ಜಿಂಕೆ ಮತ್ತು ಪ್ಲಾಸ್ಟಿಕ್ ಕೊಂಬು

ಅಭಿಷೇಕ್ ಪೈ

ಊರಿಗೆ ಉದ್ದುದ್ದ ಕೊಂಬಿದ್ದ
ಒಂಟಿ ಜಿಂಕೆ ಬಂದಿದ್ದ
ಸುದ್ದಿ ಜಿಂಕೆಯಷ್ಟೇ ಚುರುಕಾಗಿ
ಕಿವಿಯಿಂದ ಕಿವಿಗೆ ಓಡುತ್ತಿತ್ತು. 
ಅದೇ ದಿನ ರಾತ್ರಿ ಚೂಪಾದ 
ಉಗುರುಗಳಿದ್ದ ಹುಲಿಯೊಂದು
ನನ್ನನ್ನು ಪರಚಿದಂತೆ ಕನಸು ಬಿತ್ತು. 
ನಾಡಲ್ಲಿದ್ದೆನೋ ಅಥವಾ ಕಾಡಲ್ಲಿದ್ದೇನೋ
ಎಂದು ಸಂಶಯ ಶುರುವಾಯ್ತು. 

ಕೊಯ್ದು ಬಿಟ್ಟಿದ್ದ ಮರದ
ಬೊಡ್ಡೆಗಳನ್ನು ನೋಡಿ ತಾನಿದ್ದ ಕಾಡನ್ನು 
ಅರಸುತ್ತಾ ದಿಕ್ಕುತಪ್ಪಿ ನಾಡಿನಲ್ಲಿ
ಅಲೆಯುತ್ತಿದ್ದ ಜಿಂಕೆಯನ್ನು ರಾತ್ರಿ
ಬಯಲಾಟ ನೋಡಿ ಹಿಂತಿರುಗುತ್ತಿದ್ದ
ಶೀನಪ್ಪ ನೋಡಿದ್ದರಂತೆ. 

ರಾತ್ರಿ ಪಾಳಿಯಲ್ಲಿ ಈ ಅನಾಥ ಜಿಂಕೆ
ಅವರಿವರ ಕೊಟ್ಟಿಗೆಯಲ್ಲಿ ಹುಲ್ಲು ತಿಂದು
ಅಡಗಿ ಕೂತು ಭ್ರಮಿತ ಕಣ್ಣುಗಳಿಂದ
ಊರವರ ಕೋಮುವಾದದ ಬಯಲು ನಾಟಕ
ನೋಡಿ ಗೇಲಿ ಮಾಡಿ ನಗುತ್ತಾ
ಕಾಡಿನ ದಾರಿ ಅರಸುತ್ತಿತ್ತು. 

ಯಾರ ಕೊಟ್ಟಿಗೆಯಲ್ಲೂ ಹುಲ್ಲು
ಸಿಗದಿದ್ದಾಗ ಎಲ್ಲೆಂದರಲ್ಲಿ ಹೇರಳವಾಗಿ
ಬಿದ್ದಿರುತ್ತಿದ್ದ ಪ್ಲಾಸ್ಟಿಕ್ ಪದಾರ್ಥಗಳನ್ನು
ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿತ್ತು. 
ಕಾಡಿನ ಹುಲಿಯ ಘರ್ಜನೆಗಿಂತಲೂ
ಇಲ್ಲಿಯ ವಾಹನಗಳ ಸದ್ದಿಗೆ
ವಿಚಿತ್ರವಾಗಿ ನಲುಗುತ್ತಿತ್ತು.

ಕೆಲವೇ ದಿನಗಳ ಹಿಂದಷ್ಟೇ
ಉಬ್ಬಿದ ಹೊಟ್ಟೆ ಹೊತ್ತುಕೊಂಡು
ಓಡುತ್ತಿದ್ದ ಜಿಂಕೆಯನ್ನು 
ನಾನೂ ನೋಡಿದ್ದೆ. 

ಮರಣೋತ್ತರ ಪರೀಕ್ಷೆ ವೇಳೆ
ಜಿಂಕೆಯ ಹೊಟ್ಟೆಯಲ್ಲಿ ಸಿಕ್ಕ
ಕೆಜಿಗಟ್ಟಲೇ ಜೀರ್ಣವಾಗದ ಪ್ಲಾಸ್ಟಿಕ್
ಎಂಬ ಪತ್ರಿಕಾ ವರದಿ
ನಾನು ನೋಡಿದ್ದ ಜಿಂಕೆಯದ್ದೇ
ಎಂದು ತಿಳಿದು ಮರುಕ ಪಟ್ಟಿದ್ದೆ. 

ಶಹರದ ವಸ್ತು ಸಂಗ್ರಹಾಲಯದಲ್ಲಿ
ಪ್ರದರ್ಶನಕ್ಕೆ ಇಟ್ಟಿದ್ದ ಅದರ
ಕೊಂಬು ಮತ್ತು ಅದರದೇ ಅಳತೆಯ
ಪ್ಲಾಸ್ಟಿಕ್ ಮಾದರಿ ಕೊಂಬು ನೋಡಿ
ಅದರ ಹೊಟ್ಟೆಯಲ್ಲಿ ಜೀರ್ಣವಾಗದೇ, 
ಸತ್ತ ಮೇಲೆ ಹೊರತೆಗೆದ ಅದೇ ಪ್ಲಾಸ್ಟಿಕ್ ನಿಂದ
ತಯಾರಿಸಿದಂತೆ ಅನಿಸಿ ಜಿಂಕೆಯ
ಮೂಕವೇದನೆ ಕಣ್ಣು ಕಟ್ಟಿತು. 

ಮನದೊಳಗೀಗ ಜಿಂಕೆಯ ಕೊಂಬಿನ 
ಸಂವೇದನೆ, ಮತ್ತು
ಹುಲಿಯ ಉಗುರಿನಷ್ಟೇ ಹರಿತವಾದ
ಕ್ರಾಂತಿಯ ಮೌನ ಮಾತ್ರ. 

 

‍ಲೇಖಕರು Avadhi Admin

April 26, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: