`ಆಕ್ರಾಂತ್’ ಎಂಬ ನಾನು..

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ.

ನಾಡಿನ ಹಲವಾರು ಪ್ರತಿಭಾವಂತ ಲೇಖಕರು-ಕಲಾವಿದರುಗಳನ್ನು ಗುರುತಿಸಿ ಬೆಳೆಸಿದ ಕನ್ನಡ ಪತ್ರಿಕೋದ್ಯಮದ ಕೀರ್ತಿಯಲ್ಲಿ `ಪ್ರಜಾವಾಣಿ’ಯ ಪಾಲು ದೊಡ್ಡದು.

ಒಳಗಿನ ಹಾಗೂ ಹೊರಗಿನ ಪ್ರತಿಭೆಗಳನ್ನು ಪೋಷಿಸುವ ಈ ಸಾಂಸ್ಕೃತಿಕ ಮಹತ್ವದ ಕಾರ್ಯವನ್ನು ಅದು ಮೊದಲಿನಿಂದಲೂ ಪತ್ರಿಕೆಯ ಧ್ಯೇಯ ಎಂಬಂತೆ ನಡೆಸಿಕೊಂಡು ಬಂದಿರುವುದರಲ್ಲಿ ಸಂಪಾದಕೀಯ ನೀತಿ, ಸಂಪಾದಕರ ಪಾತ್ರ ಹಾಗೂ ಮಾಲೀಕರ ಪ್ರೋತ್ಸಾಹ ಇವು ಮೂರೂ ಶ್ಲಾಘನೀಯವಾದದ್ದು.`ಪ್ರಜಾವಾಣಿ’ ಸಂಪಾದಕೀಯ ವಿಭಾಗವೇ ಒಂದು ಪ್ರತಿಭಾ ಭಂಡಾರವಾಗಿತ್ತು.

ಪ್ರಜಾವಾಣಿಯ ಪ್ರಥಮ ಸಂಪಾದಕರಾದ ಬಿ.ಪುಟ್ಟಸ್ವಾಮಯ್ಯನವರು ಸ್ವತ: ಪ್ರಸಿದ್ಧ ನಾಟಕಕಾರರೂ ಕಾದಂಬರಿಕಾರರೂ ಆಗಿದ್ದರು. ಅವರು ಬರೆಯುತ್ತಿದ್ದ ‘ಪಾನ್ ಸುಪಾರಿ’ ಅಂಕಣ ಜನಪ್ರಿಯವಾಗಿತ್ತೆಂದು ಕೇಳಿದ್ದೇನೆ. ನಂತರ ಬಂದ ಟಿ.ಎಸ್.ರಾಮಚಂದ್ರ ರಾವ್ ಅವರೂ `ಕೊರವಂಜಿ’ಯ `ರಾಶಿ’ಗರಡಿಯಲ್ಲಿ ಪಳಗಿದ ಸೃಜನಶೀಲ ಲೇಖಕರಾಗಿದ್ದರು.

ಸಮಾಜವಾದಿಗಳಾದ ಸಿ.ಜಿ.ಕೆ. ರೆಡ್ಡಿ ಮತ್ತು ಖಾದ್ರಿ ಶಾಮಣ್ಣ ಅವರುಗಳ ಕಾರ್ಯವೈಖರಿ ಮತ್ತು ವಿಚಾರಧಾರೆ ಪತ್ರಿಕೆಯ ಮತ್ತೊಂದು ಆಯಾಮವಾಗಿತ್ತು. ಟಿಎಸ್ಸಾರ್ ಅವರ `ಛೂಬಾಣ’ ಅತ್ಯಂತ ಜನಪ್ರಿಯ ಅಂಕಣವಾಗಿತ್ತು.

ಸಂಪಾದಕರೇ ಸೃಜನಶೀಲ ಲೇಖಕನಾದಾಗ ಸಂಪಾದಕೀಯ ವಿಭಾಗದಲ್ಲಿ ಇಂಥ ಪ್ರತಿಭೆಗಳು ಅರಳುವುದು ಸಹಜವೇ. ನಾನು ಸೇರಿದಾಗ ಸೃಜನಶೀಲ ಪ್ರತಿಭೆಗಳ ಒಂದು ಪಟಾಲಮ್ಮನ್ನೇ ಕಂಡೆ. ಆಧುನಿಕ ಸಾಹಿತ್ಯ, ರಂಗಭೂಮಿ, ಸಿನಿಮಾ, ಚಿತ್ರಕಲೆ ಇವೆಲ್ಲದರ ಬಗ್ಗೆ ನಿಕರ ಜ್ಞಾನ, ಹರಿತವಾದ ಜ್ಞಾಪಕ ಶಕ್ತಿಹೊಂದಿದ್ದ ವೈಎನ್ಕೆ ಸೃಜನಶೀಲ ಲೇಖಕರೂ ಭಾಷಾ ಕೋವಿದರೂ ಆಗಿದ್ದರು.

ಹೊಸ ಪ್ರತಿಭೆಗಳ ಸೃಜನಶೀಲ ಶಕ್ತಿಯನ್ನು ಗುರುತಿಸುವದರಲ್ಲಿ ವೈಎನ್ಕೆ ಅವರದು ನಿಶಿತಮತಿ. ಕವಿ ಹೇಮದಳ ರಾಮದಾಸ್, ಕಾದಂಬರಿಕಾರ ಇಂದಿರಾತನಯ, ಚಲನಚಿತ್ರ ಬರಹಗಳಲ್ಲಿ ಪರಿಣಿತರಾಗಿದ್ದ ಬಿ.ಎಂ. ಕೃಷ್ಣಸ್ವಾಮಿ, ಕ್ರಿಯಾಶೀಲ ಧಾವಂತಿಗ ಬಿ.ವಿ.ವೈಕುಂಠರಾಜು, ಕತೆಗಾರ ಜಿ.ಎಸ್. ಸದಾಶಿವ, ವಾಣಿಜ್ಯ ಮತ್ತು ಉದ್ಯಮ ಲೇಖನಿಗಳಿಗೆ ಹೆಸರಾಗಿದ್ದ ನರಸಿಂಹ ಮೂರ್ತಿ (ಮಾವ), ಕ್ರೀಡಾ ಬರಹಗಳಿಗೆ ಹೆಸರಾಗಿದ್ದ ಎಚ್.ಎಸ್. ಸೂರ್ಯನಾರಾಯಣ (ಸೂರಿ) ಮತ್ತು ದೇವನಾಥ್ ಹೀಗೆ ಸಂಪದ್ಯುಕ್ತವಾಗಿತ್ತು ಸಂಪಾದಕೀಯ ವಿಭಾಗ.

ಇವರೆಲ್ಲರ ಮಧ್ಯೆ ನಾನೊಂದು ಮುಗುಳು. `ಪ್ರಜಾವಾಣಿ’ ನನಗೆ ಅನಂತ ಅವಕಾಶಗಳ ಬಾಗಿಲನ್ನು ತೆರೆಯಿತು. ಸುದ್ದಿ ವಿಭಾಗ, ವರದಿ ವಿಭಾಗ, ಸಂಪಾದಕೀಯ ಬರಹ, ಸಾಪ್ತಾಹಿಕ ಪುರವಣಿ, ದೀಪಾವಳಿ ವಿಶೇಷಾಂಕ ಹೀಗೆ ಇಲ್ಲೆಲ್ಲ ಬರೆಯಲು, ಕೆಲಸ ಮಾಡಲು ಅವಕಾಶ ಕಲ್ಪಿಸಿ ನನ್ನನ್ನು ಪತ್ರಕರ್ತನನ್ನಾಗಿ, ಸಾಹಿತ್ಯ, ಚಲನಚಿತ್ರ, ರಂಗಭೂಮಿ ವಿಮರ್ಶಕನನ್ನಾಗಿ ಬೆಳೆಸಿತು.

ಈ ಎಲ್ಲ ವಿಭಾಗಗಳ ಸಹೋದ್ಯೋಗಿಗಳು ನನ್ನ ಅಭಿರುಚಿ, ಆಸಕ್ತಿ ಮತ್ತು ಸೃಜನಶೀಲತೆಯನ್ನ ಗುರುತಿಸಿ ಪ್ರೋತ್ಸಾಹಿಸಿದರು. ಸಂಪಾದಕರು ನನ್ನನ್ನು ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟಿಗೆ ರಸಗ್ರಹಣ ತರಬೇತಿಗೆ ಕಳುಹಿಸಿ ಹಲವಾರು ಪ್ರತಿಭೆಗಳ ಸಂಗಮವಾದ ಹೊಸದೊಂದು ಬೆಡಗಿನ ಲೋಕದಲ್ಲಿ ನಾನು ವಿದ್ಯಾರ್ಥಿಯಾಗಿ ಪ್ರವೇಶಿಸುವುದು ಸಾಧ್ಯವಾಯಿತು.

ವರ್ಧಿಷ್ಣುಗಳಿಗೆ `ಪ್ರಜಾವಾಣಿ’ ಅವಕಾಶಗಳ ಆಗರವಾಗಿತ್ತು. ಮೂರು ಸಂಪಾದಕೀಯಗಳು, ಒಂದು ಅಗ್ರ ಲೇಖನ, ಛೂಬಾಣ,ವಾಚಕರ ವಾಣಿ ಇದು ಸಂಪಾದಕೀಯ ಪುಟದ ಮುಖ್ಯ ಲಕ್ಷಣಗಳು. ಪ್ರತಿದಿನ ಬೆಳಿಗ್ಗೆ ೧೧-೧೧-೩೦ರ ಸುಮಾರಿಗೆ  ಸಂಪಾದಕರ ಕೊಠಡಿಯಲ್ಲಿ ಬೆಳಗಿನ ಸಭೆ ನಡೆಯುತ್ತು ಈ ಸಭೆಯಲ್ಲಿ ಸಂಪಾದಕರಲ್ಲದೆ ಸುದ್ದಿ ಸಂಪಾದಕರು, ಸಹಾಯಕ ಸಂಪಾದಕರು, ಮುಖ್ಯ ವರದಿಗಾರರು, ಮತ್ತು ಬೆಳಗಿನ ಪಾಳಿಯ ಮುಖ್ಯ ಉಪ ಸಂಪಾದಕರು ಹಾಜರಿರುತ್ತಿದ್ದರು.

ಈ ಸಭೆಯಲ್ಲಿ ಮೊದಲಿಗೆ ಬೆಳಗಿನ ಸಂಚಿಕೆಯ ಪರಾಮರ್ಶೆ ನಡೆಯುತ್ತುನಮ್ಮ ಪತ್ರಿಕೆಯ ವಿಶೇಷಗಳೇನು, ಕೊರತೆ ಲೋಪದೋಷಗಳೇನು, ಪುಟ ವಿನ್ಯಾಸ ಇತ್ಯಾದಿಯಾಗಿ ಕೂಲಂಕಷ ಚರ್ಚೆ ನಡೆಯುತ್ತಿತ್ತು. ನಂತರ ಮುಖ್ಯ ವರದಿಗಾರರು ರಾಜ್ಯದಲ್ಲಿನ ಅಂದಿನ ಸಂಭಾವ್ಯ ಸುದ್ದಿಗಳು ಮತ್ತು ಪತ್ರಿಕಾ ಗೋಷ್ಠಿಗಳ ವಿವರ ನೀಡುತ್ತಿದ್ದರು,. ಆದಾದ ಮೇಲೆ ಸಂಪಾದಕೀಯ ಪುಟ. ಅಂದಿನ ಸಂಪಾದಕೀಯ ಯಾವ  ವಿಷಯಗಳ ಬಗ್ಗೆ ಬರೆಯಬೇಕು.

ಅದರಲ್ಲಿ ನೀತಿ ನಿಲುವುಗಳು ಏನು? ಸಂಪಾದಕೀಯಗಳ ಎದುರು ಅಗ್ರ ಲೇಖನ ಯಾವುದು ಎಂದೆಲ್ಲ ಚರ್ಚೆ ನಡೆಯುತ್ತಿತ್ತು. ಆಗ ಪತ್ರಿಕೆಯಲ್ಲಿ ಮೂರು ಸಂಪಾದಕೀಯಗಳಿರುತ್ತಿದ್ದವು. ಎರಡು ಸಂಪಾದಕೀಯಗಳನ್ನು ಮಶ್ರೀ ಮತ್ತು ಕಣ್ಣನ್ ಬರೆಯುತ್ತಿದ್ದರು. ಇನ್ನೊಂದನ್ನು ನಮ್ಮಿಂದ ಯಾರಿಂದಲಾದರೂ, ಅಂದರೆ ಬೆಳಗಿನ ಅಥವಾ ಮಧ್ಯಾಹ್ನದ ಪಾಳಿಯ ಮುಖ್ಯ ಉಪಸಂಪಾದಕರು/ ಉಪ ಸಂಪಾದಕರಿಂದ ಬರೆಸಲಾಗುತ್ತಿತ್ತು.

ಅಗ್ರ ಲೇಖನಗಳು ರಾಜ್ಯ/ ರಾಷ್ಟ್ರ/ ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳ/ ವಿಷಯಗಳ ಲೇಖನಗಳಾಗಿರುತ್ತಿದ್ದವು. ರಾಜ್ಯ ವಿಷಯಗಳಿಗೆ ಸಂಬಂಧಿಸಿದಂತೆ ಬರೆಯುವವರು ನಮ್ಮಲ್ಲೇ ಸಾಕಷ್ಟು ಜನ ಇದ್ದರು. ರಾಷ್ಟ್ರೀಯ/ಅಂತರ ರಾಷ್ಟ್ರೀಯ  ವಿಷಯಗಳ ಲೇಖನಿಗಳಿಗಾಗಿ ನವದೆಹಲಿಯ ಪಬ್ಲಿಕೇಶನ್ ಸಿಂಡಿಕೇಟ್, ಇನ್‌ಫಾ, ಪಿಟಿಐ ಇಂಥ ಸಂಸ್ಥೆಗಳಿಂದ ಲೇಖನಗಳನ್ನು ತರಿಸಿಕೊಳ್ಳಲಾಗುತ್ತಿತ್ತು.

ಈ ಲೇಖನಗಳು  ಇಂಗ್ಲಿಷ್‌ನಲ್ಲಿದ್ದು ಸಂಪಾದಕೀಯ ಸಿಬ್ಬಂದಿಯಿಂದ ಭಾಷಾಂತರ ಮಾಡಿಸುತ್ತಿದ್ದರು. ನಾವು ಇಂಥ ಅವಕಾಶಗಳಿಗಾಗಿಯೇ ಕಾಯುತ್ತಿದ್ದೆವು. ಇದು ಸಮರ್ಥರಿಗೆ ಪ್ರೋತ್ಸಾಹವಷ್ಟೇ ಆಗಿರದೆ ಪ್ರೋತ್ಸಾಹ ಧನದ ಆಕರ್ಷಣೆಯೂ ಇತ್ತು. ಸಂಪಾದಕೀಯ ಸಿಬ್ಬಂದಿ ವರ್ಗದವರು ಬರೆದ ಸ್ವತಂತ್ರ ಲೇಖನಗಳಿಗೆ ರೂ ೨೫, ಭಾಷಾಂತರಕ್ಕೆ ರೂ ೧೦, ಸಂಪಾದಕೀಯಕ್ಕೆ ರೂ ೨೦, ಹೀಗೆ ದೈನಂದಿನ ಕೆಲಸದ ಜೊತೆಗೆ ಈ ರೀತಿಯ ಹೆಚ್ಚಿನ ಕೆಲಸಗಳಿಗೆ ಸಂಭಾವನೆ ನೀಡುವುದು ಪ್ರಜಾವಾಣಿಯ ಸತ್ಸಂಪ್ರದಾಯವಾಗಿತ್ತು.

ಪ್ರತಿ ತಿಂಗಳ ೨೦-೨೨ರಂದು ಈ ಸಂಭಾವನೆ ಹಣವನ್ನು ಪಾವತಿಸಲಾಗುತ್ತಿತ್ತು. ಇದು ಒಂದು  ರೀತಿಯಲ್ಲಿ ನಮಗೆ ತಿಂಗಳ ಕೊನೆಯ ಖರ್ಚುವೆಚ್ಚಗಳಿಗೆ ಒದಗಿಬರುತ್ತಿದ್ದ ಎರಡನೆಯ ಸಂಬಳ. ಹೀಗಾಗಿ ಇಂಥ ಅವಕಾಶಗಳಿಗಾಗಿ ನಾವು ಕಾಯುತ್ತಿದ್ದೆವು. ನಾನು ಕೆಲಸಕ್ಕೆ ಸೇರಿದ ತಿಂಗಳಿನಿಂದಲೇ ನನಗೆ ಇಂಥ ಅವಕಾಶಗಳು ಲಭ್ಯವಾದುವು. ಸಹೋದ್ಯೋಗಿಗಳಲ್ಲಿ ಅನೇಕರು ಇಂಥ ಅವಕಾಶಗಳಿಗಾಗಿ ಕಾಯುತ್ತಿದ್ದರೆ ಇನ್ನು ಕೆಲವರು ನಿರಾಸಕ್ತರಾಗಿದ್ದರು.

ತೆಲುಗಿನಲ್ಲಿ,”ಇಂಟಗಿನ್ನ ಗುಡಿಭದ್ರಮು” ಎನ್ನುವ ಗಾದೆ ಮಾತೊಂದಿದೆ. ಅಂದರೆ ಮನೆಗಿಂತ ದೇವಸ್ಥಾನವೇ ಸುರಕ್ಷಿತ. ಇದನ್ನು ನನಗೆ ತಿಳಿಸಿದವರು ಖಾದ್ರಿ ಶಾಮಣ್ಣನವರು. ನಾನು ರಾತ್ರಿ  ಪಾಳಿಯಲ್ಲಿದ್ದಾಗಲೂ ಬೆಳಿಗ್ಗೆ ಕಚೇರಿಗೆ ಹಾಜರಾಗಿ ಸಾಪ್ತಾಹಿಕ ಪುರವಣಿಯಲ್ಲೋ, ಗ್ರಂಥಾಲಯದಲ್ಲೋ ಕಾಲಕ್ಷೇಪ ಮಾಡುತ್ತಿದ್ದುದನ್ನು ಕಂಡು ಅವರು ಈ ಮಾತನ್ನ ಹೇಳಿದ್ದರು. ಅದು ನನ್ನ ಸಂದರ್ಭದಲ್ಲಿ ನಿಜವೂ ಆಗಿತ್ತು.

ಮನೆಯ ತಾಪತ್ರಯಗಳಿಂದ ತಪ್ಪಿಸಿಕೊಳ್ಳಲು ನಾನು ರಾತ್ರಿ ಪಾಳಿ ಇದ್ದಾಗ ಬೆಳಿಗ್ಗೆ ೧೧-೩೦ರ ಸುಮಾರಿಗೆ ಆಫೀಸಿಗೆ ಬಂದು ನನ್ನ ಹಾಜರಿ ಸಂಪಾದಕರ/ ಸಹಾಯಕ ಸಂಪಾದಕರುಗಳ ಗಮನಕ್ಕೆ ಬರುವಂತೆ ಮಾಡಿ ಗ್ರಂಥಾಲಯದಲ್ಲಿ ಪುಸ್ತಕವನ್ನೋ ಕ್ಲಿಪ್ಪಿಂಗ್‌ಗಳನ್ನೋ ನೋಡುವುದರಲ್ಲೋ ಪುಸ್ತಕವನ್ನು ಓದುವುದರಲ್ಲೋ ಮಗ್ನನಾಗಿರುತ್ತಿದ್ದೆ. ಇಲ್ಲವೇ ಸಾಪು ವಿಭಾಗದಲ್ಲಿ ವೈಕುಂಠರಾಜು ವಹಿಸಿದ ಕೆಲಸದಲ್ಲಿ ನಿರತನಾಗಿರುತ್ತಿದೆ.

ಹೀಗೆ ಭಾಷಾಂತರ/ ಸಂಪಾದಕೀಯ ಬರೆಯುವ ಅವಕಾಶಗಳಿಗಾಗಿ ಕಾಯುತ್ತಿದ್ದೆ. ಇದು ಫಲ ಕೊಟ್ಟಿದ್ದುಂಟು. ಒಮೊಮ್ಮೆ ಟಿಎಸ್ಸಾರ್ ಮೂರನೆಯ ಸಂಪಾದಕೀಯ ಬರೆಯಲು `ಆಕ್ರಾಂತ್’ಗೆ ಹೇಳಿ ಎಂದು ಕಣ್ಣನ್/ಮಶ್ರೀಗೆ ತಿಳಿಸುತ್ತಿದ್ದರು. ಅವರು ಸಂಪಾದಕೀಯದ ವಿಷಯ, ನೀತಿ ತಿಳಿಸಿ ಬರೆಯಲು ಹೇಳುತ್ತಿದ್ದರು. `ಆಕ್ರಾಂತ್’ ಎನ್ನುವುದು ಟಿಎಸಾರ್ ನನಗೆ ಇಟ್ಟಿದ್ದ ಅಡ್ಡ ಹೆಸರು.

ನಾನು ಕೆಲವು ಸಂದರ್ಭಗಳಲ್ಲಿ ಅನಗತ್ಯವಾಗಿ ಭಾವೋದ್ರೇಕದಿಂದ  ಮಾತಾನಡುತಿದ್ದೆ ಎಂದೋ ಏನೋ ಸಹೋದ್ಯೋಗಿಗಳು ನನ್ನನ್ನು `ಆಂಗ್ರಿ ಯಂಗ್ಮನ್’ ಎಂದು ಚುಡಾಯಿಸುತ್ತಿದ್ದರು. ಅದರ ಫಲವೇ ಈ `ಆಕ್ರಾಂತ್’. ಸಂಪಾದಕರು   ಹೀಗೆ,`ವಿಶ್ರಾಂತ್ ಜೀ’,`ಗುಬದುಲ್ಲಾ’,`ಕ್ರಾನಿಕ್ ಬ್ಯಾಚಲರ್’ ಎಂದೆಲ್ಲ ಸಹೋದ್ಯೋಗಿಗಳಿಗೆ ಅಡ್ಡ ಹೆಸರುಗಳನ್ನಿಟ್ಟಿದ್ದರು. ಮಹಿಳೆಯ ಮಾನಭಂಗ ಸುದ್ದಿಯನ್ನು ಅತಿ ರೋಚಕವಾಗಿ ಬರೆದಿದ್ದ ಸಹೋದ್ಯೋಗಿಯೊಬ್ಬನನ್ನು `ಕ್ರಾನಿಕ್ ಬ್ಯಾಚಲರ್’ ಎಂದು ಕರೆಯುತ್ತಿದ್ದರು.

ಒಂದು ಸೋಮವಾರ. ನಾನು ಬೆಳಗಿನ ಪಾಳಿಗೆ ಬಂದು ಕುಳಿತಿದ್ದೆ. ಸುಮಾರು ೧೧ ಗಂಟೆ ಸಮಯಕ್ಕೆ ಟಿಎಸ್ಸಾರ್ ಆಫೀಸಿಗೆ ಬಂದರು. ಅವರು ಹಳೆಯ ಕಟ್ಟಡದಲ್ಲಿ ತಮ್ಮ ಚೇಂಬರಿಗೆ ಸಂಪಾದಕೀಯ ವಿಭಾಗದ ಹಾಲ್ ಮೂಲಕವೇ ಹೋಗಬೇಕಿತ್ತು. ಹೀಗಾಗಿ ಅವರ ಆಗಮನ-ನಿರ್ಗಮನಗಳು ನಮ್ಮ ಕಣ್ಣಿಗೆ ಬೀಳುತ್ತಿದ್ದವು. ಸಾಮಾನ್ಯವಾಗಿ ಇಬ್ಬರೋ ಮೂವರೋ ಅವರ ಹಿಂದೆ ಏನಾದರೊಂದು ಅಹವಾಲು ಇಟ್ಟುಕೊಂಡು ಬರುತ್ತಿದ್ದರು.

ರಾಯರು ಮಂತ್ರಿ ಮಹೋದಯರಿಗೆ ಫೋನ್ ಮಾಡಿಯೋ ಅಥವಾ ವರದಿಗಾರರಿಗೆ ವಹಿಸಿಯೋ ಹಿಂದೆ ಬಿದ್ದವರನ್ನು ಸಾಗಹಾಕುತ್ತಿದ್ದರು. ಹೀಗೆಂದೇ ಟಿಎಸ್ಸಾರ್ ನೊಂದವರ `ಶಿವೋಹಂ’ ಎಂದು ಖ್ಯಾತರಾಗಿದ್ದರು. ಅಂದು ಸುಮಾರು ೩೫ರ ಪ್ರಾಯದ ಹೆಂಗಸೊಬ್ಬಳು ಗೇಟಿನಲ್ಲೇ ರಾಯರಿಗಾಗಿ ಕಾದಿದ್ದು ಅವರು ಬಂದ ಕೂಡಲೇ ಹಿಂದೆಬಿದ್ದಿದ್ದಳು. ಆಕೆ ಟಿಎಸ್ಸಾರ್ ಅವರ `ಶ್ರೀನಿವಾಸ ಫಾರಂ’ಬಳಿ ಇದ್ದ ಹಳ್ಳಿಯೊಂದರ ಬಡವಿ.

ರಾಯರು ಚೇಂಬರಿನೊಳಗೆ ಹೋದಂತೆ ಆ ಮಹಿಳೆ ಬಾಗಿಲಲ್ಲೇ ನಿಂತಳು. ಹತ್ತು ಹದಿನೈದು ನಿಮಷಗಳ ನಂತರ ರಾಯರು ತಮ್ಮ ಕೊಠಡಿಯ ರೆಕ್ಕೆ ಬಾಗಿಲನ್ನು ಅರ್ಧ ತೆಗೆದು, ಅದಕ್ಕೆ ಕೈ ಆನಿಸಿ ನಿಂತು ವರದಿಗಾರರರ ವಿಭಾಗದತ್ತ ಕಣ್ಣು ಹಾಯಿಸಿದರು. ವರದಿಗಾರರು ಯಾರೂ ಬಂದಿರಲಿಲ್ಲ. ನಂತರ ನಮ್ಮ ಮೇಜಿನತ್ತ ಕಣ್ಣುಹಾಯಿಸಿದಾಗ ಅವರ ದೃಷ್ಟಿ ನನ್ನ ಮೇಲೆ ಬಿತ್ತು. ಒಳಕ್ಕೆ ಹೋದರು. ಮರುಕ್ಷಣವೇ  ನನಗೆ ಬುಲಾವ್ ಬಂತು. “ನೋಡಿ ಹೊರಗೆ ನಿಂತಿದ್ದಾಳಲ್ಲ ಹೆಂಗಸು, ಅವಳ ಅಹವಾಲು ಏನೋ ಕೇಳಿ. ತನ್ನ ಮಕ್ಕಳನ್ನು ಯಾರೋ ಹಿಡದಿಟ್ಟುಕೊಂಡಿದ್ದಾರೆ ಎನ್ನುತ್ತಾಳೆ. ಏನದು ವಿಚಾರಿಸಿ” ಎಂದು ಅಪ್ಪಣೆ ಮಾಡಿದರು.

ವಿದೇಶಿ ದಂಪತಿಗಳು ತನ್ನ ಮಗುವೊಂದನ್ನು ಬಲಾತ್ಕಾರವಾಗಿ ತಮ್ಮ ದೇಶಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆಂದೂ ಅವರಿಂದ ಮಗುವನ್ನು ತನಗೆ ಕೊಡಿಸಬೇಕೆಂದೂ ಆ ತಾಯಿ ಕಂಬನಿದುಂಬಿ ಹೇಳಿದಳು. ಸ್ವಲ್ಪ ಕೆದಕಿ ಕೇಳಿದಾಗ ಗೊತ್ತಾದದ್ದು ಇಷ್ಟು: ಗಂಡನಿಂದ ತಿರಸ್ಕೃತಳಾದ ಆಕೆ, ಬಡತನದ ಬೇಗೆ ತಾಳಲಾರದೆ ತನ್ನ ಮೂವರು ಮಕ್ಕಳಲ್ಲಿ ಒಬ್ಬ ಹುಡುಗನನ್ನು ವಿದೇಶಿ ದಂಪತಿಗಳಿಗೆ ಕೊಡಲು ಮೊದಲು ಒಪ್ಪಿದ್ದರೂ ಈಗ ಅವಳ ತಾಯಿ ಹೃದಯ ಅದಕ್ಕೆ ಒಪ್ಪುತ್ತಿಲ್ಲ.

ಆ ವಿದೇಶಿ ದಂಪತಿಗಳು ರಿಚ್ಮಂಡ್ ಸರ್ಕಲ್ ಸಮೀಪ ಇರುವ  ಬೆಂಗಳೂರು ಕ್ಲಬ್‌ನ ವಸತಿ ಗೃಹದಲ್ಲಿ ಇದ್ದು ಒಂದೆರಡು ದಿನಗಳಲ್ಲೇ ಸ್ವದೇಶಕ್ಕೆ ವಾಪಸಾಗಲಿದ್ದರು.

ನಾನು ಇಷ್ಟನ್ನು ಸಂಪಾದಕರಿಗೆ ವರದಿ ಮಾಡಿದೆ. “ಗೋ ಟು ಬೆಂಗಳೂರ್ ಕ್ಲಬ್ ಅಂಡ್ ಇನ್ವೆಸ್ಟಿಗೇಟ್” ಎಂದರು.”ಆಗಲಿ  ಸಾರ್” ಎಂದೆ. ಕದಲದೇ ಅಲ್ಲೇ ನಿಂತಿದ್ದ ನನ್ನನ್ನು ನೋಡಿದ ಸಂಪಾದಕರು, ಚೀಫ್ ಅಕೌಟೆಂಟ್ ಕೃಷ್ಣಸ್ವಾಮಿಯವರಿಗೆ ಒಂದಷ್ಟು ಮುಂಗಡ ಹಣ ಕೊಡುವಂತೆ ಚೀಟಿ ಬರೆದುಕೊಟ್ಟರು. ನಾನು ಹಣ ಪಡೆದುಕೊಂಡು ಆಕೆಯನ್ನು ಆಟೋದಲ್ಲಿ ಕೂರಿಸಿಕೊಂಡು ಬೆಂಗಳೂರು ಕ್ಲಬ್‌ಗೆ ಧಾವಿಸಿದೆ.

ವಿದೇಶಿ ದಂಪತಿಯನ್ನು ಪತ್ತೆ ಹಚ್ಚುವುದು ಕಷ್ಟವಾಗಲಿಲ್ಲ. ನಮ್ಮನ್ನು ನೋಡಿದ್ದೇ ಆ ದಂಪತಿ ಸಿಡಿಮಿಡಿಗೊಂಡರು. “ಮತ್ತೇಕೆ ಬಂದೆ? ಇನ್ನೇನೂ ಕೊಡುವುದಿಲ್ಲ. ಗೆಟೌಟ್” ಎಂದು ಗಂಡ ಅಬ್ಬರಿಸಿದ. ನಾನು ಪತ್ರಿಕೆಯವನು ಎಂದು ಪರಿಚಯಿಸಿಕೊಂಡಾಗ ನನ್ನ ಬಳಿ ಮಾತನಾಡಲು ಒಪ್ಪಿದರು. ನನ್ನ ಜೊತೆ ಬಂದಿದ್ದ ಮಹಿಳೆ ಹೇಳಿದ್ದೆಲ್ಲವನ್ನೂ ಸುಳ್ಳೆಂದು ನಿರಾಕರಿಸಿದರು.

ತಾವು ಅನಾಥಾಶ್ರಮವೊಂದರ ಮೂಲಕ ಅವಳ ಮಗುವನ್ನು ದತ್ತು ಸ್ವೀಕಾರ ಮಾಡಿರುವುದಾಗಿ ನುಡಿದ ವಿದೇಶಿ ಪ್ರಜೆ ಮ್ಯಾಜಿಸ್ಟ್ರೇಟರ ಸಮ್ಮುಖದಲ್ಲಿ ಸಹಿ ಆದ ದತ್ತು ಸ್ವೀಕಾರ ಪತ್ರವನ್ನು ತೋರಿಸಿದರು. ದತ್ತು ಸ್ವೀಕಾರ ಪತ್ರವನ್ನು ವಕೀಲರೊಬ್ಬರು ತಯಾರಿಸಿದ್ದರು. ಸಂಬಂಧಪಟ್ಟವರೆಲ್ಲರ ಸಹಿ, ಹೆಂಗಸಿನ ಹೆಬ್ಬೆಟ್ಟು ಗುರುತು, ಮ್ಯಾಜಿಸ್ಟ್ರೇಟರ ಮೊಹರು ಎಲ್ಲ ಇದ್ದವು. ಎಲ್ಲವೂ ಕಾನೂನು ಸಮ್ಮತವಾಗಿಯೇ ನಡೆದಿರುವಂತೆ ತೋರಿತು.

ವಿದೇಶಿ ದಂಪತಿ ದತ್ತು ಸ್ವೀಕಾರಕ್ಕೆ ಮೊದಲು ಆಕೆಗೆ ಒಂದಷ್ಟು  ಹಣ ಪಾವತಿಸಿದ್ದರು. ನಂತರ ಮತ್ತಷ್ಟು ಹಣಕ್ಕೆ ಒತ್ತಾಯ ಮಾಡಿದ್ದಳು. ಅವರು ಒಪ್ಪಿರಲಿಲ್ಲ. ರಾಯರು ಪತ್ರಿಕೆಯವರು, ಅವರನ್ನು ಹಿಡಿದರೆ ಕೆಲಸವಾಗುತ್ತೆ ಎಂದು ಯಾರೋ ಹೇಳಿದ ಮಾತನ್ನು ಕೇಳಿಕೊಂಡು ಫಾರಂನಲ್ಲಿ ರಾಯರ ಕಾಲಿಗೆ ಬಿದ್ದು ಕಚೇರಿಗೂ ಹಿಂಬಾಲಿಸಿ ಬಂದಿದ್ದಳು.

ವಿದೇಶಿ ದಂಪತಿ ಜೊತೆ ಇಷ್ಟೆಲ್ಲ ಆದಮೇಲೆ ನಾನು ಅನಾಥಶ್ರಮದ ವಿವರ ಗುರುತು ಹಾಕಿಕೊಂಡೆ. ಅದು ವಿಲ್ಸನ್ ಗಾರ್ಡನ್ ನಲ್ಲಿನ ಅಬಲಾಶ್ರಮವಾಗಿತ್ತು. ಅಬಲಾಶ್ರಮಕ್ಕೆ ಆಕೆ ಜೊತೆ ಹೋದೆ. ಅಬಲಾಶ್ರಮದವರು ಎಲ್ಲ ವಿವರಗಳನ್ನೂ ಕೊಟ್ಟರು. ಹೆಂಗಸು ಮಗುವನ್ನು ಸಾಕಲಾಗದೆ ಅಬಲಾಶ್ರಮದಲ್ಲಿ ಬಿಟ್ಟಿದ್ದಕ್ಕೆ ದಾಖಲೆ ಇತ್ತು. ಮಗುವನ್ನು ದತ್ತು ಕೊಡಲು ಒಪ್ಪಿದ್ದಕ್ಕೆ ದಾಖಲೆ ಇತ್ತು. ಎಲ್ಲದಕ್ಕೂ ಆಕೆ ಹೆಬ್ಬೆಟ್ಟು ಒತ್ತಿದ್ದಳು.

“ಇದೆಲ್ಲದಕ್ಕೂ ನೀನು ಹೆಬ್ಬೆಟ್ಟು ಒತ್ತಲು ಯಾರಾದರೂ ಬಲವಂತ ಮಾಡಿದರೋ ಅಥವಾ ನೀನೆ ಮನಸೊಪ್ಪಿ ಒತ್ತಿದ್ದೋ” ಎಂದು ಕೇಳಿದೆ. “ಯಾರೂ ಬಲವಂತ ಮಾಡಿಲ್ಲ. ಬಡತನ, ಮಗೀನ ಬೆಳಸಾಕಗದಂತ ಇಲ್ಲಿ ಬುಟ್ಟೆ. ಅವರ‍್ತಾವಾನ ಸುಕವಾಗಿರಲೀ ಅಮ್ತ ನಾನೇ ದತ್ತು ಕೊಟ್ಟೆ” ಎಂದು ಬಾಯಿ ಬಿಟ್ಟಳು. “ಇನ್ನಷ್ಟು ಅಣ ಕೊಡ್ಸೀ ಬುದ್ದಿ  ಮಗಾನ ಅವರೇ ಒಯ್ಲೀ” ಎಂದು ಬೇಡಿಕೆ ಇಟ್ಟಳು.

 ಪತ್ರಿಕೆಯವರ ಮೂಲಕ ಹೋದರೆ ವಿದೇಶಿ ದಂಪತಿ ಹೆದರುತ್ತಾರೆ. ಆಗ ಅವರಿಂದ ಇನ್ನಷ್ಟು ಹಣ ಕೀಳಬಹುದು ಎಂದು ಯಾರೋ ಅವಳಿಗೆ ಚಿತಾವಣೆ ಮಾಡಿದ್ದರು.

ಇಷ್ಟೆಲ್ಲ ತನಿಖೆ ಮಾಡುವ ವೇಳೆಗೆ ಸಂಜೆಯಾಯಿತು. “ಸ್ವಾಮಿಗಳ್ನ  ಕಾಣ್ದೆ ಓಗಲಾರೆ” ಎಂದು ಹೆಂಗಸು ನನ್ನ ಜೊತೆಯಲ್ಲೇ ಆಫೀಸಿಗೆ ಬಂದಳು. ಸಂಪಾದಕರಿಗೆ ಎಲ್ಲವನ್ನೂ ಸವಿಸ್ತಾರವಾಗಿ ವರದಿ ಮಾಡಿದೆ. ಹೊರಗೆ ನಿಂತಿದ್ದ ಹೆಂಗಸನ್ನು ಒಳಕ್ಕೆ ಕರೆಸಿದ ರಾಯರು “ನೀನಾಗಿ ಒಪ್ಪಿ ದತ್ತುಕೊಟ್ಟು ಈಗ ಅವರು ಹಿಡಿದಿಟ್ಟುಕೊಂಡಿದಾರ ಅಂತ ಸುಳ್ಳು ಹೇಳ್ತೀಯ? ಸುಳ್ಳು ಹೇಳಿದರೆ  ಏನಾಗ್ತದೆ ಗೊತ್ತ? ಜೈಲಿಗೆ ಹೋಗಬೇಕಾಗ್ತದೆ” ಎಂದು ಗದರಿದರು.

ಜೈಲಿನ  ಮಾತು ಕೇಳಿದ್ದೇ ಹೆಂಗಸು ಅಳಲು ಶುರು ಮಾಡಿದಳು. ರಾಯರು ಪರ್ಸ್ ತೆಗೆದು ಹತ್ತರ ಕೆಲವು ನೋಟುಗಳನ್ನು ಅವಳ ಕೈಯಲ್ಲಟ್ಟು, ಹೋಗು ತಿರುಗಿ ಬರಬೇಡ” ಎಂದು ಅವಳನ್ನು ಸಾಗಹಾಕಿದರು.

   “ಏನ್ಮಾಡ್ತೀಯ?’

 “ಸರ್, ಇದರಲ್ಲಿ ಎರಡು `ಹೇಳಿಕೆ’ಗಳಿವೆ. ಒಂದು: ಬಡತನದಿಂದಾಗಿ ಹೊಟ್ಟೆಯಲ್ಲಿ ಹುಟ್ಟಿದ ಮಗುವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿಗೆ ದೂಡಲಾದ ನಿರ್ಭಾಗ್ಯ ತಾಯಿಯದು. ಎರಡನೆಯದು: ಸಂತಾನಹೀನರಾದ ದಂಪತಿಯದು.

ಮೊದಲನೆಯ ಹೇಳಿಕೆ ಪರಿಗಣಿಸಿದರೆ ಇದೊಂದು ಒಳ್ಳೆಯ ಮಾನವಾಸಕ್ತಿಯ ವರದಿಯಾದೀತು- ಅಂದರೆ ಹೆಂಗಸಿನ ಹೇಳಿಕೆಯನ್ನು ಮಾತ್ರ ಕೇಂದ್ರೀಕರಿಸಿ ವರದಿ ಮಾಡಿದಲ್ಲಿ, ಬಡತನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನೇ ಮಾರಿಕೊಳ್ಳುವಂಥ ಶೋಚನೀಯ ಸ್ಥಿತಿಗೆ ದೂಡುತ್ತದೆ ಎಂಬುವ ಅಂತ:ಕರಣ ಕರಗಿಸುವ ವರದಿಯಾದೀತು.

ಎರಡನೆಯ ಹೇಳಿಕೆಯನ್ನು ಕೇಂದ್ರೀಕರಿಸಿ ವರದಿ ಮಾಡಿದರೆ, ಅಲ್ಲಿಯೂ ಸಂತಾನಹೀನ ದಂಪತಿಯ ವ್ಯಥೆ, ಅದಕ್ಕಾಗಿ ಅವರು ಪಡುವ `ದತ್ತು’ಪಾಡು ಅಂತ:ಕರಣ ಕರಗಿಸುವಂಥಾದ್ದೇ.

ಎರಡೂ ಮಾನವಾಸಕ್ತಿ ವರದಿಗಳೇ ಆದೀತು..

ಮೂರನೆಯದೊಂದು ಎಂದರೆ ಇದ್ದುದನ್ನು ಇದ್ದ ಹಾಗೆ ವರದಿ ಮಾಡುವುದು. ಹಾಗೆ ಮಾಡಿದರೆ ವಿದೇಶಿ ದಂಪತಿಯರದು  ಏನೂ ತಪ್ಪಿಲ್ಲ. ಹೆಂಗಸು ತಮ್ಮನ್ನು `ಬ್ಲಾಕ್‌ ಮೇಲ್‌ ‘ ಮಾಡಲು ಪ್ರಯತ್ನಿಸುತ್ತಿದ್ದಾಳೆ  ಎಂಬ ವಿದೇಶಿ ದಂಪತಿ ಮಾತಿನಲ್ಲಿ ಸತ್ಯವಿದೆ. ಹಾಗೆ ವರದಿ ಮಾಡಿದರೆ ಹೆಂಗಸು ಸಿಕ್ಕಿ ಬೀಳುತ್ತಾಳೆ.

ಈ ನಿರ್ಭಾಗ್ಯ ತಾಯಿಯ ಹೇಳಿಕೆಯನ್ನಷ್ಟೇ ಕೇಂದ್ರವಾಗಿರಿಸಿಕೊಂಡು ವರದಿ ಮಾಡಿದಲ್ಲಿ ಅದೊಂದು ಒಳ್ಳೆಯ ಮಾನವಾಸಕ್ತಿಯ ವರದಿಯಾಗಬಹುದಾದರೂ ಪತ್ರಿಕೆಯಿಂದ  ಸತ್ಯಕ್ಕೆ ಅಪಚಾರವೆಸಗಿದಂತಾಗುತ್ತದೆ, ಹಣದಾಸೆಯಿಂದ `ಬ್ಲಾಕ್‌ಮೇಲ್’ ಮಾಡಲೆತ್ನಿಸಿದ ಮಹಿಳೆಯನ್ನು ರಕ್ಷಿಸುವ ಪ್ರಯತ್ನವೂ ಇದಾಗುತ್ತದೆ. ಅಂದರೆ ಪರೋಕ್ಷವಾಗಿ ಇಂಥ ಕುಟಿಲೋಪಾಯವನ್ನು ಪತ್ರಿಕೆ ಸಮರ್ಥಿಸಿದಂತಾಗುತ್ತದೆ.

ಮೂರನೆಯದಾಗಿ ಎಂದರೆ ಇದ್ದುದನ್ನು ಇದ್ದ ಹಾಗೆ ವರದಿ ಮಾಡಿದಲ್ಲಿ ವಿದೇಶಿ ದಂಪತಿಯರು ಪಾರಾಗುತ್ತಾರೆ, ಅಸಹನೀಯ ಬಡತನದಿಂದಾಗಿ ಹಣಕ್ಕೆ ಆಸೆ ಪಟ್ಟ ತಾಯಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಹೆಂಗಸಿಗೆ ಮೋಸವಾಗಿದೆ ಎಂದೂ ಬರೆಯವಂತಿಲ್ಲ, ಕಡುಬಡತನ, ಸುಳ್ಳು ಹೇಳುವಂಥ, `ಬ್ಲಾಕ್ಮೇಲ್’ ಮಾಡುವಂಥ ಪರಿಸ್ಥಿತಿಗೆ ಹಳ್ಳಿಯ ಹೆಂಗಸೊಬ್ಬಳನ್ನು ದೂಡಿರುವ ಕಟು ಸತ್ಯವನ್ನೂ ವರದಿಮಾಡದೇ ಇರಲಾಗದು.

 ಇಂಥ ಪರಿಸ್ಥಿತಿಯಲ್ಲಿ ಪತ್ರಿಕೆಯ ನೀತಿ ಏನಾಗಬೇಕು? ಪತ್ರಿಕಾ ಧರ್ಮ ಏನನ್ನುತ್ತೆ?

 ಬಡತನದ ದಾರುಣತೆಯಿಂದಾಗಿ ಹೆತ್ತ ಮಗುನನ್ನು ಮಾರಲು ಹಿಂಜರಿಯಿದ ಹೆಂಗಸಿನ ಸ್ಥಿತಿ ಮತ್ತು ಮಕ್ಕಳಿಗಾಗಿ ಹಂಬಲಿಸುವ ಸಂತಾನಹೀನ ದಂಪತಿಯ ಸ್ಥಿತಿ ಎರಡೂ ಸತ್ಯಗಳೇ?

ಇಷ್ಟನ್ನು ಹೇಳಿ.”ಏನ್ಮಾಡೋಣ ಸಾರ್?” ಎಂದು ಕೇಳಿದೆ.

“ಏನೂ ಬೇಡ”

ನಾನು “ಸರಿ ಸಾರ್” ಎಂದು ಹೊರ ಬಂದೆ. ಆದರೆ ನಾವು ಇಡೀ ಪ್ರಕರಣದ ಮುಖ್ಯ ಬಿಂದುವಾದ ಮಗುವನ್ನೇ ಮರೆತಿದ್ದವು. ಆ ಬಾಲಕನ ಮನಸ್ಸಿನಲ್ಲಿ ಏನಿದ್ದೀತು? ಅವನ ಭವಿಷ್ಯ ಏನಾದೀತು?  ಅವನ ಪಾಲನೆ-ಪೋಷಣೆ ಹಡೆದ ತಂದೆ ತಾಯಿಯರ ನೈತಿಕ ಹೊಣೆಯಲ್ಲವೆ? ಸಾಕು ತಾಯಿಯ ಪ್ರೀತಿವಾತ್ಸಲ್ಯ ಹೆತ್ತ ತಾಯಿಯ ಪ್ರೀತಿವಾತ್ಸಲ್ಯಗಳಿಗೆ ಸಾಟಿಯಾಗಬಲ್ಲುದೆ? ದತ್ತಕ ಬಾಲಕನಾದರೂ ಸಾಕು ತಾಯಿಗೆ ಹೊಂದಿಕೊಳ್ಳುವನೆಂಬ ಖಾತರಿ ಏನು?

ಇತ್ಯಾದಿ ಪ್ರಶ್ನೆಗಳು ಮೂಡದೇ ಇರಲಿಲ್ಲ. ಇದು  ನನ್ನ ಸುಪ್ತಚಿತ್ತದಲ್ಲಿ ಅವಿತು ಕುಳಿತಿದ್ದು ಮುಂದೆ ಬ್ರೆಕ್ಟನ `ಕಕೇಸಿಯನ್ ಚಾಕ್ ಸರ್ಕಲ್’ ಅನುವಾದಕ್ಕೆ ಪ್ರೇರೇಪಿಸಿರಬಹುದು.

      ಸುದ್ದಿಗೆಷ್ಟು ಮುಖ

      ಹೇಳು ಸಖ!

October 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. T S SHRAVANA KUMARI

    ಒಂದು ಘಟನೆಗೆ ಅದೆಷ್ಟು ಆಯಾಮಗಳು!

    ಪ್ರತಿಕ್ರಿಯೆ
  2. ಲಕ್ಷ್ಮಣ ಕೊಡಸೆ

    ಒಂದು ಕತೆಯನ್ನು ಓದಿದಂತಾಯಿತು…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: