ಮಧುಕರ್ ಬಳ್ಕೂರು ಹೊಸ ಸರಣಿ – ಇದು ಕ್ರಿಕೆಟ್ ಆಟವಯ್ಯಾ ಆರಂಭ…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ.

‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ.

ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ.

1

ನಾನು ಪೂರ್ತಿ ಕಾಮೆಂಟ್ರಿ ಕೇಳಿದಿದ್ರೆ ಇಂಡಿಯಾದವರು ಗೆಲ್ತಿದ್ರಾ..?

ಯಾಕೋ ನಾನು ಕಾಮೆಂಟ್ರಿ ಕೇಳಿದಿದ್ದರೆ ಇಂಡಿಯಾ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿತ್ತೋ ಏನೋ’ ಹಾಗಂತ ತಡಬಡಾಂತ ಬೆಳಿಗ್ಗೆ ಐದುವರೆಗೆ ಎದ್ದು ರೇಡಿಯೋಗೆ ಕಿವಿ ಕೊಟ್ಟ ಕ್ಷಣದಿಂದ ಅನ್ನಿಸಲಾರಂಭಿಸಿತ್ತು. ‘ಏನ್ ಕೇಳ್ತಿಯಾ, ಇಂಡಿಯಾ ನೂರಾ ತೊಂಭತ್ತೇಳಕ್ಕೆ ಆಲೌಟ್’ ಹಾಗಂತ ಅಪ್ಪಯ್ಯ ಹೇಳಿದಾಗಲಂತೂ ಬಲವಾಗಿ ಅನ್ನಿಸಿಯೇಬಿಟ್ಟಿತ್ತು.

ಆಗಷ್ಟೇ ನಮ್ಮ ಸ್ಮೃತಿಪಟಲದಲ್ಲಿ ನೆನಪುಗಳು ದಾಖಲಾಗುತ್ತಿದ್ದ ಸಮಯಗಳವು. ಬಹುಶಃ ಶುಭ್ರವಾಗಿದ್ದ ಮನಸೆಂಬ ಖಾಲಿ ಹಾಳೆಯ ಮೇಲೆ ಕ್ರಿಕೆಟ್ ಅನ್ನೊ ಮೂರಕ್ಷರವನ್ನು ಆ ದೇವರೇ ಗೀಚಿರಬೇಕು. ಬಾಯಿ ತೆರೆದರೆ ಕ್ರಿಕೆಟ್ ನ ವಿನಃ ಬೇರಾವ ಮಾತು ಬರುತ್ತಿರಲಿಲ್ಲ. ಕ್ರಿಕೆಟ್ ಬಿಟ್ಟರೆ ಬೇರೆನೂ ಕೇಳಿಸುತ್ತಲೂ ಇರಲಿಲ್ಲ. ಐದು ಆರರ ಆ ಹರೆಯದಲ್ಲೆ ಕ್ರಿಕೆಟ್ ಏನ್ ಸೈಕ್ಲೋಪೀಡಿಯಾ ಆಗುವುದಕ್ಕೆ ಅದೇನ್ ತಯಾರಿ ನಡಿಬೇಕಿತ್ತೊ ಅದೆಲ್ಲವೂ ಮನಸ್ಸಿನಲ್ಲಿ ಜರಗುತ್ತಿತ್ತೆಂಬಂತೆ ನನ್ನ ನಡತೆಯಿತ್ತು. ಆದರೆ ಟೈಮು ಅದೆಷ್ಟು ಖರಾಬಾಗಿತ್ತೆಂದರೆ ನನ್ನ ಮೊದಮೊದಲ ಕ್ರಿಕೆಟ್ ನೆನಪುಗಳೇ ಇಂಡಿಯಾದ ಸೋಲಿನ ಸರಪಳಿಗಳಿಂದ ತುಂಬಿಹೋಗಿತ್ತು.

ಗೆಲುವು ಇಂಡಿಯಾದವರ ಹಣೆಲೆ ಬರೆದಿಲ್ಲ, ಇವರು ಈ ಜನ್ಮದಲ್ಲೆ ಗೆಲ್ಲೊದಿಲ್ಲ ಅಂತಾ ಸುತ್ತಲಿನವರಿಂದ ಕೇಳಿಸಿಕೊಂಡಾಗಲೆಲ್ಲ ನನ್ನ ಅಭಿಮಾನ ಭಂಗಗೊಳ್ಳುತ್ತಲೇ ಇರುತ್ತಿತ್ತು. ಹಾಗೆ ಪ್ರತಿಬಾರಿಯೂ ಬೇರೆಯವರು ಇಂಡಿಯಾಕ್ಕೆ ಬೈತಿದ್ದಾಗ ನಾನು ಮಾತ್ರ ಅಪ್ಪಯ್ಯನ ಮುಖವನ್ನಷ್ಟೆ ನೋಡುತ್ತಿದ್ದೆ. ಏನಾದರೂ ಇಂಡಿಯಾದ ಬಗ್ಗೆ ಭರವಸೆಯ ಮಾತಾಡುವವರು ಇದ್ದರೆ ಅದು ಅವರಷ್ಟೆ ಆಗಿದ್ದರು. ಆಗಲೂ ಅವರ ಮುಖವನ್ನೆ ನೋಡಿದೆ. ಅವರು ತಮ್ಮ ಕೆಲಸದಲ್ಲೆ ಮಗ್ನರಾಗಿದ್ದರು.

ಕೆಲಸವೆಂದರೆ ಅದೇ ಎಂದಿನ ದಿನಚರಿ. ನಾವಿರುವ ಹಳ್ಳಿಯಲ್ಲಿ ನಮ್ಮದೊಂದು ಚಿಕ್ಕ ಹೊಟೆಲು. ಬೆಳಿಗ್ಗೆ ಆರು ಗಂಟೆಗೆ ತೆರೆಯಬೇಕು. ನಮ್ಮೂರಿನಿಂದ ಸಮೀಪದ ಹೆಂಚಿನ ಕಾರ್ಖಾನೆಗೆ ಹೋಗೋರು ಮುಂಜಾನೆನೆ ಬರೋರು. ಹಾಗಾಗಿ ಅಪ್ಪಯ್ಯ ಬೆಳಗಿನ ತಿಂಡಿಯಾದ ಇಡ್ಲಿಗೆ ಮೊದಲು ರೆಡಿ ಮಾಡಬೇಕು. ನಂತರ ಅಮ್ಮ ಚಟ್ನಿಗೆ ಅಂತ ಕಾಯಿ ಹೆರೆದು ಅರೆಕಲ್ಲಿನಲ್ಲಿ ರುಬ್ಬಿದರೆ ಚಟ್ನಿ ರೆಡಿ. ಅದೇ ಹೊತ್ತಿಗೆ ಅಪ್ಪಯ್ಯ ಉರಿಯುವ ಚಿಕ್ಕ ಕಟ್ಟಿಗೆ ಒಲೆಯಲ್ಲಿ ಉಪ್ಪಿಟ್ಟನ್ನ ರೆಡಿ ಮಾಡ್ತಾರೆ. ಮತ್ತೆ ಅಮ್ಮ ಕೊಟ್ಟಿಗೆಗೆ ಹೋಗಿ ದನದ ಹಾಲು ಕರೆದು ವಾಪಾಸ್ಸು ತರುವುದರಲ್ಲಿ ಅದನ್ನು ಡೈರಿಗೆ ಒಯ್ಯಲಿಕ್ಕೆ ನಾನು ಮತ್ತು ಅಣ್ಣ ರೆಡಿಯಾಗಬೇಕು. ನಾನೆಲ್ಲಿರುತ್ತಿದ್ದೆ? ಉರಿಯುವ ಒಲೆಯ ಮುಂದೆ ಚಳಿ ಕಾಯಿಸುತ್ತಿರುತ್ತಿದ್ದೆ. ಆಗೆಲ್ಲ ಒಲೆಯ ಮುಂದೆ ಚಳಿ ಕಾಯಿಸುವುದು ನನ್ನ ನಿತ್ಯದ ಚಾಳಿಯಾದರೂ ತುಂಬಾ ಹೊತ್ತು ಚಳಿ ಕಾಯಿಸೋಕೆ ಅಪ್ಪಯ್ಯ ಬಿಡುತ್ತಿರಲಿಲ್ಲ. ಅದೊಂದು ದರಿದ್ರ ಅಭ್ಯಾಸ ಎಂಬುದು ಅವರ ಮನೋಭಾವವಾಗಿತ್ತು. ಆದರೆ ಆವತ್ತೆಕೋ ಸ್ವಲ್ಪ ವಿನಾಯಿತಿ ತೋರಿದ್ದರು. ಮಗ ಮ್ಯಾಚ್ ಬಗ್ಗೆ ಯೋಚನೆ ಮಾಡ್ತಿದಾನಂತಲೊ ಏನೋ…!

ಹೌದು, ಒಲೆ ಮುಂದೆ ಕುಂತ ನನ್ನ ಯೋಚನೆ ಮ್ಯಾಚ್ ಬಗ್ಗೆನೆ ಆಗಿತ್ತು. ನನ್ನ ಯೋಚನೆ ಏನಂದ್ರೆ ಈ ಮ್ಯಾಚ್ ಯಾವಾಗ ಶುರುವಾಯಿತು!? ಬೆಳಿಗ್ಗೆ ಐದುವರೆಗೆನೆ ಒನ್ ಸೈಡ್ ಮ್ಯಾಚ್ ಮುಗಿಬೇಕಾದ್ರೆ ಈ ಮ್ಯಾಚ್ ರಾತ್ರಿನೆ ಶುರುವಾಗಿರಬೇಕಲ್ಲ! ಹಾಗಿದ್ರೆ, ಅಪ್ಪಯ್ಯ ಒಬ್ಬರೆ ಕಾಮೆಂಟ್ರಿ ಕೇಳಿದರಾ? ನನಗೊಂದ್ ಮಾತ್ ಹೇಳಿ ಎಬ್ಬಿಸಿದಿದ್ರೆ ನಾನು ಕೂಡಾ ಕೇಳ್ತಿದ್ದನಲ್ಲ ! ಹಾಗಂತ ಮನಸ್ಸಲ್ಲಿ ಬಂದ್ ಹೋದ್ರು ಅವರನ್ನ ಕೇಳೋಕೆ ಧೈರ್ಯ ಬರಲಿಲ್ಲ. ‘ಅದೇನ್ ಟೈಮಿಂಗೋ ಏನೋ..ರಾತ್ರಿಯೆಲ್ಲಾ ಕ್ರಿಕೆಟ್ ಆಡ್ತಾರಲ್ಲಪ್ಪ’ ಅಂತ ಅನುಮಾನ ಬಂದಾಗ, ‘ನ್ಯೂಜಿಲೆಂಡ್ ನವರಿಗೆಲ್ಲ ಆಗ ಹಗಲು ಕಣಾ’ ಅಂತ ಕೆಲದಿನಗಳ ಹಿಂದಷ್ಟೆ ಹೇಳಿದ್ದರು. ಏನೇ ಆದ್ರು ಅಲ್ಲಿ ಹಗಲು ಇಲ್ಲಿ ರಾತ್ರಿ! ರಾತ್ರಿ ವೇಳೆಯಲ್ಲಿ ಕ್ರಿಕೆಟ್ ಕಾಮೆಂಟರಿ ಕೇಳೋ ಮಜಾನೆ ಬೇರೆ ಇತ್ತು. ಛೇ.. ತಪ್ಪಿಹೋಯಿತು. ಒಂದು ವೇಳೆ ನಾನು ಪೂರ್ತಿ ಕಾಮೆಂಟರಿ ಕೇಳಿದಿದ್ದರೆ…. ಇಂಡಿಯಾದವರು ಚೆನ್ನಾಗಿ ಆಡ್ತಿದ್ರಾ…? ನನ್ನಂತ ಒಬ್ಬ ಪರಮ ಕ್ರಿಕೆಟ್ ಭಕ್ತನೊಬ್ಬ ಕಾಮೆಂಟರಿ ಕೇಳಿದಿದ್ರೆ ಅವರಿಗೆ ಆಡೋದಕ್ಕೆ ಸ್ಪೂರ್ತಿ, ಧೈರ್ಯ ಬರುತ್ತಿತ್ತಾ ? ಗೊತ್ತಿಲ್ಲ. ಎಲ್ಲರೂ ಇಂಡಿಯಾಕ್ಕೆ ಬೈತಿರಬೇಕಾದ್ರೆ ನಾನೊಬ್ಬ ಅವರಿಗೆ ನೈತಿಕ ಬೆಂಬಲ ನೀಡಿ ಅವರ ಗೆಲುವಿಗೆ ಕಾರಣನಾಗುತ್ತಿದ್ದೇನೆ ಎನ್ನುವ ಭ್ರಮೆಯಾ..? ಇದ್ದಿರಬಹುದು. ಬಹುಶಃ ಆ ದಿನಗಳಲ್ಲಿ ನನ್ನಂತ ಅದೆಷ್ಟೊ ಹುಡುಗರ ಭಾವನೆ ಇದೇ ತರಹ ಆಗಿದ್ದಿರಬಹುದು.

 ನಾನು ಒಲೆಯನ್ನೆ ದಿಟ್ಟಿಸಿ ನೋಡುತ್ತಿದ್ದೆ. ಉರಿಯುತ್ತಿದ್ದ  ಕಟ್ಟಿಗೆಯ ಒಲೆಯಿಂದ ಉದುರುತ್ತಿದ್ದ ಕೆಂಡಗಳನ್ನು ನೋಡುವಾಗ ವೆಸ್ಟ್ಇಂಡೀಸ್ ನವರ ಬೆಂಕಿಯುಂಡೆಯಂತಹ ಬೌಲಿಂಗ್ ಉಪಮೆ ನೆನಪಾಯಿತು. ಅದರಲ್ಲೂ ಏಳುವರೆ ಅಡಿಯ ಕರ್ಟಿ ಎಂಬ್ರೋಸ್ ಕೈಯಲ್ಲಿ ಬಾಲೊಂದು ಲಿಂಬೆಹಣ್ಣು ಕಂಡಾಂಗೆ ಇರ್ತಿತ್ತಂತೆ. ಅಂತಹ ದೈತ್ಯರು ಇರುವ ತಂಡದ ಎದುರು ನೂರಾತೊಂಭತ್ತೇಳು ಏನು ತೀರಾ ಕಡಿಮೆ ಏನಲ್ಲ ಅಂತ ನನಗೆ ನಾನೇ ಸಮಾಧಾನ ಹೇಳಿಕೊಂಡೆ. ಯಾಕೋ ಯಾರ್ಯಾರು ಎಷ್ಟೆಷ್ಟು ರನ್ ಹೊಡೆದ್ರು ಅಂತ ಅಪ್ಪಯ್ಯನ ಹತ್ತಿರ ಕೇಳೋಕೂ ಮನಸ್ಸಾಗಲಿಲ್ಲ. ಸದ್ಯಕ್ಕೆ ಮ್ಯಾಚ್ ಗೆದ್ರೆ ಸಾಕಪ್ಪಾ ಅಂತಾ ಅನ್ನಿಸಿಬಿಟ್ಟಿತ್ತು. 

ಅಷ್ಟರಲ್ಲಾಗಲೇ ವಿಂಡೀಸ್ ಪಾಳೆಯದ ಬ್ಯಾಟಿಂಗ್ ಶುರುವಾಗಿತ್ತು. ಬೆಳಗಿನ ತಿಂಡಿ ಸ್ನಾನಾದಿಗಳನ್ನು ಮುಗಿಸಿ ಶಾಲೆಗೆ ಹೊರಡುವ ಹೊತ್ತಿಗೆ ಮ್ಯಾಚಿನ ಹಣೆಬರಹ ಪೂರ್ತಿಯಾಗಿ ಗೊತ್ತಾಗಿ ಹೋಗಿತ್ತು. ಇನ್ನೇನಿದೆ…? ಇನ್ನೆನಿದ್ದರೂ ಸೋಲಿನ ಬಗ್ಗೆ ವಿಮರ್ಶೆ ಮಾಡೋದು!! ಆದರೂ ಕೊನೆಯಲ್ಲಿ ಏನಾದ್ರು ಜಾದೂ ಏನಾದರೂ ನಡೆದಿರಬಹುದ ಅನ್ನೊ ಕೂತೂಹಲದಲ್ಲಿ ಮಧ್ಯಾಹ್ನ ಬಂದವನೆ ವಾರ್ತೆ ಕೇಳಿದೆ! ಊಹ್ಹೂ.. ಅದೇ ಸೋಲಿನ ಸುದ್ದಿ. ಅಪ್ಪಯ್ಯ ಬೇರೆ ಸೆಮಿಫೈನಲ್ ಗೆ ಇಂಡಿಯಾ ಹೋಗೋದು ಡೌಟ್ ಅಂದು ಬಿಟ್ಟರು. ಅಲ್ಲಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ‘ನಿಜಕ್ಕೂ ಇಂಡಿಯಾದವರ ಟೈಮೆ ಚೆನ್ನಾಗಿಲ್ವ..? ಇಲ್ಲಾ, ಅಲ್ಲಿನ ಟೈಮೇ ಇಂಡಿಯಾದವರಿಗೆ ಸೆಟ್ ಆಗ್ತಾ ಇಲ್ವ’ ಯಾಕೋ ಹೊಸದಾಗಿ ಅನುಮಾನ ಶುರುವಾಯಿತು. ಯಾಕಂದ್ರೆ ಅವರಿಗೆ ಹಗಲಾದ್ರೆ ನಮಗಿನ್ನೂ ರಾತ್ರಿ.

ನಮ್ಮ ಪ್ಲೇಯರ್ಸ್ ಗೆ ಆ ಟೈಮಿಂಗ್ ಸೆಟ್ ಆಗದೆ ಅದೇ ನಿದ್ದೆಗಣ್ಣಲ್ಲೆ ಫೀಲ್ಡ್ ಗೆ ಇಳಿದಿದ್ದರೆ.? ಹೊರಗಡೆ ಏನೋ ಅಲ್ಲಿ ಹಗಲು. ಆದರೂ ಇವರು ಎಂದಿನ ಅಭ್ಯಾಸ ಬಲದಂತೆ ಅದೇ ಸಮಯಕ್ಕೆ ನಿದ್ದೆಗೆ ಜಾರಿದ್ದರೆ..? ಏನೇ ಆದ್ರು ಮ್ಯಾಚು ಸ್ವಲ್ಪ ಲೇಟಾಗೆ ಶುರುವಾಗಬೇಕಿತ್ತು! ಆಗ ನಮ್ಮವರು ಪ್ರೇಶ್ ಮೈಂಡ್ ನಲ್ಲಿ ಆಡಿರೋರು! ನಮಗೂ ಕಾಮೆಂಟರಿ ಕೇಳೋಕೆ ಆಗಿರೋದು !! ಥತ್… ಈ ವರ್ಲ್ಡ್ ಕಪ್ ನ ಇಂಡಿಯಾದ ಟೈಮ್ ಟೇಬಲ್ಲೆ ಸರಿಯಿಲ್ಲಪ ಅಂತ ನನ್ನಲ್ಲೆ ಗೊಣಗಿಕೊಂಡೆ. ಅದಕ್ಕೆ ಸರಿಯಾಗಿ ಮೊದಲ ನಾಲ್ಕು ಮ್ಯಾಚುಗಳು ಆಸ್ಟ್ರೇಲಿಯಾದಲ್ಲಿ ನಡೆದಿದ್ದವು. ನಮಗೂ ಆಸ್ಟೇಲಿಯಾಗೂ ನಾಲ್ಕು ಗಂಟೆ ಅಂತರವಿತ್ತು. ಆ ನಾಲ್ಕು ಮ್ಯಾಚಿನಲ್ಲಿ ಮೂರರಲ್ಲಿ ಹೊಗೆ ಹಾಕಿಸಿಕೊಂಡ ಮೇಲೆ ಇಲ್ಲಿ ಬಂದು ಜಿಂಬಾಬ್ವೆ ಎದುರು ಗೆದ್ದಿದ್ದಷ್ಟೆ ಸಾಧನೆಯಾಗಿತ್ತು.

ಇನ್ನು ನ್ಯೂಜಿಲ್ಯಾಂಡ್ ಗೂ ನಮಗೂ ಏಳು ಗಂಟೆ ಅಂತರ. ನೆಕ್ಸ್ಟ್ ಮ್ಯಾಚ್ ಬೇರೆ ಅವರೆದುರೆ. ಬಿಟ್ಟಾರೆಯೇ..? ಪಾಪ.. ಈ ಕಪಿಲ್, ಶ್ರೀಕಾಂತ್, ಪ್ರಭಾಕರ್, ಮಂಜ್ರೇಕರ್ ನೆಲ್ಲ ಅಂದು ಏನ್ ಪ್ರಯೋಜನ ..? ಅಷ್ಟೇ ಕತೆ ಮುಗೀತು ಅಂತ ಹ್ಯಾಪ್ ಮೋರೆ ಮಾಡಿಕೊಂಡೆ. ಆದರೆ ಬಹಳಷ್ಟು ಮಂದಿ ರವಿಶಾಸ್ತ್ರಿಯ ಆಮೆಗತಿಯ ಬ್ಯಾಟಿಂಗ್ ಬಗ್ಗೆನೆ ಆಡಿಕೊಳ್ಳುತ್ತಿದ್ದರು. ಆಸ್ಟೇಲಿಯಾ ಸಿರೀಸ್ ನಲ್ಲಿ ಇಂಡಿಯಾ ಗೆಲ್ಲಬೇಕಿದ್ದ ಅದೆಷ್ಟೋ ಮ್ಯಾಚ್ ಗಳನ್ನು ಈ ರವಿಶಾಸ್ತ್ರಿ ಕುಟು ಕುಟು ಮಾಡೇ ಹಾಳು ಮಾಡಿದರು ಅಂತೆಲ್ಲ ಹೇಳುತ್ತಿದ್ದರು. ಬಹುಶಃ ಸ್ವಲ್ಪ ಮಟ್ಟಿಗೆ ಅದು ನಿಜವೂ ಆಗಿತ್ತು.

| ಇನ್ನು ನಾಳೆಗೆ ।

‍ಲೇಖಕರು Admin

July 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: