ನಂದಿನಿ ಹೆದ್ದುರ್ಗ
‘ನನ್ನ ಆಕಾಶ ಈಗ
ಸಪ್ತವರ್ಣಕ್ಕೆ ತಿರುಗಿದೆ’
ಹಳೆಯ ಪುಳಕಗಳಿಗೆ
ತುಳುಕಿದಂತಾಗಿ
ಅವನಿಗೆ ಸಂದೇಶ
ಕಳುಹಿಸಿದೆ,
ಉಪನ್ಯಾಸ ಕಮ್ಮಟ
ಆಫೀಸು ಗೂಗಲ್ ಮೀಟು
ವಿಡಿಯೋ ಶೂಟು
ಲೈವು ಪ್ರೋಗ್ರಾಮುಗಳ
ದಿನಚರಿಯ
ಹೇಳಿದ.

ಬರೆದ ಕಿರುಕವಿತೆಯ
ತಿರುತಿರುಗಿ
ನೇವರಿಸಿ
ಕರೆ ಮಾಡಿದೆ
ಭ್ರಷ್ಟಾಚಾರ, ಬಹ್ರೇನು
ಬಲದವರ ದಗಲಬಾಜಿತನ
ಬಿರಿಯಾನಿ, ಭಾಷಣ
ಬದಲಾವಣೆಯ ಅಗತ್ಯಗಳ
ಕುರಿತು ವಿವರಿಸಿದ.
ಹೊತ್ತಿಲ್ಲದ ಹೊತ್ತಿನಲ್ಲಿ
ಉನ್ಮತ್ತದುನ್ಮಾದ
ಮೇರೆ ಮೀರಿ
ಪೊರೆಯದೆ
ಇದು
ತೊರೆಯದು
ಎನಿಸಿದಾಗ ಭಾರ ಸ್ವರದಲ್ಲಿ
‘ನೀನು ಬೇಕು’ ಎಂದೆ
ನಿರಾಕಾರ, ನಿರ್ಮೋಹ
ಸ್ತುತಿ ಪಠಣ
ಉಪವಾಸ
ಭ್ರಾಂತಿ ಪದಗಳಿಗೆ
ವ್ಯಾಖ್ಯಾನ ನೀಡಿ
ನೀನು ನನ್ನ ಕರ್ತವ್ಯ ಎಂದು
ನಸುನಕ್ಕು ನೇರ ನೋಡಿದ

ನೀನು ಕಲಿಸಿದ
ಪ್ರೇಮ ವ್ಯಾಕರಣ
ದಿಂದಲೇ ನನ್ನ
ಕಾವ್ಯಕ್ಕೆ ನೆಲೆ
ಎಂದೆ.
ಗಮನಿಸಲಿಲ್ಲ.
ದಿಕ್ಕೆಟ್ಟು
ನಿನ್ನ ನಿರ್ಲಕ್ಷ್ಯ
ಮುಂದುವರೆದರೆ
ಉಳಿಯಲಾರೆ ಎಂದೆ
ಹಸಿವು ಅವಮಾನಗಳ
ಉದಾಹರಿಸಿ
ಮೆದೂ ದನಿಯಲ್ಲಿ
ವೀಣಾ ವಿಮಲ ಮಾಲರ
ಹೆಸರಿಸಿ ಅವರ
ಗೆಲುವಿನ ಕಥೆಗಳ ವಿಡಿಯೊ
ಕಳಿಸಿದ

ನನ್ನ ಆತ್ಮದ ಗೆಳೆಯನೆ..
ರೊಟ್ಟಿ ಕೇಳಲಿಲ್ಲ
ನಿನ್ನನ್ನು
ಭೇಟಿಯನ್ನೂ…
ದಾಹ ಶ್ವಾಸದಷ್ಟೇ
ಮೂಲಭೂತ
ನನ್ನ ಪಾಲಿಗೆ ಒಲವು
ಹೋಗಲಿಬಿಡು…
ನೋಡಿಲ್ಲಿ
ಅಂದು ಒಣಗುತ್ತಿದೆ
ಎಂದಿದ್ದ ನಿಂಬೆ ಮರಕ್ಕೆ
ನೀಲಿ ಹೂವಿನ ಬಳ್ಳಿ
ಹಬ್ಬಿಸಿದ್ದೆ
ಇಗೋ.. ಮೈ ತುಂಬ ಮೊಗ್ಗು ಹೂವು
ಚಿಟ್ಟೆಗಳೂ ಬರುತ್ತಿವೆ
ತಮ್ಮ ಪಾಡಿಗೆ ತಾವು…
ಮತ್ತು…






This is a beautiful poem …