ಮಧುಕರ್ ಬಳ್ಕೂರು ಸರಣಿ ಕಥೆ 19 – ಇವತ್ತು ಮ್ಯಾಚ್ ಇತ್ತಾ..? ಗೊತ್ತೆ ಇರಲಿಲ್ಲ ಅನ್ನೋ ಪರಿಸ್ಥಿತಿ…!!

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ.

‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ.

ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ.

ಹಿಂದಿನ ಸಂಚಿಕೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

19

ನಮಗೆ ಮೊದಲೇ ಗೊತ್ತಿತ್ತು. ಕೊನೆಗೂ ತನ್ನ ಬುದ್ದಿಯನ್ನು ಸೈಲೆಂಟಾಗಿ ತೋರಿಸೇಬಿಟ್ಟ” ಅಂದ್ರು ಕೆಲವರು. “ಇಲ್ಲಾ ಇಲ್ಲಾ ಇದರಲ್ಲೆನೋ ಗೋಲ್ ಮಾಲ್ ನಡೆದಿದೆ. ಅಜರ್ ತೀರಾ ದುಡ್ಡಿಗೋಸ್ಕರ ಹೀಗೆಲ್ಲ ಮಾಡುವವರಲ್ಲ” ಅಂದ್ರು ಇನ್ನು ಕೆಲವರು. “ಅಯ್ಯೋ ಬಿಡ್ರಿ ಸಾಕು. ಬೆಂಕಿ ಇಲ್ಲದೆ ಹೊಗೆ ಆಡುತ್ತಾ..? ಅದು ಬೇರೆ ಅವನೇ ಫೀಕ್ಸ್ ಮಾಡಿದೀನಿ ಅಂತ ಒಪ್ಪಿಕೊಂಡಿದಾನೆ. ಅವನು ಬರೀ ಹೊಗೆ ಅಷ್ಟೇ. ಬೆಂಕಿ ಹಚ್ಚಿದೊರೇ ಬೇರೆಯವರಿದಾರೆ. ಒಟ್ಟಿನಲ್ಲಿ ಏನೋ ಒಂದ್ ಮಾಡಿ ಮನೆಗೆ ಕಳಿಸಬೇಕಿತ್ತು. ಬಕ್ರಾ ಆದ ಅಷ್ಟೇ” ಅಂದ್ರು ಮತ್ತೆ ಕೆಲವರು.

ಹೌದು, ಅದು ಮ್ಯಾಚ್ ಫಿಕ್ಸಿಂಗ್ ಸ್ಕ್ಯಾಂಡಲ್. ಸೌತ್ ಆಫ್ರಿಕಾದ ಕ್ಯಾಪ್ಟನ್ ಹ್ಯಾನ್ಸಿ ಕ್ರೋನಿಯೆ ಬಾಯಲ್ಲಿ ಭಾರತದ ಮಾಜಿ ನಾಯಕ ಅಜರುದ್ದೀನ್ ಹೆಸರು ಕೇಳಿ ಬರುತ್ತಲೇ ಅಸಂಖ್ಯಾತ ಕ್ರಿಕೆಟ್ ಪ್ರೇಮಿಗಳ ಮನಸ್ಸು ಒಡೆದು ಹೋಗಿತ್ತು. ಅಜರ್ ಜೊತೆಗೆ ಜಡೇಜಾ, ಮೊಂಗಿಯಾ, ಮನೋಜ್ ಪ್ರಭಾಕರ್ ಹೆಸರು ಸೇರಿದ ಮೇಲಂತೂ ಭಾರತೀಯರ ಮನಸೇ ಸ್ತಬ್ದ ಆಯಿತು. ಆದರೆ ಎಲ್ಲಿಯವರೆಗೆ ಹೇಳಿ..? ತಾವು ದಿನಾಲೂ ಆರಾಧಿಸುತ್ತಿದ್ದ, ಅಭಿಮಾನಿಸುತ್ತಿದ್ದ ದೇವರುಗಳ ಅಸಲಿ ಮುಖವಾಡ ಹೀಗಂತ ಗೊತ್ತಾದಾಗ ಹೇಗಾಗಿರಬೇಡ ಹೇಳಿ..!? ಹೌದು, ರಾತ್ರಿ ಬೆಳಗಾಗುವುದರೊಳಗೆ ಇಂತದ್ದೊಂದು ಸ್ಕ್ಯಾಂಡಲ್ ನಲ್ಲಿ ನಮ್ಮ ಆಟಗಾರರ ಹೆಸರುಗಳು ಹೊರಬಿದ್ದಾಗ ಅಸಂಖ್ಯಾತ ಕ್ರಿಕೆಟ್ ಪ್ರೇಮಿಗಳ ಭಾವನೆಗಳಿಗೆ ಆಗಿದ್ದು ಇದೇ.

ಭಾರತೀಯರೆಲ್ಲ ಹೇಗೆಂದರೆ ಯಾರೇ ಇಷ್ಟವಾದರೂ ಅವರನ್ನು ದೇವರ ತರಹ ಪಲ್ಲಕ್ಕಿಯಲ್ಲಿ ಕೂರಿಸಿ ಮೆರೆಸುತ್ತಾರೆ. ಹಾಗೆಯೇ ಅದೇ ದೇವರುಗಳು ತಪ್ಪು ಮಾಡಿದಾಗ ಅವರಿಗೆ ಹಿಡಿದಿರೋ ದೆವ್ವವನ್ನು ಬಿಡಿಸೋಕೂ ಮುಂದಾಗುತ್ತಾರೆ. ಯಾಕೆ ಅವನ ಹಣೆಬರಹ ಮೊದಲೇ ಗೊತ್ತಿತ್ತು ಅನ್ನುವ ಲೆವೆಲ್ಲಿಗೆ ಡೈಲಾಗ್ ಗಳು ಬರುತ್ತವೆ ಎಂದರೆ ಕಾರಣ ಇಷ್ಟೇ. ಇದು ಅವರ ಭಾವನೆಗಳಿಗೆ ಆದ ಆಘಾತ. ಯಾವತ್ತಿಗೂ ನೆನಪಾಗದ ಆಟಗಾರನ ಕುಲ, ಜಾತಿ, ಧರ್ಮವೆಲ್ಲ ಅದದೇ ಸಮಯಕ್ಕೆ ಸರಿಯಾಗಿ ನಾಲಗೆಯಲ್ಲಿ ಬರುತ್ತವೆಂದರೆ ಒನ್ಸ್ ಎಗೈನ್ ಅದು ಭಾವನೆಗಳಿಗಾದ ಆಘಾತವಷ್ಟೇ.

ಮೊದಲೇ ಜನ ಅಷ್ಟು ಸುಲಭದಲ್ಲಿ ಇದನ್ನೆಲ್ಲ ನಂಬಲಾರರು. ನಂಬಿದರೂ ತಕ್ಷಣಕ್ಕೆ ಜೀರ್ಣಿಸಿಕೊಳ್ಳಲಾರರು. ಅದು ಬೇರೆ ಇಷ್ಟು ವರುಷ ಟಿವಿಯೆದುರು ಕೂತು ನಮ್ಮ ತಂಡ, ದೇಶ ಅಂತೆಲ್ಲ ಸಮಯ ಕಳೆದು ನಮ್ಮಗಳನ್ನೆ ಬೆಪ್ಪರನ್ನಾಗಿ ಮಾಡಿದರಲ್ಲ.. ಅದನ್ನಂತೂ ಅರಗಿಸಿಕೊಳ್ಳೊದಕ್ಕೆ ಆಗದು. ಸ್ವತಃ ಅಜರ್ ಕೆಲ ಪಂದ್ಯಗಳನ್ನು ಫಿಕ್ಸ್ ಮಾಡಿರುವುದಾಗಿ ಒಪ್ಪಿಕೊಂಡಾಗ ಆಗಿದ್ದು ಅದೇ. ಜನ ಮನಸಿಗೆ ಬಂದ ರೀತಿಯಲ್ಲಿ ಆಡಿಕೊಂಡರು. ಸಾರಾಸಗಟಾಗಿ ಅವನನ್ನು ಅವನ ಧರ್ಮದೊಂದಿಗೆ ಕನೆಕ್ಟ್ ಮಾಡಿಯೇಬಿಟ್ಟರು. ಇದಕ್ಕೆ ಸರಿಯಾಗಿ ಅಜರ್ ನಾನು ಅಲ್ಪಸಂಖ್ಯಾತ ಎನ್ನುವ ಕಾರಣಕ್ಕೆ ನನ್ನನ್ನು ಈ ಪ್ರಕರಣದಲ್ಲಿ ಬೊಟ್ಟು ಮಾಡಲಾಗುತ್ತಿದೆ ಎಂಬರ್ಥದಲ್ಲಿ ಸ್ಟೇಟ್ ಮೆಂಟ್ ಕೊಟ್ಟರು. ಇದು ಅವರಿಗೆ ದೊಡ್ಡ ಮೈನಸ್ ಆಯಿತು.

ಅಸಂಖ್ಯಾತ ಭಾರತೀಯರು ಧರ್ಮ ನೋಡದೆ ಆರಾಧಿಸುತ್ತಿದ್ದ ಒಬ್ಬ ಕ್ರಿಕೆಟರ್ ನ ಬಾಯಿಂದ ನಿರೀಕ್ಷಿಸದೆ ಇದ್ದ ಹೇಳಿಕೆಯೊಂದು ಬಂದು ಅವರ ಬಗ್ಗೆನೆ ಅಗೌರವ ಪಡುವಂತಾಯಿತು. ನೂರು ಕೋಟಿ ಜನರ ಪ್ರತಿನಿಧಿಯಾಗಿ ಭಾರತ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಅಷ್ಟೊಂದು ಸುದೀರ್ಘ ಅವಧಿಯವರೆಗೆ ಯಾವುದೇ ತಕರಾರುಗಳಿಲ್ಲದೆ ಕೊಟ್ಟಿರುವಾಗ ಇಂಥಾ ಮಾತು ಬರಬಹುದಾ..? ಅಲ್ಲಿಗೆ ಭಾರತೀಯರ ಪಾಲಿಗೆ ಅಜರ್ ವಿಲನ್ ಆಗಿ ಹೋದರು. ಅಜರ್ ಯಾವ ಅರ್ಥದಲ್ಲಿ ಹಾಗಂದರೋ..? ನಿಜಕ್ಕೂ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಅವರ ಕೈವಾಡವಿತ್ತೊ.? ಇಲ್ಲವೋ? ಅಥವಾ ಯಾರದೋ ಕುಮ್ಮಕ್ಕಿನ ದಾಳವಾದರೋ.? ಗೊತ್ತಿಲ್ಲ. ಆದರೆ ಜನ ಮಾತ್ರ ಅವರನ್ನು ಧರ್ಮದೊಂದಿಗೆ ಕನೆಕ್ಟ್ ಮಾಡಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿಯೇಬಿಟ್ಟರು.

ಆದರೆ ವಿಷ್ಯ ಇದಲ್ಲ. ಇಂತದ್ದೊಂದು ಪ್ರಕರಣವಾದಾಗ ಜನರ ಪ್ರತಿಕ್ರಿಯೆಗಳು ಹೇಗಿರುತ್ವೆ, ಅನಿಸಿಕೆ ಅಭಿಪ್ರಾಯಗಳು ಹ್ಯಾಗೆ ಚಿತ್ರ ವಿಚಿತ್ರವಾಗಿ ಬದಲಾಗುತ್ವೆ ಅನ್ನೋದು.! ಆ ಒಂದು ಕ್ಷಣಕ್ಕೆ ಜನರ ಯೋಚಿಸುವ ರೀತಿ ಯಾವ ಮಟ್ಟಕ್ಕೆ ತಲುಪಿಬಿಡುತ್ತೆ ಅನ್ನೋದಷ್ಟೇ ಇಲ್ಲಿ ವಿಚಾರ. ನನ್ನದೇ ಪರಿಸರದಲ್ಲಿ ಕೆಲವರಾಡಿದ ಸಂಭಾಷಣೆಗಳನ್ನಷ್ಟೇ ಇಲ್ಲಿ ದಾಖಲಿಸುತ್ತೇನೆ. ಇದನ್ನು ಸಂಪೂರ್ಣ ಸತ್ಯವೆನ್ನಲು ಬರುವುದಿಲ್ಲ. ಹಾಗಂತ ಇದರಲ್ಲಿ ವಿಷಯವೇ ಇಲ್ಲ ಅನ್ನುವಂತಿಲ್ಲ. ಯಾವುದೇ ಆಧಾರಗಳಿಲ್ಲದೆ ಇರುವುದರಿಂದ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಬಾರದು. ಆದರೆ ಈಗಲೂ ಆ ಮಾತುಗಳೆಲ್ಲ ಕಿವಿಯಲ್ಲಿ ಗುಂಯ್ ಗೂಡುತ್ತಿರುವುದರಿಂದ ಅದನ್ನಿಲ್ಲಿ ಪ್ರಸ್ತಾಪಿಸುತ್ತೇನೆ.

“ಅಯ್ಯೋ ಪಾಪ.. ಅವನೇನ್ ಮಾಡ್ತಾನೆ. ತನ್ನ ನಂತರ ಬಂದ ಸಚಿನ್, ಗಂಗೂಲಿ, ದ್ರಾವಿಡ್ ರೆಲ್ಲ ಬಹಳ ಬೇಗ ಜಾಹಿರಾತುಗಳಲ್ಲಿ ಬ್ಯುಸಿಯಾಗಿ ಹಣ ಸಂಪಾದನೆ ಮಾಡಿದ್ರು. ಆದ್ರೆ ತಾನು ಅವರಿಗಿಂತಲೂ ಸೀನಿಯರ್ ಆಗಿದ್ರೂ ಏನು ಮಾಡಿಕೊಂಡಿಲ್ಲವಲ್ಲ ಅಂತ ತಲೇಲಿ ಬಂದಿರಬೇಕು. ಇನ್ನೇನು ಮಾಡ್ತಾನೆ ಫೀಕ್ಸಿಂಗ್ ಮಾಡಿರ್ತಾನೆ ಪಾಪ. ಬಿಡಿ, ಯಾರೇನು ತಿಂದೆ ಇಲ್ವಾ..! ಸೌತ್ ಆಫ್ರಿಕಾದ ಹರ್ಷಲ್ ಗಿಬ್ಸ್ , ಆಸ್ಟ್ರೇಲಿಯಾದ ಮಾರ್ಕ್ ವ್ಹಾ, ಶೇನ್ ವಾರ್ನ್ ಫಿಕ್ಸಿಂಗ್ ನಲ್ಲಿ ಹೆಸರು ತಳುಕು ಹಾಕಿಕೊಂಡಿದ್ದರೂ ಅವರಿಗಿಲ್ಲದ ಅಜೀವ ನಿಷೇಧ ಅಜರ್ ಗೆ ಯಾಕೆ ..? ಪಾಕಿಸ್ತಾನದ ಅರ್ಧಕ್ಕಿಂತಲೂ ಹೆಚ್ಚು ಆಟಗಾರರು ಫಿಕ್ಸಿಂಗ್ ನಲ್ಲಿ ಇದ್ದಿರೋದು ಸಾಬೀತಾದರೂ ಅವರೆಲ್ಲರ ಕ್ರಿಕೆಟ್ ಕೆರಿಯರ್ ಅಲ್ಲಿಗೆನೆ ಕೊನೆಯಾಗಲಿಲ್ಲವಲ್ಲ.? ಎಲ್ಲಾ ರಾಜಕೀಯ ಅಷ್ಟೇ.”

 “ಏನೇ ಆದರೂ ಅಜರ್ ಕೇವಲ ದುಡ್ಡಿಗೋಸ್ಕರ ಈ ಲೆವೆಲ್ಲಿಗೆ ಇಳಿಯುತ್ತಾನೆಂದರೆ ನಂಬೋಕ್ ಆಗಲ್ಲ. ಅವನದು ಧಾರಾಳ ಮನಸು. ಇದರಲ್ಲೆನೋ ಗೋಲ್ ಮಾಲ್ ನಡೆದಿರಬೇಕು.” 

“ಗೋಲ್ ಮಾಲು ಇಲ್ಲ ಎಂಥಾದ್ದು ಇಲ್ಲ. ಆ ಧಾರಾಳ ಮನಸ್ಸೇ ಪ್ರಾಬ್ಲಮ್ ಆಗಿರೋದು.. ಅಜರುದ್ದೀನ್ ಗೆ ಸ್ವಲ್ಪ ಜಾಸ್ತಿನೇ ಶಾಪಿಂಗ್ ಮಾಡೋ ಹುಚ್ಚು. ಯಾವ ದೇಶಕ್ಕೆ ಕ್ರಿಕೆಟ್ ಆಡೋಕ್ ಹೋದ್ರು ಅಲ್ಲಿ ಶಾಪಿಂಗ್ ಮಾಡೋ ಗೀಳು. ಈ ವಿಕ್ನೇಸ್ ಇರೋದ್ರಿಂದಲೇ ಒಬ್ಬ ಬುಕ್ಕಿ ಅಭಿಮಾನಿ ಅಂತ ಹೇಳಿಕೊಂಡ್ ಬಂದು ಬಲೆ ಬೀಸಿರೋದು.. ಒಂದು ಸಕತ್ ಆಗಿರೋ ವಾಚನ್ನು ಪ್ರೆಸೆಂಟ್ ಮಾಡಿ ಬುಟ್ಟಿಗೆ ಹಾಕ್ಕೊಂಡಿರೋದು.. ಅಜರ್ ಅದಕ್ಕೆ ಫೀದಾ ಆದ. ಇಲ್ಲಿಂದಲೇ ಎಲ್ಲಾ ಶುರುವಾಗಿದ್ದು..”

“ಇಲ್ಲ.. ಇಲ್ಲ.. ಇದೇನ್ ಮಹಾ ಅಲ್ಲ, ಆದ್ರೆ ಯಾವತ್ತು ಆ ಸಂಗೀತ ಬಿಜಲಾನಿ ತೆಕ್ಕೆಗೆ ಬಿದ್ದನೋ ಆವತ್ತೇ ಅವನಿಗೆ ಶನಿ ಹೆಗಲೇರಿತು. ಅಲ್ಲಿಂದ ಅವನ ಚರ್ಯೆ, ಸ್ವಭಾವ ಎಲ್ಲಾ ಬದಲಾಯಿತು. ಈ ಬಿಜಲಾನಿ ಅಪ್ಪ ಬೇರೆ ದೊಡ್ಡ ಬುಕ್ಕಿಯಂತೆ.! ಬಿಜಲಾನಿಯನ್ನು ಅಜರ್ ಕೈ ಹಿಡಿಯುವುದರ ಹಿಂದೆ ಕಾಣದ ಕೈಗಳಿವೆಯಂತೆ.! ಆವಾಗಲೇ ಅಜರುದ್ದೀನ್ ಸೇಲ್ ಆಗಿ ಹೋದ್ನನಾ ಅಂತಾ ಡೌಟು…!! ಇನ್ನು ಆ ಜಡೇಜಾಗೆ ಪಾರ್ಟಿ ಮಾಡೋ ಹುಚ್ಚೆ ವಿಕ್ನೇಸ್ ಆಯಿತು. ಸಚಿನ್ ಇಲ್ಲದೆ ಇಂಡಿಯಾ ಗೆಲ್ಲೊಲ್ಲ ಅನ್ನೋದೆಲ್ಲ ಬರೀ ಸುಳ್ಳು. ಇಂಡಿಯಾನ ಗೆಲ್ಸೋ ತಾಕತ್ತಿರೋ ಇವರುಗಳು ಈ ತರಹ ಸೈಲೆಂಟಾಗಿ ದಾರಿ ತಪ್ಪಿದ ಮೇಲೆ ಇಂಡಿಯಾ ಹೇಗೆ ಗೆಲ್ಲೋದು ಹೇಳಿ..?”
 “ಹಾಗಾದ್ರೆ ತಂಡದಲ್ಲಿರೋ ಉಳಿದವರಿಗೆ ಇವರ ಮೇಲೆ ಡೌಟ್ ಬಂದಿಲ್ವಾ..?” 
“ಯಾಕಿಲ್ಲ..? ಎಲ್ಲಾ ಗೊತ್ತಿರುತ್ತೆ. ಯಾರೂ ಹೇಳಿಕೊಳ್ಳಲ್ಲ ಅಷ್ಟೇ. ಎಲ್ಲಿ ನಮ್ಮ ಕೆರಿಯರ್ ಗೆ ಎಫೇಕ್ಟ್ ಆಗುತ್ತೆ ಅನ್ನೋ ವಿಚಾರ..! ತಿಳಿದುಕೊಳ್ಳಿ. ಸಿಂಪಲ್ ಲಾಜಿಕ್. ಯಾವುದೇ ಮ್ಯಾಚ್ ಇರಲಿ ಇಂಡಿಯಾ ಸೋಲಬೇಕಂದ್ರೆ ಅದು ಟೀಮ್ ನಲ್ಲಿರುವ ಯಾರೋ ಒಬ್ಬರಿಂದ ಸಾಧ್ಯವಿಲ್ಲ. ಅಂದ್ರೆ ಮಿನಿಮಮ್ ಅರ್ಧದಷ್ಟು ಮೆಂಬರ್ ಆದ್ರೂ ಅದರಲ್ಲಿ ಇನ್ವಾಲ್ ಆಗ್ಬೇಕು. ಸುಮ್ನೆ ಇವೆಲ್ಲ ಕತೆಗಳು.. ಸಚಿನ್, ಗಂಗೂಲಿ, ಕುಂಬ್ಳೆ, ಶ್ರೀನಾಥ್, ದ್ರಾವಿಡ್ ರೆಲ್ಲ ಕ್ಲೀನ್ ಹ್ಯಾಂಡೇ ಇರಬಹುದು. ಆದರೆ ಅವರಿಗೆಲ್ಲವೂ ಗೊತ್ತು..! ಇದನ್ನು ಮಾಡೋರು ಬೇರೆಯವರೇ ಇರ್ತಾರೆ. ಸುಮ್ನೆ ನಾವು ನಮ್ಮಾಟ ಅಂತಷ್ಟೇ ಇರಬೇಕು ಅಂತಾ…! ನಾವಿದರಲ್ಲಿ ಇಣುಕಬಾರದು ಅನ್ನೋದು ಇವರ ಪಾಲಿಸಿ. ಆದರೆ ಅಜರ್, ಜಡೇಜಾರಂತವರು ಬೇರೆ ದಾರಿಯಲ್ಲೆ ಹೋದರು ಅನಿಸುತ್ತೆ. ಅದಕ್ಕೆ ಈ ಗತಿ. ಕೆಲವು ಮ್ಯಾಚೆಲ್ಲಾ ಶುರುವಾಗೋಕೂ ಮೊದ್ಲೆ ಫಿಕ್ಸ್ ಆಗಿರುತ್ತಂತೆ. ಸುಮ್ಮನೆ ನಾವೆಲ್ಲ ತಲೆ ಕೆಡಿಸಿಕೊಂಡು ನೋಡಿ ಬೆಪ್ಪರಾದೀವಿ ಅಷ್ಟೇ.”  
“ಓಹ್ ಅದಕ್ಕೆ ಮತ್ತೆ, ಒಂದೊಂದ್ ಸಾರಿ ಅಜರ್ ಫೀಲ್ಡಿಂಗ್ ಗೆ ಇಳಿಯುವಾಗಲೇ ಮುಖ ಅಂಡ್ ಸುಟ್ಟ ಬೆಕ್ಕಿನ ತರಹ ಇರೋದು…! ವಿಕೆಟ್ ಬಿದ್ದಾಗ ಎಲ್ಲರೂ ಖುಷಿ ಪಡ್ತಿರಬೇಕಾದ್ರೆ ಇವನು ಮಾತ್ರ ಯಾವುದೋ ಲೆಕ್ಕಾಚಾರದಲ್ಲಿ ಇರೋ ತರಹ ಕಾಣೋದು…! ಇನ್ನು ಜಡೇಜಾ ಸಿಕ್ಕಾಪಟ್ಟೆ ಓವರ್ ಸ್ಮಾರ್ಟ್. ನಗುನಗುತ್ತಲೇ ನಮ್ಮನ್ನೆಲ್ಲ ಯಾಮಾರಿಸಿಬಿಟ್ಟ…”

“ಅದು ಆಯಿತಲ್ಲ. ಅಜರ್ ಒಂದೊಂದು ಮ್ಯಾಚ್ ಗೆ ಹ್ಯಾಟ್ ಹಾಕ್ಕೊಂಡು ಫೀಲ್ಡ್ ಗೆ ಇಳಿತಾರೆ. ಒಂದೊಂದು ಸಾರಿ ಹಾಗೆ ಇಳಿತಾರೆ. ಅದು ಯಾವದರ ಸಿಗ್ನಲ್..! ಅದಕ್ಕೆ ಸರಿಯಾಗಿ ಜಡೇಜಾ ಫೀಲ್ಡ್ ಲ್ಲೆ ನಿರ್ದಿಷ್ಟವಾದ ಗ್ಯಾಲರಿ ಜಾಗದ ಕಡೆ ಆಗಾಗ ನೋಡುತ್ತಿರ್ತಾನೆ..! ಅದು ಯಾರಿಗೆ ಕೊಡುವ ಸಿಗ್ನಲ್ಲು..? ಇನ್ನು ಯಾವ ಮ್ಯಾಚು ಕೂಡ ಹೀಗಿಗೆ ಫಿಕ್ಸ್ ಆಗುತ್ತೆ ಅಂತ ಮೊದಲೇ ಹೇಳೋದಕ್ಕೆ ಬರಲ್ವಂತೆ.!! ಹಾಗಾಗಿ ಟಾಸ್ ನಿಂದ ಹಿಡಿದು ಕೊನೆ ತನಕಾನೂ ಮೈದಾನದಲ್ಲಿ ಕೋಡೋ ಸಿಗ್ನಲ್ ಗಳೇ ಮ್ಯಾಚ್ ನ ನಿರ್ಧರಿಸುತ್ತಂತೆ.! ಬುಕ್ಕಿಗಳೆಲ್ಲ ಗ್ರೌಂಡ್ ನಲ್ಲೆ ಕೂತಿರ್ತಾರಂತೆ.! ಒಮ್ಮೊಮ್ಮೆ ವಿಕೆಟ್ ಚೆನ್ನಾಗಿದ್ದು ಟಾಸ್ ಗೆದ್ದಾಗಲೂ ಅಜರ್ ಫೀಲ್ಡಿಂಗ್ ಅನ್ನೇ ಆರಿಸಿಕೊಳ್ಳುತ್ತಿದ್ದನಂತೆ!! ಇಂಡಿಯಾ ಚೇಸಿಂಗ್ ವೇಳೇಲಿ ಹದಿನೈದು ಓವರ್ ನಂತ್ರ ಅಥವಾ ತೆಂಡೂಲ್ಕರ್ ಔಟಾದ ಬಳಿಕ ಫಿಕ್ಸಿಂಗ್ ಕಾರ್ಯತಂತ್ರ ಶುರುವಾಗುತ್ತಿತ್ತಂತೆ.!! ಎಷ್ಟು ಮ್ಯಾಚ್ ನಲ್ಲಿ ಸಚಿನ್ ಔಟಾದ ನಂತರ ಅಜರ್, ಜಡೇಜಾ ಪುಸಕ್ ಅಂತ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ಔಟಾಗಿಲ್ಲ. ಸುಮ್ನೆ ನಾವುಗಳೆಲ್ಲಾ ಹುಚ್ಚರ ಹಾಗೆ ನೋಡಿದ್ದು.”
“ಓಹ್ ಹೀಗೆ.. ಒಂದೆರಡು ಮ್ಯಾಚ್ ಗಳಲ್ಲಿ ಡಮ್ಮಿಯಾಗಿ ಆಡಿ ಮ್ಯಾಚ್ ಕೈ ಬಿಡೋದು. ನಂತ್ರ ಒಂದು ಮ್ಯಾಚ್ ನಲ್ಲಿ ಸಕತ್ ಆಗಿ ಆಡಿ ಫಾರ್ಮ್ ನಲ್ಲಿ ಇದೀವಿ ಅಂತ ತೋರಿಸಿಕೊಳ್ಳೋದು.”
“ಅಯ್ಯೋ, ಬರೀ ಇಷ್ಟಕ್ಕೆ ಅವರ ಮೇಲೆ ಡೌಟ್ ಪಟ್ಟರೆ ಹೇಗೆ..? ಅಜರ್ ಸಾಕಷ್ಟು ಸ್ಮರಣೀಯವಾದಂತಹ ಮ್ಯಾಚ್ ಗಳನ್ನ ಗೆಲ್ಲಿಸಿ ಕೊಟ್ಟಿದ್ದಾರೆ. ಅವರು ಯಾವುದೋ ಒತ್ತಡಕ್ಕೆ ಬಲಿಯಾಗಿ ಫಿಕ್ಸ್ ಮಾಡಿರಬಹುದು. ಅಥವಾ ಇನ್ಯಾರ ಒತ್ತಡಕ್ಕೋ ಮಾಡದ ತಪ್ಪನ್ನು ಒಪ್ಪಿಕೊಂಡಿರಬಹುದು. ಆದರೆ ಯಾವ ಸಹಆಟಗಾರನ ಹೆಸರನ್ನು ಎಲ್ಲೂ ಕೂಡ ಪ್ರಸ್ತಾಪಿಸಿಲ್ಲ ಅನ್ನೋದನ್ನ ನೆನಪಲ್ಲಿಡಬೇಕು. ಹಾಗೇ ಅವರು ಆರೋಪ ಎದುರಿಸಿದಾಗ ಯಾವೊಬ್ಬ ಆಟಗಾರನೂ ಕೂಡಾ ಕನಿಷ್ಠ ಅವರ ಬೆನ್ನಿಗೆ ನಿಲ್ಲಲಿಲ್ಲ ಅನ್ನೋದನ್ನ ಗಮನಿಸಬೇಕು. ಸಚಿನ್, ಗಂಗೂಲಿ, ಕುಂಬ್ಳೆ, ಶ್ರೀನಾಥ್, ದ್ರಾವಿಡ್, ಎಲ್ಲರೂ ಅವರ ಕಾಲಾವಧಿಯಲ್ಲಿಯೇ ಸ್ಟಾರ್ ಆದವರು. ಆದರೆ ಕನಿಷ್ಠ ಅವರ ಬಗ್ಗೆ ಒಂದು ಹೇಳಿಕೆಯನ್ನು ಒಬ್ಬರೂ ಕೊಡಲಿಲ್ಲ. ಇದರ ಅರ್ಥ ಇಷ್ಟೇ.

ಒಂದೋ ಅವರ ಫಿಕ್ಸಿಂಗ್ ಚಟುವಟಿಕೆ ಎಲ್ಲರಿಗೂ ಗೊತ್ತು. ಇಲ್ಲಾ ಫಿಕ್ಸಿಂಗ್ ಚಟುವಟಿಕೆಯೇ ಎಲ್ಲರಿಗೂ ಗೊತ್ತು. ಏನೇ ಸ್ವಲ್ಪ ಮಾತನಾಡಿದರೂ ಮುಂದೆ ಅದು ಎಲ್ಲೊ ಹೋಗಿ ನಮ್ಮ ಕೆರಿಯರ್ ಗೆ, ಇಮೇಜ್ ಗೆ ಸಮಸ್ಯೆ ಆಗುತ್ತೆ ಅಂತ ಎಲ್ಲರಿಗೂ ಗೊತ್ತು. ಒಬ್ಬ ಕಪಿಲ್ ದೇವ್ ಈ ಪ್ರಕರಣದಲ್ಲಿ ಅಜರ್ ಮುಗ್ದರಿರಬಹುದು ಅಂತ ಹೇಳಿಕೆ ಕೊಟ್ಟಿದ್ದಕ್ಕೆ ಮನೋಜ್ ಪ್ರಭಾಕರ್ ಅವರನ್ನೇ ದೊಡ್ಡ ಫಿಕ್ಸರ್ ಅಂದುಬಿಟ್ಟಿದ್ದರು. ಈ ಫಿಕ್ಸಿಂಗ್ ಕಾರ್ಯಚಟುವಟಿಕೆಗಳೆಲ್ಲವೂ ದೊಡ್ಡ ಮಟ್ಟದಲ್ಲೆ ನಡೆಯುತ್ತೆ. ಅದೊಂದು ಪಕ್ಕಾ ಬ್ಯುಸಿನೆಸ್. ಅಲ್ಲಿ ದೊಡ್ಡ ದೊಡ್ಡ ರಾಜಕೀಯ ಕುಳಗಳು, ಬ್ಯುಸಿನೆಸ್ ತಲೆಗಳೇ ಇನ್ವಾಲ್ ಆಗೋದು. ಅವರೇ ಮ್ಯಾಚ್ ಸೋಲಬೇಕಾ ಗೆಲ್ಲಬೇಕಾ ಅಂತಾ ನಿರ್ಧಾರ ಮಾಡೋದು. ಆದರೆ ಹಿಂದಿನಿಂದ ಆನೆ ಹೋದರೂ ಸರಿ ಎದುರಿನಿಂದ ಇರುವೆ ಹೋಗಬಾರದು ಅನ್ನೋದಿರುತ್ತೆ. ಎಲ್ಲೊ ಒಂದು ಕಡೆ ಅಜರ್, ಜಡೇಜಾ ಎದುರಿನಿಂದಲೇ ಆನೆ ಹೋಗಲು ಬಿಟ್ಟರಾ ಅನ್ನೋದೆ ಡೌಟು. ಎಲ್ಲಾ ನಿಯಮಗಳಿಗೆ ವಿರುದ್ದವಾಗಿ ಹೋಗಿ ನಿಯತ್ತು ಮುರಿದಿದ್ದಕ್ಕೆನೆ ಅವರಿಗಿಗಾಯಿತಾ ಅನ್ನೋದು ಡೌಟು. ಹಾಗಾಗಿ ಅವರುಗಳು ಆರೋಪ ಎದುರಿಸಿದಾಗ ಯಾರೊಬ್ಬರು ಅವರ ಪರ ನಿಲ್ಲಲಿಲ್ಲ. ಸಚಿನ್ ಎರಡೆರಡು ಬಾರಿ ಕ್ಯಾಪ್ಟನ್ ಆಗಿ ಸಫಲರಾಗದೇ ತಾವಾಗಿಯೇ ಅದರಿಂದ ಕೆಳಗಿಳಿದಿದ್ದು ಯಾಕೆ ಅಂತ ಈಗ ಅರ್ಥವಾಗಿರಬಹುದು. ಅದಕ್ಕೆನೆ ಅವರು ಆ ಕಡೆ ತಿರುಗಿಯೂ ನೋಡದೆ ನಂಗೇನು ಗೊತ್ತಿಲ್ಲ ಅನ್ನುವಂತೆ ಇದ್ದುಬಿಟ್ಟರು. ಆದರೆ ಅಜರ್ ಮಾತ್ರ ಎಲ್ಲರ ಪರಿಸ್ಥಿತಿಯ ಅನಿವಾರ್ಯತೆಯ ದಾಳವಾದರು. ಕೊನೆಗೂ ಬೇರನ್ನು ಕಿತ್ತು ಹಾಕದೆ ಕಾಣುವ ಫಲವನ್ನಷ್ಟೇ ಕೀಳಲಾಯಿತು. ಆನೆಯನ್ನು ಹೋಗಲು ಬಿಟ್ಟು ಕೊನೆಗೆ ಅದರ ಬಾಲವನ್ನ ಹಿಡಿದಿದ್ದಷ್ಟೇ ಸಾಧನೆಯಾಯಿತು.

“ಬೇಕಿದ್ರೆ ಸೂಕ್ಷ್ಮವಾಗಿ ಗಮನಿಸಿ. ಪಾಕ್ ವಿರುದ್ಧ ವರ್ಲ್ಡ್ ಕಪ್ ನಲ್ಲಿ ಆಡುವ ಅಜರ್ ಗೂ, ಅದೇ ಪಾಕ್ ವಿರುದ್ಧ ಶಾರ್ಜಾದಲ್ಲಿ ಆಡುವ ಅಜರ್ ಗೂ ಸಾಕಷ್ಟು ವ್ಯತ್ಯಾಸ ಇದೆ. ಎರಡೂ ಕಡೆಯಲ್ಲಿರೋದು ಒಬ್ಬನೇ ವ್ಯಕ್ತಿಯಾದರೂ ಎದುರಿಗಿರೋದು ಅದೇ ತಂಡವಾದರೂ ಅಜರುದ್ದೀನ್ ಮುಖಚರ್ಯೆ ಹಾಗೂ ಬಾಡಿ ಲಾಂಗ್ವೇಜ್ ನಲ್ಲಿ ದಿಢೀರ್ ಅಂತ ವ್ಯತ್ಯಾಸವಾಗ್ತದೆ ಅಂದ್ರೆ ಇದರ ಹಿಂದೆ ಯಾರ್ಯಾರು ಇದಾರೆ ಅನ್ನೋದನ್ನ ಕಲ್ಪನೆ ಮಾಡಿಕೊಳ್ಳಿ.”
“ಹಾಗಿದ್ರೆ ಬುಕ್ಕಿಗಳಿಗೆ ಅಷ್ಟೊಂದು ಬೇಕಾಗಿದ್ದ ವ್ಯಕ್ತಿ ಸಿಕ್ಕಿಬೀಳೋದಾದ್ರು ಹೇಗೆ..?”
“ಅಲ್ಲೇ ಇರೋದು ಪಾಯಿಂಟು..ಯಾವುದೋ ಅನಿವಾರ್ಯತೆಯಲ್ಲಿ ಸೋಲಬೇಕಾಗಿದ್ದ ಪಂದ್ಯವನ್ನು ಗೆಲ್ಲಿಸಿರಬೇಕು. ತಗೊಂಡಿದ್ದ ದುಡ್ಡಿಗೆ ಬೇರೆ ಪಂದ್ಯವನ್ನು ಬಿಟ್ಟು ಕೊಡುವ ಡೀಲ್ ಮಾಡಿರಬೇಕು. ಅದೇ ಎಡವಟ್ಟಾಗಿರೋದು. ಇಲ್ಲಿ ಡೀಲ್ ಮಾಡೋರೇ ಬೇರೆಯವರು. ಆಟಗಾರರು ಯಾವುದನ್ನು ನಿರ್ಧರಿಸುವಂತಿಲ್ಲ. ಇವರಿಗೆನಿದ್ದರೂ ಸಲ್ಲಬೇಕಾದದ್ದು ಸಲ್ಲುವುದಷ್ಟೇ. ಕಳ್ಳ ವಹಿವಾಟಾದರೇನು.? ಮಾತು, ನಿಯತ್ತು ಬಹಳಾನೇ ಇಂಪಾರ್ಟೆಂಟು. ಅದೇನಾದರೂ ತಪ್ಪಿದ್ರೆ ಮುಂದಾಗುವ ಅವಘಡಗಳಿಗೆ ಯಾರು ಬರೋಲ್ಲ. ಏನೇ ಆದರೂ ಕೊನೆಯಲ್ಲಿ ಯಾರಿಗೆ ಯಾರೂ ಇಲ್ಲ. ಅಜರ್ ಕೇಸ್ ನಲ್ಲೂ ಹೀಗೇ ಆಗಿರಬಹುದು.”
“ಅಂದ ಹಾಗೆ ಸ್ಮರಣೀಯ ಪಂದ್ಯಗಳನ್ನು ಗೆಲ್ಲಿಸುವುದರ ಹಿಂದೆಯೂ ಫಿಕ್ಸಿಂಗ್ ಇರಬಹುದಲ್ವ.”?
“ಇರಬಹುದು. ಆದರೆ ಫಿಕ್ಸಿಂಗ್ ಮಾಡಿ ಗೆದ್ದಿರೋದ್ಯಾವುದು ಮ್ಯಾಟರ್ ಆಗಲ್ಲ. ಅದಕ್ಕೆ ಯಾರು ತಕರಾರು ತೆಗೆಯೋಲ್ಲ. ಆದರೆ ದುಡ್ಡು ತಗೊಂಡು ಸೋತರೆ ಮಾತ್ರ ದೇಶದ್ರೋಹ ಅಂತಾಗುತ್ತೆ. ಲಂಚ ಕೊಟ್ರೆ ತಪ್ಪಲ್ಲ. ತಗೊಂಡ್ರಷ್ಟೇ ತಪ್ಪು.”
“ಅದ್ ಹಾಗೂ ಅಲ್ಲ. ಕಳ್ಳತನ ಮಾಡಿದ್ರೂ ತಪ್ಪಲ್ಲ. ಆದರೆ ಸಿಕ್ಕಾಕೋಬಾರದು ಅಷ್ಟೇ. ಇದು ಧೋರಣೆ. ಹಾಗಾಗಿಯೇ ಅಜರ್ ಕೊನೆಯಲ್ಲಿ ಏಕಾಂಗಿಯಾಗಿದ್ದು.”

“ಒಂದು ಕಡೆ ಶಾಪಿಂಗ್ ಹುಚ್ಚು. ಇನ್ನೊಂದೆಡೆ ತನಗಿಂತಲೂ ಜ್ಯೂನಿಯರ್ ಗಳೆಲ್ಲ ಜಾಹಿರಾತಿನಲ್ಲಿ ಬ್ಯುಸಿ ಆಗಿ ನೇಮು ಫೇಮು ಹಣ ಸಂಪಾದನೆ ಮಾಡ್ತಿರಬೇಕಾದ್ರೆ ಅದೇ ಸಮಯದಲ್ಲಿ ಸಿಕ್ಕ ಸೆಲೆಬ್ರಿಟಿ ಪತ್ನಿ ಸಂಗೀತ ಬಿಜಲಾನಿ ದೇವತೆಯಾಗಿದ್ದು…ಯಾರೋ ಕಿವಿಗೆ ಊದಿರಬೇಕು. ಒಟ್ಟಿನಲ್ಲಿ ದುಡ್ಡು ಮುಖ್ಯವಾಯಿತು. ಕಣ್ಣು ಕುರುಡಾಯಿತು. ದೇಶ ಮರೆತೋಯಿತು. ಮೊದಲ ಹತ್ತು ವರುಷ ಶುದ್ಧ ಕ್ರಿಕೆಟ್ ಆಡಿದ ಅಜರ್ ನಂತರ ಐದು ವರುಷ ರಂಗಿನ್ ಪ್ರಪಂಚದ ದಾಳವಾದರು ಅಷ್ಟೇ. ಇನ್ನು ರಾಯಲ್ ಫ್ಯಾಮಿಲಿಯಿಂದ ಬಂದ ಜಡೇಜಾನಿಗೆ ಇದೆಲ್ಲ ಬೇಕಾಗಿರಲಿಲ್ಲ. ಒಳ್ಳೆ ಭವಿಷ್ಯವಿತ್ತು. ತನ್ನ ಕೆರಿಯರ್ ಅನ್ನ ತಾನೇ ಹಾಳುಮಾಡಿಕೊಂಡ.”

ಊಸ್…!! ಎಲ್ಲಾ ಹತ್ತಿರದಿಂದ ಕೇಳಿಸಿಕೊಂಡ ನಮಗೆ ದಿಗ್ಭ್ರಮೆ, ಆಶ್ಚರ್ಯ..!! ಯಬ್ಬಾ… ಹೀಗೆಲ್ಲ ವಿಷಯ ಉಂಟಾ..? ಯಾವುದು ನಿಜ..! ಯಾವುದು ಸುಳ್ಳು..! ಯಾವುದನ್ನ ನಂಬೋದು..!! ಒಟ್ಟಾರೆ ಪುಲ್ ಕನ್ಫ್ಯೂಷನ್.!! ಹದಿನಾಲ್ಕನೆ ವಯಸ್ಸಿಗೆ ಒಂಥರಾ ಹೃದಯವೇ ಕಲಕಿದ ಅನುಭವ. ನಾಲ್ಕನೇ ವಯಸ್ಸಿಗೆ ಕ್ರಿಕೆಟ್ ಏನ್ ಸೈಕ್ಲೋಪೀಡಿಯಾ ಆಗಲು ಹೊರಟಿದ್ದ ನನ್ನ ಮನಸು ಯಾಕೋ ಇದಿಲ್ಲಿಗೆ ಸಾಕೆಂದು ನಿರ್ಧರಿಸಿತಾ…? ಗೊತ್ತಿಲ್ಲ… ನಂತರ ಗಂಗೂಲಿ, ಧೋನಿ ಯುಗವನ್ನು ನೋಡಿ ಖುಷಿ ಪಟ್ಟೆವಾದರೂ, ಕ್ರಿಕೆಟ್ ಮ್ಯಾಚ್ ಗಾಗಿ ಬಹಳ ದಿನಗಳಿಂದ ಕಾಯುತ್ತಿದ್ದ ಆ ಪ್ರಿಪರೇಷನ್, ಹಪಾಹಪಿ ಯಾವತ್ತಿಗೂ ಮತ್ತೆ ಬರಲಿಲ್ಲ. ನೋಡಿದ್ರೆ ನೋಡಿದೆವು, ಇಲ್ಲಾ ಅಂದ್ರೆ ಇಲ್ಲಾ ಅನ್ನೋ ತರಹ… ಅದು ಸೆಹ್ವಾಗ್, ಯುವರಾಜ್ ಅಂತವರು ಆಡ್ತಿದ್ರೆ ಒಂದು ಖುಷಿ ಅಷ್ಟೇ. ಈಗಂತೂ ಅವರಿಲ್ಲ. ಎಲ್ಲೋ ಮೊಬೈಲ್ ನಲ್ಲಿ ಮ್ಯಾಚ್ ನ ನ್ಯೂಸ್ ನ್ನೆನಾದರೂ ಸಡನ್ನಾಗಿ ನೋಡಿದ್ರೆ ಓಹ್.. ಇವತ್ತು ಮ್ಯಾಚ್ ಇತ್ತಾ..? ಗೊತ್ತೆ ಇರಲಿಲ್ಲ ಅನ್ನೋ ಪರಿಸ್ಥಿತಿ…!! ಎಲ್ಲಿಂದ ಎಲ್ಲಿಗೆ ಬಂದುಬಿಟ್ವಿ…!?   

| ಇನ್ನು ನಾಳೆಗೆ ।

‍ಲೇಖಕರು Admin

August 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: