ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಗಳು ಮತ್ತು ಕಾಫಿ ಹುಡಿ

ಸೌಮ್ಯ ಪ್ರಸಾದ್ 

ನಿನ್ನೆಯಂತಿಲ್ಲ ಇಂದಿನ ಕಾಫಿ
ಮಗಳೆಂದಳು
ಬೇಡಮ್ಮ ನನಗೆ
ಕೈಯಲ್ಲಿನ ಕಾಫಿ
ಕಪ್ ಕೆಳಗುಳಿಯಿತು
ಸಾಲಾಗಿ ಜೋಡಿಸಿದ್ದ ಕಾಫಿ ಹುಡಿಗಳ ಡಬ್ಬ
ಅಣಕಿಸಿತು

ಕಾಫಿಗೂ ಇದೆ ಅದರದೇ ಲಯ ಸೊಗಸು
ಸುಗಂಧ
ಹದವರಿತು ಬೆರೆಸಿದರೆ
ಹುಡಿ ಹಾಲು ಸಕ್ಕರೆ
ಜತೆಗೆ ಚಿಟಿಕೆಯಷ್ಟು ಅಕ್ಕರೆ

ಕಾಫಿ ಮಾಡಬೇಕೆಂದರೆ ಗೊಂದಲ
ಯಾವ ಹುಡಿ ಸೇರಿಸಲಿ
ನೂರೆಂಟು ಹೆಸರುಗಳು
ಒಂದೇ ಕಾಯಿಯ ಹುಡಿಗೆ

ಇರಲಿಲ್ಲ ಹಿಂದೆ ಹೀಗೆ
ಸಾಲಾದ ಕಾಫಿ ಗಿಡಗಳಿಂದ
ಕೆಂಪಾದ ಹಣ್ಣು ಬೇರ‍್ಪಡಿಸಿ
ಬಿಸಿಲಲ್ಲಿ ಒಣಗಿಸಿ
ಒಣಗಿದ್ದು ಕಾಫಿ ಕಾಯಿ ಮಾತ್ರವೇ
ಜತೆಗೆ ಅಪ್ಪನೂ ಅಮ್ಮನೂ
ನೆರಳಲ್ಲಿ ನಿಂತು ನೋಡುವ ಕಂಗಳಷ್ಟೇ ನನ್ನವು

ರಾತ್ರಿಯಿಡೀ ಕುಟ್ಟಿ
ಸಿಪ್ಪೆ ತೆಗೆವಾಗೆಲ್ಲ
ಜೋಗುಳ ನಮಗೆ ನಿದ್ದೆಯಲ್ಲೂ
ಲಯಬದ್ದ ಒನಕೆಯ ಕುಣಿತ
ಅಮ್ಮನ ಕೈಯಲ್ಲಿ
ಅರಳಿದ್ದು ಗುಳ್ಳೆ

ಕಾಫಿ ಬೇಳೆ ತಲೆಯಲ್ಲಿ ಹೊತ್ತು
ಬರಿಗಾಲಲ್ಲೇ ಮೈಲುದ್ದ ನಡೆದು
ನಡುಬಿಸಿಲಿಗೆ
ಬರುವಾಗ ತಲೆಯಲಿದ್ದ ಗೋಣಿ
ಇರುತಿರಲಿಲ್ಲ; ಕೈಯೊಳಗಿನ ಚೀಲದಲ್ಲಿ ಹುಡಿಯೂ
ಇಲ್ಲದಿರುತಿರಲಿಲ್ಲ

ಹುಡಿ ಮಾಡಿಸಿ ತಂದ
ಕಾಫಿಯ ಪರಿಮಳದಲ್ಲಿ ಬೆವರ ಹನಿಯ
ಪರಿಮಳವೂ ಅಮ್ಮನದೇ ಅಪ್ಪನದೇ

ಯಾವ ಕಾಫಿ ಹುಡಿಯೂ
ನೆನಪಿಸುವುದಿಲ್ಲ ಇಂದೀಗ
ಮೈಯ ಬೆವರಿನ ಗಂಧ
ಕಳೆದ ಬದುಕಿನ ಬಂಧ

‍ಲೇಖಕರು avadhi

19 March, 2020

1 Comment

  1. Dr.Swamy Na Kodihalli

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading