಹದಲ್ಲಿ ಮೊದಲ 12 ಪದ್ಯಗಳು ಇತರ ವಿಷಯಗಳನ್ನು ಕುರಿತದ್ದಾದರೆ ಕೊನೆಯ 13 ತಮ್ಮೆರಡು ವರ್ಷದ  ಮೊಮ್ಮಗಳು ಪೂರ್ವಿಯ ಬಾಲಲೀಲೆಗಳು, ಆಟ, ಊಟ ಮುಂತಾದ ವಿಷಯಗಳ ಬಗ್ಗೆ ಬರೆದದ್ದು. ಆದಾಗ್ಯೂ ಈ ಪದ್ಯಗಳು  ಕೂಡ ಎಲ್ಲ ಮಕ್ಕಳಿಗೂ ಅನ್ವಯಿಸಬಹುದಾದ ವಿಷಯಗಳೇ.

ವಸ್ತು ವೈವಿಧ್ಯದಲ್ಲಿ ಹೊಸತನವಿದೆ. ವಿಮಾನಯಾನ, ವಾಟ್ಸಪ್‌, ಗೂಗಲ್‌, ಪರಿಸರ ಕಾಳಜಿ, ಕಾರಿನ ಪಯಣ ಮುಂತಾದುವು ಇಲ್ಲಿ ಪದ್ಯದ ರೂಪ ಪಡೆದು ಮುದಗೊಳಿಸುತ್ತವೆ.

ಇಲ್ಲಿನ ಪದ್ಯಗಳು ಮಕ್ಕಳ ಸಾಹಿತ್ಯಕ್ಕೆ ಹೊಂದಿಕೊಳ್ಳುವಂತೆ ಕುಣಿತದ ಲಯ ಹಾಗೂ ಪ್ರಾಸಗಳನ್ನು ಹೊಂದಿವೆ. ಕಾರಿನಲ್ಲಿ ಪಾರು ಪದ್ಯ ಆರಂಭವಾಗುವುದು ಹೀಗೆ:

‘ನನ್ನ ಹೆಸರು ಪಾರು
ಫೋರ್ಡು ನನ್ನ ಕಾರು
ಕಾರಿನೊಳಗೆ ಕುಳಿತು
ನನ್ನ ಕಾರು ಬಾರು’

‘ಪರಿಸರವೆಂದರೆ ಪದ್ಯ’ ನೀಡುವ ಸಂದೇಶ ಬಹಳ ಉಪಯುಕ್ತವಾಗಿದೆ.

‘ಸಹಕರಿಸುತ್ತ ಒಬ್ಬರಿಗೊಬ್ಬರು
ಉಳಿಸಲೆ ಬೇಕು ಸಮತೋಲ
ಪರಿಸರವನ್ನು ಮಲಿನಗೊಳಿಸದೆ
ಇದ್ದರೆ ಉಳಿವುದು ಜೀವಜಾಲ’

ಒಂದು ನರಿ ದಿನಸಿ ವ್ಯಾಪಾರ ಬಿಟ್ಟು ಹಣ್ಣಿನ ವ್ಯಾಪಾರಕ್ಕೆ ತೊಡಗಿ ನಷ್ಟ ಹೊಂದುವ ಚಿತ್ರ ಸೊಗಸಾಗಿದೆ. ‘ಇರುವುದ ಬಿಟ್ಟು ಇರದುದಕಾಶಿಸಿ ಅನುಭವಿಸಿದನು ಅತಿ ಕಷ್ಟ’ ಎಂಬ ಮಾತು ಅನುಭವವಿಲ್ಲದ ಕ್ಷೇತ್ರಕ್ಕೆ ಕಾಲಿರಿಸಿ ಕೈಸುಟ್ಟುಕೊಳ್ಳುವ ಪ್ರತಿಯೊಬ್ಬರಿಗೂ ಅನ್ವಯಿಸುವಂತಿದೆ.

ಎರಡನೆಯ ಭಾಗದ ಪೂರ್ವಿಯ ಪದ್ಯಗಳು ಭಾಗದಲ್ಲಿ ತಮ್ಮ ಮೊಮ್ಮಗಳು ಪೂರ್ವಿಯ ನೆಪದಲ್ಲಿ ಲೇಖಕರು ಹೊಸದೊಂದು ಶಿಶುಲೋಕಕ್ಕೆ ಕೊಂಡೊಯ್ಯುತ್ತಾರೆ. ಮಗುವಿನ ತುಂಟತನ,ಅಲಂಕರಿಸುವ ತಾಯಿಯ ಆನಂದ, ಆಟ, ಪಾಠ, ಅವಳ ಇಷ್ಟದ ತಿಂಡಿ, ತಿನಿಸು, ಮಗುವನ್ನು ಕುರಿತ ಲಾಲಿ ಹಾಡು ಇಂಥ ಬಾಲ‌ ಸಹಜವಾದ ಭಾವನೆಗಳಿಂದ ಆಹ್ಲಾದ ಉಂಟುಮಾಡುತ್ತದೆ. ಮಗುವಿನ ಬಾಲ ಲೀಲೆಗಳಿಂದ ಪುಳಕಿತರಾದ ಲೇಖಕರು ಉದ್ಗರಿಸುವ ಬಗೆ ಹೀಗೆ:

‘ಬಂದಿರುವರು ದೇವರು ಮನೆಗೆ
ಈ ಮುದ್ದು ರೂಪದಲ್ಲಿ
ತಂದಿರುವರು ನೆಮ್ಮದಿ ಸಂತಸ
ಸಂಸಾರ ಸಾಗರದಲ್ಲಿ’

ಸರಳವಾದ ಶೈಲಿ, ಆಡುಮಾತಿನ ಪದಗಳಿಂದ ಪದ್ಯಗಳು ಗಮನ ಸೆಳೆಯುತ್ತದೆ. ಸಮಯೋಚಿತವಾದ ಚಿತ್ರಗಳೂ ಇದ್ದು ಕೃತಿಯ ಅಂದವನ್ನು ಹೆಚ್ಚಿಸಿದೆ. ಕನ್ನಡ ಮಕ್ಕಳ ಸಾಹಿತ್ಯಲೋಕದ ದೀಪಸ್ಥಂಭವೆನಿಸಿರುವ ಶ್ರೀ ಟಿ ಎಸ್‌ ನಾಗರಾಜ ಶೆಟ್ಟಿ ಅವರು ಮತ್ತಷ್ಟು ಶಿಶುಸಾಹಿತ್ಯ ರಚಿಸಿ ನಾಡಿನ ಮಕ್ಕಳ ಮನೋವಿಕಾಸ ಹಾಗೂ ಮನರಂಜನೆಗೆ ಕಾಣಿಕೆ ನೀಡಲಿ ಎಂದು ಹಾರೈಸುತ್ತೇನೆ.

‍ಲೇಖಕರು Avadhi

May 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: