ಮಧುಕರ್ ಬಳ್ಕೂರು ಸರಣಿ ಕಥೆ 2 – ಓ..ಹೋ.. ಬಡಾಡಿ ಪಟೇಲರ ಮನೆಗೆ ಟಿವಿ ಬಂತೋ…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ.

‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ.

ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ.

2

ಓ..ಹೋ.. ಬಡಾಡಿ ಪಟೇಲರ ಮನೆಗೆ ಟಿವಿ ಬಂತೋ…

ಓ..ಹೋ… ಬಡಾಡಿ ಪಟೇಲರ ಮನೆಗೆ ಟಿವಿ ಬಂತೋ…’ ಹಾಗಂತ ಎದುಸಿರು ಬಿಟ್ಟುಕೊಂಡು ಹಾದಿ ತುಂಬೆಲ್ಲ ಹೇಳಿಕೊಂಡ್ ಬಂದಿದ್ದೆ. ಆಗಾಗಿದ್ದ ಖುಷಿಗೆ ಏಕ್ಸಾಯಿಟ್ ಮೆಂಟ್ ಗೆ ಮುಂದೆ ಮಾತೆಲ್ಲಿಂದ ಬರಬೇಕು..? ನ್ಯೂಜಿಲೆಂಡ್ 22.1 ಓವರ್ ಗೆ ಎಪ್ಪತ್ತೆರಡು ರನ್ ಎರಡು ವಿಕೆಟ್. ಮೊಟ್ಟ ಮೊದಲ ಬಾರಿಗೆ ಟಿವಿ ಸ್ಕ್ರೀನ್ ನಲ್ಲಿ ಕ್ರಿಕೆಟ್ ನೋಡಿದಾಗ ಕಂಡ ಸ್ಕೋರಿದು. ಆಗ ಮುಸ್ತಾಕ್ ಅಹಮದ್ ನ ಬೌಲಿಂಗ್ ಗೆ ಮಾರ್ಟಿನ್ ಕ್ರೋವ್ ಆಡುತ್ತಿದ್ದನಾ…? ಹೌದು, ನೆನಪು ಮಾತ್ರ ಕರಾರುವಾಕ್ಕು. ಅದು ಸೆಮಿಫೈನಲ್ ಮ್ಯಾಚು.

ಮಾಮೂಲಿಯಂತೆ ಬೆಳಿಗ್ಗೆ ನ್ಯೂಸ್ ಪೇಪರ್ ಕೊಡೋಕೆ ಅಂತ ಪಟೇಲರ ಮನೆಗೆ ಹೋದಾಗ ಅಲ್ಲಿ ಟಿವಿಲಿ ಕಂಡಿದ್ದು ಇದೇ ಮ್ಯಾಚು!! ಅರೆ..! ಟಿವಿ ಯಾವಾಗ್ ಬಂತು! ಇದೆನ್ ಕನಸಾ..? ಇಲ್ಲಾ ನಿಜಾನಾ…?! ಅಂತ ಯೋಚ್ನೆ ಮಾಡ್ತಿರುವಾಗಲೇ ‘ಏಯ್, ಇರೋ, ನೋಡ್ಕೊಂಡ್  ಹೋಗೋ’ ಅಂತಾ ಅವರೇ ಅಂದುಬಿಟ್ಟಿದ್ದರು. ನಾನೆಲ್ಲಿ  ಇರೋದು? ಈಗಷ್ಟೇ ಬಣ್ಣದ ಟಿವಿ ನೋಡಿದ ಖುಷಿನಾ ಎಲ್ಲರಿಗೂ ಹೇಳಿಲ್ಲ ಅಂದ್ರೆ ಅದು ನಾನು ನಾನೇ ಅಲ್ಲ..!! ಏನಿದ್ದರೂ ಆಮೇಲ್ ಬಂದೆ ಮ್ಯಾಚ್ ನೋಡೋದು. ಹಾಗಂತ ಸ್ಕೋರ್ ನೋಡ್ಕೊಂಡ್ ದಡಬಡ ಅಂತಾ ಮನೆಗೆ ಬಂದ್ ಬಿಟ್ಟೆ. ಹಾದಿಲೆಲ್ಲ ಟಾಂ ಟಾಂ ಮಾಡಿದ್ದೆ ಮಾಡಿದ್ದು.. ನಮಗೊ, ನಮ್ಮನೆಲೆನೆ ಟಿವಿ ಬಂತೆನ್ನುವಷ್ಟರ ಮಟ್ಟಿಗಿನ ಖುಷಿ. ಆದಿತ್ಯವಾರದ ಪಿಕ್ಚರ್ ನೋಡೋಕೆ ದೂರ ಹೋಗುವುದು ತಪ್ಪಿತಲ್ಲ ಅಂತ ಸಮಾಧಾನ ಬೇರೆ. ಬೇಗ ವಾಪಾಸ್ ಹೋಗಿ ಮ್ಯಾಚ್ ನೋಡ್ಬೇಕು. ಆದರೆ ಯಾವಾಗ..? ಶಾಲೆಗೆ ಹೋಗಬೇಕಲ್ಲ. ಶಾಲೆಯಿಂದ ಬಂದ ಮೇಲೆ ಮ್ಯಾಚೆ ಮುಗಿದಿರುತ್ತದಲ್ಲ. ಥತ್.. ನಮ್ಮ ಇಂಡಿಯಾ ಏನಾದ್ರು ಸೆಮಿಫೈನಲ್ ಗೆ ಹೋಗಿದಿದ್ರೆ… ಶಾಲೆಗೆ ರಜೆ ಮಾಡಿಯಾದರೂ ಮ್ಯಾಚ್ ನೋಡ್ಬಹುದಿತ್ತು. ಛೇ. ಎಲ್ಲಾ ಹಾಳಾಯಿತು.

ಇಂಡಿಯಾ ಸೆಮಿಫೈನಲ್ ಗೆ ಬರಬೇಕಿತ್ತು. ಆ ರವಿಶಾಸ್ತ್ರಿ ಕುಟು ಕುಟು ಮಾಡಿರದಿದ್ದರೆ ಇಂಡಿಯಾ ಇಂಗ್ಲೆಂಡ್ ಎದುರು ಎಂಟು ರನ್ನಿಂದ ಸೋಲ್ತಿರಲಿಲ್ಲ. ಬಹುಶಃ ಆಸ್ಟೇಲಿಯಾ ಎದುರು ಅಜರುದ್ದೀನ್ ಕೊನೆಯವರೆಗೆ ಆಡಿದಿದ್ದರೆ ಇಂಡಿಯಾ ಒಂದ್ ರನ್ನಿನ ಸೋಲನ್ನು ಕಾಣ್ತಿರಲಿಲ್ಲ. ಆ  ಶ್ರೀಲಂಕಾ ಎದುರಿನ ಮ್ಯಾಚು ಮಳೆ ಬಂದು ರದ್ದಾಗಿಲ್ಲ ಅಂದ್ರೆ ಇಂಡಿಯಾ ಗೆದ್ದಿರೋದು. ಥತ್.. ಎಲ್ಲಾ ಹಾಳಾಗಿ ಹೋಯಿತು. ಈ ಮ್ಯಾಚ್ ಗಳನ್ನೆಲ್ಲ ಗೆದ್ದಿದ್ರು ಸಾಕಿತ್ತು. ಇಂಡಿಯಾ ಪಾಯಿಂಟ್ ಟೇಬಲ್ ನಲ್ಲಿ ಮುಂದೆ ಇದ್ದು ಸೆಮಿಫೈನಲ್ ಗೆ ಹೋಗಿರೋದು. ಯಾಕೋ ವರ್ಲ್ಡ್ ಕಪ್ ನಲ್ಲಿ ಇಂಡಿಯಾದ ನಸೀಬೆ ಸರಿ ಇಲ್ಲ. ಟಿವಿನಾ ತರೋದು ತಂದ್ರು ವರ್ಲ್ಡ್ ಕಪ್ ಶುರುವಾಗೋಕೆ ಮುಂಚೆನಾದ್ರು ತಂದ್ರಾ…? ಇಂಡಿಯಾದ ಮ್ಯಾಚುಗಳನ್ನೆಲ್ಲ ನೋಡಿರೋದು! ಹಾಗೆ ನಾವು ಇಂಡಿಯಾದ ಮ್ಯಾಚ್ ಗಳನ್ನ ನೋಡಿಯೇ ಗೆಲ್ಲಿಸ್ಕೊಂಡ್ ಬರ್ತಿದ್ವಿ ಅನ್ನೊ ಮತ್ತದೆ ಭ್ರಮೆನಾ..? ಹಾಗೆಲ್ಲ ಮಧ್ಯರಾತ್ರಿ ಬೆಳಿಗ್ಗೆ ಶುರುವಾಗೋ ಮ್ಯಾಚನ್ನ ಬಿಟ್ಟು ಬಿಡದೆ ನೋಡೋಕೆ ಅದೇನ್ ನಮ್ಮ ಮನೇನಾ…? ಬರೀ ಇಂತದ್ದೆ ಕಲ್ಪನೆಗಳು. ಹಾಗಾಗಿದ್ರೆ ಹೀಗಾಗಿದ್ರೆ ಅಂತ! ಆದ್ರೆ ಅದರಿಂದ ಏನು ಪ್ರಯೋಜನ ಇರ್ಲಿಲ್ಲ ಅನ್ನೋದು ಮಾತ್ರ ತಿಳಿತಿರಲಿಲ್ಲ.
ಕೊನೆಗೂ ಎರಡನೇ ಸೆಮಿಫೈನಲ್ ನಲ್ಲಿ ಕ್ರಿಕೆಟ್ ನ ರೋಚಕತೆಯನ್ನು ಸವಿಯುವ ಕ್ಷಣಗಳು ನನ್ನದಾಯಿತು. ಆದರೆ ಎಲ್ಲರೊಡನೆ ಕೂತು ನೋಡಿದ ಮೊದಲ ಮ್ಯಾಚೆ ಇಷ್ಟೊಂದು ನಿರಾಸೆಯಿಂದ ಕೊನೆಯಾಗುತ್ತೆನ್ನುವುದರ ಕಲ್ಪನೆ ನನಗಿರಲಿಲ್ಲ.

ಇಂಗ್ಲೆಂಡಿನ ಎದುರಾಳಿ ಸೌತ್ ಆಫ್ರಿಕಾ ವಾಗಿತ್ತು. ಮ್ಯಾಚ್ ನಾ ಕೊನೆ ಕೊನೆ ಓವರ್ ಗಳಷ್ಟೆ ನೆನಪು. ಸೌತ್ ಆಫ್ರಿಕಾದ ಆಲ್ ರೌಂಡರ್ ಬ್ರಿಯಾನ್ ಮೆಕ್ ಮಿಲನ್ ಅದಾಗಲೇ ತಮ್ಮ ತಂಡವನ್ನು ಗೆಲುವಿನತ್ತ ಒಯ್ಯಿದಿದ್ದರು. ಹದಿಮೂರು ಬಾಲ್ ಗೆ ಇಪ್ಪತ್ತೆರಡು ರನ್ ಬೇಕಿತ್ತು. ಅದು ಎಲ್ಲಿತ್ತೋ… ಹಾಳಾದ್ದು ಮಳೆ, ಸೌತ್ ಆಫ್ರಿಕಾವನ್ನು ಸೋಲಿಸಲು ಬಂದಿತೆಂಬಂತೆ ನಾಲ್ಕು ಹನಿ ಸುರಿಸೇ ಬಿಟ್ಟಿತು. ಬಿದ್ದಿದ್ದು ಲೆಕ್ಕ ಮಾಡಿ ನಾಲ್ಕು ಹನಿ. ಅಲ್ಲಿಗೆ ಡರ್ಕ್ವತ್ ಲೂಯಿಸ್ ಅನ್ನೊ ವಿಚಿತ್ರ ಲೆಕ್ಕಶಾಸ್ತ್ರ ಸೌತ್ ಆಫ್ರಿಕಾ ಲೆಕ್ಕಚಾರವನ್ನು ತಲೆಕೆಳಗಾಗಿಸಿತು. ಮಳೆ ನಿಂತ ಬಳಿಕ ಎರಡು ಬಾಲಿಗೆ ಇಪ್ಪತ್ತೆರಡು ರನ್ ಹೊಡೆಯುವುದಾಯಿತು. ರೋಚಕ ಅನ್ನುದಕ್ಕಿಂತಲೂ ಅದೃಷ್ಟವೊಂದು ಕೈಕೊಟ್ಟರೆ ಏನೆಲ್ಲಾ ಆಗುತ್ತೆ ಎನ್ನುವುದಕ್ಕೆ ಈ ಪಂದ್ಯ ನಿದರ್ಶನವಾಯಿತು. ಆವತ್ತು ಕೈಕೊಟ್ಟ ಅದೃಷ್ಟ ಸೌತ್ ಆಫ್ರಿಕಾದವರ ಪಾಲಿಗೆ ಇವತ್ತಿಗೂ ಕೈಹಿಡಿದಿಲ್ಲ ಅಂದರೆ ಚೋಕರ್ಸ್ ಅನ್ನೋ ಪದ ಅವರಿಗಾಗಿಯೇ ಹುಟ್ಟಿತಾ ಅನ್ನೊ ಅನುಮಾನವೂ ಬರುತ್ತದೆ. ನಿಜ ಹೇಳಬೇಕೆಂದರೆ ಇಂಗ್ಲೆಂಡ್ ಚೆನ್ನಾಗಿ ಆಡಿದರೂ ಪಂದ್ಯ ಗೆದ್ದಿರಲಿಲ್ಲ. ಆದರೆ ಮೊಟ್ಟ ಮೊದಲ ಬಾರಿಗೆ ವರ್ಲ್ಡ್ ಕಪ್ ಆಡಿದ ಸೌತ್ ಆಫ್ರಿಕಾದವರು ಸೋತರೂ ಎಲ್ಲರ ಹೃದಯವನ್ನು ಗೆದ್ದಿದ್ದರು. 

ನಂತರದ್ದು ಇಂಗ್ಲೆಂಡ್ ಪಾಕಿಸ್ತಾನ ಫೈನಲ್ ಮ್ಯಾಚ್. ಹೇಳಿ ಕೇಳಿ ಪಾಕಿಸ್ಥಾನ ನಮ್ಮ ಸಾಂಪ್ರಾದಾಯಿಕ ವೈರಿ. ಹಾಗಾಗಿ ಅವರು ಗೆಲ್ಲೊದು ಇಷ್ಟವಿರಲಿಲ್ಲ. ಹಾಗಂತ ಇಂಗ್ಲೆಂಡ್ ಗೆಲ್ಲೊದು ಕೂಡ ಇಷ್ಟವಿಲ್ಲ. ಯಾಕಂದ್ರೆ ಅವರು ಬ್ರಿಟಿಷ್ ನೋರು ಅನ್ನೊ ಭಾವನೆ!  ಕೊನೆಗೂ ಪಾಕಿಸ್ತಾನದವರು ವರ್ಲ್ಡ್ ಕಪ್ ಗೆದ್ದುಬಿಟ್ಟರು. ಇಮ್ರಾನ್ ಖಾನ್ ತನ್ನ ಸಹಚರರ ಜೊತೆಗೆ ಕಪ್ ಎತ್ತಿ ಹಿಡಿದು ಮೈದಾನದ ತುಂಬೆಲ್ಲ ಓಡಾಡುತ್ತಿದ್ದರೆ, ಪಕ್ಕದಲ್ಲಿರೊರು ಯಾರೋ ಕಪ್ ಗೆದ್ದ ಪಾಕಿಸ್ತಾನವನ್ನೆ ಇಂಡಿಯಾ ಸೋಲಿಸಿದೆಯಲ್ಲ ಇಂಡಿಯಾನೇ ಗ್ರೇಟ್ ಅಂದುಬಿಟ್ಟರು. ನನಗೂ ಒಂಥರಾ ಹೌದೆನಿಸಿ ಸಮಾಧಾನವಾಯಿತು.

ಅಂತೂ ವರ್ಲ್ಡ್ ಕಪ್ ಮುಗಿದಿತ್ತು. ಆದರೆ ಮೊತ್ತ ಮೊದಲ ಬಾರಿಗೆ ಕ್ರಿಕೆಟ್ ನೋಡಿದ ನೆನಪುಗಳು ಮಾತ್ರ ಆಸ್ಟ್ರೇಲಿಯಾ ನ್ಯೂಜಿಲೆಂಡ್ ನ ಮೈದಾನಗಳಷ್ಟೇ ಹಚ್ಚ ಹಸುರಾಗಿತ್ತು. ಆ ಮೈದಾನಗಳು, ಅಲ್ಲಿನ ಪ್ರೇಕ್ಷಕರ ಚೀರಾಟಗಳು, ಆಟಗಾರರ ಬಣ್ಣ ಬಣ್ಣದ ಜರ್ಸಿಗಳು, ಆ ಪ್ಲಡ್ ಲೈಟ್ ಗಳು. ಆ ಲೈಟಿನಲ್ಲಿ ಆಡೋರಿಗೆ ಸರಿಯಾಗಿ ಕಾಣಿಸ್ತದಾ ಅನ್ನೊ ನಮ್ಮ ಡೌಟ್ ಗಳು. ಟಿವಿಲಿ ಬರುವ ಆ ರೀಪ್ಲೈಗಳು. ಮೊದಮೊದಲು ರಿಪ್ಲೈ ನೋಡುವಾಗ ಒಳಗೊಳಗೆ ನಗು ತರಿಸುವಂತಹ  ಸನ್ನಿವೇಶಗಳು… ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನೆಲ್ಲ ಬೆಳಿಗ್ಗೆ ಬೇಗ ಎಬ್ಬಿಸುವಂತೆ ಮಾಡಿದ ರೇಡಿಯೊ ಕ್ರಿಕೆಟ್ ಕಾಮೆಂಟರಿಗಳು. ಆರಂಭದಲ್ಲಿ ಅದು ಸದ್ದು ಮಾಡುತ್ತಿದ್ದ ಗೊರ ಗೊರ  ಸೌಂಡ್ ಗಳು. ಹೀಗೆ ಒಂದಾ ಎರಡಾ..? ಟಿವಿಯಲ್ಲಿ ಇಂಡಿಯಾದ ಮ್ಯಾಚ್ ನೋಡಲಿಲ್ಲ ಇಂಡಿಯಾ ಸೆಮಿಫೈನಲ್ ಏರಲಿಲ್ಲ ಅನ್ನೋ ಬೇಜಾರು ಬಿಟ್ಟರೆ ನಮ್ಮೊಳಗಿನ ಏನ್ ಸೈಕ್ಲೋಪೀಡಿಯಾ ತಯಾರಿಗೆ ಸಾಕಷ್ಟು ಕೆಲಸವೇ ಸಿಕ್ಕಿತು.

| ಇನ್ನು ನಾಳೆಗೆ |

‍ಲೇಖಕರು Admin

July 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: