ಅವನಾಡಿದ ಮಾತು ಗಂಟೆ ಮ್ಯಾಲೆ ಇಳಾಸ ಬರೆದ್ಹಂಗೆ..

ಡಾ. ವಡ್ಡಗೆರೆ ನಾಗರಾಜಯ್ಯ

ನನ್ನ ಬಾಲ್ಯ ಕಾಲದಲ್ಲಿ ನನ್ನಮ್ಮನ ತವರೂರಾದ ಚಿಕ್ಕನಹಳ್ಳಿಯಲ್ಲಿ ಎತ್ತ ನೋಡಿದರೂ ತೆಂಗು – ಅಡಕೆ ಗರಿಗಳನ್ನು ತಡಿಕೆ ಹೆಣೆದು ಗೋಡೆಗಳಂತೆ ನಿಲ್ಲಿಸಲಾಗಿದ್ದ ಅಥವಾ ಆಳೆತ್ತರದ ಮಣ್ಣಿನ ಗೋಡೆಗಳನ್ನು ಕಟ್ಟಿ ತೆಂಗಿನಗರಿ – ಅಡಕೆಗರಿ – ಕಾಶಿಕಡ್ಡಿ ಬಾಧೆ ಹುಲ್ಲು ಮತ್ತು ಕಬ್ಬಿನ ಸೋಗೆಯ ಮಾಡು ಹೊದಿಸಿ ಕಟ್ಟಲಾಗಿದ್ದ ಗುಡಿಸಲುಗಳೇ ಕಾಣುತ್ತಿದ್ದವು.

ಕೆಲವರು ಬಿದಿರುಮೆಳೆ ಕಡಿದು ತಂದು, ಬಿದಿರು ಕಂಪೆಯ ಮುಳ್ಳು ಸವರಿ ಹಸನುಮಾಡಿ, ಈಚಲಗರಿ, ಸಣ್ಣ ಬಿದಿರು ಕಡ್ಡಿಗಳು ಮತ್ತು ಲಕ್ಲೀ ಗಿಡದ ಕಡ್ಡಿಗಳನ್ನು ಹಾಸುಹೊಕ್ಕಾಗಿ ಪೋಣಿಸಿ, ಅಡಕೆ ದಬ್ಬೆಗಳನ್ನು ಉಗುಣಿ ಅಂಬಿನಿಂದಲೋ, ಈಚಲಗರಿ ನಾರಿನಿಂದಲೋ, ಕತ್ತಾಳೆ ಮಟ್ಟೆಯ ಸೀಳುಗಳಿಂದಲೋ ಬಿಗಿದು ಕಟ್ಟಿ ತಡಿಕೆಗಳನ್ನು ತಯಾರಿಸಿ, ನಾಲ್ಕು ಮಗ್ಗುಲು ನೆರಕೆ ಗೋಡೆಗಳನ್ನು ನಿರ್ಮಿಸಿ, ಮೂಡಲಿಗೂ ಪಡುವಲಿಗೂ ಎರಡು ಕಲ್ಲು ಕೂಚಗಳನ್ನೋ ಅಥವಾ ಮರದ ಕವೆಗಂಬಗಳನ್ನೋ ನಿಲ್ಲಿಸಲಾಗುತಿತ್ತು.

ಅಂತಹ ಕೂಚಗಂಬಗಳ ಮೇಲೆ ಅಡ್ಡಗೋಳವಾಗಿ ಚೇಗಿದ ಅಡಕೆ ಮರ – ತೆಂಗಿನ ಮರ – ಈಚಲ ಮರ ಇಂತಹ ಯಾವುದಾದರೊಂದನ್ನು ಅಡ್ಡೆಯಂತೆ ಅಳವಡಿಸಿ, ಆ ಅಡ್ಡೆಗೆ ಮೂರು ಅಡಿ ಅಂತರದಲ್ಲಿ ಅತ್ತಲಿತ್ತ ತೆಂಕಣ ಬಡಗಣ ಕಾಡುಗಡ್ಡಿ ಗಳಗಳನ್ನು ಬಿಗಿದು ಕಟ್ಟಿ, ಆ ಗಳಗಳನ್ನು ಅಡ್ಡದಬ್ಬೆಗಳಿಂದ ಕಟ್ಟಿ ಭದ್ರಪಡಿಸಿ, ಗುಡಿಸಲ ನೆತ್ತಿಯಿಂದ ಇಳಿಜಾರು ಮುಖವಾಗಿ ತ್ರಿಭುಜಾಕಾರದಲ್ಲಿ ತೆಂಗಿನಗರಿ- ಈಚಲ ಗರಿ- ಅಡಕೆಗರಿ – ಕಾಶಿ ಕಡ್ಡಿ ಬಾಧೆ ಹುಲ್ಲು ಹಾಗೂ ಕಬ್ಬಿನ ಸೋಗೆಯ ಮಾಡು ಹೊದಿಸಿ, ನೆರಕೆ ಗೋಡೆಗಳಿಗೆ ಕೆಮ್ಮಣ್ಣು-ಮರಳು ಕಲೆಸಿ, ಕೈಮಣ್ಣು ನೊರೆದು ಮಳಗಾಜು ಮಾಡಿ, ಸುಂದರವಾದ ದೇಸಿ ಗುಡಿಸಲುಗಳನ್ನು ಕಟ್ಟಿಕೊಂಡಿದ್ದರು.

ಮನೆಯ ಹೊರಾಂಗಣ ಮತ್ತು ಒಳಾಂಗಣದಲ್ಲಿ ಹಸುವಿನ ಸಗಣಿ ಬಗ್ಗಡದಿಂದ ನುಣ್ಣಗೆ ಸಾರಿಸಿ, ಗುಡಿಸಲುಗಳ ಬಾಗಿಲುಗಳಿಗೆ ಕೆಮ್ಮಣ್ಣು ಮತ್ತು ಬಿಳಿ ಸಿದ್ದೆಮಣ್ಣಿನಿಂದ ಕಾರಣೆ ಬಳಿದಿರಲಾಗಿತ್ತು. ಮನೆಯೊಳಗೆ ಕರಿಬಾನದ ಸಾಲುಗಳು ಮಣ್ಣಿನ ಮಡಕೆ ಕುಡಿಕೆ, ಕಂಚು ಹಿತ್ತಾಳೆಗಳ ಒಂದೆರಡು ಪಾತ್ರೆಗಳಿರುತ್ತಿದ್ದವು. ಇಂತಹ ಗುಡಿಸಲುಗಳಿಗೆ ಬಾಗಿಲು ನಿರ್ಮಿಸುವ ಎರಡು ಬದಿಗಳಲ್ಲಿ ಸಣ್ಣ ಕಲ್ಲುಕೂಚಗಳನ್ನು ಅಥವಾ ಮರದ ಕಂಬಗಳನ್ನು ನಿಲ್ಲಿಸಿ, ಬಾಗಿಲು ರೆಕ್ಕೆಯ ಚೌಕಟ್ಟನ್ನು ಅಡಕೆ ದಬ್ಬೆಗಳಿಂದ ಅಥವಾ ಬಿದಿರು ಕಡ್ಡಿಗಳಿಂದ ಕಟ್ಟಿ ನಿಲ್ಲಿಸಿರುತ್ತಿದ್ದರು.

ಮನೆ ತೊರೆದು ಕೆಲಸಗಳ ಮೇಲೆ ಹೋಗುವಾಗ ಗುಡಿಸಲ ಬಾಗಿಲುಗಳಿಗೆ ಯಾರೂ ಬೀಗ ಹಾಕದೆ, ಲೋಹದ ತಂತಿಯಿಂದಲೋ ಹಗ್ಗದ ತುಂಡಿನಿಂದಲೋ ಬಾಗಿಲಿನ ಚಿಲಕವನ್ನು ಬಿಗಿದುಕಟ್ಟಿ, ಬೀಗದ ಬದಲು ಚಿಲಕಗಳ ಮೇಲೆ ಸಗಣಿಯನ್ನು ನೊರೆದಿರುತ್ತಿದ್ದರು.

ನಾನು ಹುಟ್ಟಿದ್ದು ಚಿಕ್ಕನಹಳ್ಳಿಯ ನನ್ನ ಅಮ್ಮನ ತವರು ಮನೆಯಲ್ಲಿ. ನನ್ನ ಅಕ್ಕ ನಾಗರತ್ನಮ್ಮ ಹುಟ್ಟಿದ್ದು ಇದೇ ಮನೆಯಲ್ಲಿ. ಈಗ ನನ್ನ ಅಕ್ಕನನ್ನು ರತ್ನಮ್ಮ ಎಂಬ ಹೆಸರಿನಿಂದ ಮಾತ್ರ ಗುರುತಿಸಲಾಗುತ್ತಿದೆ. ರತ್ನಮ್ಮನೇ ನನ್ನ ತಂದೆತಾಯಿಯರಿಗೆ ಮೊದಲ ಮಗು. ನನ್ನ ದೊಡ್ಡಮ್ಮನಾದ ರಾಮಕ್ಕನಿಗೆ ನಾಗರತ್ನ ಎಂದು ಕರೆಯಲು ನಾಲಗೆ ತಿರುಗದೆ ರಾಗರತ್ರ, ರಾಗರತ್ರಮ್ಮ ಎಂದು ಕರೆಯುತ್ತಿದ್ದಳು.

ನಾಗರತ್ನ ಎಂದು ಸರಿಯಾಗಿ ಕರೆಯಲು ಬಾರದ ಅವಳು ರತ್ನಮ್ಮ ಎಂದು ಬಾಯ್ತುಂಬಾ ಮಧುರವಾಗಿ ಕರೆಯುತ್ತಿದ್ದಳು. ಅವಳಿಂದಾಗಿ ನಾಗರತ್ನಮ್ಮ ಎಂಬ ಹೆಸರು ರತ್ನಮ್ಮ ಎಂದು ಮೊಟುಕಾಯಿತು. ಅಕ್ಕ ಹುಟ್ಟಿದ ಐದು ವರ್ಷಗಳ ನಂತರ ಎರಡನೇ ಮಗುವಾಗಿ ನಾನು ಹುಟ್ಟಿದೆ.

ನನ್ನ ಅಜ್ಜಿ ತಾತನವರು ವಾಸಿಸುತ್ತಿದ್ದದ್ದು ಅವರೇ ತಮ್ಮ ಕೈಯಾರೆ ಕಟ್ಟಿದ ಮಣ್ಣೆಂಟೆ ಗೋಡೆಗಳ ಜಂತೆ ಮಾಳಿಗೆಯ ಮನೆಯಲ್ಲಿ. ಅಡುಗೆ ಮನೆ ಮತ್ತು ನಡುಮನೆ ಮಾತ್ರ ಇದ್ದ ಎರಡಂಕಣದ ಮನೆ ಅದು. ಮನೆ ಬಾಗಿಲ ಉದಾಸಿಲ ಬಳಿಯೇ ಹಸು ಕಟ್ಟಲು ಕೊಟ್ಟಿಗೆ ಇತ್ತು. ಹಸುವಿನ ಕೊಟ್ಟಿಗೆಯ ನಂತರದಲ್ಲಿ ನಾವು ಮಲಗುವ ನಡುಮನೆ ಇತ್ತು. ಮನೆಯ ಜಂತೆಗೆ ಮರದ ಕಡ್ಡಿಗಳನ್ನು ಮತ್ತು ತೀರು -ಮಾಳ್ವಂತಗಳನ್ನು ಹೊದಿಸಿ, ಬಂದರಿ ಸೊಪ್ಪು ಹರಡಿ, ಮರಳು ಕೆಮ್ಮಣ್ಣಿನ ಮೇಲ್ಮುದ್ದೆ ಹಾಕಿ ಮೇಲ್ಚಾವಣಿ ನಿರ್ಮಿಸಿ ಅದರ ಮೇಲೆ ಕೆರೆಗೋಡು ಅಂಟುಮಣ್ಣು ಹಾಕಲಾಗಿತ್ತು.

ಗೋಡೆಯ ಹೊರಪಾಕು ಪಲ್ಟಗಳ ಅಂಚುಗಳಿಗೆ ಕುರಚಲು ಬಂದರಿ ಗಿಡ ಮತ್ತು ತಂಗಡಿ ಗಿಡಗಳನ್ನು ಒದಿಯಾಗಿ ಹರಿಹಾಕಿ ಅದರ ಮೇಲೆ ಕತ್ತಾಳೆ ಮಟ್ಟೆಗಳನ್ನು ಉಲ್ಟಾ ದಬ್ಬಾಕಿ ಮುಚ್ಚಿಗೆ ಮಾಡಿ, ಕತ್ತಾಳೆ ಮಟ್ಟೆಗಳ ಮೇಲೆ ಒಡೆದ ಮಡಕೆಗಳ ಓಡುಗಳನ್ನು ಗುಬರಾಕಿ ಪಲ್ಟಗಳ ಒಳಾಯ ಗೋಡು ಮಣ್ಣನ್ನು ದಿಂಡು ಕಟ್ಟಿ, ಬಿದ್ದ ಮಳೆನೀರು ದೋಣಿಬಾಯಲ್ಲಿ ಸರಾಗವಾಗಿ ಹರಿದುಹೋಗುವಂತೆ ನಿರ್ಮಿಸಲಾಗಿತ್ತು.

ರಾತ್ರಿಯಾಗುತ್ತಲೇ ನನ್ನ ತಾತ ತಿಮ್ಮಯ್ಯನಿಗೆ ಹೊಟ್ಟೆ ತುಂಬಾ ರಾಗಿಮುದ್ದೆ ಬಿತ್ತೆಂದರೆ ಸಾಕು, ಅರ್ಧ ಬೀಡಿ ಸೇದಿ ಬಾಯಲ್ಲೂ ಮೂಗಿನಲ್ಲೂ ಹೊಗೆ ಬಿಟ್ಟು, ಉಳಿದರ್ಧ ಬೀಡಿಯನ್ನು ಕಿವಿಗೆ ಸಿಕ್ಕಿಸಿಕೊಂಡು, ಕೆಮ್ಮಿ ಕ್ಯಾಕರಿಸಿ ತೊಂಟೆ ಉಗುಳಿ, ಬಾಯಿ ಮುಕ್ಕಳಿಸಿ, ಒಂದು ಮೊಗಿ ತಣ್ಣೀರು ಕುಡಿದು ಹಾಡು ಹಾಡಲು ಪ್ರಾರಂಭಿಸುತ್ತಿದ್ದನು.

ಅವನು ಕೊರಳೆತ್ತಿ ಹಾಡಲು ಪ್ರಾರಂಭಿಸಿದನೆಂದರೆ ಚಿಕ್ಕನಹಳ್ಳಿಯ ಪಕ್ಕದಲ್ಲಿಯೇ ಬೇಸಿಗೆ ಮಳೆಗಾಲಗಳೆನ್ನದೆ ಕಾಲಾತೀತವಾಗಿ ಏಕಸಮನೆ ಜುಳುಜುಳು ನಿನಾದ ಮಾಡಿಕೊಂಡು ಹರಿಯುತ್ತಿದ್ದ ತೊರೆಯ ಸೊಬಗು ಕಂಡಂತೆ ಅವನ ಕೊರಳ ಸೆರೆಯುಬ್ಬಿ ಎದೆಯ ಪದಗಳು ನಲಿದಾಡಿಕೊಂಡು ಹರಿಯುತ್ತಿದ್ದವು. ಅವನ ಹೆಂಡತಿಯಾದ ಚಿಕ್ಕಮ್ಮ ಮತ್ತು ಮುಂಡೆಮೋಪಿಯಾಗಿ ತವರು ಮನೆ ಸೇರಿಕೊಂಡಿದ್ದ ಹಿರಿಯ ಮಗಳಾದ ರಾಮಕ್ಕ ಅವನ ಹಾಡುಗಳಿಗೆ ಸಾಥಿಯಾಗಿ ದನಿಗೂಡುತ್ತಿದ್ದರು.

ಕರ್ಮ ಸುಟ್ಟು ಮೈಚರ್ಮದ ಅವತಾರ
ಬಲು ಮೋಜಿನಗಾರ ಹರಳಯ್ಯ
ಓದು ಭೇದವ ಮದಲೆ ತಿಳಿದಿಲ್ಲ
ಎಂಥಾ ಭಕ್ತಿವಂತನು ಹರಳಯ್ಯ
ಅವನಾಡಿದ ಮಾತು ಗಂಟೆ ಮ್ಯಾಲೆ ಇಳಾಸ ಬರೆದ್ಹಂಗೆ II

ಮೂರನೇ ತರಗತಿ ಪಾಸಾಗಿ ಬೇಸಿಗೆ ರಜೆಯನ್ನು ಕಳೆಯಲು ನನ್ನ ಅಮ್ಮನ ತವರು ಮನೆಗೆ ಬಂದು ಸೇರಿರುವ ನನಗೀಗ ಪ್ರತಿ ದಿನವೂ ತಾತನ ಹಾಡುಗಬ್ಬಗಳು ನೀರ ತೇರಿನ ತೊರೆಯಂತೆ ಆವರಿಸಿಕೊಂಡವು.

‍ಲೇಖಕರು Avadhi

May 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: