ನನ್ನ ಅಂಕಣ ಬರಹಗಳ ಸಂಗ್ರಹ ‘ಬಾಳ್ಕಟ್ಟೆ’ ಪುಸ್ತಕದ ಔಪಚಾರಿಕ ಬಿಡುಗಡೆ ಕಾರ್ಯಕ್ರಮದಲ್ಲಿ ಆಡಬೇಕೆಂದು ಮನದಲ್ಲಿಯೇ ಒಂದೈವತ್ತು ಬಾರಿ ರಿಹರ್ಸ್ ಮಾಡಿದ್ದ ಭಾಷಣ, ಕಾರ್ಯಕ್ರಮ ಶುರುವಾಗುವ ಹೊತ್ತಿಗೆ ಅಘೋಷಿತವಾಗಿ ಬಂದು ಆವರಿಸಿದ ಆತಂಕದ ಕಾಲಡಿಗೆ ಸಿಕ್ಕಿ ನಜ್ಜುಗುಜ್ಜಾದ ಭಾಷಣ, ಚಿತ್ರವಿಚಿತ್ರವಾಗಿ ಅರ್ಧಂಬರ್ಧ ಮಾತ್ರ ಗಂಟಿಲಿನಿಂದಾಚೆ ಜಿಗಿದ ಭಾಷಣ.
-ಸಂವರ್ಥ ಸಾಹಿಲ್

ಮೂರು ವರ್ಷದ ಹಿಂದೆ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ತಂಡ ಗೆದ್ದಾಗ ಅವರ ತಂಡ ಸಹಜವಾಗಿಯೇ ಬಹಳಷ್ಟು ಸಂಭ್ರಮಿಸಿದರು. ಅಂದು ಪತ್ರಿಕಾಗೋಷ್ಠಿಯಲ್ಲಿ ತಂಡದ ನಾಯಕ ತಮ್ಮ ತಂಡ ಪ್ರಾಯೋಜಕರು ಇಲ್ಲದೆ ಹೋಗಿ ಎಷ್ಟೆಲ್ಲಾ ಕಷ್ಟಪಟ್ಟೆವು ಎಂಬುದನ್ನು ಹೇಳಿದಾಗ ಎಲ್ಲಾ ಕಡೆಯಿಂದ ಅವರ ಪರಿಶ್ರಮ ಮತ್ತು ಗೆಲುವಿನ ಕುರಿತಾಗಿ ಮೆಚ್ಚುಗೆಯ ಮಾತುಗಳು ಕೇಳಿ ಬಂದವು.
ನಂತರ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ವೆಸ್ಟ್ ಇಂಡೀಸ್ ಆಟಗಾರ ಪತ್ರಿಕಾ ಗೋಷ್ಠಿಗೆ ಬಂದು ಮುಂದಿದ್ದ ಟೇಬಲ್ ಮೇಲೆ ಕಾಲ ಮೇಲೆ ಕಾಲು ಹಾಕಿ ಕುಳಿತ. ಅದು ಬಹಳಷ್ಟು ಜನರಿಗೆ ಅಸಭ್ಯವಾಗಿ ಕಂಡು ಕಿರಿಕಿರಿ ಉಂಟು ಮಾಡಿತು. ಆಗ ನನಗೆ ನಾನೇ ಕೇಳಿಕೊಂಡ ಪ್ರಶ್ನೆ: ನಮ್ಮ ಕರುಣೆ, ನಮ್ಮ ಅಸಹನೆ ಇವೆಲ್ಲವೂ ನಿಜವಾಗಿಯೂ ಸ್ವತಂತ್ರವೇ ಎಂದು.
ಒಂದು ವರ್ಣದ, ಒಂದು ಜಾತಿಯ, ಒಂದು ದೇಶದ, ಒಂದು ವರ್ಗದ ಜನರು ದಯನೀಯರಾಗಿದ್ದಾಗ ಮಾತ್ರವೇ ನಮಗೆ ಪ್ರೀತಿಪಾತ್ರರು ಮತ್ತು ನಮ್ಮ ಕರುಣೆಗೆ ಅಥವಾ ಮಾನವೀಯ ಸ್ಪಂದನೆಗೆ ಅರ್ಹರಾಗುತ್ತಾರೆಯೇ? ಅದೇ ಜನರು ತಮ್ಮ ಸಿಟ್ಟನ್ನು ಯಾವುದೇ ವಿಧದಲ್ಲಿ ವ್ಯಕ್ತಪಡಿಸಿದರೂ ನಮಗೆ ಅದು ಯಾಕೆ ಸಹ್ಯ ಆಗುವುದಿಲ್ಲ? ಮತ್ತು ಗರ್ವದ ಹಕ್ಕು ಯಾಕೆ ಕೇವಲ ಕೆಲವರಿಗೆ ಪ್ರಾಪ್ತಿಯಾಗುತ್ತದೆ ಮತ್ತು ಕೆಲವರ ಗರ್ವ ಯಾಕೆ ಅಸಭ್ಯವಾಗಿ ನಮಗೆ ಕಾಣಿಸುತ್ತದೆ?
ಸಾಮಾಜಿಕ ಸವಲತ್ತುಗಳು ಅಷ್ಟಾಗಿ ಲಭ್ಯವಾಗದ ಜನರು ತಮ್ಮ ಬಣ್ಣ, ಜಾತಿ, ಧರ್ಮ, ಅಸ್ಮಿತೆ ಇವುಗಳಿಗಾಗಿ ಪ್ರತ್ಯೇಕಿಸಲ್ಪಟ್ಟ ಇಲ್ಲ ಅವಮಾನಿಸಲ್ಪಟ್ಟ ಜನರು ತಮ್ಮ ಆತ್ಮಘನತೆಯ ರಕ್ಷಣೆಗಾಗಿ ಆಕ್ರಮಣಕಾರಿ ಅನ್ನಿಸುವಂತಹ ಸ್ವಭಾವ ಮೈಗ್ಗೂಡಿಸಿಕೊಂಡರೆ ಅದನ್ನು ಮಾನವೀಯ ದೃಷ್ಟಿಯಿಂದ ನೋಡಲು ಸಾಧ್ಯವಾಗುವುದಿಲ್ಲ?
ಈ ಗರ್ವ ಯಾಕೆ ಅಪ್ರಜ್ಞಾಪೂರ್ವಕವಾಗಿ ಮೂಡುತ್ತದೆ? ಯಾಕೆ ಅದರ ಬಗ್ಗೆ ಲೋಕಕ್ಕೆ ಸಹನೆ ಕಡಿಮೆ? ಗೋಳು ಯಾಕೆ ಕೆಲವು ಜನರ ಸ್ವೀಕೃತಿಗೆ ಅವಶ್ಯಕ ಎಂಬಂತೆ ಆಗುತ್ತದೆ ಲೋಕದಲ್ಲಿ? ಗೋಳು ಮತ್ತು ಗರ್ವದ ನಡುವೆ ಒಂದು ಘನತೆ ಸ್ಥಾಪಿಸಲು ಯಾಕೆ ಅಸಾಧ್ಯ ಎಂಬಷ್ಟು ಕಷ್ಟವಾಗುತ್ತದೆ? ಇದನ್ನು ಸಾಧಿಸುವ ಬಗೆ ಹೇಗೆ? ಆನೆಯ ಭಾರ ಆನೆಗೆ ಇರುವೆಯ ಭಾರ ಇರುವೆಗೆ.
ತೀರಾ ಸಾಮಾಜಿಕ ಆರ್ಥಿಕ ದುರ್ಬಲ ಹಿನ್ನಲೆ ಇಲ್ಲದೆ ಹೋದರೂ ನನ್ನ ಹಾದಿಯಲ್ಲಿ ಪ್ರೀತಿ, ಮಾನವ ಗೌರವ ಮತ್ತು ಸಾಮಾಜಿಕ ಅಕ್ಸೆಪ್ಟೆನ್ಸ್ ಸಹಜವಾಗಿ ಸಿಕ್ಕಿದ್ದಲ್ಲ. ಅದಕ್ಕೆ ಏನು ಕಾರಣ ಯಾರು ಹೊಣೆ ಅನ್ನುವುದೆಲ್ಲ ಈಗ ಅನಗತ್ಯ. ಬದುಕಿದ ಒಂದಿಷ್ಟು ವರ್ಷಗಳಲ್ಲಿ ಬಹಳಷ್ಟು ಸಮಯ ಖಿನ್ನತೆಯೊಂದಿಗೆ ಹೋರಾಡುತ್ತಾ ಗೋಳು ಹೊಯ್ದುಕೊಳ್ಳುತ್ತಿದ್ದ ನಾನು ನನ್ನ ದುರ್ಬಲ ಆತ್ಮಘನತೆಯ ರಕ್ಷಣೆಗಾಗಿ ಗೊತ್ತಿಲ್ಲದೇ ಮೈಗೂಡಿಸಿಕೊಂಡ ಗರ್ವ ಇವೆರಡೂ ನನ್ನ ಸಾಮಾಜಿಕ ಅಸ್ಥಿತ್ವ ಮತ್ತು ಸಂಬಂಧಗಳ ಸ್ವಾಸ್ಥ್ಯ ಕೆಡಿಸಿದ್ದು ಒಂದು ಮಟ್ಟಿಗೆ ಸತ್ಯವೇ! ಮತ್ತು ನನ್ನೊಳಗೆ ಶೇಖರಣೆಗೊಂಡ ಆಕ್ರೋಶ ಇವೆಲ್ಲವೂ ಈ ಅಸ್ವಾಸ್ಥ್ಯಕ್ಕೆ ಪುಷ್ಟಿ ನೀಡುತ್ತಿದ್ದವು.
ಈ ಗೋಳು ಮತ್ತು ಈ ಗರ್ವದ ನಡುವೆ ಒಂದು ಸಮತೋಲನ ಸಾಧಿಸಿ ಒಂದಿಷ್ಟು ಘನತೆ ಕಾಪಾಡಿಕೊಳ್ಳಲು, ಸಂಪಾದಿಸಲು ಮತ್ತು ಹೆಚ್ಚಿಸಿಕೊಳ್ಳಲು ಬರವಣಿಗೆ ಸಹಾಯ ಮಾಡಿತು. ಇದು ನನ್ನ ಮಟ್ಟಿಗೆ ನಿರ್ವಿವಾದಿತ ಸತ್ಯ. ನನ್ನ ಬರವಣಿಗೆಯ ಕಾರಣಕ್ಕಾಗಿ ಒಂದಿಷ್ಟು ಪ್ರತ್ಯೇಕತೆ, ಅವಮಾನ, ಅಸಹನೆ ಅನುಭವಿಸಬೇಕಾಗಿದ್ದೂ ಇದೆ. ಆದರೆ ಅದೆಲ್ಲ ನನ್ನನ್ನು ಹಿಂದಿನಂತೆ ಮುರಿಯಲಿಲ್ಲ. ಅದಕ್ಕೆ ಕಾರಣ ಬರವಣಿಗೆ ನನ್ನನ್ನು ಒಳಗೊಳಗಿನಿಂದಲೇ ನಿಧಾನವಾಗಿ ಗಟ್ಟಿ ಮಾಡುತ್ತಾ ಬಂತು.
ಇದನ್ನು ಹೇಳುತ್ತಿರುವುದು ಅದೂ ಈ ಪುಸ್ತಕ ಬಿಡುಗಡೆಯ ದಿನ, ಬದುಕಿಗೋ ಇಲ್ಲ ಲೋಕಕ್ಕೋ ನೀಡುತ್ತಿರುವ ‘ಉತ್ತರ’ ಅಂತೂ ಖಂಡಿತಾ ಅಲ್ಲ. ತೀರಾ ವೈಯಕ್ತಿಕ ಮಟ್ಟದಲ್ಲಿ ಬರವಣಿಗೆಯ ಕೊಡುಗೆಯನ್ನು ನೆನಪಿಸಿಕೊಂಡು ಬರವಣಿಗೆಯ ಯಾತ್ರೆಯನ್ನು ಒಂದರೆಗಳಿಗೆ ನಿಂತು ಸಂಭ್ರಮಿಸಲಿಕ್ಕೆ ಅಷ್ಟೇ. ಮುಂದುವರಿದಂತೆ ಮತ್ತದೇ ಗರ್ವಕ್ಕೆ ಜಾರದಂತೆ, ಗೋಳಿಗೆ ಬೀಳದಂತೆ ನನ್ನನ್ನೇ ನಾನು ರಕ್ಷಿಸಿಕೊಳ್ಳುವ ಪ್ರಯತ್ನಗಳು.
ಈ ಪುಸ್ತಕದ ಬಿಡುಗಡೆ ಈ ದಿನದಂದೇ ಮಾಡಬೇಕೆಂಬ ಬಯಕೆಗೆ ಕಾರಣ ಇಂದು ನನ್ನ ತಂದೆಯವರ ಜನ್ಮದಿನ ಎಂಬುದು. ಅವರು ನನ್ನ ಬದುಕಿನುದ್ದಕ್ಕೂ ನನ್ನೆಲ್ಲಾ ಹುಚ್ಚಾಟಗಳನ್ನು ಅರ್ಥೈಸಿಕೊಂಡು ನನಗೆ ಬೆಂಬಲ, ಪ್ರೋತ್ಸಾಹ, ಆಶ್ರಯ ಇವುಗಳಿಗೆ ಕೃತಜ್ಞತೆ ಸಲ್ಲಿಸಲು ಪದವನ್ನೂ ಪದಾರ್ಥವನ್ನೂ ಅರ್ಪಿಸಿದರೂ ಸಾಧ್ಯವಿಲ್ಲ. ಆದರೆ ನನ್ನೆಲ್ಲ ಏಳುಬೀಳಿನ ನಡುವೆ ಹುಚ್ಚಾಟಗಳ ನಡುವೆ ಏನೋ ಒಂದಿಷ್ಟು ಬರೆದೆ, ಸ್ವಾಸ್ಥ್ಯ ಉಳಿಸಿಕೊಂಡೆ, ಮತ್ತು ನಿಮ್ಮೆಲ್ಲರಂತಾ ಒಂದಿಷ್ಟು ಸ್ನೇಹಿತರನ್ನು ಪಡೆದುಕೊಂಡೆ ಅನ್ನುವುದನ್ನು ತೋರಿಸಿ ಅವರು ತೋರಿದ ಪ್ರೀತಿ, ವಿಶ್ವಾಸ ಸುಮ್ಮನೆ ಪೋಲಾಗಲಿಲ್ಲ ಎಂದು ಹೇಳುವುದಕ್ಕಿಂತ ಒಳ್ಳೆಯ ಉಡುಗೊರೆ ಅವರಿಗೆ ಕೊಡಲು ನನ್ನ ಮಿತಿಯೊಳಗೆ ಸಾಧ್ಯವಿಲ್ಲ. ಅದಕ್ಕಾಗಿ ಇವತ್ತು ಈ ಪುಸ್ತಕ ಬಿಡುಗಡೆ.

ಚಿತ್ರದಲ್ಲಿ: ಅಕ್ಷತಾ ಹುಂಚದಕಟ್ಟೆ, ಪ್ರಕಾಶಕಿ, ಅಹರ್ನಿಶಿ ಪ್ರಕಾಶನ | ಡಾ. ವಿಜಯ್, ಪ್ರಾಂಶುಪಾಲರು, ಎಂ.ಜಿ.ಎಂ. ಕಾಲೇಜು | ಜಿ. ರಾಜಶೇಖರ್, ಚಿಂತಕರು | ರಾಜಾರಾಮ್ ತಲ್ಲೂರು, ಲೇಖಕರು, ಮಾಧ್ಯಮ ವಿಮರ್ಶಕರು | ಸಂವರ್ತ ‘ಸಾಹಿಲ್’ | ಕೆ. ಫಣಿರಾಜ್, ಚಿಂತಕರು (ಎಡದಿಂದ ಬಲ)






0 Comments