ಮತ್ತೆ ಸಿಕ್ಕಿದ ಗುಲಾಬಿ ಬಣ್ಣದ ಚಪ್ಪಲಿಯೂ.. ಜೈಹಿಂದ್ ಹೋಟೆಲ್ ಪೂರಿಬಾಜಿಯೂ..

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು.

 ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

ನಾನು ಆರನೇ ವರ್ಗಕ್ಕೆ ಪ್ರವೇಶಿಸುವವರೆಗೂ ಅಪ್ಪನಿಗೆ ನನಗೊಂದು ಚಪ್ಪಲಿ ಕೊಡಿಸಬೆಕೆಂದು ಅನ್ನಿಸಿರಲಿಲ್ಲ.ಆರ್ಥಿಕ ತೊಂದರೆಯ ಜೊತೆಗೆ ಅದು ಅಷ್ಟು ಅವಶ್ಯಕ ವಸ್ತುಗಳ ಪಟ್ಟಿಯಲ್ಲಿ ಬರುತ್ತಿರದಿದ್ದುದೂ ಇದಕ್ಕೆ ಕಾರಣವಾಗಿರಲಿಕ್ಕೆ ಸಾಕು. ಹಾಗಾಗಿ ಬರಿಗಾಲಲ್ಲೇ ನಡೆದು ಎರಡು ಕಿ ಮೀ ದೂರದ ಶಾಲೆಗೆ ಹೋಗಿಬರುವುದು ನನಗೆ ರೂಢಿಯಾಗಿಬಿಟ್ಟಿತ್ತು. ತುಂಡು ಭೂಮಿಯ ರೈತ ಅಪ್ಪನನ್ನು ‘ ಚಪ್ಪಲಿಕೊಡಿಸು’ ಅಂತ ಕೇಳಲೂ ಮನಸ್ಸಾಗುತ್ತಿರಲಿಲ್ಲ.

ಸಹಪಾಠಿಗಳಲ್ಲಿ ಹೆಚ್ಚಿನವರನೇಕರು ಮೇಷ್ಟ್ರಮಕ್ಕಳೋ.. ಸಣ್ಣಪುಟ್ಟ ನೌಕರಿದಾರರ ಮಕ್ಕಳೋ ಆಗಿದ್ದರಿಂದ ಒಂದನೇ ವರ್ಗದಿಂದಲೇ ಚಪ್ಪಲಿ ಧರಿಸುತ್ತಿದ್ದರು. ಅವರ ಛತ್ರಿ ಬ್ಯಾಗು ಕಂಪಾಸು ನೋಡಿದಾಗಲೆಲ್ಲ, ಅದರ ಬಗೆಗಿನ ಅವರ ಅತಿರಂಜಿತ ವಿವರಣೆಗಳನ್ನು ಕೇಳಿದಾಗಲೆಲ್ಲ ವಿಪರೀತ ಕೀಳರಿಮೆ ಕಾಡುತ್ತಿತ್ತಾದರೂ ನನ್ನ ಪರಿಸ್ಥಿತಿಯ ಅರಿವಿದ್ದರಿಂದ ಅವರೊಂದಿಗೆ ಸಮಬಲವಾಗಲು ಸಾಧ್ಯವಾಗದೇ ಸುಮ್ಮನೆ ಇರುತ್ತಿದ್ದೆ.

ಚಪ್ಪಲಿ ಕೊಡಿಸಲು ಸಾಧ್ಯವಾಗದಿದ್ದರೂ ತಿಂಗಳಿಗೊಮ್ಮೆಯೋ ಎರಡುಬಾರಿಯೋ ಅಪ್ಪನಿಗೆ ನನ್ನನ್ನು ಪೇಟೆಗೆ ಕರೆದುಕೊಂಡು ಹೋಗಿ ಚಂದಮಾಮ,ಬಾಲಮಂಗಳ ಕೊಡಿಸುವುದರ ಜೊತೆ ಅಂಕೋಲೆಯ’ಜೈಹಿಂದ್ ಹೋಟೆಲ್’ ನಲ್ಲಿ ‘ಪುರಿಬಾಜಿ’ ಕೊಡಿಸುವ ಪ್ರೀತಿಯ ರೂಢಿಯಿತ್ತು.ಕ್ಯಾರಿಯರ್ ಮೇಲೆ ನನ್ನನ್ನು ಕುಳ್ಳಿಸಿಕೊಂಡು ಅರ್ಧ ಅಂಕೋಲೆಯವರೆಗೂ ಸೈಕಲ್ ದೂಡಿಕೊಂಡೇ ಹೋಗುತ್ತಿದ್ದ ಅಪ್ಪ ಇನ್ನರ್ಧ ದೂರವನ್ನು ಮುಂದೆ ಕುಳ್ಳಿಸಿಕೊಂಡು ಪೆಡಲ್ ತುಳಿಯುತ್ತಿದ್ದ.

ದಂಡಿನ ಮೇಲೆ ಕುಳಿತು ಬಲಕ್ಕೆ ಎರಡೂ ಕಾಲು ಇಳಿಬಿಟ್ಟು ‘ಇವನೆ ನೋಡು ಅನ್ನದಾತ’ಹಾಡು ಗುನುಗುತ್ತ ಬ್ಯಾಲೆನ್ಸ್ ಕಾದುಕೊಳ್ಳುತ್ತಿದ್ದ ನಾನು ಅಂಕೋಲೆ ಸುತ್ತಿಸುವ ನನ್ನಪ್ಪನ ಹಳೆಯ ಸೈಕಲ್ಲನ್ನು ದೇವರಂತೆ ನೋಡುತ್ತಿದ್ದೆ.

ಇನ್ನೇನು ಮುಗಿದೇ ಹೋಗುತ್ತದೆ ಎಂಬ ಬೇಸರಕ್ಕೆ ಚೂರುಚೂರೇ ಮುರಿದು ನಾನು ಪುರಿಬಾಜಿ ತಿನ್ನುತ್ತಿರುವಷ್ಟು ಹೊತ್ತು ಸಿಂಗಲ್ ಚಾ ಕುಡಿಯುತ್ತ ಗಲ್ಲೆಯ ಶೆಟ್ಟರೊಡನೆ ಲೋಕಾಭಿರಾಮ ಮಾತಾಡುತ್ತ ಕುಳಿತಿರುತ್ತಿದ್ದ ಅಪ್ಪ ತಾನು ಯಾಕೆ ಒಂದು ಪ್ಲೇಟ್ ತಿಂಡಿ ತಿನ್ನಬಾರದು ಎಂದು ಪ್ರತಿಬಾರಿಯೂ ನನಗೆ ಅನಿಸುತ್ತಿತ್ತಾದರೂ ಕೇವಲ ನಾನು ತಿನ್ನಬಹುದಾದಷ್ಟೇ ಹಣ ಅವನ ಕಿಶೆಯಲ್ಲಿದ್ದಿರಬಹುದು ಎಂಬ ಸದಾಸತ್ಯವಾದ ಊಹೆಯೊಂದು ನನ್ನ ತಲೆಯಲ್ಲಿ ಚಲಿಸುತ್ತಿದ್ದುದರಿಂದ ಸೊಲ್ಲೆತ್ತದೇ ತಿಂದು ಮುಗಿಸುತ್ತಿದ್ದೆ.

ಜೈಹಿಂದ್ ಹೊಟೇಲ್ ಮೆಟ್ಟಿಲಿಳಿದ ಮೇಲೆ ಸಮೀಪದ ಕಿರಾಣಿ ಅಂಗಡಿಯ ಜಗುಲಿಯ ಮೇಲೆ ಒಂದು ಹೊಲಿಗೆ ಮಷಿನ್ ಜೊತೆ ಪುಟ್ಟ ಟ್ರಂಕು ಇಟ್ಟುಕೊಂಡು ಕುಳ್ಳಿರುತ್ತಿದ್ದ ‘ಈಶ್ವರ ಟೇಲರ್’ ನೊಂದಿಗೆ ಅಪ್ಪ ಅರೆಗಳಿಗೆ ಮಾತಿಗೆ ಕೂರುತ್ತಿದ್ದ. ಉದ್ದದ ಪೆನ್ಸಿಲ್ಲೊಂದನ್ನು ಕಿವಿಗೆ ಸಿಕ್ಕಿಸಿ ಕೊರಳಿಗೆ ಟೇಪಿನ ಮಾಲೆ ಹಾಕಿ ರಸ್ತೆ ಮೇಲೆ ಸಾಗುವವರನ್ನೆಲ್ಲ ನಿರುಕಿಸುತ್ತ ಚಂದದ ಪ್ರಿಲ್ಲು ಕತ್ತರಿಸಿ ಅಂಟಿಸಿ ಪುಟ್ಟ ಪುಟಾಣಿ ಫ್ರಾಕುಗಳನ್ನು ಸೃಷ್ಟಿಸುವ ‘ ಹೊಲಿಗೆ ಈಶ್ವರ’ ಸಾಕ್ಷಾತ್ ದೇವಪುರುಷನಂತೆ ನನಗೆ ಗೋಚರಿಸುತ್ತಿದ್ದ.

ಅವನ ಎಣ್ಣೆಗಣಕಿನ ತಲೆಯ ಮೇಲೆ ಯಕ್ಷಗಾನದ ಕಿರೀಟವನ್ನಿಟ್ಟರೆ ಹೇಗೆ ಕಂಡಾನು.. ಎಂದು ಊಹಿಸುತ್ತ ನಾನು ಅವನ ಸುತ್ತಲೂ ಚಲ್ಲಿರುವ ರಂಗಬಿರಂಗೀ ಅರಿವೆಯ ತುಂಡುಗಳನ್ನು ಅಷ್ಟೇನೂ ಆಸಕ್ತಿ ಇಲ್ಲದವಳಂತೆ ನಟಿಸುತ್ತ, ಒಳಗೊಳಗೆ ಉತ್ಕಂಠಿತಳಾಗಿ ಮರುದಿನ ಶಾಲೆಯಲ್ಲಿ ಅವುಗಳಿಗಾಗಿ ನನ್ನ ಸುತ್ತ ನೆರೆಯಬಹುದಾದ ಹುಡುಗಿಯರ ಚಿತ್ರವನ್ನು ಕಣ್ಮುಂದೆ ತಂದುಕೊಳ್ಳುತ್ತ ಹೆಕ್ಕೆಕ್ಕಿ ಕಿಸೆ ತುಂಬುತ್ತಿದ್ದೆ.

ಅಷ್ಟೊತ್ತಿಗಾಗಲೇ ಅಪ್ಪ ನನ್ನ ಕಾಳಜಿಯನ್ನು ಈಶ್ವರನಿಗೆ ಒಪ್ಪಿಸಿ ಬೇಕಾದ ಚಿಕ್ಕಪುಟ್ಟ ಸಾನಾನು ಕೊಳ್ಳಲು ಹಾಗೂ ಒಂದೈದು ರೂಪಾಯಿಯ ತಾಜಾ ಮೀನು ತರಲು ಪೇಟೆಯ ಮೇಲ್ಬದಿಗೆ ಹೋಗಿಯಾಗಿರುತ್ತಿತ್ತು. ಮಳೆಗಾಲವಾಗಿದ್ದರೆ ಒಂದಿಷ್ಟು ಬಿಡಿ ಸೇವಂತಿ ಹೂಗಳನ್ನೂ, ಬೊಗಸೆಯಷ್ಟಗಲದ ಎರಡು ವಿಭಿನ್ನ ಬಣ್ಣದ ಡೇರೆ ಹೂಗಳನ್ನೂ ಆತ ತರುವುದು ನನಗೆ ಗ್ಯಾರಂಟಿ ಗೊತ್ತಿರುತ್ತದಾದ್ದರಿಂದ ಅಷ್ಟರವರೆಗಿನ ಬೇಸರ ಕಳೆಯಲು ನಾನು ಈಶ್ವರನ ಬಗಲಿಗೆ ಕುಳಿತು ಹೋಗಿ ಬರುವ ಜನರನ್ನೂ ಸೈಕಲ್ಲುಗಳನ್ನೂ ಲೆಕ್ಕಹಾಕುತ್ತ ಕುಳಿತಿರುತ್ತಿದ್ದೆ.

ಕಣ್ಣು ಹೊಲಿಗೆಯ ಮೇಲಿದ್ದರೂ ಲಕ್ಷ್ಯ ನನ್ನ ಬದಿಗೇ ಇಟ್ಟುಕೊಂಡು ನಾನು ನಾಲ್ಕು ಹೆಜ್ಜೆ ಮುಂದೆ ಹೋಗದಂತೆ ಈಶ್ವರ ಸದಾ ಕಾಯುತ್ತಿರುತ್ತಾನಾದ್ದರಿಂದ ಆ ಸಾಹಸಕ್ಕೆ ನಾನು ಕೈ ಹಾಕುತ್ತಿರಲಿಲ್ಲ.

ಇಂತಹುದೇ ಜಿಟಿಜಿಟಿ ಮಳೆ ಹೊಯ್ದು ಸ್ವಲ್ಪ ಹೊಳು ಕೊಟ್ಟ ಆರನೇ ವರ್ಗದ ಆರಂಭದ ದಿನಗಳಲ್ಲೊಮ್ಮೆ ಪೇಟೆಗೆ ಕರೆದುಕೊಂಡು ಹೋದ ಅಪ್ಪ ಪುರಿ-ಬಾಜಿ ತಿನ್ನಿಸಿ,ಪುಸ್ತಕ ಪಟ್ಟಿ ಪೆನ್ನು ಕೊಡಿಸುವುದರ ಜೊತೆ ನಾ ಕೇಳದೆಯೂ ಒಂದು ಜೊತೆ ಚಪ್ಪಲಿ ಕೊಡಿಸಿಬಿಟ್ಟಾಗ ಅಂಗಡಿಯಲ್ಲೇ ಕುಣಿದು ಕುಪ್ಪಳಿಸಿ ಬಿಡುವಷ್ಟು ಖುಷಿಯಾಗಿ ಹೋಗಿತ್ತು.ಆಗೆಲ್ಲ ಚಪ್ಪಲಿ ಅಂಗಡಿಗಳೆಂದರೆ ‘ಚಮ್ಮಾರರು’ ಮಾತ್ರ ಹಾಕಿಕೊಂಡಿರುತ್ತಿದ್ದ ಪುಟ್ಟ ಗೂಡಿನಂತಹ ಅಂಗಡಿಗಳು.. ಅಂಗಡಿ  ಮುಂದೆ ಒಂದು ಸಿಮೆಂಟ್ ಬಾನಿ ಮತ್ತರಲ್ಲಿ ಸದಾ ಹಿಗ್ಗುತ್ತಿರುತ್ತಿದ್ದ ಚರ್ಮದ ಹಾಳೆ.

ಅದನ್ನು ಕತ್ತರಿಸಿ ತಾವೇ ಹೊಲೆದ ನಾಲ್ಕೈದು ಜುರಕಿ ಜೋಡುಗಳನ್ನು ಗೋಡೆಗೆ ಮೊಳೆ ಹೊಡೆದು ತೂಗಿರುತ್ತಿದ್ದರು ಅವರು.. ಜೊತೆಗೆ ಮಕ್ಕಳಿಗಾಗಿ ಹುಬ್ಬಳ್ಳಿ ಪೇಟೆಯಿಂದ ತರಿಸಿದ ಒಂದು ಹತ್ತು ಜೋಡಿ ಪ್ಲಾಸ್ಟಿಕ್ ಚಪ್ಪಲಿಗಳು.. ಹೊಸ ಚಪ್ಪಲಿ ವ್ಯಾಪಾರಕ್ಕಿಂತ ಹಳೆ ಚಪ್ಪಲಿಗಳ ಉಂಗುಷ್ಟ ರಿಪೇರಿ, ಹೊಲಿಗೆ, ಮೊಳೆಹೊಡೆಯುವುದರಲ್ಲೇ ಅವರ ಜೀವಮಾನ ಪೂರ ಸವೆಯುತ್ತಿತ್ತು.

ಅಪ್ಪನೂ ಚರ್ಮದ ಅಟ್ಟೆಯ ತನ್ನ ಚಪ್ಪಲಿಯನ್ನು ಆಗಾಗ ಕೊಬ್ಬರಿ ಎಣ್ಣೆಯಿಂದ ಮಾಲೀಶ್ ಮಾಡುತ್ತ ಹತ್ತಾರು ವರ್ಷ ಬಾಳಿಕೆ ಬರಿಸಿಕೊಳ್ತಿದ್ದ. ಹತ್ತು ಹನ್ನೆರಡು ರೂಪಾಯಿಯ ಪ್ಲ್ಯಾಸ್ಟಿಕ್ ಚಪ್ಪಲಿ ಕಾಲಿಗೆ ತಾಕಿ ಹುಣ್ಣಾದೀತು ಅಂತ ಅಪ್ಪ ಇನ್ನೂ ಹತ್ತು ರೂ ಹೆಚ್ಚಿಗೆ ಕೊಟ್ಟು ಗುಲಾಬಿಬಣ್ಣದ ಹಿಮ್ಮಡಿ ಎತ್ತರದ ಮೆತ್ತಗಿನ ನೈಲಾನ್ ಚಪ್ಪಲಿ ಕೊಡಿಸಿದ್ದ.
ಕಳೆದೀತು.. ಬಣ್ಣ ಮಾಸೀತು.. ಸವೆದೀತು.. ಎಂದು ತಿಂಗಳೆರಡು ತಿಂಗಳು ಒಳಗೇ ಮುಚ್ಚಿಟ್ಟುಕೊಂಡು ಸಮಯ ಸಿಕ್ಕಾಗ ಮುಟ್ಟುವುದು ಸವರುವುದು ಒರೆಸಿ ಹಾಗೇ ಮತ್ತೆ ಮುಚ್ಚಿಡುವುದು ಹೀಗೇ ನಡೆದಿತ್ತು ನನ್ನ ಚಪ್ಪಲಿ ಸೇವೆ.

ಮಳೆಗಾಲ ಬೇರೆ; ಐದನೇ ವರ್ಗದಲ್ಲಿರೋವಾಗ ಗೆಳತಿಯೊಬ್ಬಳ ಚಪ್ಪಲಿ ಜೋರುಮಳೆಯ ಹರಿವ ನೀರಲ್ಲಿ ಕೊಚ್ಚಿ ಹೋಗಿ… ಅವಳು ಮನೆ ತಲುಪುವ ತನಕವೂ ಅಳುತ್ತಿದ್ದುದು ಕಣ್ಣಿಗೆ ಕಟ್ಟಿದಂತೆ ಈಗಲೂ ಇತ್ತು. ಹಾಗಾಗಿ “ಹಾಕ್ಕಂಡು ಹೋಗೇ” ಅಂತ ಅಮ್ಮ ಉದಾರವಾಗಿ ಹೇಳುತ್ತಿದ್ದರೂ ನಾನೇ ತಡೆದುಕೊಂಡಿದ್ದೆ.”ಚಪ್ಪಲಿ ಕೊಡಿಸಿದ್ದಾರೆ ಅಂತ ಸುಳ್ಳುಪಳ್ಳೇ ಹೇಳ್ತಾಳೆ” ಅನ್ನುತ್ತ ಮುಸಿಮುಸಿ ನಗುತ್ತಿದ್ದ ಗೆಳತಿಯರನ್ನು ಮನೆ ಹತ್ರ ಕರೆದು ಕಾಗದದಲಿ ಸುತ್ತಿ ಡಾಂಬರ್ ಗುಳಿಗೆ ಹಾಕಿಟ್ಟ ಚಪ್ಪಲಿ ತೋರಿಸಿ ಅಸೂಯೆ ಹುಟ್ಟಿಸಿ ಬಿಳ್ಕೊಟ್ಟೂ ಆಗಿತ್ತು.

ಹಾಗೂ ಹೀಗೂ ಒಳಗೆ ಮುಚ್ಚಿಟ್ಟೂ ಇಟ್ಟು ಚಪ್ಪಲಿ ಬೇಸರ ಬರಿಸತೊಡಗಿತ್ತು. ಮಳೆ ಕಡಿಮೆಯಾದ ಒಂದು ಶುಭದಿನ ಹೊರತೆಗೆಯುವುದೆಂದು ನಿರ್ಧರಿಸಿದ್ದೆ. ತೊಡುವ ಸಂಭ್ರಮ ನೆನೆದು ಹಿಂದಿನ ರಾತ್ರಿ ಅರೆನಿದ್ರೆಯಲ್ಲಿ ಹೊರಳಾಡಿದ್ದೇ ಹೊರಳಾಡಿದ್ದು.. ಅಂತೂ ಬೆಳಗಾಗಿ ಅಮ್ಮನ ಕೈಲಿ ಜಡೆ ಹೊಯ್ಸುಕೊಂಡು ಖಾಕಿ ಪಾಟಿಚೀಲ ಹೆಗಲಿಗೇರಿಸಿ ಚಪ್ಪಲಿ ಧರಿಸಿ ಮನೆಯಿಂದ ಹೊರಬಿದ್ದಿದ್ದೆ. ಹೆಜ್ಜೆಗಳು ಕುಣಿಯುತ್ತಿದ್ದವು.

“ಬರುವಾಗ ಹಾಕ್ಕೊಂಡು ಬರೋದು ಮರಿಬೇಡ” ಎಂಬ ಅಮ್ಮನ ಮಾತು ನೆನಪಿಸಿಕೊಳ್ಳುತ್ತ ಹಾದಿ ಸವೆಸುವಾಗ ಎಂದೂ ಅಷ್ಟಾಗಿ ಗಮನಿಸದ ರಸ್ತೆ ಮೇಲಿನ ಸೆಗಣಿ ತೊಪ್ಪೆಗಳು ಇಂದು ಜಾಸ್ತಿ ಕಾಣಿಸಿ ಊರ ತುಂಬ ಇರುವ ದನಗಳನ್ನು ಶಪಿಸುತ್ತ ಎಲ್ಲ ಸಗಣಿಯಿಂದಲೂ ಪಾರಾಗಿ ಶಾಲೆ ತಲುಪುವದರೊಳಗೆ ಚಪ್ಪಲಿ ತಕ್ಕಮಟ್ಟಿಗೆ ಎಲ್ಲರ ಗಮನ ಸೆಳೆದಿತ್ತು..

ಎಲ್ಲರ ಹತ್ರ ಇರುವ ಕಡಿಮೆ ಬೆಲೆಯ ಸಪಾಟು ಪ್ಲ್ಯಾಸ್ಟಿಕ್ ಚಪ್ಪಲಿಗಿಂತ ತುಸು ಚಂದದ ಹಿಮ್ಮಡಿ ಎತ್ತರದ ಇದನ್ನು ನೋಡಲು, ಮುಟ್ಟಲು ಪೈಪೋಟಿ ಶಾಲೆ ತುಂಬ.. ಅಂತೂ ಇಂತೂ ಎಲ್ಲ ಮುಗಿದು ಎಲ್ಲರೂ ಚಪ್ಪಲಿ ಬಿಡುವ ವರಾಂಡದ ಮೂಲೆಯಲ್ಲಿ ಚಪ್ಪಲಿ ಬಿಟ್ಟು ಒಳ ಬಂದು ಕುಳಿತರೂ ಧ್ಯಾನ ಪೂರ್ತಿ ಹೊರಗೇ…. ಅವಕಾಶ ಸಿಕ್ಕಾಗಲೆಲ್ಲ ಹೋಗಿ ಅದು ಇಟ್ಟಲ್ಲೇ ಇದೆಯೋ ಎಂದು ನೋಡಿಕೊಂಡುಬರುವುದೇ ಕೆಲಸ.. ಸಂಜೆ ಆಟಕ್ಕೆ ಬಿಟ್ಟಾಗ ಕುಣಿ ,ಓಡು, ಜಿಗಿ ಅಂತ ಚಪ್ಪಲಿ ಹಾಳಾಗುತ್ತದೆ ಹಾಗಾಗಿ ಅದನ್ನು ಹಾಕದೇ ಹಾಗೇ ಆಟಕ್ಕೆ ಹೋಗುವುದು ಎಲ್ಲ ಮಕ್ಕಳ ರೂಢಿ.. ನಾನೂ ಹಾಗೆಯೇ ಹೋದೆ .ಗಂಟೆಯಾಗಿ ಆಟ ಮುಗಿದು ಪಾಟಿಚೀಲ ಎತ್ತಿಕೊಂಡು ಮನೆಗೆ ಓಡಿ ಬರುವಾಗ ಅದ್ಯಾವ ಮಾಯಕದಲ್ಲೋ ಚಪ್ಪಲಿ ನೆನಪೇ ಆಗದೇ ಮರೆವಿನ ಮಾಯಾಜಾಲ ಬೀಸಿಬಿಟ್ಟಿತ್ತು.

ತಿಂಗಳುಗಳಿಂದ ಉಸಿರಲ್ಲಿ ಉಸಿರಾಗಿ ಬೆರೆತಿದ್ದ ,ದೈನಂದಿನ ಎಲ್ಲ ಕೆಲಸಗಳ ಮಧ್ಯೆ ಮೆದುಳಿನ ಒಂದು ಬದಿಯಲ್ಲಿ ಶಾಶ್ವತ ಠಿಕಾಣಿ ಹೂಡಿದ್ದ ಅದು ಯಾರೋ ಒಬ್ಬರು ನೆನಪಿಸುವವರೆಗೂ ನೆನಪಿಗೆ ಬರದೇ ಇದ್ದುದು ನನ್ನ ದುರ್ದೈವವಲ್ಲದೆ ಇನ್ನೇನು…? ಅರ್ಧ ದಾರಿ ಕ್ರಮಿಸಿಯಾಗಿತ್ತು ಅಳು ಉಕ್ಕುಕ್ಕಿ ಜಾರಿಯಲ್ಲಿತ್ತು. ಜೊತೆಗಿದ್ದವರೆಲ್ಲ ನನ್ನ ಚಪ್ಪಲಿ ಮರೆವಿನ ಸಂಗತಿಯನ್ನು ಒಳಗೊಳಗೆ ಮಹಾ ಸಂಭ್ರಮದಿಂದ ಆಸ್ವಾದಿಸುತ್ತ.. ಹೊರಗೆ “ಅಯ್ಯೋ ಪಾಪ’ ಎಂಬ ಮುಖಭಾವದೊಂದಿಗೆ ಕಂಗೊಳಿಸುತ್ತ ” ಈಗೇನ್ ಮಾಡ್ತಿ ,ಈಗೇನ್ ಮಾಡ್ತಿ” ಎಂದು ಕೇಳತೊಡಗಿದ್ದರು..

ಜಿಟಿಜಿಟಿ ಮಳೆ. ಹಿಂತಿರುಗಿ ಹೋಗಿ ನೋಡಿಕೊಂಡು ಬರೋಣವೆಂದರೆ ಜೊತೆಯಾಗಲು ಯಾರೂ ಒಪ್ಪಲಿಲ್ಲ.. ನಿರ್ಜನ ಹಾದಿ ಒಬ್ಬಳೇ ಹೋಗಲು ಭಯ.. ಉಪಾಯಗಾಣದೇ ಅಳುತ್ತಳುತ್ತಲೇ ಮನೆಗೆ ಬಂದೆ. ಅಮ್ಮ ನಾಕು ಮಾತು ಅಂದಳು.. ಅಪ್ಪನದು ಮೌನ. ಅವನ ಮೌನವೆಂದರೆ ಇನ್ನೂ ನಾಲ್ಕಾರು ವರ್ಷ ಚಪ್ಪಲಿ ಕೊಡಿಸದ ಶಿಕ್ಷೆ ಎಂದು ಗೊತ್ತಿದ್ದರಿಂದ ರಾತ್ರಿ ಪೂರ ನಿದ್ದೆಯಿಲ್ಲದೇ ಕಳೆದು ಬೆಳಿಗ್ಗೆ ಬೇಗನೆ ಹೊರಬಿದ್ದೆ. ಓಡೋಡುತ್ತಲೇ ಶಾಲೆ ತಲುಪಿ ಹುಡುಕಿದರೆ ಅಲ್ಲೆಲ್ಲಿದೆ ಚಪ್ಪಲಿ..? ನಿರ್ಜನ ಕಾರಿಡಾರು ‘ನಿನ್ನ ಹಣೆಯಲ್ಲಿ ಇನ್ನು ಮುಂದೆ ಚಪ್ಪಲಿ ಧರಿಸುವುದು ಬರೆದೇ ಇಲ್ಲ’ ಎಂದು ಅಣಕಿಸಿದಂತಾಗಿತ್ತು..

ನನ್ನ ಅಳು ನೋಡಲಾಗದೆ ಶಿಕ್ಷಕರು ಪ್ರಾರ್ಥನೆಯಲ್ಲಿ ‘ಚಪ್ಪಲಿ ಹಾಕಿಕೊಂಡು ಹೋದವರು ಅಲ್ಲೇ ಅದೇ ಜಾಗದಲ್ಲಿಪ ತಂದಿಡಿ ‘ಎಂದು ಮಾರಿ ಮಸಣಿ ದೆವ್ವ ದೇವರ ಭಯ ಹುಟ್ಟಿಸಿದರು.. ಪುಸಲಾವಣೆ ಮಾಡಿಯೂ ಹೇಳಿದರು.. ಮರುದಿನ ಮರೆತೂ ಬಿಟ್ಟರು.

ಅವರು ಮರೆತರೂ ನನಗೆ ನನ್ನ ಪುಟ್ಟ ಗುಲಾಬಿ ಬಣ್ಣದ ಜೋಡಿ ಚಂದದ ಚಪ್ಪಲಿಯನ್ನು ಮರೆಯಲಾದೀತೇ..? ಕಳಚಿಟ್ಟು ಒಂದೇ ದಿನಕ್ಕೆ ಅದು ಕಳೆದು ಹೋದ ಜಾಗದಲ್ಲಿ ಆಗಾಗ ಹೋಗಿ ನಿಂತು ನೋಡುತ್ತಿದ್ದೆ. ಹೀಗೆ ಸುಮಾರು ಒಂದು ತಿಂಗಳು ನೋಡಿ ‘ಕದ್ದುಕೊಂಡು ಹೋದವರು ಮತ್ತೆ ಶಾಲೆಗದನ್ನು ಹಾಕ್ಕೊಂಡು ಬಂದಾರೆಯೇ.. ನಿನಗೆಲ್ಲೋ ಭ್ರಾಂತು..’ಎಂದು ಅವ್ವ ಹೇಳಿದ ಮೇಲೆ ನಿಲ್ಲಿಸಿಬಿಟ್ಟೆ. ಮತ್ತೆ ಬರಿಗಾಲು ಮಾಮೂಲಿಯಾಗಿತ್ತು.

ಇನ್ನೂ ಎರಡು ತಿಂಗಳು ಕಳೆದು ಚಪ್ಪಲಿ ನೆನಪು ಕ್ರಮೇಣ ಮಾಸತೊಡಗಿತ್ತು. ನಾನು ‘ಆ’ ಜಾಗಕ್ಕೆ ಹೋಗಿ ನೋಡುತ್ತಿಲ್ಲ ಈಗ ಎಂಬುದು ಪಕ್ಕಾ ಆದ ಮೇಲೆ ಚಪ್ಪಲಿ ಒಯ್ದ ಹುಡುಗಿ ಅದನ್ನು ಶಾಲೆಗೆ ಹಾಕಿಕೊಂಡು ಬರಲಾರಂಭಿಸಿದಳು. ಅದು ನನಗೆ ಗೊತ್ತೂ ಇರಲಿಲ್ಲ.. ಒಂದು ಶುಭದಿನ ಆ ತಿಂಗಳ ವರ್ಗದ ಮುಖ್ಯಮಂತ್ರಿ ನಾನಾಗಿದ್ದರಿಂದ ತರಗತಿ ಆರಂಭಕ್ಕೆ ಮುನ್ನ ಹೆಡ್ ಮಾಸ್ಟರ್ ರೂಮಿನಿಂದ ಖಡು ತರಲು ಹೊರಟಿದ್ದೆ. ಚಪ್ಪಲಿ ಬಿಡುವ ಜಾಗದಿಂದಲೇ ಅಲ್ಲಿಗೆ ಹೋಗಬೇಕು. ಕೂತೂಹಲಕ್ಕಾದರೂ ಆ ಕಡೆ ನೋಡುವ ಇಚ್ಛೆ ಇಲ್ಲದ ನನ್ನನ್ನು ನನ್ನ ಆರನೇ ಇಂದ್ರಿಯ ಆ ಕಡೆ ನೋಡು ನೋಡು ಎಂದು ದಮ್ಮಯ್ಯಗುಡ್ಡೆ ಹಾಕುತ್ತಿತ್ತು.

ತಡೆಯಲಾರದೆ ನೋಡಿದರೆ ಕಣ್ಣು ಅಲ್ಲೇ ಕೀಲಿಸಿಬಿಡಬೇಕೇ..? ಹೌದು ಅದೇ ಅದೇ ನನ್ನದೇ ಚಪ್ಪಲಿ.. ಚೂರೂ ಹಳತಾಗದೆ “ಹೊಸ ಹುಡುಗಿ ಕೂಡ ನನ್ನನ್ನು ಅಷ್ಟಾಗಿ ಬಳಸಿಲ್ಲ.. ನೀನೇನೂ ಗಾಬರಿ ಪಡಬೇಡ” ಎಂದು ಅಲ್ಲಿಂದಲೇ ಸಮಾಧಾನ ಮಾಡುವಂತಿತ್ತು. ನಿಂತೆ, ಮುಟ್ಟಿನೊಡಿದೆ, ಹಾಕಿನೋಡಿದೆ. ಎಲ್ಲರೂ ಒಳಗಿದ್ದುದರಿಂದ ನನ್ನ ಈ ಕ್ರಿಯೆ ಯಾರಿಗೂ ಕಾಣಿಸುತ್ತಿರಲಿಲ್ಲ.. ಹೌದು ಇದು ನನ್ನದೇ ಚಪ್ಪಲಿ. ಅಂತದ್ದೊಂದು ಚಪ್ಪಲಿ ಇಡೀ ಶಾಲೆಯಲ್ಲಿ ಯಾರ ಹತ್ತಿರವೂ ಇಲ್ಲ. ಹಾಕಿದ್ದು ಒಂದೇ ದಿನವಾದರೂ ತಿಂಗಳಾನುಗಟ್ಟಲೆ ಮುಟ್ಟಿ, ಸವರಿದ ಅನುಭವ ಉಂಟು ನನಗೆ..

ಯಾವಾಗ ಖಡು ತಂದೆನೋ ಪಾಠ ಕೇಳಿದೆನೋ ಅರಿವೇ ಆಗಲಿಲ್ಲ . ಸಂಗತಿಯನ್ನು ಸಹಪಾಠಿಗಳ ಹತ್ರ ಹೇಳಿಕೊಂಡರೆ ಕದ್ದವಳಿಗೂ ಗೊತ್ತಾಗಿ ಚಪ್ಪಲಿ ಮಾಯವಾಗಿಬಿಡೋ ಗುಮಾನಿ ಇದ್ದುದರಿಂದ ಚಡಪಡಿಸುತ್ತ ಕಾಲಕಳೆದೆ. ಲಘು ವಿಶ್ರಾಂತಿಯ ಅವಧಿಯಲ್ಲಿ ಯಾರು ಆ ಚಪ್ಪಲಿಯ ಪ್ರಸಕ್ತ ಒಡತಿ ಎಂದು ದೂರದಿಂದಲೇ ನೋಡಿಕೊಂಡೆ. ಅಂತರ ಕಾಯ್ದುಕೊಂಡೇ ಬೆನ್ನತ್ತಿದೆ. ಅದನ್ನು ಧರಿಸಿಯೇ ಅವಳು ಜಿಗಿಯುವುದು,ಕುಣಿಯುವುದು ಮಾಡಿದಾಗಲೆಲ್ಲ ಹೊಟ್ಟೆಯಲ್ಲಿ ಕತ್ತರಿಯಾಡಿಸಿದಂತಾಗ್ತಿತ್ತು.

ಮರುದಿನ ಶನಿವಾರ.. ಒಪ್ಪತ್ತು ಶಾಲೆ.. ಹಾಗಾಗಿ ನನ್ನ ತಡೆದುಕೊಳ್ಳುವಿಕೆ ಬಹಳ ಹೊತ್ತು ನಡೆಯಲಿಲ್ಲ. ಏನೇನು ಮಾಡಬೇಕು ಎಂಬುದನ್ನು ನಿರ್ಧರಿಸಿಕೊಂಡು ಮನೆಬಿಡುವ ಬೆಲ್ ಆದ ಕೂಡಲೇ ಓಡಿಹೋಗಿ ಮೊದಲು ಚಪ್ಪಲಿ ಹಾಕಿಕೊಂಡೆ. ಹೇಡಿಯಂತೆ ಮನೆಗೆ ಓಡಲು ಮನಸ್ಸೊಪ್ಪಲಿಲ್ಲ. ಅಲ್ಲೇ ನಿಂತೆ. ಹುಡುಗಿ ಬಂದಳು. ನನ್ನ ಕಾಲಲ್ಲಿಯ ಚಪ್ಪಲಿ ನೋಡಿ ಅಧೀರಳಾದಳು.. ನನ್ನ ಪೀಚಲು ಕೈ ಅಲುಗಿಸುತ್ತ “ಅದು ನಂದು” ಎಂದು ಕುಂಯ್ ಕುಂಯ್ ಮಾಡತೊಡಗಿದಳು.. ಅದೆಲ್ಲಿತ್ತೋ ನನಗೆ ಮಾರಾಶಿ ಧೈರ್ಯ.. “ಹೌದಾ !! ನಿಂದಾ ಚಪ್ಪಲಿ..? ನಡೀ ಹೆಡ್ ಮಾಸ್ಟರ್ ರೂಮಿಗೆ..

ಅವರಿಗೆ ಪಕ್ಕಾ ಗೊತ್ತಿದೆ ಯಾರ ಚಪ್ಪಲಿ ಯಾವುದು ಅಂತ ಅವರೇ ಗುರ್ತು ಹಿಡಿಯಲಿ. ಪೋಲೀಸ್ ಕಂಪ್ಲೇಂಟ್ ಕೂಡ ಕೊಟ್ಟಿದೇವೆ ನಿನ್ನ ತಕ್ಕೊಂಡು ಹೋಗಿ ಜೈಲಿಗೆ ತುಂಬ್ತಾರೆ ಈಗ.. ಟೀಚರ್ ತಂದಿಡು ಅಂತ ಹೇಳಿದರೂ ಇಡಲಿಲ್ಲ ಅಲ್ವಾ.. ನಿಂಗಿದೆ ಬಂಡಿ ಹಬ್ಬ” ಎನ್ನುತ್ತ ಅವಳ ಕೈ ಹಿಡಿದು ಹೆಡ್ ಮಾಸ್ಟರ್ ರೂಂ ಕಡೆ ಎಳೆಯಲಾರಂಭಿಸಿದೆ.. ಹುಡುಗಿ ದಂಗಾಗಿಬಿಟ್ಟಳು. ಹಿಡಿ ಕಡ್ಡಿಯಲ್ಲಿ ಹೊಡೆತಬಿದ್ದ ನಾಯಿಮರಿಯಂತೆ ಹಿಂದೆ ಹಿಂದೆ ಸರಿಯಲಾರಂಭಿಸಿದಳು..

ಆಗ ನನಗಿದ್ದ ‘ಪಾಪ ಚಪ್ಪಲಿ ಅವಳದ್ದಾಗಿರಲಿಕ್ಕೂ ಸಾಕು’ ಎಂಬ ಒಂದು ಶೇಕಡಾ ಅನುಮಾನವೂ ಹಾರಿಹೋಗಿ ಇದು ಪಕ್ಕಾ ನಂದೇ ಚಪ್ಪಲಿ ಎಂಬ ಪ್ರೀತಿ ಉಕ್ಕುಕ್ಕಿ ಬಂದು ಆ ನಂಬಿಕೆ ಭದ್ರತೆ ವಿಶ್ವಾಸಕ್ಕೆ ಧ್ವನಿ ಇನ್ನಷ್ಟು ಜೋರುಮಾಡಿದೆ. ‘ಏನಾಯ್ತು ಏನಾಯ್ತು ‘ ಎಂಬ ಮಕ್ಕಳ ಗುಂಪು ದೊಡ್ಡದಾಗುತ್ತ ಬಂತು.. ಈ ಮಧ್ಯೆ ಹುಡುಗಿ ಯಾವಾಗ ನುಸುಳಿ ಮಾಯವಾಗಿಬಿಟ್ಟಳೋ ಗೊತ್ತಾಗಲೇ ಇಲ್ಲ.. ‘ಯಾರಾಗಿದ್ದಳು ನಿನ್ನ ಚಪ್ಪಲಿ ಕದ್ದವಳು’ ಎಂಬ ಪ್ರಶ್ನೆ ಎಲ್ಲ ಕಡೆಗಿಂದ ಮುತ್ತಿದರೂ ನಾಳೆ ಅವಳನ್ನು ಇವರೆಲ್ಲ ಕೂಡಿ ಕಳ್ಳಿ ಅಂತ ಕರೀತಾರೆ ಅಂತ ಗೊತ್ತಿದ್ದರಿಂದ, ಸಿಕ್ಕಿಬಿದ್ದು ಹಿಂದೆ ಸರಿಯುವಾಗ ಅವಳ ಬಾಡಿದ ಮುಖಭಾವ ಕೂಡ ಕಣ್ಮುಂದೆ ಬಂದುದರಿಂದ ಹೆಸರು ಹೇಳಲು ಮನಸ್ಸು ಒಪ್ಪಲಿಲ್ಲ.

ಹೆಸರು ಗೊತ್ತಿಲ್ಲ ಎಂದು ತಪ್ಪಿಸಿಕೊಂಡೆ. ಆಗ ಒಂದೊಂದು ವರ್ಗದಲ್ಲಿಯೂ ಎಂಬತ್ತರ ಮೇಲೆ ವಿದ್ಯಾರ್ಥಿಗಳಿರುತ್ತಿದ್ದರು. ಹೆಸರು ಎಲ್ಲರದೂ ಗೊತ್ತಿರದಿರುವಿಕೆ ನಿಜವೂ ಆಗಿತ್ತು.. ಸರಿ.. ಚಪ್ಪಲಿ ಧರಿಸಿ ಮನೆಗೆ ಬಂದವಳು ಯಾರೇನೇ ಒತ್ತಾಯ ಮಾಡಿದರೂ ಏಳನೇ ವರ್ಗ ಮುಗಿಯುವ ತನಕ ಶಾಲೆಗೆ ಚಪ್ಪಲಿ ಹಾಕಲಿಲ್ಲ. ಮನೆಯಲ್ಲೇ ತಿರುಗಾಡಿ ಅಪ್ಪನ ಜೊತೆ ಮತ್ತೆ ಪುರಿಬಾಜಿ ತಿನ್ನಲು ಅಂಕೋಲೆಗೆ ಹೋಗಿಬಂದು ಚಪ್ಪಲಿ ಸಣ್ಣಾಯಿತು.. ಕಾಲು ದೊಡ್ಡಾಯಿತು..

ಎಂಟನೇ ವರ್ಗಕ್ಕೆ ಹೊಸಚಪ್ಪಲಿ ಬಂತು..ಆ ಮೇಲೆಯೂ ಇಲ್ಲಿಯವರೆಗೆ ನೂರಾರು ಚಪ್ಪಲಿಗಳು ಹಾಕಿ ಹರಿದು ಸವೆದು ಹೋದವು…. ಆದರೆ ಈ ಗುಲಾಬಿ ಬಣ್ಣದ, ಹಿಮ್ಮಡಿ ಎತ್ತರದ , ನಾಲ್ಕು ಬೆಲ್ಟಿನ, ಮೇಲೊಂದು ಪುಟ್ಟ ಹಳದಿ ಹೂವಿದ್ದ ಚಪ್ಪಲಿ ಕಣ್ಮುಂದೆ ಬಂದ ಹಾಗೆ ಯಾವುದೂ ಬರಲಿಲ್ಲ.. ನಾನು ಮದುವೆಯಾಗುವವರೆಗೂ ಹಾಗೇ ಇತ್ತು ಅದು ಚೂರೂ ಹಳತಾಗದೇ,ಬಣ್ಣ ಕಳೆದುಕೊಳ್ಳದೇ..

ದೊಡ್ಡವಳಾದ ಮೇಲೆ ಕಾಲು ಹಾಕಲು ಬರದ ಅದರಲ್ಲಿ ಕೈ ಹೊಕ್ಕಿಸಿ ನೋಡುತ್ತಿದ್ದೆ.. ಇದೆಲ್ಲ ಮಳ್ಳು ಅಂತ ಯಾರಿಗೂ ಅನಿಸಲ್ಲ ಗೊತ್ತು ನನಗೆ..ಯಾಕೆಂದರೆ ಎಲ್ಲರಿಗೂ ಅವರವರ ಮೊದಲ ಇಷ್ಟದ ವಸ್ತುಗಳು.. ಅದು ಲಭಿಸಿದ್ದು… ಅದರೊಂದಿಗಿನ ನೆನಪು ಎಲ್ಲವೂ ಇದ್ದೇ ಇರುತ್ತದೆ…ಅಲ್ವಾ..

September 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಗೀತಾ ಎನ್ ಸ್ವಾಮಿ

    ಅನುಭವ ಸಹಜವಾದ ನೆನಪುಗಳೊಂದಿಗೆ ಕಾಡುತ್ತಿದೆ ಮೇಡಂ. ಹೆಚ್ಚು ಕಡಿಮೆ ಹೈಸ್ಕೂಲ್ ಮುಗಿಸುವವರೆಗೂ ಚಪ್ಪಲಿ ಇಲ್ಲದೆ ಎಂಟು ಫರ್ಲಾಂಗು ಗುಡ್ಡ ಹತ್ತಿ ಇಳಿದು ನಡೆದೇ ಶಾಲೆಗೆ ಹೋಗುತ್ತಿದ್ದ ದಿನಗಳು ನೆನಪಿನ ವಲಯದಲ್ಲಿ ಬಂದು ಕುಳಿತಿವೆ….
    ಬಾಲ್ಯದ ಕಡೆಗೆ ಮತ್ತೆ ಕಳಿಸಿದ ಚೆಂದದ ದಾಖಲೆ ಮೇಡಂ.
    ಹುಲಿಮನೆ ಮಂಜಣ್ಣನ ದಪ್ಪ ಹಾಲಿನ ಚಹಾ ಕುಡಿಯಲು ಒಮ್ಮೆ ನಿಮ್ಮ ಅಂಕೋಲೆಗೆ ಬರಬೇಕು….ನೋಡೇ ಇಲ್ಲ ಆ ಪ್ರದೇಶವನ್ನು…. ಒಂದಕ್ಕಿಂತ ಒಂದು ಚೆಂದದ ಬರಹಗಳು…..

    ಪ್ರತಿಕ್ರಿಯೆ
  2. ರೇಣುಕಾ ರಮಾನಂದ

    ಗೀತಾ ಮೇಡಂ.. ಆಗ ಪ್ರತಿಯೊಬ್ಬ ಪುಟ್ಟ ಹುಡುಗಿಯ ಬದುಕಿನಲ್ಲೂ ಮೊದಲ ಚಪ್ಪಲಿ ಸಿಗೋದು ಹತ್ತು ಹದಿನೈದು ವರ್ಷದ ನಂತರವೇ ಆಗಿತ್ತು..ಹಾಗಾಗಿ ಅದರ ನೆನಪು ಶಾಶ್ವತ..ಖಂಡಿತ ನಮ್ಮೂರಿಗೊಮ್ಮೆ ಬರಬೇಕು ನೀವು..ಥ್ಯಾಂಕ್ಯೂ ಪ್ರತಿಕ್ರಿಯೆಗೆ

    ಪ್ರತಿಕ್ರಿಯೆ
  3. ರೇಣುಕಾ ರಮಾನಂದ

    ಥ್ಯಾಂಕ್ಯೂ ಸುಧಾ ಮೇಡಂ

    ಪ್ರತಿಕ್ರಿಯೆ
  4. Deepa Hiregutti

    ಚೆನ್ನಾಗಿದೆ ಕಣೆ. ಅವತ್ತು ನೀನು ಪೂರಿಬಾಜಿ ಖಾಲಿಯಾಗಿ ಹೋಗುತ್ತೆ ಅಂತ ನಿಧಾನವಾಗಿ ತಿಂದಹಾಗೆ ನಾವು ಮೊಟ್ಟೆಯನ್ನು ನಿಧಾನ ತಿನ್ನುತ್ತಿದ್ದೆವು. ಮೀನು, ಚಿಕನ್ನೆಲ್ಲ ಎಷ್ಟು ಬೇಕಾದರೂ ತಿನ್ನಬಹುದು ಆಗ. ಮೊಟ್ಟೆ ಒಬ್ಬರಿಗೆ ಒಂದೇ ಬೇಯಿಸುತ್ತಿದ್ದರು. ಈಗಲೂ ಮೊಟ್ಟೆ ತಿನ್ನುವುದು ಹಗೂರಕ್ಕೇ!! ಇದರ ಬಗ್ಗೆಯೇ ಲೇಖನ ಬರೀಬಹುದು ಮಾರಾಯ್ತಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: