ಭ್ರಷ್ಟಾಚಾರಕ್ಕೆ ಓಝೋನ್ ಪದರ ಈ “IAS ಚಾದರ”

ಎರಡು ವರ್ಷಗಳ ಕೆಳಗೆ ಸಾಮಾಜಿಕ ಪ್ರಶ್ನೋತ್ತರ ಫೋರಂ ಒಂದರಲ್ಲಿ ಒಂದು ಕುತೂಹಲಕರ ಚರ್ಚೆ ನಡೆಯಿತು.  ಅಜ್ನಾತವಾಗುಳಿಯಬಯಸಿದ್ದ, ತಾನು ಸಂಭಾವಿತನೆಂದು ಹೇಳಿಕೊಂಡ ಉತ್ತರ ಪ್ರದೇಶ ಕೆಡೇರಿನ 2010 ಬ್ಯಾಚಿನ IAS ಅಧಿಕಾರಿಯೊಬ್ಬರು ಹಲವು ಒಳಗಿನ ಸಂಗತಿಗಳನ್ನು ಅಲ್ಲಿ ಬಿಚ್ಚಿಟ್ಟಿದ್ದರು. ಆ ಸಂಗತಿಗಳು ಬೆಚ್ಚಿಬೀಳಿಸುವಂತಿದ್ದವು. ಅವರು ಬಹಿರಂಗಪಡಿಸಿದ ಕೆಲವು ಸತ್ಯಗಳು ಇಲ್ಲಿವೆ:

* ದೇಶದಲ್ಲಿ ಈವತ್ತು 1000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ತೂಗುವ ಕಡಿಮೆ ಪಕ್ಷ 5  ಮಂದಿ IAS ಅಧಿಕಾರಿಗಳಿದ್ದಾರೆ.

* ಇಡಿಯ ದೇಶದಲ್ಲಿ ಒಟ್ಟು ಹತ್ತು ಮಂದಿ “ಒಣ” ಪ್ರಾಮಾಣಿಕರಿರಬಹುದು. ಅವರನ್ನು ಹೆಚ್ಚಾಗಿ ಅತ್ತಿಂದಿತ್ತ ವರ್ಗಾವಣೆ ಹೆಸರಲ್ಲಿ ಉರುಳಾಡಿಸುತ್ತಿರುತ್ತಾರೆ, ಯಾವುದಾದರೂ ಇಲಾಖೆಯಲ್ಲಿ ಹಗರಣಗಳಾದಾಗ, ಸರಕಾರ ಕೆಲಸ ಮಾಡುತ್ತಿದೆ ಎಂದು ತೋರಿಸಲು ಅವರನ್ನು ಬಳಸುವುದಿದೆ.

* ಒಬ್ಬ IAS ಅಧಿಕಾರಿಗೆ ಸಂಬಳ 50,000ದಿಂದ 2,25,000ರೂ. ಗಳಷ್ಟು ಇರುತ್ತದೆ. ಆದರೆ, ಒಂದು ವರ್ಷದಲ್ಲಿ ಒಬ್ಬ ಸಾಮಾನ್ಯ ಜಿಲ್ಲಾಧಿಕಾರಿ ಮಟ್ಟದ IAS ಅಧಿಕಾರಿ ಕೂಡ ಸುಲಭವಾಗಿ 5-10 ಕೋಟಿ  ಸಂಪಾದಿಸುತ್ತಾರೆ. ಇದು, ಮಧ್ಯಮ ಪ್ರಮಾಣದ ಭ್ರಷ್ಟರ ಕಥೆ. ಇನ್ನು ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಇದರ ಐದರಿಂದ ಹತ್ತು ಪಟ್ಟು ಹೆಚ್ಚು ದುಡಿಯುತ್ತಾರೆ. ಒಬ್ಬ ಟಿಪಿಕಲ್ IAS ಅಧಿಕಾರಿ, ಮಧ್ಯಮ ಪ್ರಮಾಣದ ಭ್ರಷ್ಟನಾಗಿದ್ದರೆ, ತನ್ನ 30-35 ವರ್ಷಗಳ ಸೇವಾವಧಿಯಲ್ಲಿ ಏನಿಲ್ಲೆಂದರೂ 100-200 ಕೋಟಿ ರೂ.ಗಳ ಆಸ್ತಿ ಸಂಚಯನ ಮಾಡಿರುತ್ತಾನೆ.

*ನೈಸರ್ಗಿಕ ವಿಕೋಪಗಳು, ದೊಡ್ಡ ದೊಡ್ಡ ಯೋಜನೆಗಳು ಬಂದರಂತೂ IAS ಅಧಿಕಾರಿಗಳಿಗೆ ಸುಗ್ಗಿ. ಆ ಜಿಲ್ಲೆಗೆ ಸರಕಾರ ಕೊಡುವ ಪರಿಹಾರ ಪ್ಯಾಕೇಜಿನಲ್ಲಿ ದೊಡ್ಡ ಪಾಲು ಅಧಿಕಾರಿಯದೇ ಆಗಿರುತ್ತದೆ. ಅವರು ತಿಂಗಳೊಪ್ಪತ್ತಿನಲ್ಲೇ 5-10 ಕೋಟಿ ದುಡಿದುಕೊಳ್ಳುತ್ತಾರೆ.

*ಇಲಾಖೆಯ ತೀರಾ ಕೆಳಮಟ್ಟದಲ್ಲಿ ಸಿಬ್ಬಂದಿಗಳಿಗೆ ಜನ ಕೊಡುವ 200-500 ರೂಪಾಯಿಗಳ ಲಂಚವೂ ಕೂಡ ಮೇಲು ಮಟ್ಟದ ಅಧಿಕಾರಿಗಳು, ಮಂತ್ರಿಗಳ ತನಕವೂ ಹರಿದು ಹಂಚಿಕೆ ಆಗುತ್ತದೆ. ಹೀಗೆ ತನ್ನ ಪಾಲಿಗೆ ಬರುವ “ತಿಂಗಳ ಕವರು” ಮಾತ್ರ ನೆಚ್ಚಿಕೊಂಡಿರುವವರು ಈವತ್ತಿನ ಅಧಿಕಾರಿ ಜಗತ್ತಿನಲ್ಲಿ “ಪ್ರಾಮಾಣಿಕರು”. ಅಲ್ಲಿಂದಲೂ ಕೆಳಗಿಳಿದು ಹಣ ಗೋರತೊಡಗಿದರೆ ಮಾತ್ರ “ಭ್ರಷ್ಟರು!”

ಇಂತಹದೊಂದು ಸುವ್ಯವಸ್ಥೆಯಲ್ಲಿ “ಮಾಫಿಯಾ” ಇಲ್ಲ ಎಂದರೆ ನಂಬುವವರಾದರೂ ಯಾರು!

ಆ ಚರ್ಚೆಯ ಲಿಂಕ್ ಇಲ್ಲಿದೆ:

https://www.quora.com/How- much-do-corrupt-IAS-officers- earn-intially

 

IAS ಮಾಫಿಯಾ

ಸರಕಾರಗಳನ್ನೇ ನಡೆಸುವ, ಅಲ್ಲಾಡಿಸುವ ತಾಕತ್ತಿರುವ ಈ IAS ಲಾಬಿಗಳು ಇಂದು ತಮಗಿರುವ ಅಧಿಕಾರ ಮತ್ತು ನಿಲುಕುಗಳನ್ನು ಬಳಸಿಕೊಂಡು ತಮ್ಮ ಇಮ್ಯುನಿಟಿ ಹೆಚ್ಚಿಸಿಕೊಂಡಿರುವುದಂತೂ ಸತ್ಯ. ಇಂತಹದೊಂದು ಭಯವಿಲ್ಲದ ವ್ಯವಸ್ಥೆ “ಪ್ರಾಮಾಣಿಕತೆ”, “ಭ್ರಷ್ಟಾಚಾರ ನಿರ್ಮೂಲನ”, “ಪ್ರಜಾತಂತ್ರದ ರಕ್ಷಣೆ”ಯ ಮಾತುಗಳನ್ನಾಡಿದಾಗ ಉಳಿದವರಿಗೆ ಭಯವಾಗುತ್ತದೆ. ಸುಧಾರಣೆಯ ಯಾವುದೇ ವ್ಯವಸ್ಥೆ ಬಂದರೂ ಅದಕ್ಕಿಂತ ಒಂದಿಂಚು ಮೇಲ್ಮಟ್ಟದಲ್ಲಿ ನಿಂತಿರುವ ಈ ‘ಪೂರ್ಣಾಧಿಕಾರ’ ಲಾಬಿಗೆ ಒಂದು ಕಡಿವಾಣ ಈವತ್ತು ಜರೂರಿದೆ.

ಕರ್ನಾಟಕ ಮೂಲದ ಒಬ್ಬರು IAS ಅಧಿಕಾರಿಯ ಅಸಹಜ ಸಾವು ಈಗ ದೇಶದ ಉದ್ದಗಲಕ್ಕೂ IAS ಮಾಫಿಯಾ ಬಗ್ಗೆ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಸ್ವತಃ ಹಲವರು IAS ಅಧಿಕಾರಿಗಳೇ ಗುರುತಿಸಿರುವಂತೆ, ಕರ್ನಾಟಕದಲ್ಲಿ IAS ಲಾಬಿ ಪ್ರಬಲವಾಗಿದ್ದು, ಇತ್ತೀಚೆಗೆ ರಾಜ್ಯ ಸರಕಾರ ದೇಶದ ಅತ್ಯಂತ ಭ್ರಷ್ಟ ಆಡಳಿತದ ರಾಜ್ಯ ಎಂಬ ಪಟ್ಟ ಏರುವಲ್ಲಿ ಇವರ ಕೊಡುಗೆ ನಿರ್ಣಾಯಕವಾಗಿತ್ತು. ಹೊರನೋಟಕ್ಕೆ ಮಹಾ ಸಂಭಾವಿತ ಗಢಣದಂತೆ ಕಾಣುವ, ಮಾತೆತ್ತಿದರೆ ಉಪದೇಶಗಳನ್ನೇ ನೀಡುವ ಈ ಅಧಿಕಾರಿಗಳಿಗಿರುವ ಬಲುದೊಡ್ಡ ಆಯುಧ ಎಂದರೆ “ ಸಾರ್ವಜನಿಕ ಉತ್ತರದಾಯಿತ್ವ” ಇಲ್ಲದಿರುವುದು. ಸ್ವತಃ ರಾಜಕಾರಣಿಗಳಿಗೆ 5  ವರ್ಷಗಳಿಗೊಮ್ಮೆ ಜನರನ್ನು ಎದುರಿಸುವ ಪರೀಕ್ಷೆ ಇರುತ್ತದೆ; ಈ IASಗಳಿಗೆ ಅದೂ ಇಲ್ಲ. ಹಾಗಾಗಿ ರಾಜಕಾರಣಿಗಳಿಗಿಂತಲೂ ಇವರೇ ಪ್ರಜಾತಂತ್ರಕ್ಕೆ ಹೆಚ್ಚು ಅಪಾಯಕಾರಿ.

ಪ್ರಜಾತಂತ್ರ ವ್ಯವಸ್ಥೆ ನಡೆದು ಬಂದ ಹಾದಿಯನ್ನು ಹಿಂದಿರುಗಿ ನೋಡಿ, ಅಲ್ಲಲ್ಲಿ ಕಾಲಕಾಲಕ್ಕೆ ಕೋರ್ಸ್ ಕರೆಕ್ಷನ್ ಗಳು ಆಗದಿದ್ದರೆ, ಅಂತಹ ಪ್ರಜಾತಂತ್ರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಇಂತಹದೊಂದು “ಬೆಕ್ಕಿಗೆ ಗಂಟೆ ಕಟ್ಟುವ” ಚರ್ಚೆ ಕರ್ನಾಟಕದಿಂದಲೇ ಆರಂಭಗೊಂಡರೆ ಒಳ್ಳೆಯದು.

 ಎಳೆಯ IAS ಅಧಿಕಾರಿ ಅನುರಾಗ್ ತಿವಾರಿ ಅವರ ಕೊಲೆಯ ಗದ್ದಲ ಕೂಡ ಇತರ ಎಲ್ಲ ಗದ್ದಲಗಳಂತೆ ಇನ್ನೊಂದಿಷ್ಟು ದಿನಗಳಲ್ಲಿ ಮೂಲೆ ಸೇರಲಿದೆ. ಆದರೆ ಅದಕ್ಕಿಂತ ಮೊದಲು ನಮ್ಮ ಇಂಟರ್ ಪ್ರೆಟೇಟಿವ್ ಸಂವಿಧಾನವನ್ನು ತಮ್ಮ ಮೂಗಿನ ನೇರಕ್ಕೆ ಇಂಟರ್ಪ್ರೆಟ್ ಮಾಡಿಕೊಂಡು, ತಮ್ಮ ಅಧಿಕಾರ-ಸ್ಥಾನ-ಮಾನಗಳಿಗೆ ಚ್ಯುತಿ ಬರದಂತೆ ದಪ್ಪ ಓಝೋನ್ ಪದರ ಕಟ್ಟಿಕೊಂಡಿರುವ ಕಾರ್ಯಾಂಗದ ಅತುಲ್ಯ ತಾಕತ್ತನ್ನು ಸಂತುಲ್ಯಗೊಳಿಸುವ ಚರ್ಚೆ ಆರಂಭಗೊಳ್ಳಬೇಕು. ಅದು ಪ್ರಜಾತಂತ್ರದ ಇತರ ಕಂಬಗಳಾದ ಶಾಸಕಾಂಗೀಯ- ನ್ಯಾಯಾಂಗೀಯ ಅಂಗಣಗಳಲ್ಲೂ ಪ್ರಸ್ತಾಪವಾದರೆ ಸಕಾಲಿಕ.

 

‍ಲೇಖಕರು avadhi

May 25, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: