ಮನುಷ್ಯರು ಎಲ್ಲಿದ್ದರೂ ಒಂದೇ,..

ಈಕೆ ‘ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ ಎಂಜಿನಿಯರ್ ತಂದೆ ಸುಧೀಂದ್ರ ಹಾಲ್ದೊಡ್ಡೇರಿ, ತಾತ, ಖ್ಯಾತ ಪತ್ರಕರ್ತ ಎಚ್ ಆರ್ ನಾಗೇಶರಾವ್ ಅವರಿಂದ ಪಡೆದದ್ದು ಬಹಳಷ್ಟು.

ಪ್ರಸ್ತುತ ಬಾರ್ಸಿಲೋನಾದಲ್ಲಿ ತಾವು ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಕಂಡ ನೋಟಗಳ ಚಿತ್ರಣ ಇಲ್ಲಿದೆ

“ನಾವು ಬಾರ್ಸಿಲೋನಾದಲ್ಲೇ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ, ಸುಮ್ಮನೆ ವರ್ಲ್ಡ್ ವಾರ್ ಅದು ಇದು ಎಂದು ತಲೆ ಕೆಡಿಸಿಕೊಂಡು ಇಲ್ಲಿ ಬಂದಿದ್ದಾಯಿತು, ಸ್ವಲ್ಪ ನೆಮ್ಮದಿಯಾಗಿ ಇರೋಣ ಎಂದು ಬೆಟ್ಟ ಹತ್ತೋಣ ಎಂದು ಕೊಂಡರೆ ನಮ್ಮ ಕಥೆ ಗೋವಿಂದ” ಎಂದು ಹುಡುಗಿ  ಪಿರಿಪಿರಿ ಮಾಡಿಕೊಂಡೆ ಇದ್ದಳು. 

“ಹಸಿವಾಗುತ್ತಿದೆ” ಎಂದು ಹುಡುಗರು ಶುರು ಮಾಡಿದಾಗ, “ನಾನು ಒಂದು ಒಳ್ಳೇ ರೆಸ್ಟೋರೆಂಟ್ ಹುಡುಕುತ್ತೇನೆ ನೋಡು” ಎಂದು ಫೋನ್ ತೆಗೆದುಕೊಂಡು ಹುಡುಕೋದಕ್ಕೆ ಶುರು ಮಾಡಿದರೆ, ಯಾವುದೋ ಕೆರಿಬಿಯನ್ ಐಲಾಂಡಿನ ಅಡ್ರೆಸ್ ಬಂದು ಕೂತಿತ್ತು.

“ಹೇ ಮಾನ್ಸೆರಾಟ್ ಅಲ್ಲೂ ಒಂದಿದೆ” ಎಂದು ಕಿರುಚಿದಾಗ, ಹುಡುಗರು. “ಹಾಗಾದರೆ ನಾವೀಗ ಒಂದು ಫ್ಲೈಟ್ ಹಿಡಿದು ಅಲ್ಲಿಗೆ ಹೋಗಿ ತಿನ್ನಬೇಕಾ ಹುಡುಗಿ” ಎಂದು ಕಿಚಾಯಿಸಿದರು. “ಎರಡೆರೆಡು ಜಾಗಗಳು ಒಂದೇ ಹೆಸರಿನದ್ದಾಗಿದ್ದರೆ ತುಂಬಾ ಕಷ್ಟ” ನಕ್ಕು ಅಲ್ಲೇ ಹೊಸ ಹೋಟೆಲ್ಲನ್ನ ಹುಡುಕಲು ಶುರು ಮಾಡಿದಳು.

ಬಾರ್ ದೆ ಲಾ ಪ್ಲಾಸ ಎಂಬ ಹೆಸರು ಸ್ಕ್ರೀನಿನ ಮೇಲೆ ಕಾಣಿಸತೊಡಗಿತು. ಸದ್ಯ ಒಂದು ಸ್ಯಾನ್ಡ್ ವಿಚ್ ಆದ್ರೂ ಇಲ್ಲಿ ಸಿಗುತ್ತದೆ ಎಂದು ಎಲ್ಲರೂ ಅಂದುಕೊಂಡು ಅಲ್ಲಿಗೆ ಹೋದರು. “ಇಲ್ಲಿ ಟೇಬಲ್ ಬುಕ್ ಮಾಡಲು ಸಾಧ್ಯವಿಲ್ಲ” ಎಂಬ ದೊಡ್ಡ ಬೋರ್ಡ್ ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು.

ಇದು ವಿದ್ಯಾರ್ಥಿ ಭವನದಲ್ಲಿ ಹಾಕುವ “ಲೋಟದಲ್ಲಿ ಕೈ ತೊಳೆಯಬಾರದು” ಗಿಂತ ಕಠೋರವಾಗಿ ಕಾಣಿಸತೊಡಗಿತ್ತು. ಯೂರೋಪಿನ ಸುಮಾರು ಜಾಗಗಳಲ್ಲಿ ಹೀಗೆ ಟೇಬಲ್ ಬುಕ್ ಮಾಡಿ ಹೋಗುವುದು ಸಂಪ್ರದಾಯ. ಟೇಬಲ್ ಬುಕ್ ಮಾಡಿ ಅಷ್ಟೇ ಜನ ಅಷ್ಟು ಕೂತು ಅಲ್ಲೂ ಶಿಸ್ತಿನ ಸಿಪಾಯಿಗಳಾಗಿ ಇರುವುದು, ತಿನ್ನುವುದು ಮತ್ತು ಕುಡಿಯುವುದನ್ನ ನೋಡಿ ಆಶ್ಚರ್ಯವಾಗುತ್ತಿತ್ತು ಹುಡುಗಿಗೆ.

“ಸರಿ ಬನ್ರೋ ಇಲ್ಲಿ ನಮಗೆ ಲೈಟ್ ಸ್ನ್ಯಾಕ್ಸ್ ಆದರೂ ಸಿಗುತ್ತದೆ, ಸ್ಟೂಡೆಂಟ್ ರಿಯಾಯಿತಿಯೂ ಸಿಗಾಬಹುದಾ ನೋಡೋಣ” ಎಂದು ಒಳಗೆ ಕಾಲಿಟ್ಟಾಗ ಮೆನು ನೋಡಿಯೇ ಹುಡುಗಿಗೆ ಖುಷಿಯಾಯಿತು. ಜಗತ್ತಿನ ಎಲ್ಲಾ ಜಂಕ್ ಫುಡ್ ಅಲ್ಲೇ ಸಿಗುವ ಜಾಗ ಅದಾಗಿತ್ತು. ಫ್ರೆಂಚ್ ಫ್ರೈಸ್ ಅಂತೆ, ಅದರ ಮೇಲೆ ಚೀಸ್, ಕೆಲವೊಮ್ಮೆ ಮೇಯೋನಿಸ್, ಅದರ ಮೇಲೆ ಸಾಲ್ಸಾ, ಮತ್ತೊಂದು ಕಡೆ  ನಾಚೋಸ್, ಇತ್ತ ಕಡೆ ಪಿಜ್ಜಾ, ಪೆಸ್ಟೊ ಪಾಸ್ತಾ, ಬಾರ್ಬೆಕ್ಯೂ ಚೀಸ್, ಜೊತೆಗೆ ಆರೆಂಜ್ ಪಾನೀಯ ಎಲ್ಲವೂ ಅವಳನ್ನ ಇಲ್ಲೇ ಇರುವ ಹಾಗೆ ಮಾಡಿತು. 

 ಮೆನು ನೋಡಿಯೇ ಅವಳಿಗೆ ಅರ್ಧ ಹೊಟ್ಟೆ ತುಂಬಿತು. ಕತಲಾನ್ ಯೂನಿಯಲ್ಲಿ ಓದುವ ಮಕ್ಕಳಿಗೆ ರಿಯಾಯಿತಿ ಬೇರೆ. ಇರುವುದೆಲ್ಲವನ್ನೂ ಆರ್ಡರ್ ಮಾಡೋಣ ಎಂದು ಅಂದುಕೊಳ್ಳುವಷ್ಟರಲ್ಲಿ ಪಕ್ಕದ ಟೇಬಲ್ಲಿನಲ್ಲಿದ್ದ ಹುಡುಗ “ತುಂಬಾ ಆರ್ಡರ್ ಮಾಡಬೇಡಿ ಆಮೇಲೆ ಬೆಟ್ಟ ಹತ್ತೋದಕ್ಕೆ ಸಾಧ್ಯವಿಲ್ಲ” ಎಂದು ಎಚ್ಚರಿಸಿದ. “ಇವನ್ಯಾವ ಸೀಮೆಯವನು ನನಗೆ ಹೇಳೋದಕ್ಕೆ” ಎಂದು ಅದು ಇದು ಎಂದು ೫ ೬ ಐಟಂ ಆರ್ಡರ್ ಮಾಡಿದಳು ಹುಡುಗಿ.

“ಕಮ್ ಜಾಯಿನ್ ಅಸ್” ಎಂದು ಸಿಡ್ ಹೇಳಿದಾಗಲೇ, ಸಿಡ್ ಕಾಲನ್ನು ಜೋರಾಗಿ ತುಳಿದಳು ಹುಡುಗಿ. “ಯಾವನ್ಯಾವನ್ನನ್ನೋ ಯಾಕೆ ಕರೆಯಬೇಕು” ಎಂದು ಸಿಗ್ನಲ್ ಕೊಡುವುದಕ್ಕೆ ಮಾಡಿದರೂ ಸಿಡ್ ಆಗಲೇ ಅವನ್ನನ್ನ ಕರೆದಿದ್ದ. “ಈ ಹುಡುಗರಿಗೆ ಯಾವ ಸೂಕ್ಷ್ಮವೂ ಅರ್ಥವಾಗುವುದಿಲ್ಲ” ಎಂದು ಅಂದುಕೊಂಡು ಸುಮ್ಮನೆ ತನ್ನ ನಾಚೊಸ್ ತಿನ್ನಲು ಶುರು ಮಾಡಿದಳು.

“ಲಿಬರಲ್ ಆರ್ಟ್ಸ್ ಡಿಗ್ರಿ ಮಾಡುತ್ತಿದ್ದೇನೆ, ನನ್ನ ಹೆಸರು ಆಲ್ಬಾ” ಎಂದ ಅವನು. ಆರ್ಟ್ಸ್ ಕಡೆ ಮುಖ ಹಾಕಿ ಮಲಗದೆ ೨ ಪೀಳಿಗೆ ಇದ್ದ ಈ ಭಾರತೀಯ ಹುಡುಗ ಮತ್ತು ಹುಡುಗಿಯ ಮುಖದಲ್ಲಿ ಆಶ್ಚರ್ಯ ಮನೆ ಮಾಡಿತ್ತು. “ಲಿಬರಲ್ ಆರ್ಟ್ಸ್ ಅಂದರೆ ಏನು” ಎನ್ನುವ ಪ್ರಶ್ನೆ ಮುಖದಲ್ಲಿ ಮೂಡಿತ್ತು. ಐಐಟಿ, ಎಚ್ ಸಿ ವರ್ಮಾ, ಫಿಸಿಕ್ಸ್, ಮ್ಯಾಥ್ಸ್ ಸೆಂಟಮ್, ಕ್ಯಾಮ್ಪಸ್ ಸೆಲೆಕ್ಷನ್ ಇದರಲ್ಲೇ ಇದ್ದ ಇವರಿಗೆ ಈ ಆರ್ಟ್ಸ್ ಓದುವವರು ಏನು ಮಾಡುತ್ತಾರೆ ಅನ್ನುವ ಕುತೂಹಲ ಇದ್ದೇ ಇತ್ತು.

“ಹುಮಾನಿಟೀಸ್, ಚರಿತ್ರೆ, ಸಾಹಿತ್ಯ ಇದರ ಅಧ್ಯಯನ ಮಾಡುತ್ತೇವೆ” ಎಂದು ಹೇಳಿದ ನಂತರ ಎಲ್ಲರೂ ತಮ್ಮ ಸ್ಯಾನ್ಡ್ವಿಚ್ ತಿನ್ನುತ್ತಾ ಮಾತಾಡುತ್ತಾ ಇದ್ದರು. “ಈ ದೇಶದ ಚರಿತ್ರೆ ಬಗ್ಗೆಯು ಅಧ್ಯಯನ ಮಾಡುತ್ತೀರಾ” ಎಂದು ಹುಡುಗಿ ಪ್ರಶ್ನೆ ಮಾಡುವಷ್ಟರಲ್ಲೇ ಹುಡುಗರು, “ಆಗಲ್ಲ ಇವಳ ಕಾಟ, ಮತ್ತೆ ಹೋರಾಟ ಎಂದು ಶುರು ಮಾಡುತ್ತಾಳೆ, ಸಾಕಾಯ್ತು, ಆಲ್ಬಾ ಪ್ಲೀಸ್ ಇವಳಿಗೆ ಹೀಗೆ ಚರಿತ್ರೆ ಹೇಳೋಕೆ ಶುರು ಮಾಡಬೇಡ, ಅದನ್ನು ಕಥೆ ಬರೆದು ನಮ್ಮನ್ನು ಕೊಲ್ಲುತ್ತಾಳೆ, ಅದೂ ಅರ್ಥವಾಗದಿರುವ ಭಾಷೆಯಲ್ಲಿ, ರೈಟರ್ಸ್ ಆರ್ ಡೇಂಜರಸ್” ಎಂದು ವಾರ್ನ್ ಮಾಡಿ ಆಚೆ ಬಂದರು.

“ಇದನ್ನ ಸಾಂತಾ ಮರಿಯಾ ಡೇ ಮಾಂಸೆರೆಟಾ ಆಬೆ ಎನ್ನುತ್ತಾರೆ, ಇದು ವರ್ಜಿನ್ ಡೇ ಮಾಂಸೆರೆಟಾ ಎನ್ನುವ ಪ್ರತಿಮೆಗೆ ಹೆಸರುವಾಸಿ. ಕತಲೂನ್ಯಾದ ಸಂತರಾದ ಸೇಂಟ್ ಜಾರ್ಡಿ ನಂತರ ಈಕೆಗೆ ಗೌರವ” ಎಂದು ಆಲ್ಬಾ ಶುರು ಮಾಡಿದ. ಹುಡುಗರು, “ಓಕೇ ಈ ಹಳೆ ಕಾಲದ ಕಥೆಗಳನ್ನ ಬಿಟ್ಟು ಸ್ವಲ್ಪ ಹೊಸದೇನಾದರೂ ಹೇಳು, ಅಜ್ಜ ಹಾಕಿದ ಆಲದ ಮರ ಅಂತ ನೇಣು ಹಾಕಿಕೊಳ್ಳೋದಕ್ಕೆ ಆಗತ್ತಾ” ಎಂದು ಆಲ್ಬಾನಿಗೆ ಹುಡುಗರು ಟಾಪಿಕ್ ಬದಲಾಯಿಸು ಎಂದು ಸ್ಟೈಲಾಗಿ ಹೇಳಿದರು.

ಆದರೆ ಇವತ್ತು ಹುಡುಗಿ ಮತ್ತು ಆಲ್ಬಾಗೆ ಜೋಡಿ ಸರಿಯಾದ್ದರಿಂದ ಅವರಿಬ್ಬರೂ ಅದರ ಬಗ್ಗೆ ಮಾತಾಡೋಕೆ ಶುರು ಮಾಡಿದರು. “ಇಲ್ಲಿ ಈಗಲೂ ೭೦ರಿಂದ ೮೦ ಸನ್ಯಾಸಿಗಳು ಮೌನವಾಗಿ ಧ್ಯಾನ ಮಾಡುತ್ತಾರೆ, ಬೇರೆ ಥರದ ಜೀವನ ಶೈಲಿ ಅವರದ್ದು. ಸಮುದ್ರ ಮಟ್ಟದಿಂದ ೪ ಸಾವಿರ ಫೀಟ್ ಮೇಲಿದೆ ಇದು. ಇದರ ಮೇಲೆ ನಿಂತರೆ ಇಡೀ ಬಾರ್ಸಿಲೋನಾ ಕಾಣಿಸುತ್ತದೆ, ಕೆಲವೊಮ್ಮೆ ಆಕಾಶ ಶುಭ್ರವಾಗಿದ್ದರೆ ಮಯೋರ್ಕ ಸಹ ಕಾಣಿಸುತ್ತದೆ” ಹೀಗೆ ಹೇಳುತ್ತಾ ಹೋದ.

“ಇಲ್ಲಿ ಟ್ರೆಕ್  ಮಾಡಬಹುದು, ಸೂರ್ಯೋದಯ ನೋಡಲು ಚೆನ್ನಾಗಿರುತ್ತದೆ” ಎನ್ನುವಷ್ಟರಲ್ಲಿ ಎಸಕಲೋನಿಯಾ ಕಾಯರಿನ ಹಾಡು ಕೇಳಲು ಶುರುವಾಯಿತು. “ಇದು ಯೂರೋಪಿನ ಅತ್ಯಂತ ಹಳೆಯ ಕಾಯರ್, ಇಲ್ಲಿ ಬೆಟ್ಟದ ಮೇಲೆ ಬಂದು ಹಾಡುತ್ತಾರೆ. ಈಗಲೂ ಇದು ಬಹಳ ಚೆನ್ನಾಗಿ ನಡೆಯುತ್ತಿದೆ, ಆಮೇಲೆ ಕತಲಾನ್ ಭಾಷೆಯಲ್ಲೇ ಹಾಡುತ್ತಾರೆ, ೧೦೨೫ರಲ್ಲಿ ಈ ಕಾಯರ್ ಶುರುವಾಗಿದ್ದು, ಒಂದು ದಿನವೂ ನಿಲ್ಲಿಸೋದಿಲ್ಲ ಮತ್ತು ಯುದ್ಧದ ಸಮಯದಲ್ಲಿ ರಕ್ತಪಾತವಾದಾಗಲೂ ಇಲ್ಲಿ ದೇಶದ ಶಾಂತಿಗಾಗಿ ಪ್ರಾರ್ಥನೆ ಮಾಡುತ್ತಿದ್ದರು” ಎಂದು ವಿವರಣೆ ನೀಡುತ್ತಾ ಹೋದ ಆಲ್ಬಾ.

“ರೋಮನ್ನರು ೮೮೦ರಲ್ಲಿ ವೀನಸ್ ದೇವತೆಗೋಸ್ಕರ ಈ ಬೆಟ್ಟದ ಮೇಲೆ ಒಂದು ದೇವಾಲಯವನ್ನು ಕಟ್ಟಿಸಿದರು, ನಂತರ ಈ ಗರಗಸದಂತೆ ಹಲ್ಲುಳ್ಳ ಒಂದು ಬೆಟ್ಟದ ಮೇಲೆ ಈ ಬ್ಲಾಕ್ ಮಡೋನಾ ವಿರಾಜಮಾನವಾದ ಮೇಲೆ ಅದು ಇನ್ನು ಐತಿಹ್ಯದ ಸ್ಥಳವಾಯಿತು” ಎಂಬ ಕಥೆಯನ್ನು ಕೇಳಿಸಿಕೊಂಡರು ಹುಡುಗರು.

ಪವಾಡ, ದೇವರು ಜೀವನದ ಅವಿಭಾಜ್ಯ ಅಂಗವಾದ ಭಾರತೀಯರಿಗೆ ಈ ಥರದ್ದನ್ನೆಲ್ಲ ನಂಬಲು ಅಸಾಧ್ಯವಾಗಿರಲಿಲ್ಲ. ಅವರು ಪಶ್ಚಿಮದವರು ಪವಾಡವನ್ನ ನಂಬದವರು, ಮತ್ತು ದೇವರಲ್ಲಿ ಅಷ್ಟು ನಂಬಿಕೆ ಇಲ್ಲದವರು ಎಂದೇ ಅವರಲ್ಲಿ ನಂಬಿಕೆ ಬಿತ್ತಲಾಗಿತ್ತು. ಬೇರೆ ದೇಶಕ್ಕೆ ಬಂದ ಮೇಲೆ, ಮನುಷ್ಯರು ಎಲ್ಲಿದ್ದರೂ ಒಂದೇ, ಅವರವರ ನಂಬಿಕೆ, ದೇವರು ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ ಬದಲಾಗುತ್ತದೆ ಎಂದು ಬಲವಾಗಿ ನಂಬುವುದಕ್ಕೆ ಪುರಾವೆ ಸಿಕ್ಕಿತ್ತು. ಟ್ರೇನಿನಲ್ಲಿ ನಾಜ್ಹಿಗಳು ಇಲ್ಲಿ ಹೋಲಿ ಗ್ರೇಲ್ ಹುಡುಕಿಕೊಂಡು ಬಂದಿದ್ದು, ಬ್ಲಾಕ್ ಮಡೋನಾ ಮಾಡುವ ಪವಾಡಗಳ ಕಥೆ ಇವೆಲ್ಲವೂ ಮನುಷ್ಯರನ್ನ ಯಾವ ರೀತಿ ನೋಡಬೇಕು ಎಂಬ ಅಂದಾಜು ಸಹ ಬಂದಿತ್ತು.

ಹೀಗೆ ಹತ್ತಿಕೊಂಡು ಬ್ಲಾಕ್ ಮಡೋನಾ ಪ್ರತಿಮೆಯ ಹತ್ತಿರ ಬಂದರು. ಒಂದು ದೊಡ್ಡ ಗ್ಲಾಸಿನ ಕಪಾಟಿನಲ್ಲಿ ಆಕೆಯ ಮೂರ್ತಿಯನ್ನು ಇಡಲಾಗಿತ್ತು. ಮುಟ್ಟಿ ಮುಟ್ಟಿ ಹಾಳು ಮಾಡುತ್ತಾರೆ ಎಂಬ ಭಯದಿಂದ. ಈಜಿಪ್ಟಿನ ಮಮ್ಮಿಯ ಹಾಗೆ ಇದು ಕಾಣುತ್ತಿತ್ತು. “ನಿನ್ನ ಮನಸಿನಲ್ಲಿ ಏನು ಓಡುತ್ತಿದೆ ಎಂದು ನನಗೆ ಗೊತ್ತು, ಆದರೆ ನೀನು ಈ ಪ್ರಶ್ನೆಯನ್ನು ಎಲ್ಲರ ಮುಂದೆ ಕೇಳಬಾರದು, ಒದೆ ಬೀಳತ್ತೆ” ಎಂದು ಆಲ್ಬಾ ಹೇಳಿ ಹುಡುಗಿಯನ್ನು ಸುಮ್ಮನಾಗಿಸಿದ.

ಈ ದೇವತೆಗೆ ಹರಕೆ ಹೊತ್ತರೆ ಏನು ಬೇಕಾದರೂ ಆಗುತ್ತದೆ ಎನ್ನುವಷ್ಟರಲ್ಲಿ ಥೇಟ್ ತಿರುಪತಿಯಲ್ಲಿ ವೆಂಕಟ ಗೋವಿಂದ ಗೋವಿಂದ ಎನ್ನುವ ಹಾಗೆ ಅದೆಷ್ಟೋ ಜನ ಅರ್ಥವಾಗದಿರುವ ಭಾಷೆಯಲ್ಲಿ ಏನ್ನನ್ನೋ ಕೂಗಿಕೊಳ್ಳಲು ಶುರು ಮಾಡಿದರು. ಮೌನವಾಗಿದ್ದ ಸನ್ಯಾಸಿಗಳು ಸಹ ಆಚೆ ಬಂದು ಒಂದು ನಿಮಿಷ ಬೇರೆ ಲೋಕದಲ್ಲಿ ಇರುವ ಹಾಗಾಯಿತು.

ಎಲ್ಲರೂ  ಅವರವರ ಬೇಡಿಕೆಗಳನ್ನ ಮಡೋನಾಗೆ ಸಲ್ಲಿಸುತ್ತಿರುವಾಗ “ಪಾಪಾ ಡೋಂಟ್ ಪ್ರೀಚ್” ಎಂದು ಹುಡುಗರು ರಿಯಲ್ ಮಡೋನ್ನಾಳ ಹಾಡನ್ನ ಗುನುಗಲು ಶುರು ಮಾಡಿದರು. “ಏನು ಬೇಡಿಕೊಂಡೆ ನೀನು?” ಎಂದು ಹುಡುಗರು ಆಲ್ಪಾನನ್ನ ಕೇಳಿದಾಗ, “ಹುಡುಗಿಯ ಫೋನ್ ನಂಬರ್” ಎಂದು ಹೇಳಿ ನಕ್ಕ…

August 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: