ಕುಪ್ಪಳಿಯಲಿ ಮಳೆ ಬಂತು!!

ಒಂದಾನೊಂದು ಕಾಲ­ವಿತ್ತು. ­ಮಳೆ ­ಇಂಥ ­ದಿನವೇ ­ಕಡಲ ­ತಡಿಯಲ್ಲಿ ಕಾಲೂರುತ್ತದೆ ­ಎಂದು ಖಚಿತ­ವಾಗಿ ­ಹೇಳುವ ­ಕಾಲ ­ಅದು. ಭೂಮಿ ­ಮತ್ತು ಆಕಾ­ಶಗಳ ಸುಮಧುರ ­ಸಂಬಂಧ ನಿಯತ­ವಾಗಿ ­ಇದ್ದ ­ಕಾಲವದು.  ಭೂಮಿಯ ­ಅಚ್ಚ ­ಹಸಿರು, ­ಪಚ್ಚೆ ­ನೆಲ, ಆಕಾ­ಶ­ವನ್ನೇ ಚುಂಬಿಸುವ ­ಬೃಹತ್ ­ಮರಗಳು, ಬೆಟ್ಟಗಳ ­ತುತ್ತ ತುದಿಯಲ್ಲಿ ಹುಲುಸಾಗಿ ­ಬೆಳೆದು ತೊನೆದಾಡುವ ಹುಲ್ಲುಗಾ­ವಲುಗಳು, ­ಅಣಬೆ, ­ಆರ್ಕಿಡ್, ­ಬಿದಿರು, ­ಬೆತ್ತ, ಬಳ್ಳಿಗಳೂ ಸೇರಿದಂತೆ ­ಸಾವಿರಾರು ­ಬಗೆಯ ­ಹೆಣೆದು ­ಹಬ್ಬಿದ ನಿಬಿಡಾರಣ್ಯದ ಜೀವ­ಸಂ­ಕುಲಗಳು ನಳ­ನ­ಳಿಸುತ್ತಿದ್ದ ­ಕಾಲ ­ಅದು. 

ಸಮುದ್ರದಲ್ಲಿ ­ಹುಟ್ಟಿ ಆಕಾ­ಶದಲ್ಲಿ ವಿಹ­ರಿಸುವ ­ಮೇಘ ಸಂಕುಲಕ್ಕೂ ­ಈ ­ಜೀವಜಾಲಕ್ಕೂ ­ಎಲ್ಲಿಲ್ಲದ ­ನಂಟು. ­ನನಗೆ ಗೊತ್ತಿರುವಂತೆ ­ನಮ್ಮ ಮಂತ್ರಿಗಳೆಂಬ ­ಮಹಾ ­ಮೂರ್ಖರು, ಪುರೋ­ಹಿತರು ನಡೆಸುವ ­ಹೋಮ ಹವ­ನಾ­ದಿಗ­ಳಿಗೆ ­ಮಳೆರಾಯ ­ಕ್ಯಾರೆ ­ಎಂದ ಕಾಲ­ವಿಲ್ಲ. ­ಆದರೆ ಜೀವಜಾ­ಲದ ­ಮುಗ್ಧ ­ಸಂಕುಲ ಬಾಯ್ತೆರೆದಾಗ ­ಅವುಗಳ ­ಅಭೀಪ್ಸೆಗೆ ­ತಕ್ಕಂತೆ ­ಮಳೆರಾಯ ಹನಿ­ಹ­ನಿ­ಯಾಗಿ ಕರಗುತ್ತಿದ್ದ. ತೊರೆತೊರೆ­ಯಾಗಿ ಹರಿಯುತ್ತಿದ್ದ. 

­ಆದರೆ ­ಇಂದು ­ಸ್ವಾರ್ಥವೇ ಮೈವೆತ್ತಂ­ತಿರುವ ಮನುಷ್ಯನ ­ದುರಾಸೆಗೆ, ನಿರ್ಲಕ್ಷ್ಯಕ್ಕೆ ಜೀವ­ಸಂ­ಕುಲ ಸರ್ವ­ನಾ­ಶ­ವಾಗುತ್ತಿದೆ. ಸಮುದ್ರ­ದಿಂದ ­ಹುಟ್ಟುವ ­ಮೋಡಗಳು ­ನಮ್ಮ ವನರಾ­ಶಿಗೆ ಆಕರ್ಷಿತ­ವಾಗಿ ­ಮಳೆ ಸುರಿಸುತ್ತವೆ ­ಎಂಬ ­ಕನಿಷ್ಠ ‘ಕಾಮನ್¬ಸೆನ್ಸ್’ ­ಇಲ್ಲದ ­ನಮ್ಮ ರಾಜಕಾರ­ಣಿಗಳು ­ಅರಣ್ಯವನ್ನು ­ಹರಾಜು ­ಹಾಕಿ, ಮಳೆಗಾಗಿ ­ಹೋಮ ಮಾಡುತ್ತಾರೆ.’ ನೋಡನೋಡುತ್ತಿದ್ದಂತೆ ­ಸಾಗರ, ಹೊಸ­ನಗರ, ತೀರ್ಥ­ಹಳ್ಳಿ, ­ಕೊಪ್ಪ, ಶೃಂಗೇರಿ, ಕಾರ್ಕಳ, ಕುದ್ರೆಮುಖ, ­ಪುತ್ತೂರು, ­ಸುಳ್ಯದ ­ಅನೇಕ ಮಳೆಕಾಡುಗಳು ­ಕರಗಿ ­ಹೋಗಿ, ­ಅಕೇಶಿಯಾ, ­ಮ್ಯಾಂಜಿಯಂ, ರಬ್ಬರುಗಳನ್ನು ­ಹೊತ್ತು ಕುಳಿ­ತಿವೆ. ­ಎಲೆ ಕೊಳೆಯದ ­ಆ ಮರಗಳ­ಡಿಯಲ್ಲಿ ಜೀವಜಾಲ ಬದುಕುವುದಾದರೂ ­ಹೇಗೆ? ಒಟ್ಟಿ­ನಲ್ಲಿ ­ಸಹ್ಯಾದ್ರಿಯ ­‘ಜಟಿಲ ಕಾನ­ನಗಳಲ್ಲಿ ­ಕುಟಿಲ ಕಾರ­ಸ್ಥಾ­ನ’ಗಳು ಎಡೆಬಿಡದೆ ನಡೆಯುತ್ತಿವೆ.

­ಇಷ್ಟಾಗಿಯೂ ­ನಮ್ಮ ­ಪಶ್ಚಿಮ ಘಟ್ಟಗಳ ­ನಿರ್ದಿಷ್ಟ ಪ್ರದೇ­ಶಗಳಲ್ಲಿ, ­ಮನುಷ್ಯ ­ನುಸುಳಲು ಅಸದಳ­ವಾದ ­ಕೆಲವು ಭಾಗಗಳಲ್ಲಿ ­ಇನ್ನೂ ­ಕಾಡುಗಳು ಬದುಕಿವೆ. ­ಆಗುಂಬೆ, ಕೊಡಚಾದ್ರಿ, ಹುಲಿ­ಕಲ್, ­ನಾಗೋಡಿ, ­ಮೇಘಾನೆ, ಗೋವರ್ಧನ ­ಗಿರಿ, ­ಮುಂತಾದ ಘಟ್ಟಗಳಲ್ಲಿ ­ಇಂದಿಗೂ ­ಅರಣ್ಯ ಒಂದಿಷ್ಟಾದರೂ ­ಉಳಿದಿವೆ. ಅಳಿದುಳಿದ ­ಸಸ್ಯ ­ಸಂಕುಲ ­ಮತ್ತು ಪ್ರಾಣಿ­ಸಂ­ಕುಲದ ­ಈ ಬಾಯ್ದೆರೆವ ಬದುಕಿಗೆ ನೀರುಣಿ­ಸಲಾದರೂ ­ಮಳೆರಾಯ ಬರಲೇಬೇಕು. ­ಹಾಗೇ ತಡವಾ­ಗಿ­ಯಾದರೂ ­ಅವನು ­ಬಂದ. ಮನುಜನ ಮೇಲೆ ಮುನಿ­ಸಿಕೊಂಡು ­ದೂರಾಗಿದ್ದ ­ಮಳೆರಾಯ ­ಅಂತೂ ­ಬಂದ.

ಅಂದು ­ಜುಲೈ ­ಒಂದನೇ ­ತಾರೀಖು. ­ಆಷಾಢ ­ಮಾಸದ ­ಆರಂಭ. ­ಪುನರ್ವಸು ­ಮಳೆಯ ಮೊದಲ ­ಪಾದ, ­ನೈರುತ್ಯ ಮೂಲೆ­ಯಿಂದ ­ಕರಿ ಮೋಡಗಳ ­ಸವಾರಿ ಮಾಲೆಮಾಲೆಯಾಗಿ ಬರತೊಡಗಿತು. ­ಬೆಳಗ್ಗೆ ಪ್ರಖರ­ವಾಗಿ ­ಇದ್ದ ­ಚುರುಕು ­ಬಿಸಿಲು ಮಧ್ಯಾಹ್ನದ ­ವೇಳೆಗೆ ಮಾಯವಾಗಿ ತಣ್ಣೆಳ­ಲಿನ ­ತಂಪು ­ಗಾಳಿ ಬೀಸತೊಡಗಿತು.  ­ಮೂರು ­ಗಂಟೆಯ ­ವೇಳೆಗೆ ದೂರದಲ್ಲೆಲ್ಲೋ ಗುಡುಗಿದ ­ಸದ್ದು. ಬೃದಕಾರದ ­ಮೋಡಗಳು ದಟ್ಟೈಸುತ್ತಿದ್ದಂತೆ ­ಇಡೀ ವಾತಾ­ವರ­ಣವೇ ­ಗಂಭೀರ. ತಡಮಾಡದೆ ­ಮಳೆ ­ಬಂದೇ ­ಬಿಟ್ಟಿತು! 

­ತುಂತುರು ­ತುಂತುರು ­ಹನಿ, ಹದ­ವ­ರಿತ ­ತಣ್ಣನೆಯ ­ಗುಡುಗು, ­ನಮ್ಮ ­ಗುಂಡನ ­ಕಣ್ಣಲ್ಲಿ ಆನಂದಬಾಷ್ಪ. ‘­ನೋಡಿ ­ಸಾರು, ನಾನೇಳ­ಲಿಲ್ವೇ, ­ಮಳೆ ­ಬರ್ತದೆ ­ಅಂತ’ ­ಎಂದು ­ಉದ್ಗರಿಸಿದ. ­ಹೌದು ­ಮಳೆ ಬಂದೇ ­ಬಂತು. ­ಎಲ್ಲಿಯೋ ದೂರದಲ್ಲಿ ­ಘಟ್ಟ ಏರುತ್ತಿರುವ ­ಹತ್ತಾರು ­ಲಾರಿಗಳ ಏರಿಳಿತದ ಸದ್ದಿ­ನಂತೆ ಮೊರೆಯತೊಡ­ಗಿತ್ತು. ­ ಹತ್ತೇ ನಿಮಿಷದಲ್ಲಿ ­ಅದು ಬಿರುಗಾಳಿಯ ­ಸದ್ದು ­ಎಂದು ­ಹೊತ್ತಾಯಿತು. 

ರಭ­ಸದ ­ಗಾಳಿಗೆ ­ಎತ್ತರದ ಮರಗಳ ರಂಬೆಕೊಂಬೆಗಳು ­ಆಕಾಶ ­ಭೂಮಿ ಒಂದಾಗುವಂತೆ ತೊಯ್ದಾಡತೊಡ­ಗಿದವು. ­ಗಾಳಿಯ ರಭ­ಸದೊಡನೆ ­ದಪ್ಪದಪ್ಪ ಹನಿಗಳ ­ಹೊಡೆತ. ­ಹಾಗೇ ­ಅರ್ಧಗಂಟೆಯ ಚದುರಂಗದಾ­ಟದಲ್ಲಿ ­ಗಾಳಿ ­ಮಳೆಯ ಪರಸ್ಪರ ಪೈ‌ಪೋಟಿ. ­ಕೊನೆಗೆ ­ಸೋತದ್ದು ­ಗಾಳಿ. ­ ಗಾಳಿ ನಿಶ್ಚ­ಲ­ವಾಗುತ್ತಿದ್ದಂತೆ ­ಮಳೆಯ ­ಆರ್ಭಟ. ಸ್ವರಸ್ವರ­ವಾಗಿ ಆರಂಭ­ವಾದ ­ಮಳೆ ­ಕ್ರಮೇಣ ರಭ­ಸಗೊಳ್ಳುತ್ತಾ ಧಾರೆಧಾರೆ­ಯಾಗಿ ಅಪ್ಪಳಿ­ಸತೊಡ­ಗಿತ್ತು. ­ಹಗಲು ­ನಾಲ್ಕು ­ಗಂಟೆ ­ಸಂಜೆಯ ­ಏಳರಂತೆ ­ಮಾರ್ಪಾಟಾಯಿತು. ­ಅದೆಲ್ಲಿ ಅಡಗಿದ್ದವೋ ­ಮೋಡಗಳು, ­ಅವು ಮೋಡಗಳಲ್ಲ, ಕಾರ್ಮೋಡಗಳು! ­ಬಿಸಿಲ ಜಳ­ದಿಂದ ­ಬಾಯ್ತೆರೆದ ಭೂತಾಯಿಗೆ ­ಅದೊಂದು ಆಹ್ಲಾದ­ಕರ ­ರಾತ್ರಿ. 

­ಅದು ಮೊದ­ಲಿಗೆ ಗೋಚರ­ವಾದದ್ದು ಕಪ್ಪೆಗಳ ­ಮೇಳದ ­ಮೂಲಕ. ­ಎಂಟು ­ಗಂಟೆಯ ­ವೇಳೆಗೆ ­ಕರೆಂಟ್‌ ಮಾಯ. ಬಿರುಮಳೆ ಮುಂದುವ­ರಿದೇ ­ಇತ್ತು. ಕಗ್ಗತ್ತಲ ­ರಾತ್ರಿ. ­ನಾನು ­ಉಳಿದಿದ್ದ ಅತಿಥಿಗೃಹದಲ್ಲಿ ಮುಂಬತ್ತಿಯೂ ­ಇಲ್ಲ. ಮ್ಯಾಚ್‌ಬಾಕ್ಸ್‌ ­ಮೊದಲೇ ­ಇಲ್ಲ. ­ಸದ್ಯ ­ನನ್ನಲ್ಲೊಂದು ­ಟಾರ್ಚ್‌ ­ಇತ್ತು, ಟಾಯ್‌ಲೆಟ್ ­ರೂಮಿಗೆ ಅನುಕೂ­ಲ­ವಾಗುವಂತೆ! ­

ಇಡೀ ಕಟ್ಟಡದಲ್ಲಿ ­ನಾನು ­ಮತ್ತು ­ಗುಂಡ ­ಇಬ್ಬರೇ.  ಸುತ್ತಲೂ ­ಕತ್ತಲ ­ರಾಶಿ. ­ಗುಡುಗು ­ಮಿಂಚು ­ಕೂಡ ­ಇಲ್ಲದ ­ರಾತ್ರಿ. ­ಆದರೆ ­ಮಳೆ ­ಮಾತ್ರ ಧಾರೆಧಾರೆ­ಯಾಗಿ ಸುರಿಯುತ್ತಲೇ ­ಇತ್ತು. ­ಮೊದಲ ­ಮಳೆಯ ­ಸುಖವೋ ­ಎಂಬಂತೆ ಜೀರುಂಡೆಗಳ ಅನವರತ ­ನಾದ! ರಾತ್ರಿ­ಯಾಗುತ್ತಿದ್ದಂತೆ ­ಕಪ್ಪೆ ಕುಟುಂಬಗಳ ವಟ­ವಟ ­ತಾಳ, ­ಕಾಡು, ­ಬೆಟ್ಟ, ­ಮನೆ, ­ಮಠ, ­ಆಕಾಶ, ­ನಕ್ಷತ್ರ ಮುಂತಾದ ­ಸೃಷ್ಟಿಯ ­ಯಾವ ­ಅದ್ಭುತಗಳು ­ಈಗ ­ಇಲ್ಲಿ ­ಇಲ್ಲ, ­ಎಲ್ಲವೂ ­ಮಂಗಮಾಯ, ­ಕತ್ತಲು ­ಮತ್ತು ­ಮಳೆ ­ಎರಡೇ ­ಸರ್ವ­ವ್ಯಾಪಿ, ­ಸರ್ವಂ ­ಶೂನ್ಯಂ.

ಕುವೆಂಪು ­ಕುಪ್ಪಳಿಯ ­ಈ ­ನೀರವ ­ರಾತ್ರಿಯನ್ನು ಅನುಭ­ವಿ­ಸಿಯೇ ­ತಾನೇ ­ಈ ­ಕವನ ರಚಿ­ಸಿದ್ದು.

­ಕದ್ದಿಂಗಳು; ­ಕಗ್ಗತ್ತಲು;

ಕಾರ್ಗಾಲದ ­ರಾತ್ರಿ.

ಸಿಡಿಲ್ಮಿಂ­ಚಿಗೆ ನಡುಗುತ್ತಿದೆ

­ಪರ್ವತ ವನಧಾತ್ರಿ.

ತುದಿಯಿಲ್ಲದೆ ಮೊದ­ಲಿಲ್ಲದೆ

ಹಿಡಿದಂ­ಬರವನು ­ತಬ್ಬಿದೆ

ಕಾದಂ­ಬಿನಿ ­ರಾಶಿ;…

­ಹೊಂಬಳ್ಳಿಯು ಹೊಮ್ಮಿದವೊಲು

­ಥಳ್ಳೆನೆ ­ಮುಗಿಲಂಚು,

­ಇರುಳಲಿ ಹಗ­ಲಿ­ಣಿ­ಕಿದವೊಲು

ಹಾವ್ನಾ­ಲಗೆ ­ಮಿಂಚು

ನೆಕ್ಕುತ­ಲಿದೆ ­ಕತ್ತಲೆಯನು;

ಕುಕ್ಕುತ­ಲಿದೆ ಬುವಿಗಣ್ಣನು

­ಮಿಂಚ್ಹಕ್ಕಿಯ ­ಚಂಚು!

ಆಕಾ­ಶವೆ ನೀರಾಯ್ತೆನೆ

ಸುರಿಯುತಿದೆ ಭೋರ್ಭೋರೆನೆ

ಮುಂಗಾರ‌್ಮಳೆ ­ಧಾರೆ;

­ಲಯ ­ಭೀಷಣ ಮಳೆಭೈರವ

­ಮೈದೋರಲು ಮರೆ­ಯಾ­ಗಿವೆ

ಭಯದಲಿ ಶಶಿತಾರೆ!

­ಲಯ ­ರುದ್ರನ ­ಜಯ ­ಡಿಂಡಿಮ

­ಘನ ­ವಜ್ರದ ­ರಾವ;

­ಭವ ವಿಪ್ಲವ­ಕರ ­ಭೈರವ

­ವರ ­ತಾಂಡವ ­ಭಾವ!

ದಿಗ್ದಿಕ್ಕಿಗೆ ­ಅದೊ ­ಹೊಕ್ಕಿದೆ

ಕಾರ್ಮುಗಿ­ಲಿನ ­ಕೇಶ!

ಸಿಡಿಲ್ಮಿಂಚಲಿ ಹೊಮ್ಮುತಿದೆ

­ಮಳೆ ­ಭೈರವ ­ರೋಷ!

­ಮಳೆ ­ಎಂಬುದು ­ಬರಿ ­ಸುಳ್ಳಿದು!

ಮಳೆಯಲ್ಲಿದು! ಮಳೆಯಲ್ಲಿದು!

ಪ್ರಲಯದ ­ಆವೇಶ!

August 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: