ಮಠದ ಒಡೆಯರಾಗಿ ನೀವು 1008, ಆದರೆ..

ಮಠದ ಒಡೆಯರಾಗಿ ನೀವು 1008 ಆದರೆ 

ಜನರ ಪ್ರತಿನಿಧಿಯಾಗಿರುವ ನಾನು 10,008

ಆರ್.ಟಿ.ವಿಠ್ಠಲಮೂರ್ತಿ

 

ಅವತ್ತು ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಗಾಬರಿಯಿಂದ ಕಾರು ಹತ್ತಿ ಕುಳಿತರು.ಹಣೆಯಲ್ಲಿ ಛಳ ಫಳ ಅಂತ ಬೆವರು.

ಕೃಷ್ಣ ಹಾಗೆ ಗಾಬರಿಯಿಂದ ಬೆವರಲೂ ಒಂದು ಕಾರಣವಿತ್ತು.ಅವತ್ತು ವಿದಾನಸೌಧಕ್ಕೆ ಬಂದ ಅವರು ತಮ್ಮ ಕೆಲಸ ಮುಗಿಯುತ್ತಿದ್ದಂತೆಯೇ ಮನೆಗೆ ಹೊರಡಲೆಂದು ಸಚಿವರೊಬ್ಬರ ಜತೆ ಪಶ್ಚಿಮ ದ್ವಾರದ ಬಳಿ ಮೆಟ್ಟಿಲಿಳಿಯುತ್ತಿದ್ದರು.

ಇನ್ನೇನು ಅವರು ಮೆಟ್ಟಿಲಿಳಿದು ಕಾರು ಹತ್ತಿ ಕೂರಬೇಕು.ತಕ್ಷಣವೇ ಅಲ್ಲಿದ್ದ ಧಡೂತಿ ವ್ಯಕ್ತಿಯೊಬ್ಬ ವಿದಾನಸೌಧದ ಕಡೆ ಬೆರಳು ತೋರಿಸುತ್ತಾ,ಇಲ್ಲಿರುವವರೆಲ್ಲ ಕಳ್ಳರು.ಬಡಬಗ್ಗರು ಕೆಲಸಕ್ಕೆ ಅಂತ ಬಂದರೆ ಮಾನ ಮರ್ಯಾದೆ ಏನೂ ಇಲ್ಲದೆ ಲೂಟಿ ಮಾಡಲೂ ಹೇಸದವರು.ಇವರನ್ನೆಲ್ಲ ಒಬ್ಬೊಬ್ಬರನ್ನಾಗಿ ನಿಲ್ಲಿಸಿ,ಗುಂಡು ಹಾಕಿ ಕೊಂದು ಬಿಡಬೇಕು ಎಂದು ಜೋರಾಗಿ ಅರಚಿಕೊಂಡ.

ಈ ರೀತಿ ತಾವು ಕಾರು ಹತ್ತಲು ಬರುತ್ತಿರುವಾಗಲೇ ಒಬ್ಬ ವ್ಯಕ್ತಿ,ಅದೂ ಅಪರಿಚಿತನೊಬ್ಬ ಹೀಗೆ ಕೂಗು ಹಾಕಿದ್ದರಿಂದ ಸಹಜವಾಗಿಯೇ ಕೃಷ್ಣ ಅವರಿಗೆ ಗಾಬರಿಯಾಗಿದೆ.ಹಾಗಂತಲೇ ಗಬಕ್ಕಂತ ಕಾರು ಹತ್ತಿ ಕುಳಿತಿದ್ದಾರೆ.ಆದರೆ ಅವರ ಜತೆಗಿದ್ದ ಸಚಿವರು ಮಾತ್ರ ಆ ಸಂದರ್ಭದಲ್ಲಿ ನಗುತ್ತಾ ಕಾರು ಹತ್ತಿದರು.
ಸರಿ,ಕಾರು ಹೊರಟಿತು.ಹೀಗೆ ಹೊರಡುತ್ತಿದ್ದಂತೆಯೇ ನಗುತ್ತಾ ಕುಳಿತಿದ್ದ ಮಂತ್ರಿಯನ್ನು ನೋಡಿದ ಎಸ್.ಎಂ.ಕೃಷ್ಣ ಅವರು,ಅಲ್ರೀ ವಿಶ್ವನಾಥ್,ಹಾಗೆ ಬಾಯಿಗೆ ಬಂದ ಹಾಗೆ ಕೂಗುತ್ತಿದ್ದಾನಲ್ಲ?ಯಾರವನು?ನಿಮಗೆ ಗೊತ್ತಾ?ಅಂತ ಕೇಳಿದ್ದಾರೆ.

ಅದಕ್ಕೆ ಪ್ರತಿಯಾಗಿ ವಿಶ್ವನಾಥ್,ಗೊತ್ತು ಸಾರ್.ಆತನ ಹೆಸರು ಹೆಚ್.ಸಿ.ಗೌಡ ಅಂತ.ತುಂಬ ದೂರದವನೇನಲ್ಲ.ಅಮ್ಮಾವರ (ಶ್ರೀಮತಿ ಪ್ರೇಮಾ ಕೃಷ್ಣ) ಊರಿನವನು.ಆಗಾಗ ವಿದಾನಸೌಧಕ್ಕೆ ಬರುತ್ತಿರುತ್ತಾನೆ.ಬಂದಾಗೆಲ್ಲ ಈ ರೀತಿ ಸತ್ಯವನ್ನೂ ಹೇಳುತ್ತಿರುತ್ತಾನೆ ಎಂದರು.
ವಿಶ್ವನಾಥ್ ಹಾಗೆ ಹೇಳಿದ್ದೇ ತಡ,ಎಸ್.ಎಂ.ಕೃಷ್ಣ ತಮ್ಮ ಗಾಬರಿಯನ್ನು ಮರೆತು ಕಾರಿನಲ್ಲೇ ಬಿದ್ದು ಬಿದ್ದು ನಗತೊಡಗಿದರು.

ಇದೇ ವಿಶ್ವನಾಥ್ ಮೊಟ್ಟ ಮೊದಲ ಬಾರಿ ಶಾಸಕರಾಗಿದ್ದರು.ಆ ಸಂದರ್ಭದಲ್ಲಿ ಕರ್ನಾಟಕದ ದೊಡ್ಡ ಉದ್ಯಮಿಯೊಬ್ಬರು (ಈಗವರು ಸಿದ್ಧರಾಮಯ್ಯ ಸಂಪುಟದಲ್ಲಿ ಮಂತ್ರಿ) ಅವರನ್ನು ಭೇಟಿ ಮಾಡಿದರು.

ಹೀಗೆ ಭೇಟಿ ಮಾಡಿದವರು ಅದು ಇದು ಮಾತನಾಡುತ್ತಾ,ರೀ ವಿಶ್ವನಾಥ್,ನಿಮ್ಮಿಂದ ನನಗೊಂದು ಸಹಾಯ ಆಗಬೇಕಲ್ರೀ ಎಂದು ಹೇಳಿದರು.ಅದಕ್ಕುತ್ತರವಾಗಿ ಇವರು,ಹೇಳಿ ಸಾರ್ ಎಂದರು.

ಮತ್ತೇನೂ ಇಲ್ಲ ವಿಶ್ವನಾಥ್. ಸಾಹೇಬರು ( ದೇವರಾಜ ಅರಸು ) ನನಗೆ ಮೆಡಿಕಲ್ ಕಾಲೇಜು ಓಪನ್ ಮಾಡಲು ಪರ್ಮಿಶನ್ ಕೊಡಿಸಿದ್ದಾರೆ.ಬೇಕಾದಷ್ಟು ಸಹಾಯ ಮಾಡಿದ್ದಾರೆ.ಈಗ ನನಗೆ ದುಡ್ಡಿಗೇನೂ ಬರವಿಲ್ಲ.ಆದರೆ ಒಂದು ಸಲ ಶಾಸಕನಾಗುವ ಆಸೆ ಇದೆ.ಆದರೆ ಚುನಾವಣೆಗೆ ನಿಲ್ಲಲು ಸಾಹೇಬರ ಬಳಿ ಟಿಕೆಟ್ ಕೇಳುವುದು ಹೇಗೆ?ಹೀಗಾಗಿ ನೀವೇ ಹೆಲ್ಪು ಮಾಡಬೇಕು.ನಿಮ್ಮನ್ನು ಕಂಡರೆ ಸಾಹೇಬರಿಗೆ ಪ್ರೀತಿ ಜಾಸ್ತಿ ಎಂದು ಪೇಡಿದರು.

ಅಷ್ಟು ದೊಡ್ಡ ಶ್ರೀಮಂತ.ರಾಜ್ಯದ ಗಣ್ಯ ಉದ್ಯಮಿ.ತಮ್ಮ ಬಳಿ ಅಂಗಲಾಚುತ್ತಿರುವುದನ್ನು ಕಂಡ ವಿಶ್ವನಾಥ್,ಅರೇ,ಇದಕ್ಯಾಕೆ ಯೋಚಿಸುತ್ತೀರಿ ಸಾರ್.ನಾನು ಸಾಹೇಬರ ಬಳಿ ನಿಮ್ಮ ಪರವಾಗಿ ರಿಕ್ವೆಸ್ಟ್ ಮಾಡುತ್ತೇನೆ ಎಂದರು.

ಸರಿ,ಇದಾದ ಮಾರನೆಯ ದಿನ ವಿಶ್ವನಾಥ್ ಅವರು ದೇವರಾಜ ಅರಸರನ್ನು ಭೇಟಿ ಮಾಡಿದರು,ಹೋದವರೇ ನೇರವಾಗಿ ವಿಷಯ ತಿಳಿಸಿದರು:ಸಾರ್,ಪಾಪ,ಅವರು ಚುನಾವಣೆಗೆ ನಿಲ್ಲಬೇಕಂತೆ.ಒಂದು ಟಿಕೆಟ್ ಕೊಡಿ ಸಾರ್.ಹೋಗಲಿ ಎಂದರು.

ವಿಶ್ವನಾಥ್ ಆಡಿದ ಮಾತು ಕೇಳಿದ್ದೇ ತಡ, ದೇವರಾಜ ಅರಸರ ಮುಖ ಸಿಟ್ಟಿನಿಂದ ಕೆಂಪಾಯಿತು.ಹಾಗಂತಲೇ,ಏನು?ನಿನ್ನ ಬಳಿ ಹೇಳಿ ಕಳಿಸಿದನಾ ಅವನು?ವಿಶ್ವನಾಥ್.ನಿನಗೊಂಡು ವಿಷಯ ಗೊತ್ತಿರಲಿ.ನೀನು ಪೈಸೆ ಪೈಸೆಗೂ ಲೆಕ್ಕ ಹಾಕಿ ಚುನಾವಣೆಯಲ್ಲಿ ಗೆದ್ದು ಬಂದಿದ್ದೀಯ.ನಿನಗೆ ರಾಜಕೀಯ ಎಂದರೆ ಉದ್ಯಮವಲ್ಲ.ವ್ಯವಸ್ಥೆಯನ್ನು ಸುಧಾರಿಸಲು ಸಿಕ್ಕ ವೇದಿಕೆ.

ಹೀಗಾಗಿ ನಿನಗೆ ಜನರ ಕೆಲಸ ಮಾಡಲು ಬೇಕಾದಷ್ಟು ಟೈಮು ಇದೆ.ಆದರೆ ಆತ ಬಿಸಿನೆಸ್ ಮನ್.ಒಂದು ವೇಳೆ ಆತ ಶಾಸಕನಾದರೆ ಏನು ಮಾಡುತ್ತಾನೆ ಹೇಳು?ತನ್ನ ಉದ್ಯಮವನ್ನು ಬೆಳೆಸಿಕೊಳ್ಳಲು ಈ ಅಧಿಕಾರವನ್ನು ಏಣಿ ಮಾಡಿಕೊಳ್ಳುತ್ತಾನೆ.ನೀನು ಬಡಜನರನ್ನು ಮೇಲೆತ್ತಲು ಏಣಿಯಾಗಬೇಕಾದವನು.ಆದರೆ ಆತ ಅದೇ ಜನರನ್ನು ಏಣಿಗಳನ್ನಾಗಿ ಮಾಡಿಕೊಂಡು ಮೇಲೇರಲು ಬಯಸುವವನು.ಅಂತವರು ಶಾಸಕರಾದರೆ ಪ್ರಜಾಪ್ರಭುತ್ವಕ್ಕೆ ಅಪಾಯ.ಹೋಗು.ನೀನಿನ್ನೂ ಸಣ್ಣವನು.ಅವನ ಲೆಕ್ಕಾಚಾರ ಏನು ಅನ್ನುವುದು ನಿನಗಿಂತ ಚೆನ್ನಾಗಿ ನನಗೆ ಅರ್ಥವಾಗುತ್ತದೆ ಎಂದರು.ವಿಶ್ವನಾಥ್ ದುಸುರಾ ಮಾತನಾಡಲಿಲ್ಲ.ಹಾಗೆಯೇ ಮುಂದೆ ತಮ್ಮ ರಾಜಕೀಯ ಬದುಕಿನಲ್ಲಿ ಅಂತವರಿಗೆ ತಪ್ಪಿಯೂ ಟಿಕೇಟ್ ಕೊಡಿಸಲಿಲ್ಲ.

ಇದೇ ವಿಶ್ವನಾಥ್ ಆಗ ಎಸ್.ಎಂ.ಕೃಷ್ಣ ಅವರ ಸರ್ಕಾರ ಬಂದ ಹೊಸತರಲ್ಲಿ ಪ್ರಾಥಮಿಕ ಹಾಗೂ ಫ್ರೌಢಶಿಕ್ಷಣ ಸಚಿವರಾಗಿದ್ದರು.ಇಲಾಖೆಯ ಗರ್ಭವನ್ನು ಹೊಕ್ಕು,ಅಲ್ಲಿದ್ದ ಮಣ್ಣು,ಮಸಿ ಅಂತ ತಗಲಿಕೊಂಡಿದ್ದ ಕೊಳೆಯನ್ನು ತೊಳೆಯತೊಡಗಿದರು.

ಒಂದು ಸಲ ಸರ್ಕಾರದ ಅನುದಾನ ಪಡೆಯುತ್ತಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳ ಬುಡಕ್ಕೇ ಕೈ ಹಾಕಿದರು.ಅಲ್ಲಿ ನಡೆಯುತ್ತಿದ್ದ ಭಾನಗಡಿಗಳ ವಿವರ ಹೊರಗೆಳೆದರು.ಹೀಗೆ ಅವರು ಈ ಕೆಲಸಕ್ಕೆ ಕೈ ಹಾಕುತ್ತಿದ್ದಂತೆಯೇ ರಾಜ್ಯದ ಬಹುತೇಕ ಮಠಾಧಿಪತಿಗಳು,ಹೋ ಅಂತ ದೊಡ್ಡ ಅಬ್ಬರವನ್ನೇ ಎಬ್ಬಿಸಿದರು.
ಇಂತಹ ಕಾಲದಲ್ಲೇ ಮಧ್ಯ ಕರ್ನಾಟಕ ಭಾಗದ ಓರ್ವ ಪ್ರಭಾವಿ ಮಠಾಧೀಶರು ಇವರನ್ನು ದೂರವಾಣಿಯ ಮೂಲಕ ಸಂಪರ್ಕಿಸಿದರು.ಸರಿ,ಕರೆ ಮಾಡಿದ ಮಠಾಧೀಶರನ್ನು ಇವರು ಗೌರವದಿಂದಲೇ ಮಾತನಾಡಿಸಿದರು.

ಆದರೆ ತಕ್ಷಣವೇ ಆ ಮಠಾಧೀಶರು,ಏಯ್,ವಿಶ್ವನಾಥ್,ಸೀದಾ ವಿದಾನಸೌಧದಿಂದ ಬೆಂಗಳೂರಿನಲ್ಲಿರುವ ನಮ್ಮ ಮಠಕ್ಕೆ ಬರ್ರೀ.ಕೆಲವು ಫೈಲುಗಳಿವೆ.ಅದಕ್ಕೆ ಸಿಗ್ನೇಚರು ಮಾಡಿ ಹೋಗ್ರೀ.ಅವಕ್ಕಾಗಿ ದಿನಾ ನಿಮ್ಮನ್ನು ಕಾಯಲು ನನಗೆ ಟೈಮಿಲ್ಲ ಎಂದು ಘರ್ಜಿಸಿದರು.
ಅವರ ಈ ಘರ್ಜನೆಯನ್ನು ಕೇಳಿದ್ದೇ ತಡ ವಿಶ್ವನಾಥ್ ರ ಕೋಪ ನೆತ್ತಿಗೇರಿತು.ಹಾಗಂತಲೇ:ರೀ ನೀವು ನಿಮ್ಮ ಮಠಕ್ಕೆ ಸ್ವಾಮೀಜಿಯಾದರೆ,ನಾನು ಜನರಿಂದ ಆಯ್ಕೆಯಾದವನು.ಅವರ ಆಶೀರ್ವಾದದಿಂದ ಮಂತ್ರಿಯಾದವನು.ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ದೊಡ್ಡವರು.ನಾನು ಅವರ ಮಾತು ಕೇಳುತ್ತೇನೆ.ನಿಮ್ಮಂತವರ ಮಾತನ್ನಲ್ಲ.

ಒಬ್ಬ ಮಂತ್ರಿ ಹೇಳಿದ ಕೂಡಲೇ ಮಠಕ್ಕೆ ಓಡಿ ಬರಬೇಕು ಎಂದು ನೀವು ಬಯಸಬಹುದು.ಆದರೆ ಜನಪ್ರತಿನಿಧಿಯಾಗಿ ನಾನು ಅಂತಹ ದಯನೀಯ ಮಟ್ಟಕ್ಕಿಳಿದರೆ ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆದಂತೆ.ನೆನಪಿಡಿ,ನೀವು 1008 ಆದರೆ ನಾನು 10008.ಇಡ್ರೀ ಫೋನು ಕೆಳಗೆ ಅಂತ ಗುಡುಗಿದರು.

ಅವರು ಗುಡುಗಿದ ಹೊಡೆತಕ್ಕೆ ಮಾನ್ಯ 108 ತಣ್ಣಗಾಗಿ ಹೋಗಿದ್ದರು.ಹೀಗೆ ಹೇಳಲು ಹೋದರೆ ನಿಜಕ್ಕೂ ಕರ್ನಾಟಕ ಕಂಡ ಅಪರೂಪದ ನಾಯಕ ಹೆಚ್.ವಿಶ್ವನಾಥ್ ಕುರಿತು ನಿಮಗೆ ನಾನು ನೂರು ಘಟನೆಗಳನ್ನು ಹೇಳಬಹುದು.

ಆದರೆ ಒಬ್ಬ ರಾಜಕಾರಣಿಯ ಬದುಕು ಯಾವೆಲ್ಲ ಏರಿಳಿತಗಳನ್ನು ಹೊಂದಿರುತ್ತದೆ ಎಂಬ ಕಾರಣಕ್ಕಾಗಿ ಇದನ್ನೆಲ್ಲ ನಿಮ್ಮ ಬಳಿ ಹೇಳಿದೆ.ಅಂದ ಹಾಗೆ ಇವೆಲ್ಲ ಯಾಕೆ ನೆನಪಿಗೆ ಬಂತು ಎಂದರೆ,ಇವತ್ತು ಪ್ರೆಸ್ ಕ್ಲಬ್ಬಿನಲ್ಲಿ ಸಂಜೆ ಕುಳಿತು ಪತ್ರಕರ್ತರಾದ ರವಿಕುಮಾರ್ ಹಾಗೂ ಸವಿತಾ ಸುರ್ವೆ ಅವರ ಜತೆ ಮಾತನಾಡುತ್ತಿದ್ದೆ.
ಹೀಗೆ ಮಾತನಾಡುತ್ತಿದ್ದ ಕಾಲಕ್ಕೆ ಸರಿಯಾಗಿ ವಿಶ್ವನಾಥ್ ಅಲ್ಲಿಗೆ ಬಂದರು.ಬಂದವರು ನನ್ನನ್ನು ನೋಡುತ್ತಲೇ,ಸೀದಾ ನಾವಿದ್ದ ಜಾಗಕ್ಕೆ ಬಂದು ಕುಳಿತೇ ಬಿಟ್ಟರು.ಯಥಾ ಪ್ರಕಾರ,ಅವರ ಜತೆ ಮಾತಿಗೆ ಕುಳಿತರೆ ಆಫ್ ದಿ ರೆಕಾರ್ಡ್ ಸ್ಡೋರಿಗಳಿಗೆ ಬರವೇ ಇಲ್ಲ.ಹಾಗಂತಲೇ ಅದೂ ಇದು ಮಾತನಾಡುತ್ತಾ,ಅವರ ಜತೆಗಿನ ಒಂದು ಫೋಟೋ ಮೆಮೊರಿಗಾಗಿ ಇರಲಿ.ಪ್ಲೀಸ್ ತೆಗೆಯಿರಿ ಎಂದು ಸವಿತಾ ಸುರ್ವೆ ಅವರಿಗೆ ಹೇಳಿದೆ.

ವಿಶ್ವನಾಥ್ ಎಂದಿನಂತೆ ನಗುತ್ತಾ ಕುಳಿತರು.ಮನೆಗೆ ಬರುವ ವೇಳೆಗಾಗಲೇ ಅವರ ಜತೆಗಿನ ಎರಡು ದಶಕಗಳ ಒಡನಾಟದ ನೆನಪುಗಳ ನಿರಂತರ ಮೆರವಣಿಗೆ ಅದಕ್ಕಾಗಿ ನಿಮ್ಮ ಬಳಿ ಇದೆಲ್ಲವನ್ನೂ ಹೇಳಿಕೊಂಡೆ.

 

‍ಲೇಖಕರು admin

May 26, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: