ನೆಂಪೆ ದೇವರಾಜ್, ತೀರ್ಥಹಳ್ಳಿ
ನಾಲ್ಕು ವರ್ಷಗಳ ಹಿಂದೆ ನಾನೂ ಮತ್ತು ‘ನಿಮ್ಮ ಅಂತರಂಗ’ ಪತ್ರಿಕೆಯ ಸಂಪಾದಕ ಮತ್ತು ಗೆಳೆಯ ಟಿ.ಕೆ ರಮೇಶ್ ಶೆಟ್ಟಿಯವರು ಮಡಿಕೇರಿಯಲ್ಲಿ ನಡೆದ ಅಖಿಲ ಬಾರತ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆವು. ಇಡೀ ಮಡಿಕೇರಿಯನ್ನೂ, ಆ ಪುಟ್ಟ ಪುಟ್ಟ ಗುಡ್ಡಗಳ ಮೇಲೆ ಕಟ್ಟಿದ್ದ ಮನೆಗಳೂ ಮತ್ತು ಬಂಗಲೆಗಳನ್ನೂ, ಆ ಬಂಗಲೆಗಳ ಎದುರು ಮಾಡಿದ್ದ ಬಣ್ಣ ಬಣ್ಣದ ಹೂಗಳ ಕೈತೋಟಗಳನ್ನೂ ನೋಡಿ ಕಣ್ ತುಂಬಿಕೊಂಡಿದ್ದೆವು.
ಹತ್ತಾರು ರಸ್ತೆಗಳಲ್ಲಿ ನಾವಿಬ್ಬರೇ ಅಪರಿಚಿತರು! ಆ ಕಣ್ಣಿಗೆ ರಾಚುವಂತಿದ್ದ ಹೂಗಳನ್ನೆಲ್ಲ ನೋಡುತ್ತಾ ಸವಿಯುತ್ತಾ… ಮಾತಾಡುತ್ತಾ ಹೋದ ನಮಗೆ ಅದನ್ನೆಲ್ಲ ಮರೆಯುವಂತಿಲ್ಲ. ಮೊನ್ನೆಯ ದಿನ ತೀರ್ಥಹಳ್ಳಿಯ ಸಹೃದಯ ನಾಗರಿಕರಿಂದ ಸಂಗ್ರಹಿಸಿದ್ದ ಹಣದಲ್ಲಿ ಅಗತ್ಯ ವಸ್ತುಗಳನ್ನು ಹೇರಿಕೊಂಡು ಮತ್ತೆ ಮಡಿಕೇರಿಗೆ ಹೋಗಬೇಕಾದ ಅನಿವಾರ್ಯತೆಯುಂಟಾಯಿತು.
ಅಲ್ಲಿಂದ ಬರುತ್ತಿದ್ದ ಭೀಕರ ಸುದ್ದಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಪುರ ಪಂಚಾಯ್ತಿ ಮಾಜಿ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರರ ನೇತೃತ್ವದಲ್ಲಿ ಕುಶಾಲ ನಗರಕ್ಕೆ ನಮ್ಮ ತಂಡ ಕಾಲಿಟ್ಟಕೂಡಲೆ ಪ್ರಶಾಂತವಾಗಿ ಹರಿಯುತ್ತಿದ್ದ ಕಾವೇರಿ ಹಿಂದಿನ ಮೂರ್ನಾಲ್ಕು ದಿನಗಳಲ್ಲಿ ಮಾಡಿದ್ದ ಅವಾಂತರಗಳು ಕಣ್ಣಿಗೆ ಬೀಳತೊಡಗಿದವು..
ಕುಶಾಲ ನಗರದಲ್ಲಿ ಕಳೆದ ಮೂರ್ನಾಲ್ಕು ವರುಷದ ಹಿಂದೆ ಹೋಗಿದ್ದಾಗ ಅಲ್ಲಿಯ ರೆಸಾರ್ಟ್ ಗಳೂ, ಹೋಟೆಲ್ ಗಳೂ ಝಗಮಗಿಸುವ ವಿದ್ಯುತ್ ಬಣ್ಣಗಳಿಂದ ಆಹ್ವಾನಿಸುತ್ತಿದ್ದರೆ ಮೊನ್ನೆ ಹೋದಾಗ ಮಾತ್ರ ಕಾಕದೋಳಿ ಮಣ್ಣಿನ ಕಾವೇರಿಯ ನೀರಲ್ಲಿ ಅನೇಕ ರೆಸಾರ್ಟ್ ಗಳು ಮಿಂದೆದ್ದಿದ್ದನ್ನು ನೋಡಿದೆವು. ಟೂರಿಸ್ಟುಗಳ ವೀಕೆಂಡುಗಳು ಅವರವರ ಊರುಗಳಲ್ಲೇ ಮಲಗಿದ್ದವು. ಮುಕ್ಕಾಲು ಭಾಗ ಮುಚ್ಚಿದ್ದ ರೆಸಾರ್ಟೊಂದರ ನೀರು ಪ್ರತಿಷ್ಠಿತರು ಹೀರುವ ವಿಸ್ಕಿಯಂತೆ ನಿಧಾನ ಕೆಳಗಿಳಿಯುತ್ತಿತ್ತು. ಮಾಲೀಕರು ಮತ್ತು ಸಿಬ್ಬಂದಿಗಳು ಬೇಗ ಇಳಿಯಲಿ ಎಂಬ ಪ್ರಾರ್ಥನೆಯಲ್ಲಿದ್ದರು.
ಕಾವೇರಿ ನದಿಯಿಂದ ಸುತ್ತುವರಿಯಲ್ಪಟ್ಟ ಕುಶಾಲನಗರದ ಹೋಟೆಲೊಂದರಲ್ಲಿ ಊಟ ಮಾಡಿ ಎದ್ದಾಗ ಆ ಹೋಟೆಲಿನ ಮಾಲೀಕ ಊಟದ ದುಡ್ಡು ತೆಗೆದುಕೊಳ್ಳಲು ಸುತಾರಾಮ್ ಒಪ್ಪಲಿಲ್ಲ. ನಾನೂರು ಕಿಲೋ ಮೀಟರ್ ದೂರದ ತೀರ್ಥಹಳ್ಳಿಯಿಂದ ನಮ್ಮ ಜಿಲ್ಲೆಗೆ ಬಂದಿರುವುದೇ ಅಲ್ಲದೆ ನಮ್ಮ ಕಷ್ಟ ಕಂಡು ಇಷ್ಟೆಲ್ಲ ತಂದಿದ್ದೀರಿ. ನಿಮ್ಮ ಹತ್ತಿರ ದುಡ್ಡು ತೆಗೆದುಕೊಂಡರೆ ದೇವರು ಮೆಚ್ಚುತ್ತಾನ ಎಂದು ಜಹೀರ್ ಅಬ್ಬಾಸ್ ಹೇಳುತ್ತಿದ್ದಾಗ ಇವರ ಮಾತು ಕುಶಾಲನಗರದಿಂದ ಸ್ವಲ್ಪವೇ ಮುಂದಿರುವ ಮಡಿಕೇರಿಯಲ್ಲಿನ ಅವಗಢದ ಮುನ್ಸೂಚನೆಯಂತೆ ಗೋಚರಿಸಿತು.
ರಸ್ತೆಯ ಇಕ್ಕೆಲಗಳ ಕಾಕದೋಳಿ ಮಣ್ಣಿನ ಧರೆ (ಅಲ್ಲಿ ಬರೆ ಎನ್ನುತ್ತಾರೆ) ಅನಾಮತ್ತಾಗಿ ರಸ್ತೆಗಳನ್ನು ಆಕ್ರಮಿಸಿದ್ದು ಎಲ್ಲೆಲ್ಲೂ ಕಾಣಬಹುದಾಗಿತ್ತು. ಯಾವ ಜೇಸೀಬಿಯಂತಹ ಯಂತ್ರಗಳು ನಿತ್ಯ ಹರಿದ್ವರ್ಣದ ಬೆಟ್ಟಗುಡ್ಡಗಳನ್ನು ಮಟ್ಟ ಮಾಡಿ ರೆಸಾರ್ಟ್, ಕಾಫೀ ತೋಟ, ರಸ್ತೆಗಳಿಗೆ ಕಾರಣವಾಗಿದ್ದವೋ ಅದೇ ಜೆಸಿಬಿ ಯಂತ್ರಗಳು ರಸ್ತೆಗೆ ಬಿದ್ದ ಲೋಡುಗಟ್ಟಲೆ ಮಣ್ಣಿನ ಕ್ಷಿಪ್ರಗತಿಯ ಹೊರಹಾಕುವಿಕೆಗೆ ಕಾರಣವಾಗಿದ್ದನ್ನು ನೆನಪಿಸಿಕೊಂಡು ವಿಷಾದದ ನಗೆ ಬೀರದೆ ಇರದಾಯಿತು ನಮ್ಮ ಪಾಡು..
ಮಡಿಕೇರಿ ಮುಟ್ಟಲು ಇನ್ನೂ ಹತ್ತಾರು ಕಿಲೋಮೀಟರುಗಳಿವೆ ಎನ್ನುವಾಗಲೇ ಮಳೆಯ ರುದ್ರ ನರ್ತನದ ಕುರುಹುಗಳು ಒಂದೊಂದಾಗಿಯೇ ಬಿಚ್ಚಿಕೊಳ್ಳತೊಡಗಿದವು. ಮಡಿಕೇರಿಯ ಬಸ್ ಸ್ಟ್ಯಾಂಡಿನ ಮೇಲೆ ಬಿದ್ದ ರಾಜಾ ಸೀಟೆಂಬ ಐತಿಹಾಸಿಕ ವಾಯು ವಿಹಾರದ ಟನ್ನುಗಟ್ಟಲೆ ಮಣ್ಣು, ಮುರಿದು ಬಿದ್ದ ಬಸ್ಸ್ಟ್ಯಾಂಡೂ, ಧೋ… ಎಂದು ಸುರಿಯುತ್ತಿದ್ದ ಮಳೆಯೂ…., ಕರುಳಿಗೆ ತಾಗಿ ತಾಗಿ ಹೊರ ಹೊಮ್ಮುತ್ತಿದ್ದ ಚಳಿಯೂ….. ತಂಗಾಳಿಯಂತೆ ಬರುತ್ತಿದ್ದ ಮಡಿಕೇರಿಯ ಈ ಹಿಂದಿನ ನೆನಪುಗಳನ್ನೆಲ್ಲ ಮಂಗಮಾಯ ಮಾಡಿಸಹತ್ತಿತು.
ನಾವು ತಂದಿದ್ದ ಸುಮಾರು ಎರಡು ಲಕ್ಷ ರೂಪಾಯಿಗಳ ಪರಿಕರಗಳನ್ನು ಸೂಕ್ತವಾಗಿ, ಅರ್ಹ ನಿರಾಶ್ರಿತರಿಗೆ ತಲುಪಿಸಬೇಕೆಂಬ ತವಕದಲ್ಲಿದ್ದ ನಮಗೆ ಮಡಿಕೇರಿಯ ರಾಜಾಸೀಟೆಂಬುದರ ನೆತ್ತಿಯಲ್ಲಾಗಿರುವ ಅನಾಹುತಗಳತ್ತ ಮನಸ್ಸು ಹೋಗಲು ಸಾಧ್ಯವೇ ಇರಲಿಲ್ಲ.
ಅದೂ ಅಲ್ಲದೆ ಮಡಿಕೇರಿ, ಸೋಮವಾರ ಪೇಟೆ ತಾಲೂಕುಗಳಲ್ಲಿ ಆರಂಭಿಸಲಾಗಿದ್ದ ಹತ್ತಾರು ನಿರಾಶ್ರಿತರ ಕೇಂದ್ರಗಳಿಗೆ ಪರಿಕರಗಳನ್ನು ಕೊಟ್ಟು ಕೈತೊಳೆದುಕೊಂಡು ಬರಲೂ ಮನಸ್ಸಾಗಲಿಲ್ಲ. ಏಕೆಂದರೆ ರೌದ್ರತೆಯನ್ನೂ ಮೀರಿ ತಾಂಡವ ನೃತ್ಯದೋಪಾದಿಯಲ್ಲಿ ಕೊಡಗನ್ನು ಕಬಳಿಸಿದ ಮಳೆಯಲ್ಲಿ ನಿಜವಾಗಿಯೂ ಅನುಭವಿಸಿದವರನ್ನು ಮಾತಾಡಿಸುತ್ತಾ, ಮೈದಡವುತ್ತಾ ತೀರ್ಥಹಳ್ಳಿ ನಾಗರಿಕರ ಔದಾರ್ಯವನ್ನು ತಿಳಿಸಬೇಕೆಂಬ ಉದ್ದೇಶದಿಂದ ಅಲ್ಲಿದ್ದ ಸ್ವಯಂ ಸೇವಕರಾದ ಜಹೀರ್, ತಾನಾ, ವಿನೋದ್, ಮೋಕ್ಷಿತಾ ಗೌರವ್ ಪಟೇಲ್ ಮುಂತಾದವರ ನೆರವಿನೊಂದಿಗೆ ಮಡಿಕೇರಿಯ ಮಲ್ಲಿಕಾರ್ಜುನ ನಗರಕ್ಕೆ ಹೋದೆವು. ಬಡತನವನ್ನೇ ಹಾಸು ಹೊದ್ದಿದ್ದ ಇಲ್ಲಿಯ ಕೆಳವರ್ಗದ ಕುಟುಂಬಗಳು ಜೀವ ಹಿಂಡಿಕೊಂಡೇ ನಮ್ಮೆದುರು ಬಂದವು.
ತಮ್ಮ ಮನೆಯ ಹಿಂದೆ ಇದ್ದ ಧರೆ ಕುಸಿದು ಹಿಂಬಾಗಿಲಿನ ಮೂಲಕ ಪಾತ್ರೆ ಪಗಡಗಳಾದಿಯಾಗಿ ಎಲ್ಲ ವಸ್ತುಗಳನ್ನು ಕೆಸರು ಮಣ್ಣು ಮುಚ್ಚಿಕೊಂಡು ಕೂತಿತ್ತು. ಇವರುಗಳ ಮನೆಯ ಕೆಳಗಿನ ಕಣಿವೆ (ಅಬ್ಬರಿ)ಗೆ ಬೃಹತ್ತಾದ ತಾರಸಿ ಮನೆ ಅನಾಮತ್ತಾಗಿ ಬಿದ್ದಿತ್ತು.ಧರೆಯ ತುದಿಯಲ್ಲಿ ನಿಂತಿದ್ದ ಹತ್ತಾರು ಮನೆಗಳು ಈಗಲೋ ಆಗಲೋ ಬೀಳಲು ಸಿದ್ದವಾಗಿ ನಿಂತಿದ್ದವು. ಆ ಭೀಕರ ಅಬ್ಬರಿಯೋ ಇನ್ನಷ್ಟು ಮನೆಗಳನ್ನು ತನ್ನೊಳಗೆ ಸೇರಿಸಿಕೊಳ್ಳಲು ತನ್ನ ಬೃಹದಾಕಾರದ ಬಾಯಿ ತೆರೆದುಕೊಂಡಂತೆ ಬಾಸವಾಗುತ್ತಿತ್ತು.
ಮಲ್ಲಿಕಾರ್ಜುನ ನಗರ, ಅಂಬೇಡ್ಕರ್ ನಗರ, ಚಾಮುಂಡೇಶ್ವರಿ ನಗರ, ತ್ಯಾಗರಾಜ ನಗರ, ಆಜಾದ್ ನಗರಗಳ ತನು, ಚಣದ್ರಾವತಿ, ಬೀರಪ್ಪ, ಸೋಮಣ್ಣ, ನಾಗವೇಣಿ, ರಮೇಶ, ಸಾವಿತ್ರಿ, ಶಂಕರ, ಅನ್ವರ್, ಹುಸೇನಬ್ಬ, ಫಾತಿಮಾ ಎಲ್ಲರ ಆತಂಕಗಳೂ ಒಂದೇ. ನಮ್ಮ ಮನೆಗಳು ಯಾವುದೇ ಕ್ಷಣದಲ್ಲೂ ಬೀಳುತ್ತವೆ. ಏನು ಮಾಡುವುದು ಎಂಬುದು. ನಿರಾಶ್ರಿತರ ಶಿಬಿರಗಳಲ್ಲಿಗೆ ಹೋದರೆ ಇಲ್ಲಾರು ಎಂಬ ಸೆಳೆತ. ಮೂರು ಹಗಲೂ. ಮೂರು ರಾತ್ರಿ ಅಬ್ಬರಿಸಿದ ಮಳೆಗೆ ಎದುರಾಗಿಯೇ ಕಾಲ ಕಳೆದಿದ್ದರು. ಇವರನ್ನೆಲ್ಲ ಮನ ಒಲಿಸಿ ನಿರಾಶ್ರಿತರ ಶಿಬಿರಗಳತ್ತ ಕೊಂಡೊಯ್ಯುವಲ್ಲಿ ವಿನೋದ್ ಮತ್ತು ಮೋಕ್ಷಿತಾ ಗೌಡ ಇನ್ನಿಲ್ಲದ ಪ್ರಯತ್ನದಲ್ಲಿದ್ದರು.
ಮಡಿಕೇರಿಯ ಪಟ್ಟಣದಲ್ಲಿದ್ದ ನಿರಾಶ್ರಿತ ಶಿಬಿರಗಳಿಗೂ ಒಂದಷ್ಟು ಪರಿಕರಗಳನ್ನು ಕೊಟ್ಟು ಬರಲು ನಮ್ಮ ತಂಡ ಹೋಗುವಾಗ ರಾತ್ರಿ ಒಂಭತ್ತಾಗಿತ್ತು. ದೊಡ್ಡ ದೊಡ್ಡ ಚೌಲ್ಟ್ರಿಗಳಲ್ಲಿ ಸಣ್ಣ ಬೆಳೆಗಾರ, ದೊಡ್ಡ ಬೆಳೆಗಾರ, ಮೇಸ್ತ್ರಿ, ಮ್ಯಾನೇಜರ್ ಎಲ್ಲ ಒಂದಾಗಿದ್ದರು. ಶಿಬಿರಗಳಲ್ಲಿ ನೀಡುತ್ತಿದ್ದ ಅನ್ನಾಹಾರ ಮತ್ತು ಇತರ ಸವಲತ್ತುಗಳನ್ನು ನಾವೆಲ್ಲಾ ಒಂದಾಗಿ ಹಂಚಿಕೊಳ್ಳೋಣ ಎನ್ನುತ್ತಿದ್ದರು.
ದೇವಯ್ಯ, ಜಹೀರ್, ತಮ್ಮಯ್ಯ, ಕಾವೇರಿ, ತನ್ವೀರ್, ರೇಖಾ, ದಿನೇಶ್ ಕಾರ್ಯಪ್ಪ ಮುಂತಾದ ಸ್ಥಳೀಯ ಸ್ವಯಂ ಸೇವಕರುಗಳು ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದರು. ಮಂದಾಲ್ ಪಟ್ಟಿ ಎಂಬಲ್ಲಿ ಉಂಟಾದ ಭೂಕುಸಿತದಲ್ಲಿ ತಾಯಿ ಮಗ ಸೊಸೆ ಪಾರಾಗಿ ಬಂದಿದ್ದರು. ಆದರೆ ತಂದೆ ಮಣ್ಣಲ್ಲಿ ಮಣ್ಣಾದ ವಿಷಯವನ್ನು ಜಫರುಲ್ಲ ಹೇಳುತ್ತಿದ್ದಾಗ ಕುಟುಂಬದಲ್ಲಿ ಉಳಿದಿದ್ದ ಸದಸ್ಯರುಗಳು ನಮ್ಮನ್ನೇ ನಿಟ್ಟಿಸಿರು ಬಿಡುತ್ತಾ ನೋಡುತ್ತಿದ್ದರು.
ಮಾಕೋಡ್ಳು, ಎಮ್ಮೆತಾಳ್, ಕಾಲೂರು, ಮೊಣ್ಣಂಗೇರಿ, ಗಾಳಿಬೀಡು, ಹಾಲೇರಿ, ತಂತಿ ಪಾಲ್, ಮದೆನಾಡು, ಮಾಂದಾಲ್ ಪಟ್ಟಿ, ಕಾಂಡನಗೊಳ್ಳು ಎಂಬ ಸಂಪಾಜೆ ಘಾಟಿ ಸಮೀಪದ ಊರುಗಳು ಸಂಪೂರ್ಣ ನೆಲಸಮವಾಗಿವೆ. ಭೂಕುಸಿತದ ರಭಸಕ್ಕೆ ಯಾರ ಎಸ್ಟೇಟ್ ಎಲ್ಲಿ ಎಂಬಂತಹ ವಾತಾವರಣದಿಂದ ಹೊರಬರುವುದು ಅಸಾಧ್ಯದ ಮಾತು.
ನಿರಾಶ್ರಿತರ ಶಿಬಿರದಲ್ಲಿದ್ದ ದೊಡ್ಡಯ್ಯನವರ ಸಂಸಾರ ಮುಕ್ಕೋಡಿಲಿನದು. ಹತ್ತು ಎಕರೆ ಕಾಫಿ ತೋಟ ಹೋದದ್ದರ ಬಗ್ಗೆ ಅವರಿಗೆ ದುಃಖವಿಲ್ಲ. ನಮ್ಮ ಕುಟುಂಬದ ಅಷ್ಷೂ ಜನ ಬದುಕಿ ಬಂದದ್ದನ್ನೇ ನೆನಪಿಸಕೊಂಡು ಗದ್ಘದಿತರಾಗುತ್ತಾರೆ. ಸಹಾಯಕರಾಗಿ ನಿಂತ ಸ್ವಯಂ ಸೇವಕರ ಬಗ್ಗೆ ಕೃತಜ್ಞರಾಗುತ್ತಾರೆ. ದೊಡ್ಡಯ್ಯನವರ ಮಗ ದರ್ಶನ್ ಪ್ರಕಾರ ಮಗುಚಿ ಬಿದ್ದಿರುವ ತಮ್ಮ ಕಾಫಿತೋಟ ಎಲ್ಲಿತ್ತು ಎಂಬುದನ್ನು ಹುಡುಕುವುದು ಕಷ್ಟದ ಮಾತೆನ್ನುತ್ತಾರೆ. ಸಂಪಾಜೆಯ ಘಾಟಿ ಬಳಿಯ ಬಿಸಿಲೆ ಬೆಟ್ಟದ ಸ್ವಲ್ಪಭಾಗ ಮಾತ್ರ ಕುಸಿದಿದ್ದರಿಂದಲೇ ಆಗಿರುವ ಅನಾಹುತ ಸಹಿಸಲಾಧ್ಯವಾಗಿದೆ, ಪೂರ್ತಿ ಬೆಟ್ಟವೇನಾದರೂ ಕುಸಿದಿದ್ದರೆ ಅಗಬಹುದಾದ ಅನಹುತವನ್ನು ಊಹಿಸಲೂ ಸಾಧ್ಯವಿಲ್ಲ ಎಂದು ತಮ್ಮಯ್ಯನವರು ಹೇಳುತ್ತಿದ್ದಾಗ ಬೆಟ್ಟಗುಡ್ಡಗಳ ಉಳಿವಿಗೆ ಸಮರೋಪಾದಿಯಲ್ಲಿ ಪ್ರಯತ್ನಪಡಬೇಕು ಎಂಬ ಭಾವನೆ ಅವರಲ್ಲಿ ಉಕ್ಕುತ್ತಿತ್ತು.
ನಾಲ್ಕು ವರ್ಷಗಳ ಹಿಂದೆ ಕನ್ನಡ ಸಾಹಿತ್ಯಸಮ್ಮೇಳನಕ್ಕೆ ನಾನೂ ರಮೇಶ್ ಹೋದ ಬಗ್ಗೆ ಬರೆದಿದ್ದೆ. ಮಡಿಕೇರಿಯ ಗುಡ್ಡ ಬೆಟ್ಟಗಳ ಬಗ್ಗೆ. ಅಲ್ಲಿಯ ಮನೆಗಳ ಬಗ್ಗೆ, ಹೂದೋಟಗಳ ಬಗ್ಗೆ, ಅಂತೆಯೇ ಹೋಟೆಲ್ ನಲ್ಲಿ ತಿಂದ ಪಂದಿ ಕರಿಯ ಬಗ್ಗೆ ಕೂಡಾ.. ಅಲ್ಲದೆ ತಮ್ಮ ಊರಿನಲ್ಲಿ ನಡೆಯುತ್ತಿದ್ದ ಐತಿಹಾಸಿಕ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದರೂ ಇಂತಾದ್ದೊಂದು ನಡೆಯುತ್ತಿದೆ ಎಂಬ ಯಾವುದೇ ಕುರುಹುಗಳನ್ನೂ ತೋರಿಸದ ವ್ಯಕ್ತಿತ್ವಗಳ ಬಗ್ಗೆಯೂ ಬರೆದಿದ್ದೆ ಆದರೆ ಅಶ್ಲೇಷಾ ಮಳೆ ಮಾಡಿರುವ ಅನಾಹುತಗಳ ಮಧ್ಯೆ ಮಡಿಕೇರಿಯ ಹಿಂದಿನ ನೆನಪುಗಳು ಸತ್ತೇ ಹೋಗಿವೆ ಎನಿಸುತ್ತಿದೆ.






0 Comments