ಡಿ ಎಸ್ ನಾಗಭೂಷಣ್ ಕಂಡಂತೆ ಜಿ ರಾಜಶೇಖರ್…

ಡಿ ಎಸ್ ನಾಗಭೂಷಣ್

ಜಿ. ರಾಜಶೇಖರ್ ನಾನು ತುಂಬಾ ಗೌರವಿಸುವ ಗೆಳೆಯರಲ್ಲೊಬ್ಬರು. ಹೆಚ್ಚೂ ಕಡಿಮೆ ಐವ್ವತ್ತು ವರ್ಷಗಳಿಂದ ಅವರು ಕನ್ನಡದಲ್ಲಿನ ಸಾರ್ವಜನಿಕ ಸಂವಾದಗಳಲ್ಲಿ ಭಾಗವಹಿಸುತ್ತಾ ಕನ್ನಡ ಬೌದ್ಧಿಕ ಸಮಾಜವನ್ನು ಜೀವಂತವಾಗಿಟ್ಟಿದ್ದಾರೆ. ರಾಜಶೇಖರ್ ಭಾರತೀಯ ಜೀವ ವಿಮಾನಿಗಮದ ನೌಕರರಾಗಿದ್ದುಕೊಂಡು ದುಡಿಯುವ ವರ್ಗದ ಪರವಾಗಿ ತುಡಿದವರು. ಅದಕ್ಕೆ ಅವರಿಗೆ ಮಾಧ್ಯಮವಾದದ್ದು, ಕಮ್ಯೂನಿಸಂ; ಅರ್ಥಾತ್ ಮಾರ್ಕ್ಸ್ವಾದ. ನಂತರ ಇತ್ತೀಚಿನ ವರ್ಷಗಳಲ್ಲಿ ಅವರು ಕಮ್ಯೂನಿಸಂನಿಂದಲೋ, ಕಮ್ಯೂನಿಸ್ಟ್ ಪ್ರಭುತ್ವಗಳಿಂದಲೋ ಭ್ರಮನಿರಸನ ಹೊಂದಿ ತಾವು ಪಡೆದಿದ್ದ ಕಮ್ಮೂನಿಸ್ಟ್ (ಮಾರ್ಕ್ಸ್ವಾದಿ) ಪಕ್ಷದ ಸದಸ್ಯತ್ಯದಿಂದ ಹಿಂದೆಗೆದಿದ್ದಾರೆ ಎಂದು ಕೇಳಿರುವೆ. ಆದರೆ ಈ ಬೆಳವಣಿಗೆಯ ಮುನ್ನ ಮತ್ತು ಆನಂತರ- ಈ ಎರಡೂ ಕಾಲಾವಧಿಗಳಲ್ಲಿಯೂ ಅವರು ಬರೆದ ಲೇಖನಗಳನ್ನು ನಾನು ಗಮನಿಸಿದ್ದೇನೆ. ನನಗೆ ತಿಳಿದಂತೆ ಅವರ ವಾದದ ಒರೆಗಲ್ಲುಗಳಾಗಲೀ, ನೆಲೆಗಟ್ಟುಗಳಾಗಲೀ, ಕಾಳಜಿಗಳಾಗಲೀ ಬಹಳ ಬದಲಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಅವರು ಯಾವತ್ತೂ ಹೆಚ್ಚು ಸೈದ್ಧಾಂತಿಕ ಪಾರಿಭಾಷಿಕಗಳನ್ನು ಬಳಸದೆ, ತುಂಬ ಅನೌಪಚಾರಿಕ ಶೈಲಿಯಲ್ಲಿ ಬರೆಯುತ್ತಿದ್ದುದು.

ಅಂದ ಮಾತ್ರಕ್ಕೆ ರಾಜಶೇಖರರ ಬರಹಗಳ ಸ್ವರೂಪ ಅದರ ದಿಗಂತ ದೃಷ್ಟಿಗಳು ಬದಲಾಗಿಲ್ಲ ಎಂದಲ್ಲ. ಅವರ ಬರಹಗಳ ಕೇಂದ್ರದಲ್ಲಿರುತ್ತಿದ್ದ ದುಡಿಯುವ ವರ್ಗಗಳನ್ನು ಕುರಿತ ಅವರ ಕಾಳಜಿಯ ಅರ್ಥವ್ಯಾಪ್ತಿ ಹೆಚ್ಚಿದ್ದು, ಅದು ಹೆಚ್ಚು ಅರ್ಥಪೂರ್ಣವಾಗುವಂತೆ ತಮ್ಮ ವಾದಸರಣಿಗೆ ಕಮ್ಯೂನಿಸ್ಟ್ ಪಕ್ಷದ ನಿಷ್ಠೆ ಸೃಷ್ಟಿಸಿದ್ದ ಹಲವು ವೈಚಾರಿಕ ಪೂರ್ವಾಗ್ರಹಗಳಿಂದ ಹೊರಬಂದಾಗ ದೊರೆಯುವ ಮುಕ್ತತೆಯ ಆವೇಗ ಸೇರಿಕೊಂಡಿದೆ. ಈಗ ಇವರು ತಮ್ಮನ್ನು ಕಮ್ಯೂನಿಸ್ಟ್ ಎಂದು ಕರೆದುಕೊಳ್ಳಲು ಇಚ್ಛಿಸದೆ ಸಮಾಜವಾದಿ ಎಂದು ಕರೆದುಕೊಂಡು ಎಡಪಂಥೀಯರೆ೦ದು ಪರಿಗಣಿಸಲ್ಪಡಲು ಇಚ್ಛಿಸುವರಾದರೂ, ಅವರು ಈಗ ನಂಬಿರುವ ಸಮಾಜವಾದದ ರೂಪುರೇಷೆಗಳೇನು ಎಂಬುದು ಸ್ವಲ್ಪ ಅಸ್ವಷ್ಟವಾಗಿಯೇ ಇದೆ. ಇತ್ತೀಚಿನ ಅವರ ಬರಹಗಳನ್ನೋದಿದವರಿಗೆ ಅವರೋರ್ವ ಅರಾಜಕತಾವಾದಿಯಾಗಿರುವ ಸಂದೇಹ ಉಂಟಾಗುತ್ತದೆ.

ರಾಜಶೇಖರ್ ಈಗ ತಮ್ಮನ್ನು ಸಮಾಜವಾದಿ ಎಂದು ಗುರುತಿಸಿಕೊಳ್ಳಬಯಸಿದ್ದರೂ ಎಲ್ಲ ಸಿದ್ಧಾಂತಗಳನ್ನೂ ‘ಕೊಲೆಗಡುಕ’ವೆಂದು ಸಾರಾ ಸಗಟಾಗಿ ಕರೆಯುವಷ್ಟು ಸಿದ್ಧಾಂತಗಳ ಸಹವಾಸದಿಂದ ಮನಸ್ಸನ್ನು ಕಹಿ ಮಾಡಿಕೊಂಡತಿರುವ ಈ ಮಾಜಿ ಕಮ್ಯೂನಿಸ್ಟ್ ಬುದ್ಧಿಜೀವಿಯ ಸದ್ಯದ ಬಹುಪ್ರಿಯ ಶಬ್ದ ‘ಸ್ವಾಯತ್ತತೆ’. (ನೋಡಿ: ‘ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಬೇಕು’: ‘ಬಹುವಚನ’) ಈ ದೃಷ್ಟಿಯಿಂದ ಪ್ರಭುತ್ವದ ಕಲ್ಪನೆ ಕುರಿತಂತೆ ಆ ತುದಿಯಿಂದ ಈ ತುದಿವರೆಗೆ ನಡೆದಿರುವ ರಾಜಶೇಖರರ ಆಲೋಚನಾ ಕ್ರಮದ ದಾರಿಯಲ್ಲಿ ವಿವರಣೆಗಳೇ ಇಲ್ಲದ ಹಲವಾರು ಬಿಕ್ಕಳಿಕೆಗಳು ಕಂಡು ಬರುತ್ತವೆ ಎಂಬುದನ್ನೂ ಇಲ್ಲಿ ಹೇಳಬೇಕು. ಈ ತೊಡಕುಗಳೇ ರಾಜಶೇಖರರ ಹಲವು ಸಮಕಾಲೀನ ಲೇಖನಗಳಲ್ಲಿನ ತೊಡಕುಗಳಿಗೂ ಕಾರಣವಾಗಿವೆ. ವಿಶೇಷವಾಗಿ, ಈಗ ಎಲ್ಲ ಚರ್ಚೆಗಳ ಮುನ್ನೆಲೆಗೆ ಬಂದಿರುವ ‘ಸೆಕ್ಯುಲರಿಸಂ’ ಸುತ್ತಮುತ್ತಲಿನ ಅವರ ಲೇಖನಗಳಿಗೆ ಸಂಬ೦ಧಿಸಿದ೦ತೆ. ಈ ಸಂಗತಿ ಅವರು ಸಾಹಿತ್ಯವನ್ನು ಗ್ರಹಿಸುವ-ನಿರ್ದಿಷ್ಟವಾಗಿ ಅಡಿಗರ ಕಾವ್ಯ ಮತ್ತು ಲಂಕೇಶರ ಕಥನ-ನೆಲೆಗಳ ವಿಷಯದಲ್ಲಿ ಕೆಲ ಕುರುಡುತನಗಳನ್ನು ಉಂಟು ಮಾಡಿದೆ ಎಂದು ನನಗನ್ನಿಸಿದೆ. ಈ ಭಿನ್ನಾಭಿಪ್ರಾಯಗಳಿಗೆೆ ಮುನ್ನ ಸಹಮತದ ಕೆಲವು ಸಂಗತಿಗಳನ್ನು ನೋಡೋಣ.

-೨-
ಜಿ. ರಾಜಶೇಖರ ಅವರು ನನಗೆ ಮುಖತಃ ಪರಿಚಯವಾದದ್ದು ಇತ್ತೀಚಿನ ವರ್ಷಗಳಲ್ಲೇ ಆದರೂ-ಬಹುಶಃ ಅವರನ್ನು ಮೊದಲ ಬಾರಿಗೆ ಕಂಡು ಮಾತನಾಡಿಸಿದ್ದು ೨೦೦೬ರಲ್ಲಿ, ಹೆಗ್ಗೋಡಿನ ಸಂಸ್ಕೃತಿ ಶಿಬಿರದಲ್ಲಿ-ಅವರನ್ನು ಆವರ ಬರಹಗಳ ಮೂಲಕ ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ಬಲ್ಲೆ. ನಾನು ಓದಿದ ಅವರ ಮೊದಲ ಬರಹವೆಂದರೆ, ಮಲೆನಾಡಿನ ಕಾಫಿ ತೋಟಗಳ ಕಾರ್ಮಿಕರನ್ನು ಕುರಿತದ್ದು. ಅದು ಕಳೆದ ಎಪ್ಪತ್ತರ ದಶಕದ ಕೊನೆಯ ವರ್ಷಗಳಲ್ಲಿ ‘ಸಾಕ್ಷಿ’ಯಲ್ಲಿ ಪ್ರಕಟವಾದ ಒಂದು ಕ್ಷೇತ್ರಾಧ್ಯಯನ ಬರಹ. ನನಗೆ ನೆನಪಿದ್ದಂತೆ ಅದನ್ನು ಅವರು ಯಾವುದೋ ಒಂದು ಪುಟ್ಟ ಶಿಷ್ಯವೇತನದ ಅಡಿಯಲ್ಲಿ ಮಾಡಿದ ಅಧ್ಯಯನದ ದಾಖಲೆಯಾಗಿತ್ತು. ಅಂತಹ ಲೇಖನ ನನಗೆ ಮತ್ತು ಬಹುಶಃ ಕನ್ನಡಕ್ಕೆ ಹೊಸದು, ನಿರ್ದಿಷ್ಟವಾಗಿ ಆ ಅಧ್ಯಯನ ಗುರಿಯಾಗಿಟ್ಟುಕೊಂಡಿದ್ದ ಸಮುದಾಯಕ್ಕೆ ಸಂಬ೦ಧಿಸಿದ ದೃಷ್ಟಿಯಿಂದಲಾದರೂ. ಅದರ ಅಧ್ಯಯನದ ಶಿಸ್ತು ಮತ್ತು ತೀರಾ ಶೈಕ್ಷಣಿಕವಲ್ಲದ ಅದರ ಭಾಷೆ ನನ್ನನ್ನು ಸೆಳೆಯಿತು. ಇದು ಹುಟ್ಟಿಸಿದ ಕುತೂಹಲವೇ ಅವರ ಪೂರ್ವಾಪರಗಳನ್ನು ವಿಚಾರಿಸಿ ಅವರೊಬ್ಬ ಕಮ್ಯೂನಿಸ್ಟ್ ಎಂದು ತಿಳಿಯಲು ನನ್ನನ್ನು ಪ್ರೇರೇಪಿಸಿದ್ದು. ಮುಖ್ಯ ಸಂಗತಿ ಎಂದರೆ ಅಂದಿನ ನನ್ನ ಮಟ್ಟಿಗೆ ಇದೊಂದು ತಿಳುವಳಿಕೆಯೇ ಆಗಿತ್ತು. ಏಕೆಂದರೆ ಆಗ ದೆಹಲಿಯಲ್ಲಿದ್ದ ನಾನು ಹಲವು ಉಜ್ವಲ ಕಮ್ಯೂನಿಸ್ಟ್ ನಾಯಕರ, ಮಾರ್ಕ್ಸ್ವಾದಿ ಚಿಂತಕರ ಭಾಷಣಗಳನ್ನು ಕೇಳಿ ಕಂಗೆಟ್ಟು, ಅದರ ಪರಿಣಾಮವಾಗಿ ಒಂದಿಷ್ಟು ಕಮ್ಯೂನಿಸ್ಟ್ ಸಾಹಿತ್ಯವನ್ನೂ ಓದಿಕೊಂಡು ಅದರ ಅಮೂರ್ತ ಪರಿಕಲ್ಪನೆಗಳು ಮತ್ತು ಸಂಕೀರ್ಣ ತರ್ಕಸರಣಿಗಳಿಂದ ಕಕ್ಕಾವಿಕ್ಕಿಯಾಗಿದ್ದಾಗ ಈ ಲೇಖನ ಕಮ್ಯೂನಿಸ್ಟರೂ ಸಾಮಾನ್ಯ ಮನುಷ್ಯ ಭಾಷೆ ಮಾತಾಡಬಲ್ಲರೆಂಬ ನಂಬಿಕೆ ಉಂಟಾಯಿತು.

ರಾಜಶೇಖರರ ಲೇಖನ ನನಗೆ ಹೊಸ ನಮೂನೆಯ ಕಮ್ಯೂನಿಸ್ಟರೊಬ್ಬರನ್ನು ಪರಿಚಯಿಸಿತ್ತು. ಆವರ ಬರಹದ ಮುನ್ನೆಲೆಯಲ್ಲಿ ನೆಲಮೂಲ ಮಾಹಿತಿ ಇತ್ತು. ಅದು ಸೈದ್ಧಾಂತಿಕವಾಗಿ ಎಷ್ಟು ನಿರಾಭರಣವಾಗಿತ್ತೆಂದರೆ, ಅದು ಶೋಷಿತರ ಪರ ಎರಕದಲ್ಲಿ ಸಿದ್ಧವಾದ ಯಾವುದೇ ಸಿದ್ಧಾಂತಕ್ಕೂ ಒದಗುವಂತಿತ್ತು. ಆ ಕಾಲದಲ್ಲಿ ಕಟ್ಟಾ ಮತ್ತು ಹಸಿ ಲೋಹಿಯಾವಾದಿಯಾಗಿ ಕಟ್ಟಾ ಕಮ್ಯೂನಿಸ್ಟ್ ವಿರೋಧಿಯೂ ಆಗಿದ್ದ ನನ್ನನ್ನು ಈ ಲೇಖನ ನನ್ನ ಕಮ್ಯೂನಿಸ್ಟ್ ಗೆಳೆಯರ ಬಗ್ಗೆ ಒಂದಿಷ್ಟು ಉದಾರವಾಗಲೂ ಕಾರಣವಾಯಿತು. ಹೀಗೆ ರಾಜಶೇಖರ ನಾನು ಇಷ್ಟಪಡಲಾರಂಭಿಸಿದ ಮೊದಲ ಕಮ್ಯೂನಿಸ್ಟರಾದರು!

ನಂತರ ನಾನು ಓದಿದ ಅವರ ಬರಹವೆಂದರೆ ಅಕ್ಷರ ಪ್ರಕಾಶನ ಪ್ರಕಟಿಸಿದ ‘ಕಾಗೋಡು ಸತ್ಯಾಗ್ರಹ’ ಕುರಿತ ಪುಸ್ತಕ. ಇದನ್ನೂ ಒಂದು ಶಿಷ್ಯ ವೇತನದಡಿಯಲ್ಲಿ ಬರೆದದ್ದು ಎಂದು ಕೇಳಿದ್ದೇನೆ. ಈ ಪುಸ್ತಕ ಬಂದಾಗ ನನ್ನ ಹಲವು ಸಮಾಜವಾದಿ ಗೆಳೆಯರು ಪುಸ್ತಕದ ಬಗ್ಗೆ ಕೆಂಡಕಾರಿ ದೆಹಲಿಯಲ್ಲಿದ್ದ ನನಗೆ ಪತ್ರ ಬರೆದು, ಈ ಪುಸ್ತಕದಲ್ಲಿ ಕಾಗೋಡು ಸತ್ಯಾಗ್ರಹ ವಿಫಲವಾಯಿತೆಂದು ರಾಜಶೇಖರ್ ಬರೆದಿರುವುದನ್ನು ನಿರಾಕರಿಸಿ ಲೇಖನವೊಂದನ್ನು ಬರೆಯಬೇಕೆಂದು ಒತ್ತಾಯಿಸಿದರು. ಆದರೆ ಆಗ ಈ ಪುಸ್ತಕವನ್ನು ಇನ್ನೂ ಓದಿರದಿದ್ದ ನಾನಾದರೂ ಹೇಗೆ ಮತ್ತು ಏನು ಬರೆಯಲಿ? ಜೊತೆಗೆ ಹೀಗೆ ಬರೆಯಲು ಹೇಳಿದವರು ಸ್ವತಃ ತಾವೇ-ಅವರೆಲ್ಲ ಸ್ವತಃ ಸಮಾಜವಾದಿ ಚಳುವಳಿಯಲ್ಲಿ ಭಾಗವಹಿಸಿದ್ದ ಹಿರಿಯರೇ-ಏಕೆ ಬರೆಯಬಾರದೆಂಬ ಪ್ರಶ್ನೆ ಕೂಡ ನನ್ನಲ್ಲಿ ಮೂಡಿತು.

ಈ ಬಗ್ಗೆ ಹೇಳಿದಾಗ ಅವರಿಂದ ತಿಳಿದುಬಂದ ವಿಷಯವೆಂದರೆ, ಅವರಿಗೆ ಖಂಡಿಸಿ ಬರೆಯಲು ಆಧಾರವಾಗಿ ಅವರ ಬಳಿ ಯಾವ ಮಾಹಿತಿಯೂ ಇರಲಿಲ್ಲ. ಇದ್ದದ್ದು ಆ ಸತ್ಯಾಗ್ರಹದ ಬಗ್ಗೆ ಒಂದು ಪರಂಪರಾಗತ ಭವ್ಯ ಕಲ್ಪನೆ ಮಾತ್ರ! ನಾನು ಆ ಹೊತ್ತಿಗೆ ಲೋಹಿಯಾ ಮತ್ತು ಅವರ ಸಮಾಜವಾದಿ ಪರಿಕಲ್ಪನೆಗಳ ಬಗ್ಗೆ ಕೆಲವು ಲೇಖನಗಳನ್ನು ಬರೆದು, ಚಂಪಾ ಸಂಪಾದಿಸುತ್ತಿದ್ದ ‘ಸಂಕ್ರಮಣ’ಕ್ಕಾಗಿ ಲೋಹಿಯಾ ವಿಶೇಷಾಂಕವೊ೦ದನ್ನು ಸಂಪಾದಿಸಿದ್ದರಿ೦ದ ನನ್ನ ಬಳಿ ಸಮಾಜವಾದಿ ಚಳುವಳಿಯ ಬಗ್ಗೆ ಈ ಖಂಡನೆಗೆ ಅಗತ್ಯವಾದ ಮಾಹಿತಿ ಇರಬಹುದೆಂಬ ನಂಬಿಕೆಯಿ೦ದ ಅವರು ನನಗೆ ದುಂಬಾಲು ಬಿದ್ದಿದ್ದರೆಂದು ಕಾಣುತ್ತದೆ. ಅದೇನೇ ಇರಲಿ, ನಾನು ಆ ಪುಸ್ತಕ ತರಿಸಿಕೊಳ್ಳಲು ವಿವರ ವಿಚಾರಿಸಿದಾಗ ಅದನ್ನು ಅಕ್ಷರ ಪ್ರಕಾಶನ ಪ್ರಕಟಿಸಿದ್ದೆಂದು ಗೊತ್ತಾಗಿ ಸ್ವತಃ ಸಮಾಜವಾದಿಯಾಗಿದ್ದ ಕೆ.ವಿ.ಸುಬ್ಬಣ್ಣ ಇವರು ಹೇಳುತ್ತಿರುವಂತಹ ಪುಸ್ತಕವನ್ನು ಪ್ರಕಟಿಸಲಾರರು ಎಂಬ ವಿಶ್ವಾಸ ಹುಟ್ಟಿತು. ಪುಸ್ತಕವನ್ನು ತರಿಸಿದೆ. ಅದು ಪ್ರಕಟವಾಗಿದ್ದು ಕಾಗೋಡು ಸತ್ಯಾಗ್ರಹದ ನಾಯಕರೆನ್ನಿಸಿದ್ದ ಶಾಂತವೇರಿ ಗೋಪಾಲಗೌಡ ಸ್ಮಾರಕ ಪುಸ್ತಕ ಮಾಲೆಯ ಭಾಗವಾಗಿ!

ಪುಸ್ತಕವನ್ನು ಗಮನವಿಟ್ಟು ಪೂರ್ತಿ ಓದಿದ ಮೇಲೆ ನಾನು ನನ್ನ ಸ್ನೇಹಿತರಿಗೆ ಹೇಳಿದೆ. ರಾಜಶೇಖರ್ ಕರ್ನಾಟಕದ ಸಮಾಜವಾದಿ ಚಳುವಳಿಯ ಚರಿತ್ರೆಯ ಒಂದು ಉಜ್ವಲ ಆಧ್ಯಾಯವನ್ನು ನಮ್ಮ ಮುಂದಿನ ತಲೆಮಾರಿಗೆ ಕಾಪಿಡುವ ಅಮೂಲ್ಯ ಕೆಲಸವನ್ನು ಮಾಡಿದ್ದಾರೆ. ನಾವೆಲ್ಲ ಅವರಿಗೆ ಕೃತಜ್ಞರಾಗಿರಬೇಕು. ಈ ಪುಸ್ತಕದಲ್ಲಿರುವ ಸಂಗತಿಗಳನ್ನು ನಿರಾಕರಿಸುವ ಯಾವುದೇ ಸಾಕ್ಷ್ಯ ನಿಮ್ಮಲ್ಲಿ ಇದ್ದರೆ ಕೊಡಿ, ಅವರನ್ನು ಪ್ರಶ್ನಿಸೋಣ.

ಒಬ್ಬರಿಂದಲೂ ಸೊಲ್ಲಿಲ್ಲ. ಕಾರಣ, ಕರ್ನಾಟಕದಲ್ಲಿ ಸಮಾಜವಾದಿಗಳಿಗೆ ಏನನ್ನಾದರೂ ದಾಖಲಿಸಿ ಸಂರಕ್ಷಿಸುವ ಗುಣವೇ ಇರಲಿಲ್ಲ. ಇತ್ತೀಚೆಗೆ ಈ ಬಗ್ಗೆ ಓರ್ವ ಹಿರಿಯ ಸಮಾಜವಾದಿಯ ಬಳಿ ಪ್ರಸ್ತಾಪ ಮಾಡಿದಾಗ ಅವರು ಆಡಿದ ಮಾತು ಈ ಚಳುವಳಿ, ಈ ಪಕ್ಷದ ಚರಿತ್ರೆಯ ಬಗ್ಗೆ ಎಲ್ಲವನ್ನೂ ಹೇಳುವಂತಿತ್ತು. ಆ ಮಾತೆಂದರೆ, ‘ಹೇ! ಅದೆಲ್ಲ ಶ್ಯಾನುಭೋಗಿಕೆ ಕೆಲಸ ನಮಗಾಗದ್ದು.’ ರಾಜಶೇಖರ ಆ ಪುಸ್ತಕದಲ್ಲಿ ಹೇಳಿದ್ದೂ ಇದನ್ನೇ. ಈ ಸತ್ಯಾಗ್ರಹ ಒಂದು ಹವ್ಯಾಸಿ ಹೋರಾಟಗಾರರ ಚಳುವಳಿಯಂತಿತ್ತು. ಏಕೆಂದರೆ ಈ ಚಳುವಳಿಯ ಮೂಲ ಆಶಯವನ್ನೇ ಅರಿಯದವರಂತೆ ಅದನ್ನು ಒಂದು ದಡಕ್ಕೆ ಮುಟ್ಟಿಸದೆ ಸಮಾಜವಾದಿಗಳು ಅಲ್ಲಿಂದ ಕಾಲ್ಕಿತ್ತರು. ಅವರು ಮಾಡಿದ್ದೇನೆಂದರೆ, ದೀವ ಗೇಣಿದಾರರ ನಾಯಕ ಗಣಪತಿಯಪ್ಪ ತಾವು ನುಂಗಲಾರದ ತುತ್ತನ್ನು ನುಂಗಲು ಹೋಗಿ ಆದು ಅವರ ಗಂಟಲಿಗೆ ಸಿಕ್ಕಿಹಾಕಿಕೊಂಡಿದ್ದಾಗ ಅದನ್ನು ಅವರು ನುಂಗುವ೦ತೆ ಮಾಡಲು ಸಹಾಯ ಮಾಡುವಂತಹ ಒಂದು ಹೋರಾಟವನ್ನು ಮಾಡಿದ್ದರಷ್ಟೆ. ಗೇಣಿ ಅಳೆಯುವ ಕೊಳಗದ ವಿವಾದ ಪರಿಹಾರವಾಗಿತ್ತಷ್ಟೆ. ಅದಾದ ಮೇಲೆ ಗೇಣಿದಾರರು ಮತ್ತೆ ಅದೇ ಭೂಮಾಲಿಕರ ಆಶ್ರಯಕ್ಕೇ ಹೋಗಬೇಕಾಯಿತು.
ಇದನ್ನೇ ರಾಜಶೇಖರ್ ತಮ್ಮ ಪುಸ್ತಕದಲ್ಲಿ ಪ್ರಶ್ನಿಸಿರುವುದು. ಏಕೆ ಈ ಹೋರಾಟವನ್ನು ಆ ಸಂದರ್ಭದಲ್ಲಿ ಕೇಳಿ ಬಂದ ‘ಉಳುವವನೇ ನೆಲದೊಡೆಯ’ ಎಂಬ ಘೋಷಣೆ ಸೂಚಿಸುವ ತಾರ್ಕಿಕ ಅಂತ್ಯಕ್ಕೆ ಒಯ್ಯುವ ಒಂದು ಪ್ರಯತ್ನವನ್ನೂ ಮಾಡಲಿಲ್ಲವೇಕೆ? ಈ ಹೋರಾಟದಲ್ಲಿ ಧೀರೋದಾತ್ತ ಸಾಹಸಗಳನ್ನು ಮೆರೆದ ಗೋಪಾಲಗೌಡರಾದರೂ ಈ ಚಳುವಳಿಯ ಕಾವನ್ನು ಬಳಸಿಕೊಂಡು ರಾಜ್ಯದಲ್ಲಿ ಪಕ್ಷವನ್ನು ಕಟ್ಟುವ ಗಂಭೀರ ಪ್ರಯತ್ನವನ್ನೇಕೆ ಮಾಡಲಿಲ್ಲ? ಇದು ಆ ಹೋರಾಟದ ಬಗೆಗೆ ಸಹಾನುಭೂತಿಯಿಂದ ಹೊಮ್ಮಿದ ಪ್ರಶ್ನೆಯೇ ಆಗಿತ್ತಾದರೂ, ಗೌಡರ ಅಭಿಮಾನಿಗಳಿಗೆ ಮುಜುಗರದ ಪ್ರಶ್ನೆಯಾಗಿತ್ತು. ಆದರೆ ಈ ಪ್ರಶ್ನೆಯನ್ನು ಕೇಳುವ ಮುನ್ನ ರಾಜಶೇಖರ್ ಅಂದು ರಾಜ್ಯದ ಒಟ್ಟಾರೆ ಪರಿಸ್ಥಿತಿ ಹೇಗಿತ್ತು, ಪಕ್ಷದ ಪರಿಸ್ಥಿತಿ ಹೇಗಿತ್ತು ಮತ್ತು ಸ್ವತಃ ಗೋಪಾಲಗೌಡರ ವೈಯಕ್ತಿಕ ಬದುಕು ಹೇಗೆ ನಡೆದಿತ್ತು ಎಂಬುದರ ವಿವರಗಳನ್ನು ಅರಿಯುವ ಪ್ರಯತ್ನ ಮಾಡಬೇಕಿತ್ತು ಎಂಬುದೂ ನಿಜ.

ಒಟ್ಟಾರೆ ಹೇಳಬೇಕೆಂದರೆ ಒಂದು ರಾಜಕೀಯ ಹೋರಾಟವನ್ನು ಹೇಗೆ ಒಂದು ಐತಿಹಾಸಿಕ ದಾಖಲೆಯಾಗಿ ರಚಿಸಬೇಕೆಂಬುದಕ್ಕೆ ಈ ಪುಸ್ತಕ ಒಂದು ಮಾದರಿಯಾಗಿದೆ. ಪುಸ್ತಕ ಹೋರಾಟವನ್ನು ಮಾತ್ರವಲ್ಲ, ಅದು ನಡೆದ ಊರು ಮತ್ತು ಅದರ ಆಜುಬಾಜಿನ ಜನಜೀವನದ, ಅದರ ವಿಶಿಷ್ಟ ಮುಖಗಳ ಜೀವಂತ ಚಿತ್ರ ಒದಗಿಸುತ್ತದೆ. ಒಂದು ಹಂತದಲ್ಲಿ ಪುಸ್ತಕದಲ್ಲಿ ರಾಜಶೇಖರ್ ಕರ್ನಾಟಕದ ಸಮಾಜವಾದಿಗಳು ತಮ್ಮ ಸುತ್ತ ಕಟ್ಟಿಕೊಂಡು ಸ್ವಮೋಹ ಪಾಶಕ್ಕೆ ಒಳಗಾಗಲು ಕಾರಣವಾಗಿದ್ದ ಒಂದು ಭೋಳೆಯನ್ನು ಕರಗಿಸಿದರು ಎಂದು ಹೇಳಬೇಕು. ಇದರಲ್ಲಿ ನನ್ನ ಹಲವು ಗೆಳೆಯರು ಸಂದೇಹಿಸಿದ೦ತೆ ಕಮ್ಯೂನಿಸ್ಟನೊಬ್ಬನ ಸಂಚಿತ್ತೆ? ಇರಲಾರದು, ಏಕೆಂದರೆ ಇಲ್ಲಿನ ಚರ್ಚೆಯಲ್ಲಿ ಕಮ್ಯೂನಿಸ್ಟ್ ಚಳುವಳಿಯ ಬಗ್ಗೆ ಯಾವ ರಿಯಾಯಿತಿಯನ್ನೂ ತೋರದ ಟೀಕೆಯೂ ಇದೆ.

-೩-
ಕೊನೆಯದಾಗಿ ರಾಜಶೇಖರ ಅವರೇ ಹೇಳಿಕೊಂಡ೦ತಹ ಸಿದ್ಧಾಂತ ರಹಿತ ಆಲೋಚನಾ ಘಟ್ಟದ ಬರಹಗಳ ಬಗ್ಗೆ ನನ್ನ ತಕರಾರುಗಳನ್ನು ಸಂಕ್ಷಿಪ್ತವಾಗಿ ಪ್ರಸ್ತಾಪಿಸಿ ಈ ಬರಹವನ್ನು ಮುಗಿಸಬಯಸುವೆ. ‘ಸೆಕ್ಯುಲರಿಸಂ ಎಂಬ ಪರಿಕಲ್ಪನೆ’ ಎಂಬ ಸುದೀರ್ಘ ಲೇಖನದಲ್ಲಿ (‘ಬಹುವಚನ ಭಾರತ’) ನಾವೆಲ್ಲ ಒಪ್ಪಬಹುದಾದ ಏನೆಲ್ಲವನ್ನು ಅವರು ಹೇಳುವರಾದರೂ, ವರ್ತಮಾನದ ಭಾರತೀಯ ಕೋಮು ಪ್ರಕ್ಷಬ್ಧತೆಗಳ ಬಗ್ಗೆ ಬರೆಯುವಾಗಲೆಲ್ಲ ಅವರು ಹಿಂದೂ ಕೋಮುವಾದವನ್ನು ಅದರ ಜೋಡಿ ವಿದ್ಯಮಾನವಾದ ಮುಸ್ಲಿಂ ಮೂಲಭೂತವಾದದಿಂದ ಪ್ರತ್ಯೇಕಿಸಿಯೇ ವಿಶ್ಲೇಷಿಸುವ ಮತ್ತು ಖಂಡಿಸುವ ಪ್ರವೃತ್ತಿ ಹಿಂದೂ ಕೋಮುವಾದಿಗಳಿಗೆ ಬಲ ಒದಗಿಸಿದೆಯೆಂದೇ ನಾನು ತಿಳಿದಿದ್ದೇನೆ. ಈ ಬಗ್ಗೆ ನನ್ನ ಹಲವು ಪ್ರತಿಕ್ರಿಯೆ/ ಬರಹಗಳಲ್ಲಿ ನಾನು ಆವರೊಂದಿಗೆ ತೀಕ್ಷ್ಣವಾಗಿ ವಾದಿಸಿಯೂ ಇದ್ದೇನೆ. ವರ್ತಮಾನದ ಯಾವುದೇ ಹಿಂದೂ ಕೋಮುವಾದಿ ವಿದ್ಯಮಾನವನ್ನು-ಅದು ಗೋರಕ್ಷಣೆಯದೇ ಆಗಿರಲಿ, ಲವ್ ಜಿಹಾದ್‌ದೇ ಆಗಿರಲಿ, ತ್ರಿವಳಿ ತಲಾಖ್‌ದೇ ಆಗಿರಲಿ- ರಾಷ್ಟ್ರ ವಿಭಜನೆಯ ಚರಿತ್ರೆಯಲ್ಲಿ ಇರುವ ಅದರ ಬೇರುಗಳನ್ನು ಗುರುತಿಸದೆ, ಅಂದರೆ ಇಸ್ಲಾಮೀ ಪಾಕಿಸ್ತಾನದ ಮತ್ತು ಅದು ಪ್ರತೀಕವಾಗಿರುವ ಹಲವು ನಮೂನೆಗಳ ಇಸ್ಲಾಮೀ ಮೂಲಭೂತವಾದಗಳ ಅಸ್ತಿತ್ವವನ್ನು ಪರಿಗಣಿಸದೆ, ದ್ವೇಷ ಹಾಗೂ ಹಿಂಸೆಯನ್ನು ಖಂಡಿಸುವುದರ ಹೊರತಾಗಿ ಮತ್ತಾವ ನೀತಿಪಾಠವನ್ನೂ ಹೇಳಲಾಗದು ಎಂಬುದು ನನ್ನ ವಾದ. ಆದರೆ ರಾಜಶೇಖರ್ ಇಸ್ಲಾಮಿ ಮೂಲಭೂತವಾದ ಎಂಬುದಿದೆ ಎಂದು ಮಾಹಿತಿಯ ಮಟ್ಟದಲ್ಲಿ ಒಪ್ಪುವರಾದರೂ (ನೋಡಿ: ‘ಅಮೆರಿಕಾದ ಸಾಮ್ರಾಜ್ಯಶಾಹಿಯೂ, ಇಸ್ಲಾಮಿಕ್ ಭಯೋತ್ಪಾದನೆಯೂ’: ‘ಬಹುವಚನ ಭಾರತ’) ಸಾಂದರ್ಭಿಕವಾಗಿಯಾದರೂ ಮುಟ್ಟಿ ನೋಡಲು ಮಾತ್ರ ಹೋಗುವುದಿಲ್ಲ. ಈ ದೃಷ್ಟಿಯಿಂದ ರಾಜಶೇಖರ್ ಇನ್ನೂ ಹಳೇ ನಮೂನೆಯ ಎಡಪಂಥೀಯರಾಗಿಯೇ ಉಳಿದುಹೋಗಿದ್ದಾರೇನೋ ಎಂಬ ಅನುಮಾನ ನನ್ನದು. ಈ ಬಗ್ಗೆ ಅವರೊಂದಿಗೆ ನಾನು ಹಲವು ಬಾರಿ ಸಾಕಷ್ಟು ನಿಷ್ಠುರವಾಗಿಯೇ ವಾದಿಸಿದ್ದೇನೆ. (ಪ್ರಾತಿನಿಧಿಕವಾಗಿ ನನ್ನ ‘ಇಲ್ಲಿ ಯಾವುದೂ ಅಮುಖ್ಯವಲ್ಲ’ (ಸಮಾಜವಾದಿ ಸಂಕಥನಗಳು-೪) ಇದರಲ್ಲಿನ ‘ಮುಸ್ಲಿಂ ಮೂಲಭೂತವಾದವೂ ಸೆಕ್ಯುಲರ್ ಬುದ್ಧಿಜೀವಿಗಳು’ ಲೇಖನವನ್ನು ನೋಡಬಹುದು.)

ರಾಜಶೇಖರ್ ನಮ್ಮ ಓರ್ವ ಪ್ರತಿಭಾವಂತ ಸಾಹಿತ್ಯ ವಿಮರ್ಶಕರೆಂದು ಹೆಸರಾದವರು. ಮೂಲತಃ ಅವರು ಸಾಹಿತ್ಯದ ಶಾಸ್ತ್ರೀಯ ಅಧ್ಯಯನ ನಡೆಸದವರಾಗಿ ಈ ಕ್ಷೇತ್ರದಲ್ಲಿ ಅವರು ತಮ್ಮ ಬರವಣಿಗೆಯಲ್ಲಿ ಹೊಸ ಒಳನೋಟಗಳೊಂದಿಗೆ ತೋರುತ್ತಿರುವ ಆತ್ಮವಿಶ್ವಾಸ ಅವರ ಸಾಹಿತ್ಯ ವಿಮರ್ಶೆಯನ್ನು ಅನನ್ಯಗೊಳಿಸಿದೆ ಎನ್ನಬೇಕು. ನನ್ನ ಓದಿನ ಪರಿಮಿತಿಯಲ್ಲಿ ಹೇಳುವುದಾದರೆ, ಕಾರಂತರ ಕಾದಂಬರಿಗಳು ಮತ್ತು ಶಿವಪ್ರಕಾಶರ ಮೊದಲ ಹಂತದ ಕಾವ್ಯದ ಬಗ್ಗೆ ಬರೆದ ಲೇಖನಗಳು ವಿಶಿಷ್ಟವೆನಿಸಿದವು. ಆದರೆ ಅಡಿಗರ ಕಾವ್ಯಶ್ರೇಷ್ಠತೆಯನ್ನು ಕುರಿತ ಅವರ ಹಠ ಸಮಸ್ಯಾತ್ಮಕವಾದದ್ದು. ಈ ಬರಹದ ಆರಂಭದಲ್ಲಿ ಪ್ರಸ್ತಾಪಿಸಿದ ಇವರ ಈ ತುದಿಯಿಂದ ಆ ತುದಿಯವರೆಗಿನ ಆಲೋಚನಾ ಕ್ರ‍್ರಮದ ಪಯಣದ ತೊಡಕಿಗೆ ಸಂಬ೦ಧಿಸಿದ್ದು ಇದು ಎಂದು ನಾನು ಭಾವಿಸಿದ್ದೇನೆ, ‘ನೀನಾಸಂ’ ಅನ್ನು ಉದ್ದೇಶಿಸಿ ಅವರು ಆಡುವ ‘ನೀವು ಯಾರ ಮಾತನ್ನೂ ಕೇಳದೆ ನಿಮ್ಮ ಸ್ವಾಯತ್ತತೆಯನ್ನು ಉಳಿಸಿಕೊಳ್ಳಿ’ ಎಂಬ ಮಾತಿನ ಹಿನ್ನೆಲೆಯಲ್ಲಿ ಕೇಳಿ ಬರುವ ‘ನನ್ನ ಈ ಮಾತನ್ನು ಮಾತ್ರ ಕೇಳಿ’ ಎಂಬ (ಸ್ವಾಯತ್ತತೆಗೆ ತಮ್ಮದೇ ಹೊಸ ಅರ್ಥವನ್ನು ಕೊಡುವ!) ದನಿಯಲ್ಲಿನ ಅಮಾಯಕತೆಯೇ ಅವರು ಅಡಿಗರ ಶತಮಾನೋತ್ಸವದ ಸಂದರ್ಭದಲ್ಲಿ ಬರೆದ ‘ಅಡಿಗರ ಕಾವ್ಯ ಮತ್ತು ಹಿಂದುತ್ವದ ಸಂಬ೦ಧ: ಕುದುರದ ಸಂಬ೦ಧ’ ಎಂಬ ಲೇಖನದಲ್ಲಿ (ನೋಡಿ: ‘ಹೊಸ ಮನುಷ್ಯ’, ಏಪ್ರಿಲ್-ಮೇ, ೨೦೧೮) ಭಾರತೀಯ ಜನಸಂಘಕ್ಕೆ (ಇಂದಿನ ಬಿಜೆಪಿಯ ಪಿತೃ ರೂಪ), ಅದರ ‘ಹಿಂದುತ್ವ’ ಪ್ರತಿಪಾದನೆಗೂ ಅಡಿಗರ ಕಾವ್ಯಕ್ಕೂ ಸಂಬ೦ಧವಿಲ್ಲವೆ೦ದು ಅವರ ಶ್ರೇಷ್ಠ ಕವನಗಳೆಂದು ಭಾವಿಸುವ ಒಂದೆರಡು ಕವನಗಳ ತಮ್ಮದೇ ಧಾಟಿಯ ವಿಶ್ಲೇಷಣೆಯ ಮೂಲಕ ಸಾಧಿಸುವ ಪ್ರಯತ್ನ ಮಾಡಿ ಅಡಿಗರ ಕಾವ್ಯ ಕುರಿತ ತಮ್ಮ ಆಭಿಮಾನವನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲೂ ಕಾಣುವುದು. ಏಕೆಂದರೆ ಕೊನೆಗೆ ಅವರು ಅಡಿಗರು ಹಿಂದುತ್ವವನ್ನು ಸಾಕಷ್ಟು ವಾಚ್ಯವಾಗಿಯೇ ಎತ್ತಿಹಿಡಿಯುವ ‘ಅಂಬೇಡ್ಕರ್ ಭೀಮರಾಯರಿಗೆ’, ‘ಮತ್ತೆ ಮತ್ತೆ ಮೊಳಗಲಿ ಪಾಂಚಜನ್ಯ’ ಮುಂತಾದ ಪದ್ಯಗಳನ್ನು ಹೇಗೆ ನೋಡಿದರೂ ಅಡಿಗರ ಕಾವ್ಯವನ್ನು ಪ್ರತಿನಿಧಿಸುವಂತಹ ರಚನೆಗಳಲ್ಲ ಎಂಬ ಷರಾ ಬರೆದು ಕೈತೊಳೆದುಕೊಂಡು ಬಿಡುತ್ತಾರೆ. ಹಾಗೆ ತೊಳೆದುಕೊಂಡ ಮೇಲೂ ಸಾಹಿತ್ಯ ವಿಮರ್ಶೆಯ ಮೂಲ ಪಾಠಗಳಿಗೆ ಅಪಚಾರಗೈದ ಮಸಿ ಅವರ ಅಂಗೈಗಳಲ್ಲಿ ಉಳಿದಿದ್ದರೂ. ಅಡಿಗರ ಕಾವ್ಯದ ಶಿಲ್ಪ ಸೌಂದರ್ಯದ ಬಗ್ಗೆ ಇರುವ ನನ್ನ ಮೆಚ್ಚುಗೆಯನ್ನು ವಿಸ್ತರಿಸಿ ಹೇಳುವ ಸಂದರ್ಭ ಇದಲ್ಲವಾದ್ದರಿಂದ ರಾಜಶೇಖರರ ಈ ವಿಮರ್ಶೆಯ ಬಗ್ಗೆ ಒಂದು ಮಾತನ್ನಂತೂ ಹೇಳಬೇಕು. ಒಬ್ಬ ಕವಿಯ, ವಿಶೇಷವಾಗಿ ‘ನೆಹರೂ ನಿವೃತ್ತರಾಗುವುದಿಲ್ಲ’ ಎಂಬ ಕವನದಿಂದ ಆರಂಭವಾದ೦ತೆ ತನ್ನ ಕಾವ್ಯವನ್ನು ಶುದ್ಧ ರಾಜಕೀಯ ಶೃತಿಯೊಂದಿಗೇ ರಚಿಸಿದ ಅಡಿಗರಂತಹ ಕವಿಯ ಕಾವ್ಯವನ್ನು ಅದರ ರಾಜಕೀಯ ಸತ್ವಕ್ಕಾಗಿ ಶ್ರೇಷ್ಠ ಮತ್ತು ಕಳಪೆ ಎಂದು ವಿಂಗಡಿಸಿ ತೀರ್ಮಾನ ಕೈಗೊಳ್ಳುವುದು ರಾಜತ್ವಕ್ಕೆ ರಾಜ್ಯಗಿಂತ ಹೆಚ್ಚು ವಿಧೇಯತೆಯನ್ನು ತೋರಿಸುವುದರ ಸೂಚನೆಯಷ್ಟೆ. (ಹಾಗೆ ನೋಡಿದರೆ, ರಾಜಶೇಖರರ ವಾದವನ್ನೇ ಬಳಸಿಕೊಂಡು ನಾಲಗೆಯನ್ನು ಸ್ವಲ್ಪ ಬೇರೆ ದಿಕ್ಕಿಗೆ ಹೊರಳಿಸಬಲ್ಲವರು ಅಡಿಗರ ಕಾವ್ಯ ಮೂಲತಃ ಮೃದು ಹಿಂದುತ್ವದ ಕಾವ್ಯವೇ ಆಗಿದೆ ಎಂದು ಪ್ರತಿಪಾದಿಸಲು ಸಾಧ್ಯವಿದೆ.)

ಈ ಎಲ್ಲ ದೃಷ್ಟಿಯಿಂದ ನೋಡಿದಾಗ ಎಲ್ಲ ಸಿದ್ಧಾಂತಗಳೂ ಕೊಲೆಗಡುಕವೇ ಎನ್ನುವ ರಾಜಶೇಖರರು ಸಿದ್ಧಾಂತವಿಲ್ಲದಿರುವುದೂ ಕೊಲೆಗಡುಕತನಕ್ಕೆ ಕಾರಣವಾಗಬಲ್ಲುದು ಎಂಬ ಅರಿವಿಗೆ ಎರವಾಗಿರುವ ದುರಂತವೂ ಕಂಡೀತು. ಇದ್ದೂ ಇಲ್ಲದಂತಿರುವ ಸ್ಥಿತಿಯೆಡೆಗೆ ಇವರ ಪಯಣ ಸಾಗುವವರೆಗೆ ಇದು ನಡೆದೇ ಇದ್ದೀತು.

ಇದೇ ಸಂದರ್ಭದಲ್ಲಿ ರಾಜಶೇಖರರ ಲಂಕೇಶರ ಎರಡು ಕಥೆಗಳ ಓದಿನ ಪರಿಯ ಬಗ್ಗೆಯೂ ಎರಡು ಮಾತು ಹೇಳಬಹುದು. ಕಮ್ಯೂನಿಸಂನಿಂದ ದೂರ ಸರಿದ ಇವರು ಅದನ್ನು ತಮಗೆ ತಾವೇ ಸಾಬೀತುಪಡಿಸಿಕೊಳ್ಳಲು ವ್ಯಕ್ತಿ ವಿಶಿಷ್ಟವಾದದೆಡೆಗೆ ಚಲಿಸಿರುವುದು ‘ರೊಟ್ಟಿ’ ಮತ್ತು ‘ದಾಳಿ’ ಎಂಬ ಈ ಎರಡು ಕಥೆಗಳನ್ನು ಓದಿಕೊಂಡಿರುವ ರೀತಿಗಳನ್ನು ಸೂಚಿಸುತ್ತಿರುವಂತಿದೆ, ‘ರೊಟ್ಟಿ’ ಮೊದಲಾಗಿ ನಮ್ಮ ದೇಶದ ಸಂದರ್ಭದಲ್ಲಿ ಒಂದು ಕಾಲ್ಪನಿಕ ಕಥೆಯಾಗಿ ಮಾತ್ರ ಕಾಣುವುದನ್ನು ಗುರುತಿಸದೇ ಹೋಗಿರುವ ಅವರು ಬಹುಶಃ ಅಡಿಗರು ಈ ಕಥೆಯನ್ನು ವಿಪರೀತವಾಗಿ ಹೊಗಳಿರುವುದರಿಂದ (ಈ ಕಥೆಯಿರುವ ‘ನಾನಲ್ಲ’ ಸಂಕಲನದ ಮುನ್ನುಡಿ ನೋಡಿ) ಲಂಕೇಶರ ನವ್ಯ ಕಥನದ ವಿಶಿಷ್ಟ ಗುಣವಾದ ದ್ವಂದ್ವಾತ್ಮಕತೆಯ ರೋಚಕತೆಗೆ ಮಾರುಹೋದಂತಿದೆ. ಇನ್ನು ‘ದಾಳಿ’ ಒಟ್ಟು ಕಥೆಯ ಆವರಣ ಮತ್ತು ಕಾವಿನ ಹೊರಗೇ ಉಳಿದು, ಫ್ರಾಯ್ಡಿಯನ್ ಲಂಕೇಶರ ಕೈಗೊಂಬೆ ಪಾತ್ರವಾಗಿ ಮೂಡಿರುವ ಮಲ್ಲಿಯ ‘ದುಗುಡ’ಕ್ಕೆ ಪ್ರತಿಸ್ಪಂದಿಸಿದ೦ತಿದೆ. ಎರಡೂ ಕಥೆಗಳಲ್ಲಿ ಕಥೆಗಾರ ಕಥೆಗಾರಿಕೆಗೆ ಮಣಿದು ಸೋತಿರುವುದನ್ನು ರಾಜಶೇಖರ್ ಗುರುತಿಸದೇ ಹೋಗಿದ್ದಾರೆನಿಸುತ್ತದೆ.

ಒಟ್ಟಿನಲ್ಲಿ ರಾಜಶೇಖರ್ ತಾವು ಮೊದಲು ಬಲವಾಗಿ ನಂಬಿದ್ದ ದ್ವಂದ್ವಮಾನ ಭೌತವಾದದ ಹ್ಯಾಂಗ್-ಓವರ್‌ನಿಂದಲೂ ತಪ್ಪಿಸಿಕೊಳ್ಳಲಾಗದೆ ಅತ್ತ ಅದರಿಂದ ದೂರವಾಗಿದ್ದೇನೆ ಎಂದು ತಮಗೆ ತಾವೇ ಸಾಬೀತುಪಡಿಸಿಕೊಳ್ಳಲು ನಡೆಸಬೇಕಾದ ಹೆಣಗಾಟದಿಂದಲು ತಪ್ಪಿಸಿಕೊಳ್ಳಲಾಗದೆ ಬೌದ್ದಿಕ ಬಳಲಿಕೆಗೆ ಸಿಕ್ಕಂತೆ ಕಾಣುತ್ತದೆ. ಈ ಬಳಲಿಕೆ ಕೇವಲ ರಾಜಶೇಖರರದ್ದು ಆಗಿರದೆ ಈಗ ಭಾರತಕ್ಕೇ ವಿಶಿಷ್ಟವಾದ ಅಧಿಕಾರಸ್ಥ ಮತೀಯವಾದಿ ಬಲಪಂಥೀಯತೆಯ ಎದುರು ದಿಕ್ಕೆಟ್ಟಂತಿರುವ ಎಲ್ಲ ಎಡಪಂಥಿಯರದ್ದೂ ಆಗಿದೆ. -ಇಷ್ಟೆಲ್ಲ ಯೋಚಿಸಲು (ತಪ್ಪೋ ಸರಿಯೋ ಅದು ಬೇರೆ ವಿಷಯ), ಬರೆಯಲು ಪ್ರಚೋದಿಸಬಲ್ಲ ಚಿಂತಕರೇ ಸಮಾಜದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಾರಣರಾಗುವವರು. ರಾಜಶೇಖರ ಅವರಿಗೆ ಈ ಸಂದರ್ಭದಲ್ಲಿ ನನ್ನ ಶುಭಾಶಯಗಳು.

(ಎಚ್ ಪಟ್ಟಾಭಿರಾಮ ಸೋಮಯಾಜಿಯವರ ಆಹ್ವಾನದ ಮೇರೆಗೆ ಪ್ರಸ್ತಾವಿತ ಜಿ. ರಾಜಶೇಖರ್ ಅಭಿನಂದನ ಗ್ರಂಥಕ್ಕಾಗಿ ಬರೆದ ಲೇಖನ)

‍ಲೇಖಕರು Admin

July 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Padmakshi K

    ಶೀರ್ಷಿಕೆಯಲ್ಲಿನ ಕಾಗುಣಿತದ ದೋಷವನ್ನು ಸರಿಪಡಿಸಿವಿರಾ?
    ‘ವ್ಯಕ್ತಿ ವಿಶಿಷ್ಟತೆಯೆಡೆಗಿನ ಅಸ್ಪಷ್ಟ ಹೆಜ್ಜೆಗಳು’
    ಎಂದು.
    ಸವಿತಾ ನಾಗಭೂಷಣ ಅವರು ಹೇಳಿರುವಂತೆ …

    ಪ್ರತಿಕ್ರಿಯೆ
  2. K.Sridevi

    ಶೀರ್ಷಿಕೆ ಯಲ್ಲಿ ಈ ಕೆಳಗಿನ ಬದಲಾವಣೆ ಮಾಡಿರಿ: ವಿಶಿಷ್ಟತೆಯೆಡೆಗಿನ
    ಕೊನೆಯಲ್ಲಿ ಪಟ್ಟಾಭಿರಾಮ ಸೋಮಯಾಜಿ ಹೆಸರನ್ನು ಸರಿಮಾಡಿರಿ.

    ಪ್ರತಿಕ್ರಿಯೆ
  3. Padmakshi K

    ಜಿ.ರಾಜಶೇಖರ್ ಕುರಿತ ಲೇಖನದ ಶೀರ್ಷಿಕೆಯ ಕಾಗುಣಿತದ ತಪ್ಪುಗಳನ್ನು ಸರಿಪಡಿಸುವಿರಾ?
    ‘ವ್ಯಕ್ತಿ ವಿಶಿಷ್ಟತೆಯೆಡೆಗಿನ ಅಸ್ಪಷ್ಟ ಹೆಜ್ಜೆಗಳು’

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: