ನಿನ್ನ ಭೇಟಿ ಒಂದು ಬ್ಯೂಟಿಫುಲ್ ಆಕ್ಸಿಡೆಂಟ್…

‘ಬಾಲ ಒಂದಿಲ್ಲ ಅಷ್ಟೇ..’ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ.

ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ‘ಪ್ರಥಮ್ ಬುಕ್ಸ್’ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ.

ಉಳಿದವರೆಲ್ಲಾ ಶಾಲೆ ಅಭಿವೃದ್ಧಿ ಮಾಡ್ತಾರೆ, ನಾನು ಮಕ್ಕಳ ಜೊತೆ ಬಾಲ ಕಟ್ಟಿಕೊಂಡು ಕುಣೀತೀನಿ’ ಅಂತ ತಮ್ಮ ಇಂದಿನ ಐಕಾನಿಕ್ ಸ್ಮೈಲ್ ಕೊಡುತ್ತಾರೆ.

ಹೇಮಾಗೆ ಪುಸ್ತಕ ಎಂದರೆ ಇನ್ನಿಲ್ಲದ ಹುಚ್ಚು. ತಾವು ಓದಿದ ಕೃತಿಗಳ ಪಾತ್ರಗಳು ಇವರನ್ನು ಇನ್ನಿಲ್ಲದಂತೆ ಕಾಡುತ್ತವೆ. ‘ನಿದ್ದೆಯಲ್ಲೂ..’ಎಂದು ಮಾತು ಸೇರಿಸುತ್ತಾರೆ. ಇಂದಿನಿಂದ ಪ್ರತೀ ವಾರ ಹೇಮಾ ತಮ್ಮನ್ನು ಕಾಡಿದ ಪಾತ್ರಗಳನ್ನು ತಂದು ನಮ್ಮ ಎದುರು ನಿಲ್ಲಿಸಲಿದ್ದಾರೆ.

‘ಕಲ್ಲ ದೇವರ ಹಾಗೆ ನಿಲ್ಲಬಾರದು ಹೀಗೆ’ ಎನ್ನುವ ಹಾಡೊಂದರ ಸಾಲು ಕೇಳಿ ಬೆಳೆದ ನನಗೆ ಕಲ್ಲೆಂಬುದಕ್ಕೆ ಭಾವುಕತೆಯ ಆಯಾಮವೇ ಇಲ್ಲವೆನಿಸಿತ್ತು; ‘ಭುವನದ ಭಾಗ್ಯ’ ಪುಸ್ತಕದಲ್ಲಿ ಬೇಂದ್ರೆ ಅವರ ‘ಮೂರ್ತಿ’ ಕವನದ ಕುರಿತು ಓದುವವರೆಗೆ.

‘ಮೂರ್ತಿ’ ಕವನವನ್ನು ಅರ್ಥೈಯಿಸಲು ಸಾಕಷ್ಟು ಸಾಮಗ್ರಿಯನ್ನು ಸ್ವತಃ ಬೇಂದ್ರೆಯವರೇ ಒದಗಿಸಿದ್ದಾರೆ ಎಂದು ಜಿ ಎಸ್ ಆಮೂರ ಕೂಡ ಹೇಳುತ್ತಾರೆ. ಬೇಂದ್ರೆ ಅವರ ಮಾತಿನ ಸರಕಿನಲ್ಲಿ ಸಿಕ್ಕಿ, ನನಗರ್ಥವಾಗಿದ್ದು; ನಾವು ನೋಡಿದ್ದು, “ಮಣ್ಣೆಂದರೆ ಮಣ್ಣು, ಮೂರ್ತಿಯೆಂದರೆ ಮೂರ್ತಿ.”

ಈ ಓದು ಜಪನೀಸ್ ಮೂವೀ ‘ಡಿಪಾರ್ಚರ್ಸ್’ ಅನ್ನು ನೋಡಲು ನನಗೊಂದು ವಿಶೇಷ ಕಾಣ್ಕೆ ಕೊಟ್ಟಿತು. ಅದರಲ್ಲಿ ತಂದೆ-ಮಗ ಸಮುದ್ರ ತೀರಕ್ಕೆ ಹೋದಾಗಲೆಲ್ಲ, ಮಗ ತಂದೆಯ ಕೈಯ್ಯಲ್ಲಿ ನುಣುಪಾದ ಕಲ್ಲಿಟ್ಟರೆ ತಂದೆ ಒರಟಾದ ಕಲ್ಲಿಡುತ್ತಿರುತ್ತಾನೆ.

ತಂದೆ-ಮಗನ ನಡುವಿನ ಭಾವನಾತ್ಮಕ ಸಂಘರ್ಷ, ತಂದೆಯಿಂದ ಮಗ ಬಯಸುವುದು ಏನನ್ನ ಎನ್ನುವುದನ್ನು ಪ್ರತಿಮೆಯ ಮೂಲಕ ಕಟ್ಟಿಕೊಡುವುದಾದರೆ, ಅದು ಕಲ್ಲಿನಿಂದ ಮಾತ್ರ ಸಾಧ್ಯ ಎನಿಸುವ ಆ ದೃಶ್ಯ ನೋಡುವಾಗಲೆಲ್ಲ ನನಗೆ ಅವನು, ಹಂಪೆ, ಭುವನದ ಭಾಗ್ಯ ಮತ್ತು ಕಲ್ಲು ಸಾರಿದ ಸಂದೇಶ… ಎಲ್ಲ ಒಟ್ಟೊಟ್ಟಿಗೆ ನೆನಪಾಗುತ್ತವೆ. 

ಅವನನ್ನು ತಬ್ಬಿಕೊಂಡಾಗಲೆಲ್ಲ ನಾನು ಎಲ್ಲ ರಾಗಗಳಿಂದ ಬಿಡಿಸಿಕೊಳ್ಳುತ್ತೇನೆ. ಅವನ ಸ್ಪರ್ಶವೆಂದರೆ; ಸಂಗೀತದಲ್ಲಿ ಹೇಳುತ್ತಾರಲ್ಲ ಮೇಲಿನ ‘ಸ’ ಮುಟ್ಟಿದಾಗ ಕೇಳುಗರಿಗೆಲ್ಲರಿಗೂ ಒಂದು ‘ಸೆನ್ಸ್ ಆಫ್ ರಿಲೀಫ್’ ಆ ಥರ. ಬದುಕು ಮತ್ತು ತೃಷೆಯ ನಡುವಿನ ಸೃಜನಶೀಲತೆಯ ಹದ ತಿಳಿದ ಅವನಲ್ಲಿ ಮಿಂದು ಪುಳಕಗೊಳ್ಳಲು ನಾನು ಸದಾ ಮೌನ ಕಾತರದಲ್ಲಿ ಕಾಯುತ್ತಿರುತ್ತೇನೆ.

ನನ್ನೊಳಗಿನ ತುಡಿತ ಅಲ್ಲಿಗೂ ತಲುಪಿತು ಎನ್ನುವಂತೆ “ಹಂಪೆಗೆ ಹೋಗೋಣ ಬಾ” ಎಂದು ಕರೆದ. ಅವನ ದೇಹವನ್ನು ತಬ್ಬಿದ ಕಾರಿನೊಳಗಣ ಚಳಿ, ಧ್ವನಿ ಮೂಲಕ ನನ್ನೆದೆ ಸೇರಿ ನಾ ಮತ್ತೆ ಚಿತ್ತಾದೆ.

ಹೀಗೊಂದು ಪ್ರಯಾಣದ ಯೋಚನೆ ಮೂಡಿದ ಮೇಲೆ ಹೊರಡಿದ್ದರೆ ಹಸಿವು, ಬಾಯಾರಿಕೆ ಅಲ್ಲದ ಏನೆನ್ನುವುದೂ ತಿಳಿಯದ ಕಡುಬಯಕೆಯೊಂದು ಮೆದುಳಿನಲ್ಲಿ ಏಳುತ್ತದೆ. ಇಳಿಸಂಜೆ ಖಿನ್ನತೆಗೆ ಜಾರದಂತೆ ಉಳಿಯುವುದು ಎಷ್ಟು ಕಷ್ಟವೋ ನನಗೆ ಇಂಥ ಪಯಣವನ್ನು ಕೈಗೊಳ್ಳದೆ ಇರುವುದೂ ಅಷ್ಟೇ ಕಷ್ಟ.

ನನ್ನ ಸಂತೋಷದ ಮೂಲವಾದ ತಿರುಗಾಟಕ್ಕೆ ಹೋದವಳನ್ನು ತುಂಗಭದ್ರೆ ಅಲೆಅಲೆ ಬೀಸಿ ಬರಮಾಡಿಕೊಂಡಳು. “ತೆರೆದೇ ಇದೆ ಬಾಗಿಲು, ನೇರ ಒಳ ಬಾ,” ಎಂದನವನು. ಎದೆಯ ಕದವನೂ ತೂರಿ ನಾನು ಒಳಹೋದೆ. “ಏನು ಸುಮಧುರ ಸಹಜವೀ ಪ್ರವೇಶ. ಈ ಒಂದು ಗಳಿಗೆಯಲಿ ನೀನು ಏನು ಗೈದರೂ ಮಾಫಿ,” ಎನ್ನುತ್ತ ಅವನು ನೆತ್ತಿಗಿಟ್ಟ ಮುತ್ತು ಬೆಚ್ಚಗಿತ್ತು.

“ನನ್ನ ಬದುಕಿನಲ್ಲಿ ನಿನ್ನ ಭೇಟಿ ಒಂದು ಬ್ಯೂಟಿಫುಲ್ ಆಕ್ಸಿಡೆಂಟ್. ಮಧ್ಯರಾತ್ರಿ ಧಡಕ್ಕನೆ ಎಚ್ಚರಾಗಿ ಕಣ್ಣು ಬಿಟ್ಟಾಗಿನ ನಿರ್ವಾತದಲ್ಲಿ ಕಾಡುವ ಈ ಬಾಳಿನ ನಿಜವೇನು? ಎನ್ನುವ ಪ್ರಶ್ನೆಗೂ ಮಿಗಿಲಾಗಿ ಕಾಡ್ತಿ,” ಎಂದು ಆಲಂಗಿಸಿದ. ಹಂಪೆಯ ನಿಶ್ಯಬ್ದ ಬೀದಿಗಳಲ್ಲಿ ಸುತ್ತಿ, ವಿರೂಪಾಕ್ಷಾಲಯಕ್ಕೆ ಬೆನ್ನು ಮಾಡಿ, ನೀರಿನಲ್ಲಿದ್ದ ಸಾಲು ಕಲ್ಲು ಮಂಟಪದ ಮೇಲೆ ಕುಳಿತವಳ ಕಾಲಿಗೆ ನುಣುಪು ಬಂಡೆಗಳು ಮುತ್ತಿಡುತ್ತಿದ್ದವು.

ಗಲ್ಲ ಗಲ್ಲಗೆ ಹಚ್ಚಿ ‘ಏ ರಾತೇಂ ಏ ಮೌಸಂ ನದಿ ಕಾ ಕಿನಾರಾ’ ಎಂದು ಗುನುಗುತ್ತಿದ್ದಾಗ ಆಚೆ ದಂಡೆಗೆ ಹೋಗಲು ಕಾಯುತ್ತಿದ್ದ ದೋಣಿ ಬಂದಿತು. “ದಡ ದಾಟಿದರೆ ಸುಖದ ಊರೇ ಹೆಬ್ಬಾಗಿಲು. ಸಂಬಂಧಗಳೂ ಅಷ್ಟೇ, ಅನಾನಿಮಸ್ ಆದಷ್ಟೂ ರಿಲೀಫ್ ಜಾಸ್ತಿ. ಇನ್ ಡಿವಿಜ್ಯುಯಲ್ ಆದಷ್ಟೂ ಜವಾಬ್ದಾರಿ ಹೆಚ್ಚಾಗುತ್ತದೆ. ಸಂಬಂಧವೇ ಬದುಕಲ್ಲ ಎನ್ನುವುದನ್ನು ಅರಿತಾಗಲೇ ಬದುಕಿನ ವಿಶಾಲತೆ ತಿಳಿಯುತ್ತದೆ,” ಹೌದೋ? ಅಲ್ಲವೋ? ಎನ್ನುವ ಚರ್ಚೆಯನ್ನು ಅಲ್ಲಿಗೇ ನಿಲ್ಲಿಸಿ ಹೊರಟೆವು.

ಬೇಕು ಎಂದ ಹಾಗೆ ಬದುಕುವುದು ತಪ್ಪಲ್ಲ ಎಂದು ಇಂಥ ತಿರುಗಾಟವನ್ನು ಸಾಧ್ಯವಾಗಿಸಿದ, ಹೀಗೇ ಬದುಕಬೇಕು ಎನ್ನವುದಕ್ಕಿಂತ ಹೀಗೂ ಬದುಕಬಹುದು ಎಂದು ತೋರಿಸಿಕೊಟ್ಟ ಅವನಿಗೆ ನಾನು ಕೃತಜ್ಞೆ.

ನೀನು ಎನ್ನುವುದು ಒಂದು ಅಪ್ಪಟ ಮನಸಿನ ರೂಪಕ. ನಿನ್ನೊಡನಿದ್ದು ನಿನ್ನಂತಾಗಲು ಒಳ್ಳೆಯ ಜೊತೆ. ನಿನ್ನ ಬರಹ, ನಿನ್ನ ಸ್ವಚ್ಛಂದ ನಗು, ಮಗುತನ ನನ್ನೊಳಗೆ ಬೆರಗು ಹುಟ್ಟಿಸುತ್ತದೆ. ನೀನೊಂದು ಭುವನದ ಭಾಗ್ಯ. ಹಂಪೆ ಎಂದರೆ ನನ್ನೊಳಗಿರುವ ನಿನ್ನ ನೆಪುಗಳ ನದಿ ನಿಧಿಯ ತೋಟ. ಮತ್ತೆ ಯಾವಾಗ ಮರುಭೇಟಿ? ಎಂದು ಕೇಳಿ ಬೀಳ್ಕೊಟ್ಟ.

ಮುಗಿಲಲಿ ಮೂಡಿದ ಒಲವಿನ ಕನಸು ಮನಸಿಗಿಳಿಯದ, ಇಳಿದರೂ ನನಸನಾಳದ ಭಾವ. ವಿಜಯ ವಿಠ್ಠಲ ದೇಗುಲದ ಮೇಲೆ ಅಮರಿಕೊಂಡು ಕುಳಿತ ಮೋಡದ ಕಡೆ ನೋಡುತ್ತ ಈ ಬಾಳಿನ ನಿಜವೇನು? ಎಂದೆ. ಹೊರಗಣ್ಣಿಗೆ ಕಾಣುತ್ತಿದ್ದ ಸೃಷ್ಟಿ ಮೂಕವಾಯಿತು.

“ಬಾಳಿನ ನಿಜದ ಗುಟ್ಟನ್ನು ಶಬ್ದದಲ್ಲಿ ಹಿಡಿದಿಡಬೇಕು, ಸಂಖ್ಯೆಯಿಂದ ಅಳೆದು ತೋರಿಸಬೇಕು ಎಂಬ ಆಸೆ ಪ್ರಬಲವಾಗುವುದು. ಅಮೇಯವಾದುದನ್ನು ಒಂದು ಪ್ರಮೇಯವೆಂಬಂತೆ ತರ್ಕತಾಂಡವಕ್ಕಿಳಿಸಿದರೂ, ತರ್ಕದ ಹಿಂದೆ ಒಂದು ಅತರ್ಕ್ಯವಾದ ಮೂರ್ತಿ ಎದ್ದು ನಿಲ್ಲುತ್ತದೆ… ಮನನದ ಭವ್ಯತೆಗೆ ಆತ್ಮ ಹೆಚ್ಚಲ್ಲ; ಕಲ್ಲು ಕಡಮೆಯಲ್ಲ: ಕಲ್ಲಿನ ಬಾಳಿನಲ್ಲಿನಲ್ಲಿಯೂ ಸ್ಫುಟವಾಗುವ ರಮ್ಯತೆಯು ಆತ್ಮಾನುಸಂಧಾನದ ಫಲವೇ.

ಮನುಷ್ಯರಿಗಿದ್ದಂತೆ ಕಲ್ಲಿಗೂ ಅಸ್ತ, ಉದಯ, ಅಭ್ಯುದಯ, ನಿಃಶ್ರೇಯಸ್ಸು ಇದೆ… ಒಂದು ವ್ಯಕ್ತಿಯೇ ಆಗಲಿ, ಸಮಾಜವೇ ಆಗಲಿ, ಸಾಮ್ರಾಜ್ಯವೇ ಆಗಲಿ, ಮತವಾಗಲಿ, ಪಂಥವಾಗಲಿ, ಈ ಕಲ್ಲಿನ ಕಥೆಗೆ ಸೋಗೋಡುತ್ತದೆ. ವಿರಸಕ್ಕೆ ನಿಲುಕದ ರಸಲೋಕದಲ್ಲಿ ಜೀವಗಳ ಸಮರಸ ಜೀವನ ನೆಲೆಗೊಂಡು ಊರ್ಧ್ವಮೂಲ, ಅಧಃಶಾಖೆಯೆಂಬಂತೆ ಎಲ್ಲೆಲ್ಲೂ ಪಸರಿಸಬೇಕಾಗಿದೆ.

ಆದರೆ, ಈಶ ಸಂಕಲ್ಪದಂತೆ ಕಲ್ಲಾಗಿ ಜನಿಸಿ ಮೂರ್ತಿಯಾಗಿ ಬೆಳೆದು, ಮತ್ತೆ ಕಲ್ಲಾಗಿ ಉಳಿದ ಕೀರ್ತಿಶೇಷ ಮೂರ್ತಿಜೀವನದಲ್ಲಿ ಮೃತ್ಯುವನ್ನು ದಾಟಿದ ಅಮರತೆಯಿದೆ. ರಸ ಸಾರುತಿರುವ ಸಂದೇಶ ಇದು. ಉಳಿದುದೆಲ್ಲ ಮರ್ತ್ಯ, ವಾಚ್ಯ, ಇದು ಧ್ವನಿ. ಇದು ಅಮೃತ, ಇದು ರಸ!” ಎಂದಿತು “ಭುವನದ ಭಾಗ್ಯ!!”

October 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: