ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 5

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.

ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ

‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.

ಮೊದಲ ಕಂತು ಇಲ್ಲಿದೆ- ಕ್ಲಿಕ್ಕಿಸಿ

ಎರಡನೆಯ ಕಂತು ಇಲ್ಲಿದೆಕ್ಲಿಕ್ಕಿಸಿ

ಮೂರನೆಯ ಕಂತು ಇಲ್ಲಿದೆಕ್ಲಿಕ್ಕಿಸಿ

ನಾಲ್ಕನೆಯ ಕಂತು ಇಲ್ಲಿದೆ-ಕ್ಲಿಕ್ಕಿಸಿ

5

ದಿನ ಕಳೆದದ್ದೇ ಗೊತ್ತಾಗಲಿಲ್ಲ

ನಾನು ಮೊದಲನೆಯ ವಾರ್ಡ್ ನಲ್ಲಿದ್ದಾಗ ಸಮಯ ಹೇಗೆ ಕಳೆಯುವುದು ಎಂಬ ಪ್ರಶ್ನೆಯೇ ಎದುರಾಗಲಿಲ್ಲ. ನನ್ನ ಬೆಡ್ ಕಿಟಕಿಯ ದಿಕ್ಕಿಗೆ ಇತ್ತು. ಇಲ್ಲಿದ್ದ ಕಿಟಕಿ (ಕಿಟಕಿ ಎಂಬ ಪದ ಅದಕ್ಕೆ ಹೊಂದುವುದೇ ಇಲ್ಲ) ಅದು ವಾಸ್ತವವಾಗಿ ಆ ಮೂಲೆಯಿಂದ ಈ ಮೂಲೆಗೆ ವಿಶಾಲವಾಗಿ ತೆರೆದುಕೊಂಡ ಬಯಲಿನಂತಿತ್ತು. ಯಾವ ಸರಳುಗಳು, ಶಟರ್‌ಗಳು ಇಲ್ಲದೆ, ಇಡೀ ಆಕಾಶವೇ ಆ ಗಾಜಿನ ಕಿಟಕಿಯ ಒಳಗೆ ಇಳಿದು ಬರುವಂತೆ ಕಾಣುತ್ತಿತ್ತು. ಮಳೆಗಾಲದ ಆಕಾಶ ಬಹಳ ಸುಂದರ, ಕ್ಷಣ ಕ್ಷಣಕ್ಕೂ ರೂಪ ಬಣ್ಣ ಬದಲಾಯಿಸುವ ಮೋಡಗಳಿಂದಾಗಿ ಎಷ್ಟು ನೋಡಿದರೂ ನೋಡುತ್ತಲೇ ಇರಬೇಕೆನ್ನಿಸುವ ನೋಟ. ಸಂಜೆ ಗೂಡು ಸೇರುವ ಹಕ್ಕಿಗಳು, ಸುರಿಯುವ ಮಳೆ, ಸಂಜೆಗೆಂಪಿನ ಬಣ್ಣ ಎಲ್ಲವನ್ನೂ ನೋಡುತ್ತಾ ಮೈಮರೆಯುತ್ತಿದ್ದೆ.

ಇನ್ನು ಪಕ್ಕದ ಬೆಡ್ಡಿನ ಸೀತಮ್ಮ ಅವರ ವಿಶ್ವಾಸ ತುಂಬಿದ ಮಾತುಗಳನ್ನು ಕೇಳುವುದೇ ಹಿತವೆನ್ನಿಸುತ್ತಿತ್ತು. ಆಕೆಯ ಜೀವನೋತ್ಸಾಹವಂತೂ ಹೇಳತೀರದು. ನಾನು ಆಸ್ಪತ್ರೆ ಸೇರಿದ್ದು ವರಮಹಾಲಕ್ಷ್ಮಿಯ ಹಬ್ಬದ ದಿವಸ. ಸಂಜೆಯಾಗುತ್ತಾ ಬಂದಿತ್ತು. ನಾನು ಇಂತಹ ಯಾವ ಹಬ್ಬವನ್ನೂ ಮಾಡುವುದಿಲ್ಲವಾದ್ದರಿಂದ ನನಗೇನು ಅದು ಬಹಳ ವ್ಯತ್ಯಾಸವೆನ್ನಿಸಿರಲಿಲ್ಲ. ಆದರೆ ಸೀತಮ್ಮನಿಗೆ ಹಾಗಲ್ಲ. ಸಂಜೆ ಆರೂವರೆಯಾಗುತ್ತಾ ಬಂದಿತ್ತು. ಮನೆಯಿಂದ ಅವರ ಮಗ ಫೋನ್ ಮಾಡಿದ್ದ. ಹಬ್ಬದ ಸಿದ್ಧತೆಯ ಬಗ್ಗೆ ಕೇಳುತ್ತಾ ಅಡಿಗೆಯ ವಿಷಯವನ್ನು ವಿಚಾರಿಸುತ್ತಿದ್ದರು.

ಆ ಕಡೆಯಿಂದ ಬರೀ ಪಾಯಸ ಏನೋ ಮಾಡಿದ್ದಾಗಿ ಉತ್ತರ ಬಂದಿರಬೇಕು. ಕೂಡಲೇ ಸೀತಮ್ಮ ಮಗನಿಗೆ ಕ್ಲಾಸ್ ತಗೊಂಡರು. ನೋಡು ಈವತ್ತು ಹಬ್ಬ, ನೀವೆಲ್ಲ ಖುಷಿಯಾಗಿರಬೇಕು. ನಾನು ಇಲ್ಲ ಅಂತ ಯಾವುದನ್ನೂ ಕಡಿಮೆ ಮಾಡಬಾರದು. ನಾನು ನಲವತ್ತು ವರ್ಷದಿಂದ ತಪ್ಪದೆ ಮಾಡಿಕೊಂಡು ಬಂದಿರುವ ವ್ರತ. ಯಾವ ಕಾರಣಕ್ಕೂ ಏನೂ ಕಡಿಮೆಯಾಗಬಾರದು, ಒಂದು ಗ್ಲಾಸ್ ಬೇಳೆ ಹಾಕಿ ಒಬ್ಬಟ್ಟು ಮಾಡಲೇ ಬೇಕು ಅಂತ ಗಾಯತ್ರಿಗೆ ಹೇಳು. ಮಕ್ಕಳು ಮರಿ ಎಲ್ಲಾ ಪೂಜೆಮಾಡಿ ಚೆನ್ನಾಗಿ ಊಟ ಮಾಡಿ. ಇಲ್ಲದಿದ್ದರೆ ನಾನು ಸುಮ್ಮನಿರುವುದಿಲ್ಲ.

ನನಗೆ ಸೀತಮ್ಮನವರ ಮಾತು ಕೇಳುತ್ತಿರುವಾಗ ನಮ್ಮ ಹೆಂಗಸರ ಜೀವನೋತ್ಸಾಹದ ಬದುಕಿನೊಲುಮೆಯ ಹಲವಾರು ಸಂಗತಿಗಳು ನೆನಪಿಗೆ ಬಂದವು. ಈಕೆಗೆ ಓಡಾಡಲೂ ಆಗುತ್ತಿಲ್ಲ. ಏನಾದರೂ ಕೆಳಗೆ ಬಿದ್ದರೆ ತೆಗೆದುಕೊಡಲು ಇನ್ನೊಬ್ಬರು ಬೇಕು. ಸಂಧಿವಾತ ಹಾಗೂ ಅಪರೇಷನ್ ಆದ ಕುತ್ತಿಗೆಯ ತೊಂದರೆಯಿಂದಾಗಿ ಹೇಗೆಂದರೆ ಹಾಗೆ ತಿರುಗುವಂತಿಲ್ಲ. ಆದರೂ ಆಕೆಯ ಮನೆಮಕ್ಕಳ ಕಾಳಜಿ ಎಂಥದ್ದು ನೋಡಿ. ಈ ಹೆಂಗಸರೇ ಹೀಗೆ ಅವರು ಯಾವ ಸ್ಥಿತಿಯಲ್ಲಿದ್ದರೂ ತಮ್ಮ ಗೃಹಕೃತ್ಯದ ಕಾಳಜಿಗಳನ್ನು ಮರೆಯುವುದೇ ಇಲ್ಲ. ತಮ್ಮ ಕ್ಯಾನ್ಸರ್ ಪೇಶಂಟ್‌ಗಳ ಬಗ್ಗೆ ಒಬ್ಬ ಮಹಿಳಾ ವೈದ್ಯೆ ಹೀಗೆ ಹೇಳುತ್ತಿದ್ದರು: ನೋಡಿ ಇವರು ಎಂತೆಂಥ ಕ್ಯಾನ್ಸರ್ ನಿಂದ ನರಳುತ್ತಿದ್ದಾರೆ. ಆದರೆ ಒಬ್ಬರಾದರೂ ತಮ್ಮ ಖಾಯಿಲೆಯ ಬಗ್ಗೆ ಮಾತಾಡುವುದಿಲ್ಲ. ಬದಲಿಗೆ ಮಾತಾಡುವದೆಲ್ಲಾ ಗಂಡ, ಮನೆ, ಮಕ್ಕಳು, ಅಡುಗೆ, ತಿಂಡಿ ಇಂಥ ಸಂಗತಿಗಳೇ.

ಹೀಗೆ ಪರಸ್ಪರ ಮಾತಾಡಿಕೊಳ್ಳುವಾಗ ತಾವು ಖಾಯಿಲೆಯವರು ಎಂಬುದನ್ನು ಮರೆತೇ ಬಿಟ್ಟಿರುತ್ತಾರೆ! ನಮ್ಮ ಜಾನಪದದಲ್ಲಿ ‘ಜವರಾಯನ ಹಾಡು’ ಎಂಬ ಒಂದು ಅದ್ಭುತವಾದ ಗೀತೆ ಇದೆ. ಇದು ಮಹಿಳೆಯರೇ ಕಟ್ಟಿದ ಹಾಡು.

ಜವರಾಯ ಬಂದರೆ ಬರಿಕೈಲಿ ಬರಲಿಲ್ಲ
ಕುಡುಗೋಲು ಕೊಡಲ್ಯೊಂದು ಹೆಗಲೇರಿ ಜವರಾಯ
ಒಳ್ಳೊಳ್ಳೆ ಮರನ ಕಡಿಬಂದ
ಫಲಬಿಟ್ಟ ಮರನ ಕಡಿಬಂದ
ಎಂದೂ ಬರದ ಜವರಾಯ ಇಂದೇಕೆ ಬಂದಿರಿ
ಕೊಳ್ಳಯ್ಯ ನೀರ ಕುಡಿನೀರ ಜವರಾಯ
ಕೂರೋಕೆ ಬಂದಿಲ್ಲ ನಿಲ್ಲೋಕೆ ಬಂದಿಲ್ಲ
ಗಂಡನ ಮಡದೀ ನಡಿ ಮುಂದೆ… ಜವರಾಯ
ಮಳಿಮಳಿಗೆ ಹಚ್ಚಡ ಮಳಿಗೆ ಮುಂಡಾಸಿನ
ಗಂಡನಬಿಟ್ಟು ನಾನ್ ಹೆಂಗೆ ಬರಲೋ …. ಜವರಾಯ
ಗಂಡಗೆ ತಕ್ಕಂಥ ದುಂಡೀರು ಬರುತಾರೆ
ಗಂಡನ ಮಡದಿ ನಡೀ ಮುಂದೆ…. ಜವರಾಯ
ಹಾಲೂಬಾನಾ ಉಂಡು ತೋಳ ಮೇಲಾಡುವ
ಬಾಲನಬಿಟ್ಟು ನಾನ್ ಹೆಂಗೆ ಬರಲೋ … ಜವರಾಯ
ಬಾಲಗೆ ತಕ್ಕಂಥ ಬಾಲೇರು ಬರುತಾರೆ
ಬಾಲನ ತಾಯೀ ನಡಿ ಮುಂದೆ … ಜವರಾಯ
ಕಾಳು ಕಡ್ಡೀ ಮಾರಿ ಕಟ್ಟಾಣಿ ಮಾಡಿಸಿದ್ದೆ
ಕಟ್ಟಾಣೊಂದರ ಘಳಿಗೆ ಇಕ್ಕಲಿಲ್ಲವೋ … ಜವರಾಯ
ಹರಳು ಹತ್ತೀ ಮಾರಿ ಓಲೆಯ ಮಾಡಿಸಿದ್ದೆ
ಓಲ್ಯೊಂದರ ಘಳಿಗೆ ಇಕ್ಕಲಿಲ್ಲವೋ … ಜವರಾಯ
ಓಲ್ಯೊಂದರ ಘಳಿಗೆ ಇಕ್ಕಲಿಲ್ಲ ಜವರಾಯ
ವಾಲಾಡಿ ಹೋಗೋ ಸಡಗರವೋ… ಜವರಾಯ
ಅಟ್ಟು ಉಂಡೇನೆಂದು ಚಟ್ಟೀ ಕುಡಿಕೆ ತಂದೆ
ಹಟ್ಟೀಲೆ ಇದ್ಯಲ್ಲೋ… ಜವರಾಯ
ಮಾಡಿ ಉಂಡೇನೆಂದು ಮಡಿಕೆ ಕುಡಿಕೆ ತಂದೆ
ಮಾಡಾಗೆ ಇದ್ಯಲ್ಲೋ… ಜವರಾಯ
ಆಚೆಕೇರೀಲೀಗ ರಂಡೇರು ಮುಂಡೇರು
ಅರ‍್ನಾರ ಕರಕೊಂಡ್ ಹೋಗಬಾರದೇ ಜವರಾಯ
ರಂಡೇರು ಮುಂಡೇರು ಎಂದಿದ್ರೂ ನಮ್ಮೋರು
ಗಂಡನ ಮಡದೀ ನಡಿ ಮುಂದೆ
ಆಚೆ ಕೇರೀಲೀಗ ಮುದುಕರು ತದುಕರು
ಅರ‍್ನಾರ ಕರ್‌ಕೊಂಡ್ ಹೋಗಬಾರದೆ ಜವರಾಯ
ಮುದುಕರು ತದುಕರು ಎಂದಿದ್ರು ನಮ್ಮೋರು
ಗಂಡನ ಮಡದಿ ನಡಿಮುಂದೆ

ಸಂಸಾರಸ್ಥೆಯಾದ ಹೆಣ್ಣೊಬ್ಬಳಿಗೂ ಸಾವಿನ ಪ್ರತಿರೂಪವಾಗಿ ಬಂದ ಜವರಾಯನಿಗೂ ನಡುವೆ ನಡೆಯುವ ಸಂಭಾಷಣಾ ರೂಪದ ಈ ಗೀತೆ ಬಹುಶಃ ಇಡೀ ಸಾಹಿತ್ಯ ಲೋಕದಲ್ಲಿಯೇ ಅತ್ಯಂತ ವಿಶಿಷ್ಟವಾದ ಅಪರೂಪದ ಗೀತೆಯಾಗಿದೆ. ಕರ್ನಾಟಕದ ಬಹಳಷ್ಟು ಭಾಗಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳೊಂದಿಗೆ ಈ ಗೀತೆ ಪ್ರಚಲಿತವಾಗಿದ್ದು ಎಲ್ಲ ಕಡೆಯೂ ಇದು ಹೆಣ್ಣಿನ ಹಾಡೇ ಆಗಿದೆ ಎಂಬುದು ಗಮನಾರ್ಹ. ಈ ಗೀತೆಯನ್ನು ಮೂರು ಭಾಗಗಳಾಗಿ ಮಾಡಿಕೊಂಡು ಪರಿಶೀಲಿಸಬಹುದು.

ಮೊದಲ ಭಾಗದಲ್ಲಿ ಈ ಹೆಣ್ಣುಮಗಳು ಜವರಾಯನನ್ನು ಮನೆಗೆ ಬಂದ ಅತಿಥಿ ಎಂಬಷ್ಟು ಆದರದಿಂದ ಉಪಚರಿಸುತ್ತಾಳೆ. ಎರಡನೇ ಭಾಗದಲ್ಲಿ ತಾನು ಎಷ್ಟೆಲ್ಲ ಕಷ್ಟಪಟ್ಟು ಸಂಪಾದಿಸಿದ ಸುಖ ಸಂತೋಷಗಳನ್ನು ಕ್ಷಣ ಕಾಲವಾದರೂ ಅನುಭವಿಸಲು ಬಿಡದೆ ನನ್ನನ್ನು ಕರೆದೊಯ್ಯುವುದು ಸರಿಯೇ ಎಂಬ ದನಿಯಲ್ಲಿ ಆಕೆ ಜವರಾಯನನ್ನು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾಳೆ. ಮೂರನೇ ಭಾಗದಲ್ಲಿ ಸಾವು ಅದೆಷ್ಟು ಅನಿರೀಕ್ಷಿತ ಎಂಬುದನ್ನು ಆಕೆ ಅಸಹಾಯಕವಾಗಿ ತನ್ನಷ್ಟಕ್ಕೇ ಹೇಳಿಕೊಳ್ಳುತ್ತಿದ್ದಾಳೆ. ಆದರೆ ಆಕೆಯ ಪ್ರಶ್ನೆಗಳಿಗೆ ಯಮ ಕೊಡುವ ಉತ್ತರದಲ್ಲಿ ಮನೆ ಮಠ ಒಡವೆ ವಸ್ತು ಇಂತಹ ಕ್ಷುಲ್ಲಕ ವಸ್ತುಗಳಿಗೆ ಅಂಟಿಕೊಂಡಿರುವ ಬುದ್ಧಿಗೇಡಿ ನೀನು ಎಂಬ ಲೇವಡಿಯಿದೆ. ಅವಳ ಆಸೆ ಆಕಾಂಕ್ಷೆಗಳಿಗೆ ಕಿಂಚಿತ್ತೂ ಬೆಲೆ ಕೊಡದ ಯಮನ ದನಿ ಅತ್ಯಂತ ನಿಷ್ಠುರವಾಗಿದೆ.

ಪುರುಷ ಪ್ರಧಾನ ಸಮಾಜವು ಹೆಂಗಸರ ಸಾಂಸಾರಿಕ ವ್ಯಾಮೋಹ, ಆಸೆಗಳನ್ನು ಒಂದು ರೀತಿಯ ಲೇವಡಿ ಅಪಹಾಸ್ಯದ ದೃಷ್ಟಿಯಿಂದ ನೋಡುವುದು ಸಾಮಾನ್ಯವೇ ಆಗಿದೆ. ಆದರೆ ಹೆಣ್ಣುಮಕ್ಕಳ ಈ ಮನೋಭಾವದ ಬಗ್ಗೆ ಅಪಹಾಸ್ಯ ಮಾಡುವಂಥದ್ದೇನೂ ಇಲ್ಲ ಎಂಬುದು ಈ ವ್ಯವಸ್ಥೆಯಲ್ಲಿ ಬದುಕುತ್ತಿರುವ ಹೆಣ್ಣುಮಕ್ಕಳ ಬವಣೆಯನ್ನು ನೋಡಿದವರಿಗೆ ಗೊತ್ತಾಗುತ್ತದೆ.

ಬಹುತೇಕ ಹೆಣ್ಣುಮಕ್ಕಳ ಬದುಕು ಸಾಂಸಾರಿಕ ಕಷ್ಟ ಕಾರ್ಪಣ್ಯಗಳನ್ನು ನಿಭಾಯಿಸುವುದರಲ್ಲಿಯೇ ಕಳೆದು ಹೋಗಿ ಬಿಡುತ್ತದೆ. ಆವರ ಸಾಂಸಾರಿಕ ಕೆಲಸ, ಜವಾಬ್ದಾರಿ ಕರ್ತವ್ಯಗಳಿಗೆ ಕೊನೆಯೆಂಬುದೇ ಇರುವುದಿಲ್ಲ. ತಮ್ಮ ಮನೆಮಂದಿಯ ಸುಖ ಸಂತೋಷ ನೆಮ್ಮದಿಗಳಿಗಾಗಿ ಜೀವನವೆಲ್ಲ ದುಡಿಯುವ ಅವರು ಸಣ್ಣಪುಟ್ಟ ಆಸೆಗಳನ್ನು ಈಡೇರಿಸಿಕೊಂಡು ಸುಖ ಸಂತೋಷಗಳನ್ನು ಕಾಣುವ ವೇಳೆಗೆ ಅವರ ಬದುಕಿನ ಬಹು ಅಮೂಲ್ಯ ಕ್ಷಣಗಳು ಕಳೆದುಹೋಗಿರುತ್ತವೆ. ಇಂಥ ಹೊತ್ತಿನಲ್ಲಿ ಅವರಿಗೆ ಸಾವು ಅದರಲ್ಲಿಯೂ ಅಕಾಲಿಕವಾದ ಸಾವು ಎಂದಿಗೂ ಪ್ರಿಯವಲ್ಲ. ಜವರಾಯನ ಹಾಡಿನಲ್ಲಿ ವ್ಯಕ್ತವಾಗಿರುವ ಹೆಣ್ಣಿನ ಮನೋಧರ್ಮ ಇಂಥದ್ದು. ಸಾವಿನ ಬಗ್ಗೆ ಹೆಣ್ಣುಮಕ್ಕಳ ಆಲೋಚನೆ ಸಾಮಾನ್ಯವಾಗಿ ಇದೇ ರೀತಿ ಇರುತ್ತದೆ.

ಸೀತಮ್ಮನಿಗೆ ಈ ಆಸ್ಪತ್ರೆಯ ಊಟ ತಿಂಡಿ ಸೇರುತ್ತಿರಲಿಲ್ಲ. ಅದೇನು ಉಪ್ಪಿಟ್ಟೋ ತುಂಬಾ ಖಾರ ಇತ್ತು. ತಿನ್ನುವುದಕ್ಕೇ ಆಗಲಿಲ್ಲ ಅನ್ನುತ್ತಿದ್ದರು. ಊಟದ ವಿಷಯದಲ್ಲಿಯೂ ಹೀಗೆ. ಅಯ್ಯೋ ಇದರಲ್ಲಿ ಏನೂ ಇಲ್ಲಾ ಎಂದು ಹಾಗೇ ಇಟ್ಟುಬಿಡುತ್ತಿದ್ದರು. ಮನೆಗೆ ಫೋನ್ ಮಾಡಿ ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಚಟ್ನಿ ಮಾಡಿ ನಾಲ್ಕು ಚಪಾತಿ ಕಳಿಸಿಬಿಡು ಅಂತ ಸೊಸೆಗೆ ಹೇಳುತ್ತಿದ್ದರು.

ಆದರೆ ಆಕೆ ಎಷ್ಟು ಜಾಣೆ ಎಂದರೆ ಬೇರೆಯವರ ಬಳಿ ಮಾತಾಡುವಾಗ ಯಾವ ಕುಂದುಕೊರತೆಯನ್ನೂ ಹೇಳಿಕೊಳ್ಳುತ್ತಿರಲಿಲ್ಲ. ಬಿ.ಬಿ.ಎಂ.ಪಿ. ಯವರ ಫೋನ್ ಬಂದಾಗ ನೋಡಿ ಸಾರ್ ನೀವು ಅಲ್ಲಿ ಸ್ಟಿಕರ್ ಅಥವಾ ಟೇಪ್ ಹಾಕುವುದು ಇಂಥದ್ದೇನೂ ಮಾಡಬೇಡಿ. ಪಾಪ ಅಕ್ಕಪಕ್ಕದವರಿಗೆ ತೊಂದರೆ ಆಗುತ್ತೆ. ನಾನು ಸೀದಾ ಆರ್.ಕೆ. ಆಸ್ಪತ್ರೆಯಿಂದ ಇಲ್ಲಿಗೆ ಬಂದಿದ್ದೀನಿ. ಮನೆಗೂ ಹೋಗಿಲ್ಲಾ. ಆದರೂ ಸುಮ್ಮನೆ ಅದೇನನ್ನೂ ಮಾಡಬೇಡಿ ಎಂದು ನಯವಾಗಿ ಹೇಳಿ ಬಿ.ಬಿ.ಎಂ.ಪಿ. ಯವರನ್ನು ಒಪ್ಪಿಸಿದ್ದರು. ಇನ್ನಾರೋ ಫೋನ್ ಮಾಡಿದಾಗ ಈ ಆಸ್ಪತ್ರೆ ತುಂಬಾ ಚೆನ್ನಾಗಿದೆ. ಯಾವಾಗಲೂ ಬಿಸಿನೀರು, ಒಳ್ಳೆ ಊಟ, ಮನೆಯಲ್ಲೂ ಇರಲ್ಲ ಅಷ್ಟು ರುಚಿ. ನರ್ಸ್ ಗಳೂ ಅಷ್ಟೆ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ….. ನನ್ನ ಹತ್ತಿರ ಯಾವುದರ ಬಗೆಗೆ ದೂಷಿಸುತ್ತಿದ್ದರೋ ಅದಕ್ಕೆ ವಿರುದ್ಧವಾದುದನ್ನೇ ಅವರ ಬಳಿ ಹೇಳುತ್ತಿದ್ದರು.

ಆಕೆಯ ವಿಶ್ವಾಸವಂತೂ ಹೇಳತೀರದು. ನಾನೂ ಕೂಡ ಅವರ ಸಮೀಪದ ರಸ್ತೆಯಲ್ಲಿರುವವಳೇ ಎಂದು ತಿಳಿದ ಮೇಲಂತೂ ಅವರ ವಿಶ್ವಾಸ ಹೆಚ್ಚಾಯಿತು. ಯಾರಿಗೆ ಫೋನ್ ಮಾಡಿದರೂ ನನ್ನ ಬಗ್ಗೆಯೂ ಒಳ್ಳೆಯ ಮಾತನ್ನು ತಪ್ಪದೇ ಸೇರಿಸುತ್ತಿದ್ದರು. ನಮ್ಮ ಮನೆಗೆ ಬನ್ನಿ, ಅಲ್ಲೆ ಎಲ್ಲಮ್ಮನ ದೇವಸ್ಥಾನದ ಹತ್ತಿರ ಅಂತ ಪ್ರೀತಿಯ ಆಹ್ವಾನ. ಹೀಗೆ ಅವರೊಂದಿಗೆ ಮಾತಾಡುತ್ತಾ, ಅವರ ಮಾತುಗಳನ್ನೂ ಕೇಳಿಸಿಕೊಳ್ಳುತ್ತಾ, ಮನೆಗೆ ಫೋನ್ ಮಾಡುತ್ತಾ, ನನ್ನ ಬೆಡ್ ವ್ಯವಸ್ಥೆಯ ಒಂದೆರಡು ಫೋಟೋಗಳನ್ನು ಮನೆಗೆ ಕಳಿಸುತ್ತಾ ಇದ್ದ ನನಗೆ ಅಲ್ಲಿ ನಾಲ್ಕೈದು ದಿನ ಕಳೆದದ್ದೇ ಗೊತ್ತಾಗಲಿಲ್ಲ.

। ಇನ್ನು ನಾಳೆಗೆ ।

‍ಲೇಖಕರು Avadhi

June 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: