ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿರುವಾಗ. . .

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳ ನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ..

ಅದು ಹಾಗೇ ಅಲ್ಲವೆ? ಎಲ್ಲರೂ ಮಾಡುವ ಅವರವರ ಕೆಲಸಗಳಲ್ಲಿ ಸುಖ ಸಂತೋಷ, ದುಃಖ ದುಮ್ಮಾನ, ನೋವು ನಲಿವು, ಹಾಸ್ಯ, ಕಷ್ಟನಷ್ಟ, ಆತಂಕ ಹೀಗೆ ಎಲ್ಲವೂ ಇದ್ದದ್ದೇ. ಅಂತಹ ಒಂದೆರೆಡು ನೆನಪುಗಳು. [ನಿನ್ನದು ಬಹಳ ಸೀರಿಯಸ್‌ ಆಯ್ತಪ್ಪ ಬರಹಗಳು. ಸ್ವಲ್ಪ ಹಗೂರಾಗಿರೋದು ಬರಿ ಅಂತ ಕೆಲವು ಗೆಳೆಯರು ತಾಕೀತು ಮಾಡಿದ್ದರಿಂದ ಆಯ್ದ ಕೆಲವು ತುಣುಕುಗಳು].

ಏನ್ಸಾರ್‌ ಇಲ್ಲಿ… ಒಬ್ರೇನಾ?

ಒಂದ್ಸರ್ತಿ, ೧೨ ವರ್ಷದ ಬಡ ಹುಡುಗನನ್ನ ಯಾರೋ  ಭೂಮಿ ಕೊಂಡು ಸೈಟುಗಳನ್ನಾಗಿ ಮಾರೋ ರಿಯಲ್‌ ಎಸ್ಟೇಟ್‌ ಶ್ರೀಮಂತರ ಮನೆಯವರು ಕೆಲಸಕ್ಕಿಟ್ಟುಕೊಂಡಿದ್ದರು. ಯಾರೋ ಸಹೃದಯಿಗಳು ಈ ಬಗ್ಗೆ ಚೈಲ್ಡ್‌ಲೈನ್‌ ೧೦೯೮ಕ್ಕೆ ದೂರು ಕೊಟ್ಟಿದದರು. ಚೈಲ್ಡ್‌ಲೈನ್‌ನ ಗೆಳೆಯರು ಕಷ್ಟಪಟ್ಟು ಆ ಹುಡುಗನನ್ನ ಕೆಲಸದಿಂದ ಬಿಡಿಸಿಕೊಂಡು ಮಕ್ಕಳಿಗೆ ನ್ಯಾಯ ಕೊಡಿಸುವ ಮಕ್ಕಳ ಕಲ್ಯಾಣ ಸಮಿತಿಗೆ ಕರೆತಂದಿದ್ದರು (೨೦೦೬).

ಸಮಿತಿಯವನಾಗಿ ನನ್ನ ಕೆಲಸ, ಹುಡುಗನ ಬಳಿ ಮಾತನಾಡಿ ವಿಚಾರ ತಿಳಿದುಕೊಂಡು, ಸರ್ಕಾರದ ಸಿಬ್ಬಂದಿಗಳ ಸಹಾಯದಲ್ಲಿ ಪ್ರಕರಣ ಅಧ್ಯಯನ ಮಾಡಿ, ಬಾಲಕನ ಪೋಷಕರು, ಊರು, ಕೇರಿ, ಶಾಲೆ, ಯಾವಾಗ ಬಂದದ್ದು, ಏನು ಕೆಲಸ ಮಾಡ್ತಿದ್ದ, ಯಾರ ಬಳಿ, ಏನು ಸಂಬಳ, ಹೊಡೆತ, ಬಡೆತ ಇತ್ಯಾದಿ ಕೇಳಿ, ಮಗುವಿಗೆ ಆಗಿರುವ ಅನ್ಯಾಯ ಪರಾಮರ್ಶೆ ಮಾಡಿ, ವಿವಿಧ ವಿವರಗಳು ಸರಿಯಾಗಿದೆ ಎಂಬುದನ್ನು ಖಾತರಿ ಮಾಡಿಕೊಂಡು ನ್ಯಾಯ ಒದಗಿಸುವುದು.  ಆಯ್ತು. ಪ್ರಕರಣ ಮುಂದುವರೆಸಲು ಹುಡುಗನ ಕಡೆಯವರು ಯಾರಾದರೂ ಇದ್ದಾರೇನೆಂದು ವಿಚಾರಿಸಿದೆ.  

ಬಿಳಿ ಪ್ಯಾಂಟು, ಶರ್ಟು, ಚಪ್ಪಲಿ (ಎಲ್ಲ ಬಿಳಿ), ಕೊರಳಲ್ಲಿ ಆನೆ ಕಟ್ಟುವಂತಹ ಚಿನ್ನದ ಸರಗಳು, ಕೈನ (ಸದ್ಯ ಕೈ ಮಾತ್ರ) ಎಂಟು ಬೆರಳಿಗೆ ಚಿನ್ನದ ಉಂಗುರ ತೊಟ್ಟಿದ್ದ, ಭವ್ಯವಾದ ಬ್ರೇಸ್‌ಲೆಟ್ ತೊಟ್ಟಿದ್ದ ನಾಲ್ಕೈದು ಕಟ್ಟು ಮಸ್ತಾದ ಜನ ಬಂದರು. ಬಹಳ ವಿನಯವಾಗಿ ನಮಸ್ಕಾರ ಮಾಡಿ ಹುಡುಗ ತಮ್ಮವನೆಂದೂ ಅವನು ತಮ್ಮ ʼಸಾಹೇಬರʼ ಮನೆಯಲ್ಲಿ ಕೆಲಸ ಮಾಡುತ್ತಿರಲಿಲ್ಲವೆಂದೂ, ಬೆಂಗಳೂರು ನೋಡಲು ಬಂದಿದ್ದ ಪಾಪದ ಹುಡುಗನೆಂದೂ, ಯಾರೋ ಸರಿಯಾಗಿ ತಿಳಿಯದೆ ತಪ್ಪು ಮಾಹಿತಿ ಕೊಟ್ಟಿದ್ದಾರೆಂದೂ, ಹೀಗಾಗಿ ಹಿಡಿದುಕೊಂಡು ಬಂದಿದ್ದಾರೆಂದೂ ಹೇಳಿದರು.

ಇವೆಲ್ಲದರ ಜೊತೆ ದೊಡ್ಡ ಜನರಿಗೆ ತೊಂದರೆ ಕೊಡುವುದು ಒಳ್ಳೆಯದಲ್ಲವೆಂದೂ, ತಾವೆಲ್ಲಾ ‘ಸೋಷಿಯಲ್ ವರ್ಕ್’ ಮಾಡುವ ಒಂದು ಖ್ಯಾತ ಸಂಘದವರೆಂದೂ, ಸಂಘಟನೆ ಬಹಳ ದೊಡ್ಡದೆಂದೂ, ಅನ್ಯಾಯಗಳ ವಿರುದ್ಧ ಪ್ರತಿಭಟಿಸುವ ನೂರಾರು ಜನರ ತಮ್ಮ ಹಿಂದೆ ಇದ್ದಾರೆಂದೂ ಇನ್ನೂ ಏನನೇನೋ ಹೇಳಿದರು. ಆಗಾಗ್ಗ ಸರ್ಕಾರದ ಹಲವಾರು ಅಧಿಕಾರಿಗಳು, ಚಲಾವಣೆಯಲ್ಲಿರುವ ಮತ್ತು ಅಧಿಕಾರದಲ್ಲಿರುವ ಶಾಸಕರು, ಮಂತ್ರಿಗಳು, ಸ್ವಾಮೀಜಿಗಳು, ಪಾಪ ವಯಸ್ಸಾಗಿರುವ ಸ್ವತಂತ್ರ ಹೋರಾಟಗಾರರು ಎಲ್ಲರ ಹೆಸರನ್ನೂ ಸಾಕಷ್ಟು ಉದುರಿಸಿದರು.

ಕೊನೆಗೆ, ತಮ್ಮನ್ನೆಲ್ಲಾ ಒಂದು ಸರಣಿಯಲ್ಲಿ ಪರಿಚಯಿಸಿಕೊಂಡರು, ಒಬ್ಬರು ಸಂಘಟನಾ ಕಾರ್ಯದರ್ಶಿಗಳು, ಇನ್ನೊಬ್ಬರು ಉಪ ಕಾರ್ಯದರ್ಶಿಗಳು, ಮತ್ತೊಬ್ಬರು ಕಾರ್ಯನಿರ್ವಾಹಕ ಕಾರ್ಯದರ್ಶಿಗಳು, ಇನ್ನೂ ಒಬ್ಬ ಮಾತ್ರ ಕಾರ್ಡ್ ಕೊಡಲಿಲ್ಲ. ಅಂದರೆ, ಅವನೊಬ್ಬ ಸಾಮಾನ್ಯ ಕಾರ್ಯಕರ್ತ! ಮಿಕ್ಕವರೆಲ್ಲಾ ಘಟಾನುಘಟಿ ʼಕಾರ್ಯದರ್ಶಿಗಳುʼ.

ಆ ಸಂಘಟನೆಯ ಕೆಲವು ನಾಯಕರು ಮತ್ತು ಒಳ್ಳೆಯ ಕೆಲಸಗಳ ಬಗ್ಗೆ ಗೊತ್ತಿದ್ದ ನಾನು ಅವರಿಗೆ ಅಭಿನಂದಿಸಿದೆ. ಅವರ ಸಂಸ್ಥೆಯ ಸಾಮಾಜಿಕ ಕಳಕಳಿಯ ಕೆಲಸಗಳ ಹಿಂದಿನ ತಾತ್ತ್ವಿಕ ವಿಚಾರಗಳ ಬಗ್ಗೆ ಗೌರವವಿದೆಯೆಂದು ಹೇಳಿದೆ. ಯಾಕೋ ಇವರ ಬಗ್ಗೆ ಸ್ವಲ್ಪ ಅನುಮಾನ ಇದ್ದರೂ, ಹುಡುಗನನ್ನ ಕರೆದು, ‘ನೋಡಪ್ಪಾ ನಿನ್ನ ಕಡೆಯವರು ಬಂದಿದ್ದಾರೆ. ನೋಡಿ ಹೇಳು’ ಎಂದೆ.     

ತನಗಿವರ್ಯಾರೂ ಗೊತ್ತಿಲ್ಲ ಎಂದು ಹುಡುಗ ಖಡಾಖಂಡಿತವಾಗಿ ಹೇಳಿಬಿಟ್ಟ. ಅವರು ಎಷ್ಟೇ ಪುಸಲಾಯಿಸಿದರೂ ‘ಗೊತ್ತಿಲ್ಲ’ ಎಂದಷ್ಟೇ ಹೇಳಿಬಿಟ್ಟ. ಬಹಳ ಮುಖ್ಯವಾಗಿ ನಾನು ಯಾರು ಬಂದರೂ ಹೋಗಿ ಮತ್ತೆ ಕೆಲಸದ ಮನೆಯಲ್ಲಿ ಸಿಕ್ಕಿ ಹಾಕಿಕೊಳ್ಳುವುದಿಲ್ಲ ಎಂದೇಬಿಟ್ಟ. 

ಸರಿ, ಇವರ ಮನಃಪರಿವರ್ತನೆಗೆ ಇದು ಸಕಾಲ. ಕಬ್ಬಿಣ ಕಾಸಿ ಬಡಿಯೋಣ ಎಂದುಕೊಂಡು ನನ್ನ ಭಾಷಣ ಸಿದ್ಧ ಮಾಡಿಕೊಂಡೆ. ಇದು ನನ್ನ ಅಧಿಕಾರದ ಪ್ರಾಂಗಣ.

ಒಂದಷ್ಟು ಬುದ್ಧಿ ಹೇಳಿದರೆ ಅವರು ಕೇಳಲೇಬೇಕು! ಚಿನ್ನದ ಸರ ಬಳೆಯ ‘ಸೋಷಿಯಲ್ ವಕ್ರ‍್ಸ್’ ಜನರಿಗೆ ಭಾರತದ ಜಾತಿ ಪದ್ಧತಿ, ‍ಅದನ್ನು ಆಧರಿಸಿದ ಶ್ರೇಣೀಕೃತ ಸಮಾಜ, ಭೂರಹಿತ ಜನ, ಕೂಲಿ ತಾರತಮ್ಯ, ಬಡತನ, ವಲಸೆ, ಮಕ್ಕಳ ಸಾಗಣೆ, ಶೋಷಣೆ, ಸಾಮಾಜಿಕ ನ್ಯಾಯ, ಸಮತೆ, ಸಮಾನತೆ, ಬಾಲಕಾರ್ಮಿಕ ಪದ್ಧತಿ, ಶಿಕ್ಷಣ, ಮಕ್ಕಳ ನ್ಯಾಯ, ಹಕ್ಕು, ದೇಶದ ಏಳ್ಗೆ  ಎಂತೆಲ್ಲಾ ಹೇಳಿ ಸಂವಿಧಾನ ರಚಿಸಿದ ಮಹಾನುಭಾವ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ಸಮುದಾಯಕ್ಕೆ ಸೇರಿದ ಈ ಬಾಲಕನ ಬದುಕುವ ಹಕ್ಕಿಗೆ ಸಹಾಯ ಮಾಡುವುದು ಬಿಟ್ಟು,

ಅದೇ ಸಮುದಾಯದ ಪ್ರತಿನಿಧಿಗಳಾಗಿ ಸಂಘಟನೆ ಕಟ್ಟಿಕೊಂಡು, ಈಗ ಈ ಹುಡುಗನನ್ನ ರಕ್ಷಣೆಯಿಂದ ತಪ್ಪಿಸಿ ಮತ್ತೆ ಕೆಲಸಕ್ಕೆ ಹಾಕುವ ನಿಮ್ಮ ಕೆಲಸ ಅದು ಹೇಗೆ ಸಾಮಾಜಕಾರ್ಯ ಎಂದೆಲ್ಲಾ ಪ್ರಶ್ನಿಸಿ, ಬುದ್ಧಿ ಹೇಳಿ, ಸಂವಿಧಾನ ತೋರಿಸಿ ಕಾನೂನು ಎದುರಿಟ್ಟು ಇದ್ದಬಿದ್ದ ಬುದ್ಧಿಯೆಲ್ಲಾ ಪ್ರಯೋಗಿಸಿದೆ. 

ಊಹು. ಏನೂ ಪ್ರಯೋಜನವಾಗಲಿಲ್ಲ. ಅವರದೊಂದೇ ಮಾತು, ‘ನಮಗಿದೆಲ್ಲಾ ಗೊತ್ತಿಲ್ಲ ಸರ್, ನಮ್ ಸಾಹೇಬರ ಮನೆಗೆ ಯಾರೋ ಓಗಿ ಹುಡ್ಗನ್ನ ತಂದಿದ್ದಾರೆ ಅಂದ್ರೆ, ಬಾಳಾ ಅವಮಾನ. ಬಿಟ್ಬಿಡಿ’. 

ಸರಿ, ಅವರು ಹೇಳಿದ ಸಂಘಟನೆಯ ಒಬ್ಬ ಹಿರಿಯ ಚಿಂತಕರ ಪರಿಚಯ ನನಗಿತ್ತು. ಅವರಿಗೆ ದೂರವಾಣಿ ಮಾಡಿದೆ.

‘ಯಾರು ಬಂದಿರೋದು?’ ಅವರ ಹೆಸರುಗನ್ನು ಹೇಳಿದೆ. ಅವರ ಬಾಯಿಂದ ಪುಂಖಾನುಪುಂಖವಾಗಿ ಆ ಹೆಸರುಗಳನ್ನೊಳಗೊಂಡ ಸಹಸ್ರನಾಮಾವಳಿ ಹೊರಬಿತ್ತು. ನನಗೇ ಕೇಳಲು ಕಷ್ಟವಾಗಿತ್ತು. ಒಂದಂತೂ ಬಹಳ ಸ್ಪಷ್ಟವಾಗಿ ಗೊತ್ತಾಗಿದ್ದು, ‘ವಸೂಲಿ ಮಕ್ಕಳು, ಯಾರಾದ್ರೂ ದುಡ್ಡು ಕೊಟ್ರೆ ಏನು ಬೇಕಾದ್ರೂ ಮಾಡ್ತಾರೆ. ಯಾರೂ ನಮ್ಮ ಸಂಘಟನೆಯಲ್ಲಿ ಈಗಿಲ್ಲ. ಸಂಘಟನೆ ಹೆಸರು ಹಾಳು ಮಾಡೋಕೆ ಇಂತಾ ನಾಲ್ಕು ಜನ ಸಾಕು. ಎಲ್ಲಾ ರಿಯಲ್ ಎಸ್ಟೇಟ್‌ಗಳೋವ್ರುಗೆ ಕೆಲಸ ಮಾಡೋವ್ರು. ಕೊಡಿ ಫೋನು ಅವ್ರಿಗೆ’ 

ನಾನು ಯಾರ ಜೊತೆ ಸಂಪರ್ಕದಲ್ಲಿದ್ದೇನೆಂದು ಹೇಳದೆ, ಆ ನಾಲ್ಕು ಚಿನ್ನದ ಜನರ ನಾಯಕನೆಂತಿದ್ದವನಿಗೆ ಫೋನು ಕೊಟ್ಟೆ. ಕೇಳಿದ್ದು ಇಷ್ಟು, ‘ಅಣ್ಣ, ಆಗ್ಲಣ್ಣ… ಸರಿಯಣ್ಣ… ಇಲ್ಲಣ್ಣ… ಇಂಗೆ ಏನಿದು ಅಂತ ತಿಳ್ಕಳಾಕೆ ಬಂದಿದ್ವಣ್ಣ… ನಮಗೊತ್ತಿಲ್ಲಣ್ಣ… ಹೂಕಣಣ್ಣ’. ಮುಂದಿನದನ್ನು ಹೆಚ್ಚು ಹೇಳಬೇಕಿಲ್ಲ. ಎಲ್ಲರೂ ಬಹಳ ಮೆತ್ತಗೆ, ಎದ್ದು ಹೋದರು. ಹೋಗಬೇಕಾದರೆ ಹೆಚ್ಚೂಕಡಿಮೆ ನಡುಬಗ್ಗಿಸಿ ಒಂದೇ ಕೈಯಿಂದ ಇಡೀ ಮುಖ ಮುಚ್ಚೋ ಹಾಗೆ ನಮಸ್ಕಾರ ಹಾಕಲು ಮರೆಯಲಿಲ್ಲ. 

ಮುಂದಿನದು ಮಾಮೂಲಿ ‘ಕಾನೂನಿನ ಕೆಲಸ’. ಮಗುವಿನ ತಂದೆ ತಾಯಿ ಬಂದರು. ಅವರಿಗೆ ಆಪ್ತ ಸಮಾಲೋಚನೆ, ಹುಡುಗನ ಶಿಕ್ಷಣ ಮುಂದುವರಿಕೆಗೆ ಸಹಾಯ ಇತ್ಯಾದಿ ನಡೆಯಿತು. ಕೆಲಸಕ್ಕೆ ಇಟ್ಟುಕೊಂಡಿದ್ದ ವ್ಯಕ್ತಿಗೆ ಒಂದಷ್ಟು ತಿಳಿವಳಿಕೆ (!) ಆದ ಮೇಲೆ ಹುಡುಗನ ಶಿಕ್ಷಣದ ಜವಾಬ್ದಾರಿ ಹೊರೆಸಿ, ಕಾನೂನಿನ ಮುಂದಿನ ಕ್ರಮಕ್ಕೆ ಕಡತ ಸಾಗಿತು. 

ಅದೇ ಬೆಳಗ್ಗೆ ನನ್ನ ಕಾರನ್ನು ದುರಸ್ಥಿಗೆ ಕೊಟ್ಟಿದ್ದೆ. ಸಂಜೆ ಸ್ವಲ್ಪ ತಡವಾಗಿ ಕಾರು ಹಿಂಪಡೆಯಲು ವರ್ಕಶಾಪ್‌ಗೆ ಹೋಗಿದ್ದೆ. ವಾಹನ ಪರೀಕ್ಷಿಸಿ ಹಣ ನೀಡಲು ಒಳಹೋಗಿ, ಹೊರಗೆ ಬಂದರೆ… ಅದೇ ನಾಲ್ಕು ‘ಚಿನ್ನದ ಸೋಷಿಯಲ್ ವಕ್ರ‍್ಸ್’ ಜನ ನನ್ನ ಕಾರಿಗೆ ಒರಗಿಕೊಂಡು ನಿಂತಿದ್ದಾರೆ! ಒಂದು ಕ್ಷಣ ಝಂಗಾಬಲ ಉಡುಗಿ ಹೋಯಿತು. ನಾನೀಗ ನನ್ನ ಸುರಕ್ಷಿತ ಕೋಟೆಯಲ್ಲಿಲ್ಲ! ಹಣದ ಕೌಂಟರ್‌ ಎದುರು ಸ್ವಲ್ಪ ಹೊತ್ತು ನಿಂತೆ. ಕುಳಿತೆ.

ವರ್ಕಷಾಪ್‌ನವರಿಗೆ ಏನೋ ಅನುಮಾನ ಬಂತು. ‘ಏನ್ಸಾರ್? ಏನಾದ್ರೂ ತೊಂದರೇನಾ?’ ಅಂದರು. ಅವರಿಗೆ ನನ್ನ ಅವಸ್ಥೆ ಹೇಗೆ ಹೇಳೋದು? ಹೊರಬಂದೆ. ಆ ಸೋಷಿಯಲ್‌ ವರ್ಕ್ಸ್‌ ಜನರ ಕಡೆ ನೋಡದೆ, ಹಿಂದಿನಿಂದ ಹೋಗಿ ಕಾರಿನ ಬಾಗಿಲು ತೆಗೆದು ಒಳಗೆ ಕುಳಿತೆ. ಆಗ, ಅವರಲ್ಲೊಬ್ಬ ನೋಡಿಬಿಟ್ಟ…!

‘ನಮಸ್ಕಾರ ಸರ್’, ನಾಲ್ಕೂ ಜನ ಕಿಟಕಿ ಹತ್ತಿರ ಬಂದರು. ‘ಏನ್ಸಾರ್ ಇಲ್ಲಿ?’, ‘ಒಬ್ರೇ ಇದ್ದೀರಾ?’, ‘ಇಲ್ಲಿಗೆ ಇಷ್ಟೊತ್ನಲ್ಲಿ ಬಂದಿದ್ದೀರಾ?’ ಪ್ರಶ್ನೆಗಳೇ ಸಾಕು… ಬೆವರು ಬಂದಿದ್ದು ಸುಳ್ಳಲ್ಲ. ‘ಇಲ್ಲೇ ಕಾರು ರಿಪೇರಿ… ನೀವು…’ ಇನ್ನೂ ಏನೋ ಹೇಳೋದಿತ್ತು. ‘ಬೆಳಗ್ಗೆ ನಮಗೆ ಒಳ್ಳೇ ಚೋಕ್ ಕೊಟ್ಬಿಟ್ರಿ ಸರ್… ಅಲ್ಲಾ ಸರ್, ನಮ್ಗೇ ಟಾಂಗು ಕೊಟ್ಬಿಟ್ರಲ್ಲ’ ಒಂದು ಚಿನ್ನದ ವ್ಯಕ್ತಿ ದೇಶಾವರಿ ನಗುವಿನಲ್ಲಿ ಆರಂಭಿಸಿದ. ‘ಏನೋ ಸರ್, ನಮ್ಮ ಕೆಲಸ ಸರ್. ನಿಮ್ದೊಂದು ತರ ಹೊಟ್ಟೇಪಾಡು, ನಮ್ದೊಂದು ತರ ಹೊಟ್ಟೇಪಾಡು. ಹಂಗೆ ನಮಗೆ ಬೇಧಿಗೆ ಕೊಟ್ಬಿಟ್ರೆ…’ 

ಅಂತೂ ಕೇಳಿಬಿಟ್ಟೆ, ‘ನೀವೇನಿಲ್ಲಿ?’ ‘ಓ ನಮ್ಮ ಸಾಹೇಬ್ರ ಕಾರಲ್ಲೇ ನಾವು ಓಡಾಡೋದು. ಅದು ಮಧ್ಯಾಹ್ನ ಕೆಟ್ಟು ಹೋಯ್ತು. ಅದ್ಕೆ ರಿಪೇರಿಗೆ…  ನೀವೂ ಯಾವಾಗ್ಲೂ ಇಲ್ಲಿಗೇನಾ ಸಾರ್ ಬರೋದು?’ 

ಎದೆಯೊಳಗೆ ಕುಟ್ಟುತ್ತಿದ್ದ ಅವಲಕ್ಕಿ, ಹೊಟ್ಟೆಯೊಳಗಿನ ಭಯ, ಒಣಗಿದ ನಾಲಗೆ ಎಲ್ಲವೂ ಥಟ್ ಅಂತ ಸರಿಹೋಯ್ತು. ಇನ್ನೊಂದು ಸುತ್ತು, ಸಂವಿಧಾನ, ನ್ಯಾಯ, ಕಾನೂನು, ಹಕ್ಕು, ಸಾಮಾಜಿಕ ಜವಾಬ್ದಾರಿ, ಸಮತೆ ಭಾಷಣದ ಪ್ರತಿ ತಲೆಯಲ್ಲಿ ಬಿಚ್ಚಿಕೊಂಡಿತು. ‘ಈಗ ಬೇಡ. ಹೊರಡು’ ಎನ್ನುವ ಸೂಚನೆ ಮಿದುಳಿನ ಇನ್ನೊಂದು ಕಡೆಯಿಂದ ಬಂತು. 

ಸುಮ್ಮನೆ ಕಾರ್ ಚಾಲೂ ಮಾಡಿದೆ. ಸುಮಾರು ಮರ‍್ನಾಲ್ಕು ಕಿಲೋಮೀಟರ್ ದಾಟಿದ ಮೇಲೆ ಕಾರ್ ಪಕ್ಕ ನಿಲ್ಲಿಸಿ, ಎಚ್ಚರಿಕೆಯಿಂದ ಹಿಂದೆ ಮುಂದೆ ನೋಡಿ, ಆಮೇಲೆ ಅಲ್ಲಿಯವರೆಗೂ ತಡೆಹಿಸಿದಿಟ್ಟುಕೊಂಡಿದ್ದ ನಗು ಹೊರಹಾಕಿದೆ. 

***

ಮಾವನಿಲ್ಲಿಸಿದಾಗ!

‘ಮಾವ ಬರ್ಲೇಬೇಕು’ ನನ್ನ ಸೊಸೆ, ಅಂದ್ರೆ ಅಕ್ಕನ ಮಗಳು ಮುಗಿಬಿದ್ದಿದ್ದಳು. ಅದಕ್ಕೆ ನನ್ನ ಏಳು ವರ್ಷದ ಮಗಳ ಸಾತ್. ‘ಅಪ್ಪ ಹೋಗ್ಲೇಬೇಕು’. ಏನಿಲ್ಲ. ಆ ಸೊಸೆ, ಆ ವರ್ಷದ ಜನವರಿ ೨೬ರ ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಮಾಣಿಕ್ ಶಾ ಬಯಲಿನಲ್ಲಿ ನಡೆಯುವ ಮುಖ್ಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ನೃತ್ಯದಲ್ಲಿದ್ದಳು (೨೦೦೪). ಕಾರ್ಯಕ್ರಮಕ್ಕೆ ಎರಡು ದಿನ ಮೊದಲು ಹೇಳುತ್ತಿದ್ದಾಳೆ.

ನಾನು ಹೋಗಲೇಬೇಕು. ಹೋಗೋಣ. ಆದರೆ, ಅದೇ ದಿನ ಆ ವರ್ಷ ನಮ್ಮ ಬಡಾವಣೆಯ ಒಂದು ಶಾಲೆಯವರು ಬೆಳಗಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯನ್ನಾಗಿ ನನ್ನ ಆಹ್ವಾನಿಸಿದ್ದಾರೆ! 

ಸರಿ, ಏನೇನೋ ಚೌಕಾಸಿ ಮಾಡಿ, ಶಾಲೆಯವರಿಗೆ ಹೇಳಿ, ನನ್ನನ್ನು ನನ್ನ ಭಾಷಣ ಮುಗಿದ ಮೇಲೆ ಬಿಡುಗಡೆ ಮಾಡಬೇಕೆಂದೂ, ಯಾರಿಗೂ ತೊಂದರೆ ಮಾಡದೆ, ಅವಮಾನ ಮಾಡದೆ, ಕಸಿವಿಸಿ ಮಾಡದೆ ನಾನು ಮೆತ್ತಗೆ ಕಳಚಿಕೊಳ್ಳುತ್ತೇನೆಂದು ಒಪ್ಪಿಸಿದೆ. ಅಷ್ಟೇ ಅಲ್ಲ. ಮಗಳ ಶಾಲೆಗೆ ಹೋಗಿ, ಅವಳ ಕಾರ್ಯಕ್ರಮ ಮುಗಿದ ಮೇಲೆ ಅವಳನ್ನೂ ಒಯ್ಯಬೇಕು. ಎಲ್ಲ ಏರ್ಪಾಡಾಯಿತು. 

ನಾನು ಭಾಷಣ ಮುಗಿಸಿ, ಸಂಘಟಕರಿಂದ, ‘ಅತ್ಯಂತ ತುರ್ತು ಕೆಲಸವಿರುವುದರಿಂದ ಶ್ರೀಯುತರು ತೆರಳಬೇಕಾಗಿದೆ” ಅಂತ ಅನ್ನಿಸಿಕೊಂಡು ದಢಭಡ ಮಗಳ ಶಾಲೆಗೆ ಹೋದೆ. ಅವಳೂ, ಗಣರಾಜ್ಯೋತ್ಸವದ ಸಿಹಿ ತೆಗೆದುಕೊಳ್ಳದೆ ಓಡಿ ಬಂದಳು. ಜಯನಗರದಲ್ಲಿರುವ ಅವಳ ಶಾಲೆಯ ಹತ್ತಿರದ ಪರಿಚಿತರ ಮನೆಗೆ ನುಗ್ಗಿ ಅವಳು ಯೂನಿಫಾರ್ಮ್‌ ಬದಲಿಸಿ ಬಣ್ಣದ ಬಟ್ಟೆ ತೊಟ್ಟು, ನಮ್ಮ ಕಿರುಲುವ ಸ್ಕೂಟರ್ ಮೇಲೆ ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯ ಪಕ್ಕದ ಮಾಣಿಕ್‌ಶಾ ಮೈದಾನಕ್ಕೆ ದೌಡಾಯಿಸಿದೆವು. 

ನಾವು ತಲುಪುವ ಹೊತ್ತಿಗೆ ಆಗಲೇ ಕಾರ್ಯಕ್ರಮ ಶುರುವಾಗಿರುವುದು ಗೊತ್ತಾಯ್ತು. ಎಲ್ಲೋ ಒಂದು ಕಡೆ ಸ್ಕೂಟರ್ ನಿಲ್ಲಿಸಿ ಓಡಿದೆವು. ಎಲ್ಲಿಗೆ ಹೋಗುವುದು, ಯಾವ ದ್ವಾರ ಗೊತ್ತಿಲ್ಲ. ನಮ್ಮ ಓಟ ನಡೆದಿತ್ತು. ಆಗಲೇ ಒಬ್ಬ ಪೊಲೀಸ್ ಅಧಿಕಾರಿ ನಮ್ಮನ್ನ ಕರೆದು, ‘ಹೋಗಿ ಹೋಗಿ ಇಲ್ಲೇ ಹೋಗಿ’ ಅಂದರು. ಆ ದ್ವಾರದಲ್ಲಿ ಒಳಹೊಕ್ಕ ಮೇಲೆ ಗೊತ್ತಾಯ್ತು,  ಅದು ವಿ.ವಿ.ಐ.ಪಿ.ಗಳ ಪ್ರವೇಶ ದ್ವಾರ ಮತ್ತು ಪ್ರಾಂಗಣ.

ನನಗೆ ಸ್ವಲ್ಪ ಭಯ ಆತಂಕ ಆಗಿದ್ದು ನನ್ನ ಮಗಳಿಗೆ ಹೇಗೆ ಗೊತ್ತಾಗಬೇಕು. ನಮ್ಮ ಹತ್ತಿರ ಆಹ್ವಾನ ಪತ್ರಿಕೆ, ಪಾಸು ಇತ್ಯಾದಿಯಿಲ್ಲ. ಗಣ್ಯಾತಿಗಣ್ಯರ ಮುಂದೆ ಸಾಗಿ ಖುರ್ಚಿ ಹಿಡಿದು ಕೂತೆವು. ಮೇಲೆ ನೆರಳು. ಕೂರಲು ವಿಶಾಲವಾದ ಆಸನಗಳು. ಕಾರ್ಯಕ್ರಮಗಳನ್ನು ನೋಡಲು ಪ್ರಶಸ್ತವಾದ ಜಾಗ. ಉಳಿದಂತೆ ಬೇರೆ ಕಡೆ ಬಿಸಿಲು, ಜನರಿಗೆ ಕೂರಲು ಅಷ್ಟೊಂದು ಆಸನಗಳಿಲ್ಲದೆ ಗಡಿಬಿಡಿ ಕಾಣುತ್ತಿತ್ತು.

ಬಯಲಿಯಲ್ಲಿ ನಡೆದ ಶಿಸ್ತಿನ ಸಿಪಾಯಿಗಳ ನಡುಗೆ, ನೃತ್ಯ, ಕವಾಯಿತು, ಭಾಷಣಗಳ ಉದ್ದಕ್ಕೂ ಯಾವಾಗ ನಮ್ಮನ್ನ ಪ್ರವೇಶ ಪತ್ರ ಇಲ್ಲವೆಂದೋ, ಅನಧಿಕೃತವಾಗಿ ಒಳಗೆ ಬಂದವರೆಂದೋ ಹಿಡಿದು ಹೊರ ಹಾಕ್ತಾರೋ ಅನ್ನೋ ಆತಂಕ. ನೃತ್ಯ ತಂಡದಲ್ಲಿ  ನನ್ನ ಮಗಳ ಕಣ್ಣಿಗೆ ನನ್ನ ಅಕ್ಕನ ಮಗಳು ಬಿದ್ದಳಂತೆ! ನನಗೆ ಹೇಳಿದಳು. ನಾನೂ ಹೂ ಹೂ ಎಂದೆ. ಅಷ್ಟೆ. ಕಾರ್ಯಕ್ರಮ ಇನ್ನೂ ಇತ್ತು. ಇಲ್ಲಿಂದ ಹೋದರೆ ಸಾಕು ಎಂದು ಮಗಳಿಗೆ ಸೂಚ್ಯವಾಗಿ ಹೇಳಿದೆ. ಅದು ಹೇಗೋ ಏನೋ ಅವಳೂ ಒಪ್ಪಿಬಿಟ್ಟಳು. 

ಜನಗಣಮನ ಶುರುವಾಗುವುದಕ್ಕೆ ಮೊದಲು ಮತ್ತೆ ಗಣ್ಯಾತಿಗಣ್ಯರನ್ನೆಲ್ಲಾ ಏಳುವ ಮೊದಲೆ ಅವರನ್ನೆಲ್ಲಾ ದಾಟಿಕೊಂಡು ಬಂದ ದಾರಿಯಲ್ಲೇ ಹೊರಬಂದು ಸ್ಕೂಟರ್ ಹತ್ತಿರ ಹೋಗಬೇಕು…. ‘ಏ..ಏ.. ನಿಂತ್ಕಳಿ ಸಾರ್….ʼ. ‘ ಕೂಗು ಬಂದ ಕಡೆ ನೋಡ್ತೀನಿ. ನಮ್ಮನ್ನ ಒಳಗೆ ಬಿಟ್ಟ ಪೊಲೀಸ್. ಸಿಕ್ಕಿಬಿಟ್ಟೆವು. ಇನ್ನು ಯಾವ ವಿಚಾರಣೆ, ಅವಮಾನ…

ದಿನ ಪೂರ್ತಿ ಯಾವುದೋ ಪೊಲೀಸ್ ಸ್ಟೇಷನ್‌ನಲ್ಲಿ ಸಿಕ್ಕಿಸಿಕೊಂಡು ಪ್ರಶ್ನೆಗಳ ಸುರಿಮಳೆ… ನಾವು ಹಾಗಲ್ಲ ಹೀಗಲ್ಲ ಅಂದರೆ ಇವರು ಕೇಳುತ್ತಾರೋ ಇಲ್ಲವೋ… ಹೆಂಡತಿಗೆ ಹೇಳಿ ಕರೆಸಿ ಮಗಳನ್ನಾದರೂ ಕಳಿಸಬೇಕು… ಅವಳದೇನೂ ತಪ್ಪಿಲ್ಲ. ಮಗುವನ್ನು ಹಿಡಿದಿಟ್ಟುಕೊಂಡರೆ ಮಕ್ಕಳ ಹಕ್ಕುಗಳ ಉಲ್ಲಂಘನೆ… ಯಾರಾದರೂ ಗೆಳೆಯರಿಗೆ ತಿಳಿಸಬೇಕು… ಲಾಯರ್‌ಗೆ ಹೇಳಿಕಳಿಸಬೇಕು… 

‘ಏನ್ಸಾರ್, ಅಷ್ಟೊಂದು ಅವಸರ…’ ಪೊಲೀಸ್ ಮಾತು, ನನ್ನ ಮಗಳ ಕಡೆ ತಿರುಗಿ ‘ನಿಮ್ಮಪ್ಪ ಬಾಳಾ ಒಳ್ಳೇ ಭಾಷಣ ಮಾಡ್ತಾರಮ್ಮ’. ಗೊಂದಲಗಳ ಗೂಡಾಗಿದ್ದ ತಲೆ ತಿಳಿಯಾಯ್ತು. 

‘ನಮ್ಮ ಪೊಲೀಸ್ನೋರು ಹಂಗೇ ಹಿಂಗೇ ಭಾಷಣ ಮಾಡಿದ್ರೆ ಕೇಳೋದಿಲ್ಲ. ನಿಮ್ಮಪ್ಪ ತುಂಬಾ ಚೆನ್ನಾಗಿ ನಮ್ಗೆಲ್ಲಾ ಮಕ್ಕಳ ಬಗ್ಗೆ ತಿಳಿವಳಿಕೆ ಕೊಟ್ಟಿದ್ದಾರೆ. ನಮ್ಮ ಹತ್ರಾನೇ ವಿಷಯ ಕೇಳಿ ನಮಗೇ ಹೇಳ್ಕೊಡ್ತಾರೆ’. ಮಗಳಿಗೆ ಅಷ್ಟೇನೂ ಅರ್ಥ ಆಗಲಿಲ್ಲ. ಸುಮ್ಮನೆ ನಗುತ್ತಿದ್ದಳು. ‘ನಾನು ಕಮಿಷನರ್ ಆಫೀಸಿನಲ್ಲಿ ಆದ ಟ್ರೇನಿಂಗ್‌ನಲ್ಲಿ ಇದ್ದೆ ಸರ್. ಚೆನ್ನಾಗಿದ್ದೀರಾ ಸರ್?’ ಚೆನ್ನಾಗಿರೋದೇನು? ಈಗತಾನೆ  ಹೋದ ಜೀವ ಬಂತು. 

‘ನಿಮ್ಮನ್ನೋಡಿದಾಗಲೇ ಮಾತಾಡಿಸೋಣ ಅಂತಿದ್ದೆ. ಆದ್ರೆ ಪ್ರೋಗ್ರಾಂ ಶುರುವಾಗಿತ್ತಲ್ಲ ಅದಕ್ಕೆ ಕಳಿಸಿಬಿಟ್ಟೆ’. ಒಳ್ಳೇದಾಯ್ತು ಮಾರಾಯ, ನಿನಗೆ ಕೃತಜ್ಞತೆಗಳು. ನನ್ನ ಮಗಳಿಗೆ ಒಳ್ಳೇ ಆಸನ ಕೊಡಿಸಿ ಕಾರ್ಯಕ್ರಮ ನೋಡಿಸಿದೆಯಲ್ಲ ಅಷ್ಟೆ ಸಾಕು ಎಂದುಕೊಂಡು, ಮತ್ತೊಮ್ಮೆ ವಂದಿಸಿ ಅಲ್ಲಿಂದ ಹೊರಟೆವು. 

ಆಮೇಲೆ, ಮನೆ ಸೇರಿದ ಮೇಲೆ ಪೊಲೀಸ್‌ಮಾಮ ನಮಗೆ ಒಳ್ಳೇ ಸೀಟು ಕೊಡಿಸದ ಬಗ್ಗೆ ನನ್ನ ಮಗಳು ಹೇಳಿದ್ದೆ ಹೇಳಿದ್ದು, ನಾನು ಹೀರೋ ತರ ಬೀಗಿದ್ದೇ ಬೀಗಿದ್ದು!

***

ಕತ್ತಲಲ್ಲಿ ನಿಂತು ಕಾಡಿದವ

ಆ ಬೆಳಗಿನ ಜಾವ ಸಹೋದ್ಯೋಗಿ ನಾಗೇಂದ್ರ ಪ್ರಸಾದ್‌ ಜೊತೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಬಸ್‌ ಸ್ಟಾಂಡ್‌ನಲ್ಲಿ ಇಳಿದೆ. ಬಸ್ಸು ಸ್ವಲ್ಪ ಬೇಗ ತಲುಪಿದ ಹಾಗೆ ಅನ್ನಿಸಿತು. 2006ರ ಜುಲೈ ಚಳಿ ಮಳೆ ಗಡಗಡಿಸುತ್ತಿತ್ತು. ನಮ್ಮನ್ನು ಕಾರ್ಯಕ್ರಮಕ್ಕೆ ಕರೆದಿದ್ದ ಸ್ನೇಹ ಸಂಸ್ಥೆಯ ರಾಮಾಂಜನೇಯ ಹೇಳಿದ್ದಿದ್ದು, ಆ ನಿರ್ದಿಷ್ಟ ಬಸ್‌ ಬೆಳಗಿನ ಜಾವವೇ ಕೂಡ್ಲಿಗಿ ಮುಟ್ಟಿ ಮುಂದೆ ಹೋಗುತ್ತದೆಂದೂ ತಾವು ಬಸ್‌ಸ್ಟಾಂಡ್‌ನಲ್ಲಿ ನಮಗಾಗಿ ಕಾಯುತ್ತಿರುತ್ತೇವೆ ಎಂದು. 

ರಾಮಾಂಜನೇಯನಾಗಲೀ ಅವನ ಸಂಗಡಿಗರಾಗಲೀ ಕಾಣಲಿಲ್ಲ. ಕೆಲವೇ ಕ್ಷಣಗಳಲ್ಲಿ ನಮ್ಮೊಂದಿಗೆ ಬಸ್‌ ಇಳಿದ ಐದಾರು ಜನ ಹೊರಟು ಹೋದರು. ಪ್ರಯಾಣಿಕರಿಗೆಂದು ಕಾದಿದ್ದ ಒಂದೆರೆಡು ಆಟೋಗಳು ನಾವು ಅವರೊಡನೆ ಬರುವುದಿಲ್ಲ ಎಂದು ಖಾತರಿ ಆದ ಮೇಲೆ ಬುರ್ರೆಂದು ಹೋದವು. ರಸ್ತೆ ಸುತ್ತಮುತ್ತ ಎಲ್ಲ ಗವ್ವೆನುವ ಕತ್ತಲು. ಬಸ್ಟಾಂಡ್‌ನಲ್ಲಿ ಒಂದೆರೆಡು ಪುಟ್ಟ ಬಲ್ಬ್‌ಗಳು ಬೆಳಕು ಚೆಲ್ಲುವ ಯತ್ನ ಮಾಡುತ್ತಿದ್ದವು. 

ಐದಾರು ನಿಮಿಷ ಕಳೆಯಿತು. ಊಹೂ. ರಾಮಾಂಜನೇಯನ ಮೊಬೈಲ್‌ ಎರಡು ಮೂರು ಬಾರಿ ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ. ಅರೆ ಇದೇನಾಯಿತು… ಚಳಿ, ಕತ್ತಲು, ಹೀಗೆ ಮರೆತುಬಿಡುವುದೇ ಸಣ್ಣಗೆ ಸಿಟ್ಟು ಬಂದಿದ್ದು ಸುಳ್ಳಲ್ಲ. ಆಗಲೇ ಒಬ್ಬ ಮನುಷ್ಯ ನಮ್ಮ ತರಹವೇ ಒಂದಷ್ಟು ದೂರದಲ್ಲಿ ನಿಂತಿರುವುದು ಕಾಣಿಸಿತು. ಇನ್ನೂ ಸ್ವಲ್ಪ ಹೊತ್ತಾಯಿತು.  ಆತ ಅಲ್ಲೇ ನಿಂತಿದ್ದಾನೆ.

ಅವರು ಯಾರದಾದರೂ ಬರುವಿಕೆಗೆ ಅಥವಾ ಇಲ್ಲಿಂದ ಮುಂದಕ್ಕೆ ಯಾವುದೋ ಬಸ್‌ಗೆ ಕಾಯ್ತಿರಬೇಕು ಎಂದುಕೊಂಡೆ. ಅವನು ನಿಂತಿದ್ದರೆ ಚಿಂತೆಯಿರುತ್ತಿರಲಿಲ್ಲ. ಆದರೆ ಆ ಕತ್ತಲ್ಬೆಳಕ್ಕೂ ಅವನು ನಮ್ಮನ್ನೇ ನೋಡುತ್ತಿರುವುದು ಗೊತ್ತಾಗುತ್ತಿತ್ತು. ನಾನೂ ಆಗಾಗ್ಗೆ ಅವನ ಕಡೆ ನೋಡ್ತಿದ್ದೆನಲ್ಲಾ!   

ಇನ್ನೂ ಕೆಲ ಕಾಲ ಸವೆಯಿತು. ಆ ಮನುಷ್ಯ ನಮ್ಮನ್ನೇ ನೋಡ್ತಿದ್ದಾನೆ. ಆಗ ನನ್ನ ಗಮನ ನಮ್ಮ ಸಾಮಾನು ಸರಂಜಾಮಿನ ಕಡೆ ಬಿತ್ತು. ನಮ್ಮೊಂದಿಗೆ ತರಬೇತಿಗೆ ಬೇಕಾದ ವಸ್ತುಗಳ ಮೂರು ದೊಡ್ಡ ದೊಡ್ಡ ಚೀಲಗಳು. ಇದ್ದದ್ದು ಅದೇ ನೋಟ್‌ ಪುಸ್ತಕಗಳು, ಪೆನ್ನುಗಳು, ಮಕ್ಕಳ ಹಕ್ಕುಗಳನ್ನು ಕುರಿತು ಓದುವ ಸಾಮಗ್ರಿ. ಅದೇನೂ ದೊಡ್ಡದಲ್ಲ.

ಆದರೆ ಅವುಗಳ ಜೊತೆಗೆ ಆಗಿನ ಕಾಲಕ್ಕೆ ಬಹಳ ಅಮೂಲ್ಯವಾಗಿದ್ದ ಎಲ್‌.ಸಿ.ಡಿ. ಮತ್ತು ಒಂದು ಲ್ಯಾಪ್‌ಟಾಪ್‌, ಒಂದು ಕ್ಯಾಮೆರಾ. [ಎಲ್.ಸಿ.ಡಿ. ಇದ್ದ ಕೆಲವೇ ಕೆಲವು ಸ್ವಯಂಸೇವಾ ಸಂಘಟನೆಗಳಲ್ಲಿ ನಾವೊಬ್ಬರು. ಅದನ್ನೂ ಬಹಳ ಕಷ್ಟಪಟ್ಟು ಯಾವುದೋ ದೇಣಿಗೆಯನ್ನು ಹೊಂದಿಸಿಕೊಂಡು ಸುಮಾರು ಒಂದು ಲಕ್ಷ ರೂಪಾಯಿ ಕೊಟ್ಟು ಕೊಂಡಿದ್ದೆವು. ಅದೊಂದು ಕತೆ.] ಆಗ ಒಳಗೊಳಗೇ ಸಣ್ಣಗೆ ದಿಗಿಲಾಗತೊಡಗಿತು.

ನಾನೂ ನನ್ನ ಸಹೋದ್ಯೋಗಿ ಇಬ್ಬರೂ ನರಪೇತಲ ಪೈಲ್ವಾನುಗಳು! ನಮ್ಮ ಜಾಗ್ರತೆಯಲ್ಲಿ ನಾವಿರೋಣ ಎಂದು ಇಬ್ಬರೇ ಕಷ್ಟಪಟ್ಟು ಸ್ವಲ್ಪವೇ ಬೆಳಕು ತುಳುಕಿಸತ್ತಿದ್ದ ಬಸ್‌ಸ್ಟಾಂಡ್‌ ಕಡೆಯಿದ್ದ ಬಲ್ಬ್‌ ಕಡೆ ಚೀಲಗಳನ್ನೆಲ್ಲಾ ಎತ್ತಿಕೊಂಡು ನಡೆದೆವು. 

ಆ ವ್ಯಕ್ತಿಯೂ ಹತ್ತಾರು ಹೆಜ್ಜೆ ಮುಂದೆ ಬಂದು ಸ್ಪಷ್ಟ ಕಾಣುವಂತೆ ನಿಲ್ಲುವುದೆ! 

ಸಿಟ್ಟು ರಾಮಾಂಜನೇಯನ ಮೇಲೆ ಹತ್ತಿತು. ಆಗಲೇ ನಾಲ್ಕೈದು ಜನ ದಡದಡ ಓಡಿ ಬರುತ್ತಿರುವುದು ಕಣ್ಣಿಗೆ ಬಿತ್ತು. ಗೆಳೆಯರೋ, ಅಲ್ಲವೋ…! ಅವರು ಹತ್ತಿರಹತ್ತಿರ ಬರುತ್ತಿದ್ದಾಗ ಸ್ಪಷ್ಟವಾದದ್ದು ಅದು ರಾಮಾಂಜನೇಯ ಮತ್ತವನ ಸಂಗಡಿಗರು. ʼಸಾರಿ ಸಾರಿ ಸಾ! ನಿದ್ಬಂಟಿತ್ತು. ಎಚ್ರಾಗ್ಲೇಯಿಲ್ಲ. ತುಂಬಾ ಹೊತ್ತಾಯ್ತಾ ಸಾ?ʼ ಎಂದು ಬಂದವರೇ ನಮ್ಮ ಲಗೇಜ್‌ಗೆ ಕೈ ಹಾಕಿದರು. 

ಆಗ, ಅಷ್ಟತ್ತೂ ಅಲ್ಲಲ್ಲೇ ಕತ್ಲಲ್ಲೇ ನಿಂತು ಹೆದರಿಸುತ್ತಿದ್ದ (!) ಮನುಷ್ಯ ಮುಂದೆ ಬಂದ. ʼಶರ್ಮಾ ಸರ್‌!ʼ ಹೌದು. ʼಸರ್‌ ನಾನು ಚನ್ನಪಟ್ನ ಪೊಲೀಸ್‌ ಟ್ರೈನಿಂಗ್‌ ಸೆಂಟರ್‌ನಲ್ಲಿ ನಿಮ್ಮ ಪಾಠ ಕೇಳಿದ್ದೀನಿ ಸರ್‌ʼ. ಅಯ್ಯೋ ಪುಣ್ಯವಂತ. ನಡುಗಿಸಿಬಿಟ್ಯಲ್ಲಯ್ಯ ಎಂದೆ. ʼನಿಮ್ಮನ್ನ ಬಸ್‌ ಇಳಿದ ಮೇಲೆ ನೋಡ್ದೆ ಸರ್‌. ನಾನೂ ಅದೇ ಬಸ್ನಲ್ಲಿ ಬಂದೆ. ನಾನು ಕೂಡ್ಲಿಗಿಯಲ್ಲೇ ಇರೋದು. ಪೋಸ್ಟಿಂಗ್‌ ಆದ ಮೇಲೆ ಈಗಲೇ ರಜ ಸಿಕ್ಕಿರೋದು. ಮನೆಗೆ ಬಂದೋಗೋಣ ಅಂತ ಬಂದೆ. ನೀವೇ ಹೌದೋ ಅಲ್ಲವೋ ಅಂತ ಗ್ಯಾರಂಟಿ ಮಾಡ್ಕೊಳೋಕೆ ಕಾಯ್ತಿದ್ದೆ ಸರ್‌ʼ. 

ಆಗೊಂದಷ್ಟು ದಿನ ಕೆಲವು ಹಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ಯುನಿಸೆಫ್‌ ತೆಗೆದುಕೊಂಡ ಉಮೇದಿನಿಂದಾಗಿ ರಾಜ್ಯದ ಎಲ್ಲ ಪೊಲೀಸ್‌ ಶಾಲೆಗಳು, ಕಾಲೇಜುಗಳಲ್ಲಿ ಮಕ್ಕಳ ಹಕ್ಕುಗಳು, ಮಹಿಳಾ ಹಕ್ಕುಗಳು, ದಲಿತ ಸಮುದಾಯಗಳು ಹಾಗೂ ಅಲ್ಪಸಂಖ್ಯಾತರನ್ನು ಕುರಿತು ಸೂಕ್ಷ್ಮಗೊಳಿಸುವ ತರಬೇತಿಗಳು ನಡೆಯುತ್ತಿದ್ದವು.

ಡೋನಾ ಫರ್ನಾಂಡಿಸ್‌, ಗುರುಪ್ರಸಾದ್‌, ಸುಚಿತ್ರಾ ರಾವ್‌, ರೊವೀನಾ, ರಾಘವೇಂದ್ರ ಭಟ್‌, ಮೀನಾಜೈನ್‌, ಶಶಿಧರ್‌, ಅಜಿತ್‌, ಸೋಮಶೇಖರ್‌ ಮತ್ತಿತರನ್ನು ಒಳಗೊಂಡ ನಮ್ಮ ತಂಡ ಇಂತಹ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದೆವು. ʼಸರ್‌ ನಾನು ನಿಂತುಕೊಂಡಿದ್ದು ಮುಖ್ಯವಾಗಿ ಯಾಕೆ ಗೊತ್ತಾ ಸರ್‌. ನೀವು ಕ್ಲಾಸ್‌ ತೊಗೊಂಡಾಗ ನಮ್ಮನ್ನೆಲ್ಲಾ ಚೆನ್ನಾಗಿ ಮಾತನಾಡಿಸಿದ್ರಿ. ನಮ್ಮ ಕ್ಲಾಸ್ನಲ್ಲಿ ನಿಮ್ಮನ್ನ ತುಂಬಾ ಪ್ರಶ್ನೆ ಕೇಳಿದ್ನಲ್ಲಾ ಸರ್‌ ಮಂಜುನಾಥ ಅವ್ನು ಪಾಪ ರಾಜ್‌ಕುಮಾರ್‌ ಹೋಗ್ಬಿಟ್ಟಾಗ ಆಯ್ತಲ್ಲ ಸರ್‌ ಆ ಗಲಾಟೇಲಿ ಸಿಕ್ಕೊಂಡು ಹೋಗ್ಬಿಟ್ಟʼ. 

ಆ ಚಳಿಯಲ್ಲೂ ನಡಗುವಂತಾಯ್ತು. ಏನು ಹೇಳಬೇಕೋ ಗೊತ್ತಾಗ್ಲಿಲ್ಲ. ತುಂಬಾ ಕಸಿವಿಸಿಯಾಯ್ತು.  ಮಾಹಿತಿ ಕೊಟ್ಟ ಹುಡುಗನ ಹೆಸರು ಕೇಳುವುದಕ್ಕೂ ಮರೆತು ಹೋಯಿತು. ಛೇ ಹೀಗಾಗಬಾರದಿತ್ತು ಮತ್ತೆ ಭೇಟಿಯಾಗೋಣ ಎಂದಷ್ಟೇ ಹೇಳಿ ಹೊರಟುಬಿಟ್ಟೆ.  

 ***

‍ಲೇಖಕರು ವಾಸುದೇವ ಶರ್ಮ

October 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Kamalakar

    ತುಂಬಾ ಸೊಗಸಾಗಿದೆ ಈ ವಾರದ ಅಂಕಣ. ಹಾಸ್ಯಮಯವಾಗಿ ಸುಲಭವಾಗಿ ಓಡಿಸಿಕೊಳ್ಳುವ ಅನುಭವಗಳ ಕಥನ. ನಿನ್ನ ಬರವಣಿಗೆಯ ಶೈಲಿ ಮಾತುಕತೆಯಂತೆ ಇರುತ್ತದೆ. Looking forward for more

    ಪ್ರತಿಕ್ರಿಯೆ
  2. Kamalakar

    ಹಾಸ್ಯಮಯವಾಗಿ, ಸೊಗಸಾಗಿದೆ ಈ ವಾರದ ಅಂಕಣ. ಅನುಭವದ ಕಥನವಾದರೂ ಓದಿಸಿಕೊಳ್ಳುತ್ತೆ. ನಿನ್ನ ಗದ್ಯ ಶೈಲಿಯ ನಾಟಕೀಯತೆಯೇ ಒಂದು ಸ್ಪೆಷಲ್.

    ಪ್ರತಿಕ್ರಿಯೆ
  3. Anjali

    ಅನುಭವಗಳ ಮೊತ್ತ ಈ ಬದುಕು, ಚೆನ್ನಾಗಿದೆ
    ಅಂಜಲಿ ರಾಮಣ್ಣ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: