ಮಧುಕರ್ ಬಳ್ಕೂರು ಸರಣಿ ಕಥೆ 7 – ಕ್ರಿಕೆಟ್ ಕನವರಿಕೆ ತಲೆಗೇರಿದ ಕ್ಷಣಗಳು…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ.

‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ.

ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ.

7

ಕ್ರಿಕೆಟ್ ಕನವರಿಕೆ ತಲೆಗೇರಿದ ಕ್ಷಣಗಳು

ಬಿಡಿ, ಇಂಡಿಯಾದವರ ಕತೆ ಗೊತ್ತಲ್ಲ. ಸ್ವದೇಶದಲ್ಲಿ ಹುಲಿ ಹೊರಗಡೆಲಿ ಇಲಿ’ ಹಾಗಂತ ಹೊಟೆಲ್ ಗೆ ಬಂದ ಪರಿಚಿತರೊಬ್ಬರು ಕೊಂಕು ತೆಗೆದಿದ್ದರು. ಆಗಷ್ಟೇ ಇಂಡಿಯಾದವರು ಇಂಗ್ಲೆಂಡ್ ಹಾಗೂ ಜಿಂಬಾಬ್ವೆ ವಿರುದ್ಧ ಟೆಸ್ಟ್ ಸರಣಿಯನ್ನ ಕ್ಲೀನ್ ಸ್ವೀಪ್ ನಲ್ಲಿ ಗೆದ್ದಿದ್ದರು. ಸಮಯ ವ್ಯತ್ಯಾಸವಾಗಿ ನಿದ್ರೆ ಕಣ್ಣಿನಲೆಲ್ಲ ಆಡಿ ಸೋಲುತ್ತಿದ್ದರು ಎಂದು ನಂಬಿದ್ದ ನನಗೆ ಕೊನೆಗೂ ನಮ್ಮ ನೆಲದಲ್ಲೇ ಗೆದ್ರಲ್ಲ ಅನ್ನೊ ಸಮಾಧಾನ. ಇನ್ನು ಅವರು ಹೇಳಿದ್ದು ಸತ್ಯವೇ ಆಗಿದ್ದರೂ ಆ ಸಮಯದಲ್ಲಿ ಆ ಮಾತು ಬೇಡವಾಗಿತ್ತು. ಏಕೆಂದರೆ ಭಾರತೀಯ ಕ್ರಿಕೆಟ್ ಗೆ ಹೊಸ ದಿಕ್ಕನ್ನೆ ಪರಿಚಯಿಸಿದ ಸರಣಿ ಇದಾಗಿತ್ತು. ಕಳೆದ ಮೂರು ವರ್ಷಗಳಲ್ಲಿ ನ್ಯೂಜಿಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾ, ಸೌತ್ ಆಫ್ರಿಕಾದಂತಹ ದೈತ್ಯ ದೇಶಗಳೆದುರು ಅವರದೇ ನೆಲದಲ್ಲಿ ಆಡಿ ಸೋತಿದ್ದ ಭಾರತಕ್ಕೆ ತಕ್ಷಣವೇ ಒಂದು ದೊಡ್ಡ ಗೆಲುವು ಬೇಕಾಗಿತ್ತು. ಅದರಲ್ಲೂ ನಾಯಕರಾಗಿದ್ದ ಅಜರುದ್ದೀನ್ ಗೆ ಈ ಸರಣಿ ಅಗ್ನಿಪರೀಕ್ಷೆಯಾಗಿತ್ತು.

ಅದಾಗಲೇ ತಂಡದಲ್ಲಿದ್ದ ಹಿರಿಯರಾದ ವೆಂಗ್ಸರ್ಕಾರ್, ಶ್ರೀಕಾಂತ್, ರವಿಶಾಸ್ತ್ರಿಯಂತವರು ತೆರೆಮರೆಗೆ ಸರಿದಿದ್ದರು. ಕಪಿಲ್ ಬೇರೆ ವೃತ್ತಿ ಬದುಕಿನ ಸಂಜೆಯಲ್ಲಿದ್ದರು. ಹಾಗಾಗಿ ಯುವಪಡೆಯನ್ನು ಕಟ್ಟಿಕೊಂಡು ಫೀಲ್ಡ್ ಗೆ ಇಳಿದಿದ್ದ ಅಜರ್ ಮೇಲೆ ಸಾಕಷ್ಟು ಒತ್ತಡವಿತ್ತು. ಇನ್ನು ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿಯೇ ಮೊದಲ ಟೆಸ್ಟ್ ನಿಗದಿಯಾಗಿತ್ತು. ತಮ್ಮ ವೃತ್ತಿ ಬದುಕಿನ ಮೊದಲ ಟೆಸ್ಟ್ ಅನ್ನ ಇದೇ ಮೈದಾನದಲ್ಲಿ ಇದೇ ಇಂಗ್ಲೆಂಡ್ ನ ಎದುರು ಆಡಿ ಶತಕ ಸಿಡಿಸಿದ್ದ ಅಜರ್, ನಂತರ ಬ್ಯಾಕ್ ಟು ಬ್ಯಾಕ್ ಸೆಂಚುರಿ ಹೊಡೆದು ವರ್ಲ್ಡ್ ರೆಕಾರ್ಡ್ ಸೃಷ್ಟಿಸಿದ್ದರು. ಇದೀಗ ಮತ್ತೆ ಅದನ್ನೆ ಪುನರಾವರ್ತಿಸಿದ ಅವರು ಈ ಬಾರಿ ಬ್ಯಾಕ್ ಟು ಬ್ಯಾಕ್ ಮ್ಯಾಚ್ ಗೆಲ್ಲೋಕೆ ಅಡಿಗಲ್ಲಾದರು. ಇದೇ ಈಡನ್ ನಲ್ಲಿ ಅವರು ಬಾರಿಸಿದ 182 ರನ್ ನಾಯಕರಾಗಷ್ಟೆ ಅಲ್ಲ ಅವರ ಕೆರಿಯರ್ ಮುಂದುವರೆಯಲು ಕೂಡ ಕಾರಣವಾಯಿತು. ನಂತರ ಮದ್ರಾಸ್ ನ ಎರಡನೇ ಟೆಸ್ಟ್ ನಲ್ಲಿ ತೆಂಡೂಲ್ಕರ್ ಶತಕ ಹಾಗೂ ಮುಂಬಯಿಯ ಮೂರನೇ ಟೆಸ್ಟ್ ನಲ್ಲಿ ವಿನೋದ್ ಕಾಂಬ್ಳಿಯ ದ್ವಿಶತಕಗಳು ಭಾರತ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಆದರೆ ಒಟ್ಟಾರೆ ಸರಣಿ ಗೆಲುವಿಗೆ ಅಜರ್ ಬಳಸಿದ ತ್ರಿವಳಿ ಸ್ಪಿನ್ ಪ್ರಯೋಗ ದೊಡ್ಡ ಕೆಲಸವೇ ಮಾಡಿತ್ತು. ಸ್ಪಿನ್ನತ್ರಯರಾದ ವೆಂಕಟಪತಿ ರಾಜು, ರಾಜೇಶ್ ಚೌವ್ಹಾಣ್, ಅನಿಲ್ ಕುಂಬ್ಳೆ ಸರಣಿಯುದ್ದಕ್ಕೂ ತಮ್ಮ ಸ್ಪಿನ್ ಕೈಚಳಕವನ್ನು ಪ್ರದರ್ಶಿಸಿ ಇಂಗ್ಲೀಷರನ್ನು ಪೇಚಿಗೆ ಸಿಲುಕಿಸುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲೂ  ಕುಂಬ್ಳೆ ಮೂರು ಪಂದ್ಯಗಳಲ್ಲಿ 21 ವಿಕೆಟ್ ಪಡೆಯುವುದರ ಮೂಲಕ ಭಾರತದ ಬೌಲಿಂಗ್ ವಿಭಾಗದ ಟ್ರಂಪ್ ಕಾರ್ಡ್ ಎನಿಸಿದರು.

ನಂತರದ್ದು ಜಿಂಬಾಬ್ವೆ ಎದುರಿನ ಏಕೈಕ ಟೆಸ್ಟ್. ದೆಹಲಿಯ ಫೀರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಟೆಸ್ಟ್ ನಲ್ಲಿ ವಿನೋದ್ ಕಾಂಬ್ಳಿ ಮತ್ತೊಂದು ಡಬಲ್ ಸೆಂಚುರಿ ಹೊಡೆಯುವ ಮೂಲಕ ರಾತ್ರೊರಾತ್ರಿ ಸ್ಟಾರ್ ಆದರು. ಅವರು ಹೊಡೆದ ಸತತ ಎರಡನೇ ದ್ವಿಶತಕ ಭಾರತವನ್ನು ಇನ್ನಿಂಗ್ಸ್ ಅಂತರದಲ್ಲಿ ಗೆಲ್ಲುವಂತೆ ಮಾಡಿದರೆ, ಈ ಎರಡು ಸರಣಿಗಳ ಗೆಲುವು ಭಾರತೀಯ ಕ್ರಿಕೆಟ್ ಗೆ ಹೊಸ ದಿಕ್ಕನ್ನು ತೋರಿದವು.

ಅದು ಸ್ವದೇಶದಲ್ಲೊ ವಿದೇಶದಲ್ಲೋ, ಟೆಸ್ಟೊ ಒನ್ ಡೇ ಯೋ ಇಂಡಿಯಾ ಗೆದ್ದಿತಲ್ಲ ಅನ್ನೋದೆ ನಮಗೆ ಮುಖ್ಯವಾಗಿತ್ತು. ಹಾಗೆ ಕ್ರಿಕೆಟ್ ನೋಡೋದರಲ್ಲೂ ಅಷ್ಟೇ. ಅದು ಟೆಸ್ಟ್ ಇರಲಿ ಒನ್ ಡೇ ಇರಲಿ ಒಂದಿಂಚು ಕದಲದೆ ಮ್ಯಾಚ್ ನೋಡುತ್ತಿದ್ದೇವು. ಯಥಾಪ್ರಕಾರ ಕ್ರಿಕೆಟ್ ಇರುವ ದಿನ ಬಡಾಡಿ ಪಟೇಲರ ಮನೆಗೆ ಬೆಳಿಗ್ಗೆನೆ ಠೀಕಾಣಿ ಹೂಡೋದು. ಇವತ್ತ್ ಯಾವ ಮ್ಯಾಚಾ ಅಂತ ಅವರೇ ಕೇಳೋರು..!! ಬಾಯಿ ಬಿಟ್ಟು ಸ್ವಲ್ಪ ಟಿವಿ ಹಾಕಿ ಅಂತ ಕೇಳೋಕೆ ಧೈರ್ಯವಿಲ್ಲದಿದ್ದರಿಂದ ನಾವು ಬಂದರೆ ಕ್ರಿಕೆಟ್ ನೋಡೋದಕ್ಕೆನೆ ಅಂತ ತಿಳಿದು ಅವರೇ ಹಾಕೋರು. ತೀರಾ ನೀರಸ ಪಂದ್ಯವನ್ನೂ ಬಿಟ್ಟು ಬಿಡದಂತೆ ನೋಡುತ್ತಿರುವುದನ್ನು ನೋಡಿ ಆಮೇಲಾಮೇಲೆ ಅವರಿಗೆನೆ ಬೇಸರ ಬರೋದು!!

ನಂತರ ಈ ಮಕ್ಕಳು ಎದ್ದೊಗಲ್ಲ ಅಂತ ತಿಳಿದು ಅವರೇ ಟಿವಿ ಆಫ್ ಮಾಡೋರು!! ನಮಗೆ ಸಣ್ಣಕೆ ಬೇಸರವಾಗೋದು.. ಇಷ್ಟು ಹೊತ್ತು ಕುಟು ಕುಟು ಮಾಡಿದ ನಮ್ಮ ಆಟಗಾರರು ಈಗೇನಾದರೂ ಹೊಡೆಯೋಕೆ ಶುರುಮಾಡಿದ್ರೆ…? ಹಾಗಂತ ತಕ್ಷಣವೇ ಏನೋ ಹೊಳೆದಂತಾಗಿ ಕಾಮೆಂಟರಿ ಕೇಳೋಕೆ ಅಂತ ಮನೆಗೆ ಓಡಿಬರೋದು… ಸ್ಕೋರ್ ಕೇಳಿದಾಗ ವಿಕೆಟೇ ಹೋಗಿರೋದು. ಛೇ.. ನಾನು ಒಂದು ಕ್ಷಣ ನೋಡದೆ ಇದ್ದಿದಕ್ಕೆ ವಿಕೆಟೇ ಹೋಯಿತಲ್ಲ ಅಂತೆಲ್ಲ ಚಡಪಡಿಸೋದು..! ಜಸ್ಟ್ ಎರಡೇ ನಿಮಿಷದಲ್ಲಿ ವಿಕೆಟೇ ಹೋಯಿತಾ ಅಂತಾ ಮತ್ತೆ ಆಶ್ಚರ್ಯವಾಗೋದು!! ಏನೋ ಸಮಸ್ಯೆ ಇರಬೇಕು.! ಯಾವುದಕ್ಕೂ ಟಿವಿ ಹಾಗೂ ರೇಡೀಯೋ ಕಾಮೆಂಟರಿ ಒಟ್ಟಿಗೆ ಕೇಳಿದ್ರೆ ಸರಿಹೋಗಿರೋದಾ ಅಂತೆಲ್ಲ ಅನ್ನಿಸೋದು.! ತಕ್ಷಣವೇ ಅವರೀಗ ಟಿವಿ ಹಾಕಿರಬಹುದಾ ಅಂತಂದುಕೊಂಡು ಮತ್ತೆ ಅವರ ಮನೆಗೆ ಓಡೋದು! ಟಿವಿ ಆಫ್ ಆಗಿರೋದು ನೋಡಿ ಮತ್ತೆ ಮುಖ ಸಪ್ಪೆಯಾಗೋದು! ನಾನು ಕಿಟಕಿಯಿಂದ ಇಣುಕಿದ್ದನ್ನ ಕಂಡ ಅವರು ಏಯ್ ಸಂಜೆ ಬಾರೋ ಅಂತ ಅನ್ನೋರು.! ನನಗೋ ಸಿಕ್ಕಿಬಿದ್ದನಲ್ಲ ಅಂತಾ…! ಕಣ್ಣೆದುರೆ ಟಿವಿ ಬಂದ್ ಮಾಡಿದ ಮೇಲೂ ಮತ್ತೆ ಹೋಗಿ ನೋಡಿದ್ದು ಎಷ್ಟು ಸರಿ ಅಂತ ನನಗೆ… ಮರುಕ್ಷಣವೇ ಮತ್ತದೆ ಕೂತೂಹಲ..! ಹ್ಯಾಗ್ ಔಟಾಗಿರಬಹುದು…? ನೆಕ್ಟ್ ಯಾರು ಆಡೊಕೆ ಬಂದಿರಬಹುದು ಅಂತ..! ಒಟ್ಟಿನಲ್ಲಿ ಅರ್ಜೆಂಟಾಗಿ ನೋಡಬೇಕು. ಎಲ್ಲಿ ನೋಡೋದು? ಮಕ್ಕಿಮನೆ… ಬ್ಲಾಕ್ ಅಂಡ್ ವೈಟ್ ಟಿವಿಯಾದರೂ ಆದಿತ್ಯವಾರದ ಪಿಕ್ಚರ್ ನ ಅವರ ಮನೆಯಲ್ಲೇ ನೋಡ್ತಿದ್ದವಲ್ಲ..? ಇನ್ನು ಕ್ರಿಕೆಟ್ ಯಾಕ್ ನೋಡಬಾರದು ಅಂತ ತಕ್ಷಣವೇ ಅವರ ಮನೆಗೆ ಓಡೋದು… ಅಲ್ಲಿಗೆ ಹೋಗಿ ಮನೆಯಲ್ಲಿ ಯಾರು ದೊಡ್ಡವರು ಕಾಣದೆ ಇದ್ದಾಗ ಮತ್ತೆ ಮುಖ ಸಪ್ಪಗಾಗೋದು… ಇಷ್ಟು ದೊಡ್ಡ ಮ್ಯಾಚ್ ನಡೀತಿದೆ ಂ ಯಾರಿಗೂ ಅದನ್ನು ನೋಡ್ಬೇಕು ಅನ್ನೋ ಸಿರೀಯಸ್ ನೆಸ್ ಇಲ್ಲವಲ್ಲಪ್ಪ ಅಂತೆಲ್ಲಾ ಅನ್ನಿಸೋದು!! ಇನ್ನೆನ್ಮಾಡೋದು, ಕಾಮೆಂಟರಿಯಾದರೂ ಕೇಳೋಣ ಅಂತ ತಿರುಗ ಮನೆ ಕಡೆಗೆ ವಾಪಾಸ್ ಆಗೋದು.. ಕಾಮೆಂಟರಿ ಕೇಳಿದ್ರೆ ಲಂಚ್ ಬ್ರೇಕ್ ನಡೆದಿರೋದು. ಸಮಯ ನೋಡಿದ್ರೆ ಹನ್ನೊಂದುವರೆ. ಇಷ್ಟ್ ಬೇಗೆಲ್ಲ ಲಂಚ್ ನಡಿತದಾ ಅಂತೆಲ್ಲ ಅಚ್ಚರಿಯಾಗೋದು!

 ಹೀಗೆ ಕ್ರಿಕೆಟ್ ಒಂದ್ ಇದ್ದು ಬಿಟ್ಟರೆ ಊಟ, ತಿಂಡಿ, ನಿದ್ರೆ ಏನು ಬೇಡವಾಗಿತ್ತು. ಯಾಕೆ ಕ್ರಿಕೆಟ್ ಅನ್ನ ಇಷ್ಟೊಂದು ಡೀಪಾಗಿ ಕನವರಿಸುತ್ತಿದ್ದೆನೆಂದರೆ ಕ್ರಿಕೆಟ್ ನ ಆಗುಹೋಗುಗಳ್ಯಾವುದು ಕಣ್ತಪ್ಪಿಸಿ ಹೋಗಬಾರದು ಎಂಬುದು ನನ್ನ ಹಠವಾಗಿತ್ತು. ಹಾಗೆ ಕಣ್ತಿಪ್ಪಿಸಿ ಹೋದರೆ ಏನೋ ಒಂದು ಕಳೆದುಕೊಂಡ ಫೀಲಿಂಗ್ ನನ್ನನಾವರಿಸುತ್ತಿತ್ತು. ಒಮ್ಮೆ ಹಾಗಾದಲ್ಲಿ ಗಂಟೆಗಟ್ಟಲೆ ಮೂಡ್ ಆಫ್ ಆಗಿ ಬಿಡುತ್ತಿತ್ತು. ಇನ್ನು ಕ್ರಿಕೆಟ್ ಪಂದ್ಯವಿದ್ದಾಗ ಚಾಚು ತಪ್ಪದೆ ರೇಡಿಯೋ ವಾರ್ತೆ ಕೇಳುತ್ತಿದ್ದೆ. ಹಾಗೆನೆ ಬೆಳಿಗ್ಗೆ ಹಾಗೂ ರಾತ್ರಿಯ ಹಿಂದಿ ಸಮಾಚಾರ್ ಇಂಗ್ಲೀಷ್ ನ್ಯೂಸ್ ಕೇಳುತ್ತಿದ್ದೆ. ಏಕೆಂದರೆ ಅವರೇನು ಮ್ಯಾಚ್ ನ ಬಗ್ಗೆ ಬೇರೆನಾದರೂ ಹೇಳಿದ್ದಾರ ಅಂತ ಕೇಳೋಕೆ.! ಅದೆಷ್ಟು ಅರ್ಥ ಆಗ್ತಿತ್ತೋ ಗೊತ್ತಿಲ್ಲ, ಆದರೂ ಕೇಳ್ತಿದ್ದೆ! ಇನ್ನು ಮಾರನೇ ದಿನ ಬೆಳಿಗ್ಗೆ ಉದಯವಾಣಿ ಪೇಪರ್ ಬರುವಾಗಲಂತೂ ನಾನು, ನಮ್ಮಣ್ಣ ನಾನ್ ಮುಂದು ತಾನ್ ಮುಂದು ಕ್ರಿಕೆಟ್ ಫೇಜ್ ನೋಡೋಕೆ ಕಿತ್ತಾಡುತ್ತಿದ್ದೇವು. ಹಿಂದಿನ ದಿನದ ಮ್ಯಾಚ್ ಬಗ್ಗೆ ಏನೇನ್ ಬರೆದಿದ್ದಾರೆ ಅಂತ ನೋಡುವ ಕಾತುರ ನಮಗೆ. ಸಾಲದ್ದಕ್ಕೆ ಕ್ರಿಕೆಟ್ ಆಟಗಾರರ ಆಕರ್ಷಕ ಚಿತ್ರಗಳು ಕಣ್ಸೇಳೆಯೋದು… ಇನ್ನು ಮ್ಯಾಚ್ ಅಂದ್ರೆ ಬರೀ ನಮ್ಮ ದೇಶದಷ್ಟೆ ಆಗಬೇಕಿರಲಿಲ್ಲ. ಬೇರೆ ಯಾವ ದೇಶದ ಕ್ರಿಕೆಟ್ ಮ್ಯಾಚ್ ಇದ್ದರೂ ಅದನ್ನ ಸಿರೀಯಸ್ ಫಾಲೋ ಮಾಡುತ್ತಿದ್ವಿ. ಅಷ್ಟೇ ಏಕೆ ರಣಜಿ ಮ್ಯಾಚ್, ದುಲೀಪ್ ಟ್ರೋಫಿ, ದೇವಧರ್ ಟ್ರೋಫಿ, ಇರಾನಿ ಕಪ್ ಹೀಗೆ ಯಾವುದೇ ಮ್ಯಾಚ್ ಇರಲಿ, ಎಲ್ಲವನ್ನು ಇಂಚಿಂಚಾಗಿ ನೋಡುತ್ತಿದ್ವಿ. ಅದರಲ್ಲೂ ಕರ್ನಾಟಕ ತಮಿಳುನಾಡು ಮ್ಯಾಚ್ ಅಂದ್ರೆ ಅದು ಇಂಡಿಯಾ ಪಾಕಿಸ್ತಾನ ಮ್ಯಾಚ್ ನಷ್ಟೇ ಕ್ರೇಜ್ ಇರ್ತಿತ್ತು. ರೇಡಿಯೋದಲ್ಲಿ ಕನ್ನಡದ ಕಾಮೆಂಟರಿ ಕೇಳೋ ಮಜಾನೇ ಬೇರೆ ಇರ್ತಿತ್ತು. ನಾವೆಷ್ಟು ಇಂಗ್ಲಿಷ್ ಹಾಗೂ ಹಿಂದಿ ಶಬ್ದಗಳಲ್ಲಿ ಬೆರೆತು ಹೋಗಿದ್ದೇವೆಂದರೆ ಅಚ್ಚ ಕನ್ನಡ ಪದಗಳಲ್ಲಿ ಕಾಮೆಂಟರಿ ಕೇಳಿದಾಗಲೆಲ್ಲ ಆಶ್ಚರ್ಯವಾಗೋದು…! ಏಕೆಂದರೆ ಬಹುತೇಕ ಕನ್ನಡ ಪದಗಳು ಆಡುಮಾತಿನ ಪದಗಳಿಗಿಂತ ಅಪರೂಪವಾಗಿರೋದು. ಇನ್ನು ನನಗೆ ನೆನಪಿರುವ ಮಟ್ಟಿಗೆ ಕರ್ನಾಟಕದ ಯಾವುದೇ ರಣಜಿ ಮ್ಯಾಚ್ ನ ವರದಿ ನೋಡುವಾಗ ರಾಹುಲ್ ದ್ರಾವಿಡ್ ಹೆಸರಿಲ್ಲದೆ ಇರುತ್ತಿರಲಿಲ್ಲ. ಏಕೆಂದರೆ ಬಹುತೇಕ ಪಂದ್ಯಗಳಲ್ಲಿ ಅವರು ಸೆಂಚುರಿಯನ್ನೆ ಬಾರಿಸಿರುತ್ತಿದ್ದರು. ರಣಜಿ ಸಿರೀಸ್ ನ ಉದ್ದಕ್ಕೂ ರನ್ ಹೊಳೆಯನ್ನೆ ಹರಿಸುತ್ತಿದ್ದರೂ ಅವರ್ಯಾಕೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುತ್ತಿಲ್ಲ ಎನ್ನುವುದು ನನ್ನನ್ನು ಸೇರಿ ಬಹುತೇಕರ ಪ್ರಶ್ನೆಯಾಗಿತ್ತು. ಮುಂಬೈನ ಆಟಗಾರರಿಗೆ ಆಯ್ಕೆ ಮಂಡಳಿಯವರು ಮೊದಲ ಮಣೆ ಹಾಕುತ್ತಾರೆನ್ನುವುದು ಬಲ್ಲವರ ಅಭಿಪ್ರಾಯವಾಗಿತ್ತು. ಇದು ಸ್ವಲ್ಪ ಮಟ್ಟಿಗೆ ನಿಜವೂ ಆಗಿತ್ತು.

ಇನ್ನು ಪಟೇಲರ ಮನೆಯ ಉದಯವಾಣಿ ಪೇಪರ್ ಅವರ ಮನೆಗೆ ಹೋಗುವುದರೊಳಗಾಗಿ ಮುದ್ದೆಯಾಗಿ ಬಿಟ್ಟಿರೋದು. ಯಾಕೆಂದ್ರೆ ಆ ಒಂದು ಪೇಪರ್ ಹೊಟೆಲ್ ಗೆ ಬರುವ ಮಂದಿಯ ಕೈಯಲ್ಲಾ ಸ್ಪರ್ಶಿಸಿಯೇ ಹೋಗುತ್ತಿತ್ತು. ನಂತರ ಹೊಟೆಲ್ ಗೆ ಬರುತ್ತಿದ್ದ ಹೊಸ ದಿಗಂತ ಪೇಪರ್ ಅನ್ನ ಕೈಗೆತ್ತಿಕೊಂಡು ಅದರಲ್ಲೆನು ಮ್ಯಾಚ್ ಬಗ್ಗೆ ಹೊಸದಾಗಿ ಬರೆದಿದ್ದಾರೆ ಅಂತ ನೋಡೋದು.. ಎರಡೆರಡು ಪೇಪರ್ ನೋಡುತ್ತಿದ್ದರೂ ಕ್ರಿಕೆಟ್ ಬಿಟ್ಟು ಬೇರಾವ ವಿಷಯಗಳನ್ನು ನೋಡುತ್ತಿರಲಿಲ್ಲ ಅನ್ನೊದು ಮಾತ್ರ ಅಪ್ಪಟ ಸತ್ಯವಾಗಿತ್ತು. ಆದರೆ ಪೇಪರಿನಲ್ಲಿದ್ದ ಕ್ರಿಕೆಟಿಗರ ಪೋಟೋಗಳನ್ನ ಮಾತ್ರ ಮಾರನೇ ದಿನವೇ ಕಟ್ಟ್ ಮಾಡಿ ರಫ್ ಪುಸ್ತಕದ ತುಂಬೆಲ್ಲ ಅಂಟಿಸಿಕೋಳ್ಳೋದು ಆಗೆಲ್ಲ ಮಾಮೂಲಾಗಿತ್ತು. ನಮ್ಮ ಮೆಚ್ಚಿನ ಕ್ರಿಕೆಟಿಗರ, ನಟರ ಭಾವಚಿತ್ರವನ್ನು ಕಟ್ಟ್ ಮಾಡಿ ಗೋಡೆ ತುಂಬಾ ಪುಸ್ತಕ ತುಂಬಾ ಅಂಟಿಸೋದು ಆಗೀನ ಬಹುತೇಕ ಹುಡುಗರ ದೊಡ್ಡ ಕ್ರೇಜ್ ಆಗಿತ್ತು.

ಇನ್ನು ಅಣ್ಣ ತರಿಸುತ್ತಿದ್ದ ಕ್ರೀಡಾ ಪಾಕ್ಷಿಕ ರಾಜುಪತ್ರಿಕೆನಾ ಬಹಳಾನೇ ಫಾಲೋ ಮಾಡುತ್ತಿದ್ದೆ. ಆಗಿ ಹೋದ ಕ್ರಿಕೆಟ್ ಮ್ಯಾಚ್ ಗಳ ಅಪ್ಡೇಟ್ ಅನ್ನೆ ಮತ್ತೆ ಮತ್ತೆ ನೋಡಿ ಒಂಥರಾ ಪಠ್ಯ ಪುಸ್ತಕಗಳ ರಿವಿಷನ್ ಮಾಡಿದಂತೆ ಮಾಡುತ್ತಿದ್ದೆ. ಆದರೆ ಅಪ್ಪಿ ತಪ್ಪಿಯೂ ಪಠ್ಯ ಪುಸ್ತಕಗಳನ್ನು ಇಷ್ಟು ಸಿರೀಯಸ್ ಆಗಿ ನೋಡುತ್ತಿರಲಿಲ್ಲ ಅನ್ನೊದು ನಿಜವಾಗಿತ್ತು. ಇದೊಂಥರಾ ಹೇಗೆ ಅಂದ್ರೆ ಕಂಪನಿಯಲ್ಲಿ ಡೇಬುಕ್, ತಿಂಗಳ ಆಡೀಟ್, ಇಂಟರ್ನಲ್ ಆಡಿಟ್ ಮಾಡಿದಂಗೆ ಕ್ರಿಕೆಟ್ ವಿಚಾರದಲ್ಲಿ ಮಾಡುತ್ತಿದ್ದೆ. ಅದದೇ ಕ್ರಿಕೆಟ್ ಕುರಿತಾದ ವಿಚಾರವನ್ನು ಮತ್ತೆ ಮತ್ತೆ ಗಮನಿಸುತ್ತಿದ್ದೆ. ಕ್ರಿಕೆಟ್ ನ ಯಾವುದೇ ನ್ಯೂಸ್ ತಪ್ಪಿಹೋಗದಂತೆ ನೋಡಿಕೊಳ್ಳುತ್ತಿದ್ದೆ. ಇದರಿಂದೇನು ಉಪಯೋಗ ಅಂತ ಗೊತ್ತಿಲ್ಲದಿದ್ದರೂ ಇದನ್ನು ಮಹಾನ್ ತಪಸ್ಸಿನಂತೆ ಮಾಡುತ್ತಿದ್ದೆ. ಒಟ್ಟಾರೆ ಕ್ರಿಕೆಟ್ ವಿಚಾರದಲ್ಲಿ ಆ ವಯಸ್ಸಿಗೆ ಏನು ಗಮನಕ್ಕೆ ಬರುತ್ತಿತ್ತೊ ಅದನ್ನು ಗಾಢವಾಗಿ ತೆಗೆದುಕೊಳ್ಳುವ ಮನಸ್ಥಿತಿ ನನ್ನದಾಗಿತ್ತು.

ಇನ್ನು ತಂದೆಯವರಂತೂ ಗಾವಸ್ಕರ್, ವಿಶ್ವನಾಥ್, ಪಟೌಡಿ, ಪ್ರಸನ್ನ, ಬೇಡಿ ಅಂತೆಲ್ಲ ತಮ್ಮ ಕಾಲದ ಕ್ರಿಕೆಟಿಗರ ಗುಣಗಾನ ಮಾಡುತ್ತಿದ್ದರು. ಸಂಜೆಯಾಗುತ್ತಿದ್ದಂತೆಯೇ ನಮ್ಮ ಹೊಟೆಲ್ ನಲ್ಲಿ ಕ್ರಿಕೆಟ್, ರಾಜಕೀಯದಂತಹ ವಿಷಯಗಳು ಚರ್ಚೆಯಾಗುವುದು ಮಾಮೂಲಿಯ ಸಂಗತಿಯಾಗತ್ತು. ಸೆಲ್ ಫೋನ್ ಗಳು ಬಿಡಿ, ಎಲ್ಲರ ಮನೆಯಲ್ಲಿ  ಟಿವಿನೇ ಇಲ್ಲದಂತ ಕಾಲವದು. ಮನೋರಂಜನೆ, ಟೈಂಪಾಸ್ ಎಂದರೆ ರಾಜಕೀಯ, ಕ್ರಿಕೆಟ್ ಸಿನಿಮಾಗಳ ಕುರಿತಾಗಿ ಒಂದಷ್ಟು ಹರಟುವಿಕೆ ಬಿಟ್ಟರೆ ಬೇರೆನೂ ಇಲ್ಲವಾಗಿತ್ತು. ಇದಕ್ಕೆ ನಮ್ಮ ಹೊಟೆಲೇ ಸೆಂಟರ್ ಜಾಗವಾಗಿತ್ತು. ಗೊತ್ತಿದ್ದೊ ಗೊತ್ತಿಲ್ಲದೆಯೋ ನನ್ನ ಕಿವಿಗೆ ಹಲವಾರು ವಿಷಯಗಳು ಬೀಳುತ್ತಿದ್ದವು. ಏನ್ ಸೈಕ್ಲೋಪೀಡಿಯಾ ಆಗೋಕೆ ಹೊರಟಿದ್ದ ನನ್ನ ಮನಸ್ಸಿಗೆ ಸಾಕಷ್ಟು ವಿಷಯಗಳು ಜಮೆಯಾಗುತ್ತಿದ್ದವು.

| ಇನ್ನು ನಾಳೆಗೆ |

‍ಲೇಖಕರು Admin

July 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: