ಮನೆಯ ಮುಂದೆ ‘ಸದಾರಮೆ’!

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು.

ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು ಕೇಳುಗರಿಗೆ ಒಂದು ರೀತಿಯ ಕಾಲಕೋಶ. ಈ ಹಾಡುಗಳ ಸಿ ಡಿ ಯನ್ನು ‘ಲಹರಿ’ ಹಾಗೂ ‘ಅವಧಿ’ ಜಂಟಿಯಾಗಿ ಹೊರತಂದಿದೆ.

ಈಗ ಸಿರಿ ಪಾದ ಹೆಸರಿನಲ್ಲಿ ಶ್ರೀಪಾದ್ ಭಟ್ ತಮ್ಮ ವಿಶೇಷ ರಂಗ ಅನುಭವವನ್ನು ಮುಂದಿಡಲಿದ್ದಾರೆ.

ಯಕ್ಷಗಾನ ಮೃದಂಗದ ಬಿಡ್ತಿಕೆಗಳು ಎದೆಯ ಬಡಿತದ ಹೊರಳಿಕೆಗೆ ಕಾರಣವಾಗ್ತಿದ್ದ ಸಂದರ್ಭದಲ್ಲಿಯೇ ಕಂಪನಿ ನಾಟಕಗಳ ಮೋಹಕ್ಕೆ ಆ ಪಾಟಿ ಒಳಗಾಗಿದ್ದು ಹೇಗೆ ಅಂತ ನನಗೀಗಲೂ ಪೂರ್ಣವಾಗಿ ಅರ್ಥವಾಗಿಲ್ಲ.

ಬಹುಶಃ ಅದರ ‘ಒಳಗೊಳ್ಳುವಿಕೆ’ಯ ಗುಣಗಳಿಂದಾಗಿ ಇರಬೇಕೇನೊ. ಚಿತ್ರ ಚೌಕಟ್ಟಿನ ವಾಸ್ತವ ಬಿಂಬದ ಮುಂದೆಯೇ ಅದನ್ನು ದಾಟುವಹಾಡು ಕುಣಿತಗಳಭಾವುಕ ಅಭಿನಯದ ಮೂಲಕ ಆ ವಾಸ್ತವವನ್ನು ಮೀರಿದ ಆಟ ಕಟ್ಟುವ ಅದರ ಗುಣದಿಂದಿರಬೇಕು.

ಅಲ್ಲಿ ಸಂಗೀತವಿತ್ತುಕುಣಿತ ಇತ್ತು ಆದರೆ ಅದು ಯಕ್ಷಗಾನವೂ ಅಲ್ಲದಪೂರ್ತಿ ಸಿನೆಮಾವೂ ಅಲ್ಲದ ಆದರೆ ಅವುಗಳ ಗುಣಗಳನ್ನು ಒಳಗೊಂಡ ಬೇರೆಯೇ ಆದ ಹೊಸ ಪಾಕವಿತ್ತು ಅಲ್ಲಿ. ಅಲ್ಲಿ ರಸ್ತಾ ದೃಶ್ಯದಲ್ಲಿ ಕಾಣುತ್ತಿದ್ದ ಪರದೆಯ ಮೇಲೆ ಬಿಡಿಸಿರುವ ಎರಡು ಆಯಾಮದ ಚಿತ್ರಗಳು ಸಹ ಅದರ ಮುಂದೆ ಅಭಿನಯಿಸುತ್ತಿದ್ದ ನಟರ ವಾಸ್ತವವನ್ನು ಮೀರಿದ ಅಭಿನಯದ ಕಾರಣದಿಂದಾಗಿಯೋ ಏನೋ ನೋಡುವ ನಮಗೆ ಮೂರು ಆಯಾಮವನ್ನು ಹೊಂದಿರುವಂತೆ ಭಾಸವಾಗುತಿತ್ತು. ಪರದೆಯ ಮೇಲಿನ ತಂತಿಯ ಮೇಲೆ ಕುಳಿತ ಹಕ್ಕಿಗಳು ಹಾರುತ್ತಿಲ್ಲ ಎಂದು ಎಂದೂ ಅನಿಸಿದ್ದೇ ಇಲ್ಲ ಅಂದು..!

ನಮ್ಮೂರಿಗೆ ಹಬ್ಬದ ಅಥವಾ ಜಾತ್ರೆಯ ಸಂದರ್ಭದಲ್ಲಿ ಯಕ್ಷಗಾನ ಮೇಳದ ಆಟ ಬರುತ್ತಿತ್ತು. ‘ಯಕ್ಷಗಾನ ಕಂಪನಿ’ ಎನ್ನಬಹುದು ಅವನ್ನ. ಮೇಳದ ಲಾರಿಯು ತನ್ನ ಮೈತುಂಬ ಟೆಂಟು ಹಾಕುವ ಕಂಬಗಳನ್ನೂಜನರು ಕೂಡುವ ಖುರ್ಚಿಗಳನ್ನೂಪಾತ್ರಗಳು ವಿರಾಜಮಾನರಾಗುವ ಸಿಂಹಾಸನವನ್ನೂ ಭಿನ್ನಭೇದವ ಮಾಡದೇ ಒಂದೇ ರಾಶಿಯಲ್ಲಿ ತುಂಬಿಕೊಂಡು ಊರ ಮಧ್ಯದ ಗದ್ದೆಬಯಲಿನಲ್ಲಿ ಮುಂಜಾನೆ ನಿಂತಿತೆಂದರೆ ನಮ್ಮ ‘ಡ್ಯೂಟಿ’ಯೂ ಆರಂಭ.

ಡ್ಯೂಟಿ ಅಂದರೆ ಮತ್ತೇನಲ್ಲಲಾರಿಯಿಂದ ಸಾಮಗ್ರಿ ಕೆಳಗಿಳಿಯುವುದನ್ನುಕೆಲಸಗಾರರು ಟೆಂಟ್ ನಿರ್ಮಾಣಕ್ಕಾಗಿ ಗುಂಡಿ ತೋಡಿ ಕಂಬ ಹಾಕುವುದನ್ನೂಆಮೇಲೆ ಅವರು ಟೆಂಟಿನ ಬಟ್ಟೆಯಿಂದ ಕಂಬಗಳನ್ನು ಸುತ್ತುತ್ತಾ ಸುತ್ತುತ್ತಾ ಹೊರ ಜಗತ್ತಿನೊಂದಿಗೆ ಆಟ ಕಟ್ಟುವ ಒಳ ಜಗತ್ತನ್ನು ಬೇರ್ಪಡಿಸುತ್ತಾ ಹೋಗುವರಂಗಸ್ಥಳವೆಂಬ ಭವ್ಯತಾಣವನ್ನು ನಿರ್ಮಿಸುವ ದಿವ್ಯಗಳಿಗೆಗಳನ್ನು ನೋಡುವದುಅಷ್ಟೆ.

ಹಸಿವಾದಾಗಊಟದ ಸಮಯವಾದಾಗ ಮನೆಗೆ ಓಡಿ ಹೋಗಿ ಉಂಡು ಮತ್ತೆ ಆ ಜಾಗಕ್ಕೆ ಬಂದು ಅದನ್ನು ಕಣ್ತುಂಬಿಕೊಳ್ಳುವುದು. ನಮ್ಮ ಮುಂದೆಯೇ ತಯಾರಾದ ಆ ಪವಿತ್ರ ತಾಣದಲ್ಲಿ ರಾತ್ರಿ ಬಂದು ಕುಳಿತುಕೊಳ್ಳುವ ಸೌಭಾಗ್ಯವನ್ನು ನೆನಪಿಸಿಕೊಂಡೇ ಮೈ ನವಿರೇಳುತಿತ್ತುನಿಜಕ್ಕೂ ಬಾಯಲ್ಲಿ ನೀರೂರುತಿತ್ತು.

ಟೆಂಟ್ ರೆಡಿ ಆಗ್ತಿದ್ದ ಹಾಗೆ ಪೆಟ್ಟಿಗೆಗಳನ್ನು ಚೌಕಿಮನೆ ಅಂತ ಕರೆಯಲ್ಪಡುತ್ತಿದ್ದ ಬಣ್ಣ ಹಚ್ಚಿಕೊಳ್ಳುವ ಭಾಗಕ್ಕೆ ಸಾಗಿಸುವಾಗ ಅದನ್ನು ಎತ್ತುವ ಕೆಲಸಕ್ಕೆ ಕೈಜೋಡಿಸಲು ಓಡುತ್ತಿದ್ದೆವುಆ ನೆವದಲ್ಲಿ ಬಣ್ಣದ ಪೆಟ್ಟಿಗೆಯನ್ನು ಮುಟ್ಟಲು ಅವಕಾಶ ಸಿಗುತ್ತಲ್ಲ ಎಂಬ ಆಸೆಯಿಂದ..!

ಬಣ್ಣದ ಪೆಟ್ಟಿಗೆಯಲ್ಲಿಯೇ ಆ ‘ಮ್ಯಾಜಿಕ್’ ಇರೋದು! ರಾವಣಕಂಸಹನುಮಂತದ್ರೌಪದಿ ಎಲ್ಲರೂ ಅಡಗಿರೋದು! ಪೆಟ್ಟಿಗೆಯನ್ನು ಮುಟ್ಟುವ ನೆವದಲ್ಲಿ ಆ ಪಾತ್ರಗಳನ್ನು ಮುಟ್ಟುವ ಭಾಗ್ಯಕ್ಕಾಗಿ ಕಾಯುತ್ತಿದ್ದೆವೇನೊ! ಭಾರವಾದ ಆ ಪೆಟ್ಟಿಗೆ ಹೊರುವಾಗ ಅದೆಂತದೋ ಪುಳಕ!

ಕನ್ನಡ ಶಾಲೆಯಲ್ಲಿ ‘ನಲಿ ಕಲಿ’ ಆಂದೋಲನ ಆರಂಭವಾದ ನಂತರ ಶಿಕ್ಷಕರು ಮಕ್ಕಳೊಂದಿಗೆ ಗೋಲಾಕಾರದಲ್ಲಿ ನೆಲದ ಮೇಲೆ ಕುಳಿತುಕೊಳ್ಳುವ ಪರಿಪಾಠ ಆರಂಭವಾಯಿತಲ್ಲಆಗ ತನ್ನ ಜತೆಯೇ ಕುಳಿತ ಶಿಕ್ಷಕಿಯ ಸೀರೆ ಸೆರಗನ್ನ ಅವರಿಗೆ ಗೊತ್ತಾಗದಂತೆ ಮೆತ್ತಗೆ ಮುಟ್ಟಿ ಸಂಭ್ರಮಿಸುವ ಮಕ್ಕಳನ್ನು ಗಮನಿಸಿದಾಗಲೆಲ್ಲ ಬಣ್ಣದ ಪೆಟ್ಟಿಗೆ ಮುಟ್ಟಿ ಸಂಭ್ರಮಿಸುತ್ತಿದ್ದ ಗಳಿಗೆಗಳು ನೆನಪಾಗುತ್ತವೆ ಈಗ. 

ಆ ಒಂದು ದಿನ ಶಾಲೆ ಮುಗಿಸಿ ಗದ್ದೆ ಬಯಲಿನಲ್ಲಿ ಆಡಲು ಬಂದರೆ ಅರೆ! ಅಲ್ಲೊಂದು ಚಿಕ್ಕ ಟೆಂಟ್ ನಿರ್ಮಾಣ ಆಗುತ್ತಿತ್ತು! ಆಟದ ಟೆಂಟಿನಂತಲ್ಲಚಿಕ್ಕದು. ಅದರ ಪಕ್ಕದಲ್ಲಿ ಹಲವು ಮಕ್ಕಳು ಆಟವನ್ನು ಕೈದು ಮಾಡಿ ಅದನ್ನೇ ನೋಡುತ್ತ ನಿಂತಿದ್ದರು. ಅದೊಂದು ಕಂಪನಿ ನಾಟಕದ ಟೆಂಟ್ ಆಗಿತ್ತು!

ತೆಳ್ಳನೆಯ ಎತ್ತರದ ವ್ಯಕ್ತಿಯೊಬ್ಬ ಆಗಾಗ ನಮ್ಮ ಕಡೆ ಕಿರುನಗೆ ಬೀರುತ್ತ ಒಳಹೊರಗೆ ಓಡಾಡುತ್ತಿದ್ದ. ಹೆಂಗಸರು ತಮ್ಮ ಮಕ್ಕಳನ್ನು ಎತ್ತಿಕೊಂಡೇ ಕೆಲಸ ಮಾಡುತ್ತಿದ್ದರು. ನಮಗೆ ಕುತೂಹಲವೋ ಕುತೂಹಲ! ಆತ ನಮ್ಮೆಲ್ಲರ ಕೈಗೆ ಚಿಕ್ಕ ಹ್ಯಾಂಡ್ ಬಿಲ್ ನೀಡಿ “ನಾಳೆಯಿಂದ ಸದಾರಮೆ ನಾಟಕ ಚಾಲೂ ಆಗ್ತದೆನಿಮ್ಮ ಮನೆಯವರನೆಲ್ಲ ಕರೆದುಕೊಂಡು ಬನ್ನಿ” ಅಂತಂದ. ಆಗಾಗ ಕಿರುನಗುವ ಆತ ನನಗೆ ತುಂಬ ಇಷ್ಟ ಆದ.

ಮಾರನೆಯ ದಿನ ಸಂಜೆ ಆಗುವವರೆಗೂ ತಡೆಯಲಾರದ ತವಕ. ನಿಧಾನಕ್ಕೆ ಚಲಿಸುತ್ತಿದ್ದ ಕಾಲ ಬೇಸರ ತರುತ್ತಿತ್ತು. ಅಂತೂ ಸಂಜೆ ಆಯ್ತು. ಮುಂಜಾನೆಯಿಂದಲೇ ಅಜ್ಜಿಯನ್ನು ಪುಸಲಾಯಿಸಿ ಸಂಜೆ ನಾಟಕಕ್ಕೆ ಹೋಗಲು ಅಧಿಕೃತ ಪರವಾನಗಿಯನ್ನು ಅವಳ ಮೂಲಕ ಅಜ್ಜನಿಂದ ಪಡೆದಾಗಿತ್ತು. ಸಂಜೆ ಆಗುತ್ತಿದ್ದಂತೆ ಟೆಂಟಿನ ಕಡೆ ಓಟ.

ನಾನು ನೋಡಿದ ಮೊದಲ ಕಂಪನಿ ನಾಟಕವದು! ಪರದೆಯ ಮೇಲೆ ಕಂಡ ಮೊದಲ ಚಿತ್ರಕ್ಕಿಂತ ಗಾಢವಾದುದು! ಈ ಮೊದಲು ಶಾಲಾ ಗ್ಯಾದರಿಂಗ್ ನಲ್ಲಿ ಯುವಕ ಸಂಘದವರು ವರ್ಷಕ್ಕೊಮ್ಮೆ ಮಾಡುತ್ತಿದ್ದ ಸಾಮಾಜಿಕ ನಾಟಕ ನೋಡಿದ್ದೆನಾದರೂ ಇದು ಬೇರೆಯೇ!

ನೀವು ಸದಾರಮೆ ನಾಟಕ ನೋಡಿದ್ದೀರಲ್ಲಾಅದು ಕಂಪನಿ ನಾಟಕದ ಎಲ್ಲ ತಾಕತ್ತನ್ನೂ ಒಳಗೊಂಡ ವಿಶಿಷ್ಟಪಾಕ. ಅಲ್ಲಿ ಪುರಾಣಇತಿಹಾಸ ಕಾಲದಲ್ಲಿದ್ದಂತೆ ರಾಜ ರಾಣಿಯರಿದ್ದಾರೆಆಧುನಿಕ ಸಮಾಜದ ಕಳ್ಳರಿದ್ದಾರೆಪೊಲೀಸರಿದ್ದರೆಸಿರಿವಂತ ಖಳನಾಯಕರಿದ್ದಾರೆ…

ಹೀಗೆ ಕಾಲ ದೇಶಗಳ ಬಂಧವನ್ನು ಮುರಿಯುವಬೇರೆಯೇ ಲೋಕದ ಕಾಲದೇಶಗಳಲ್ಲಿ ನಿಮ್ಮನ್ನು ಅದ್ದುವ ಮಾಯಕದ ನಾಟಕವದು. ನಾಟಕ ನೋಡುತ್ತಿದ್ದಂತೆ ಸದಾರಮೆ ಮತ್ತು ಕಳ್ಳ ಇಬ್ಬರೂ ನನ್ನ ಹೀರೋಗಳಾಗಿ ಬಿಟ್ಟರು!

ಸದಾರಮೆ ಎಷ್ಟು ಚಂದ ಕಾಣ್ತಿದ್ದಳು ಎಂದರೆ ಅದುವರೆಗೂ ನೋಡಿದ ಸಿನೆಮಾಗಳ ನಾಯಕಿಯರಿಗಿಂತಲೂ ಇವಳೇ ಹೆಚ್ಚು ಚಂದ ಕಂಡಳು! ಹಿಂದಿನ ದಿನ ಟೆಂಟು ಹಾಕುವಲ್ಲಿ ಅಲ್ಲೆಲ್ಲೋ ಓಡಾಡುತ್ತಿದ್ದಳೇನೋನೆನಪು ಮಾಡಿಕೊಂಡೆ. ಗುರುತು ಕಾಣಲಿಲ್ಲ. ಕಳ್ಳನಂತೂ ಹಗಲಿನಲ್ಲಿ ಕಿರುನಗೆ ಬೀರುತ್ತ ಓಡಾಡುತ್ತ ಕೆಲಸ ಮಾಡುತ್ತಿದ್ದವ.

ಯಕ್ಷಗಾನದ ಹಾಗಲ್ಲ ಇಲ್ಲಿಸರಿಯಾಗಿ ಗಮನಿಸಿದರೆ ಪಾತ್ರ ಮಾಡಿದವರ ಪರಿಚಯ ಸಿಕ್ತದೆ! ನಾಟಕ ಗುಂಗು ಹಿಡಿಸಿತ್ತುಮನೆಗೆ ಬರುವಷ್ಟರಲ್ಲಿ ದಿನವೂ ಈ ನಾಟಕ ನೋಡುವುದೆಂದು ಮನಸ್ಸು ತೀರ್ಮಾನಿಸಿ ಆಗಿತ್ತು!!

ಬಹುದೊಡ್ಡ ಮನೆ ನಮ್ಮದು. 50 ಜನ ಆರಾಮವಾಗಿ ಉಳಿಯಬಹುದಾದಂತದ್ದುಹಿಂದೆ ಅದು ಮಠವಾಗಿತ್ತಂತೆ. ಮನೆಯಲ್ಲಿ ಈಗ ಅಜ್ಜ ಅಜ್ಜಿ ಇಬ್ಬರೇ. ಹೀಗಾಗಿ ನಾನು ಅವರ ಜತೆಗಿರಲೆಂದು ನಮ್ಮಪ್ಪ 8ನೇ ತರಗತಿಗೆ ನನ್ನನ್ನು ಅಲ್ಲಿ ತಂದಿಟ್ಟಿದ್ದ. ಅಜ್ಜನಿಗೆ ಮನೆಯವರು ಯಾರೇ ಇರಲಿ ಅವರು ಸಂಜೆಯಾಗುವದರೊಳಗೆ ಮನೆಯಲ್ಲಿರಬೇಕು.

ಮನೆಯೊಳಗೆ ನಾವು ಬರುವಾಗ 7 ಗಂಟೆ ದಾಟಿತೆಂದರೆ ಉಗ್ರನರಸಿಂಹನ ಪಾರ್ಟು ಮಾಡುತ್ತಿದ್ದ. 8 ಗಂಟೆಯೊಳಗೆ ಊಟ ಮುಗಿದು ದೀಪ ಆರಿಸಬೇಕುಬದುಕೇನಿದ್ದರೂ ಮುಂಜಾನೆ ಆರಂಭವಾಗುವುದು ಎಂಬುದು ಅವನ ನಿಯಮ. ಆದರೇನು ಮಾಡುವುದುಬಣ್ಣದ ಬದುಕು ಈ ನಿಯಮಕ್ಕೆ ವಿರುದ್ಧ! ಅದು ಮೈ ಮುರಿದೇಳುವುದೇ ಸಂಜೆ 7ರ ನಂತರ. ಇದು ಮನೆಯೆಂಬೋ ಮನೆಗೂ ರಂಗಮನೆಗೂ ಬಗೆಹರಿಯದ ಪಂಚಾಯ್ತಿಒಂದು ಎರಡು ದಿನದ್ದಲ್ಲನಿರಂತರದ್ದು.

ನಮ್ಮ ಮನೆಯ ಮುಂಬಾಗಿಲಿಗೆ ಒಂದು ವಿಶಿಷ್ಟ ಬಗೆಯ ಅಗಳಿ (ಚಿಲಕ) ಇತ್ತು. ಅದಕ್ಕೊಂದು ಚಿಕ್ಕ ಕೀಲು ಇತ್ತು. ಅಗಳಿ ಹಾಕಿದಾಗ ಅದು ಕೆಳಜಾರಿ ಲಾಕ್ ಆಗುತ್ತಿತ್ತು. ಮತ್ತೆ ಅಗಳಿ ತೆಗೆಯಲು ಸುಲಭಕ್ಕೆ ಆಗುತ್ತಿರಲಿಲ್ಲ. ಕಿರುಬೆರಳಲ್ಲಿ ಆ ಕೀಲನ್ನು ಅರ್ಧ ಮಾತ್ರ ಎತ್ತಿ ಹಿಡಿದರೆ ಆಗ ಅಗುಳಿ ತೆಗೆಯಬಹುದು. ಅದನ್ನು ‘ಕಳ್ಳಮಿಡ’ ಅಂತ ಕರೆಯುತ್ತಿದ್ದರು.

ಒಮ್ಮೆ ಅಗಳಿ ಹಾಕಿದ ನಂತರ ಹೊರಗಿನಿಂದ ಅದನ್ನು ತೆಗೆಯಲಾಗುತ್ತಿರಲಿಲ್ಲ. (ಮುಂದೆ ನನ್ನ ಕಿರಿಯ ಚಿಕ್ಕಪ್ಪ ಅದನ್ನೂ ತೆಗೆಯುವುದು ಹೇಗೆಂದು ತೋರಿಸಿಕೊಟ್ಟ ಆ ಮಾತು ಬೇರೆ) ಅಜ್ಜ ಒಮ್ಮೆ ಮುಂಬಾಗಿಲ ಕದ ಜಡಿದ ಮೇಲೆ ಹೊರಹೋಗಲು ಯಾವ ಮಾರ್ಗವೂ ಇರಲಿಲ್ಲ.

ಒಮ್ಮೆ ಹೀಗಾಗಿತ್ತು. ಅಜ್ಜ ಮನೆ ಬಾಗಿಲು ಹಾಕಿ ಮಲಗಿದ ಮೇಲೆ ನಾನು ರಾತ್ರಿ ಮೆಲ್ಲಗೆ ಬಾಗಿಲು ತೆರೆದುಹೊರಗಿನಿಂದ ಅದನ್ನು ಸುಮ್ಮನೆ ಮುಚ್ಚಿಟ್ಟು ಕುಮಟಾದಲ್ಲಿ ನಡೆಯುತ್ತಿದ್ದ ತಾಳಮದ್ದಲೆಗೆ ಹೋಗಿದ್ದೆ. ಮನೆಗೆ ಮರಳುವಾಗ ಮುಂಜಾನೆ 3 ದಾಟಿತ್ತು. ಬಾಗಿಲು ತೆರೆಯಲು ನೋಡಿದರೆ ಒಳಗಿನಿಂದ ಅಗುಳಿ ಹಾಕಿಕೊಂಡಿತ್ತು! ರಾತ್ರಿ ಎಷ್ಟೋ ಹೊತ್ತಿಗೆ ಬಂದ ಅಜ್ಜ ತಾನು ಬಾಗಿಲು ಹಾಕಲು ಮರೆತಿದ್ದೇನೆಂದು ತಿಳಿದು ಅಗಳಿ ಜಡಿದಿದ್ದ.

ಬೆಳಗಿನವರೆಗೆ ಚಳಿಯಲ್ಲಿ ಹಿತ್ತಲಲ್ಲಿ ಕುಳಿತುಅಜ್ಜ ಬೆಳಗ್ಗೆ ಬಾಗಿಲು ತೆರೆದು ತೋಟಕ್ಕೆ ಹೋದನಂತರ ಮೆಲ್ಲಗೆ ಅವಿತು ಮನೆಯೊಳಗೆ ಹೋಗಿದ್ದೆ. ಈಗ ದಿನವೂ ನಾಟಕ ನೋಡಲು ಹೋಗುವುದಾದರೂ ಹೇಗೆ?

ನಮ್ಮ ಮನೆಯ ಅಟ್ಟಕ್ಕೆ ಹೊಂದಿಕೊಂಡು ದನಕರುಗಳ ಕೊಟ್ಟಿಗೆಯ ‘ಮಾಡು’ ಇತ್ತು. ಅವಶ್ಯಕತೆಯೇ ಅನ್ವೇಷಣೆಯ ತಾಯಿ ಎಂಬ ಹಿರಿಯರ ಅನುಭವದ ಮಾತೊಂದಿದೆಯಲ್ಲ! ಅದು ನನಗೆ ಅರಿವಿಗೆ ಬಂದಿದ್ದು ಇಂತಹ ಸಂದರ್ಭದಲ್ಲಿ. ನಾನು ಅಟ್ಟದ ಮೇಲಿನ ಹೆಂಚು ತೆಗೆದು ಅಲ್ಲಿಂದ ಕೊಟ್ಟಿಗೆಯ ಮಾಡಿಗೆ ಬಂದು ಆಮೇಲೆ ಅಲ್ಲಿರುವ ಹುಲ್ಲಿನ ಮೆದೆಯ ಮೇಲೆ ಜಾರಿ ಕೊಟ್ಟಿಗೆಯಲ್ಲಿಳಿದು ಅಲ್ಲಿಂದ ಹೊರಜಗತ್ತಿಗೆ ಪ್ರವೇಶ ಪಡೆಯುತ್ತಿದ್ದೆ.

ನಾಟಕಸಿನೆಮಾಹರಿಕಥೆಯಕ್ಷಗಾನಕ್ಕೆಂದು ನಾನು ದೂರದೂರಿಗೆ ಪ್ರಯಾಣ ಮಾಡಬೇಕಾದಾಗಲೆಲ್ಲ ವಿಧೇಯ ವಿದ್ಯಾರ್ಥಿಯಂತೆ ಅಜ್ಜನ ನಿಯಮಾನುಸಾರ ಸಂಜೆ 7 ಗಂಟೆಗೇ ಹಸಿವಾಗುತ್ತದೆಂದು ಅಜ್ಜಿಗೆ ಹೇಳಿ ಬೇಗನೆ ಉಂಡು ಅಟ್ಟ ಸೇರುತ್ತಿದ್ದೆ.

ಅಲ್ಲಿಂದ ನನ್ನ ನಿಜ ಬದುಕಿಗೆ ಪಯಣಿಸುತ್ತಿದ್ದೆ. ಇಂತಪ್ಪ ದಿನಮಾನಗಳಲ್ಲಿ ಒಂದು ದಿನ ನಾಟಕ ಮುಗಿಸಿ ಮನೆಗೆ ಕೊಟ್ಟಿಗೆಯ ಮೂಲಕ ಅಟ್ಟ ಹತ್ತಿ ಹೆಂಚಿನ ಮೇಲೆ ಬೆಕ್ಕಿನಂತೆ ಕಾಲಿರಿಸುತ್ತಿದ್ದ ವೇಳೆಯಲ್ಲಿ ಎದುರಿನ ಮನೆಯ ಶೆಟ್ಟರು ಮೂತ್ರವಿಸರ್ಜನೆಗೆಂದು ಹೊರಬಂದವರು ಹೆಂಚಿನ ಮೇಲೆ ಯಾರೋ ಓಡಾಡುತ್ತಿದ್ದದ್ದನ್ನು ನೋಡಿ ಅವರ ಮೂರು ಶೆಲ್ ಬ್ಯಾಟರಿಯನ್ನು ಬಿಟ್ಟಿದ್ದರು!

ಆದರೆ ಅವರ ಮನೆಗೂ ನಮ್ಮ ಮನೆಗೂ ಇರುವ ಅಂತರವನ್ನು ಅವರ ಬ್ಯಾಟರಿಗೆ ದಾಟಲಾಗಲಿಲ್ಲ. ನಾನು ಹೆಂಚಿನ ಮೇಲೆ ಹಲ್ಲಿಯಂತೆ ಮಲಗಿ ಬಿಟ್ಟಿದ್ದೆ. ತುಸು ಹೊತ್ತಾದ ಮೇಲೆ ಅವರು ‘ರಂಡ್ಲೆಪುತ್ತ’ ಅಂತ ಕೊಂಕಣಿಯಲ್ಲಿ ಬೈದುಕೊಂಡಂತೆ ಗೊಣಗುತ್ತ ಒಳಹೋದರು. ನನಗೆ ಅವರು ನನ್ನನ್ನು ಗಮನಿಸಿಯೇ ಹಾಗೆ ಬೈದಿದ್ದೋ ಅಥವಾ ಅಭ್ಯಾಸ ಬಲದಿಂದ ಗೊಣಗಿದ್ದೋ ಎಂದು ಇಂದಿನವರೆಗೂ ತಿಳಿದಿಲ್ಲ.

ನಾನು ನನ್ನದೇ ಆದ ಒಳದಾರಿಗಳಿಂದ ದಿನವೂ ಸದಾರಮೆಯನ್ನು ನೋಡತೊಡಗಿದೆ. ಅಲ್ಲಿ ಕೊಡಬೇಕಿದ್ದ ಒಂದು ರೂಪಾಯಿಯೋಎಂಟಾಣೆಯೋ ಕದ್ದೋ ಬೇಡಿಯೋ ಹೇಗೋ ಹೊಂದಿಕೆ ಆಗುತ್ತಿತ್ತು. ಗೇಟಿನಲ್ಲಿ ಇರುತ್ತಿದ್ದ ಆ ತೆಳ್ಳನೆಯ ಉದ್ದ ವ್ಯಕ್ತಿ ಈ ನಾಟಕದಲ್ಲಿ ಕಳ್ಳನ ಪಾತ್ರವಹಿಸಿದವನು ತಂಡದ ಮಾಲಿಕನೂ ಆಗಿದ್ದ.

ಆತ ನನ್ನ ಮೆಚ್ಚಿನವನಾಗಿದ್ದ. ಅವನ ಹತ್ತಿರ ನಿಂತು ಆರಾಧನಾ ಭಾವದಿಂದ ಅವನನ್ನು ನೋಡುತ್ತಿದ್ದುದರಿಂದಲೋ ಏನೋ ಕೆಲವೇ ದಿನದಲ್ಲಿ ನಾನು ಪುಕ್ಕಟೆಯಾಗಿ ನಾಟಕ ನೋಡುವ ಅತಿಥಿಯಾಗಿ ಅವನಿಂದ ‘ಪರ್ಮೀಷನ್’ ಎಂಬ ಆತಿಥ್ಯಗಳಿಸಿದ್ದೆ.

ಅದೊಂದು ಬಡಕಲಾವಿದರ ತಂಡವಾಗಿತ್ತು. ಆಗೆಲ್ಲ ಸ್ವಲ್ಪ ಸ್ಥಿತಿವಂತ ತಂಡಗಳು ತಾಲೂಕುಜಿಲ್ಲಾಕೇಂದ್ರಗಳಲ್ಲಿ ಟೆಂಟು ಹಾಕುತ್ತಿದ್ದವು. ಬಡ ಕಂಪನಿಗಳು ಮಾತ್ರ ಹೋಬಳಿಗ್ರಾಮಗಳಿಗೆ ಬರುತ್ತಿದ್ದವು. ಒಂದೋ ಎರಡೋ ಕುಟುಂಬದ ಸದಸ್ಯರೇ ಅದರ ಕಲಾವಿದರು ಅಥವಾ ಒಂದೋ ಎರಡೋ ಕಲಾವಿದರ ಕುಟುಂಬ ಸೇರಿ ಆಗುವ ರಂಗತಂಡವದು.

ಅವರಲ್ಲಿ ತುಂಬ ನಾಟಕಗಳ ಸಂಗ್ರಹ ಇರುತ್ತಿರಲಿಲ್ಲ. ಮೂರೋ ನಾಲ್ಕೋ ಅಷ್ಟೆ. ಕಡಿಮೆ ಜನ ಇರುವ ಹಾಗೂ ಒಂದು ರಸ್ತಾ ಹಾಗೂ ಒಂದು ಡೀಪ್ ಸೀನ್ ಇರುವ ಎರಡು ಪರದೆಹತ್ತಾರು ಕಬ್ಬಿಣ ಖುರ್ಚಿಸಿಮೆಂಟಿನ ಚೀಲಗಳನ್ನು ಸೇರಿಸಿ ನೇಯ್ದ ಚಾಪೆಇವಿಷ್ಟೇ ಅವರ ಆಸ್ತಿ.

ಅದೇ ಟೆಂಟಿನಲ್ಲಿ ವಾಸ. ಪ್ರದರ್ಶನದಿಂದ ದೊರಕುವ ಆದಾಯ ಅವರ ಬದುಕಿಗೆ ಸಾಲುತ್ತಿರಲಿಲ್ಲ. ಹೀಗಾಗಿ ಹಗಲು ಹೊತ್ತಿನಲ್ಲಿ ಅವರೆಲ್ಲ ಮನೆಮನೆಗಳಿಗೆ ಭಿಕ್ಷೆ ಎತ್ತಲು ಹೋಗುತ್ತಿದ್ದರು. ಊರಿನವರು ಕೊಡುವ ಅಕ್ಕಿಕಾಯಿಬಟ್ಟೆಯನ್ನು ಸಂಗ್ರಹಿಸುವುದು ಮತ್ತು ಸಂಜೆ ಅವರಿಗೆ ತಿಳಿದ ಐದಾರು ನಾಟಕಗಳನ್ನು ಆದಷ್ಟು ದಿನ ಆ ಊರಿನಲ್ಲಿ ಪ್ರದರ್ಶಿಸಿ ನಂತರ ಮುಂದಿನ ಊರಿಗೆ ಪ್ರಯಾಣ ಮಾಡುವುದು ಅವರ ಅಭ್ಯಾಸ. ಅಂತದೊಂದು ತಂಡ ನಮ್ಮೂರಿಗೆ ಬಂದಿದ್ದು. ನನಗೆ ಈ ಕಂಪನಿಯೇ ಬಹುದೊಡ್ಡ ಐಸಿರಿ ಆಗಿತ್ತು. ಅದು ಉಂಟು ಮಾಡಿದ ಗಾಢ ಅನುಭೂತಿ ಬಲು ದೊಡ್ಡದು.

ಅದೊಂದು ದಿನ ಮುಂಜಾನೆ ನಮ್ಮ ಮನೆಯ ಬಾಗಿಲ್ಲಲ್ಲಿ ತನ್ನ ಗೆಳತಿಯೊಂದಿಗೆ ‘ಸದಾರಮೆ’ ನಿಂತಿದ್ದಳು! ನನಗೆ ಹೃದಯ ಬಾಯಿಗೆ ಬಂದಂತಾಗಿತ್ತು. ಬಿಡುಗಣ್ಣಾಗಿ ನಿಂತ ನನ್ನನ್ನು ನೋಡಿ “ಅಮ್ಮನವರ ಸೀರೆ ಇದ್ದರೆ ಕೊಡಲು ಹೇಳ್ತೀರಾ” ಎಂದು ಉಲಿದಳು. ಅಜ್ಜ ತೋಟಕ್ಕೆ ಹೋಗಿದ್ದ. ಅಜ್ಜಿ ಹಿತ್ತಲಲ್ಲಿದ್ದಳು.

ಸರ್ರನೆ ಒಳಗೆ ಓಡಿದೆ. ಅಜ್ಜಿಯ ಕಪಾಟಿನ ಬಾಗಿಲು ತೆರೆದೆ. ಪೌರೋಹಿತ್ಯಕ್ಕೆ ಹೋಗುತ್ತಿದ್ದ ಅಜ್ಜನಿಗೆ ಪಂಚೆಗಳ ಜತೆ ಅಪರೂಪಕ್ಕೆ ಸೀರೆಗಳೂ ದಾನವಾಗಿ ಬರುತ್ತಿದ್ದವು. ಅವುಗಳಲ್ಲಿಯೇ ಚಂದ ಕಾಣುತ್ತಿದ್ದ ಎರಡು ಸೀರೆಗಳನ್ನು ಮೆತ್ತಗೆ ಕದ್ದುಅದರ ಜತೆ ಒಂದೆರಡು ಪಂಚೆಗಳನ್ನೂ ಇಟ್ಟು ಓಡಿ ಬಂದು ಅವಳಿಗೆ ನೀಡಿದೆ. ಅವಳ ಗೆಳತಿ ‘ತೆಂಗಿನ ಕಾಯಿ ಇದ್ದರೆ…’ ಎಂದಳು. ನನಗೆ ಭಯ! ಎಲ್ಲಿಯಾದರೂ ಅಜ್ಜಿ ಬಂದರೆ ಅಂತ. ಓಡಿ ಹೋಗಿ 4 ತೆಂಗಿನಕಾಯಿ ನೀಡಿದೆ. ಸದಾರಮೆ ನನ್ನ ನೋಡಿ ನಕ್ಕಳು..!

ಆ ರಾತ್ರಿ ನಡೆದ ನಾಟಕ ಪ್ರದರ್ಶನದಲ್ಲಿ ನನಗೊಂದು ವಿಸ್ಮಯ ಕಾದಿತ್ತು. ಸದಾರಮೆ ನನ್ನಜ್ಜಿಯ ಹಳದಿ ಸೀರೆಯನ್ನು ಉಟ್ಟಿದ್ದಳು! ಅದರ ಅಂಚು ಬೇರೆಯಾಗಿತ್ತು..! ಹೊಸ ಅಂಚಿನೊಂದಿಗೆ ಸೀರೆ ಬೇರೆಯೇ ಚಂದದಲ್ಲಿ ಕಾಣುತ್ತಿತ್ತು! ಸದಾರಮೆ ಮತ್ತೂ ಆಪ್ತಳೆನಿಸಿದಳು.

ಇಂದು ನನಗದು ಹಲವು ಸಂಗತಿಗಳ ಒಡಲಲಿರಿಸಿಕೊಂಡ ರೂಪಕದ ಹಾಗೆ ಕಾಣುತ್ತಿದೆ. ಕಂಪನಿ ನಾಟಕಗಳು ತಮ್ಮ ಹುಟ್ಟಿನ ಮೂಲದಿಂದ ಬಂದ ಹಲವು ಸಂಗತಿಗಳನ್ನು ಈ ನೆಲದ ವೈಶಿಷ್ಟ್ಯಗಳೊಂದಿಗೆ ಪಾಕವಾಗಿಸುತ್ತಏನೆಲ್ಲವನ್ನೂ ತನ್ನಲ್ಲಿ ಕರಗಿಸಿಕೊಳ್ಳುತ್ತಮಿಸಳಬಾಜಿಯಂತಹ ರುಚಿಕಟ್ಟಾದ ಸ್ವಾದನೀಯ ಆಹಾರವನ್ನು ಈ ನೆಲದ ಕಣ್ಣುಗಳಿಗೆ ನೀಡಿದೆ!

ಹಾಗೆ ನೋಡಿದರೆ ಕನ್ನಡ ರಂಗಭೂಮಿಯ ಜಾಯಮಾನವೇ ಪಾಶ್ಚಾತ್ಯ ಪರಿಭಾಷೆಯ ವಾಸ್ತವಮಾರ್ಗದ್ದಲ್ಲ. ಇಲ್ಲಿಯೇ ನೋಡಿ. ಕಂಪನಿಗಳ ಪರದೆ ವಿದೇಶಿ ವಾಸ್ತವ ಮಾರ್ಗದಿಂದ ರೂಪುಗೊಂಡಿದ್ದು. ಆದರೆ ಆ ವಾಸ್ತವ ಮಾರ್ಗದ ಮುಂದೆ ಸ್ಥಳೀಯವಾದ ಅಭಿವ್ಯಕ್ತಿ ಕ್ರಮಗಳ ನಿರೂಪಣೆಗಳಿಂದ ಆಯ್ದ ಹಾಡುಕುಣಿತಗಳ ಮೂಲಕ ಅದರ ವಾಸ್ತವಿಕತೆಯನ್ನು ಮುರಿದು ಅದನ್ನು ಸಾಂಕೇತಿಕವಾಗಿಸಿದವರಿವರು.

ಒಳಗೊಳ್ಳುವ ಗುಣ..! ಸ್ಥಿತಿಸ್ಥಾಪಕತ್ವದ ಗುಣ… ಅದು ಏನೆಲ್ಲವನ್ನೂ ಜೀರ್ಣಿಸಿಕೊಳ್ಳಬಲ್ಲದು. ಸರಿಯಾಗಿ ನೋಡಿ. ಅಲ್ಲಿ ಗಾರ್ಡನ್ ಸೀನ್‍ನ ಪರದೆಯ ಮೇಲಿನ ಹಕ್ಕಿಗಳು ನಿಜಕ್ಕೂ ಹಾರುತ್ತವೆ… ಅಲ್ಲಿಯ ಸೂರ್ಯಾಸ್ತಕ್ಕೆ ದೀರ್ಘಸಮಯ ಸಿಗುತ್ತದೆ…

ಅವರು ಆಡಿದ ಮುಂದಿನ ನಾಟಕ ‘ಮುದುಕನ ಮದುವೆ’. ತೆಳ್ಳನೆಯಗುಂಗುರು ಗೂದಲಿನ ಕಂಪನಿ ಯಜಮಾನ ಮುದುಕನ ಪಾತ್ರ ಅಭಿನಯಿಸಿದ್ದ. ಅವನ ಆ ಪಾತ್ರ ನಿರ್ವಹಣೆಯಂತೂ ಹುಚ್ಚು ಹಿಡಿಸುವಷ್ಟು ಚೆನ್ನಿತ್ತು. (ಮುಂದೆ ನಾನು ಮಂಡ್ಯಕ್ಕೆ ಹೋದ ಮೇಲೆ ಮುದುಕನ ಮದುವೆಯಲ್ಲಿ ಮುದುಕನ ಪಾತ್ರವಹಿಸಿ ಅವನಿಗೆ ಆ ಪಾತ್ರವನ್ನು ಮನದಲ್ಲಿಯೇ ಅರ್ಪಿಸಿದೆ.)

ಅವರು ಕಂಪನಿ ಎಂಬ ಅವರ ಟೆಂಟನ್ನು ಅಲ್ಲಿಂದ ಕೀಳುವುದರೊಳಗೆ ಆ ಯಜಮಾನ/ಕಲಾವಿದ  ಸ್ನೇಹಿತನಾಗಿಬಿಟ್ಟಿದ್ದ. ಅವನೊಂದಿಗೇ ಮುಂದಿನೂರಿಗೆ ಮನೆಬಿಟ್ಟು ಓಡಿ ಹೋಗುವುದೆಂದು ನಿಶ್ಚಯಿಸಿದ್ದೆ. ಅದೊಂದು ದಿನ ಮುಂಜಾನೆ ಅವನೊಂದಿಗೆ ಧಾರೇಶ್ವರ ಸಮುದ್ರದಂಡೆಗೆ ಹೋಗಿದ್ದೆ.

‘ನಿಮ್ಮೊಡನೆ ನಾನೂ ಬರುತ್ತೇನೆ’ ಎಂದೆ. ಆತ ನನ್ನ ಅಂಗೈಯನ್ನು ಮೆತ್ತಗೆ ಒತ್ತುತ್ತ ‘ಈಗ ಬೇಡ. ನೀನು ಓದಿ ನಿನ್ನ ಊಟದ ಹಣ ಸಂಪಾದಿಸಿ ಆಮೇಲೆ ನಾಟಕ ಮಾಡು. ಇಲ್ಲದಿದ್ದರೆ ನಮ್ಮ ಹಾಗೆ ಬೇಡ ಬೇಕಾಗುತ್ತದೆ. ನಾವು ನಾಟಕ ಮಾಡೋಕಿಂತ ಬೇಡೋದೇ ಹೆಚ್ಚು’ ಅಂದ. ನಾನು ಮಾತನಾಡಲಿಲ್ಲಅಳು ಒತ್ತರಿಸುತ್ತಿತ್ತು.

ಇಂದಿಗೂ ನಮೋ ವೆಂಕಟೇಶಾ… ಹಾಡು ಧ್ವನಿವರ್ದಕದಿಂದ ಬರುತ್ತಿದ್ದಂತೆಯಕ್ಷಗಾನದಲ್ಲಿ ‘ಕೇಳಿ’ ಹೊಡೆದಾಗ ಬರುವ ಆಟದ ಮೂಡಿನಂತೆ ಹೊಕ್ಕುಳಲ್ಲೊಂದು ಚಿಕ್ಕ ಕಂಪನ ನಾಟಕ ನೋಡಲು ಸಜ್ಜುಗೊಳಿಸುತ್ತದೆ.

‍ಲೇಖಕರು ಶ್ರೀಪಾದ್ ಭಟ್

August 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Sudha Hegde

    ಎತ್ತಿನ ಗಾಡಿಯ ಮೇಲೆ ಹೋಗಿ ಚನ್ನಪ್ಪ ಚನ್ನೆ ಗೌಡ ನಾಟಕ ನೋಡಿದ ನೆನಪಾಯಿತು. ಆ ಕಾಲದ ಇನ್ನೊಂದು ಆಕರ್ಷಣೆಯೆಂದರೆ ಸೈಕಲ್ ಸವಾರಿಯಾಗಿತ್ತು. ಅವರೆಲ್ಲಾ ಈಗೆಲ್ಲಿ ಹೋದರೊ?

    ಪ್ರತಿಕ್ರಿಯೆ
  2. ಕಿರಣ್ ಭಟ್

    ಸದಾರಮೆಯ ಕಳ್ಳನ್ನ ನೋಡೋ ಚಟಕ್ಕೆ ಕಳ್ಳ ಮೀಡವೂ ತಡೆಯಲಿಲ್ಲ!

    ಪ್ರತಿಕ್ರಿಯೆ
  3. Ahalya Ballal

    ಎದುರಿನ ಮನೆಯ ಶೆಟ್ಟರು ಹೆಂಚಿನ ಮೇಲೆ ಟಾರ್ಚ್ ಬಿಟ್ಟಾಗ ಒಂದು ಗಳಿಗೆ ಎದೆ ಧಸಕ್ ಅಂತು. ಸಿಕ್ಕಿಬಿದ್ರಾ? ಅಂತ.

    ಕಂಪೆನಿ ನಾಟಕಗಳ ಜಾದೂ ನೋಡುತ್ತ ಬೆಳೆದ ನಿಮ್ಮನ್ನೆಲ್ಲ ಕಂಡರೆ ಹೊಟ್ಟೆಕಿಚ್ಚು.

    ಪ್ರತಿಕ್ರಿಯೆ
  4. Kavya Kadame

    ಶಾಪಗ್ರಸ್ಥ ಅಪ್ಸರೆಯಂತೆ ಸದಾರಮೆ ಮುಂಜಾನೆ ಮನೆ ಬಾಗಿಲಿಗೇ ಬರುವುದು ಚೆಂದ ಇದೆ ಸರ್. ನಾವು ನಾಟಕ ಮಾಡೋದಕ್ಕಿಂತ ಬೇಡೋದೇ ಹೆಚ್ಚು ಎಂದು ಕಂಪನಿ ನಾಟಕದ ಆ ನಟ ಹೇಳಿದಾಗ ಕ್ಷೋಭೆಯಾಯಿತು. ಕಂಪನಿ ನಾಟಕಗಳು ವಿಕಾಸವಾಗುತ್ತ ಬಂದ ದಾರಿಯನ್ನು ಮಿಸಳ್ ಬಾಜಿಗೆ ಹೋಲಿಸಿದ್ದು ಅಪರೂಪವಾಗಿದೆ. ಅವರು ಅಂಥ ಬಡತನದಲ್ಲೂ ಊರೂರಿಗೆ ಟೆಂಟು ತೆಗೆದುಕೊಂಡು ಹೋಗಿ ನಾಟಕ ಆಡುತ್ತಿದ್ದರು ಎಂದರೆ ಕಲೆಯ ನಿಗೂಢ ಸೆಳೆತದ ಬಗ್ಗೆ, ಆ ಶಕ್ತಿಯ ಬಗ್ಗೆ ಸೋಜಿಗವಾಗುತ್ತದೆ. ಮತ್ತು ನೀವು ಹೆಂಚು ತೆಗೆದು ನಾಟಕ ನೋಡಲು ಹೋಗುತ್ತಿದ್ದ ಅನುಭವ ಸೊಗಸಾಗಿ ಮೂಡಿ ಬಂದಿದೆ. 

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: