ಮಕ್ಕಳ ಸ್ನೇಹಿ ಮ್ಯೂಸಿಯಂಗಳು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳ ನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ..

ಮ್ಯೂಸಿಯಂಗಳ ನಗರ ಸ್ಟಾಕ್‌ ಹೋಂ. ನಾಲ್ಕು ವಾರಗಳ ಕಾರ್ಯಕ್ರಮಕ್ಕೆ ಸ್ಟಾಕ್‌ ಹೋಂಗೆ ಹೋಗಿದ್ದವನು ನೋಡಿದ್ದು ೨೨ ಮ್ಯೂಸಿಯಂಗಳನ್ನು! 

ನನಗೆ ವಸ್ತುಸಂಗ್ರಹಾಲಯಗಳನ್ನು ನೋಡುವುದು ಬಹಳ ಇಷ್ಟ. ಅದು ಯಾವಾಗ ಶುರುವಾಯಿತು ಎಂದು ಹುಡುಕುವುದು ಬಹಳ ಕಷ್ಟ. ಪ್ರಾಯಶಃ ಅಪ್ಪನಿರಬೇಕು, ನಮಗೆ ಮೊದಲ ಮ್ಯೂಸಿಯಂ ತೋರಿಸಿದ್ದು. ಸಾವಿರದ ಒಂಭೈನೂರ ಎಪ್ಪತ್ತಮೂರರಿಂದ ಹಿಡಿದು ಎಂಭತ್ತರ ವರೆಗೆ ಬೇರೆ ಬೇರೆ ನೆಪದಲ್ಲಿ, ಒಮ್ಮೆ ಕುಟುಂಬದವರೊಡನೆ, ಇನ್ನೊಮ್ಮೆ ಶಾಲೆಯಿಂದ, ಮತ್ತೊಮ್ಮೆ ಶಾಲಾ ಗೆಳೆಯರೊಂದಿಗೆ ಹೀಗೆ ಬೆಂಗಳೂರಿನಲ್ಲಿ ಆಗಲೇ ಬಹಳ ಪ್ರಸಿದ್ಧವಾಗಿದ್ದ ೧೯೬೨ರಲ್ಲಿ ಆರಂಭವಾಗಿದ್ದ ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯಕ್ಕೆ ನಾವು ಹಲವು ಬಾರಿ ಹೋಗಿದ್ದೆವು.

ಆಗಲೇ ಪಕ್ಕದಲ್ಲಿದ್ದ ವೆಂಕಟಪ್ಪ ಕಲಾ ಗ್ಯಾಲರಿ ಮತ್ತು ಪುರಾತನ ಮತ್ತು ಚಾರಿತ್ರಿಕ ವಸ್ತುಗಳನ್ನು ಇಟ್ಟಿದ್ದ ಸಂಗ್ರಹಾಲಯಕ್ಕೂ ಎಡತಾಕುತ್ತಿದ್ದೆವು. ಆ ವಯಸ್ಸಿನಲ್ಲಿ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನ ಮತ್ತು ಡೆಮಾಂಸ್ಟ್ರೇಷನ್‌ ಮಾಡುತ್ತಿದ್ದ ಟರ್ಬೈನ್‌ಗಳು, ವಿವಿಧ ರೀತಿಯ ಚಕ್ರಗಳು, ಯಂತ್ರಗಳು, ಬೆಂಕಿ ಮತ್ತು ಅದರ ಉಪಯೋಗ, ಗಾಳಿ ಮತ್ತು ನೀರಿನ ಚಲನೆ ಹಾಗೂ ಅದರಿಂದ ನಮಗಾಗುವ ಉಪಯೋಗ, ವಿವಿಧ ಪ್ರಯೋಗಗಳು, ಒಂದೇ ಎರಡೇ ಹಲವು ಗಂಟೆಗಳ ಕಾಲ ಮೂರು ಅಂತಸ್ತಿನ ಆ ವಸ್ತುಸಂಗ್ರಹಾಲಯ ಮನಸೂರೆಗೊಳ್ಳುತ್ತಿತ್ತು. 

ಊರೂರು ಸುತ್ತುವ ನಾನು ಮ್ಯೂಸಿಯಂಗಳ ಮೋಡಿಯಿಂದಾಗಿ ಒಂದೆರೆಡು ಊರುಗಳಿಂದ ಹಿಂದೆ ಬರುವಾಗ ಬಸ್‌/ರೈಲು ತಪ್ಪಿಹೋಗುವ ಅಪಾಯವನ್ನೂ ಎದುರಿಸಿದ್ದುಂಟು. ಒಮ್ಮೊಮ್ಮೆ ಯಾವುದಾದರೂ ಮ್ಯೂಸಿಯಂ ಹುಡುಕುವಾಗ ಆಟೋದವರು ಅಲ್ಲೇನಿದೆ ಅಂತ ಹೋಗ್ತೀರಿ ಅಂದಾಗ, ಅವರಿಗೆಲ್ಲಾ ಯಾಕೆ ಅಲ್ಲಿಗೆ ಅವರೂ ಹೋಗಬೇಕು ಮತ್ತು ತಮ್ಮ ಮಕ್ಕಳನ್ನು ಕರೆದೊಯ್ಯಬೇಕು ಅಂತ ಅವರೂರಿನ ಬಗ್ಗೆಯೇ ಬಿಟ್ಟಿ ಭಾಷಣ ಬಿಗಿದದ್ದೂ ಉಂಟು. 

ಇಂತಪ್ಪ ನನಗೆ ಪರ ದೇಶಗಳ ಮ್ಯೂಸಿಯಂ ನೋಡಲು ಅವಕಾಶ ನಾಲ್ಕೈದು ಬಾರಿ ಸಿಕ್ಕಿತು. ಮೊದಲನೆಯದು ನೇಪಾಳದ ಅರಮನೆಗಳು, ಗುರುಮನೆಗಳು, ದೇವಾಲಯಗಳ ಮ್ಯೂಸಿಯಂಗಳು, ಎರಡನೆಯದು ಅಮೆರಿಕೆಯ ವಾಷಿಂಗ್ಟನ್ ‌, ಚಿಕಾಗೋ ಮತ್ತು ನ್ಯೂಯಾರ್ಕ್‌ ನಗರಗಳಲ್ಲಿ, ಮೂರನೆಯದು ಸ್ವೀಡನ್‌ನ ಸ್ಟಾಕ್‌ ಹೋಂ, ನಾಲ್ಕನೆಯದು ದಕ್ಷಿಣ ಆಫ್ರಿಕಾದ ಕೇಪ್‌ ಟೌನ್‌ ಮತ್ತು ಐದನೆಯದು ಬಾಂಗ್ಲಾ ದೇಶದ  ಢಾಕಾದಲ್ಲಿ.

ಅಮೆರಿಕೆಯ ಸ್ಮಿತ್‌ ಸೋನಿಂನಿಂದ ಹಿಡಿದು ನ್ಯೂಸಿಯಂ ತನಕದ್ದು ಭಾರೀ ಭಾರೀ ದೊಡ್ಡ ಮ್ಯೂಸಿಯಂಗಳು. ನೋಡಲು ಎರಡು ಮೂರು ದಿನವಾದರೂ ಬೇಕಿರುತ್ತಿತ್ತು. ನಮ್ಮ ಬಳಿ ಇರುತ್ತಿದ್ದುದು ಕೆಲವು ಗಂಟೆಗಳು! ದಕ್ಷಿಣ ಆಫ್ರಿಕಾದಲ್ಲಿ ನೋಡಿದ್ದು ಅನೇಕ ಚಾರಿತ್ರಿಕ ಘಟನೆಗಳನ್ನು ದಾಖಲಿಸಿದವು.

ಮುಖ್ಯವಾಗಿ ವಾಸ್ಕೋಡಾಗಾಮ ಬಂದದ್ದು, ಹೇಗೆ ಅವನ ನೌಕೆಗಳು ದಕ್ಷಿಣ ಆಫ್ರಿಕಾದ ತುತ್ತತುದಿಯನ್ನು ದಾಟಿ ಭಾರತದತ್ತ ಹೋದ, ಅವನು ಬಂದು ಹೋಗುವಾಗಲೆಲ್ಲಾ ಅದೆಷ್ಟು ಅನರ್ಥ ಮಾಡಿದ, ಮತ್ತು ಹೇಗೆ ಜನರನ್ನು ಕದ್ದೊಯ್ದು ಜೀತದಾಳುಗಳನ್ನಾಗಿ ಮಾಡಿದರು ಎನ್ನುವುದು. ಉಳಿದಂತೆ ಸ್ವಾತಂತ್ರ್ಯದ ಹೋರಾಟದ ಕತೆಗಳು. 

ಇಷ್ಟೆಲ್ಲಾ ಮ್ಯೂಸಿಯಂಗಳ ನಡುವೆ ನನ್ನ ಮನಸ್ಸಿನಲ್ಲಿ ಉಳಿದು ಬಿಟ್ಟಿದ್ದುದು ನಮ್ಮ ಬೆಂಗಳೂರಿನ ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯ. ಆದರೆ ಅದನ್ನು ಅಳಿಸಲು ಯತ್ನಿಸಿದ್ದು ಮತ್ತು ವಸ್ತು ಸಂಗ್ರಹಾಲಯಗಳ ಬಗ್ಗೆ ಮತ್ತೆ ಮತ್ತೆ ಪ್ರೀತಿ ಹುಟ್ಟಿಸಿದ್ದು ಸ್ವೀಡನ್ನಿನ ಮಕ್ಕಳ ಸ್ನೇಹೀ ವಸ್ತು ಸಂಗ್ರಹಾಲಯಗಳು. ನಿಜವಾಗಿಯೂ ಮಕ್ಕಳ ಸ್ನೇಹಿಗಳೇ ಅವು.

ಸ್ವೀಡನ್ನಿಗೆ ೨೦೧೧ರಲ್ಲಿ ಹೋದದ್ದು ಅಲ್ಲಿನ ಮಕ್ಕಳ ಆಂಬುಡ್ಸ್‌ ಮನ್‌ (ಅಂದ್ರೆ ಮಕ್ಕಳ ಆಯೋಗ ಅನ್ನೋಣ) ಸಂಸ್ಥೆಯವರು ಮಕ್ಕಳ ಹಕ್ಕುಗಳ ಜಾರಿ ಕುರಿತು ಎಂತೆಂತಹ ವ್ಯವಸ್ಥೆಗಳು ಇರಬೇಕು ಎನ್ನುವುದರ ಬಗ್ಗೆ ಆಯೋಜಿಸಿದ್ದ ತರಬೇತಿಗಾಗಿ. ಆಗ ನಾನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯನಾಗಿದ್ದೆ (೨೦೦೯-೧೨).

ಭಾರತದಿಂದ ಆಯ್ಕೆಯಾಗಿದ್ದವನು ನಾನೊಬ್ಬನೇ! ಸ್ವೀಡನ್‌ ಮತ್ತು ಸ್ಟಾಕ್‌ ಹೋಂ ಎಂದ ಕೂಡಲೇ ಎರಡು ಸ್ಥಳಗಳಿಗೆ ಹೋಗಲೇಬೇಕೆಂದು ಗಟ್ಟಿ ಮಾಡಿಕೊಂಡಿದ್ದೆ. ತಿಳಿದಿದ್ದದ್ದು ಅವರೆಡೇ! ಒಂದು ನೊಬೆಲ್‌ ಮ್ಯೂಸಿಯಂ ಇನ್ನೊಂದು ಅದಕ್ಕೆ ಸಂಬಂಧಿಸಿದ ಬ್ಲೂ ರೂಂ. ನನ್ನ ಆಶ್ಚರ್ಯಕ್ಕೆ, ನಮ್ಮ ತರಬೇತಿ ಕಾರ್ಯಕ್ರಮದ ಮೊದಲ ದಿನವೇ ನಮ್ಮನ್ನೆಲ್ಲಾ ಕಾರ್ಯಕ್ರಮದ ಉದ್ಘಾಟನೆ ಮತ್ತು ವೆಲ್‌ ಕಂ ಲಂಚ್‌ ಎಂದು ಸಿಟಿ ಹಾಲ್‌ ಎಂಬಲ್ಲಿಗೆ ಕರೆದೊಯ್ದರು. ಅದರಲ್ಲೇ ಈ ಬ್ಲೂ ರೂಂ ಇರುವುದು!

ನನಗೆ ನಿಜವಾಗಿಯೂ ಆನಂದವಾಯಿತು. ಬ್ಲೂ ರೂಂ ಎಂದೇ ಪ್ರಸಿದ್ಧವಾಗಿರುವ ಆ ಕೋಣೆಯಲ್ಲೇ ನೊಬೆಲ್‌ ಶಾಂತಿ ಪ್ರಶಸ್ತಿಯೊಂದನ್ನು ಬಿಟ್ಟು (ಅದನ್ನು ಆಸ್ಲೋದಲ್ಲಿ ಕೊಡುತ್ತಾರೆ) ಉಳಿದೆಲ್ಲಾ ನೊಬೆಲ್‌ ಪ್ರಶಸ್ತಿಗಳನ್ನು ಡಿಸೆಂಬರ್‌ ೧೦ರಂದು ಪ್ರದಾನ ಮಾಡುವುದು. ಪ್ರತಿ ವರ್ಷ ಸುಮಾರು ಒಂದೂವರೆ ಸಾವಿರ ಅತಿಥಿಗಳನ್ನು ಸೇರಿಸಿ ನಡೆಸುವ ಕಾರ್ಯಕ್ರಮ. 

ನಾವು ಹೋದ ದಿನ ಅಲ್ಲೊಂದು ಐವತ್ತು ಮಕ್ಕಳ ಗುಂಪು ಇತ್ತು. ಏನೆಂದು ಕೇಳಿದಾಗ ಒಂದು ಅಚ್ಚರಿ. ಮಕ್ಕಳನ್ನು ಚಿಕ್ಕ ಚಿಕ್ಕ ಗುಂಪುಗಳಲ್ಲಿ ಕರೆತಂದು ಅಲ್ಲಿನ ವೈಶಿಷ್ಟ್ಯಗಳನ್ನು ಪರಿಚಯಿಸುವ ನಿರಂತರ ಕಾರ್ಯಕ್ರಮ! 

ಮೊದಲ ದಿನ ನಮ್ಮ ಕಾರ್ಯಕ್ರಮ ಉದ್ಘಾಟನೆ ಮಾಡಿ ಓಡಾಡಿಕೊಳ್ಳಿ ಎಂದು ಬಿಟ್ಟುಬಿಟ್ಟರು. ಹೇಳಿದೆನಲ್ಲ, ಇನ್ನೂ ಯಾರೂ ಅಷ್ಟಾಗಿ ಪರಿಚಯವಾಗಿರಲಿಲ್ಲ. ಪಾಕಿಸ್ತಾನದ ಪ್ರತಿನಿಧಿ ಕಾಶಿಫ್‌ ಒಡಗೂಡಿ ಮಾಡಿದ ಮೊದಲ ಕೆಲಸ ಸ್ಟಾಕ್‌ ಹೋಂನಲ್ಲಿನ ಮ್ಯೂಸಿಯಂಗಳ ಗೈಡ್‌ ಒಂದನ್ನು ಸಂಪಾದಿಸಿಕೊಳ್ಳಲು ಓಡಾಡಿದ್ದು.

ಕಾಶಿಫ್‌ ಇಸ್ಲಾಮಾಬಾದ್‌ ನಲ್ಲಿ ಮಕ್ಕಳಿಗೆ ಆಟಗಳನ್ನು ಆಡುವ ಅವಕಾಶಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತಾನೆ. ಅವನಿಗೂ ಈ ಮ್ಯೂಸಿಯಂ ಖಯಾಲಿ ಸ್ವಲ್ಪ ಇತ್ತು. ಮ್ಯೂಸಿಯಂ ಗೈಡ್‌ ಕೈಗೆ ಬರುತ್ತಿದ್ದಂತೆಯೇ ನಾನು ಗುರುತು ಹಾಕಿದ್ದು ನೊಬೆಲ್‌ ಮ್ಯೂಸಿಯಂ. ಆದರೆ ಅಲ್ಲಿಗೆ ಹೋಗಲು ಆಗಿದ್ದು ಎರಡು ವಾರ ಕಳೆದ ಮೇಲೆ. 

ನಮ್ಮ ಕಾರ್ಯಕ್ರಮ ಸಂಘಟಕರು ಪ್ರಾಯಶಃ ನನ್ನ ಆಂತರಿಕ ಆಸೆಯನ್ನು ಕೇಳಿದ್ದರೆಂದು ಕಾಣುತ್ತದೆ! ನಮ್ಮ ಕಾರ್ಯಕ್ರಮದ ಅಂಗವಾಗಿ ನ್ಯಾಯ ವ್ಯವಸ್ಥೆ, ಪೊಲೀಸ್‌ ಕಾರ್ಯ ವೈಖರಿ ವಿವರಿಸುವ ಮ್ಯೂಸಿಯಂ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತಾದ ರಾಷ್ಟ್ರೀಯ ಮ್ಯೂಸಿಯಂ ಅನ್ನು ಪಟ್ಟಿಯಲ್ಲಿ ಸೇರಿಸಿದ್ದರು. ಜೊತೆಗೆ ವಾಸಾ ಎನ್ನುವ ಅತ್ಯಂತ ಪುರಾತನವಾದ ಯುದ್ಧ ನೌಕೆಯನ್ನೂ, ಸ್ವೀಡನ್ನಿನ ಅರಮನೆಯನ್ನೂ ಪಟ್ಟಿಯಲ್ಲಿ ಸೇರಿಸಿದ್ದರು. ಇವೆಲ್ಲವೂ ಅತ್ಯಂತ ಹೆಚ್ಚಿನ ಪ್ರವೇಶ ಶುಲ್ಕ ಇರುವ ಮ್ಯೂಸಿಯಂಗಳು! 

ಸ್ಟಾಕ್‌ ಹೋಂಗೆ  ನಾನು ಭೇಟಿ ಕೊಟ್ಟಾಗ ಸುಮಾರು ೫೪ ಮ್ಯೂಸಿಯಂಗಳು ಒಂದೇ ನಗರದಲ್ಲಿ ಇದೆ ಎಂದು ಹೇಳಲಾಗಿತ್ತು. ನನಗೆ ಅದೊಂದು ದೊಡ್ಡ ಸಂಖ್ಯೆ. ಆಮೇಲೆ ತಿಳಿಯಿತು, ಅಮೆರಿಕ, ಇಂಗ್ಲೆಂಡ್‌, ಚೀನಾ ಮತ್ತಿತರ ದೇಶಗಳಲ್ಲಿನ ಹಲವು ನಗರಗಳಲ್ಲಿ ಅತಿ ಹೆಚ್ಚು ಮ್ಯೂಸಿಯಂಗಳು ಇವೆ ಎಂದು. ನಮಗೆ ಸಿಕ್ಕಿದ್ದ ಕೈಪಿಡಿಯಲ್ಲಿ ಒಂದೊಂದು ಮ್ಯೂಸಿಯಂ ಕುರಿತು ಅದು ಹೇಗೆ ವರ್ಣಿಸಿದ್ದರು ಎಂದರೆ, ಯಾವುದನ್ನು ಬಿಡುವುದಪ್ಪಾ ಎಂಬ ಪ್ರಶ್ನೆ ಮೂಡುತ್ತಿತ್ತು. 

ನೊಬೆಲ್‌ ಮ್ಯೂಸಿಯಂಗೆ ಹೋಗುವಷ್ಟರಲ್ಲಿ ಹತ್ತಿರಪತ್ತಿರ ಇದ್ದ ಎರಡು ಕಲಾ ಮ್ಯೂಸಿಯಂಗಳು, ಬೊಂಬೆಗಳ ಮ್ಯೂಸಿಯಂ, ಕಾಯಿನ್‌ ಮ್ಯೂಸಿಯಂ, ಟ್ರಾನ್ಸ್‌ಪೋರ್ಟ್‌ ಮತ್ತೊಂದು ಪೋಸ್ಟಲ್‌ ಮ್ಯೂಸಿಯಂಗೆ ಹೋಗಿ ಬಂದೆ. 

ಇಲ್ಲಿ ಹೇಳಬೇಕಿರುವುದು ಅಲ್ಲಿ ಅಷ್ಟೊಂದು ಮ್ಯೂಸಿಯಂಗಳಿವೆ ಹಾಗಿವೆ ಹೀಗಿವೆ ಎಂದೆಲ್ಲಾ ಅಲ್ಲ. ಬದಲಿಗೆ ಆ ಮ್ಯೂಸಿಯಂಗಳನ್ನು ನಡೆಸುವವರ ಮಕ್ಕಳ ಪ್ರೀತಿಯ ಬಗ್ಗೆ. 

ಪ್ರತಿ ಮ್ಯೂಸಿಯಂನಲ್ಲಿ ವಾರ ಅಥವಾ ತಿಂಗಳಲ್ಲಿ ಮಕ್ಕಳ ದಿನ ಎಂಬುದು ಖಾಯಂ! ಹೇಗಿದ್ದರೂ ಮಕ್ಕಳಿಗೆ ಸದಾ ಉಚಿತ. ಮ್ಯೂಸಿಯಂಗೆ ಬರುವ ವಯಸ್ಕರೊಡನೆ ಮಕ್ಕಳು ಇದ್ದಾರೆ ಎಂದರೆ ಅಲ್ಲಿನ ಸಿಬ್ಬಂದಿ ವಯಸ್ಕರೊಡನೆ ಕೆಲ ಕಾಲ ಮಾತನಾಡುತ್ತಾರೆ. ನಾನಂದುಕೊಂಡೆ ಏನೋ ಜೋಪಾನ ಎಂದು ಹೇಳುತ್ತಾರೆಂದು. ಅಲ್ಲ. ಅವರು ಹೇಳುವುದು, ಮಕ್ಕಳಿಗೆ ಎಲ್ಲವನ್ನೂ ನೋಡಲು ಪ್ರೇರೇಪಿಸಿ.

ಯಾವುದೆಲ್ಲಾ ವಸ್ತುಗಳನ್ನು ಮುಟ್ಟಲು ಅವಕಾಶವಿದೆಯೋ ಅವನ್ನೆಲ್ಲಾ ಮುಟ್ಟಿ ನೋಡಲಿ. ಏನಾದರೂ ವಿವರಣೆ ಬೇಕೆಂದರೆ ಅಲ್ಲಿನ ಸಿಬ್ಬಂದಿ ತಕ್ಷಣವೇ ಬಂದು ಹೇಳುತ್ತಾರೆ. ಜೊತೆಗೆ ಬಹುತೇಕ ಎಲ್ಲ ಮ್ಯೂಸಿಯಂಗಳಲ್ಲಿ ಮಕ್ಕಳ ಕಾರ್ನರ್‌ ಇದೆ. ಅಲ್ಲಿಗೆ ಮಕ್ಕಳು ಹೋಗಿ ಚಟುವಟಿಕೆಗಳನ್ನು ನಡೆಸಬಹುದು. 

ಪೋಸ್ಟಲ್‌ ಮ್ಯೂಸಿಯಂನಲ್ಲಿ ನಾನು ಹೋದ ದಿನ ಮಕ್ಕಳ ದಿನ! ವಯಸ್ಕರಿಗೆ ಎಲ್ಲ ಕಡೆ ಪ್ರವೇಶವಿರಲಿಲ್ಲ. ಕಾರಣ, ಬಂದಿದ್ದ ಮಕ್ಕಳೆಲ್ಲ ಆ ದಿನ ಪೋಸ್ಟ್‌ ಪರ್ಸನ್‌ ಆಟ ಆಡುತ್ತಿದ್ದರು. ಇಡೀ ಪೋಸ್ಟಲ್‌ ವ್ಯವಸ್ಥೆ ಹೇಗೆ ನಡೆಯುತ್ತದೆ ಎಂದು ಮಕ್ಕಳ ಅನುಭವಕ್ಕೆ ಬರುವಂತಹ ಅನುಭವ ಪ್ರಾತ್ಯಕ್ಷಿಕೆ.

ಮಕ್ಕಳೆಲ್ಲ ಪತ್ರ ಬರೆಯುವುದು, ಅದನ್ನು ಪೋಸ್ಟ್‌ ಮಾಡುವುದು, ಪೋಸ್ಟ್‌ ಪರ್ಸನ್‌ ಬಂದು ಅವನ್ನು ಒಯ್ಯುವುದು, ಪೋಸ್ಟ್‌ ಆಫೀಸಿನಲ್ಲಿ ಅವು ಹೇಗೆ ಸ್ವೀಕಾರವಾಗಿ ಮುದ್ರೆ ಹಾಕಿ ಬೇರೆ ಬೇರೆ ಊರುಗಳಿಗೆ ಕಳುಹಿಸಲು ವಿಂಗಡಿಸುವುದು ಅವು ಬೇರೆ ಬೇರೆ ವಾಹನಗಳಲ್ಲಿ ಸಾಗಿ ವಿವಿಧೆಡೆಗೆ ತಲುಪುವುದು, ಅಲ್ಲಿ ಅವನ್ನು ಸ್ವೀಕರಿಸಿ ಮುದ್ರೆ ಹಾಕಿ ವಿಳಾಸಗಳಿಗೆ ತಕ್ಕಂತೆ ವಿಂಗಡಿಸುವುದು, ಅವನ್ನು ವಿತರಿಸಲು ಮನೆ ಮನೆಗೆ ಪೋಸ್ಟ್‌ ಪರ್ಸನ್‌ ಹೋಗುವುದು… ಎಲ್ಲವನ್ನೂ ಮಕ್ಕಳೇ ಮಾಡುವುದು. ಅದು ಕೇವಲ ಪಾತ್ರಾಭಿನಯ ಆಗಿರಲಿಲ್ಲ! 

ಅಲ್ಲಿನ ಸಂಘಟಕರನ್ನು ಕೇಳಿಯೇ ಬಿಟ್ಟೆ. ʼಇಂತಹದು ಎಲ್ಲ ಮ್ಯೂಸಿಯಂಗಳಲ್ಲಿ ಇದೆ. ನಮ್ಮ ಬಳಿ ಇದಕ್ಕಾಗಿ ಒಪ್ಪಿತವಾದ ಪಠ್ಯ, ವಿಧಾನ, ಎಲ್ಲವೂ ಇದೆ. ಮಕ್ಕಳಿಗೆ ಮಾಹಿತಿ ಒಡನೆ ಅನುಭವವನ್ನೂ ಕೊಟ್ಟರೆ ಅವರಿಗೆ ಇವೆಲ್ಲವೂ ಅರ್ಥವಾಗುತ್ತವೆ. ಸುಲಭವಾಗಿ ಅಳವಡಿಸಿಕೊಳ್ಳುತ್ತಾರೆ. ಇಲ್ಲಿ ಸರಿ-ತಪ್ಪು ಎಂದೇನೂ ಇಲ್ಲ.

ಮಕ್ಕಳಿಗೆ ಇಷ್ಟವಾದರೆ ಮಾಡಬಹುದು ಇಲ್ಲವೇ ಅಡಬಹುದು, ಚಿತ್ರ ರಚನೆ ಕಾರ್ನರ್‌ಗೆ ಹೋಗಿ ಚಿತ್ರ ಬರೆಯಬಹುದು. ಏನಾದರೂ ಕತೆ, ಕವನ, ಲೇಖನ ಬರೆಯಬಹುದು. ಜೊತೆಗೆ ಮಕ್ಕಳೇನಾದರೂ ಕಲ್ಪನೆಗಳನ್ನು ನೀಡಿದರೆ  ಅದನ್ನು ಕುರಿತು ಚರ್ಚೆ ನಡೆಸಲು ಅವಕಾಶವಿದೆ. ಇದು ಈ ದೇಶದಲ್ಲಿ ಮಕ್ಕಳಿಗೆ ಮಾಹಿತಿಯೊಡನೆ  ಭಾಗವಹಿಸುವ ಮೌಲ್ಯವನ್ನು ಪರಿಚಯಿಸುವ ವಿಧಾನʼ.

[ಇದೇ ರೀತಿಯ ಅನುಭವ ಅಮೆರಿಕೆಯ ವಾಷಿಂಗ್ಟನ್‌ನಲ್ಲಿರುವ ‘ನ್ಯೂಸಿಯಂʼ – ನ್ಯೂಸ್‌ ಕುರಿತು ಅದ್ಭುತವಾದ ಮ್ಯೂಸಿಯಂನಲ್ಲೂ ಆಗಿತ್ತು. ಮಕ್ಕಳಿಗಾಗಿಯೇ ಅಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಿ ನ್ಯೂಸ್‌ ಕುರಿತು ಪರಿಚಯಿಸುತ್ತಾರೆ. ಈ ಕುರಿತು ಸುಧಾ ಪತ್ರಿಕೆಗೊಂದು ಲೇಖನ ಬರೆದಿದ್ದೆ]

ಅವನ್ನೆಲ್ಲಾ ನೋಡಿ ಕೇಳಿ ಬೆರಗಾದೆ!

ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ಇದೇ ಅಲ್ಲವೆ ಹೇಳಿರುವುದು. ಮಕ್ಕಳಿಗೆ ತಮ್ಮ ಅಭಿಪ್ರಾಯ ರೂಪಿಸಿಕೊಳ್ಳಲು ಮತ್ತು ಅವುಗಳನ್ನು ತಮ್ಮದೇ ವಿಧಾನ, ಭಾಷೆ, ರೀತಿಯಲ್ಲಿ ಹೇಳಲು ಅವಕಾಶಗಳಿರಬೇಕು (ಪರಿಚ್ಛೇದ ೧೨). ಇದಕ್ಕಾಗಿ ಮಕ್ಕಳಿಗೆ ಮುಖ್ಯವಾಗಿ ಬೇಕಿರುವುದು ಅವರಿಗರ್ಥವಾಗುವಂತಹ ರೀತಿಯಲ್ಲಿ ಮಾಹಿತಿಯನ್ನು ಪಡೆಯುವುದು (ಪರಿಚ್ಛೇದ ೧೩ ಮತ್ತು ೧೭). ಇದನ್ನು ನಿರ್ವಹಿಸುವ ಜವಾಬ್ದಾರಿ ಕರ್ತವ್ಯ ಪಾಲಕರಾದ ಎಲ್ಲ ವಯಸ್ಕರದ್ದು ಮತ್ತು ಸರ್ಕಾರದ್ದು. ಆಗ ಮಕ್ಕಳಿಗಿರುವ ʼಮಾಹಿತಿ ಹಕ್ಕುʼ ಜಾರಿಗೆ ಬಂದಂತೆ ಆಗುತ್ತದೆ.

ಮಕ್ಕಳ ಹಕ್ಕುಗಳನ್ನು ಜಾರಿ ಮಾಡಲು ನಾವು ಬದ್ಧರಾಗಿದ್ದಲ್ಲಿ ಮತ್ತು ಮಕ್ಕಳ ಹಿತ ಕಾಪಾಡುವ ದೃಷ್ಟಿ ಹೊಂದಿದ್ದಲ್ಲಿ ಮಕ್ಕಳಿಗೆ ಸೂಕ್ತವಾದ ಮಾಹಿತಿಯನ್ನು ಮನೆ, ಶಾಲೆ, ಗ್ರಂಥಾಲಯ, ನಗರ ಪಾಲಿಕೆ, ಗ್ರಾಮ ಪಂಚಾಯತಿ, ಪೊಲೀಸ್‌ ಠಾಣೆ, ಸರ್ಕಾರದ ವಿವಿಧ ಕಚೇರಿಗಳು, ಎಲ್ಲೆಡೆ ಒದಗಿಸುವುದು ನಮ್ಮೆಲ್ಲರ ಕರ್ತವ್ಯ. 

ಇದೇ ಗುಂಗಿನಲ್ಲಿ ಇತ್ತೀಚೆಗೆ ರಾಜ್ಯದ ವಿವಿಧ ಕಡೆಗಳಿಂದ ಬಾಲ್ಯವಿವಾಹ ವಿರೋಧಿಸುವ ಸಮಾಲೋಚನೆಗೆ ಬಂದಿದ್ದ ‘ವಿವಾಹಿತ ಕಿಶೋರಿʼಯರಿಗೆ ಬೆಂಗಳೂರಿನ ವಿವಿಧ ಸ್ಥಳಗಳಿಗೆ ಹೋಗಲು ಏರ್ಪಾಡು ಮಾಡಿದ್ದೆವು (ಡಿಸೆಂಬರ್‌ ೨೦೧೯). ನನ್ನ ಪ್ರೀತಿಯ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಹೋಗಿ ಬಂದಿದ್ದ ಮಕ್ಕಳು ಸಾಕಷ್ಟು ರೋಮಾಂಚನಗೊಂಡಿದ್ದರು.

ಆದರೆ ಅವರಿಗೆ ಏನನ್ನೂ ಮುಟ್ಟಲು, ಹತ್ತಿರ ಹೋಗಲು ಅವಕಾಶವಾಗಲಿಲ್ಲವಂತೆ. ವಿವರಿಸಲು ಜನರಿರಲಿಲ್ಲವಂತೆ. ತುಂಬಾ ಜನ. ಕೂಗಾಟ. ಕೆಲವರು ಯಾವುದಾವುದನ್ನೂ ಸುಮ್ಮನೆ ಎಳೆದು ತಳ್ಳಿ ನೋಡಿ ಸುಮ್ಮನೆ ಹೋಗುತ್ತಿದ್ದರು. ಎಷ್ಟೋ ಏನೂ ಗೊತ್ತಾಗಲಿಲ್ಲ ಎಂದರು.

ಮಾಹಿತಿ ಕೊಡುವ ತಾಣಗಳಲ್ಲಿ ವಿವರಿಸುವ ಜನರಿಲ್ಲದಿದ್ದರೆ ಅವು ಸುಮ್ಮನೆ ಬೆದರು ಗೊಂಬೆಗಳಾಗುತ್ತವೆ ಅಷ್ಟೇ ಅಲ್ಲವೆ! ನಮ್ಮ ದೇಶದಲ್ಲಿ ಮ್ಯೂಸಿಯಂಗಳನ್ನು ಕುರಿತು ಏನಾದರೂ ಪ್ರತ್ಯೇಕವಾದ ನೀತಿ ಇದೆಯೆ ಎಂದು ಹುಡುಕತೊಡಗಿದೆ. ಇಲ್ಲ. ನಮ್ಮಲ್ಲಿ ವಸ್ತು ಸಂಗ್ರಹಾಲಯ ಎಂಬುದಕ್ಕೆ ಪ್ರತ್ಯೇಕವಾದ ವ್ಯಾಖ್ಯಾನವೂ ಇಲ್ಲವಂತೆ.

ಇವನ್ನೆಲ್ಲಾ ಸಂಸ್ಕೃತಿ ಇಲಾಖೆಯಡಿ ತರಲಾಗಿದೆಯೆಂದೂ, ಆ ಇಲಾಖೆಯ ಕಾರ್ಯಕ್ರಮವಾಗಿ ವಸ್ತುಸಂಗ್ರಹಾಲಯಗಳು, ಶಿಕ್ಷಣ, ಸಂಸ್ಕೃತಿ, ಪುರಾತತ್ತ್ವ ಇಲಾಖೆ ಹೀಗೆ ವಿವಿಧೆಡೆ ಹಂಚಿ ಹೋಗಿವೆ.

ಹೀಗೆ ಮಾಹಿತಿ ಕೊಟ್ಟವರು ನನ್ನ ಮಗಳ ಸಹಪಾಠಿ ಐಶ್ವರ್ಯ. ಆಕೆ ವಸ್ತು ಸಂಗ್ರಹಾಲಯಗಳ ನಿರ್ವಹಣೆ ಕುರಿತು ದೆಹಲಿಯಲ್ಲಿ ಅಧ್ಯಯನ ಮಾಡಿದ್ದಾಳೆ. ಯುನೆಸ್ಕೋ ಸಿದ್ಧಪಡಿಸಿರುವ ‘ಮ್ಯೂಸಿಯಂಗಳು ಮತ್ತು ಸಾಂಸ್ಕೃತಿಕ ನೀತಿʼ ಮಾಹಿತಿ ಹಂಚಿಕೊಂಡಳು. ವಿವಿಧ ದೇಶಗಳಲ್ಲಿ ಸದ್ಯದಲ್ಲಿರುವ ಮ್ಯೂಸಿಯಂಗಳ ಪರಿಸ್ಥಿತಿ ವಿವರಿಸುತ್ತಲೇ ಅವು ಹೇಗಿರಬೇಕು, ಏಕೆ ಬೇಕು ಎಂದು ಸೊಗಸಾಗಿ ವಿವರಿಸಿದ್ದಾರೆ. 

ಇಷ್ಟೆಲ್ಲಾ ಯಾಕೆ ಚರ್ಚೆಗೆ ಬಂತೆಂದರೆ, ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ಮೂಲಕ ನಾವೊಂದು ಮ್ಯೂಸಿಯಂ ನಡೆಸುತ್ತೇವೆ! ನಮ್ಮ ಒಬ್ಬ ಟ್ರಸ್ಟಿ ಡಾ. ಪದ್ಮಿನಿ ಅವರ ಉಮೇದಿನಿಂದ ಅವರ ಮೂಲ ಸಂಗ್ರಹದಿಂದ ಆರಂಭಿಸಿದ್ದು.

ತಮ್ಮ ಸುಮಾರು ೪೦ ವರ್ಷಗಳ ಕಾಲದಲ್ಲಿ ಯುನಿಸೆಫ್‌ ಒಡನೆ ಕೆಲಸ ಮಾಡುವಾಗ ವಿವಿಧ ದೇಶಗಳಲ್ಲಿ ಸ್ವೀಕರಿಸಿರುವ ಉಡುಗೊರೆ, ಕೊಂಡುತಂದ ಅಪರೂಪದ ವಸ್ತುಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಅವುಗಳನ್ನು ಬೆಂಗಳೂರಿನ ಹೊರವಲಯದಲ್ಲಿ ಗೆಳೆಯ ಗೋಪಿನಾಥ್‌ ಅವರ ನೇತೃತ್ವದಲ್ಲಿ ಹೆಸರಘಟ್ಟದ ಬಳಿ ನಡೆಸುವ ‘ಸ್ಪರ್ಷʼ ಸಂಸ್ಥೆಯ ಆವರಣದಲ್ಲಿ ಮಕ್ಕಳಿಗಾಗಿ ಮ್ಯೂಸಿಯಂ ಕಳೆದ ಒಂದು ವರ್ಷದಿಂದ ನಡೆದಿದೆ. ಮ್ಯೂಸಿಯಂ ಅನ್ನು ಉದ್ಘಾಟಿಸಿದ ನಾಗೇಶ್‌ ಹೆಗಡೆಯವರು, ಇಂತಹದೊಂದು ಅಪರೂಪದ ಕೆಲಸ ಯಾರು ಮಾಡುತ್ತಿರುವುದು ನೋಡೋಣವೆಂದೇ ಉದ್ಘಾಟನೆಗೆ ಒಪ್ಪಿಕೊಂಡೆ ಎಂದಿದ್ದರು!

ಮಕ್ಕಳಿಗೆ ಮ್ಯೂಸಿಯಂ ಅನ್ನು ಹಕ್ಕಿನ ಸ್ವರೂಪದಲ್ಲಿ ತಲುಪಿಸುವ ಒಂದು ವ್ಯವಸ್ಥೆ ಬೇಕಿದೆ. ವಸ್ತು ಸಂಗ್ರಹಾಲಯಗಳು ಕೇವಲ ಹಳೆಯ ವಸ್ತುಗಳ ಶೇಖರಣೆಯಲ್ಲ, ಅದು ಚರಿತ್ರೆಯನ್ನು ತಿಳಿಸುವ, ವಿಶ್ಲೇಷಿಸುವ, ಮನಸ್ಸನ್ನು ಪ್ರೇರೇಪಿಸುವ ಕೆಲಸ ಮಾಡುತ್ತವೆ. ಸರ್ಕಾರ ಇದರ ಬಗ್ಗೆ ಗಂಭೀರ ಚಿಂತನೆಯನ್ನು ಮಾಡಬೇಕು. ಭಾರತದಲ್ಲಿ ಒಂದು ‘ಮ್ಯೂಸಿಯಂ ನೀತಿʼ ಹೊರತರಲು ಅದರಲ್ಲಿ ಮಕ್ಕಳ ದೃಷ್ಟಿಕೋನವನ್ನೂ ತರುವ ಏರ್ಪಾಡು ಆಗಬೇಕು.  

ನೊಬೆಲ್‌ ಮ್ಯೂಸಿಯಂ ಪ್ರವೇಶದ್ವಾರ.(೨೦೧೦ ಅಕ್ಟೋಬರ್‌ನಲ್ಲಿ ತೆಗೆದದ್ದು)

‍ಲೇಖಕರು ವಾಸುದೇವ ಶರ್ಮ

October 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: