ಕಾಫಿ ಎಂಬ ಸಖನ ಕುರಿತು !

ಜೋಗಿ

ಹತ್ತಾರು ವರ್ಷಗಳ ಹಿಂದೆ, ಒಂದು ಅಪರಾತ್ರಿಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಮನೆಗೆ ನುಗ್ಗಿದ್ದೆ . ಮಳೆಯಲ್ಲಿ ಒದ್ದೆಮುದ್ದೆಯಾಗಿ ಥೇಟ್ ಕರಡಿಮರಿಯಂತೆ ನಿಂತಿದ್ದ ನನಗೆ ರಾಜೇಶ್ವರಿ ತೇಜಸ್ವಿಯವರು ಮೈ ಒರೆಸಲು ಬೆಚ್ಚಗಿನ ಟವಲ್ ಕೊಟ್ಟು, ನಾನು ಮೈ ಒರೆಸಿಕೊಂಡು ಚಳಿಮುಕ್ತನಾಗುವ ಹೊತ್ತಿಗೆ ಒಂದು ಗ್ಲಾಸು ಬಿಸಿಬಿಸಿ ಕಾಫಿಯನ್ನು ತಂದುಕೊಟ್ಟಿದ್ದರು. ದಪ್ಪವಾದ ಸ್ಟೀಲ್ ಗ್ಲಾಸಿನಲ್ಲಿ ನೊರೆಯುಕ್ಕಿಸುತ್ತಿದ್ದ ಬಿಸಿಬಿಸಿ ಕಾಫಿ. ನೀನು ಕುಡಿದ ಅತ್ಯುತ್ತಮ ಕಾಫಿ ಯಾವುದು ಎಂದು ಕೇಳಿದರೆ ನನಗೆ ಥಟ್ಟನೆ ನೆನಪಾಗುವುದು ರಾಜೇಶ್ವರಿ ಅಮ್ಮ ಮಾಡಿಕೊಟ್ಟ ಕಾಫಿ.

ನಮಗೆ, ದಕ್ಷಿಣ ಕನ್ನಡದ ಮಂದಿಗೆ ಕಾಫಿಯ ಕುರಿತು ಅಂತ ಮೋಹವೇನಿಲ್ಲ. ನಾವೇನಿದ್ದರೂ ಚಹಾ ಪ್ರಿಯರು . ನಮ್ಮಲ್ಲಿ ಅಷ್ಟು ಸೊಗಸಾಗಿ ಕಾಫಿ ಮಾಡುವವರೂ ಇಲ್ಲ. ನಾವು ಚಿಕ್ಕವರಿದ್ದ ಕಾಲಕ್ಕೆ ಮನೆಗಳಲ್ಲಿ ಬೆಲ್ಲದ ಕಾಫಿ ಮಾಡುತ್ತಿದ್ದರು. ಬಿಸಿನೀರಿಗೆ ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ, ನಂತರ ಕಾಫಿ ಪುಡಿ ಒಂದೆರಡು ಚಮಚ ಹಾಕಿ, ಚೆನ್ನಾಗಿ ಕಲಕಿ ಸೋಸಿದರೆ, ಕಾಫಿ ರೆಡಿ.

ಆ ಕಾಫಿ ಪುಡಿಯೂ ಅತ್ಯುತ್ತಮ ಗುಣಮಟ್ಟದ್ದು ಅಂತ ಹೇಳಲಿಕ್ಕಾಗದು. ಅದನ್ನು ನಾವು ಅಂಗಡಿಯಿಂದ ಪೇಪರಿನಲ್ಲಿ ಕಟ್ಟಿಸಿಕೊಂಡು ಬರುತ್ತಿದ್ದೆವು. ಎಂಟಾಣೆ ಕಾಫಿಪುಡಿ ಕೊಡಿ ಅಂದರೆ ಒಂದು ಡಬ್ಬದ ಮುಚ್ಚಳ ತೆಗೆದು ಸ್ಟೀಲಿನ ದೊಡ್ಡ ಚಮಚದಲ್ಲಿ ಒಂದಷ್ಟು ಕಾಫಿಪುಡಿಯನ್ನು ಎತ್ತಿಕೊಂಡು ಅದನ್ನು ಹಳೇ ಪೇಪರಿನಲ್ಲಿ ಕಟ್ಟಿಕೊಡುತ್ತಿದ್ದರು. ನಾವು ತರುತ್ತಿದ್ದ ಕಸ್ತೂರಿ ಬಾರ್‌ಸೋಪು, ಹಮಾಮ್ ಸೋಪು, ಚಹಾಪುಡಿ, ಸಕ್ಕರೆ, ಸೀಮೆಎಣ್ಣೆ- ಇವೆಲ್ಲ ತುಂಬಿದ್ದ ಬ್ಯಾಗಲ್ಲೇ ಕಾಫಿಪುಡಿಯ ಪೊಟ್ಟಣವೂ ಇರುತ್ತಿತ್ತು. ಮನೆಗೆ ಬರುವ ಹೊತ್ತಿಗೆ ಈ ಎಲ್ಲಾ ದಿನಸಿಗಳು ತಮ್ಮ ತಮ್ಮ ಪರಿಮಳವನ್ನು ಪರಸ್ಪರ ಹಂಚಿಕೊಂಡು, ಕಾಫಿ ಪುಡಿಯ ವಿಶಿಷ್ಟ ಪರಿಮಳ ನಮಗೆ ದಕ್ಕುತ್ತಲೇ ಇರಲಿಲ್ಲ.

ಕಾಫಿಯೆಂಬುದು ಕಾಫಿಯೂ ಆಗಿರುತ್ತಿರಲಿಲ್ಲ. ಕಾಫಿಯ ರುಚಿ ಕಂಡಿದ್ದರಲ್ಲವೇ ಅದು ಕಾಫಿಯಲ್ಲ ಎಂದು ಹೇಳುವುದಕ್ಕೆ. ಆ ಕಾಲಕ್ಕೆ ಅದ್ಯಾವುದೋ ಕಂಪೆನಿಯವರು ಮನೆಯಲ್ಲಿ ನಿಮ್ಮ ಅಮ್ಮ ಮಾಡಿದ ಕಾಫಿಯಷ್ಟೇ ರುಚಿಯಾದ ಕಾಫಿ ಎಂದು ಜಾಹೀರಾತು ನೀಡುತ್ತಿದ್ದರು. ಅದನ್ನು ನಂಬಿಕೊಂಡ ನಾವು ಅಮ್ಮ ಮಾಡುತ್ತಿದ್ದ ಕಾಫಿಯೇ ಸರ್ವಶ್ರೇಷ್ಠ ಮತ್ತು ರುಚಿಕರ ಎಂದು ನಂಬಿಕೊಂಡಿದ್ದೆವು.

ನಮ್ಮೂರಿನಲ್ಲಿ ಕೆಲಸವಿಲ್ಲದೇ ಅಡ್ಡಾಡಿಕೊಂಡಿದ್ದವರನ್ನೆಲ್ಲ ಚಿಕ್ಕಮಗಳೂರು ಆಸುಪಾಸಿನ ಮಂದಿ ಬಂದು ಕೆಲಸ ಕೊಡುವುದಾಗಿ ಹೇಳಿ ಕರೆದುಕೊಂಡು ಹೋಗುತ್ತಿದ್ದ ದಿನಗಳು ಅವು. ಘಟ್ಟದ ಕೆಳಗಿನಿಂದ ಹೀಗೆ ಆಳುಗಳನ್ನು ಕರೆಸುವವರನ್ನು ರೈಟರ್ ಎಂದು ಕರೆಯುತ್ತಿದ್ದರು. ಅವರು ಕಾಫಿ ತೋಟದಲ್ಲಿ ಕಾಫಿ ಹಣ್ಣು ಕೊಯ್ಯುವುದೇ ಮುಂತಾದ ಕೆಲಸಗಳನ್ನು ಮಾಡುತ್ತಿದ್ದು, ಆ ಕೆಲಸ ಮುಗಿದ ನಂತರ ಊರಿಗೆ ಮರಳುತ್ತಿದ್ದರು. ಹಾಗೆ ಘಟ್ಟದ ಮೇಲೆ ಹೋಗಿ ಬಂದ ಅನೇಕರು ಅಲ್ಲೇ ಮದುವೆ ಕೂಡ ಮಾಡಿಕೊಂಡು ಮರಳುತ್ತಿದ್ದದ್ದೂ ಉಂಟು. ಹೆಣ್ಮಕ್ಕಳಾದರೆ ಮದುವೆ ಮಾಡಿಕೊಂಡು ತಾವು ಹೋದ ಊರಲ್ಲೇ ತಳವೂರುತ್ತಿದ್ದದ್ದೂ ಸರ್ವೇಸಾಮಾನ್ಯ. ಅವರ ಪಾಲಿಗೆ ಕಾಫಿ ಕೊಯ್ಯವ ಕೆಲಸ , ಬಿಡುಗಡೆಯ ದಾರಿಯೂ ಆಗಿತ್ತು. ನಮ್ಮೂರಲ್ಲಿ ಮದುವೆ ಆಗುತ್ತದೆ ಯಾವ ಭರವಸೆಯೂ ಇಲ್ಲದ , ಬೀಡಿ ಕಟ್ಟಿಕೊಂಡೋ , ಬೇರೆಯವರ ತೋಟಗಳಲ್ಲಿ , ಕೃಷಿ ಭೂಮಿಗಳಲ್ಲಿ ಕಷ್ಟಕರ ಕೆಲಸಗಳನ್ನು ಮಾಡಿಕೊಂಡೋ ಅತೀವ ನಿರಾಸೆಯಲ್ಲಿ ಬದುಕುತ್ತಿದ್ದ ಹೆಣ್ಮಕ್ಕಳಿಗೆ ಸಿಕ್ಕ ಮೊದಲ ಬಿಡುಗಡೆಯ ದಾರಿ ಅಂದರೆ ಕಾಫಿ ತೋಟದ ಕೆಲಸ. ಅಂಥ ಕಷ್ಟದ ಕೆಲಸವೇನೂ ಆಗಿರಲಿಲ್ಲ ಮತ್ತು ಚಿಕ್ಕಮಗಳೂರು , ಕೊಡಗು ಪ್ರದೇಶದ ಬಿಸಿಲು ದಕ್ಷಿಣ ಕನ್ನಡದ ಬಿಸಿಲಿನಷ್ಟು ಪ್ರಖರವಾಗಿಯೂ ಇರುತ್ತಿರಲಿಲ್ಲ. ಹೀಗಾಗಿ ಇಲ್ಲಿಂದ ಹೋದವರಿಗೆ ಆ ಊರು ಸ್ವರ್ಗಸಮಾನ ಅನ್ನಿಸುತ್ತಿತ್ತು. ಹಾಗೆ ಅಲ್ಲಿಗೆ ಹೋದವರು ಮರಳಿ ಬರುವಾಗ ಐದೋ ಹತ್ತೋ ಕೇಜಿ ಕಾಫಿ ಬೀಜ ತರುತ್ತಿದ್ದರು. ಅದನ್ನು ಕಾಫಿ ಕುಡಿಯುವ ಅಭ್ಯಾಸ ಇರುವ ಮನೆಯವರಿಗೆ ಮಾರುತ್ತಿದ್ದರು. ನಾವು ಅದನ್ನು ಕೊಂಡುಕೊಂಡು ಬಾಣಲೆಯಲ್ಲಿ ಕಪ್ಪಾಗುವಂತೆ ಹುರಿದು, ನಂತರ ಒರಳುಕಲ್ಲಲ್ಲಿ ಕುಟ್ಟಿ ಪುಡಿ ಮಾಡುತ್ತಿದ್ದೆವು. ಆಗಲೇ ನಾವು ಕಾಫಿ ಪುಡಿಗೆ ಎಂಥ ಪರಿಮಳವಿದೆ ಅನ್ನುವುದನ್ನು ಮೊದಲ ಸಲ ಕಂಡುಕೊಂಡದ್ದು ಅಂಥ ಪರಿಮಳದ ಕಾಫಿಪುಡಿಯನ್ನೂ ಅಲ್ಯುಮಿನಿಯಂ ಪಾತ್ರೆಗೆ ಹಾಕಿ, ಅದಕ್ಕೆ ಬೆಲ್ಲ ಮತ್ತು ಹಾಲು ಸುರಿದು, ಆ ಘಮ್ಮನೆ ಕಂಪನ್ನೇ ಜಲಮಾಧಿ ಮಾಡುವ ಕಲೆಯನ್ನು ಬಹುತೇಕ ಎಲ್ಲ ತಾಯಂದಿರೂ ಕಲಿತುಕೊಂಡಿದ್ದರು.
ಕಾಫಿಗೊಂದು ವಿಶಿಷ್ಟ ರುಚಿಯಿದೆ, ಕಾಫಿ ಮಾಡುವುದಕ್ಕೂ ಅದರದ್ದೇ ಆದ ಕ್ರಮವಿದೆ ಮತ್ತು ಕಾಫಿ ಮಾಡುವುದು ಕೂಡ ಒಂದು ಕಲೆ ಅನ್ನುವುದು ನಮಗೆ ಗೊತ್ತಾದದ್ದು ಮೈಸೂರಿಗೆ ಬಂದ ನಂತರವೇ. ಸರಿಯಾಗಿ ಮಾಡಿದ ಫಿಲ್ಟರ್ ಕಾಫಿಯ ಮುಂದೆ ಮಿಕ್ಕೆಲ್ಲ ಪೇಯಗಳೂ ಸಪ್ಪೆಯೇ. ಅಂಥ ಕಾಫಿಯೆಂಬುದು ಮಳೆಗಾಲಕ್ಕೆ ಬಂಧು, ಚಳಿಗಾಲಕ್ಕೆ ಸಂಗಾತಿ, ಬೇಸಗೆಗೆ ಮಿತ್ರ.

ಕಾಫಿ ಮಾಡುವುದು ಕೂಡ ಒಂದು ಕಲೆ ಅನ್ನುವುದನ್ನು ಮೊದಲು ಕಲಿಸಿಕೊಟ್ಟವರು ವೈಯನ್ಕೆ. ಅವರು ಪ್ರತಿದಿನ ಆಫೀಸಿನಿಂದ ಬರುವಾಗ ಐವತ್ತು ಗ್ರಾಮ್ ಕಾಫಿ ಪುಡಿ ಮನೆಗೆ ಒಯ್ಯುತ್ತಿದ್ದರು. ಅದನ್ನು ಅವರೇ ಮುಂದೆ ನಿಂತು ಶೇಕಡಾ 80 ಕಾಫಿ , ಶೇಕಡಾ 20 ಚಿಕೋರಿ ಬೆರೆಸಿ ಪುಡಿ ಮಾಡಿಸುತ್ತಿದ್ದರು. ಆ ಅಂಗಡಿಯ ಮುಂದೆ `ನಿಮ್ಮ ಬೀಜಗಳನ್ನು ನಿಮ್ಮ ಕಣ್ಣೆದುರೇ ಹುರಿದು ಪುಡಿ ಮಾಡಿ ಕೊಡಲಾಗುತ್ತದೆ’ ಎಂಬ ಬೋರ್ಡ್ ಇತ್ತು ಅನ್ನುವುದು ಮಾತ್ರ ಶುದ್ಧ ಸುಳ್ಳು.

ಮನೆಗೆ ಹೋದ ನಂತರ ಅದನ್ನು ಬಿಸಿನೀರಿನ ಜೊತೆ ಫಿಲ್ಟರಿಗೆ ಹಾಕಿಡುತ್ತಿದ್ದರು. ಬೆಳಗ್ಗೆ ಅದಕ್ಕೆ ಕೆನೆಭರಿತ ಸಕ್ಕರೆ ಹಾಕಿದ, ನೀರು ಹಾಕದ ಹಾಲು ಬೆರೆಸಿ ಕುಡಿಯುತ್ತಿದ್ದರು. ಕಾಫಿಯನ್ನೆಂದೂ ಒಂದು ಲೋಟದಿಂದ ಮತ್ತೊಂದು ಲೋಟಕ್ಕೆ ನಾಲೈದು ಸಲ ಹಾಕಬಾರದು ಎನ್ನುತ್ತಿದ್ದರು. ಅವರ ಮನೆಯಲ್ಲಿ ಅವರು ಕಟ್ಟೆಚ್ಚರದಿಂದ ಕಾಯುತ್ತಿದ್ದ ಮೂರು ವಸ್ತುಗಳೆಂದರೆ ಸ್ಕಾಚ್ ವಿಸ್ಕಿ, ಫಿಲ್ಟರ್ ಕಾಫಿ ಮತ್ತು ಪುಸ್ತಕ.

ಕಾಫಿ ಹೇಗಿರಬೇಕು ಅನ್ನುವುದನ್ನು ಪೂರ್ಣಚಂದ್ರ ತೇಜಸ್ವಿ ಕೂಡ ಹೇಳಿಕೊಟ್ಟಿದ್ದರು. ಅವರ ಪ್ರಕಾರ ಕಾಫಿ ಬೀಜಗಳ ಶತ್ರುಗಳೆಂದರೆ ಗಾಳಿ – ಬೆಳಕು, ಗಾಳಿಗೆ ತೆರೆದಿಟ್ಟರೆ, ಜಾಸ್ತಿ ಬೆಳಕು ಬೀಳುವಲ್ಲಿಟ್ಟರೆ ಕಾಫಿಯ ಘಮ ಹೊರಟು ಹೋಗುತ್ತದೆ. ಹೀಗಾಗಿ ಕತ್ತಲು ಕತ್ತಲಿರುವ ಅಂಗಡಿಯಿಂದ ಕಾಫಿ ಪುಡಿ ತರುವುದೇ ಒಳ್ಳೆಯದು.

ಕಾಫಿಯ ಬಗ್ಗೆ ನಾನು ನೂರೆಂಟು ಸಲಹೆಗಳನ್ನು ಕೇಳಿದ್ದೇನೆ. ಅರೇಬಿಕಾ ಮತ್ತು ರೋಬಸ್ಟಾ ಎಂಬ ಎರಡು ತಳಿಯ ಕಾಫಿಗಳನ್ನು ಎಲ್ಲ ಕಡೆಯೂ ಬೆಳೆಯುತ್ತಾರೆ. ಅವುಗಳ ಪೈಕಿ ಅರೇಬಿಕಾ ಉತ್ತಮ . ರೋಬಸ್ಟಾ ಮಧ್ಯಮ. ರೋಬಸ್ಟಾಕ್ಕೆ ಘಾಟು ಜಾಸ್ತಿ, ಅರೇಬಿಕಾದಿಂದ ಮಾಡುವಷ್ಟು ಸೊಗಸಾದ ಕಾಫಿಯನ್ನು ರೋಬಸ್ಟಾದಿಂದ ಮಾಡಲು ಸಾಧ್ಯವಿಲ್ಲ. ಹಾಗೆಯೇ ಕಾಫಿ ಮಾಡುವುದಕ್ಕೆ ಬಳಸುವ ನೀರು ಕೂಡ ಕಾಫಿಯ ರುಚಿಯ ಮೇಲೆ ನೇರವಾದ ಪರಿಣಾಮ ಮಾಡುತ್ತದೆ. ಯಾವ ರಾಸಾಯನಿಕವೂ ಕರಗಿರದ ನೀರಲ್ಲೇ ಕಾಫಿ ಮಾಡಬೇಕು. ಕ್ಲೋರಿನ್ ಬೆರೆಸಿದ ಗಡುಸು ನೀರೇನಾದರೂ ಬಿದ್ದರೆ ಕಾಫಿ ಖತಂ.

ಒಳ್ಳೆಯ ಕಾಫಿ ಕುಡಿಯುವುದಕ್ಕೆ ಚಂದದ ಕಪ್ ಕೂಡ ಬೇಕು. ಆ ಮೇಲೆ ಚಿಟ್ಟೆಯದ್ದೋ, ಚಂದ್ರನದ್ದೋ ನವಿಲಿನದೋ ಚಿತ್ರವಿದ್ದರೆ ಆ ರುಚಿಯೇ ಬೇರೆ. ಅಂದಹಾಗೆ, ನೀವು ಕೊಳ್ಳುವ ಫಿಲ್ಟರ್ ತಾಮ್ರದ್ದೇ ಆಗಿದ್ದರೆ ಒಳ್ಳೆಯದು . ಯಾವತ್ತೂ ಕಾಫಿಯನ್ನು ಎರಡನೇ ಸಲ ಬಿಸಿ ಮಾಡಬಾರದು. ಒಂದು ಕಪ್ ಕಾಫಿಗೆ ಎರಡು ಚಮಚ ಕಾಫಿ ಪುಡಿ ಹಾಕಲೇಬೇಕು … ‘ ಇವೆಲ್ಲ ನಿಯಮಗಳನ್ನೂ ಧಿಕ್ಕರಿಸಿ ಕಾಫಿ ಮಾಡುವವರನ್ನು ನೋಡಿದ್ದೇನೆ . ಹಿರಿಯ ಲೇಖಕರೊಬ್ಬರು ಕಾಫಿಗೆ ಬಳೆಯ ಸದ್ದು ಕೇಳಿಸಿದರೆ ರುಚಿಯಾಗಿರುತ್ತೆ ಅಂತ ತಮಾಷೆಯಾಗಿ ಹೇಳುತ್ತಿದ್ದರು. ಹಾಗಂತ ಅವರು ನಂಬಿದ್ದರು ಕೂಡ. ಈಗಲೂ ಅನೇಕ ಮನೆಗಳಿಗೆ ಹೋದಾಗ ಕಾಫಿ ಬೆರೆಸಿ ಕೊಡುತ್ತೇವೆ ಎನ್ನುತ್ತಾರೆ. ಟಿಎನ್ ಸೀತಾರಾಮ್ ಮನೆಯಲ್ಲಿ ಒಳ್ಳೆಯ ಕಾಫಿ ಖಾತ್ರಿ. ಕೆ.ಎಸ್.ನ ಪತ್ನಿ ವೆಂಕಮ್ಮ ಕೂಡ ಇಡೀ ದಿನ ನಾಲಗೆಯಲ್ಲಿ ಉಳಿಯುವಂಥ ಕಾಫಿ ಮಾಡಿಕೊಡುತ್ತಿದ್ದರು. ಅದನ್ನು ನೆನೆದೇ ವೈಯನ್ಕೆ
ನರಸಿಂಹರಾಯರು ಹೆಸರಾಂತ ಕವಿಗಳು
ಅವರಿಗೆ ಬೇಕು ಎರಡು ಜೊತೆ ಕಿವಿಗಳು
ಕೊಟ್ಟರೆ ಕಾಫಿ , ಎಂಥಾ ಕಾವ್ಯಕೂ ಮಾಫಿ
ಎಂಬ ಪದ್ಯ ಬರೆದಿದ್ದರು ಅಂತ ನಾವೆಲ್ಲ ಊಹಿಸಿಕೊಂಡು ಸಂತೋಷಪಡುತ್ತಿದ್ದೆವು.

ಕಾಫಿ ಮಾಡುವುದು ಕಲೆ , ವಿಜ್ಞಾನ ಅಂತೆಲ್ಲ ಹೇಳುವವರನ್ನು ಕಂಗೆಡಿಸುವಂತೆ ಗಾಂಧೀಬಜಾರಿನ ಹೋಟೆಲುಗಳಲ್ಲಿ ಗಂಟೆಗೆ ನೂರು ಕಾಫಿ ಮಾಡಿ ಕೊಡುವ ಚಾಣಾಕ್ಷರಿದ್ದಾರೆ. ಹಾಗಿದ್ದರೂ ಕಾಫಿ ಬಗ್ಗೆ ಬರೆಯುವುದು ಕೊರೆಯುವುದು ಇಷ್ಟವೇ . ಈಗಂತೂ ಹಾಲಿನ ಸತ್ವವನ್ನೆಲ್ಲ ಹೀರಿ ಬಿಳಿಯ ದ್ರವವೊಂದು ಪ್ಯಾಕೇಟುಗಳಲ್ಲಿ ಮನೆ ಮನೆ ತಲುಪುತ್ತಿರುವಾಗ, ಕಾಫಿಗೆ ಒಳ್ಳೆಯ ಕಾಲವೇನಲ್ಲ. ಆದರೆ ಅಬ್ಸೆಸಿವ್ ಕಾಫಿ ಡಿಸಾರ್ಡರ್ ಇದ್ದ ಎಲಿಯಟ್ ಹೇಳಿದ್ದು – I have measured out my life with coffee spoons . ಬದುಕನ್ನು ಕಾಫಿ ಚಮಚಾದಲ್ಲಿ ಅಳೆಯೋದೇ ಒಂದು ಸುಖವಲ್ಲವೇ !

ನಾನು ಕುಡಿದ ರುಚಿಯಾದ ಕಾಫಿಯ ಪೈಕಿ ರವಿ ಬೆಳಗೆರೆಯ ಆಫೀಸಿನ ಕಾಫಿಯೂ ಒಂದು. ನಿವೇದಿತಾ ಇದ್ದಾಗ ಅಲ್ಲಿಗೆ ಹೋದಾಗೆಲ್ಲ ಸೊಗಸಾದ ಕಾಫಿ ಮಾಡಿಕೊಡುತ್ತಿದ್ದರು. ಆ ಕಾಫಿ ಕಡುವಾಗಿ, ಎಷ್ಟು ಬೇಕೋ ಅಷ್ಟೇ ಸಕ್ಕರೆ ಹೊತ್ತುಕೊಂಡಿರುತ್ತಿತ್ತು. ಆ ಕಾಫಿಯ ತಲೆಯ ಮೇಲೆ ಒಂಚೂರು ಡಿಕಾಕ್ಷನ್ ಹಾಕಿ ಕೊಡುತ್ತಿದ್ದರು. ಹೀಗಾಗಿ ಪರಿಮಳ, ರುಚಿ ಮತ್ತು ಬಣ್ಣ ಸಮಾನವಾಗಿ ಬೆರೆತು ರವಿ ಬೆಳಗೆರೆಯ ಮಾತೂ ಸೇರಿಕೊಂಡು ಕಾಫಿ ದೈವತ್ವಕ್ಕೇರುತ್ತಿತ್ತು.

ಬೆಂಗಳೂರಿನಲ್ಲಿ ಶಂಕರಪುರಂನ ಬ್ರಾಹ್ಮಣರ ಕಾಫಿ ಬಾರ್ ಇಡ್ಲಿಗೆ ಹೆಸರುವಾಸಿ. ವಡೆಯೂ ಗರಿಗರಿಯಾಗಿರುತ್ತದೆ. ಆದರೆ ಅಲ್ಲಿಯ ಕಾಫಿ ನನಗಷ್ಟೇನೂ ಇಷ್ಟವಿಲ್ಲ. ಅದಕ್ಕಿಂತ ಗಾಂಧೀಬಜಾರ್ ಸರ್ಕಲ್ಲಿನ ಎಸ್ಎಲ್‌ವಿಯ ಕಾಫಿ ಸೊಗಸು, ತಾಜಾ ತಿಂಡಿ, ಬೈಟೂ ಕಾಫಿ, ಸೌತ್ ಕಿಚನ್, ಚಾಮರಾಜಪೇಟೆಯಲ್ಲಿ ಐತಾಳರು ನಡೆಸುತ್ತಿದ್ದ ಎಸ್ ಎಲ್ ವಿ ಕೂಡ ಒಳ್ಳೆಯ ಕಾಫಿ ಪಾಯಿಂಟುಗಳು. ನನ್ನ ಗೆಳೆಯ ಕಟ್ಟೆ ಗುರುರಾಜ್ ಆಫೀಸಿಗೆ ಹೋಗುವಾಗೆಲ್ಲ ಎಸ್ ಎಲ್ ವಿಗೆ ಹೋಗಿ ಅಲ್ಲಿ ಕಾಫಿ ಮಾಡುವವನು ತನಗೆ ಬೇಕಾದವನಾ ಅಂತ ನೋಡಿ, ಆತ ಇದ್ದರೆ ಮಾತ್ರ ಕಾಫಿ ಕುಡಿಯುವುದು ವಿಶ್ವಪ್ರಸಿದ್ಧ ಸ್ವಾರಸ್ಯಕರ ಪ್ರಸಂಗ. ಆ ಬಗ್ಗೆ ಇನ್ನೊಮ್ಮೆ ಹೇಳುವೆ.

ಕೆಲವು ವರ್ಷಗಳ ಹಿಂದೆ ಧಾರವಾಡದಲ್ಲಿ ಜಿ ಎಸ್ ಆಮೂರರ ಮನೆಗೆ ಹೋಗಿದ್ದೆ. ಆಗಲೇ ಅವರಿಗೆ ತೊಂಬತ್ತು ತುಂಬಿತ್ತೆಂದು ಕಾಣುತ್ತದೆ. ಅವರ ಪತ್ನಿಗೆ 86 ಇದ್ದಿರಬೇಕು. ನಾವು ಹೋದ ಸಂತೋಷಕ್ಕೆ ಅವರು ಪತ್ನಿಯತ್ತ ತಿರುಗಿ ಕಾಫಿ ಮಾಡಲ್ವಾ ಅಂತ ಕೇಳಿದರು. ನಡೆಯುವುದಕ್ಕೂ ಕಷ್ಟಪಡುತ್ತಿದ್ದ ಅವರ ಪತ್ನಿಯವರ ಕೈ ನಡುಗುತ್ತಿತ್ತು. ಅವರು ಒಳಗೆ ಹೋಗಿ ಒಂದು ಸ್ಟೀಲು ತಟ್ಟೆಯಲ್ಲಿ ನಾಲ್ಕು ಗ್ಲಾಸುಗಳನ್ನಿಟ್ಟುಕೊಂಡು ಕಾಫಿ ತಂದರು. ಅವರ ನಡುಗುತ್ತಿದ್ದ ಕೈಯಲ್ಲಿ ಕಾಫಿ ಗ್ಲಾಸು ಕಟಕಟಿಸುತ್ತಿತ್ತು. ಆ ದೃಶ್ಯ, ಆ ಕಾಫಿ, ಆ ಅಕ್ಕರೆ ಮನಸ್ಸಿನಲ್ಲಿ ಹಾಗೇ ಕೂತುಬಿಟ್ಟಿದೆ.

ಒಂದು ಎಚ್ಚರಿಕೆ. ದಕ್ಷಿಣ ಕನ್ನಡಕ್ಕೆ ಹೋದಾಗ, ಉತ್ತರ ಕರ್ನಾಟಕಕ್ಕೆ ಹೋದಾಗ ಕಾಫಿ ಕುಡಿಯಬಾರದು. ಫೈವ್ ಸ್ಟಾರ್ ಹೊಟೇಲುಗಳಲ್ಲಿ ಕಾಫಿ ಕುಡಿಯಬಾರದು. ಹೈವೇಯ ರಸ್ತೆ ಬದಿ ಹೋಟೆಲುಗಳಲ್ಲಿ ಕಾಫಿ ಮುಟ್ಟಬಾರದು. ಟೀ ಎಂಬುದು ರಮ್ ಇದ್ದಂತೆ. ಉಲ್ಲಾಸ ತುಂಬುತ್ತದೆ. ಕಾಫಿ ಸ್ಕಾಚ್ ವಿಸ್ಕಿಯಂತೆ, ಘನತೆ ಉಳ್ಳದ್ದು ಆಗಿರುತ್ತದೆ. ಯಾವುದು ತುಂಬ ಘನತೆಯುಳ್ಳದ್ದಾಗಿರುತ್ತದೋ ಅದನ್ನು ಕೆಡಿಸುವುದು ಸುಲಭ.

ಅಂದಹಾಗೆ, ಕಾಫಿಯನ್ನು ಸಖ ಅಂದಿರುವುದು ಯಾಕೆ ಗೊತ್ತೇ? ಕಾಫಿ ಗಂಡಿಗಾಗಲೀ ಹೆಣ್ಣಿಗಾಗಲೀ ಒಳ್ಳೆಯ ಸಖ. ಸಖಿ ಅಲ್ಲ!

‍ಲೇಖಕರು Admin

July 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Udaya Shankar

    ಹೊರಗೆ ಮಳೆ ಸುರಿಯುತಿತ್ತು. ಸೋಂಬೇರಿತನ ಮನೆ ಮಾಡಿ ಸುಲಭ ಎಂದು ಹಾಲು ನೀರು ಬೆರಿಸಿದ ಬಿಸಿ ಕಷಾಯ ಕುಡಿದು, ಮೇಲ್ ಓಪನ್ ಮಾಡಿದರೆ ಕಂಡಿದ್ದು ಜೋಗಿ ಅವರ ಲೇಖನ. ಕಾಫಿಯ ಬಗೆಗೆ ಅವರ ಲೇಖನ ಓದಿ, ಕಾಫಿ ಕುಡಿಯಲೇ ಬೇಕೆನಿಸಿ, ಜೋಗಿಯವರ ಲೇಖನ ಓದಿದ ಖುಷಿಯೊಡನೆ, ನನ್ನ ಸೋಂಬೇರಿತನ ಓಡಿಸಿ ಕೆಲಸಕ್ಕೆ ಹಚ್ಚಿತಲ್ಲಾ ಎಂದು ಗೊಣುಗುತ್ತ, ಬಿಸಿ ಬಿಸಿ ಫಿಲ್ಟರ್ ಕಾಫಿ ಮಾಡಿ ಕುಡಿಯುತ್ತಾ ಇನೊಮ್ಮೆ ಲೇಖನ ಓದಲು ಕುಳಿತೇಬಿಟ್ಟೆ.

    ಪ್ರತಿಕ್ರಿಯೆ
  2. ಪ್ರಸನ್ನಕುಮಾರ್

    ಸಾರ್, ಎಲ್ಲಾ ಸರಿ, ಕಾಫಿಯ ರುಚಿ ಅದನ್ನು ತಯಾರಿಸುವವನ /ಳ ಮನಸ್ಥಿತಿ, ಸಮಯ, ಕಾಫಿ ಪುಡಿಯ ಗುಣಮಟ್ಟ, ಹಾಲಿನಲ್ಲಿರುವ ಹಾಲಿನ /ನೀರಿನ ಪ್ರಮಾಣ, ಸಕ್ಕರೆ,ತಯಾರು ಮಾಡುವವರ ಅನುಭವ, ಪರಿಪಕ್ವತೆ ಎಲ್ಲವನ್ನೂ ಸೇರಿಸಿ ಎರಕವನ್ನು ಹೊಯ್ದಂತೆ ಆದರೂ ಒಬ್ಬ ಮಾಡುವ ಕಾಫಿ ರುಚಿಗೂ ಇನ್ನೊಬ್ಬ ಮಾಡುವುದಕ್ಕೂ ವ್ಯತ್ಯಾಸ ಇರುತ್ತದೆ. ಅಷ್ಟೇಕೆ ಮನೆಯಲ್ಲಿ ಹೆಂಡತಿ ಮಾಡುವ ಕಾಫಿಯ ರುಚಿ ಆಗಿನ ಅವಳ ಮನಸ್ಥಿತಿ, ಮುನಿಸು, ಪ್ರೀತಿ ಎಲ್ಲದರ ಮೇಲೆ ಇರುತ್ತದೆ.
    ಆದರೆ ಗುಂಡಿನ ರುಚಿ ಮಾತ್ರ ಗಲ್ಲಿಯಿಂದ ದಿಲ್ಲಿಗೆ ಹೋದರೂ ಬದಲಾಗುವುದಿಲ್ಲ ಎಂಬುದು ಗುಂಡುಗಲಿಗಳ ಆಂಬೊಣ, ಇದಕ್ಕೆ ಏನಂತೀರಿ ಗುರುಗಳೇ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: