ಪಾಪ, ಷೇಕ್ಸ್ ಪಿಯರ್! i pity on him!..

ಏಪ್ರಿಲ್ 23 ಷೇಕ್ಸ್ ಪಿಯರ್ ಹುಟ್ಟಿದ ಮತ್ತು ಇಲ್ಲವಾದ ದಿನ.

ಈ ಸಂದರ್ಭದಲ್ಲಿ ‘ಅವಧಿ’ಯ ಪರಿಚಿತ ಬರಹಗಾರ, ಲಿಬ್ಯಾದಲ್ಲಿ ಸಾಕಷ್ಟು ವರ್ಷ ಅಧ್ಯಾಪನ ಮಾಡಿದ, ಆ ಕುರಿತು ಪ್ರವಾಸ ಕಥನವನ್ನೂ ಬರೆದಿರುವ ಉದಯ ಇಟಗಿ ಅವರ ಹೊಸ ಮಾಲೆಯನ್ನು ಪ್ರಕಟಿಸುತ್ತಿದ್ದೇವೆ.

ಉದಯ್ ಇಟಗಿ

ನಿನ್ನೆಯ ಸಂಚಿಕೆಯಿಂದ………

ಇರಲಿ. ಮಿಸ್ಟರ್ ಷೇಕ್ಸ್ ಪಿಯರ್ ನನ್ನೊಂದಿಗೆ ಮಾತನಾಡುವಾಗಲೂ ಕೂಡ ಬರೀ ಸುಳ್ಳುಗಳನ್ನೇ ಹೇಳುತ್ತಿದ್ದ. ಒಮ್ಮೆ “ಭಾಳಾ ದೊಡ್ದ ಛಾನ್ಸ್ ಕಣೇ, ಸರ್ ಫ್ರಾನ್ಸಿಸ್ ಜೊತೆ ಸಮುದ್ರಯಾನ ಹೋಗಿದ್ದೆ” ಅಂದ. ಪಾಪ ಅಂಥ ಧೈರ್ಯ ಎಲ್ಲಿಂದ ಬರಬೇಕು ಅಂದುಕೊಂಡೆ. ಹನಿ ರಕ್ತ ಕಂಡರೂ ಗಡ ಗಡ ನಡುಗುವವನು ಅವನು. ಒಂದು ಸಲವಂತೂ ನಾನು ಈರುಳ್ಳಿ ಹೆಚ್ಚುವಾಗ ಕೈ ಕುಯ್ದುಕೊಂಡದ್ದು ಕಂಡು ಕುಸಿದು ಬಿದ್ದಿದ್ದ.

ಇಂಥವನು ಸಮುದ್ರಯಾನ ಹೋದಾನೆ? “ಬೋಹಿಮಿಯಾದಿಂದ ನನ್ನ ಕಡಲಯಾನ ಶುರು” ಅಂದಿದ್ದ. ಬೋಹಿಮಿಯಾದಲ್ಲಿ ಕಡಲತೀರವೇ ಇರಲಿಲ್ಲ! ಅಲ್ಲಿಂದ ಟರ್ಕಿಯ ಅಲಿಪ್ಟೋ ಸೇರುತ್ತೇನೆಂದ. ಅಲ್ಲಿ ಬಂದರೇ ಇರಲಿಲ್ಲ! ಬರೀ ಸುಳ್ಳು! ವಿಲ್ಮ್ ಕೋಟ್ ಅನ್ನೋ ಊರಿಗೆ ಹೋಗಿದ್ದರೆ ಬಿಡ್ ಫೋರ್ಡ್ ಗೆ ಹೋಗಿದ್ದೆ ಅನ್ನುತ್ತಿದ್ದ. ಬಿಡ್ ಫೋರ್ಡ್ ಗೆ ಹೋಗಿದ್ದರೆ ಮತ್ತೆಲ್ಲಿಗೊ ಹೋಗಿದ್ದೆ ಅನ್ನುತ್ತಿದ್ದ.

ಅವನು ಮಾತನಾಡುತ್ತಿದ್ದುದೇ ಹಾಗೆ. ಅವನು ಹೇಳುವದನ್ನೆಲ್ಲಾ ನೀವು ನಂಬಿದರೆ ಸಾಕು, ಅದೇ ಅವನಿಗೆ ಖುಷಿ!

The husband beside me was almost a stranger to me.

ಈಗ ಮತ್ತೆ ಮೂಲಕಥೆಗೆ ಮರಳೋಣ. ನಿಮಗೆಲ್ಲಾ ಕುತೂಹಲ ಇರಬೇಕಲ್ವೇ ಅವನು ಹೇಗೆ ಬರೆಯುತ್ತಿದ್ದ ಎಂದು? ಅವನು ಬರೆಯುತ್ತಿದ್ದುದು ಬಾತುಕೋಳಿಯ ಗರಿಯಿಂದ. ಅವನ ಪಕ್ಕದಲ್ಲಿ ಸದಾ ಒಂದು ಮಸಿ ಬಾಟಲಿ ಮತ್ತು ಒಂದಿಷ್ಟು ಖಾಲಿ ಹಾಳೆಗಳು ಇರುತ್ತಿದ್ದವು. ಇವೇ ಅವನ ಸಂಗಾತಿಗಳು.

ಅವನಿಗೆ ಯಾವಾಗ ಬರೆಯುವ ಮೂಡು ಬರುತ್ತಿತ್ತೋ ಹೇಳಲಿಕ್ಕೆ ಬರುತ್ತಿರಲಿಲ್ಲ. ಮೂಡು ಬಂದ ಕೂಡಲೇ ಗರಿಯನ್ನು ಮಸಿ ಬಾಟಲಿಯಲ್ಲಿ ಅದ್ದಿ ಹಾಳೆಯ ಮೇಲಿಡುತ್ತಿದ್ದಂತೆ ಪದಗಳು ತಾವೇ ತಾವಾಗಿ ಕುಣಿಯುತ್ತಾ ಸಾಗುತ್ತಿದ್ದವು. ಅವ ಹಾಳೆಯ ಎರಡೂ ಮಗ್ಗಲಿನಲ್ಲಿ ಬರೆಯುತ್ತಿದ್ದ: ಒಂದು ಮಗ್ಗಲಿನಲ್ಲಿ ಐವತ್ತು ಸಾಲುಗಳು, ಇನ್ನೊಂದು ಮಗ್ಗಲಿನಲ್ಲಿ ಐವತ್ತು ಸಾಲುಗಳು. ಹಾಂ, ಅವ ಹಾಗೆ ಬರೆಯುತ್ತಿದ್ದುದು ಎಷ್ಟು ಬರೆದೆನೆಂದು ಲೆಕ್ಕ ಇಡಲಿಕ್ಕೆ.

ಪ್ರತಿ ಹಾಳೆಯನ್ನು ನಾಲ್ಕು ಕಾಲಂಗಳಾಗಿ ವಿಂಗಡಿಸುತ್ತಿದ್ದ. ಎಡಗಡೆ ಪಾತ್ರದ ಹೆಸರು. ಬಲಗಡೆ ರಂಗದ ಮೇಲೆ ಬರೋದನ್ನು ಹಾಗೂ ಹೋಗೋದನ್ನು ನಮೂದಿಸುತ್ತಿದ್ದ. ಸಂಭಾಷಣೆಯನ್ನು ಮಧ್ಯದಲ್ಲಿ ಬರೆಯುತ್ತಿದ್ದ. ಬರೆಯಲು ಅವನಿಗೆ ಒಂದು ನಿರ್ಧಿಷ್ಟ ಸಮಯ ಅಂತಾ ಇರಲಿಲ್ಲ. ಒಂದೊಂದು ಸಾರಿ ಮಧ್ಯರಾತ್ರಿಯವರೆಗೂ ಬರೆಯುತ್ತಿದ್ದ. ಬರೆದು ಬರೆದು ಸುಸ್ತಾಗಿ ಹಾಳೆಗಳನ್ನು ಅಲ್ಲೇ ಬಿಟ್ಟು ಹಾಗೆ ಮಲಗಿಬಿಡುತ್ತಿದ್ದ. ಇಲ್ಲವೇ ಒಂದೊಂದು ಸಾರಿ ಮಧ್ಯರಾತ್ರಿಯಲ್ಲಿ ಎದ್ದು ಬರೆಯುತ್ತಿದ್ದ.

ಒಮ್ಮೊಮ್ಮೆ ನನ್ನೊಂದಿಗೆ ಮಾತಾಡುತ್ತಿದ್ದಂತೆ ಒಮ್ಮೆಲೆ ಏನೋ ಜ್ಞಾಪಿಸಿಕೊಂಡವನಂತೆ ಎದ್ದುಹೋಗಿ ಬರೆದಿಟ್ಟು ಬರುತ್ತಿದ್ದ. ಆಗೆಲ್ಲಾ ನಾನು ಸಿಡಿಮಿಡಿಗೊಂಡರೆ “ಶ್! ಬರಹ ಸೆಕ್ಸ್ ಇದ್ದಂತೆ. ಸೆಕ್ಸ್ ನ್ನು ಹೇಗೆ ಮೂಡು ಬಂದಾಗ ತೆಗೆದುಕೊಳ್ಳುತ್ತೇವೆಯೋ ಹಾಗೆ ಮೂಡು ಬಂದಾಗ ಬರೆಯುವದನ್ನು ಬರೆದುಬಿಡಬೇಕು. ಹಾಗೆಲ್ಲಾ ಅದನ್ನು ತಡೆಯಬಾರದು” ಎನ್ನುತ್ತಿದ್ದ.

“ಅದಕ್ಕೆ ಅಲ್ವಾ ಮಾರಾಯ? ನಿನಗೆ ಮೂಡು ಬಂದಿತೆಂದು ತಡೆಯದೆ ನನ್ನನ್ನು ಮದುವೆಗೆ ಮೊದಲೇ ಬಸಿರು ಮಾಡಿದ್ದು” ಎಂದು ಛೇಡಿಸುತ್ತಾ ಅವನ ತಲೆಯ ಮೇಲೊಂದು ಮೊಟಕಿದ್ದೆ. ಅವನು ನಗುತ್ತಾ “ಹೇ…ಯೂ ನಾಟಿ” ಎಂದು ನನ್ನ ಕೆನ್ನೆ ಹಿಂಡಿದ್ದ. ಬರೆಯುವಾಗ ಒಮ್ಮೊಮ್ಮೆ ಅತಿ ಗಂಭೀರವಾಗಿ ಯೋಚಿಸುತ್ತಾ ಬರೆಯುತ್ತಿದ್ದ. ಒಮ್ಮೊಮ್ಮೆ ಏನನ್ನೋ ಗುನುಗುನಿಸುತ್ತಾ ಬರೆಯುತ್ತಿದ್ದ. ಒಮ್ಮೊಮ್ಮೆ ಬಿಟ್ಟ ಕಣ್ಣನ್ನು ಹಾಗೆ ಬಿಟ್ಟು ಎಲ್ಲೋ ನೋಡುತ್ತಾ ಕುಳಿತುಬಿಡುತ್ತಿದ್ದ.

ನಾನು “ಅಯ್ಯೋ, ದೇವರೆ! ಏನಾಯಿತು ಇವನಿಗೆ?” ಎಂದು ಹತ್ತಿರ ಹೋಗಿ ಅವನ ಭುಜ ಅಲ್ಲಾಡಿಸಿದರೆ “ಶ್! ಸುಮ್ಮನಿರು. ನಾನು ನನ್ನ ಪಾತ್ರದೊಂದಿಗೆ ಸಂವಾದಕ್ಕಿಳಿದಿದ್ದೇನೆ. ಅದರ ಆಳಕ್ಕೆ ಇಳಿದು ನೋಡುತ್ತಿದ್ದೇನೆ. ಇನ್ನೇನು ಹೊಳೆದುಬಿಡುತ್ತೆ… ಬರೆದುಬಿಡುತ್ತೇನೆ… ಸುಮ್ಮನಿರು” ಎಂದು ಬರೆದಾದ ಮೇಲೆ “ನಾನೊಬ್ಬನೇ ಅಲ್ಲ. ಬರಹಗಾರರೆಲ್ಲಾ ಹೀಗೆ ಬರೆಯೋದು…” ಎಂದು ತನ್ನನ್ನು ಸಮರ್ಥಿಸಿಕೊಳ್ಳಲು ನೋಡುತ್ತಿದ್ದ.

ನಾನದಕ್ಕೆ “ಈ ಬರಹಗಾರರು ತಮ್ಮ ಪಾತ್ರಗಳೊಂದಿಗೆ ಸಂವಾದಕ್ಕಿಳಿಯೋ ಬದಲು, ಅವುಗಳಲ್ಲಿ ಇಣುಕಿ ನೋಡೋ ಬದಲು, ಒಮ್ಮೆ ತಮ್ಮೊಂದಿಗೆ ತಾವು ಸಂವಾದಕ್ಕಿಳಿಯಬಾರದೇಕೆ? ತಮ್ಮೊಳಗೆ ತಾವು ಇಣುಕಿ ನೋಡಿಕೊಳ್ಳಬಾರದೇಕೆ?” ಎಂದು ಕೇಳಿದ್ದೆ. ಅದಕ್ಕವನು ಪ್ಯಾಲಿಯಂತೆ ನಕ್ಕಿದ್ದ.

ಮೊದಲೇ ಹೇಳಿದಂಗೆ ನಾನ್ಯಾವತ್ತೂ ಏನನ್ನೂ ಓದಿದವಳಲ್ಲ ಬೈಬಲ್ ವೊಂದನ್ನು ಬಿಟ್ಟು. ಇನ್ನು ಇವನು ಬರೆದ ನಾಟಕಗಳನ್ನು ಹೇಗೆ ಓದಲಿ? ಒಮ್ಮೊಮ್ಮೆ ಅವನೇ “ಓದೆಂದು” ತಾನು ಬರೆದದ್ದನ್ನು ನನ್ನ ಮುಂದಿಡುತ್ತಿದ್ದ. ಇಲ್ಲವೇ ಬಲವಂತವಾಗಿ ಅವನೇ ಓದಿ ಹೇಳುತ್ತಿದ್ದ.

ನಾನು “ಸಾಕು ಮಾರಾಯ, ತಲೆನೋವು” ಅಂತಿದ್ದೆ. ಹಾಗೆ ನೋಡಿದರೆ ನನಗೇನೂ ತಲೆನೋವಿರಲಿಲ್ಲ. ಆದರೆ ಇದ್ಯಾವುದು ನನ್ನ ಕಿವಿಗೆ ಬೇಡವಾಗಿರುತ್ತಿತ್ತು ಅಷ್ಟೆ. ಒಂದೊಂದು ಸಾರಿ ಅನಿಸೋದು; ನಾನು ಷೇಕ್ಸ್ ಪಿಯರ್ ನಿಗೆ ಸರಿಯಾದ ಜೋಡಿ ಅಲ್ವೇನೋ, ಸಮಾನ ಅಭಿರುಚಿಯ ಹೆಂಡತಿ ಆಗಲಿಲ್ವೇನೋ ಅಂತ. ಪಾಪ, ಷೇಕ್ಸ್ ಪಿಯರ್! I pity on him!

ಷೇಕ್ಸ್ ಪಿಯರ್ ನಿಗೆ ಅದ್ಬುತವಾದ ಕಲ್ಪನಾ ಶಕ್ತಿಯಿತ್ತು. ಅವನೊಬ್ಬ ಒಳ್ಳೆ ಅಂದಾಜುಗಾರನಾಗಿದ್ದ. ನಾನು ಏನು ಯೋಚಿಸುತ್ತಿದ್ದೆನೆಂಬುದನ್ನು ಬಹಳ ಬೇಗನೆ ಊಹಿಸಿಬಿಡುತ್ತಿದ್ದ. ನನ್ನ ಮನಸ್ಸಲ್ಲಿರುವದನ್ನೆಲ್ಲಾ ಹೇಳಿಬಿಡುತ್ತಿದ್ದ. ನನಗೆ ಒಮ್ಮೊಮ್ಮೆ ಹೆದರಿಕೆಯಾಗೋದು ಇವನು ನನ್ನ ಮನಸ್ಸಿನಲ್ಲಿರುವದನ್ನೆಲ್ಲಾ ಹೇಳಿಬಿಟ್ಟರೆ ಏನು ಗತಿ ಎಂದು! ನನಗಿನ್ನೂ ಚೆನ್ನಾಗಿ ನೆನಪಿದೆ;

ಒಂದು ಸಾರಿ ನಾನು ಯಾವುದೋ ಒಂದು ಹಾಡಿನ ಬಗ್ಗೆ ಕನಸು ಕಾಣುತ್ತಿದ್ದೆ. ಅವನಿಗೆ ಅದ್ಹೇಗೆ ಗೊತ್ತಾಯಿತೋ ಏನೋ ಇದ್ದಕ್ಕಿದ್ದಂತೆ ಅವ ಅದೇ ಹಾಡನ್ನು ಹಾಡತೊಡಗಿದ. ನನಗೆ ಆಶ್ಚರ್ಯವಾಯಿತು ನಾನೇನಾದ್ರು ಈ ಹಾಡನ್ನು ಗುನಗುನಿಸುತ್ತಿದ್ದನೇ? ಅಥವಾ ಅದರ ನಾದವನ್ನೇನಾದರು ಬಾರಿಸುತ್ತಿದ್ದೆನೆ? ಎಂದು. ಊಹೂಂ, ಇಲ್ಲ. ನಾನು ಇದ್ಯಾವುದನ್ನು ಮಾಡಿರಲಿಲ್ಲ ಮತ್ತು ಅವನು ಇದ್ಯಾವುದನ್ನು ಕೇಳಿರಲಿಲ್ಲ. ನನಗೋ ಪರಮಾಶ್ಚರ್ಯ! ಇನ್ನೊಂದು ಸಾರಿ ನಾನು ಮನಸ್ಸಿನಲ್ಲಿಯೇ ಕುರಿಗಳ ಸಂಖ್ಯೆ ಲೆಕ್ಕ ಹಾಕುತ್ತಿದ್ದೆ. ಮಲಗಲು ಪ್ರಯತ್ನಿಸುತ್ತಿದ್ದವನು ಇದ್ದಕ್ಕಿದ್ದಂತೆ ‘ಐವತೈದು’ ಎಂದು ಹೇಳಿದ. My goodness! ಅವನಿಗೆ ಅದ್ಯಾವ ಸ್ವರ್ಗ ದೇವತೆ ಬಂದು ಹೇಳಿದ್ದಳು ನಾನು ಆ ಸಮಯಕ್ಕೆ ಎಣಿಸುತ್ತಿರುವದು ಐವತ್ತೈದನೇ ಸಂಖ್ಯೆ ಎಂದು. ಅಬ್ಬಾ, ಪ್ರಚಂಡ ಆಸಾಮಿ ಅವ!

ಒಂದು ರಾತ್ರಿ ಲಂಡನ್ನಿನ ಮನೆಯಲ್ಲಿ ಊಟವಾದ ಮೇಲೆ ನಾನು ಅಡಿಗೆ ಮನೆಯಲ್ಲಿ ಸಾಮಾನುಗಳನ್ನೆಲ್ಲ ಎತ್ತಿಡುತ್ತಿದ್ದೆ. ಅವ ಪಡಸಾಲೆಯಲ್ಲಿ ತಾನು ಬರೆದ ಪ್ರಸಿದ್ಧ ಸಾನೆಟ್ ಅದೇ….

“ಬೇಸಿಗೆಯ ಹಗಲಿಗೆ ಹೋಲಿಸಲೆ ನಿನ್ನ?

ನಿನ್ನ ಸೌಮ್ಯತೆ ಚೆಲುವು ಅದಕಿಂತಲೂ ಹಿರಿದು.

ನಡುಗುವುವು ಸವಿಮೊಗ್ಗುಗಳು ಒಡ್ಡುಗಾಳಿಗೆ

ಆಗಸದ ಕಣ್ಣು ಕೆಲವೊಮ್ಮೆ ಧಗೆ ಕಾಣುವದು

ಎಷ್ಟೋ ಸಲ ಅದರ ಹೊಂಬಣ್ಣ ಮಂಕಾಗುವದು”

ಎಂದು ಗುನುಗುನಿಸುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದ. ನನಗೆ ಥಟ್ಟನೆ ಇದನ್ನೆಲ್ಲೋ ಕೇಳಿದಂತಿದೆಯಲ್ಲ ಅಂತಾ ಅನಿಸಿತು. ಹಾಂ, ನೆನಪಾಯಿತು ಆವತ್ತು ಲಂಡನ್ ಸೇತುವೆಯ ಮೇಲೆ ಇದನ್ನೇ ತಾನೆ ಅವ ನನಗೆ ಹೇಳಿದ್ದು? ಅಂದರೆ….ಅಂದರೆ ಇದು ನನ್ನ ಕುರಿತು ಬರೆದಿದ್ದು.

ಪರ್ವಾಗಿಲ್ವೆ! ನನ್ನ ಗಂಡ ಮಿಸ್ಟರ್ ಸ್ಮೈಲ್ ನನ್ನ ಮೇಲೂ ಒಂದು ಸಾನೆಟ್ ಬರೆದಿದ್ದಾನೆ. ಶಹಭಾಷ್! ನೋಡಿಯೇ ಬಿಡೋಣ ಹೇಗಿದೆ? ಅಂತಾ ಕುತೂಹಲಕ್ಕೆಂದು ಸುಮ್ಮನೆ ಆಲಿಸುತ್ತಾ ಹೋದೆ.

/ಉಳಿದದ್ದು ನಾಳೆಗೆ/

‍ಲೇಖಕರು Avadhi Admin

April 26, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Vasundhara k m

    ಚೆನ್ನಾಗಿದೆ.. ಕುತೂಹಲದಿಂದ ಓದಿಸಿಕೊಳ್ಳುತ್ತಿದೆ..

    ಪ್ರತಿಕ್ರಿಯೆ
  2. ashfaq peerzade

    ಷೇಕ್ಸ್ ಪಿಯರ್ ಮತ್ತೇ ಹುಟ್ಟಿ ಬಂದಂತೆ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: