ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತವನ  ಫೋಟೊ..

ಶೋಷಿತಳ ಸ್ವಗತ

ಮನು ಪುರ

ಮೊಳ ಮಲ್ಲಿಗೆ ಮುಡಿದು
ಕಣ್ಣೀರ ಗುರುತನಳಿಸಿ
ಸಿಂಗಾರಗೊಂಡು
ಎದೆಸೀಳು ಕಾಣುವಂತೆ
ಸೆರಗಸುತ್ತಿ-ಕಾಯುತಿರುವೆ
ದೇಹಕೆ ಬೆಲೆ ಕಟ್ಟುವವನಿಗಾಗಿ

ಮನಸು ಇನ್ನು ಶುದ್ಧವೆ
ಒಮ್ಮೆಯೂ ಸುಖಿಸಿಲ್ಲ
ಹೊಟ್ಟೆಪಾಡಿನ ಕಸುಬಿದು
ಎಲ್ಲ ಮುಗಿದ ಮೇಲೂ
ಏನೊಂದು ಅರಿವಾಗದು .

ಅವಸರಕೆ ಸಿಕ್ಕ ದೇಹ
ಕಬ್ಭಿನಂತೆ ಹಿಂಡಿದಷ್ಟೇ
ಒಳಗಣ ನೋವು
ಒಬ್ಬರಿಗೂ ಕಾಣಲಿಲ್ಲ
ಕಂಡಿದ್ದರೆ …..
ನಾನೆಂದೊ ಗರತಿಯಾಗುತಿದ್ದೆ.

ಪಾಪ ಪುಣ್ಯದ ಮಾತಿಂದ
ಬದುಕು ತಾ ನಡೆದೀತೆ?
ವಿಧಿಯ ಮುಂದೆ ವಿವಸ್ತ್ರಳಾಗಿ
ಭಾವನೆಗಳ ಕತ್ತು ಹಿಸುಕಿ
ಗೊಂಬೆಯಂತೆ
ಮಾರಾಟದ ಸರಕಾಗಿಬಿಟ್ಟೆ
ಹಾಳು ಗಂಡು ಜನ್ಮಕೆ.

ತಿಂದುಂಡು ತೇಗಿದವರಿಗಿಲ್ಲದ
ಕಳಂಕ
ಇಲ್ಲಿಯೂ ನೊಂದವಳಿಗಂಟಿತು
ಈ ಸಮಾಜವೇ ಹೀಗೆ
ಬೇಕೆಂದೇ ಕಟ್ಟಿ ಬಿಡುತ್ತದೆ
ತನ್ನೆಲ್ಲ ಕೊಳಕ
ಪಾಪದವರ ತಲೆಗೆ

ಬಂದು ಹೋದವರಿಗೆ ಲೆಕ್ಕವಿಲ್ಲ
ಹಾಗಂತ
ಸಾಲು ಸಾಲು ಬಂಗಲೆಗಳು ನನಗಿಲ್ಲ
ಈಗಲೂ ಅದೇ ಚರಂಡಿ ಬಳಿಯ
ಹಳೆಯ ಗುಡಿಸಲು -ಮತ್ತವನ  ಫೋಟೊ
ಅತ್ತು ಬರಿದಾಗಲು ಉಳಿದದ್ದು.

‍ಲೇಖಕರು Avadhi Admin

27 April, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading