ನಾನು ಇಸ್ಕಾನ್ ಗೆ ಹೋಗ್ತಿರ್ತೇನೆ..

ಸುಧಾ ಚಿದಾನಂದಗೌಡ 

ನಾನು ಇಸ್ಕಾನ್ ಗೆ ಹೋಗ್ತಿರ್ತೇನೆ…ಆದರೆ ಎಂದೂ ಅವರ ನಂಬಿಕೆಗಳನ್ನು ನಂಬುವುದಿಲ್ಲ. ಅವೈಜ್ಞಾನಿಕ. ಅದೂ ಮಕ್ಕಳ ಮೆದುಳುಗಳನ್ನು ತಿಕ್ಕಿ ತೊಳೆಯುವ ಜಾಗಗಳಿಗೆ ಮಕ್ಕಳನ್ನು ಕಳಿಸುವುದು ನಿಮ್ಮದೇ ತಪ್ಪು. ಅವರ ಮಿತಿಗಳ ಬಗ್ಗೆಯೂ ಅರಿವು ಉಳ್ಳವರಾಗಿರಬೇಕಾಗುತ್ತದೆ. ಕೆಲದಿನಗಳ ಹಿಂದೆ ಇಸ್ಕಾನ್ ಕುರಿತು ಬರೆದ ಒಂದು ನೋಟ್- ಇಲ್ಲಿ ಕೊಟ್ಟಿದ್ದೇನೆ.

ರಾಜಧಾನಿಯ ಹೃದಯಭಾಗವಿರುವ ರಾಜಾಜಿನಗರದ ಸುಮಾರು ಏಳು ಎಕರೆ ಎತ್ತರಪ್ರದೇಶವನ್ನು ಕರ್ನಾಟಕ ಸರ್ಕಾರ 80 ರ ದಶಕದಲ್ಲಿ ಪಾಳು ಬಂಜರು ಭೂಮಿಯೆಂದು ಪರಿಗಣಿಸಿ ಧಾರ್ಮಿಕ ಸಂಸ್ಥೆಯೊಂದಕ್ಕೆ ಕೊಟ್ಟಿತೆಂದರೆ ನಂಬಬೇಕೋ ಬಿಡಬೇಕೋ ಗೊಂದಲ…
ಆದರೆ ಇದು ಸತ್ಯ.

ಈ ಸತ್ಯಕ್ಕೆ ಸಾಕ್ಷಿ- ಎದುರಿಗೇ ಸರ್ವಾಂಗ ಸುಂದರವಾಗಿ ತಲೆಯೆತ್ತಿ ನಿಂತಿರುವ ಇಸ್ಕಾನ್ ..ರಾತ್ರಿಯ ಕತ್ತಲಲ್ಲಿ ದೀಪಗಳೇ ಮೈದುಂಬಿ ಝಗಮಗಿಸುತ್ತಾ ಆಸ್ತಿಕರನ್ನೂ ಒಂದುಕ್ಷಣ ಮರುಳುಮಾಡುವ ಬೆಳಕಿನ ಸೌಂದರ್ಯ..ಅದೇ ಪಾಳುಭೂಮಿಯಲ್ಲಿ ಅರಳಿನಿಂತಿರುವ ಒಂದಿಡೀ ಕ್ಯಾಂಪಸ್.. ಚಿನ್ನಲೇಪಿತ ಒಳಾಂಗಣ ನೋಡುವಾಗ ಭಕ್ತಿಭಾವ ಮೂಡುವುದಕ್ಕಿಂತ ಅಬ್ಬಾ ಎಂಬ ಅನಿಸಿಕೆ…

ರಾಧಾಕೃಷ್ಣಮಂದಿರ..
ಹೆಸರೇ ಆಕರ್ಷಕ..

ಅದರ ಶಾಖೆಗಳು ತುಂಬ ಕಡೆಯಿವೆ. ಆದರೆ ರಾಜಾಜಿನಗರದ ಮಂದಿರ ಸಮುಚ್ಛಯ ಮೊದಲಿನದು. ಆಗಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾರಿಂದ ಉದ್ಘಾಟಿಸಲ್ಪಟ್ಟಿತ್ತು.. ಇದೀಗ ಕನಕಪುರ ರಸ್ತೆಯಲ್ಲೊಂದು ಮಂದಿರ ನಿರ್ಮಾಣಗೊಳ್ಳುತ್ತಿದೆಯಂತೆ.. ಅದರ ವಿಸ್ತೀರ್ಣವೆಷ್ಟು ಗೊತ್ತೇ…? 70 ಎಕರೆ..!
ಕೃಷ್ಣನ ಹೆಸರಲ್ಲಿ ಏನು ಅಮಲೋ, ಏನು ಮಾಯಕವೋ..ಯಾರಿಗೂ ತಿಳಿಯದು..

ಆದರೆ ಪ್ರಪಂಚದ ಸಾಕಷ್ಟು ಜನ ಅವನ ಹೆಸರೆತ್ತಿ, ತೋಳುಗಳನೆತ್ತಿ, ಉನ್ಮಾದಿತರಾಗಿ ಹರೇಕೃಷ್ಣಾ ಎಂದು ಒರಲುವುದು ಸುಳ್ಳಲ್ಲ.
ಅದು ಭಾವುಕತೆಯ ಅತಿರೇಕವೋ,
ಭಾರತೀಯ ಪರಂಪರೆ, ಪೌರಾಣಿಕತೆಗಳ ಅತಿರಂಜಿತ ರಮ್ಯಕಥೆಗಳ ಬಗೆಗಿನ ಬೆರಗೋ,
ಕೃಷ್ಣನ ಬಾಲ್ಯ, ಯೌವನಗಳಲ್ಲಿನ ಒಂದರಹಿಂದೊಂದು ಘಟಿಸುವ ಘಟನೆಗಳ ಬಗೆಗಿನ ಅಚ್ಚರಿಯೋ ಅಥವಾ ಜೊತೆಗಿರುವ ರಾಧೆಯ ನೋವು ತುಂಬಿದ ಪ್ರೇಮಮಯ ವ್ಯಕ್ತಿತ್ವವೋ..

ಒಟ್ಟಾರೆ ಇಸ್ಕಾನ್ ಒಂದು ಹೊಸ ಪ್ರಜ್ಞೆಯನ್ನೇ ಹುಟ್ಟುಹಾಕಿತು.
ಕೃಷ್ಣ ಪ್ರಜ್ಞಾಪಂಥ ಎಂದೇ ಹೆಸರಿಟ್ಟುಕೊಂಡಿತು.

ಇದನ್ನು ದೇವಸ್ಥಾನವೆಂದು ಕರೆಯೋಣವೆಂದರೆ ಯಾವ ದೇವಸ್ಥಾನದಲ್ಲೂ ಸಮೋಸಾ, ಪಫ್ ಗಳನ್ನು ಮಾರುವುದಿಲ್ಲ. ಧಾರ್ಮಿಕ ಸಮುಚ್ಛಯವೆಂದು ಕರೆಯೋಣವೆಂದರೆ ಸಮುಚ್ಛಯಗಳಲ್ಲಿ ದೇವಸ್ಥಾನಗಳಿರುವುದಿಲ್ಲ…ಇದ್ದರೂ ಕರಕುಶಲಕಲೆಗಳ ಅಂಗಡಿಮುಂಗಟ್ಟುಗಳು ಈ ಪಾಟಿ ಇರುವುದಿಲ್ಲ..
ಒಟ್ಟಿನಲ್ಲಿ ಗೊಂದಲ..

ಮಧ್ಯೆ..

ಸಾವಿರಾರು ವಿದ್ಯಾರ್ಥಿಗಳಿಗೆ ಬಿಸಿಯೂಟ ಬಡಿಸುವ ಅಕ್ಷಯ ಪಾತ್ರೆ ಫೌಂಡೇಷನ್ ನ ಕ್ರೆಡಿಟ್ಟು..ಈ ಕಾರ್ಯಕ್ರಮ ಕುರಿತು NATIONAL GEOGRAPHIC ನಂಥಾ ಪ್ರತಿಷ್ಠಿತ ಚಾನಲ್ ನಲ್ಲಿ ಡಾಕ್ಯೆಮೆಂಟರಿಯ ಕಿರೀಟ..ಜೊತೆಜೊತೆಗೇ ಭಾರತದ ಬಡಮಕ್ಕಳನ್ನು ತೋರಿಸಿ ಫಾರಿನ್ ಫಂಡ್ ಸಂಗ್ರಹಿಸಲಾಗುತ್ತದೆಯೆಂಬ ಆರೋಪವೂ ಕೆಲವರ್ಷಗಳ ಹಿಂದೆ ಇಸ್ಕಾನ್ ಗೆ ತಗಲಿಕೊಂಡಿತ್ತು..

ಇದನ್ನು ಮೀರಿ ನಿಂತಿರುವುದು ರಾಧಾಕೃಷ್ಣರ ಕೈಚಾಚಿ ಒಬ್ಬರಿಗೊಬ್ಬರು ಶರಣಾಗತರಾಗಿ ನಿಂತಿರುವ ಆ ಭಾವಭಂಗಿ.. “ನಾವಿಬ್ಬರು..ನಾವಿಬ್ಬರೇ..”ಎಂಬಂಥಾ ಆ ತಾದಾತ್ಮ್ಯಭಾವ..ಅದನ್ನುಪಯೋಗಿಸಿಕೊಂಡು ಮನುಷ್ಯರು ಏನೆಲ್ಲಾ ಮಾಡಿಕೊಂಡರೆ ನಾವು ಜವಾಬ್ದಾರರಲ್ಲ ಎಂಬಂಥಾ ತುಂಟತನವೂ ಕೃಷ್ಣನ ಮುಖದಲ್ಲಿದ್ದಿರಬಹುದು..

ಇದೆಲ್ಲಾ ಈಗ್ಯಾಕೆ ಹೇಳ್ತಿದೇನೆಂದರೆ..

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಎದ್ದು, ಮನೆಗೆ ಹತ್ತಿರವಿರುವ ಈ ಕೃಷ್ಣಗಿರಿಯ ಮೇಲೆ ವಾಕ್ ಹೊರಡುವುದು ನನಗೆ ನೆಚ್ಚಿನ ಹವ್ಯಾಸ. ಆವಾಗವಾಗ..ಮುಂಜಮುಂಜಾನೆ ಇಲ್ಲಿಗೆ ಬಂದು… ದೀಪಗಳ ಬೆಳಕಿನಲ್ಲಿ ಬೆಳಗಿನ ನಾಲ್ಕರ ಪೂಜೆ ನಡೀತಿರುತ್ತೆ…ನಾನು ಹೊರಗೆ ಅಡ್ಡಾಡಿಕೊಂಡಿರ್ತೇನೆ..ಕೊಳದ ದಂಡೆಯಲ್ಲಿ ನಡೆದಾಡುವುದೊಂದು ಸೊಗಸಾದ ಅನುಭವ..

ಮೊನ್ನೆ ಹೀಗೇ ರಾಧಾಕೃಷ್ಣಮಂದಿರದ ಗೋಪುರವನ್ನು ದಿಟ್ಟಿಸುತ್ತಾ ಕೊಳದ ಕಾರಂಜಿಯ ಪಕ್ಕ ಕುಳಿತಿರುವಾಗ ಇದೆಲ್ಲಾ ಹೊಳೆಯಿತು.. ಭಕ್ತಿ ಇತ್ಯಾದಿಗಿಂತಲೂ ಆ ವಾತಾವರಣ ಇಷ್ಟವಾಗುತ್ತೆ…

‍ಲೇಖಕರು avadhi

May 26, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shama

    ಭಕ್ತಿ ಇತ್ಯಾದಿಗಿಂತಲೂ ಆ ವಾತಾವರಣ ಇಷ್ಟವಾಗುತ್ತೆ…

    Yes… Same here

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: