ಮಧುಕರ್ ಬಳ್ಕೂರು ಸರಣಿ ಕಥೆ 9 – ಕಪಿಲ್ ದೇವ್ ರಿಚರ್ಡ್ ಹ್ಯಾಡ್ಲಿಯ ದಾಖಲೆ…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ.

‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ.

ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ.

9

ಕಪಿಲ್ ದೇವ್ ರಿಚರ್ಡ್ ಹ್ಯಾಡ್ಲಿಯ ದಾಖಲೆ ಮುರಿದನಂತೆ ಕಣಾ. ಇನ್ಮುಂದೆ ಅದನ್ನ ಯಾರು ಮುರಿಯಕ್ಕಾಗಲ್ಲ ಬಿಡು” ಹಾಗಂತ ಶಂಕರನೆದುರು ಜಂಬದಿಂದ ಹೇಳಿದೆ. ಪಾಪ ಶಂಕರ, ಈ ರಿಚರ್ಡ್ ಹ್ಯಾಡ್ಲಿ ಯಾರು, ಅವನು ಯಾವ ದೇಶದವನು, ಅವನು ಎನ್ ಮಾಡ್ತಿದ್ದ ಅಂತೆಲ್ಲ ಯೋಚಿಸಲಾರಂಭಿಸಿದ. ತಪ್ಪು ಶಂಕರನದಲ್ಲ ಬಿಡಿ. ಕಪಿಲ್ ದೇವ್ ಇವತ್ತು ವರ್ಲ್ಡ್ ರೆಕಾರ್ಡ್ ಸೃಷ್ಟಿಸುತ್ತಾನೆ ಅಂತ ಅಪ್ಪಯ್ಯನೆ ಬೆಳಿಗ್ಗೆ ಹೇಳಿದ್ದರಿಂದ ನನ್ನ ತಲೆಯಲ್ಲಿ ಅದನ್ನ ಬಿಟ್ಟರೆ ಬೇರೆನಿರಲಿಲ್ಲ. ಅದಕ್ಕೆ ಸರಿಯಾಗಿ ಶಾಲೆಯಿಂದ ಮಧ್ಯಾಹ್ನ ಊಟಕ್ಕೆ ಅಂತ ಮನೆಗೆ ಬಂದಾಗ ವಿಷಯ ಗೊತ್ತಾಯಿತಲ್ಲ, ಏಕ್ಸಾಯಿಟ್ ಮೆಂಟ್  ತಡೆಯಲಿಕ್ಕಾಗಲಿಲ್ಲ.

ಹಾಗಾಗಿ ಊಟ ಮುಗಿಸಿ ತರಗತಿಯೊಳಗೆ ಕಾಲಿಡುತ್ತಲೇ ಶಂಕರನೆದುರು ಅಂದುಬಿಟ್ಟಿದ್ದೆ. ಯಾಕೆ ಹಾಗೆ ದೊಡ್ಡದಾಗಿ ಯಾರಿಗೂ ಮುರಿಯಕ್ಕಾಗಲ್ಲ ಅಂದೆನೋ ಗೊತ್ತಿಲ್ಲ. ಬಹುಶಃ ಈ ವರ್ಲ್ಡ್ ರೆಕಾರ್ಡ್ ಗಳೆಲ್ಲ ಮಾಡುವವರು ಬರೀ ಭಾರತಿಯರಷ್ಟೆ ಅಂತಾ ಭಾವನೆ ಇದ್ದಿರಬೇಕು. ಇರಬಹುದು, ಏಕೆಂದರೆ ಸುನಿಲ್ ಗವಾಸ್ಕರ್ ಅವರ ಹತ್ತು ಸಾವಿರ ರನ್ ಹಾಗೂ 34 ಶತಕಗಳನ್ನು ಮುರಿಯುವ ಆಟಗಾರ ಮುಂದೆ ಬರಲಿಕ್ಕಿಲ್ಲ ಅಂತ ಹೊಟೆಲ್ ಗೆ ಬರುತ್ತಿದ್ದ ಕ್ರಿಕೆಟ್ ಬಲ್ಲವರೆಲ್ಲ ಆಡಿಕೊಳ್ಳುತ್ತಿದ್ದರು. ಬಹುಶಃ ಇದನ್ನೆಲ್ಲ ಗೊತ್ತಿದ್ದೊ ಗೊತ್ತಿಲ್ಲದೆಯೋ ಕೇಳಿಸಿಕೊಳ್ಳುತ್ತಿದ್ದ ನಾನು ಅದರಂತೆಯೇ ಯೋಚಿಸಿರಲೂಬಹುದು.

ಬಹುಶಃ ನಾವುಗಳು ಯೋಚನೆ ಮಾಡೋ ರೀತಿನೇ ಹಾಗಿರಬಹುದು. ಏಕೆಂದರೆ ಮುಂದೆ ಕಪಿಲ್ ನ ದಾಖಲೆಯನ್ನು ವಿಂಡೀಸ್ ನ ಕೊಟ್ನಿ ವಾಲ್ಶ್ ಮುರಿದಾಗ ಅದೇ ಆಗ ದೊಡ್ಡ ವಿಷಯವೆನಿಸಿತ್ತು. ವೇಗಿ ವಾಲ್ಶ್ 500ರ ಗಡಿ ದಾಟಿದ ಮೊದಲ ಬೌಲರ್ ಎನಿಸಿದ್ದರು. ಮುಂದೆ ನಮ್ಮವರೇ ಆದ ಕುಂಬ್ಳೆ ಅದನ್ನು ಮೀರಿ 600 ಪ್ಲಸ್ ಕ್ಲಬ್ ನ ಮೆಂಬರ್ ಆದಾಗಲೂ ದಾಖಲೆಗಳೆಲ್ಲ ನಮ್ಮವರಿಗಷ್ಟೆ ಅನ್ನೊ ಭಾವನೆ ಮತ್ತೊಮ್ಮೆ ವ್ಯಕ್ತವಾಗಿತ್ತು. ನಂತರ  ಶೇನ್ ವಾರ್ನ್ 708 ವಿಕೆಟ್, ಮುತ್ತಯ್ಯ ಮುರಳೀಧರನ್ 800 ವಿಕೆಟ್ ನವರೆಗೆ ಹೋಗುವುದರೊಂದಿಗೆ ಆ ಭಾವನೆ ಬದಲಾದರೂ ಈಗಲೂ ಹೇಳುವುದೆಂದರೆ ಇದನ್ನು ಮುರಿಯುವ ಮಹಾಶಯ ಮುಂದೆ ಬರಲಿಕ್ಕಿಲ್ಲ ಎಂದೇ…! ಯಾಕೆ ಹೀಗೆ..? ದಾಖಲೆಗಳು ಇರುವುದೇ ಮುರಿಯುವುದಕ್ಕೆ ಎನ್ನುವ ಸಂಗತಿ ಗೊತ್ತಿಲ್ಲವ ? ಖಂಡಿತ ಗೊತ್ತಿದೆ. ವಿಷಯ ಏನಂದ್ರೆ ಆಯಾ ಕಾಲಘಟ್ಟಕ್ಕೆ ಅದೇ ತುಂಬಾ ದೊಡ್ಡ ಸಾಧನೆಯಾಗಿ ಕಾಣುವುದರಿಂದ ಹಾಗನ್ನಿಸುತ್ತೆ ಅಷ್ಟೆ.

ಉದಾಹರಿಸುವುದಾದರೆ ಒನ್ ಡೇ ಕ್ರಿಕೆಟ್ ನಲ್ಲಿ ಭಾರತ ಮೊದಲ ಬಾರಿಗೆ 300 ರನ್ನುಗಳನ್ನು ಹೊಡೆದಾಗಲೂ ಹಾಗೆ ಅನ್ನಿಸಿತ್ತು. ಏಕೆಂದರೆ ಒನ್ ಡೇ ಕ್ರಿಕೆಟ್ ಶುರುವಾಗಿ ಇಪ್ಪತ್ತೈದು ವರ್ಷಗಳ ನಂತರ ಬಂದ ಸಾಧನೆ ಅದಾಗಿತ್ತು.1996ರಲ್ಲಿ ಶಾರ್ಜಾದಲ್ಲಿ ಪಾಕಿಸ್ಥಾನ ವಿರುದ್ಧ ಮೊದಲ ಬಾರಿಗೆ 300ರ ಗಡಿ ದಾಟಿದ ಸಾಧನೆ ಮಾಡಿದಾಗ ನಮಗದು ಆಗ ದೊಡ್ಡದಾಗೆ ಕಂಡಿತ್ತು. ಏಕೆಂದರೆ ಆಗೆಲ್ಲ 230 ರನ್ನುಗಳು ಹೊಡೆದರೂ ಮ್ಯಾಚ್ ಗೆಲ್ಲಬಹುದೆಂಬ ಲೆಕ್ಕಚಾರವಿತ್ತು. ತದನಂತರ ಲೆಕ್ಕವಿಲ್ಲದಷ್ಟು ಬಾರಿ ಇಂಡಿಯಾ 300 ಪ್ಲಸ್ ರನ್ ಹೊಡೆದದ್ದು ಆಯಿತು. ಆದರೆ ಈಗೀಗ 300 ರನ್ ಕೂಡಾ ವಿನ್ನಿಂಗ್ ಸ್ಕೋರ್ ಆಗಿ ಉಳಿದಿಲ್ಲ ಎಂಬುದಂತೂ ಸತ್ಯ. ಈಗೇನಿದ್ದರೂ 360, 370 ಹೊಡೆದರಷ್ಟೆ ಮ್ಯಾಚು ಅನ್ನೊ ಸ್ಥಿತಿ ಇದೆ. ಇನ್ನು ಬಹಳ ವರುಷಗಳವರೆಗೆ ಸುನಿಲ್ ಗವಾಸ್ಕರ್ ಹೊಡೆದ 236 ರನ್ನುಗಳೇ ಭಾರತೀಯ ಆಟಗಾರನೊಬ್ಬನ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು. ಬೇರೆಲ್ಲಾ ದೇಶದ ಆಟಗಾರರಿಂದ ತ್ರಿಶತಕವೇ ದಾಖಲಾಗಿದ್ದರೂ ಭಾರತದ ಯಾವೊಬ್ಬ ಆಟಗಾರನಿಂದಲೂ ಅಲ್ಲಿಯವರೆಗೆ ಅದು ಸಾಧ್ಯವಾಗಿರಲಿಲ್ಲ ಎಂಬುದು ವಾಸ್ತವವಾಗಿತ್ತು. ನಂತರ ವಿವಿಎಸ್ ಲಕ್ಷ್ಮಣ್ ಆ ಸಂಖ್ಯೆಯನ್ನು ಕ್ರಾಸ್ ಮಾಡಿದರೂ ತ್ರಿಶತಕ ತಲುಪಲು ಸಾಧ್ಯವಾಗಿರಲಿಲ್ಲ. ಮುಂದೆ ವಿರೇಂದರ್ ಸೆಹ್ವಾಗ್ ತ್ರಿಶತಕದ ಅಕೌಂಟ್ ಓಪನ್ ಮಾಡಿ ಆ ಕೊರೆತೆಯನ್ನು ನೀಗಿಸಿದರು. ಟೆಸ್ಟ್ ಅನ್ನ ಏಕದಿನ ಮಾದರಿಯಲ್ಲಿ ಆಡುತ್ತಿದ್ದ ಸೆಹ್ವಾಗ್ ಒಂದೇ ದಿನದಲ್ಲಿ ತಂಡ ಹೊಡೆಯುವ ಸ್ಕೋರ್ ನ್ನೆಲ್ಲಾ ತಾವೊಬ್ಬರೆ ಹೊಡೆಯುತ್ತಿದ್ದರು. ಈ ಮೂಲಕ ಟೆಸ್ಟ್ ಆಡುವ ಚರ್ಯೆಯನ್ನೆ ಬದಲಿಸಿಬಿಟ್ಟಿದ್ದರು. 

ಅದೇನೇ ಆದರೂ ಟೆಸ್ಟ್ ಕ್ರಿಕೆಟ್ ಅಂತ ಬಂದರೆ ಈಗಲೂ ಗವಾಸ್ಕರ್ ಅವರೇ ಎಲ್ಲರಿಗೂ ಮಾಸ್ಟರ್ ಏನಿಸುತ್ತಾರೆ. ಕಾರಣ, ಅವರಾಡಿದ ದಿನಗಳ ಪಿಚ್ ಗಳು ಹಾಗೂ ಅವರೆದುರಿಸಿದ ಸರ್ವೊತ್ಕೃಷ್ಟ ಬೌಲರ್ ಗಳು. ಹಾಗಾಗಿ ಮುಂದೆ ಯಾರೇ ಅವರ ದಾಖಲೆಗಳನ್ನು ಮುರಿದರೂ ಆ ಜನರೇಷನ್ ನವರಿಗೆಲ್ಲ ಅಂದು ಹೆಲ್ಮೆಟ್ ಇಲ್ಲದೆ ವಿಶ್ವಶ್ರೇಷ್ಠ ಬೌಲರ್ ಗಳನ್ನು ಎದುರಿಸಿದ ಗಾವಸ್ಕರೇ ಶ್ರೇಷ್ಠನಾಗಿ ಕಾಣಿಸುತ್ತಾನೆ. ಅದರಂತೆಯೇ ಬರೀ 86 ಟೆಸ್ಟ್ ಗಳಲ್ಲಿ 431 ವಿಕೆಟ್ ಗಳ ಕಬಳಿಸಿದ ಹ್ಯಾಡ್ಲಿಯ ದಾಖಲೆ ಮುರಿಯುವುದಕ್ಕೆ ಕಪಿಲ್ 131 ಟೆಸ್ಟ್ ಗಳನ್ನು ತೆಗೆದುಕೊಂಡರೂ, ಕಪಿಲ್ ಕೂಡಾ ಹ್ಯಾಡ್ಲಿಯವರಷ್ಟೆ ಗ್ರೇಟ್ ಎನಿಸುತ್ತಾರೆ. ಏಕೆಂದರೆ ಆ ದಿನಗಳಲೆಲ್ಲ ಇಂಡಿಯಾದಂತಹ ಸ್ಪಿನ್ ಸ್ನೇಹಿ ಪಿಚ್ ಗಳಲ್ಲಿ ವಿಕೆಟ್ ಕೀಳುವುದು ಫಾಸ್ಟ್ ಬೌಲರ್ ಗಳೆನಿಸಿಕೊಂಡವರಿಗೆ ಸುಲಭದ ಮಾತಾಗಿರಲಿಲ್ಲ.

ಇನ್ನು ಯಾರೇನೇ ಸಾಧನೆ ಮಾಡಿದರೂ ಆ ಮೈಲುಗಲ್ಲು ತಲುಪಿದ ಮೊದಲಿಗರು ಅಂತಾ ಅನಿಸಿಕೊಂಡಿರುತ್ತಾರಲ್ಲ, ಅವರ್ಯಾವತ್ತಿಗೂ ಇತಿಹಾಸ ಪುಟಗಳಲ್ಲಿ ಹಚ್ಚಹಸುರಾಗೇ ಉಳಿಯುತ್ತಾರೆ. ಉದಾಹರಣೆಗೆ ಪ್ರಥಮ ದರ್ಜೆ ಕ್ರಿಕೆಟಿನಲ್ಲಿ 501ರನ್ ಹಾಗೂ ಟೆಸ್ಟ್ ನಲ್ಲಿ ಅಜೇಯ 401ರನ್ ಬಾರಿಸಿದ ಬ್ರಿಯಾನ್ ಲಾರಾ. ಮುಂದೆ ಈ ಸಾಧನೆಗಳನ್ನು ಇನ್ಯಾರೇ ಮಾಡಿದರೂ ಈ ಸಾಧನೆ ಮಾಡಿದ ಮೊದಲಿಗ ಅನ್ನೊ ಕೀರ್ತಿ ಲಾರಾ ಹೆಸರಿನಲ್ಲೇ ಇರುತ್ತದೆ. ಈಗೀಗ ಒನ್ ಡೇ ಮ್ಯಾಚ್ ಗಳಲ್ಲಿ ಡಬಲ್ ಸೆಂಚುರಿಗಳು ಮಾಮೂಲಿ ಏನಿಸುವಂತಾದರೂ ಒನ್ ಡೇಯಲ್ಲೂ ಡಬಲ್ ಸೆಂಚುರಿ ಹೊಡೆಯಬಹುದು ಎಂದು ತೋರಿಸಿಕೊಟ್ಟ ಹಿರಿಮೆ ನಮ್ಮ ಸಚಿನ್ ಗಷ್ಟೇ ಇದೆ.

ಮುಂದೆ ಮುರುಳಿಧರನ್ ನ ದಾಖಲೆಯನ್ನು ಮುರಿದು ಸಾವಿರ ವಿಕೆಟ್ ಸರದಾರ ಅಂತ ಯಾರೇ ಬಂದರೂ 800 ವಿಕೆಟ್ ಕಿತ್ತ ಮೊದಲಿಗ ಅನ್ನೊ ಕೀರ್ತಿ ಮುರಳಿ ಹೆಸರಲ್ಲೇ ಇರುತ್ತೆ. ದಾಖಲೆಗಳು ಇರುವುದೇ ಮುರಿಯುವುದಕ್ಕೆ ಅಂತಾ ಗೊತ್ತಿದ್ದರೂ ಇಂತಹ ರೆಕಾರ್ಡ್ ಗಳನ್ನ ಮುರಿಯುವ ಸಾಧಕ ಬರಲ್ಲ ಅಂತ ನಮಗನ್ನಿಸುವುದಕ್ಕೆ ಕಾರಣ ಬಹುಶಃ ಅವರು ಆ ಮೈಲುಗಲ್ಲು ತಲುಪಿದ ಮೊದಲಿಗರು ಅಂತಾನೂ ಇರಬಹುದು.  

ಇನ್ನು ಯಾರೇ ದಾಖಲೆಗಳ ಒಡೆಯನಾದ್ರೂ ಮುಂದೆ ಆ ದಾಖಲೆ ಭಾರತೀಯ ಆಟಗಾರನ ಹೆಸರಲ್ಲೇ ಇರುತ್ತೆ ಎನ್ನುವ ಮನೋಭಾವವೇ ನಮ್ಮಿಂದ ಹಾಗೆಲ್ಲ ಆಡಿಸುತ್ತೆ ಎನ್ನಬಹುದು. ಇದಕ್ಕೆ ಸಾಕ್ಷಿಯೆಂಬಂತೆ ಬ್ಯಾಟಿಂಗ್ ವಿಭಾಗದಲ್ಲಿ ಸಚಿನ್ ತೆಂಡೂಲ್ಕರ್ ಬಹುತೇಕ ದಾಖಲೆಗಳನ್ನು ತನ್ನ ಹೆಸರಲ್ಲೇ ಇಟ್ಟುಕೊಂಡಿರೋದರಿಂದ. ಅದಕ್ಕಾಗಿಯೇ ಜನ ಈಗಲೂ ತೆಂಡೂಲ್ಕರ್ ನ ದಾಖಲೆ ಯಾರಿಂದಲೂ ಟಚ್ ಮಾಡೋಕೆ ಸಾಧ್ಯವಿಲ್ಲ ಅಂತಿರೋದು! ಯಾಕೆ ಹಾಗೆಲ್ಲ ಅನ್ನಿಸುತ್ತೆ ಎಂದರೆ ಒನ್ ಡೇ ಮ್ಯಾಚ್ ಗಳಲ್ಲಿ ಸೆಂಚುರಿ ಹೊಡೆಯುವುದೆ ದೊಡ್ಡ ವಿಷಯ ಏನಿಸುತ್ತಿದ್ದ ಸಮಯದಲ್ಲಿ ಸಚಿನ್ ಬರೋಬ್ಬರಿ 49 ಸೆಂಚುರಿಗಳನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲದೆ  ಟೆಸ್ಟ್ ನಲ್ಲೂ 51 ಶತಕಗಳನ್ನು ಸಿಡಿಸಿ ಒಟ್ಟಾರೆ ಶತಕಗಳ ಶತಕಧಾರಿ ಅಂತಾ ಕರೆಸಿಕೊಂಡಿದ್ದಾರೆ. ಇನ್ನು ಅತೀ ಹೆಚ್ಚು ಟೆಸ್ಟ್ ಹಾಗೂ ಒನ್ ಡೇ ಆಡಿದ ರೆಕಾರ್ಡ್, ಅತೀ ಹೆಚ್ಚು ಟೆಸ್ಟ್ ರನ್ ಹಾಗೂ ಒನ್ ಡೇ ರನ್ ಗಳಿಸಿದ ರೆಕಾರ್ಡ್ ಕೂಡ ಸಚಿನ್ ಹೆಸರಲ್ಲೇ ಇದೆ. ಕೊನೆಯಲ್ಲಿ ಟೆಸ್ಟ್ ನಲ್ಲಿನ ವೈಯಕ್ತಿಕ ಗರಿಷ್ಠ ಮೊತ್ತ ಬ್ರಿಯಾನ್ ಲಾರಾ ಬಳಿ ಇರೋದು ಬಿಟ್ಟರೆ ಬೇರೆಲ್ಲಾ ಬ್ಯಾಟಿಂಗ್ ವಿಭಾಗದ ದಾಖಲೆಗಳು ಭಾರತೀಯರ ಬಳಿಯೇ ಇವೆ.

ಬರೀ ಇಷ್ಟೇ ಆಗಿದ್ದರೆ ಭಾರತೀಯ ಆಟಗಾರರೊಂದಿಗೆ ದಾಖಲೆಗಳ ನಂಟನ್ನು ಬೆಸೆಯಬೇಕಾಗಿರಲಿಲ್ಲವೆನೊ.? ಇಷ್ಟು ಮಾತ್ರವಲ್ಲದೆ ಅಪರೂಪ, ಅಮೋಘ, ಕಳಪೆ, ಅದ್ಬುತ ವಿಚಿತ್ರ ದಂತಹ ದಾಖಲೆಗಳೊಂದಿಗೂ ಕೂಡಾ ಭಾರತೀಯರ ನಂಟಿದೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಆರು ಬಾಲ್ ಗಳಲ್ಲಿ ಆರು ಸಿಕ್ಸರ್ ಸಿಡಿಸಿದ್ದ ರವಿಶಾಸ್ತ್ರಿಯೇ ತಮ್ಮ ಕ್ರಿಕೆಟ್ ಬದುಕಿನ ಕೊನೆಯಲ್ಲಿ ನೂರ ಇಪ್ಪತ್ತೈದು ಚೆಂಡುಗಳಲ್ಲಿ ಹತ್ತು ರನ್ ಗಳಿಸಿದ ದಾಖಲೆಯನ್ನು ಮಾಡಿದ್ದರು. ಇನ್ನು ಆರಂಭದಲ್ಲಿ ಭವಿಷ್ಯದ ಗವಾಸ್ಕರ್ ಎಂದೇ ಕರೆಸಿಕೊಂಡಿದ್ದ ಸಂಜಯ್ ಮಂಜ್ರೇಕರ್ ಭಾರತದ ಪರ ನಿಧಾನಗತಿಯಲ್ಲಿ ಸೆಂಚುರಿ ಬಾರಿಸಿದ ಆಟಗಾರ ಅಂತೆನಿಸಿಕೊಂಡಿದ್ದಾರೆ.

ನಂತರ ಅವರು ಗವಾಸ್ಕರ್ ತರಹ ಆಗಲಿಲ್ಲ ಅನ್ನೊದು ಬೇರೆ ಮಾತು. ಇನ್ನು ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ಸೆಂಚುರಿ ಬಾರಿಸಿದ ಅಪರೂಪದ ದಾಖಲೆ ದಿಲೀಪ್ ವೆಂಗ್ ಸರ್ಕಾರ್ ಹೆಸರಿನಲ್ಲಿದೆ. ಲಾರ್ಡ್ಸ್ ನಲ್ಲಿ ಶತಕ ಬಾರಿಸಬೇಕೆನ್ನುವ ಕನಸು ವೃತ್ತಿಪರ ಆಟಗಾರರೆನಿಸಿದ ಪ್ರತಿಯೊಬ್ಬನಿಗೂ ಇರುವುದರಿಂದ ಮೂರು ಬಾರಿ ಅದನ್ನ ಸಾಧಿಸಿದ ವೆಂಗ್ ಸರ್ಕಾರ್ ರವರ ವಿಶೇಷತೆ ಏನೆಂದು ತಿಳಿಯುತ್ತದೆ. ಅಂತೆಯೇ ಕನ್ನಡಿಗ ಅನಿಲ್ ಕುಂಬ್ಳೆ ಟೆಸ್ಟ್ ಇನ್ನಿಂಗ್ಸ್ ವೊಂದರ ಎಲ್ಲಾ ಹತ್ತು ವಿಕೆಟ್ ಪಡೆದ ವಿಶ್ವದ ಮೂವರು ಬೌಲರ್ ಗಳಲ್ಲಿ ಒಬ್ಬರು ಅನ್ನೊದು ವಿಶೇಷ ಸಂಗತಿ.

ಇನ್ನು ಭಾರತದ ಮೊಟ್ಟ ಮೊದಲ ಹ್ಯಾಟ್ರಿಕ್ ವಿಕೆಟ್ ಟೇಕರ್ ಚೇತನ್ ಶರ್ಮಾ ದಾಖಲೆ ವಿಶಿಷ್ಟವೇ ಸರಿ. ಅವರ ಮೂರು ವಿಕೆಟ್ ಗಳು ಕ್ಲೀನ್ ಬೌಲ್ಡ್ ರೂಪದಲ್ಲೆ ಬಂದಿರುವುದಾದರೂ ಆ ಮೂರು ಎಸೆತಗಳಲ್ಲಿ ಪ್ರತ್ಯೇಕ ಮೂರು ಸ್ಟಂಪ್ ಗಳು(ಮೊದಲ ಬಾಲ್ ಗೆ ಆಫ್ ಸ್ಟಂಪ್, ಎರಡನೆ ಬಾಲ್ ಗೆ ಮಿಡಲ್ ಸ್ಟಂಪ್, ಹಾಗೂ ಮೂರನೇ ಬಾಲ್ ಗೆ ಲೆಗ್ ಸ್ಟಂಪ್) ಬಿದ್ದಿದ್ದವೆಂಬುದು ವಿಶೇಷ. ಇನ್ನು ಪದಾರ್ಪಣೆಯ ಮೊದಲ ಮೂರು ಟೆಸ್ಟ್ ಇನ್ನಿಂಗ್ಸ್ ಗಳಲ್ಲಿ ಸೆಂಚುರಿ ಬಾರಿಸಿದ ಅಚ್ಚರಿಯ ರೆಕಾರ್ಡ್ ಅಜರುದ್ದೀನ್ ಹೆಸರಿನಲ್ಲಿದ್ದರೆ, ಸತತವಾಗಿ 93 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಅಪರೂಪದ ದಾಖಲೆ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ.

ಇದರಿಂದ ಅವರೆಷ್ಟು ಟೆಸ್ಟ್ ಪಂದ್ಯಗಳಿಗೆ ಅನಿವಾರ್ಯರಾಗಿದ್ದರು ಹಾಗೂ ಅದೆಷ್ಟರ ಮಟ್ಟಿಗೆ ಫಿಸಿಕಲ್ ಫಿಟ್ನೆಸ್ ಕಾಪಾಡಿಕೊಂಡಿದ್ದರು ಎಂಬುದು ತಿಳಿಯುತ್ತದೆ. ಅಂತೆಯೇ ಟೆಸ್ಟ್ ಆಡುವ ಎಲ್ಲಾ ರಾಷ್ಟಗಳೆದುರು ಅವರದೇ ನೆಲದಲ್ಲಿ ಸೆಂಚುರಿ ಸಿಡಿಸಿದ ಅಪರೂಪದ ದಾಖಲೆ ಕೂಡ ದ್ರಾವಿಡ್ ಹೆಸರಿನಲ್ಲಿದೆ. ಇನ್ನು ಇತ್ತಿಚೀನ ಸಮೀಕ್ಷೆ ಪ್ರಕಾರ ಟೆಸ್ಟ್ ಪಂದ್ಯಗಳಲ್ಲಿ ಅತೀ ಹೆಚ್ಚು ಎಸೆತ ಎದುರಿಸಿದವರಲ್ಲಿ ಹಾಗೂ ಅತೀ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಇದ್ದವರಲ್ಲಿ ದ್ರಾವಿಡ್ ಅವರೇ ಅಗ್ರ ಸ್ಥಾನದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಟೆಸ್ಟ್, ಒನ್ ಡೇ ಯಲ್ಲಿ ಅತೀ ಹೆಚ್ಚು ಸೆಂಚುರಿ ಬಾರಿಸಿರುವ ಸಚಿನ್ ತೆಂಡೂಲ್ಕರ್ ನರ್ವಸ್ ನೈಂಟಿಯಲ್ಲೂ ಕೂಡಾ ದಾಖಲೆ ಬರೆದಿದ್ದಾರೆ ಎಂಬುದು ಹಲವರಿಗೆ ಗೊತ್ತಿಲ್ಲದ ವಿಷಯ. ಅತೀ ಹೆಚ್ಚು ಬಾರಿ ಅಂದರೆ ಇಪ್ಪತ್ತೆಂಟು ಬಾರಿ ಅಂತಾರಾಷ್ಟ್ರೀಯ ಮ್ಯಾಚ್ ಗಳಲ್ಲಿ ಸಚಿನ್ ನೈಂಟಿ ಪ್ಲಸ್ ಗೆ ಬಲಿಯಾಗಿದ್ದಾರೆ. ಒಂದು ವೇಳೆ ಇದೆಲ್ಲ ಇನ್ನಿಂಗ್ಸ್ ಗಳು ಸೆಂಚುರಿಯಾಗಿ ಬದಲಾಗಿದ್ದರೆ ಸಚಿನರ ಸೆಂಚುರಿ ಸಂಖ್ಯೆ ಎಲ್ಲಿ ತಲುಪಿರುತ್ತಿತ್ತು ಅಂತ ಊಹಿಸಿಕೊಳ್ಳಿ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಥರ್ಡ್ ಅಂಪೈರ್ ತೀರ್ಪಿಗೆ ಬಲಿಯಾದ ಮೊದಲ ಕ್ರಿಕೆಟರ್ ಕೂಡ ತೆಂಡೂಲ್ಕರ್ ಆಗಿದ್ದಾರೆ. ಆ ಮೊತ್ತ ಮೊದಲ ಥರ್ಡ್ ಅಂಪೈರ್ ತೀರ್ಪು ಕೂಡ ತಪ್ಪಾಗಿತ್ತು ಅನ್ನೊದು ಟಿವಿ ರಿಪ್ಲೈ ಯಲ್ಲಿಯೇ ತಿಳಿದು ಬಂದ ಸತ್ಯವಾಗಿತ್ತು. ಹಾಗೆಯೇ ಅಂಪೈರ್ ನ ತಪ್ಪಾದ ನಿರ್ಧಾರಕ್ಕೆ ಅತೀ ಹೆಚ್ಚು ಬಾರಿ ಅವಕೃಪೆಗೆ ಒಳಗಾದ ಆಟಗಾರ ಯಾರು ಅಂತ ಹುಡುಕಿದರೆ ಬಹುಶಃ ಅಲ್ಲೂ ಕೂಡ ತೆಂಡೂಲ್ಕರ್ ಹೆಸರೇ ಇರಬಹುದೆನೋ. ಹೀಗೆ ಹುಡುಕುತ್ತಾ ಹೋದರೆ ಭಾರತೀಯ ಆಟಗಾರರಿಗೂ ದಾಖಲೆಗಳಿಗೂ ವಿಚಿತ್ರವಾದ ನಂಟಿರುವುದು ವರುಷಗಳಿಂದ ಸಾಬೀತಾಗುತ್ತಾ ಬಂದಿದೆ.

ಇನ್ನು ವರ್ಲ್ಡ್ ರೆಕಾರ್ಡ್ಗಳ ಬಗೆಗಿನ ಈ ಪರಿಯ ಹುಚ್ಚು ಶುರುವಾಗಿದ್ದು ಕಪಿಲ್ ವರ್ಲ್ಡ್ ರೆಕಾರ್ಡ್ ಮಾಡಿದ ಆ ದಿನದಿಂದಲೇ ಅಂತನ್ನಬೇಕು. ಆ ದಿನ ಟಿವಿ ವಾರ್ತೆಯಲ್ಲಿ ವಿಶ್ವದಾಖಲೆಯ ವಿಕೆಟ್ ಪಡೆದ ಕ್ಷಣವನ್ನು ಕಣ್ತುಂಬಿಸಿಕೊಂಡ ಮೇಲೆ ರೆಕಾರ್ಡ್ ಗಳ ಫಾಲೋ ಮಾಡೋ ಹುಚ್ಚು ಹೆಚ್ಚಾಯಿತೆನ್ನಬಹುದು. ಇನ್ನು ದೇಶದ ಅದೆಷ್ಟೋ ಯುವಕರಿಗೆ ಸ್ಪೂರ್ತಿಯ ಸೆಲೆಯಾಗಿದ್ದ ಕಪಿಲ್ ಅದೇ ವರ್ಷವೇ ಕ್ರಿಕೆಟ್ ನಿಂದ ಹಿಂದೆ ಸರಿಯುವಂತಾದದ್ದು ದುರದೃಷ್ಟಕರ ಸಂಗತಿ. ನಿವೃತ್ತಿಗೂ ಮುನ್ನ ಭಾರತದ ಪರ ಅತೀ ಹೆಚ್ಚು ಒನ್ ಡೇ ಹಾಗೂ ಟೆಸ್ಟ್ ಪಂದ್ಯವಾಡಿದ ದಾಖಲೆ ಬಹಳ ವರ್ಷಗಳವರೆಗೆ ಕಪಿಲ್ ಹೆಸರಲ್ಲೇ ಇತ್ತು ಅನ್ನೊದನ್ನ ಯಾರು ಮರೆಯುವಂತಿಲ್ಲ. ಅದಕ್ಕಿಂತ ಹೆಚ್ಚಾಗಿ ತಮ್ಮದೇ ನಾಯಕತ್ವದಲ್ಲಿ  ಇಂಡಿಯಾಕ್ಕೆ ಅಚ್ಚರಿಯ ರೀತಿಯಲ್ಲಿ ವರ್ಲ್ಡ್ ಕಪ್ ಗೆಲ್ಲಿಸಿದ್ದು ಕೂಡ ಇತಿಹಾಸ ಪುಟಗಳಿಂದ ಅಳಿಸಿದ ಸಂಗತಿ. ದುರದೃಷ್ಟಕರ ಸಂಗತಿ ಏನೆಂದರೆ ಇಂಡಿಯಾ ಸೆಮಿಫೈನಲ್ ಗೆ ಹೋಗಲು ಕಾರಣವಾದ ಆ 175 ರನ್ನುಗಳ ಇನ್ನಿಂಗ್ಸ್ ಟೆಲಿಕಾಸ್ಟ್ ಆಗದೆ ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳು ನೋಡುವ ಭಾಗ್ಯವನ್ನು ಕಳೆದುಕೊಂಡಿದ್ದು. ಈಗಲೂ ಒನ್ ಡೇ ಕ್ರಿಕೆಟ್ ಇತಿಹಾಸದ ದಿ ಬೆಸ್ಟ್ ಇನ್ನಿಂಗ್ಸ್ ಅದೇ ಅಂದರೂ ತಪ್ಪಿಲ್ಲ. ಕಪಿಲ್ ಹೊಡೆದ ಆ ಇನ್ನಿಂಗ್ಸ್ ನಿಂದಲೇ ಇಂಡಿಯಾದ ಕ್ರಿಕೆಟ್ ಚರಿಷ್ಮ ಬದಲಾಯಿತು ಎಂದರೂ ಸುಳ್ಳಾಗದು. ಅಂತಹ ಮಹಾನ್ ಆಟಗಾರನಿಗೆ ಒಂದು ಒಳ್ಳೆಯ ಗೌರವದ ವಿದಾಯ ಸಿಗದೇ ಹೋದದ್ದು ಮಾತ್ರ ವಿಷಾದನೀಯ ಸಂಗತಿಯೇ ಸರಿ.

1994 ರ ವಿಲ್ಸ್ ಟ್ರೋಫಿಯ ವಿಂಡೀಸ್ ಎದುರಿನ ಲೀಗ್ ಪಂದ್ಯವೇ ಅವರ ಕಡೆಯ ಪಂದ್ಯವಾದದ್ದು, ಆ ಪಂದ್ಯದಲ್ಲಿ ಆಡುವಾಗ ಕಪಿಲ್ ಗಾಯಾಳುವಾದದ್ದು, ನಂತರ ರನ್ನರ್ ಸಹಾಯ ತೆಗೆದುಕೊಂಡರೂ ಸಫಲರಾಗದೆ ಹೋದದ್ದು, ಕೊನೆಯಲ್ಲಿ ಕುಂಟುತ್ತ ನಿರ್ಗಮಿಸುವಂತಾದದ್ದು, ನಮ್ಮಗಳ ಇಡೀ ರಾತ್ರಿ ನಿರವ ಮೌನವಾದದ್ದು ಎಲ್ಲವೂ ಕಣ್ಣೆದುರಿಗಿರುವ ನೆನಪುಗಳೇ. ಏನೇ ಆದರೂ ನಮ್ಮಂತ ಅದೆಷ್ಟೋ ಮುಗ್ಧ ಮನಸ್ಸುಗಳನ್ನು ತಮ್ಮ ಕ್ರಿಕೆಟ್ ಸಂಜೆಯಲ್ಲಿ ಸವಿನೆನಪನ್ನಾಗಿಸಿದ ಕಪಿಲ್, ನಮ್ಮಗಳ ನೆನಪಿನಲ್ಲಿ ಅದೇ ಸಿಪಾಯಿಯ ಗತ್ತಿನಲ್ಲಿ ನಿಂತಿರುತ್ತಾರೆ ಎಂಬುದಂತೂ ಸುಳ್ಳಲ್ಲ. ಬಿಡಿ, ಕಪಿಲ್ ದೇವ್ ಅಂತ ಪ್ಲೇಯರ್ ಮುಂದೆ ಹುಟ್ಟಲ್ಲ ಅಂತ ಎದೆತಟ್ಟಿಕೊಂಡು ನೂರು ವರ್ಷ ನಂತರ ಬೇಕಾದರೂ ಹೇಳಿಬಿಡಬಹುದು.

| ಇನ್ನು ನಾಳೆಗೆ |

‍ಲೇಖಕರು Admin

July 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: