ಮಧುಕರ್ ಬಳ್ಕೂರು ಸರಣಿ ಕಥೆ 3 – ಪಾಕಿಸ್ತಾನ, ಕುಂದಾಪುರ ದಾಟಿದ್ರೆ ಬರುತ್ತಾ…?

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ.

‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ.

ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ.

3

ಪಾಕಿಸ್ತಾನ, ಕುಂದಾಪುರ ದಾಟಿದ್ರೆ ಬರುತ್ತಾ…?

‘ಏಯ್ ಈ ಆಸ್ಟ್ರೇಲಿಯಾ ನೂರಾರು ಮೈಲಿ ದೂರದಲ್ಲಿದೆಯಂತೆ ಕಣೋ. ಅಲ್ಲಿಗೆ ಹೋಗಬೇಕಂದ್ರೆ ಸಮುದ್ರ ದಾಟಿ ಹೋಗಬೇಕಂತೊ….’ ಹಾಗಂತ ರಾಘು ಆಡಿಕೊಳ್ಳುತ್ತಿದ್ದ. ನಾನೋ, ಕುಂದಾಪುರದ ಆಚೆ ಸಮುದ್ರವಿದೆ ಅಂತ ಕೇಳಿದ್ದೆ. ಹಾಗಿದ್ರೆ ಸಮುದ್ರದಿಂದ ನೂರು ಮೈಲಿ ಹೋದ್ರೆ ಆಸ್ಟ್ರೇಲಿಯಾ ಸಿಕ್ಕ್ ಬಿಡುತ್ತಾ ಅಂತ ಯೋಚಿಸತೊಡಗಿದೆ..!

ಹೀಗೆ ವರ್ಲ್ಡ್ ಕಪ್ ಮುಗಿದು ದಿನಗಳೇ ಕಳೆದಿದ್ದರೂ ಅದರ ಗುಂಗಿನ್ನು ಬಿಟ್ಟಿರಲಿಲ್ಲ. ಒಂದು ಸರ್ಕಸ್ ಕಂಪನಿ ಊರಿಗೆ ಬಂದು ಹೋದ ಮೇಲೆ ಹೇಗಾಗಿರುತ್ತಿತ್ತೊ ಹಾಗಾಗಿತ್ತು ನಮ್ಮೆಲ್ಲರ ಮನಸ್ಥಿತಿ! ಇನ್ನು ಅದು ಹಿಡಿಸಿದ ಹುಚ್ಚು ಪ್ರಭಾವ ಹೇಗಿತ್ತೆಂದರೆ ನಮ್ಮಂತ ಹುಡುಗರ ಯೋಚಿಸುವ ದಾಟಿ, ಅಭ್ಯಾಸಗಳೆಲ್ಲ ದಿಢೀರ್ ಬದಲಾಗಿಬಿಟ್ಟಿದ್ದವು. ದಿನ ಬೆಳಗಾದರೆ ಹುಡುಗರೆಲ್ಲಾ ಗದ್ದೆ ಬಯಲಲ್ಲಿ ಠೀಕಾಣಿ ಹುಡೋದು! ಅಲ್ಲಿ ವಯಸ್ಸಿನಲ್ಲಿ ದೊಡ್ಡವರಿದ್ದ ಕೆಲವರು ಪೆನಲ್ ಡಿಸ್ಕರ್ಷನ್ ಕೂತವರ ಹಾಗೆ ಕ್ರಿಕೆಟ್ ಬಗ್ಗೆನೆ ಮಾತಾಡೋದು! ಬೆಳಿಗ್ಗೆ ಸಂಜೆಯನ್ನದೆ ದಿನಾನೂ ರಬ್ಬರ್ ಬಾಲಲ್ಲಿ ಆಡೋದು.! ಹೀಗೆ ದಿನಾ ಆಡ್ತಿದ್ದರೆ ಮುಂದೊಂದು ದಿನ ಇಂಡಿಯಾ ಟೀಮಿಗೆ ಆಯ್ಕೆ ಆಗ್ತಿವಿ ಅಂದುಕೊಳ್ಳೋದು! ಇನ್ನು ಕೆಲವರಂತೂ ಕಪಿಲ್, ಸಚಿನ್ ಅಂತ ಅವರನ್ನೆ ಅನುಕರಿಸೋರು! ಟಿವಿಯಲ್ಲಿ ಅವರನ್ನೆಲ್ಲ ನೋಡಿದಿವಿ ಅಂತಾ ಅವರ ಸ್ಟೈಲ್ ಗಳನ್ನೆಲ್ಲಾ ಮಾಡಿ ಬಿಲ್ಡ್ ಪ್ ತೆಗೆದುಕೊಳ್ಳೊರು! ಅದರಲ್ಲೊಬ್ಬ ತಾನು ಜಾಂಟಿ ರೋಡ್ಸ್ ತರಹ ಫೀಲ್ಡಿಂಗ್ ಮಾಡ್ತಿದೀನಿ ಅಂತ ಸುಮ್ನೆ ಸುಮ್ನೆ ಬಾಲ್ ಹಿಡಿಯೋ ನೆಪದಲ್ಲಿ ಬೀಳೋನು!! ಮತ್ತೊಬ್ಬ ಅಂತೂ ನಾನು ಮುಂದೆ ದೊಡ್ಡ ಕ್ರಿಕೆಟರ್ ಆಗಬೇಕು ಆದರೆ ಹೆಲ್ಮೆಟ್ ಗ್ಲೌಸ್ ಪ್ಯಾಡ್ ಗಳನ್ನ ತಗೋಳ್ಳೋಕೆ ದುಡ್ಡಿಲ್ಲ ಅಂತ ಯೋಚನೆ ಮಾಡೋನು! ಇದನ್ನೆಲ್ಲ ಚಿಕ್ಕವರಾದ ನಾವು ನಿಜ ಅಂತ ಬೆಪ್ಪರ ತರಾ ನಂಬೋರು!!

ಇನ್ನು ಇಂಡಿಯಾ ಟೀಮ್ ಲ್ಲಿ ಆಡಬೇಕಾದರೆ ಸಾಕಷ್ಟು ದುಡ್ಡಿರಬೇಕು ಇಲ್ಲಾ ಶ್ರೀಮಂತರಾಗಿರೇಕು ಎಂಬುದು ಕೆಲವರ ನಂಬಿಕೆಯಾಗಿತ್ತು. ಇದರ ಮಧ್ಯೆ ನನಗೆ ಆಸ್ಟ್ರೇಲಿಯಾ ನೂರು ಮೈಲಿ ದೂರ ಇರಬೇಕಾದ್ರೆ ಪಾಕಿಸ್ತಾನ ಹತ್ತಿರದಲ್ಲೆ ಇರಬೇಕಲ್ಲ ಅನ್ನೊ ಡೌಟು ಶುರುವಾಯಿತು. ಹಾಗಿದ್ರೆ ಪಾಕಿಸ್ತಾನ ಎಲ್ಲಿ ಬರುತ್ತೆ..? ಕುಂದಾಪುರ ದಾಟಿದ್ರೆ ಬರುತ್ತಾ…? ಮತ್ತೆ ಡೌಟು.?

‘ಅಪ್ಪಯ್ಯ ಆಸ್ಟ್ರೇಲಿಯಾ ಎಲ್ಲಿ ಬರುತ್ತೆ.’ ತಡಮಾಡದೆ ಅಪ್ಪಯ್ಯನ ಬಳಿ ಕೇಳಿದ್ದೆ. ನನಗೀಗ ಇರುವ ಪ್ರಶ್ನೆ ಏನೆಂದರೆ ವರ್ಲ್ಡ್ ಕಪ್ ಆಡಿದ ದೇಶಗಳನ್ನೆಲ್ಲ ತಿಳಿದ ಮೇಲೆ ಆ ದೇಶಗಳೆಲ್ಲ ಎಲ್ಲೆಲ್ಲಿ ಬರುತ್ವೆ ಅನ್ನೊದು. ಇನ್ನೊಂದು, ಟೈಮ್ ವ್ಯತ್ಯಾಸವಾಗಿ ನಿದ್ದೆಗಣ್ಣಿನಲ್ಲೆ ಇಂಡಿಯಾ ಆಡಿ ಸೋತಿದ್ದು ಅಂತ ಮೆಂಟಲಿ ಫಿಕ್ಸ್ ಆಗಿದ್ದ ನನಗೆ, ಆಸ್ಟ್ರೇಲಿಯಾ ನಮ್ಮಿಂದ ನಿಜಕ್ಕೂ ಎಷ್ಟು ದೂರದಲ್ಲಿದೆ ಎಂಬುದು ಕನ್ಫರ್ಮ್ ಆಗಬೇಕಿತ್ತು ಹಾಗೂ ಈ ಪ್ರಾಬ್ಲಂ ಬರೀ ನಮಗಷ್ಟೆನಾ ಇಲ್ಲಾ ಬೇರೆ ಬೇರೆ ದೇಶದವರಿಗೂ ಹೀಗೆ ಆಗ್ತದಾ ಅಂತ ಗೊತ್ತಾಗಬೇಕಿತ್ತು. ಒಂದು ವೇಳೆ ಆಗಿದ್ರೆ ಆ ದೇಶಗಳಿಗೂ ಆಸ್ಟೇಲಿಯಾಗೂ ಇರೋ ಅಂತರ ಏನು ಅನ್ನೋದು ತಿಳಿಬೇಕಿತ್ತು.

ಅಪ್ಪಯ್ಯ ಒಂದು ಕ್ಷಣ ನನ್ನನ್ನು ನೋಡಿದರು. ಯಾಕೊ ಇವನಿಗೆ ಹೀಗೆ ಹೇಳಿದ್ರೆ ಅರ್ಥವಾಗೊಲ್ಲ ಅಂತ ತಿಳಿದು ‘ಅಟ್ಲಾಸ್ ನೋಡಿದರೆ ಗೊತ್ತಾಗುತ್ತೆ’ ಅಂದುಬಿಟ್ಟರು. ಅಟ್ಲಾಸ್.. ಬಹುಶಃ ಎಲ್ಲರೂ ಭೂಗೋಳದ ನಕ್ಷೆ ಇರುವ ಅಟ್ಲಾಸ್ ಅನ್ನ ಹೈಸ್ಕೂಲ್ ಡೇಸ್ ನಿಂದ ನೋಡೋಕೆ ಶುರು ಮಾಡಿದ್ರೆ ನಾನು ಮಾತ್ರ ಕ್ರಿಕೆಟ್ ಆಡೋ ದೇಶಗಳು ಎಲ್ಲೆಲ್ಲಿ ಬರುತ್ತೆ ಅನ್ನೊ ಕಾರಣಕ್ಕೆ ಆರನೇ ವಯಸ್ಸಿಗೆನೆ ಹಿಡಿದಿದ್ದೆ! ಆದರೆ ಮೊದಲ ಬಾರಿಗೆ ಅಟ್ಲಾಸ್ ನ ವರ್ಲ್ಡ್ ಮ್ಯಾಪ್ ನೋಡಿದಾಗ ನಾನೇನು ನೋಡಬೇಕೆಂದಿದ್ದೆನೋ ಅದೇ ಮರೆತುಹೋಯಿತು. ಎಲ್ಲಾ ಬಿಟ್ಟು ಇಷ್ಟು ದೊಡ್ಡದಾದ ಈ ಭೂಪಟದಲ್ಲಿ ನಮ್ಮೂರು ಎಲ್ಲಿ ಬರ್ತದೆ ಅನ್ನೋದೆ ನನ್ನ ಮೊದಲ ಕೂತೂಹಲವಾಯಿತು..! ‘ಅಪ್ಪಯ್ಯ ನಮ್ಮ ಬಳ್ಕೂರು ಎಲ್ಲಿ ಬರ್ತದೆ…?’ ಅಂತ ಕೇಳೇ ಬಿಟ್ಟೆ. ಅಪ್ಪಯ್ಯ ನಕ್ಕರು. ‘ಈ ವರ್ಲ್ಡ್ ಮ್ಯಾಪ್ ನಲ್ಲಿ ಬಳ್ಕೂರು ಎಲ್ಲಿ ಬರ್ತದೆ..? ಇಲ್ಲಿ ನೋಡು ಕುಂದಾಪುರವಿಲ್ಲವಾ ಇದರ ಪಕ್ಕದಲ್ಲೇ ಬಳ್ಕೂರು ಬರ್ತದೆ ‘ ಅಂತ ಕರ್ನಾಟಕ ಮ್ಯಾಪ್ ತೋರಿಸಿ ಅಂದಾಜಿನಲ್ಲಿ ಹೇಳಿದರು. ನನಗೊಂತರಾ ಸಮಾಧಾನವಾದಂತಾಯಿತು. ಮತ್ತೆ ಭಾರತ ಭೂಪಟದಲ್ಲಿ ಕುಂದಾಪುರ ಬರುತ್ತದಾ ಅಂತ ಹುಡುಕಿದೆ. ಊಹ್ಹೂ…ಕಂಡಿದ್ದು ಕರ್ನಾಟಕ ಬಿಟ್ಟರೆ ಕುಂದಾಪುರ ಕಾಣಲಿಲ್ಲ. ಮತ್ತೆ ವರ್ಲ್ಡ್ ಮ್ಯಾಪ್ ನಲ್ಲಿ ಕರ್ನಾಟಕವನ್ನು ಹುಡುಕಿದೆ. ಕರ್ನಾಟಕ ಬಿಡಿ. ಇಡೀ ವರ್ಲ್ಡ್ ಮ್ಯಾಪ್ ನಲ್ಲಿ ನಮ್ಮ ದೇಶವೇ ಅಮೀಬಾ ತರಹ ಕಾಣುತ್ತಿತ್ತು. ಅದರಲ್ಲೂ ಪ್ರಪಂಚದ ಮುಕ್ಕಾಲು ಭಾಗಕ್ಕಿಂತಲೂ ಹೆಚ್ಚು ನೀರಿರೋದು ನೋಡಿ ಪ್ರಪಂಚದ ಅಗಾಧತೆ ಎಂತದ್ದು ಅನ್ನೋದರ ಅರಿವಾಯಿತು. ಭೂಮಿ ದುಂಡಗಿದ್ದು, ಅದು ತನ್ನ ಕಕ್ಷೆಯ ಸುತ್ತ ಸುತ್ತುವಾಗ ಸೂರ್ಯನಿಗೆ ಮುಖವಾಗುವ ದೇಶಗಳಿಗೆ ಹಗಲೆಂದು, ಮತ್ತೊಂದು ಮಗ್ಗುಲಿನಲ್ಲಿರುವ ದೇಶಗಳಿಗೆ ಆಗ ರಾತ್ರಿಯಾಗಿರುತ್ತದೆಂದು ತಿಳಿದಾಗ, ಆಸ್ಟ್ರೇಲಿಯಾ ನ್ಯೂಜಿಲೆಂಡ್ ದೇಶಗಳಿಗೆ ಯಾಕೆ ಹಗಲು ಬೇಗ ಆಗುತ್ತದೆ ಹಾಗೂ ವೆಸ್ಟ್ಇಂಡೀಸ್ ಗೆ ಯಾಕೆ ಲೇಟ್ ಆಗ್ತದೆ ಅನ್ನೊದು ಗೊತ್ತಾಯಿತು. ಅದರಲ್ಲೂ ಇಂಗ್ಲೆಂಡ್, ಸೌತ್ ಆಫ್ರಿಕಾ ದೇಶಗಳಿಗೆ ಆಸ್ಟ್ರೇಲಿಯಾ ನಮಗಿಂತಲೂ ದೂರವಿದ್ದರೂ ವರ್ಲ್ಡ್ ಕಪ್ ನಲ್ಲಿ ಚೆನ್ನಾಗಿ ಫರ್ ಫಾರ್ಮೆನ್ಸ್ ಮಾಡಿರೋದು ನೋಡಿ ನಿದ್ದೆಗಣ್ಣಿನ ಸಮಸ್ಯೆ ಬರೀ ಇಂಡಿಯಾದವರಿಗಷ್ಟೆ ಇರೋದು ಅಂತ ಖಾತ್ರಿ ಆಯಿತು. ಇನ್ನು ಭೂಪಟದಲ್ಲಿ ನಮ್ಮ ಪಕ್ಕದಲ್ಲಿದ್ದ ಪಾಕಿಸ್ತಾನ ವರ್ಲ್ಡ್ ಕಪ್ ಅನ್ನೆ ಎತ್ತಿ ಹಿಡಿದಿದ್ದರೂ ಅವರ ಪರ ವಹಿಸಿ ಮಾತಾಡುವ ಮನಸು ನನ್ನದಾಗಿರಲಿಲ್ಲ. ಅದೆಲ್ಲಕ್ಕಿಂತ ಹೆಚ್ಚಾಗಿ ಪಾಕಿಸ್ತಾನ ಕುಂದಾಪುರ ದಾಟಿದ್ರೆ ಬರೋಲ್ಲ. ಆಸ್ಟೇಲಿಯಾ ನೂರು ಮೈಲಿ ದೂರದಲಿಲ್ಲ ಅನ್ನೋದು ಗೊತ್ತಾಯಿತು.

ಬಾಲ್ಯವೇ ಹಾಗೆ. ನಮಗಿರುವ ಅಜ್ಞಾನಗಳ ಬಗ್ಗೆ ಕೀಳರಿಮೆ ಇಲ್ಲ. ಯಾರೇನು ಹೇಳುತ್ತಾರೋ ಆಡಿಕೊಳ್ಳುತ್ತಾರೋ ಅನ್ನೊ ಪರಿವಿಲ್ಲ. ಇನ್ನು ಗೊತ್ತಿರುವ ವಿಷಯಗಳ ಬಗ್ಗೆ ಬೇಗ ಬೇಗ ಹೇಳಿಕೊಳ್ಳಬೇಕೆಂಬ ಆತುರ, ಚಡಪಡಿಕೆ ಬಿಟ್ಟರೆ ಅದರ ಬಗ್ಗೆ ಅಹಂಕಾರವಿಲ್ಲ. ಮತ್ತೆ ಯಾರು ಏನು ಹೇಳಿದರೂ ನಂಬುವ ಎಲ್ಲವನ್ನು ಕೂತೂಹಲದಿಂದ ದಿಗ್ಭ್ರಮೆಯಿಂದ ನೋಡುವ ವಯಸ್ಸದು. ಇದಕ್ಕಿಂತ ಹೆಚ್ಚಾಗಿ ನಾಳೆ ಏನು ಅನ್ನುವುದರ ಬಗ್ಗೆ ಯೋಚನೆ ಇಲ್ಲದೆ ಇಂದೆನುಂಟೋ ಅದಷ್ಟರಲ್ಲೆ ಖುಷಿ ಪಡುವ ಮನಸ್ಥಿತಿಯದು. ಅದರಲ್ಲೂ ನಮ್ಮ ಬಾಲ್ಯ ಎಂದರೆ ಎಲ್ಲವೂ ಅನಿರೀಕ್ಷಿತಗಳ ಸಂತೆ. ಹಾಗಾಗಿ ಪ್ರತಿಯೊಂದು ನಮಗೆ ಅಚ್ಚರಿಯಾಗೆ ಕಾಣುತ್ತಿದ್ದವು. ಅನಿರೀಕ್ಷಿತದ ಅಚ್ಚರಿಗಳು ಯಾವತ್ತಿದ್ದರೂ ಅಳಿಯದ ಸವಿನೆನಪುಗಳಂತೆ. ಅದರಂತೆಯೇ ಯಾವುದನ್ನು ಪ್ಲಾನ್ ಮಾಡದೆ, ಯಾರಿಗೂ ಕಾಯದೆ, ಯಾವುದನ್ನು ಹೀಗಿಗೆ ಅಂತಂದುಕೊಳ್ಳದೆ, ಯಾವುದೇ ನಿರೀಕ್ಷೆಗಳಿಲ್ಲದೆ ಏನು ಸಿಗುತ್ತದೊ ಅದನ್ನು ಪೂರ್ತಿಯಾಗಿ ಅನುಭವಿಸುತ್ತಾ ಕಳೆವ ಕ್ಷಣಗಳಿವೆಯಲ್ಲ, ಅದು ಮನುಷ್ಯನ ಜೀವನದಲ್ಲಿ ಬಾಲ್ಯದಲ್ಲಷ್ಟೆ ಘಟಿಸೋದು. ನನ್ನ ಜೀವನದಲ್ಲೂ ಕ್ರಿಕೆಟ್ ಕೂಡಾ ಪದೇ ಪದೇ ಗೊತ್ತಿಲ್ಲದೆ ಜರುಗುತ್ತಿದ್ದ ಒಂದು ಸುಂದರ ಅವಘಢವೆಂದೆ ಹೇಳಬಹುದು.

| ಇನ್ನು ನಾಳೆಗೆ |

‍ಲೇಖಕರು Admin

July 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: