ಸಾರ್ವಜನಿಕ ಜೀವನದ ಪ್ರಖರ ಸಾವಯವ ಚಿಂತಕ ಜಿ ರಾಜಶೇಖರ್‌ ನೇಪಥ್ಯಕ್ಕೆ…

ಮ ಶ್ರಿ  ಮುರಳಿ ಕೃಷ್ಣ

ನಿನ್ನೆ ತಡರಾತ್ರಿ ನಮ್ಮ ಸಾರ್ವನಿಕ ರಂಗದ ಪ್ರಖರ ಸಾವಯವ ಚಿಂತಕ, ಸಾಮಾಜಿಕ ಹೋರಾಟಗಾರ ಮತ್ತು ಕನ್ನಡ ಸಾರಸ್ವತ ಲೋಕದ ವಿಮರ್ಶಕರಾಗಿದ್ದ ಜಿ ರಾಜಶೇಕರ್‌ ತಮ್ಮ ಬದುಕಿಗೆ ವಿದಾಯವನ್ನು ಹೇಳಿದ್ದಾರೆ.

ಕನ್ನಡ ವೈಚಾರಿಕ ಸಾಹಿತ್ಯ ವಲಯದಲ್ಲಿ ಇಬ್ಬರು ಲೇಖಕರು ಜಿ ಆರ್‌ ಎಂದೇ ಖ್ಯಾತರಾಗಿದ್ದಾರೆ.  ಒಬ್ಬರು ನನ್ನ ಗುರುಗಳು, ಮಾರ್ಕ್ಸ್ವಾದಿ ಚಿಂತಕರು ಮತ್ತು ಬರಹಗಾರರಾಗಿರುವ ಡಾ ಜಿ ರಾಮಕೃಷ್ಣ.  ಇನ್ನೊಬ್ಬರು ಜಿ ರಾಜಶೇಕರ್.‌

ಜಿ ರಾಜಶೇಕರರನ್ನು ನಾನು ಖುದ್ದಾಗಿ ನಾಲ್ಕೈದು ಬಾರಿ ಭೇಟಿ ಮಾಡಿರಬಹುದು. 2000ರ ದಶಕದ ಆದಿವರ್ಷವೊಂದರ ಸಮಯದಲ್ಲಿ ಮಂಗಳೂರಿನಲ್ಲಿ ಜರುಗಿದ ಕೋಮು ಸೌಹಾರ್ದ ಚಳುವಳಿಯ ಮತ್ತು 2008ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡಪಂಥೀಯ ಹೋರಾಟಗಳನ್ನು ಕಟ್ಟಿದ ಧೀಮಂತ ರಾಜಕೀಯ ನಾಯಕ, ಚಿಂತಕ, ಶಾಸಕ-ಸಂಸದರಾಗಿದ್ದ ಸಂಗಾತಿ ಬಿ ವಿ ಕಕ್ಕಿಲಾಯರ 90ನೇ ವರ್ಷದ ಜನ್ಮದಿನದ ಆಚರಣೆಯ ಸಂದರ್ಭದಲ್ಲಿ ಜರುಗಿದ ವಿಚಾರ ಸಂಕಿರಣದಲ್ಲಿ ನೇರವಾಗಿ ಅವರನ್ನು ಭೇಟಿ ಮಾಡುವ ಸಂದರ್ಭ ಒದಗಿ ಬಂದಿತು. ಇನ್ನು ಎರಡು-ಮೂರು ಬಾರಿ ಕೆಲವು ಸಭೆಗಳಲ್ಲಿ ಅವರೊಡನೆ ಮಾತುಕತೆ ನಡೆಸಿದ್ದು ಜ್ಷಾಪಕಕ್ಕೆ ಬರುತ್ತಿದೆ.

2005ರಲ್ಲಿ ನಮ್ಮ, ಅಂದರೆ ಬರಹಗಾರ ನಾ ದಿವಕಾರ ಮತ್ತು ನನ್ನ ಪ್ರಕಟಿತ ಬರಹಗಳ  ಪ್ರಥಮ ಸಣ್ಣ ಪುಸ್ತಕ ʼಸ್ಪಂದನ ʼ ಹುಬ್ಬಳ್ಳಿಯಲ್ಲಿ ಬಿಡುಗಡೆಯಾಯಿತು.  ಇದರ ಒಂದು ಪ್ರತಿಯನ್ನು ಜಿ ರಾಜಶೇಖರ್‌ ಅವರಿಗೆ ಕಳುಹಿಸಿದ್ದೆ.  ಅವರಿಗೆ ತಲುಪಿದ ಮಾರನೆಯ ದಿನವೇ ಒಂದು ಪತ್ರವನ್ನು ಬರೆದಿದ್ದರು.  ನಂತರ ನಾನು ಕಾರ್ಯಕರ್ತನಾಗಿದ್ದ ಸಂಘದ ತ್ರೈಮಾಸಿಕ ಪತ್ರಿಕೆಯ ಪ್ರಥಮ ಸಂಚಿಕೆಯನ್ನು ಅವರಿಗೆ ತಲುಪಿಸಿದ್ದೆ.  ಕೂಡಲೇ ಅವರು ಪ್ರತಿಕ್ರಿಯಿಸಿದ್ದರು.  ಎರಡು-ಮೂರು ಬಾರಿ ವೈಯಕ್ತಿಕವಾಗಿ ಪತ್ರ ಬರೆದಾಗಲೂ ಅವರಿಂದ ಮಾರೋಲೆ ಬಂದಿತ್ತು.  ಅವರಿಗೆ ಯಾರಿಂದಲೇ ಪತ್ರ, ಪುಸ್ತಕ ಇತ್ಯಾದಿ ಬಂದಿರಲಿ, ಕರಾರುವಾಕ್ಕಾಗಿ ಸ್ಪಂದಿಸುತ್ತಿದ್ದರು.  ಇದಲ್ಲವೇ ದೊಡ್ಡವರ ಅನುಕರಣೀಯ ಸಣ್ಣ ನಡೆ!

ಪಿ ಲಂಕೇಶ್‌, ಯು ಆರ್‌ ಆನಂತಮೂರ್ತಿ ಮುಂತಾದ ದಿಗ್ಗಜರು ಅವರ ಬರಹಗಳಿಗೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದರು.  ಆದರೆ ರಾಜಶೇಖರ್‌ ದಂತಗೋಪುರದ, ಆರಾಮ ಕುರ್ಚಿಯ ಬುದ್ಧಿಜೀವಿಯಾಗಿರಲಿಲ್ಲ.  ಸಾರ್ವಜನಿಕ ಹಿತದ, ಬೀದಿ ಬದಿಯ ಅನೇಕ ಹೋರಾಟಗಳಲ್ಲಿ ನೇರವಾಗಿ ಭಾಗವಹಿಸುತ್ತಿದ್ದರು ; ಕರಪತ್ರಗಳನ್ನು ಬರೆಯುತ್ತಿದ್ದರು. ಭಾರತೀಯ ಜೀವವಿಮಾ ಸಂಸ್ಥೆಯ ಉದ್ಯೋಗಿಯಾಗಿದ್ದ ಅವರ ಬರಹಗಳಿಗೆ ʼಅಕಾಡೆಮಿಕ್‌ ʼ ಭಾರವಿರುತ್ತಿರಲಿಲ್ಲ.  ಪ್ರಗಲ್ಭ ಚಿಂತನೆಗಳನ್ನು ಸಾಮಾನ್ಯ ಓದುಗರಿಗೂ ಅರ್ಥವಾಗುವಂತೆ ಸುಲಭವಾಗಿ ದಾಟಿಸುತ್ತಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಎಡಬಲದಿಂದ  ಜರುಗಿರುವ ಹಿಂಸೆ ಕುರಿತು ವಸ್ತುನಿಷ್ಠವಾಗಿ ಬರೆದರು. ಅವರು ಬರೆದ ಬಿಡಿಬರಹಗಳ, ಪುಸ್ತಕಗಳ ಮುನ್ನುಡಿಗಳ ಸಂಖ್ಯೆ ಜಾಸ್ತಿಯಿದೆ.  ಆದರೆ ಒಂದು ಸಂಕಲನದ ರೂಪದಲ್ಲಿ ಅವರ ಬರಹಗಳು ಪ್ರಕಟಗೊಂಡಿರುವುದು ತುಂಬ ಕಡಿಮೆ.  ಈ ವಿಷಯಕ್ಕೆ ಸಂಬಂಧಿಸಿದಂತೆ ಅವರಿಗೆ ಆಸ್ಥೆಯೂ ಇರಲಿಲ್ಲ.  2015ರಲ್ಲಿ ಅಭಿನವ ಪ್ರಕಾಶನದಿಂದ ಪ್ರಕಟವಾದ ಅವರ ಕೆಲವು ಬರಹಗಳಿರುವ ʼಬಹುವಚನ ಭಾರತ ʼ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಸಸ್ತಿ ಲಭಿಸಿತ್ತು.  ಆದರೆ ಸಾರ್ವಜಿಕ ಜೀವನದಲ್ಲಿ ಮತಧಾರ್ಮಿಕ ಅಸಹಿಷ್ಣುತೆಯ ಕಾರಣದಿಂದ ಜರಗುತ್ತಿದ್ದ ಗುಂಪು ಹಿಂಸೆ(ಲಿಂಚಿಂಗ್)‌ ಮುಂತಾದ ಹೀನ ಕೃತ್ಯಗಳನ್ನು ಖಂಡಿಸುವ ನಿಟ್ಟಿನಲ್ಲಿ ಅವರು ಈ ಪ್ರಶಸ್ತಿಯನ್ನು ನಿರಾಕರಿಸಿದರು.  ನಮ್ಮ ರಾಜ್ಯದ ರೈತ ಹೋರಾಟಗಳ ಬಗೆಗೆ ಪ್ರಕಟವಾಗಿರುವ ಪುಸ್ತಕಗಳ ಪೈಕಿ ಜಿ ರಾಜಶೇಖರ್‌ ಬರೆದ ʼಕಾಗೋಡು ಸತ್ಯಾಗ್ರಹ ʼಕ್ಕೆ ಅಗ್ರ ಸ್ಥಾನವಿದೆ. ಎಡಪಂಥೀಯರಾಗಿದ್ದ ಅವರು ಭಿನ್ನ ನೆಲೆಯಿಂದ ಸಾಹಿತ್ಯ ಕೃಷಿಯನ್ನು ವಿಮರ್ಶಿಸುತ್ತಿದ್ದರು. ಅನೇಕ ಉದಯೋನ್ಮುಖ ಲೇಖಕರಿಗೆ ಉತ್ತೇಜನವನ್ನು ನೀಡಿದ ಉದಾಹರಣೆಗಳಿವೆ.

ಕಳೆದ ಮೂರು ದಶಕಗಳಲ್ಲಿ ನಮ್ಮ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜರುಗಿದ ಕೆಲವು ಕೋಮು ಗಲಭೆಗಳ ಸಂತ್ರಸ್ಥರನ್ನು ಖುದ್ದಾಗಿ  ಅವರು( ಪ್ರೊ. ಫಣಿರಾಜ್‌, ಪ್ರೊ. ಪಟ್ಟಾಭಿರಾಮ ಸೋಮಯಾಜಿ ಮುಂತಾದವರಿದ್ದ ಅನೌಪಚಾರಿಕ ತಂಡ ಭೇಟಿ ಮಾಡಿ, ನೇರವಾಗಿ ವರದಿಯನ್ನು ತಯಾರಿಸುತ್ತಿದ್ದರು.  ಅವುಗಳು ಲಂಕೇಶ್‌ ಪತ್ರಿಕೆ, ಮುಂಬೈನ ಕಮ್ಯುನಲಿಸಂ ಕಾಂಬೇಟ್‌ (Communalism Combat) ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು.

ಅವರು ʼಮಯೂರ ʼ ಮಾಸಪತ್ರಿಕೆಗೆ ನೀಡಿದ ಒಂದು ಸಂದರ್ಶನದಲ್ಲಿ ತಮ್ಕನ್ನು ʼ ಅಡ್ಡಕಸುಬಿ ʼ ಎಂದು ಬಣ್ಣಿಸಿಕೊಂಡಿದ್ದರು! ಆದರೆ ಅವರು ತಮ್ಮ ಅಡ್ಡಕಸುಬುಗಳಿಂದಲೇ ಅನೇಕರಿಗೆ ಹತ್ತಿರದವರಾಗಿದ್ದರು!

ಜಿ ರಾಜಶೇಖರ್‌ ಅವರು ಭೌತಿಕವಾಗಿ ನಮ್ಮಿಂದ ದೂರವಾಗಿದ್ದಾರೆ.  ಆದರೆ ಅವರ ಆಲೋಚನೆಗಳು, ಚಿಂತನೆಗಳು, ಬರಹಗಳು ಮತ್ತು ಸಾರ್ವಜನಿಕ ಜೀವನಹಿತದ ತುಡಿತಗಳಿಗೆ ಸಾವಿಲ್ಲ !

ಅವರಿಗೆ ಗೌರವಪೂರ್ವಕ ನಮನಗಳು.

‍ಲೇಖಕರು Admin

July 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಚಂದ್ರಪ್ರಭ ಕಠಾರಿ

    ಜಿಆರ್ ಬದುಕಿನ ಹೋರಾಟ ನೆಲೆಗಳನ್ನು, ಅವರ ದಿಟ್ಟ ಜನಮುಖಿ ವ್ಯಕ್ತಿತ್ವವನ್ನು ಸಂಕ್ಷಿಪ್ತವಾಗಿ ವಿವರಿಸುವ ಲೇಖನ ಅವರಿಗೆ ಸಲ್ಲುವ ನುಡಿನಮನವಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: