ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಗಳಿರದ ಅಪ್ಪನೊಬ್ಬನ ಕವನ

ವಾಸುದೇವ ನಾಡಿಗ್ 

ಇರಬೇಕಿತ್ತು ನೀನು
ನನ್ನೊಳಗಿನ ಅಂತಃಕರಣದ ಮೂರ್ತರೂಪದ ಹಾಗೆ
ಲೋಬಾನದ ಹಿತಕಂಪಿನಲಿ ನೆನೆದು
ಪವಡಿಸಿದ ಮಗುವಿನ ಹಾಗೆ
ಮುಂದೊಮ್ಮೆ ವೃದ್ದಾಪ್ಯದಲಿ ಬೀಳುವ
ಎವೆಹನಿಗೆ ನೀನಲ್ಲದೆ ಬೊಗಸೆ ಹಿಡಿಯುವವರಾರು
ಗಂಡಸಿನ ಜಗತ್ತಿನ ಹಳವಂಡಗಳ ಮಧ್ಯೆ
ನೀನಾದರೂ ಇರಬಾರದಿತ್ತೆ
ತರಬಾರದಿತ್ತೆ ದಂಡೆ ಹೂಗಳ ದಂಡೆ ಈ ಕಡಲಿಗೆ

ಎದೆಪದಕದ ಕೊರತೆ ತಾಕುತ್ತದೆ ಸದಾ
ಕಣ್ಣ ಬೆಳಕಿಗೆ ಬಣ್ಣಪಟ್ಟಕದ ಗೈರು ಧ್ಯಾನ
ಮಗಳ ಗೆಜ್ಜೆಪಾದಗಳ ಕಾಣದ ಈ ಮನೆ ಮನೆಯೆ?
ಎದೆಯಲಿ ಹಾಗೇ ಉಳಿದುಬಿಟ್ಟಿವೆ ಎಷ್ಟೋ ಅಕ್ಷರಗಳು
ನೀನೆಂಬ ಅರ್ಥದ ಸಖ್ಯವಿರದೆ
ಉಳಿದೇ ಬಿಟ್ಟಿದೆ ಆಚೆ ನೀನಿರದ ರೂಪಕದ ಬಯಲು
ದೀಪಾವಳಿಗಳಲಿ ಕಿರುಗುಡುವ ಶಬ್ದಗಳ ಮಧ್ಯೆ
ಹಚ್ಚಲು ನೀನಿರಬೇಕಿತ್ತು ಒಳಗೆ
ಕರುಳ ದೀಪ

ಬದುಕಿನ ಮುಕ್ಕಾಲುಪಾಲು ವಂಚಿತ ನಾನು
ನಮೆದು ಹೋಗುವ ಜೀವಕೆ ನಿನ್ನ ಬೆರಳು ಬೇಕಿತ್ತು
ನೋಡು ನನ್ನ ಈ ಕವನಗಳು ಹೇಗೆ ಕ್ಲೀಷೆ ಆಗುತ್ತಿದೆ
ಮಗಳಿರದ ಕವಿಯ ಜೀವ
ಬರೀ ಹುಸಿಯೆನಿಸುತ್ತಿದೆ…

‍ಲೇಖಕರು Admin

31 December, 2016

2 Comments

  1. Suma

    Tumba tumba chennagide…..ella hennu makkala hettavarige hemme taruvante ide…,,,

  2. Anonymous

    Nimma korate mommagalu puraisali

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading