ಜಗತ್ತು ಒಂದೇ ಕತೆಯನ್ನು ಪುನಃ ಪುನಃ ಜೀವಿಸುತ್ತದೆಯಲ್ಲ!

ಬಾಲ ಒಂದಿಲ್ಲ ಅಷ್ಟೇ..’ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ.

ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ‘ಪ್ರಥಮ್ ಬುಕ್ಸ್’ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ.

ಉಳಿದವರೆಲ್ಲಾ ಶಾಲೆ ಅಭಿವೃದ್ಧಿ ಮಾಡ್ತಾರೆ, ನಾನು ಮಕ್ಕಳ ಜೊತೆ ಬಾಲ ಕಟ್ಟಿಕೊಂಡು ಕುಣೀತೀನಿ’ ಅಂತ ತಮ್ಮ ಇಂದಿನ ಐಕಾನಿಕ್ ಸ್ಮೈಲ್ ಕೊಡುತ್ತಾರೆ.

ಹೇಮಾಗೆ ಪುಸ್ತಕ ಎಂದರೆ ಇನ್ನಿಲ್ಲದ ಹುಚ್ಚು. ತಾವು ಓದಿದ ಕೃತಿಗಳ ಪಾತ್ರಗಳು ಇವರನ್ನು ಇನ್ನಿಲ್ಲದಂತೆ ಕಾಡುತ್ತವೆ. ‘ನಿದ್ದೆಯಲ್ಲೂ..’ಎಂದು ಮಾತು ಸೇರಿಸುತ್ತಾರೆ. ಇಂದಿನಿಂದ ಪ್ರತೀ ವಾರ ಹೇಮಾ ತಮ್ಮನ್ನು ಕಾಡಿದ ಪಾತ್ರಗಳನ್ನು ತಂದು ನಮ್ಮ ಎದುರು ನಿಲ್ಲಿಸಲಿದ್ದಾರೆ.

ಜಗತ್ತು ಒಂದೇ ಕತೆಯನ್ನು ಪುನಃ ಪುನಃ ಜೀವಿಸುತ್ತದೆಯಲ್ಲ!

ಸಂಗೀತ, ಜೀವನ, ಓದು; ಯಾಕೆ ಹೊರಟಲ್ಲಿಗೇ ಬಂದು ಮುಟ್ಟಿಕೊಳ್ಳುತ್ತವೆ? ಎನ್ನುವುದರ ಬಗ್ಗೆ ಒಂದು ತೀರದ ಕುತೂಹಲವಿದೆ ನನ್ನೊಳಗೆ.

ಐದು ವರ್ಷದ ಕೆಳಗೆ, ನನ್ನ ಅಲ್ಪ ಸ್ವಲ್ಪ ಸಂಗೀತ ತಿಳಿವಳಿಕೆ ನೋಡಿದ ಹಿರಿಯರೊಬ್ಬರು ತಾಳ ಬಾರಿಸೋದು ಅಂದ್ರೆ ಯಾವ instrument? ಅಂತ ಕೇಳಿದ್ದರು. ನನಗೆ ಗೊತ್ತಿದ್ದ ಮಾಹಿತಿಯನ್ನು ಹಂಚಿಕೊಂಡಿದ್ದೆ.

ನನಗೆ ಮಾತ್ರ ಅಲ್ಲ, ಅಲ್ಪ ಸ್ವಲ್ಪ ಸಂಗೀತದ ರಸಗ್ರಹಣತೆ ಇದ್ದವರನ್ನೂ ತಾಳ ಯಾಕೆ ಸೆಳೆಯುತ್ತದೆ? ಹಾಗಿದ್ದ ಮೇಲೆ ಅದಕ್ಕೊಂದು ವಿಶೇಷ ಗುಣವಿರಲೇಬೇಕು ಎನ್ನಲು ಶುರುವಾಯಿತು. ಆದರೆ ಅದನ್ನು ನಮ್ಮ ತಿಳಿವಳಿಕೆ ತಕ್ಕಂತೆ ಅರ್ಥ ಮಾಡಿಸುವವರು ಬೇಕಲ್ಲ?

‘ಸಂಗೀತ ಸಂವಾದ’ ಇಂತಹ ಅನೇಕ ವಿಷಯಗಳನ್ನು ಅರ್ಥೈಯಿಸಿತು.

ತಾಳ; ಕಾಲತತ್ವದ ವ್ಯಕ್ತರೂಪಗಳಲ್ಲೊಂದು. ನಿಯತವಾದೊಂದು ಲಯಕ್ಕೆ ಅನುಸಾರವಾಗಿ ಹಾಕುವ ‘ಘಾತ’ವೇ ತಾಳ. ಪ್ರತಿ ತಾಳದ ಪ್ರಥಮ ಘಾತ ನಿರ್ಣಾಯಕ.

ಭಾರತೀಯ ಸಂಗೀತದಲ್ಲಿ ಕಾಣುವ ಸಾಮಾನ್ಯ ಲಕ್ಷಣಗಳಲ್ಲೊಂದು ಆವರ್ತನಶೀಲ ಪ್ರಕ್ರಿಯೆ, ಎಂದರೆ ಹೊರಟಲ್ಲಿಗೇ ಬಂದು ಮುಟ್ಟಿಕೊಳ್ಳುವ, ತಾಳ. ನಮ್ಮ ರಕ್ತದಲ್ಲಿಯೇ ಸುಪ್ತವಾಗಿ ನೆಲೆಸಿರುವ ಆದಿಮ, ದಕ್ಷಿಣಾದಿ-ಉತ್ತರಾದಿ ಶಾಸ್ತ್ರೀಯ ಸಂಗೀತ ಮುಂತಾಗಿ ಯಾವ ಬಗೆಯ ಸಂಗೀತವೇ ಇರಲಿ ನಾವಲ್ಲಿ ಕಾಣುವುದು ಆವರ್ತನರೂಪೀ ತಾಳವನ್ನು.

ಸಂಗೀತದಲ್ಲಷ್ಟೇ ಅಲ್ಲ, ನಮ್ಮ ಜೀವನದಲ್ಲಿಯೂ ನಮ್ಮ ನಮ್ಮ ಧರ್ಮಗಳಲ್ಲಿಯೂ ಕಾಲದ ಈ ಲಕ್ಷಣ ಅನವರತ ಗೋಚರಿಸುತ್ತಿರುತ್ತದೆ.

ಪುನರ್ಜನ್ಮದ ಕಲ್ಪನೆ, ಜನನ ಮರಣದ ನಿರಂತರ ಚಕ್ರ, ಋತುಗಳ ಪುನರಾವರ್ತನೆ. ಸತ್ಯ, ಕೃತ, ದ್ವಾಪರ, ಕಲಿ ಈ ನಾಲ್ಕು ಯುಗಗಳು ಸೇರಿ ಒಂದು ಮಹಾಯುಗ, ನೂರು ಮಹಾಯುಗಗಳು ಸೇರಿ ಬ್ರಹ್ಮನ ಒಂದು ದಿನ.

ಇದೇ ಒಂದು ಆವರ್ತನದಲ್ಲಿ ಒಂದು ಕಲ್ಪ. ಇಲ್ಲೆಲ್ಲ ಇರುವುದು ಕಾಲಚಕ್ರದ ಪರಿಭ್ರಮಣೆಯೇ. ನಿರೀಶ್ವರವಾದಿಗಳಾದ ಬೌದ್ಧರೂ ಕಾಲದ ಈ ಆವರ್ತನ ಗುಣವನ್ನು ಒಪ್ಪುತ್ತಾರೆ.

ನಮ್ಮ ಬದುಕು ಮತ್ತು ಸಂಗೀತ ಏಕತ್ರ ಸಂಭವಿಸುತ್ತಿದೆಯೇ ಎನಿಸುವಂಥ ಆವರ್ತನವನ್ನು ಮನನ ಮಾಡಿಕೊಳ್ಳಬೇಕು ಎಂದರೆ ಬಾದಾಮಿಯ ಮೂರನೇ ಗುಹಾಲಯದಲ್ಲಿ ತಾನ್ಪುರದ ನುಡಿಸಾಣಿಕೆಯನ್ನು ಕೇಳಬೇಕು. ಅಂತರವಿಲ್ಲದ ನಿರಂತರತೆಯೇ ಬದುಕು ಮತ್ತು ತಾನ್ಪುರದ ಐಡೆಂಟಿಟಿ ಎನ್ನುವುದು ಅಕ್ಷರಶಃ ಹೃದ್ಯವಾಗುತ್ತದೆ.

ಇದು ಬದುಕು ಮತ್ತು ಸಂಗೀತದ್ದಾಯಿತು. ಹುಟ್ಟು ಸಾವುಗಳ ಪುನರಪಿ ಇದೆಯಲ್ಲ ಅದನ್ನಿಷ್ಟು ನೋಡೋಣ. ‘ನನ್ನ ಜೀವ’ ಎನ್ನುವಂಥದ್ದು ಹೊರಟೇ ಹೋದಾಗ, ಹೊತ್ತು ಮುಂದಕ್ಕುರುಳದೇ ಹಿಂದಕ್ಕುರುಳಬಾರದೇ ಎನಿಸುವುದು ಎಲ್ಲರಿಗೂ ಬರುವ ಯೋಚನೆ. 

ಮೊನ್ನೆ ರಕ್ಷಿತ್ ಶೆಟ್ಟಿಯ ಹಳೆಯ ಸಂದರ್ಶನ ನೋಡ್ತಿದ್ದೆ. ಆತನ ‘ಕಿರಿಕ್ ಪಾರ್ಟಿ’ನಲ್ಲಿ ಮೊದಲ ಹುಡುಗಿ ಆಯತಪ್ಪಿ ಬಿದ್ದು ಸಾಯ್ತಾಳೆ. ನಿಜ ಜೀವನದಲ್ಲಿ ಆಕೆಯದ್ದು ಆತ್ಮಹತ್ಯೆ.

ಆತ್ಮಹತ್ಯೆ ಮಾಡಿಕೊಳ್ಳುವ ಆ ದಿನ ಆಕೆ ರಕ್ಷಿತ್ ಶೆಟ್ಟಿಗೆ (ಎಂಜಿನಿಯರಿಂಗ್ ದಿವಸಗಳು) ಫೋನ್ ಮಾಡಿರುತ್ತಾಳೆ. ಆತ, ಕಾಲೇಜ್ ಫಂಕ್ಷನ್ ನಲ್ಲಿ ಬ್ಯುಸಿಯಾಗಿರುತ್ತಾನೆ. ಆಮೇಲೆ ಮಾಡ್ತೀನಿ ಅಂತ ಕರೆ ಕೊನೆಗೊಳಿಸುತ್ತಾನೆ. ಸುಶಾಂತ್ ಕೂಡ ಸಾಯುವ ಮೊದಲು ಇಬ್ಬರು ಮೂವರಿಗೆ ಕಾಲ್ ಮಾಡಿದ್ದ ಅಂತ ಕೇಳ್ಪಟ್ಟೆ. ಒಬ್ಬರು ಫೋನ್ ಎತ್ತಿ ಮಾತನಾಡಿದ್ದರೆ ಆ ಜೀವ ಬದುಕುತ್ತಿತ್ತೇನೋ?

ನನ್ನ ವಲಯದಲ್ಲೂ ಹೀಗೊಂದು ಅನುಭವವಾಗಿತ್ತು. ಈ ವಿಷಯ ಬೇರೆ ಬೇರೆಯವರ ಹತ್ರ ಹಂಚಿಕೊಳ್ಳುತ್ತಿದ್ದಾಗ ಅವರೂ ತಮ್ಮ ಆಪ್ತವಲಯದಲ್ಲಿ ಇಂಥದ್ದೊಂದು ಆಗಿತ್ತು ಎನ್ನುತ್ತಿದ್ದರು.

ಜಗತ್ತು ಒಂದೇ ಕತೆಯನ್ನು ಪುನಃ ಪುನಃ ಜೀವಿಸುತ್ತದೆಯಲ್ಲ! ಇದೂ ಕೂಡ ಒಂದು ರೀತಿಯ ಆವರ್ತನ. ಬದುಕು, ಸಾವಿನ ನಿರಂತರ ಚಕ್ರವನ್ನು ನಾವು ಯಾರೂ ಮೀರಲಾರೆವು. ಅದು ಇದ್ದ ಹಾಗೆ ಯಾಕೆ ಒಪ್ಪಿಕೊಳ್ಳಬೇಕು ಎನ್ನುವುದನ್ನು ಅರ್ಥಮಾಡಿಸಿದ್ದು ‘ಅಗ್ನಿ ಮತ್ತು ಮಳೆ’ಯ ನಿತ್ತಿಲೆ, ನನ್ನ ಬಹು ಪ್ರೀತಿಯ ಪಾತ್ರಗಳಲ್ಲಿ ಒಬ್ಬಳು.

ಬದುಕಿನಲ್ಲಿ ಸಹಜವಾಗಿ ಇರದ್ದು ಯಾವುದೂ ಸ್ವಾಭಾವಿಕವಲ್ಲ. ತಪಸ್ಸಿನಂಥಾ ತಪಸ್ಸನ್ನೇ ವ್ಯಂಗವಾಗಿ ನೋಡುವ ದೃಷ್ಟಿಕೋನ ಕೊಟ್ಟವಳು. ‘ಸಾಧನೆಗಾಗಿ ಸಹಜ ಬದುಕನ್ನು ಕಳೆದುಕೊಂಡವರ ಬಗ್ಗೆ ನನಗೆ ವಿಶೇಷ ಅಕ್ಕರೆಯಿದೆ,’ ಎನ್ನುವ ಸಾಲನ್ನು ನಾನು ಬರೆದಿದ್ದೇ ನಿತ್ತಿಲೆಯ ನೆನಪಿನಲ್ಲಿ.

ನಿತ್ತಿಲೆ: ಅಲ್ಲ ಕುರುಡಜ್ಜ, ಇವರದೆಲ್ಲ ಹೀಗೇ ನೋಡು. ದೇವರನ್ನು ಮಾತನಾಡಿಸಬೇಕು ಅಂದರೆ ಕಾಡಿನೊಳಗೆ ಹೊಕ್ಕು ತಪಸ್ಸು ಮಾಡಬೇಕು. ಇಲ್ಲದಿದ್ದರೆ ಬೇರೆ ಯಾರೂ ಬರದೆ ಇರೋ ಹಾಗೆ ಸುತ್ತ ಬೇಲಿ ಕಟ್ಟಿ, ಒಳಗೆ ಯಜ್ಞ ಉರಿಸಬೇಕು. ಅದೂ ವರ್ಷಾನುಗಟ್ಟಲೆ! ಅಷ್ಟಾದ ಮೇಲೂ ಕೂಡ ದೇವರು ಮೆಚ್ಚಿದರೆ ಮೆಚ್ಚಿದ. ಇಲ್ಲದಿದ್ದರೆ ಇಲ್ಲ. ಎಷ್ಟು ಒಯ್ಯಾರ ಆ ದೇವರದೂ! ನಮ್ಮಲ್ಲೆಲ್ಲ ಈ ಮುಚ್ಚುಮರೆ ಇಲ್ಲ. ನಾನು ಕೇಳೋದಿಷ್ಟೇ. ಇವರಿಗೆಲ್ಲ ಇಂದ್ರ ಮಳೆಯ ದೇವರಲ್ಲೇನು? ಹಾಗಿದ್ದರೆ ನಿಮ್ಮ ಯವಕ್ರೀ ಇಂದ್ರನ ಹತ್ತಿರ ಎರಡು ಸೆಳಕು ಮಳೆ ಹುಯ್ಯಸು ಅಂತ ಯಾಕೆ ಕೇಳಿಕೊಳ್ಳಲಿಲ್ಲ?

ಹತ್ತು ವರ್ಷ ತಪಸ್ಸು ಮಾಡಿ ಇಂದ್ರನನ್ನು ಒಲಿಸಿ ಕೊಂಡವನಿಗೆ ಅಷ್ಟು ಕೇಳಲಿಕ್ಕೆ ಆಗದ ಮೇಲೆ ಸಿದ್ಧಿಗಳನ್ನ ಪಡಕೊಂಡಿದ್ದು ಯಾಕೆ? ನಾನು ಅವನಿಗೆ ಎರಡು ಪ್ರಶ್ನೆ ಕೇಳೋದಿದೆ. ಮಳೆ ಯಾಕೆ ಸುರಿಸೋದಿಲ್ಲ, ಒಂದು. ಎರಡನೆಯದು, ನೀನು ಯಾವಾಗ ಸಾಯತೀ ಅಂತ ನಿನಗೆ ಗೊತ್ತಿದೆಯೇನು? ಎರಡೂ ಇಲ್ಲ ಅಂತಾದರೆ, ಅಂದರೆ ಸಾಯೋ ಮಕ್ಕಳನ್ನೂ ಉಳಿಸಲಿಕ್ಕಾಗೋದಿಲ್ಲ, ತನ್ನ ಕೊನೆಗಾಲ ತನಗೇ ಗೊತ್ತಿಲ್ಲ ಅಂತಾದರೆ ಎಂಥ ಜ್ಞಾನ ಪಡೆದೂ ಏನು ಪ್ರಯೋಜನ?

ಇಂದ್ರನಿಂದ ಸಮ್ಯಕ್ ಜ್ಞಾನ ಪಡೆದುಕೊಂಡ ಬಂದಂಥ ತಪಸ್ವಿಯನ್ನು ಸ್ವಾಭಾವಿಕ ಬದುಕಿನ ಮಾಪನದಲ್ಲಿ ಅವಳು ಅಳೆಯುವುದೇ ಚೆಂದ.

ಒಲಿದು ಬಂದ ದೇವರನ್ನು ತಡೆದು ಅರವಸು ಪ್ರಶ್ನೆ ಕೇಳಿದ್ದು ನಿತ್ತಿಲೆಗಾಗಿ. ಕರೆಯದೇ ಬಂದು ವರ ಕೊಡುತ್ತಿರುವೆಲ್ಲ ಇಂದ್ರ? ಹಾಗಿದ್ದರೆ ನಿತ್ತಿಲೆಯನ್ನು ಬದುಕಿಸಲು ಕಾಲಚಕ್ರವನ್ನು ಹಿಂದಕ್ಕುರುಳಿಸು ಎನ್ನುತ್ತಾನೆ. ಇಂದ್ರ; ಹಾಗಾದರೆ ಮತ್ತೆ ಇತಿಹಾಸದ ಪುನರಾವೃತ್ತಿ ಆಗಲಿಕ್ಕಿಲ್ಲೇನು? ಅವೇ ಘಟನೆ, ಅದೇ ಕತೆ, ಅದೇ ದುರಂತ, ಅದೇ ಪುನರುಕ್ತಿ!

ಅಲ್ವ…

ನನ್ನ ಮಾತು, ಓದು, ಸಂಗೀತ, ಜೀವನ, ಮತ್ತು ಕಾಲ ಈ ಎಲ್ಲದರ ನಡುವೆ ಹೀಗೊಂದು ಕಡಿಯದ ಏಕಸೂತ್ರತೆಯಿದೆ ಎಂದು ನನಗಂತೂ ಅನಿಸತ್ತದೆ. ನಿಮಗೆ??

October 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. NV Vasudeva Sharma

    ನಿಜ. ತಾಳ ಲಯ ಮತ್ತೆ ಮತ್ತೆ ಆವರ್ತನವಾಗುತ್ತಿದ್ದರೆ ಅದೇ ಸಹಜ ಸಾಮಾನ್ಯ ಎಂದುಕೊಳ್ಳುತ್ತೇವೆ. ಕೊಂಚ ತಾಳ ತಪ್ಪಿದರೂ ಲಯ ಏರುಪೇರಾದರೆ… ಅದನ್ನು ಒಪ್ಪಲು ಬಹಳ ಕಷ್ಟ. ಕೆಲವೊಮ್ಮೆ ತಾಳ ತಪ್ಪಿಸುವ ಲಯ ಬದಲಿಸುವ ಯತ್ನ ಹೊಸತೊಂದು ಕಾಣ್ಕೆಗೆ ಕರೆದೊಯ್ಯಬಹುದು… ಚೆನ್ನಾಗಿದೆ ಪ್ರಶ್ನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: