ಅವನು 'ಮಾಂಸದಂಗಡಿಯ ನವಿಲು'

                                                                      ಮಾಂಸದಂಗಡಿಯ ನವಿಲು

ಕನ್ನಡ ಕಾವ್ಯ ಲೋಕದ ಅದ್ಭುತ ಕವಿ ಎಂದೇ ಗುರುತಿಸಿಕೊಂಡ ಹನುಮಂತಯ್ಯ ಕವಿಗಳ ವಿಕ್ಷಿಪ್ತ ಮನಸ್ಥಿತಿಗೆ ತಾಜಾ ಉದಾಹರಣೆಯಾಗಿಯೂ ನನ್ನ ಕಣ್ಣೆದುರು ನಿಲ್ಲುತ್ತಾರೆ. ಹೀಗಾಗಿಯೇ ಅವರ ‘ಮಾಂಸದಂಗಡಿಯ ನವಿಲು’ ಎಂಬುದು ಅವರ ಎಲ್ಲಾ ವಿಕ್ಷಿಪ್ತತೆಯ ಪ್ರತೀಕವಾಗಿ, ಅವರ ಎಲ್ಲಾ ಪ್ರತಿಭೆಯ ಒಟ್ಟೂ ಮೊತ್ತವಾಗಿ ನಮ್ಮೆದುರಿಗೆ ನಿಲ್ಲುತ್ತದೆ. ಪ್ರತಿ ಕವನವನ್ನು ಓದಿದ ಕೂಡಲೇ ನಮ್ಮ ಮನದೊಳಗೊಂದು ವಿಷಣ್ಣ ಭಾವ ಆವರಿಸುವಂತೆ ಮಾಡುವ ಸಾಮರ್ಥ್ಯ ಇರುವ ಸಂಕಲನ ಇದು. ಇಡೀ ಸಂಕಲನವನ್ನು ಒಂದೇ ಗುಕ್ಕಿಗೆ ಓದಿ ಮುಗಿಸುತ್ತೇನೆ ಎಂದು ನೀವೇನಾದರೂ ಅಂದುಕೊಂಡರೆ ನಿಮ್ಮಷ್ಟು ಮೂರ್ಖರು ಯಾರೂ ಇರಲಾರರು. ಒಂದು ಪುಸ್ತಕವನ್ನು ನನ್ನದು ಎಂದು ಸಿಗುವ ದಿನದ ಒಂದಿಷ್ಟೇ ಸಮಯದಲ್ಲೇ ಓದಿ ಬಿಡುವ ನಾನು ಇದನ್ನು ಓದಲು ಸರಿಯಾಗಿ ಮೂರು ದಿನ ತೆಗೆದುಕೊಂಡಿದ್ದೇನೆಂದರೆ ಯೋಚಿಸಿ, ಈ ವಾರ ರೆಕಮಂಡ್ ಮಾಡಲು ಮಾಂಸದಂಗಡಿಯ ನವಿಲು ಪುಸ್ತಕಕ್ಕಿಂತ ಬೇರೆ ಯಾವ ಪುಸ್ತಕ ಸಿಗಲು ಸಾಧ್ಯ?
ಹಾಗೆ ನೋಡಿದರೆ ಎನ್ ಕೆ ಹನುಮಂತಯ್ಯ ತನ್ನ ಕಾರ್ಯಕ್ಷೇತ್ರವನ್ನಾಗಿ ನನ್ನ ಜಿಲ್ಲೆಯನ್ನೇ ಆಯ್ದು ಕೊಂಡವರು. ಅವರು ಹೊನ್ನಾವರದ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಆಗಮಿಸಿದ್ದ ಸಂದರ್ಭದಲ್ಲಿ ನಾನು ಆಗಷ್ಟೇ ಹೈಸ್ಕೂಲು ಮುಗಿಸಿ, ಕಾಲೇಜು ಮೆಟ್ಟಿಲು ಹತ್ತಿದವಳು. ಹೈಸ್ಕೂಲು ದಿನಗಳಿಂದಲೂ ಗದ್ಯ ಬರೆಹದ ಸಾಲನ್ನು ನಡು ನಡುವೆ ತುಂಡರಿಸಿ, ಒಂದರ ಕೆಳಗೊಂದರಂತೆ ನೀಟಾಗಿ ಜೋಡಿಸಿ ಅದನ್ನೇ ಕವನ ಎಂದು ಭ್ರಮಿಸಿ, ನನಗೆ ನಾನೇ ಕವಿ ಎಂದು ಬಿರುದನ್ನು ಪ್ರಧಾನ ಮಾಡಿಕೊಂಡಿದ್ದೆ. ಹೀಗಾಗಿ ಎನ್ ಕೆ ಹನುಮಂತಯ್ಯನವರ ಪರಿಚಯ ಇಲ್ಲದಿದ್ದರೂ ಕವಿಯಾಗಿ ಪರಿಚಯ ಎಂದೇ ಭಾವಿಸಿದ್ದ ಕಾಲ ಅದು. ಹಠಾತ್ತಾಗಿ ಕವಿ ಎನ್ ಕೆ ಹನುಮಂತಯ್ಯ ಸಾವಿಗೆ ಶರಣು ಎಂಬಂತಹ ವಾಕ್ಯವನ್ನು ಪೇಪರ್ ನಲ್ಲಿ ನೋಡಿದಾಗ ಅದೆಷ್ಟೋ ದಿನಗಳ ಕಾಲ ಕವಿಗಳಿಗಿದು ಕಾಲವಲ್ಲ ಎಂದು ನನಗೆ ನಾನೇ ಹೇಳಿಕೊಳ್ಳುತ್ತ, ಎಲ್ಲ ಕವಿಗಳೂ ಒಂದಲ್ಲ ಒಂದು ದಿನ ಆತ್ಮಹತ್ಯೆ ಮಾಡಿ ಕೊಳ್ಳುತ್ತಾರೆ ಎಂದು ಅತೀವ ಬೇಸರದಲ್ಲಿ ಹನಿಗಣ್ಣಾಗಿ ಹೇಳುತ್ತ ನನ್ನ ಜೊತೆಗಿರುತ್ತಿದ್ದ ಸ್ನೇಹಿತೆಯರ ಕರುಣೆಗೆ ಪಾತ್ರವಾಗುವಂತೆ ನಟಿಸುತ್ತಿದ್ದೆ. ಇದಷ್ಟೇ ನನಗೂ ಹನುಮಂತಯ್ಯನವರಿಗೂ ಇದ್ದ ನಂಟು.
ಆದರೆ ಅದಾಗಿ ದಶಕಗಳ ನಂತರ ಎನ್ ಕೆ ಹನುಮಂತಯ್ಯ ನಿಧಾನವಾಗಿ ಎದೆಗಿಳಿಯತೊಡಗಿದರು. ಅದೂ ಹಿರಿಯ ಪತ್ರಕರ್ತ ಉಗಮ ಶ್ರಿನಿವಾಸರ ಮುಖಾಂತರ. ಮಾತಿಗೆ ಮುನ್ನ ಹನುಮಂತಯ್ಯನವರ ಪ್ರಸ್ತಾಪ ಮಾಡದೇ, ಅಥವಾ ಮಾತು ಮುಗಿಸುವ ಮುನ್ನ ಅವರನ್ನೊಮ್ಮೆ ನೆನಪಿಸಿಕೊಳ್ಳದೆ ಉಗಮ ಶ್ರೀನಿವಾಸ ಮಾತನಾಡಿದ್ದು ನನಗೆ ನೆನಪಿಗೇ ಬರುವುದಿಲ್ಲ. ಅವರ ಪ್ರಸ್ತಾಪ ಬಂದಾಗಲೆಲ್ಲ ಉಗಮ ಶ್ರೀನಿವಾಸರವರು “ನಿನಗೆ ಗೊತ್ತಿಲ್ಲ ಕಣಮ್ಮ, ಆತ ಬದುಕಿದ್ದರೆ ಇಷ್ಟೊತ್ತಿಗೆ ಜ್ಞಾನಪೀಠ ಅವಾರ್ಡ್ ಆಗ್ತಿತ್ತು” ಎಂದು ನಿಡುಸುಯ್ದು ಹೇಳದೇ ಮಾತಿಗೆ ಪೂರ್ಣವಿರಾಮ ಹೇಳಿದ್ದೇ ಇಲ್ಲ. ಹಾಗೆಂದೇ ನನಗೆ ಎನ್ ಕೆ ಹನುಮಂತಯ್ಯನವರನ್ನು ಓದಲೇಬೇಕು ಎಂದು ತೀವ್ರವಾಗಿ ಅನ್ನಿಸಿದ್ದು.
ಅದಕ್ಕೂ ಮೊದಲು ಅದಾವುದೋ ಕವಿಗೋಷ್ಟಿಯಲ್ಲಿ ತನ್ನ ಕವಿತೆಯನ್ನು ವಾಚನ ಮಾಡುವುದು ಬಿಟ್ಟು, ನಾನು ಎನ್ ಕೆ ಹನುಮಂತಯ್ಯನವರ ಕವನ ಓದುತ್ತೇನೆ ಎಂದು ಘೋಷಿಸಿ, ಗೋವು ತಿಂದು ಗೋವಿನಂತಾದವನು ಎಂಬ ಕವಿತೆಯನ್ನು ಇನ್ನೇನು ಅತ್ತೇ ಬಿಡುತ್ತಾನೇನೋ ಎಂಬ ಧ್ವನಿಯಲ್ಲಿ ನಾವೆಲ್ಲ ಉಸಿರು ಬಿಗಿಹಿಡಿದು ಕೇಳಿಸಿಕೊಳ್ಳುವಂತೆ ಮಾಡಿದ್ದ ವೀರಣ್ಣ ಮಡಿವಾಳರ್ ಎನ್ ಕೆ ಹನುಮಂತಯ್ಯನವರ ಕವಿತೆಯ ಕಡೆ ಮೊದಲು ನನ್ನ ಗಮನ ಸೆಳೆದವನು. ಹೀಗಾಗಿಯೇ ನಾನು ಮಾಂಸದಂಗಡಿಯ ನವಿಲು ಪುಸ್ತಕ ಪ್ರಕಟವಾದಾಗ ಬೆನ್ನು ಬಿದ್ದು ತರಿಸಿಕೊಂಡು ಓದತೊಡಗಿದ್ದೆ.
ಕವನ ಸಂಕಲನವನ್ನು ಒಂದು ಸಲ ಓದುವುದೇ ಕಷ್ಟ ಎನ್ನುವ ಇಂದಿನ ದಿನಗಳಲ್ಲಿ ಸಂಕಲನ ನನ್ನ ಕೈ ಸೇರಿದಾಗಿನಿಂದ ಕನಿಷ್ಟ ಏಳರಿಂದ ಎಂಟು ಸಲ ಓದಿದ್ದೇನೆ. ಮೊದಲ ಸಲ ಓದಿದಾಗ ಇಷ್ಟು ಸಾಧಾರಣ ಕವಿತೆಗಳೇ ಎಂದುಕೊಳ್ಳುವಂತಾದರೂ ಮತ್ತೊಮ್ಮೆ ಓದಿದರೆ ಅರೆ ಮೊದಲ ಸಲ ಇದು ಯಾಕೆ ದಕ್ಕಲಿಲ್ಲ ಎಂಬ ಭಾವ. ಪ್ರತಿ ಸಲ ಓದಿದಾಗಲೂ ಹೊಸತೇ ಆದ ಭಾವ.

ಅವರೇ ಹೇಳಿದಂತೆ
ನಾಡಿಯ ಮೇಲೆ ನಾಟ್ಯವಾಡುವ
ಭಾವನೆಗೆ
ಎದೆಯ ಮೃದಂಗ ನುಡಿಸುವ
ಹೂಗೆನ್ನೆ ಹುಡುಗೀ
ನಿನ್ನ ನಿಟ್ಟುಸಿರ ವೀಣೆ ಮಾಧುರ್ಯದಲಿ
ಏನು ಸೊಬಗೋ
(ಕವಿತೆಗೆ)

ಕವಿತೆಯೇ ಹಾಗಲ್ಲವೇ? ಕವಿತೆ ನಿಟ್ಟುಸಿರು ಬಿಟ್ಟರೆ ಮಾತ್ರ ಅದು ಚಂದದ ಕವಿತೆ ಆಗಬಹುದು. ಹೀಗಾಗಿಯೇ ಕವಿತೆ ಎಂಬ ಕನಸೂರಿನ ಬೆಡಗಿ ತುಟಿ ತೂಬು ತೆರೆದರೆ ಕಾವ್ಯ ಹೊನಲಾಗಿ ಹರಿಯುತ್ತದೆ ಎನ್ನುವ ಎನ್ ಕೆ ಹನುಮಂತಯ್ಯನವರಿಗೆ ಕವಿತೆ ಎಂಬುದು ಎದೆಯನ್ನು ಅಪಹರಿಸಿದ ಬೆಡಗಿಯೇ ಆಗಿದ್ದಳು.
ಮುನ್ನುಡಿಯಲ್ಲಿ ರಹಮತ್ ತರಿಕೆರೆಯವರು ಹೇಳುವಂತೆ ಎನ್ ಕೆ ಹನುಮಂತಯ್ಯನವರನ್ನು ಹುಟ್ಟಿನ ಹಿನ್ನಲೆಯಿಂದ ದಲಿತ ಕವಿ ಎಂದು ಹೇಳಬಹುದು. ರಹಮತ್ ತರಿಕೆರೆಯವರು ದಲಿತ ಕವಿಗಳನ್ನು ಒಂದನೇ ತಲೆಮಾರಿನ, ಎರಡನೇ ತಲೆಮಾರಿನ ಎನ್ನುತ್ತ ಮೂರು ಮತ್ತು ನಾಲ್ಕನೆಯ ತಲೆಮಾರಿನವರೆಗೂ ಹೆಸರಿಸುತ್ತಾರೆ. ಮೂರು ಮತ್ತು ನಾಲ್ಕನೆಯ ತಲೆಮಾರಿನ ದಲಿತ ಕವಿಗಳು ಲೋಕವನ್ನು ಗ್ರಹಿಸುವ ರೀತಿಯೇ ವಿಭಿನ್ನ. ಅವರ ಬರವಣಿಗೆಯಲ್ಲಿ ನಮೂದಿಸುವ ಸಂವೇದನೆಗಳು ಹೊಸದೇ ಆಗಿರುತ್ತವೆ. ರಹಮತ್ ತರಿಕೆರೆಯವರೇ ಹೇಳುವಂತೆ ಮೂರನೆ ತಲೆಮಾರಿನ ಮಹತ್ವದ ಕವಿ ಇವರು. ಆದರೆ ಅವರ ಸಂವೇದನೆಯನ್ನು ಕೇವಲ ದಲಿತರಿಗಷ್ಟೇ ಮೀಸಲಾಗಿಡಲು ಸಾಧ್ಯವಿಲ್ಲ. ಹೀಗಾಗಿಯೇ ಅವರನ್ನು ಕೇವಲ ದಲಿತ ಕವಿ ಎಂದು ಹೇಳಿ ನಿರ್ಲಕ್ಷಿಸಲು ಸಾಧ್ಯವಿಲ್ಲ. ಅವರ ಕವಿತೆಗಳಲ್ಲಿ ಲೋಕದ ಸಂವೇದನೆಯನ್ನು ದಲಿತ ಭಿತ್ತಿಯಲ್ಲಿಟ್ಟು ನೋಡುವ ವಿಶಿಷ್ಟ ದೃಷ್ಟಿಕೋನವನ್ನು ಉದಾಹರಿಸುವುದನ್ನು ಕಾಣಬಹುದು.
ಮನ ಕಲಕಿಸುವ ಸಾಲುಗಳನ್ನು ಬರೆಯುವುದರಲ್ಲಿ ಎನ್ ಕೆ ಹನುಮಂತಯ್ಯ ನಿಷ್ಣಾತರಾಗಿದ್ದರೇನೋ… ಇದ್ದುದನ್ನು ಇದ್ದ ಹಾಗೆಯೇ ಇಟ್ಟು ತಾವು ಮುಗುಮ್ಮಾಗಿಬಿಡುವ ಕವಿತೆಗಳು ಕೆಲವೊಮ್ಮೆ ಹೇಳಬೇಕಾದುದಕ್ಕಿಂತ ಹೆಚ್ಚೇನೋ ಹೇಳಿದಂತೆ, ಅರ್ಥ ಮಾಡಿಕೊಂಡಿದ್ದಕ್ಕಿಂತ ಮತ್ತೇನೋ ಇರುವಂತೆ ಕಾಡ ತೊಡಗುತ್ತದೆ.

ಕಿಟಕಿಯ ಕಂಬಿಗಳ ಹಿಂದೆ
ಅವ್ವ ನಿಂತಿದ್ದಾಳೆ
ಕಣ್ಣಲ್ಲಿ ನೀರು ಈಚಲ ಮರದಲ್ಲಿ
ಸೇಂಧಿ ತೊಟ್ಟಿಕ್ಕುವಂತೆ

ಎನ್ನುವ ‘ಅವ್ವ ನಿಂತೇಯಿದ್ದಾಳೆ’ ಎನ್ನುವ ಕವಿತೆ ನಮ್ಮಲ್ಲಿ ಹುಟ್ಟಿಸುವ ಭಾವ ತೀವ್ರತೆಗೆ ಮತ್ತೆ ಮಾತುಗಳೇ ಇಲ್ಲ. ಅವ್ವನ ಕಣ್ಣ ದೃಷ್ಟಿಯನ್ನು ಅನುಸರಿಸಿ ಕಿಟಕಿಯಿಂದ ಆಚೆ ನೋಡಿದರೆ ಆ ಕೊಪ್ಪದಲ್ಲಿ ಅಪ್ಪ ಸತ್ತಾಗ ಅವ್ವನ ತುಟಿಗೆ ನಗುವ ಬಳಿದವನು ನಿನ್ನೆ ಮದುವೆಯಾದ ಹೆಂಡಿರ ಜೊತೆ ಆ ಕೊಪ್ಪದಲ್ಲಿ ಮಲಗಿದ್ದಾನೆ. ಎನ್ನುವಾಗ ಮೈ ಗಡಗಡಿಸುತ್ತದೆ. ಅದೆಲ್ಲವನ್ನೂ ಹೊಲಸು ಎಂದು ಹೋದವನು ಹಿಂದಿರುಗಿ ಬಂದಾಗಲೂ

ಅವ್ವ ನಿಂತೆಯೇ ಇದ್ದಾಳೆ
ನೀರಿಲ್ಲದ ಕೆರೆಯಲ್ಲಿ ಒಣಗಿದ ಏಡಿಯಂತೆ
ನನ್ನ ನೋಡದೆ

ಎಂದು ಕೊನೆಗೊಳ್ಳುವ ಕವಿತೆಯನ್ನು ಓದಿ ಮುಗಿಸಿದಾಗ ಒಂದು ದೀರ್ಘವಾದ ನಿಟ್ಟುಸಿರು ಹೊರಬರದಿದ್ದರೆ ನೀವು ಮತ್ತೊಮ್ಮೆ ಈ ಕವಿತೆಯನ್ನು ಓದಲೇ ಬೇಕು ಎಂಬುದನ್ನು ಅದು ಒತ್ತಿ ಹೇಳುತ್ತದೆ.
ಅನೇಕ ವಿಡಂಬಾತ್ಮಕ ಕವಿತೆಗಳು ಸಂಕಲನದ ತುಂಬಾ ಸಂಚರಿಸುತ್ತವೆ. ದೇವರು, ಧರ್ಮ ಇವೆಲ್ಲಗಳನ್ನು ಮೀರಿಯೂ ಮಠ ಹಾಗೂ ಮಠಾಧೀಶರ ಕುರಿತಾಗಿಯೂ ವ್ಯಂಗ್ಯವಾಡುತ್ತದೆ.

ಒಳಗೆ ಬರುವ ಮೊದಲು
ನಿನ್ನ ಮೆದುಳನ್ನು ಬಗೆದು ನನ್ನ ನಾಯಿಗೆ ಹಾಕು
ಅಲ್ಲೇ ಲದ್ದಿಯಿದೆ
ಯಾರೂ ಮುಟ್ಟದ ನನ್ನ ಧ್ಯಾನದ ಲದ್ದಿ
ಒಳಗೆ ಯಾರೂ ಇಲ್ಲ
ಅದನೇ ತಿನ್ನು
(ಒಳಗೆ ಬರುವಾ ಮೊದಲು)

ಎನ್ನುವಲ್ಲಿ ಅಡಕವಾಗಿರುವ ಒಳಾರ್ಥಗಳು ಸಹೃದಯ ಓದುಗರನ್ನು ಸೆಳೆಯದೇ ಇರಲು ಸಾಧ್ಯವೇ ಇಲ್ಲ. ವಾಸ್ತವವನ್ನು ಚೂಪು ದೃಷ್ಟಿಯಿಂದ ನೋಡುವ ಒಬ್ಬ ಸಂವೇದನಾಶೀಲನೊಳಗೆ ಮಾತ್ರ ಇಂತಹ ಸಾಲುಗಳು ಮೊಳೆಯಲು ಸಾಧ್ಯ.
ಅತ್ಯಾಚಾರ ಎನ್ನುವುದು ಪ್ರತಿದಿನದ ಸುದ್ದಿ. ಇನ್ನೂ ಹಾಲುಗಲ್ಲವೂ ಮಾಸದ ಎಳೆಯ ಕಂದಮ್ಮಗಳು ಸಮಾಜದ ಕ್ರೂರತೆಗೆ ಬಲಿಯಾಗಿ ಜೀವ ಕಳೆದುಕೊಳ್ಳುತ್ತಿರುವಾಗ ನಾವು ಅದನ್ನು ದಿನದ ಮಾಮೂಲಿ ಸುದ್ದಿಯನ್ನಾಗಿ ಓದಿ ಪೇಪರ್ ನ್ನು ರದ್ದಿಯವನಿಗೆ ಮಾರಿ ಕೈ ತೊಳೆದುಕೊಳ್ಳುತ್ತೇವೆ. ದಿನಾ ಸಾಯುವವರಿಗೆ ಅಳುವವರು ಯಾರು ಎಂಬಂತೆ ಮುಖಪುಟದಲ್ಲೊಂದು, ಲೋಕಲ್ ಸುದ್ದಿಗೇ ಇರುವ ಎರಡನೆಯ ಪುಟದ ಕಂಡೂ ಕಾಣದಂತಹ ಮೂಲೆಯಲ್ಲೊಂದು, ಮಧ್ಯದ ಪುಟದಲ್ಲೊಂದು ಹೀಗೆ ಒಂದೇ ಪತ್ರಿಕೆಯಲ್ಲಿ ದಿನದಿನವೂ ಮೂರು- ನಾಲ್ಕು ಅತ್ಯಾಚಾರದ, ದೌರ್ಜನ್ಯದ, ಕೊಲೆಯ, ವಿಷಯಗಳಿದ್ದರೆ ಏನೆಂದು ಪ್ರತಿಕ್ರಿಯಿಸುವುದು ಎಂಬಂತೆ ಬಾಯಿ ಬಿಗಿಹಿಡಿದಿದ್ದೇವೆ. ಅಂತಹ ಸಂದರ್ಭದಲ್ಲಿ

ಈಗ ಎಲ್ಲಿಂದಲೋ ತೇಲಿ ಬರುತ್ತಿವೆ
ದೀಪಗಳಂತೆ
ಕೊಳೆತ ಮೊಲೆಗಳು, ಒಡೆದ ಕೊರಳುಗಳು
ಸುಟ್ಟ ಕಣ್ಣುಗಳು
ಕೇಸರು ಬಿಳಿ ಹಸಿರು ಕತ್ತರಿಸಿದ
ಮರ್ಮಾಂಗಗಳು
(ಸೂರ್ಯ ಭೂಮಿಯ ದಾರಿ)

ಎನ್ನುವ ಸಾಲುಗಳು ಖಂಡಿತಾ ನಮ್ಮನ್ನು ವಿಚಲಿತಳಾಗುವಂತೆ ಮಾಡುತ್ತದೆ. ನಮಗೆ ಮನುಷ್ಯ ದೇಹದ ಭಾಗಗಳೇ ಬಿಕರಿಗಿಟ್ಟ ಸಾಲುಗಳಂತೆ ಗೋಚರಿಸಿ ಹೈರಾಣಾಗಿಸುತ್ತದೆ.
ಎನ್ ಕೆ ಹನುಮಂತಯ್ಯ ಎಂದರೆ ಎಲ್ಲರಿಗೂ ನೆನಪಾಗುವುದು ಅವರ ‘ಗೋವು ತಿಂದು ಗೋವಿನಂತಾದವನು’ ಎಂಬ ಕವಿತೆ. ಹಸುವನ್ನು ಗೋ ಮಾತೆಯ ಸ್ಥಾನಕ್ಕೇರಿಸಿ ಅದಕ್ಕೊಂದು ದೈವಿಕತೆಯನ್ನು ಪ್ರಾಪ್ತವಾಗಿಸಿದ ಸನಾತನ ಧರ್ಮವು ಅದು ಕೇವಲ ಮುಸ್ಲಿಂರ ಆಹಾರ ಮಾತ್ರವಲ್ಲ ಹಿಂದುಗಳು ಎಂದು ಭಾಷಣ ಮಾಡಿಯೂ ಅಸ್ಪ್ರಶ್ಯರನ್ನಾಗಿಸಿ ಸಮಾಜದಿಂದ ದೂರವಿಟ್ಟ ದಲಿತರ ಆಹಾರವೂ ಆಗಿದೆ ಎಂಬುದನ್ನು ಮರೆಯುತ್ತಿದೆ. ಹೀಗೆಂದೇ ಗೋವನ್ನು ತಿನ್ನುವ ದಲಿತರು ಯಾವುದನ್ನೂ ಪ್ರತಿಭಟಿಸದೇ ತಮ್ಮ ಮೇಲಾಗುವ ದೌರ್ಜನ್ಯವನ್ನು ಪಾಪದ ಹಸುವಿನಂತೆ ಒಪ್ಪಿಕೊಳ್ಳುತ್ತ ಹಸುವಿನಂತೆಯೇ ಆಗಿಬಿಡುವ ಚೋದ್ಯದ ಕುರಿತು ಹೇಳುತ್ತಾರೆ.

ಅಸ್ಪ್ರಶ್ಯ,
ಹೌದು, ನಾನು ಗೋವು ತಿಂದು
ಗೋವಿನಂತಾದವನು
ನೀವು ನೀಡುವ ಮೇವು ತಿಂದು
ನಿಮ್ಮಂತಹ ಮನುಷ್ಯನಾಗಲಾರೆ
ಮನುಷ್ಯರನು ತಿನ್ನಲಾರೆ

ಎಂದು ಈ ಎಲ್ಲಾ ಧಾರ್ಮಿಕ, ಸಾಮಾಜಿಕ ಹುನ್ನಾರಗಳಿಗೊಂದು ಪೂರ್ಣ ವಿರಾಮವನ್ನಿಟ್ಟು ಬಿಡುತ್ತಾರೆ.
ಆತ ಆ ಕಾಲೇಜಿನ ಸುರಸುಂದರಾಂಗ. ಆ ಕಾಲಕ್ಕೆ ಹೀರೋ ಎನ್ನಿಸ ಬಲ್ಲ, ಹೀರೋ ಗೀಯರ್ ಸೈಕಲ್ ಮೇಲೆ ಆತ ಕಾಲೇಜಿಗೆ ಬಂದನೆಂದರೆ ಇಡೀ ಕಾಲೇಜು ಆತನನ್ನೇ ನೋಡುತ್ತಿತ್ತು. ಚಂದದ ಡ್ರೆಸ್, ಹೇರ್ ಸ್ಟೈಲ್ ಮತ್ತು ಆತ ನಡೆದಾಡುವ ಭಂಗಿ, ಮಾತನಾಡುವ ರೀತಿ ಎಲ್ಲದರಲ್ಲೂ ಒಂದು ಆಕರ್ಷಣೆ. ಇದೆಲ್ಲಕ್ಕೂ ಹೆಚ್ಚಾಗಿ ಹುಡುಗಿಯರು ಆತನಿಗೆ ಫಿದಾ ಆಗಲು ಹ ಮತ್ತೂ ಒಂದು ಕಾರಣ ಇತ್ತು. ಅದು ಆತನ ನಗೆ. ತುಂಬಾ ರೋಮಾಂಟಿಕ್ ಆದ, ಎಲ್ಲರನ್ನೂ ಸೆಳೆಯ ಬಲ್ಲ ಆ ನಗುವಿಗೆ ಎಷ್ಟು ಜನ ನಿದ್ದೆ ಕಳೆದುಕೊಂಡರೋ ಗೊತ್ತಿಲ್ಲ. ಇದಕ್ಕಿಂತ ಹೆಚ್ಚಾಗಿ ಆತ ಆ ಊರಿನ ಸಣ್ಣ ಪ್ರಮಾಣದ ರೌಡಿಯೂ ಆಗಿದ್ದ. ಗಂಡಸ್ತನದ ಬಗ್ಗೆ ಎಂತಹುದ್ದೋ ಕ್ರೇಜ್ ಇರುವ ಹದಿಹರೆಯದ ಹುಡುಗಿಯರಿಗೆ ಆತ ಚಾಕ್ಲೇಟ್ ಹೀರೋ ಅಷ್ಟೇ ಅಲ್ಲದೇ ರಫ್ ಆಡ್ ಟಫ್ ಕೂಡ ಆಗಿ ಕಂಡು ಹುಚ್ಚಾಗಲು ಮತ್ತೇನು ಬೇಕಿತ್ತು ಹೇಳಿ?
ಆತ ಆ ವರ್ಷ ಪದವಿಯ ಕೊನೆಯ ವರ್ಷದಲ್ಲಿದ್ದ. ಅದೇ ವರ್ಷ ಆಕೆ ಆ ಕಾಲೇಜಿಗೆ ಬಂದಳು. ಒಂದಿಷ್ಟು ಓದಿಕೊಂಡ, ಎಲ್ಲವೂ ತನಗೇ ಗೊತ್ತು ಎಂಬ ಹಮ್ಮಿನಲ್ಲಿರುವ ಹುಡುಗಿ. ಅದಕ್ಕೆ ತಕ್ಕಂತೆ ಯಾವಾಗಲೂ ನಂಬರ್ ಬಿಟ್ಟುಕೊಡದ ಬುದ್ಧಿವಂತಿಕೆ, ಭಾಷಣ, ಚರ್ಚೆ ಎಲ್ಲದರಲ್ಲೂ ಮುಂದು ಆಕೆ. ಆಟದಲ್ಲೂ ಕೂಡ. ಆದರೆ ಬಣ್ಣ ಕಪ್ಪಾನು ಕಪ್ಪು, ಒಂದಿಷ್ಟೂ ಡ್ರೆಸ್ ಸೆನ್ಸ್ ಇಲ್ಲದ, ಯಾವುದೋ ಒಂದು ಚೂಡಿದಾರ ಸಿಕ್ಕಿಸಿಕೊಂಡು ಹಾಗೆ ಬಂದು ಬಿಡುವಷ್ಟು ಎಡವಟ್ಟು. ಯಾರಿಗೂ ಹೆದರದ ಛಾತಿ. ಒಂದು ದಿನ ಆತ ಕಾರಿಡಾರ್ ಮೇಲೆ ಗೆಳೆಯರ ಗುಂಪು ಕಟ್ಟಿ ನಿಂತಿದ್ದ. ಹುಡುಗಿಯರು ಬಂದರೆ ದಾರಿ ಬಿಡಬೇಕು ಅಂತಾನೂ ಗೊತ್ತಾಗೋಲ್ವಾ? ಇವಳು ದಾರಿ ಮಧ್ಯದಲ್ಲಿದ್ದ ಆತನ ಸ್ನೇಹಿತನೊಬ್ಬನಿಗೆ ರೇಗಿದಳು. ತಾನಿದ್ದರೆ ಜೋರಾಗಿ ಉಸಿರಾಡಲೂ ಹೆದರುತ್ತಿದ್ದವರ ಮಧ್ಯೆ ಅವಳ ಮಾತು ಆತನಿಗೆ ಅಚ್ಚರಿಯೆನಿಸಿತು. ಬಹುಶಃ ಅದೇ ಆತನಿಗೆ ಅವಳ ಮೇಲೆ ಆಕರ್ಷಣೆ ಹುಟ್ಟಲು ಕಾರಣವೇನೋ… ತನ್ನ ಬೆನ್ನ ಹಿಂದೆ ಬಿದ್ದ ನೂರಾರು ಹುಡುಗಿಯರನ್ನು ತಿರಸ್ಕರಿಸಿದವನಿಗೆ ತನ್ನನ್ನು ನಿರಾಕರಿಸಿದವಳ ಕಂಡು ಅಚ್ಚರಿ. ಆದರೆ ಆಕೆ ಆತನ ಸ್ನೇಹ ಉಳಿಸಿಕೊಂಡಳು. ಪ್ರೀತಿಯನ್ನು ನಿರಾಕರಿಸಿ. ತನ್ನ ಪ್ರಪೋಸಲ್ ಬೇಡ ಎನ್ನುವವರ ಮೇಲೆ ಆಸಿಡ್ ಸುರಿಯುವವರಿರುವಾಗ ತಾನು ಬೇಡ ಎಂದರೂ ಅನುಚಿತವಾಗಿ ವರ್ತಿಸದೇ ಸ್ನೇಹ ಕಾಪಾಡಿಕೊಂಡವನ ಮೇಲೆ ಅವಳಿಗೂ ಅಷ್ಟೇ ಗೌರವ. ಅವರಿಬ್ಬರ ಸ್ನೇಹ ಉಳಿದವರಿಂದ ಟೀಕೆಗೊಳಗಾಗಿದ್ದೂ ಇತ್ತು.
ಅವಳ ಮದುವೆಯಾಯಿತು. “ನಿಮ್ಮ ಅಣ್ಣನಿಗೆ ಮದುವೆ ಆಗೋಕೆ ಹೇಳು” ಅವಳು ಪದೇಪದೇ ಅವನ ತಮ್ಮನಿಗೆ ಒತ್ತಾಯಿಸುತ್ತಿದ್ದಳು. ನಿಮ್ಮಿಬ್ಬರ ವಿಷಯ ಅದು. ನನಗೆ ಬೇಡ, ತಮ್ಮ ಜಾರಿಕೊಳ್ಳುತ್ತಿದ್ದ. ಈಗ ಸಧ್ಯದಲ್ಲಿ ಆತನ ಮದುವೆ ಆಗಿದೆ. ಅವಳ ಮದುವೆ ಆಗಿ ಹದಿನಾಲ್ಕು ವರ್ಷಗಳ ನಂತರ. ಮದುವೆ ಆದ ಮೇಲಾದರೂ ಆತ ಬದಲಾಗುತ್ತಾನಾ? ಅಥವಾ ಮೊದಲಿನಂತೆಯೇ ಅದೇ ಸ್ನೇಹ ಇರುತ್ತದೆಯೋ ಆಕೆ ಅಂದುಕೊಂಡರೆ, ಮದುವೆಯ ರಾತ್ರಿಯೇ ಆತ ಫೋನಾಯಿಸಿದ್ದಾನೆ. ಅವರ ಸ್ನೇಹ ಹಾಗೆಯೇ ಮುಂದುವರೆದಿದೆ.
ನನ್ನ ಆತ್ಮೀಯ ಗೆಳತಿಯೊಬ್ಬಳ ಕಥೆ ಇದು. ಇಷ್ಟಾಗಿಯೂ ತಾನು ಎಸ್ಸಿ ಅಂತಾನೇ ಆಕೆ ತನ್ನನ್ನು ಒಪ್ಪಲಿಲ್ಲವೇನೋ ಎಂದು ಆತ ಯಾರ ಬಳಿಯೋ ಹೇಳಿದ ಮಾತು ಕಿವಿ ತಲುಪಿ, ಜಾತಿಯ ಬಗ್ಗೆ ಎಂದೂ ಯೋಚಿಸಿದ ತನ್ನ ಬಗ್ಗೆಯೇ ಈಗಲೂ ಕೊರಗುತ್ತಿದ್ದಾಳೆ ಆಕೆ. ಜಾತಿಯ ಕೀಳರಿಮೆ ಆತನಿಂದ ಹೋಗಲಾಡಿಸಲು ಆಕೆ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅವಳ ಮದುವೆಯ ಆಮಂತ್ರಣ ಪತ್ರಿಕೆ ಕೊಡಲು ಹೋಗುವುದನ್ನು ಮಾತ್ರ ಈವರೆಗೆ ಆತ ಅವಳು ಹೇಳಿದ್ದರಲ್ಲಿ ತಪ್ಪಿಸಿಕೊಂಡ ಕೆಲಸ.
ಹೀಗೆ ಒಂದು ಸಂಬಂಧವನ್ನು ಜೀವನಪೂರ್ತಿ ನಿಭಾಯಿಸುವುದು ಅಷ್ಟು ಸುಲಭವೇನಲ್ಲ. ಸಂಬಂಧವನ್ನು ಕೊನೆಯವರೆಗೆ ಉಳಿಸಿಕೊಳ್ಳಬೇಕೆಂದರೆ ಒಂದಿಷ್ಟು ಸಹನೆ, ಕಾಯುವಿಕೆ ಇರಲೇ ಬೇಕು. ಆತುರಪಟ್ಟರೆ ಯಾವ ಸಂಬಂಧವೂ ದೀರ್ಘಕಾಲ ಬಾಳೋದಿಲ್ಲ. ಒಂದಿಷ್ಟು ಎಡವಿದರೂ ಆ ಸಂಬಂಧದ ಎಳೆಯೊಂದು ನಮ್ಮ ಕುತ್ತಿಗೆಯನ್ನೇ ಸೀಳಬಹುದು ಎಂಬುದು ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳಬೇಕೆಂಬುದನ್ನು ಬರಿ ಕವಿತೆಯ ಮುಖಾಂತರವಲ್ಲ, ಬದುಕಿನ ನೇರ ಪ್ರಾತ್ಯಕ್ಷಿಕೆಯಿಂದಲೇ ತೋರಿಸಿಕೊಟ್ಟ ಎನ್ ಕೆ ಹನುಮಂತಯ್ಯನವರ ಕವಿತೆಗಳು ಮಾತ್ರ ಸಾವಿನ ಸುತ್ತಲೇ ಸುತ್ತುತ್ತಿರುವ ಚೋದ್ಯವನ್ನು ನಾವು ಈ ಸಂಕಲನದಲ್ಲಿ ಕಾಣಬಹುದು.
ಅದೇಕೆ ಎನ್ ಕೆ ಹನುಮಂತಯ್ಯನವರಿಗೆ ಸಾವು ಅಷ್ಟೊಂದು ಆಪ್ತವೋ ಅರ್ಥವಾಗುವುದಿಲ್ಲ. ಸಾವಿನ ಕುರಿತು ಬರೆಯುವಾಗ ಅವರ ಪೆನ್ನಿಗೆ ಎರಡೆರಡು ನಾಲಿಗೆ ಇದೆಯೇನೋ ಎಂಬ ಅನುಮಾನ ಹುಟ್ಟಿಸುವಷ್ಟು ತೀವ್ರವಾಗಿ ಸಾವನ್ನು ಅನುಭವಿಸುತ್ತ ಬರೆಯುವುದನ್ನು ಈ ಸಾಲುಗಳಲ್ಲಿ ಕಾಣಬಹುದು.

ಈ ಕರಿಯ ಬೆನ್ನಲ್ಲಿ
ಹಗಲಿರುಳು ತಣ್ಣಗೆ ಕೊರೆದಂತಾಗುತ್ತದೆ
ಮಣ್ಣ ಹಾವುಗಳೆಲ್ಲ ಇಲ್ಲಿ
ಮಲಗಿರಬಹುದೇ
ನನ್ನದೇ ಹೆಣ ಪ್ರತಿಕ್ಷಣ ಕೊಳೆಯುತ್ತಿರಬಹುದೇ..
(ಕವಿ ಮಾತು)

ನಮ್ಮ ಹೆಣವನ್ನು ನಾವೇ ಕಾಣುವುದು ಆಧ್ಯಾತ್ಮ ಸಿದ್ಧಿ ಎಂದು ನೀವೇನಾದರೂ ಭಾವಿಸಿದರೆ ಖಂಡಿತಾ ಅದು ನಿಮ್ಮ ತಪ್ಪು ಕಲ್ಪನೆ.

ನೀನು ಕಣ್ಣು ಮುಚ್ಚಿರುವಾಗ
ಜೀವಗಳ ಮೇಲೆ ಜೀವ ರಣಹದ್ದಿನಂತೆ
ಬಿದ್ದಿದ್ದವು
ಎನ್ನುತ್ತ ಮತ್ತೆ ಮತ್ತೆ ಸಾವನ್ನು ಬರಮಾಡಿಕೊಳ್ಳುತ್ತಾರೆ. ಅಪ್ಪಿಕೊಳ್ಳಲು ಕೈ ಚಾಚುತ್ತಾರೆ.
ಕಡೇ ಗಳಿಗೆಯಲಿ
ನನ್ನ ನೆರಳಲಿ ಕಣ್ಣರಳಿಸಿದ ನೀನು
ನನ್ನ ಬೆರಳಿಗೆ ಬೆದರಿ
ಅಳಲಿಲ್ಲವೇ
ಆ ಕಣ್ಣೀರಲ್ಲಿ ನಿನ್ನ ಹೆಣ
ಇರಲಿಲ್ಲವೇ
(ಗುರುವಿನ ಹೆಣ)

ಎನ್ನುತ್ತ ಸಾವನ್ನು ಎಲ್ಲೆಡೆಯೂ ಕಾಣುತ್ತಾರೆ. ಅವರಿಗೆ ಸಾವು ಅಂಜಿಕೆ ಹುಟ್ಟಿಸುವ ಪರನಲ್ಲ. ಸಾವು ತನ್ನವನೇ ಎಂಬ ನಂಬಿಕೆ ಅವರದ್ದು.

ಇವರು ಸದಾ
ಕುಡಿಯುತ್ತಾರೆ, ಸರಾಯಿಯನ್ನು
ಸಾವನ್ನು
(ಗಡಿಯಾರವಾಗುವವನು)

ಎನ್ನುತ್ತ ಬಡವರಿಗೆ ಸಾವು ಸರಾಯಿ ಕುಡಿದಷ್ಟೇ ಸಲೀಸು ಎಂಬುದನ್ನು ಎಗ್ಗಿಲ್ಲದೇ ಹೇಳಿ ಬಿಡುವ ಪರಿಯೇ ಓದುಗನಲ್ಲಿ ಒಂದು ಛಳುಕನ್ನು ಸೃಷ್ಟಿಸಿಬಿಡುತ್ತದೆ.
ಮನುಷ್ಯನಿಗೆ ಒಂದೇ ಸಲ ಹುಟ್ಟು, ಒಂದೇ ಸಲ ಸಾವು ಎನ್ನುವುದು ಸುಳ್ಳು ಬಾಡ್ನಾ ತಾಯಿ ಸಾವನ್ನು ಹೆರುತ್ತಾಳೆ ಅದು ಹುಟ್ಟಲು ಬದುಕಿರುತ್ತದೆ. ಎಷ್ಟೋ ಸಲ ಹುಟ್ಟುತ್ತದೆ, ಎಷ್ಟೋ ಸಲ ಸಾಯುತ್ತದೆ. ಕೋಟಿಗೊಂದು ಸಾವು ಹುಟ್ಟುತ್ತದೆ. ಎನ್ನುವ ಗೊರ್ರಮ ಪಾದ್ರಿಯ ಮಾತು ಎನ್ ಕೆ ಹನುಮಂತಯ್ಯನವರಾಳದ ಮಾತು ಎನ್ನಿಸುವುದು ತಪ್ಪೆನಿಸುವುದಿಲ್ಲ. ಬಡವಾರು ಸತ್ತಾರೆ ಸುಡುವುದಕೆ ಸೌದಿಲ್ಲೋ / ಒಡಲ ಕಿಚ್ಚಲ್ಲಿ ಹೆಣ ಬೆಂದೋ/ ಶಿವನೆ ಬಡವರಿಗೆ ಸಾವ ಕೊಡಬೇಡ ಎನ್ನುವುದು ಅವರ ಅಂತರಂಗದ ದನಿಯಾಗಿರಬಹುದೇ?ಸತ್ತವರು ಬದುಕಿದವರನ್ನು ಪ್ರೀತಿಸಲು ಒಂದು ಸಣ್ಣ ಕಾರಣ ಸಾಕು. ನಾವಿನ್ನು ಸಾವಿನ ಕಾರಣಗಳಿಂದ ದೂರವಾಗಬೇಕು ಎನ್ನುತ್ತಲೇ ಸಾವಿನೆಡೆಗೆ ಮುಖ ಮಾಡುವ ಎನ್ ಕೆ ಹನುಮಂತಯ್ಯನವರ ವಿಕ್ಷಿಪ್ತತೆ ಬಂದದ್ದು ಎಲ್ಲಿಂದ ಎಂಬುದೇ ಪ್ರಶ್ನೆ. ಬದುಕನ್ನು ಛಲದಿಂದ ಎದುರಿಸಿದ ಇಳಿ ವಯಸ್ಸಿನಲ್ಲೂ ಜೀವನೋತ್ಸಾಹವನ್ನು ಕಳೆದುಕೊಳ್ಳದ ಅವರ ತಾಯಿ ಕಣ್ಣ ಮುಂದೆ ಇರುವಾಗಲೇ ಅದಕ್ಕೇ ತಾಯಿ ನಿನಗಿಂತಲೂ ಮೊದಲು ನಾನು ಸಾಯುತ್ತಿರುವೆ . ಮರೆತಾದರೂ ನನ್ನ ಹೆಣದ ಮೇಲೆ ಈ ಮಣ್ಣ ಮುಚ್ಚದಿರು ಎನ್ನುತ್ತ ಸಾವಿಗೆ ಶರಣಾಗಿ ಬಿಡುವ ವೈಪರಿತ್ಯದ ಕುರಿತು ಏನು ಹೇಳಲಿ?
ದಲಿತ ಚಳುವಳಿಯನ್ನು ನವಿಲಿಗೆ ಹೋಲಿಸುತ್ತಿದ್ದ ಎನ್ ಕೆ ಹನುಮಂತಯ್ಯನವರಿಗೆ ನವಿಲೊಂದು ಎಲ್ಲದಕ್ಕೂ ರೂಪಕವಾಗಿ ಒದಗುವ ಪರಿಯನ್ನು ನೋಡಬೇಕು. ಎಲ್ಲೆಲ್ಲಿ ದಲಿತರಿಗೆ ಅನ್ಯಾಯವಾಗುತ್ತದೋ ಅಲ್ಲೆಲ್ಲ ದಲಿತ ಚಳುವಳಿ ಎಂಬ ನವಿಲು ಹೋಗಿ ಮೊಟ್ಟೆಯಿಟ್ಟು ಬರುತ್ತಿತ್ತು ಮತ್ತು ಕೆಲವೇ ದಿನಗಳಲ್ಲಿ ಅಲ್ಲೂ ಕೂಡ ನವಿಲು ಗರಿಗೆದರುತ್ತಿತ್ತು ಎಂಬ ಸುಂದರ ಕಲ್ಪನೆ ಇದರದ್ದು. ಆದರೆ ಇತ್ತೀಚೆಗೆ ಆ ನವಿಲುಗಳನ್ನು ಬೇಟೆಯಾಡಲಾಗಿದೆ ಅಥವಾ ಆಮಿಷವೊಡ್ಡಿ ಮಾಂಸದಂಗಡಿಗೆ ಮಾರಲಾಗಿದೆ ಎಂದು ಹಳಹಳಿಸುವಾಗ ನಿಜಕ್ಕೂ ಅವರ ಕಾಳಜಿಗೆ ಎದೆಯುಬ್ಬುತ್ತದೆ.
ಲಂಕೇಶರ ‘ಅವ್ವ’ ಕವನವನ್ನು ಓದಿದ್ದೀರಲ್ಲ? ಅವ್ವನ ಬಗ್ಗೆ ಬರೆದಿರುವುದರಲ್ಲಿ ಸರ್ವಕಾಲಿಕ ಶ್ರೇಷ್ಟ ಕವನ ಅದು. ಹಾಗಾದರೆ ಅಪ್ಪನ ಬಗ್ಗೆ ಎನ್ ಕೆ ಹನುಮಂತಯ್ಯ ಬರೆದ ಈ ಕವನವನ್ನು ನೀವು ಓದಲೇ ಬೇಕು. ತೀರಾ ವಸ್ತುನಿಷ್ಟವಾಗಿ ಒಂದಿಷ್ಟೂ ಅಡಗಿಸಿಟ್ಟುಕೊಳ್ಳದೇ, ಅಪ್ಪನ ವಿಕೃತಿಯನ್ನು ಸೀದಾ ಸಾದಾ ತೆರೆದಿಡುತ್ತಾರೆ.

ಅವ್ವನ ಸೆರಗಿನಲಿ ಮೀಸೆಗಳ ಹುಡುಕಿ
ಒನಕೆ ಹಿಟ್ಟಿನ ಕೋಲಿನಲೆ
ಹೊಡೆದೊಡೆದು ಅತ್ತವನು
ಇರಳ ಉರುಳಿಗೆ ಶಿರವಿಟ್ಟು ಸತ್ತವನು

ಎನ್ನುತ್ತ ಅವ್ವನ ಮೇಲಿರುವ ಅಪ್ಪನ ಅನುಮಾನದಿಂದ ಆದ ಅನಾಹುತಗಳ ಅನಾವರಣವಿದೆ. ಆದರೆ ಅಂತಹುದ್ದೊಂದು ಪರಿಸ್ಥಿತಿಯನ್ನು ಕಣ್ಣಾರೆ ಕಂಡರೂ ತಾವೂ ಕೂಡ ಅಂತಹುದ್ದೇ ಸುಳಿಯಲ್ಲಿ ಸಿಲುಕಿ ನರಳುತ್ತಾರೆ.
ವಿವಾಹ ಎನ್ನುವುದು ಗಂಡು ಹೆಣ್ಣಿನ ನಡುವಿನ ಸಂಬಂಧವಷ್ಟೇ ಅಲ್ಲ. ಅದೊಂದು ಮಾನಸಿಕ ಅವಲಂಬನೆ ಕೂಡ. ಹಾಗಾದರೆ ವಿವಾಹದಿಂದ ಹೊರತಾಗಿ ಮತ್ತೊಂದು ಮಾನಸಿಕ ಅವಲಂಬನೆ ಇರಬಾರದೇ ಎಂಬ ಪ್ರಶ್ನೆ ಕೇಳಿದರೆ ಉತ್ತರಿಸುವುದು ಸುಲಭವಲ್ಲ. ಅದು ಅವರವರ ವೈಯಕ್ತಿಕ ವಿಚಾರ ಎಂದು ಸುಲಭವಾಗಿ ಕೈತೊಳೆದುಕೊಳ್ಳಬಹುದು. ಆದರೆ ಯಾವುದೇ ಸಂಬಂಧವಿರಲಿ, ಅದು ಗಂಡ- ಹೆಂಡತಿ ನಡುವಿನದ್ದಾಗಿರಬಹುದು, ಅಪ್ಪ- ಅಮ್ಮ ನಡುವಣ ಸಂಬಂಧವಿರಬಹುದು, ಮಕ್ಕಳು ಮತ್ತು ಪಾಲಕರ ನಡುವಣ ಮಮತೆಯಿರಬಹುದು, ಸಹೋದರರ ನಡುವಣ, ಸಹೋದರಿಯರ ನಡುವಣ ವಾತ್ಸಲ್ಯವಾಗಿರಬಹುದು ಅಥವಾ ಪ್ರೇಮಿಗಳಿಬ್ಬರ ನಡುವಣ ಪ್ರೀತಿಯೇ ಆಗಿರಬಹುದು ಅಥವಾ ಲೋಕ ಎಂದೂ ಒಪ್ಪಿಕೊಳ್ಳದ ವಿವಾಹದ ಹೊರಗಿನ ಪ್ರೀತಿ ಅವಲಂಬನೆ, ಆಕರ್ಷಣೆಗಳಿರಬಹುದು. ಸಂಬಂಧ ಯಾವುದೇ ಆಗಿದ್ದರೂ ಎಲ್ಲವನ್ನೂ ನಿಭಾಯಿಸುವ ನಮ್ಮ ಮನಸ್ಥಿತಿ ಅತೀ ಮುಖ್ಯ.
ಒಂದಿಷ್ಟು ಹೊಂದಾಣಿಕೆ ಒಂದಿಷ್ಟು ಸಹನೆ ಎಲ್ಲವನ್ನೂ ನಿಭಾಯಿಸಬಹುದು. ಹಾಗಿಲ್ಲದೇ ಹೋದರೆ ಎನ್ ಕೆ ಹನುಮಂತಯ್ಯನಂತಹ ಒಬ್ಬ ವಿಶಿಷ್ಟ ಸಂವೇದನೆಯ ವ್ಯಕ್ತಿ ಕೂಡ ಆತ್ಮಹತ್ಯೆಗೆ ಶರಣಾಗಬಲ್ಲ. ವೈವಾಹಿಕ ಬದುಕಿನ ಆಚೆಗಿನ ಸಂಬಂಧಗಳು ತನ್ನನ್ನು ತಾನು ಕೊಂದುಕೊಳ್ಳುವಷ್ಟು, ಅಥವಾ ಅದರ ಹೆಸರಲ್ಲಿ ಇನ್ನೊಬ್ಬರ ಜೀವ ತೆಗೆಯುವಷ್ಟು ಕ್ರೂರವಾಗದಿದ್ದಲ್ಲಿ ಸಾಕು.
ಹನುಮಂತಯ್ಯನವರ ನೆನಪಿಗೆಂದು ಅವರ ಇಡೀ ವ್ಯಕ್ತಿತ್ವನ್ನು ‘ಕಿಚ್ಚಿಲ್ಲದ ಬೇಗೆ’ಯಲ್ಲಿ ಕಟ್ಟಿಕೊಟ್ಟ ಶೈಲಜಾ ನಾಗರಘಟ್ಟ ನನಗಿಲ್ಲಿ ಮುಖ್ಯವೆನಿಸುತ್ತಾರೆ. ಬದುಕಿನ ಹಲವು ಸಂಕೀರ್ಣ ಮುಖಗಳನ್ನು ಕಂಡೂ ಬದುಕನ್ನು ಅದ್ಭುತವಾಗಿ ಎದುರಿಸಿದ ದಿಟ್ಟೆಯಾಗಿ ತೋರುತ್ತಾರೆ.

ಬಸಿರಿಗೆ ಬ್ಯಾಟರಿ ಬಿಡುವ ಬೇಟೆಗಾರಾ
ನಿನಗೆಂದೋ ಸಾವು…

ಎನ್ನುತ್ತಲೇ ಅಗಲಿ ಹೋದ ಎನ್ ಕೆ ಹನುಮಂತಯ್ಯನವರ ಮಾಂಸದಂಗಡಿಯ ನವಿಲನ್ನು ಒಮ್ಮೆ ಓದಿ, ಅದರಲ್ಲೊಮ್ಮೆ ಕಳೆದು ಹೋಗಿ. ಮತ್ತೆ ಮತ್ತೆ ಅದನ್ನು ಓದುವ ಹಂಬಲವನ್ನು ಆ ಪುಸ್ತಕವೇ ಸೃಷ್ಟಿಸುತ್ತದೆ,

‍ಲೇಖಕರು Avadhi Admin

August 26, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

6 ಪ್ರತಿಕ್ರಿಯೆಗಳು

  1. ರಾಜು ಪಾಲನಕರ ಕಾರವಾರ

    ಶ್ರೀದೇವಿ ಮೇಡಂ ಈ ವಾರದ ಅವಧಿಯಲ್ಲಿ ನಿಮ್ಮ ಅಂಕಣ ಬರಹ ತುಂಬಾ ಚೆನ್ನಾಗಿದೆ……ಎನ್ ಕೆ ಹನುಮಂತಯ್ಯ ಅವರ…..ಮಾಂಸದಂಗಡಿಯ ನವಿಲು ಕವನ ಸಂಕಲನದ ಕುರಿತು ನಿಮ್ಮ ವಿಮರ್ಶೆ ತುಂಬಾ ಚೆನ್ನಾಗಿದೆ ನಿಮಗೆ ಅಭಿನಂದನೆಗಳು

    ಪ್ರತಿಕ್ರಿಯೆ
  2. ಸುಜಾತ ಲಕ್ಷೀಪುರ

    ಮನಸ್ಸು ನೋವಿನಿಂದ ತುಂಬಿ ಬಂತು.ಎಲ್.ಕೆ.ಹನುಮಂತಯ್ಯ ಅವರ ಗೋವು ತಿಂದು ಗೋವಿನಂತಾದವನು ಕವಿತೆ ಕೇಳಿದ್ದೆ.ಕನ್ನಡದ ಸೂಕ್ಷ್ಮ,ಸಂವೇದನಾಶೀಲ, ಪ್ರಖರ ವೈಚಾರಿಕತೆ ,ಅನುಭವಿಸಿದನ್ನು ಅಷ್ಟೇ ಗಾಢವಾಗಿ ಅಭಿವ್ಯಕ್ತಿಸುವ ಯುವ ಕವಿ ಹುಟ್ಟಿಕೊಂಡರಲ್ಲಾ ಎಂಬ ಸಂಭ್ರಮ ಮತ್ತು ಬೆರಗು ಇರುವಾಗಲೇ ಮರೆಯಾದ ಕವಿ…..ಅವರು ಸತ್ತಾಗ ಹಲವು ಸಭೆಗಳಲ್ಲಿ ಅವರ ನೆನೆದು ನೊಂದುಕೊಂಡವರಲ್ಲಿ ನಾನೂ ಇದ್ದೆ. ಮಾಂಸದ ಅಂಗಡಿಯ ನವಿಲು.. ಪ್ರತಿಮೆ ಅದು. ಸಾವೆಂಬ ಮಾಂಸದಂಗಡಿಯ ನವಿಲಾಗಿ..ಕ್ಷಣ ಕಂಡು ಕಾಣದಾದ ಕವಿ ಹನುಮಂತಯ್ಯ.
    ಕವಿ,ಅವನ ಕವಿತೆ ಮತ್ತು ಅವನ ಸಾವು..ಕವಿತೆಗೆ ಸಾವಿಲ್ಲವೆಂಬ ಮಾತು…ಈ ಕವಿತೆಗಳ ಓದಿಗೆ ರೆಕಮೆಂಡ್ ಮಾಡಿದ ಶ್ರೀದೇವಿಯವರಿಗೆ ಧನ್ಯವಾದ.
    ಮತ್ತೆ ಹುಟ್ಟಿ ಬಾ ಹನುಮಂತಯ್ಯ..

    ಪ್ರತಿಕ್ರಿಯೆ
  3. ವೀರಣ್ಣ ತಿಪ್ಪಣ್ಣ ಮಡಿವಾಳರ

    ನಿಮ್ಮ ಬರಹವನ್ನ ಮತ್ತೊಮ್ಮೆ ಪರಿಶೀಲಿಸಿಕೊಳ್ಳಿ.
    ಎನ್ ಕೆ ತೀರಿಹೋಗಿ ದಶಕವೇನೂ ಆಗಿಲ್ಲ.
    ಅವರು ಹೊನ್ನಾವರಕ್ಕೆ ಬಂದದ್ದು ನೀವು ಕಾಲೇಜು ಓದುತ್ತಿರುವಾಗೇನೂ ಅಲ್ಲ.
    ಅವರು ಹೆಚ್ಚು ಕಡಿಮೆ ನಿಮ್ಮದೇ ವಯಸ್ಸಿನವರು.
    ‘ಕಿಚ್ಚಿಲ್ಲದ ಬೇಗೆ’ ಬಗ್ಗೆ ಕಾಣಿಸಿದ್ದೀರಿ. ಮತ್ತು ಶೈಲಜಾರೇ ಮುಖ್ಯ ಎಂದೂ ಕೂಡ ಬರೆದಿದ್ದೀರಿ.
    ನಿಮಗೆ ಗೊತ್ತಿರಲಿ ಎನ್ ಕೆ ಅಪಾರವಾಗಿ ಪ್ರಾಮಾಣಿಕವಾಗಿ ಮೆಚ್ಚಿದ ಮತ್ತು ಒಪ್ಪಿಕೊಂಡ ಬರಹ ‘ಕಿಚ್ಚಿಲ್ಲದ ಬೇಗೆ’. ಹಾಗಾಗಿ ‘ಮಾಂಸದಂಗಡಿಯ ನವಿಲು’ ಮತ್ತು ‘ಕಿಚ್ಚಿಲ್ಲದ ಬೇಗೆ’ ನನ್ನ ಪ್ರಕಾರ ಒಂದೇ ಆತ್ಮ ಬರೆದ ಎರಡು ಪುಸ್ತಕಗಳು. ಅವರಡು ಬೇರೆ ಬೇರೆ ಧೃವಗಳಲ್ಲ.
    ಮುಖ್ಯವಾಗಿ ದಲಿತ ಕವಿಗಳು ಎಂಬ ನಿಮ್ಮ ನಿರೂಪಣೆಯನ್ನ, ಆ ಕುರಿತ ನಿಮ್ಮ ಸ್ಟೇಟ್ ಮೆಂಟ್ ಗಳನ್ನ, ನೀವು ಉದಾಹರಿಸಿರುವ ನಿದರ್ಶನವನ್ನ ಪರಿಶೀಲಿಸಿಕೊಳ್ಳಿ ಎಂದಷ್ಟೇ ಹೇಳಬಲ್ಲೆ.
    ಇನ್ನು ನೀವು ಮೊದಲ ಪ್ಯಾರಾದಲ್ಲಿ ಬರೆದಿರುವ ಮಾತುಗಳ ಬಗ್ಗೆ ನನ್ನ ತಕರಾರಿದೆ.
    ವಿಮರ್ಶಕ ಎಂದರೆ ಸಹೃದಯ ಎನ್ನುವುದು ಸಾಹಿತ್ಯದ ಪರಂಪರಾಗತ ನಂಬಿಕೆ. ನಿಮ್ಮ ಬರಹದಲ್ಲಿ ಸಹೃದಯತೆ ನನಗೆ ಕಾಣಲಿಲ್ಲ.
    You can’t dictate the reader. ನೀವು ನಿರ್ಣಾಯಕರಲ್ಲ. ಓದುಗರನ್ನ ನೀವು ಮೂರ್ಖರು ಎಂದು ಸಂಬೋಧಿಸುವ ಹಕ್ಕು ನಿಮಗಿಲ್ಲ.
    ವಿಕ್ಷಿಪ್ತತೆ ಯಾವುದು? ಇದಕ್ಕೆ ಉದಾಹರಣೆಗಳು ಯಾರು ಯಾರು?
    ಎನ್ ಕೆ ಮಾತ್ರ ಎಲ್ಲರಿಗೂ ವಿಕ್ಷಿಪ್ತನಾಗಿ ಯಾಕೆ ಕಾಣ್ತಾರೆ?
    ಆತ್ಮಪೂರ್ವಕವಾಗಿ ಕೇಳಿಕೊಳ್ಳಿ.

    ಪ್ರತಿಕ್ರಿಯೆ
  4. ಪ್ರಕಾಶ್ ನಾಯಕ್

    ಮಾಂಸದಂಗಡಿಯ ನವಿಲಿನ ಸುಂದರ ಪರಿಚಯ.

    ಪ್ರತಿಕ್ರಿಯೆ
  5. prathibha nandakumar

    ಸಾಮಾನ್ಯವಾಗಿ ಬಹಳ ಪ್ರಿಯರಾಗಿರುವವರ ಬಗ್ಗೆ ಬರೆಯುವಾಗ ವಸ್ತುನಿಷ್ಠತೆಗಿಂತ ಸಂಭ್ರಮದಲ್ಲಿ ರಮ್ಯತೆಯನ್ನು ಆವಾಹಿಸಿಕೊಂಡು ಬರೆಯುವುದು ವಾಡಿಕೆ. ಶ್ರೀದೇವಿ ಅವರು ಸಹ ಹನುಮಂತಯ್ಯ ಅವರ ಬಗ್ಗೆ ಸ್ವಲ್ಪ ಹೆಚ್ಚೇ ಅನ್ನಿಸುವಷ್ಟು ರಮ್ಯತೆಯಿಂದ ಬರೆದಿದ್ದಾರೆ. ಹನುಮಂತಯ್ಯ ಅವರು ಒಳ್ಳೆಯ ಕವಿ. ಆದರೆ ಅತಿ ರಂಜಕತೆ ಕವಿಗೆ ಮಾಡುವ ಅನ್ಯಾಯ. ಕಾವ್ಯದ ನೆಲೆಯಲ್ಲಿಟ್ಟು ಮಾಡುವ ವಿಮರ್ಶೆ ಮಾತ್ರ ನ್ಯಾಯ ಒದಗಿಸಬಲ್ಲದು. ಒಂದು ಸಲ ನಾನೇ ಕ್ಯಾಶುಯಲ್ ಆಗಿ “ಹನುಮಂತಯ್ಯ ನೀವು ಎಲ್ಲ ರೀತಿಯ ಸಿದ್ಧ ಮಾದರಿಯ ಭಾಷೆಯನ್ನು ಬಳಸುತ್ತೀರಿ, ನಿಮ್ಮದೇ ಆದ ಭಾಷೆ ಕಂಡುಕೊಳ್ಳಿ. ಸಂಸ್ಕೃತಮಯ ಉಪಮೆ ರೂಪಕಗಳನ್ನು ಸ್ವಲ್ಪ ಕೈ ಬಿಡಿ,ನಿಮ್ಮ ಕಾವ್ಯಭಾಷೆಗೆ ಇನ್ನಷ್ಟು ಕಸುವು ಬರುತ್ತದೆ ” ಅಂತ ಹೇಳಿದ ನೆನಪು. ಅಲ್ಲದೇ ವೀರಣ್ಣ ಅವರು ಪರಿಶೀಲಿಸಿಕೊಳ್ಳಿ ಎಂದು ಹೇಳಿದ “ಅವರ ಸಂವೇದನೆಯನ್ನು ಕೇವಲ ದಲಿತರಿಗಷ್ಟೇ ಮೀಸಲಾಗಿಡಲು ಸಾಧ್ಯವಿಲ್ಲ. ಹೀಗಾಗಿಯೇ ಅವರನ್ನು ಕೇವಲ ದಲಿತ ಕವಿ ಎಂದು ಹೇಳಿ ನಿರ್ಲಕ್ಷಿಸಲು ಸಾಧ್ಯವಿಲ್ಲ. ಅವರ ಕವಿತೆಗಳಲ್ಲಿ ಲೋಕದ ಸಂವೇದನೆಯನ್ನು ದಲಿತ ಭಿತ್ತಿಯಲ್ಲಿಟ್ಟು ನೋಡುವ ವಿಶಿಷ್ಟ ದೃಷ್ಟಿಕೋನವನ್ನು ಉದಾಹರಿಸುವುದನ್ನು ಕಾಣಬಹುದು” ಎಂದು ಹೇಳುವಲ್ಲಿನ ಪರಸ್ಪರ ವಿರುದ್ಧಾರ್ಥದ ವಾಕ್ಯಗಳು. ಕನ್ನಡದಲ್ಲಿ “ಕೇವಲ ದಲಿತ ಕವಿ ಎಂದು ಹೇಳಿ ನಿರ್ಲಕ್ಷಿಸಿದ” ಉದಾಹರಣೆಯೇ ಇಲ್ಲ. ಕನ್ನಡದ ದಲಿತ ಸಾಹಿತ್ಯ ಭಾರತದ ಸಾಹಿತ್ಯ ಭಿತ್ತಿಯಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ. ಕೇವಲ ದಲಿತ ಕವಿ ಎಂದು ಹೇಳಿದ ಉದಾಹರಣೆ ನನಗಂತೂ ಗೊತ್ತಿಲ್ಲ.

    ಪ್ರತಿಕ್ರಿಯೆ
    • Shreedevi keremane

      ನನಗೆ ಹನುಮಂತಯ್ಯನವರ ವೈಯಕ್ತಿಕ ಪರಿಚಯವಿಲ್ಲ ಮೇಡಂ. ಹೀಗಾಗಿ ಆಪ್ತತೆಯಿಲ್ಲ.
      ಈ ಅಂಕಣ ವಿಮರ್ಶೆಗೆ ಸಂಬಂಧ ಪಟ್ಟಿಲ್ಲ. ಪುಸ್ತಕ ಚೆನ್ನಾಗಿದೆ. ಓದಿ ಎನ್ನುವ ಶಿಪಾರಸ್ಸು ಅಷ್ಟೇ. ನಾನು ಇಲ್ಲಿ ಪುಸ್ತಕ ವಿಮರ್ಶೆ ಮಾಡುತ್ತಿಲ್ಲ ಎಂದು ವಿನಮ್ರವಾಗಿ ತಿಳಿಸುತ್ತಿದ್ದೇನೆ ಮೇಡಂ

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: