ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನಸ್ಸಿನಲ್ಲಿ ನಿನ್ನ ನಾಳೆಗಳು!

-ಶಾಲಿನಿ ರುದ್ರಮುನಿ

ನಾನು ಅಪೂರ್ಣಳಲ್ಲ

ನಾನು ಪರಿಪೂರ್ಣ ತಾಯಿ ಅಲ್ಲ
ಈ ಒಪ್ಪಿಗೆ
ನನ್ನ ಸೋಲಿನ ದನಿಯಂತು ಅಲ್ಲ!,

ಬದುಕಿನ ಸತ್ಯದ ನಿಸ್ಸಂಶಯ ಮೌನ
ದಿನವೆಲ್ಲಾ ಹರಿದಾಡುವ
ಕ್ಷಣಗಳ ನಡುವೆ,
ನನ್ನ ಉಸಿರು ಕೂಡಾ ಕೆಲಸದ
ಲಯಗತಿಯಲ್ಲೆ ಸಾಗುತ್ತದೆ,
ಕೈಗಳಲ್ಲಿ ಮನೆಯ ಒಪ್ಪ ಓರಣ,
ಮನಸ್ಸಿನಲ್ಲಿ ನಿನ್ನ ನಾಳೆಗಳು!,

ಕಣ್ಣುಗಳಲ್ಲಿ ಅನೇಕ ಪ್ರಶ್ನೆಗಳ ನೆರಳು,
ಕೆಲವೊಮ್ಮೆ
ಧ್ವನಿ ಎತ್ತರವಾಗುತ್ತದೆ,
ಅದು ಕೋಪದ ಭಾಷೆಯಲ್ಲ,
ದಣಿವಿನ ಅನುವಾದ,

ಸಹನೆಯ ಹೂವಲ್ಲು
ಮುಳ್ಳಿನ ಕೊನೆ,
ಆದರೂ, ಅದರ ಬೇರು
ಪ್ರೀತಿಯಲ್ಲೇ ನಾಟಿದೆ,

ನನ್ನೊಳಗೆ
ಒಂದು ನಿರಂತರ ಸಂಭಾಷಣೆ,
“ಸಾಕ ನಾನು ?”
“ಸಾಕ್ಷಮಳಾ ನಾನು?”
ಈ ಪ್ರಶ್ನೆಗಳೇ
ನನ್ನ ತಾಯಿತನದ ಪ್ರತಿದಿನದ ಪರೀಕ್ಷೆ.
ಕೆಲ ಕ್ಷಣಗಳಲ್ಲಿ
ನಾನು ಕಳೆದುಹೋಗುವೆ,
ಪಾತ್ರಗಳ ನಡುವೆ,
ನೀರೀಕ್ಷೆಗಳ ಗೋಡೆ ಬಿರುಕಿನಲಿ,
ಜವಾಬ್ದಾರಿಗಳ ಗದ್ದಲದಲ್ಲಿ,
ನನ್ನನ್ನೇ ಹುಡುಕುವ ಪ್ರಯತ್ನದಲ್ಲಿ ಕಡೆಗೆ,
ಆದರೂ!
ತಾಯಿಯಾಗಿರುವುದು
ಪರಿಪೂರ್ಣತೆಯ ಮಾನದಂಡವಲ್ಲ ಅಲ್ವಾ?,
ಅದು ಅಪೂರ್ಣತೆಯನ್ನು
ಸ್ವೀಕರಿಸುವ ಧೈರ್ಯ.
ನಾನು ಸಂಪೂರ್ಣಳಲ್ಲ,
ಆದರೆ ನಿನಗಾಗಿ ನಾನು
ಪ್ರತಿ ದಿನ ಪುನಃ ಹುಟ್ಟುತ್ತೇನೆ,
ಸೂರ್ಯನಂತೆ,

ನನ್ನ ಪ್ರೀತಿ,
ಅದು ನಿಯಮಗಳಿಗೆ
ಸಿಕ್ಕದ ಒಂದು ನದಿ,
ತಪ್ಪುಗಳನ್ನೂ ತೊಳೆದು
ಮತ್ತೆ ಮತ್ತೆ ನಿನ್ನತ್ತ ಹರಿಯುವ
ನಿಷ್ಕಳಂಕ ಸತ್ಯ ಹರಿವು,
ನಾನು ಪರಿಪೂರ್ಣ ತಾಯಿ ಅಲ್ಲ,
ಆದರೆ
ನಿನ್ನನ್ನು ಪ್ರೀತಿಸುವ ನನ್ನ ಹೃದಯ
ಅದು ಎಂದಿಗೂ ಅಪೂರ್ಣವಾಗುವುದಿಲ್ಲ…

‍ಲೇಖಕರು Admin

16 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading