ಮಕ್ಕಳ ಮನೆ ಹುಡುಕಾಟದ ಕತೆಗಳು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ..

ʼಸಾರ್!‌ ಅವರು ಬಂದು ಬಿಟ್ಟಿದ್ದಾರೆʼ

ಆ ಹೊತ್ತು ಬೆಳಗ್ಗೆ ಸುಮಾರು ಒಂಭತ್ತು ಗಂಟೆಗೆ ಸರ್ಕಾರಿ ಬಾಲಕರ ಬಾಲಮಂದಿರದಿಂದ ಸೂಪರಿಂಟೆಂಡೆಂಟ್‌ ಅವರಿಂದ ಫೋನು. 

ʼಯಾರು ಬಂದಿರುವುದು?ʼ ಸಹಜವಾದ ಪ್ರಶ್ನೆ. 

ʼಅದೇ ಸಾರ್‌, ಬಾಂಬೆ ಹುಡುಗ. ಇವತ್ತು ಅವನು ಬಾಂಬೆಗೆ ಹೋಗಬೇಕಲ್ಲ ಅವನ ಕಡೆಯವರು. ಅಪ್ಪ ಅಮ್ಮ ಅಂತೆ ಬಂದಿದ್ದಾರೆʼ

ಇದೇನಪ್ಪಾ ಅಂತ ಅಯೋಮಯವಾಯಿತು. ಸುಮಾರು ಒಂದು ತಿಂಗಳ ಹಿಂದೆ ಕಳುಹಿಸಿದ್ದ ಪತ್ರಕ್ಕೇನಾದರೂ ಜವಾಬು ಬರಬಹುದೇನೋ ಅಂತ ಕಾದಿದ್ದೆವು. ಉತ್ತರ ಬಾರದಿದ್ದಾಗ, ಇನ್ನೇನೂ ಮಾಡಲಾಗದು ಅಂತ ಅವನೂರಿಗೆ ಪೊಲೀಸ್‌ ಬೆಂಗಾವಲಿನಲ್ಲಿ ಕಳಿಸಲಿಕ್ಕೆ ಹೊರಟರೆ ಹೀಗಾ ಎಂದುಕೊಂಡೆ. ಆದರೂ ನನ್ನ ಎಚ್ಚರಿಕೆಯಲ್ಲಿ ನಾನಿರಬೇಕು, ಅಪ್ಪ ಅಮ್ಮ ಎಂದು ಯಾರು ಯಾರೋ ಬಂದು ನಿಲ್ಲುವ ಅನುಭವಗಳಾಗಿದ್ದರಿಂದ, ದೂರವಾಣಿಯಲ್ಲೇ ಏನೂ ಹೇಳುವುದು ಬೇಡವೆಂದು ಇದ್ದ ಬೇರಾವುದೋ ಕೆಲಸವನ್ನು ಬಿಟ್ಟು ಬೆಂಗಳೂರಿನ ಸರ್ಕಾರೀ ಬಾಲಕರ ಬಾಲಮಂದಿರದ ಕಡೆಗೆ ಕಾರು ಚಲಾಯಿಸಿದೆ. ನಾನಾಗ ಬೆಂಗಳೂರು ನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ (೨೦೦೭-೦೯).

ಆ ಹುಡುಗ ಸುಮಾರು ೧೫ರ ಪ್ರಾಯದವನು. ಕಟ್ಟುಮಸ್ತಾಗಿದ್ದ. ಮರಾಠಿ ಬಿಟ್ಟರೆ ಬೇರೆ ಭಾಷೆ ಬಾರದು. ಕಳೆದ ದಶಕದವರೆಗೂ ಬಹಳ ಸಾಮಾನ್ಯವಾಗಿದ್ದ ರೈಲ್ವೆ ಹುಡುಗನಾಗಿ ಊರೆಲ್ಲಾ ಸುತ್ತಾಡಿ ಬೆಂಗಳೂರು ನಗರ ಕೇಂದ್ರ ನಿಲ್ದಾಣದಲ್ಲಿ ಬಂದು ಇಳಿದಿದ್ದ. ಆ ದಿನವೇ ಅವನನ್ನ ಬಾಸ್ಕೋ ಸಂಸ್ಥೆಯ ಕಾರ್ಯಕರ್ತರು ಗುರುತಿಸಿ ಮಾತನಾಡಿಸಿ ಇಲ್ಲಿನ ಬಾಲಕರ ಬಾಲಮಂದಿರಕ್ಕೆ ಕರೆ ತಂದಿದ್ದರು. ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆಯ ಪ್ರಕ್ರಿಯೆಗಳಂತೆ ಅವನನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯೆದುರು ಹಾಜರು ಪಡಿಸಿದ್ದರು. 

ಅಷ್ಟು ಹೊತ್ತಿಗೆ ನಾಲ್ಕು ವರ್ಷಗಳ ಕಾಲ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯನಾಗಿ ಸಾಕಷ್ಟು ಅನುಭವ ಪಡೆದಿದ್ದೆ. ಅದನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ನನ್ನನ್ನು ಮುಂದಿನ ಮೂರು ವರ್ಷಗಳ ಕಾಲಕ್ಕೆ ಅಧ್ಯಕ್ಷನನ್ನಾಗಿ ನೇಮಿಸಿತ್ತು. ನನ್ನೊಡನೆ ಆಗ ಸಾಥಿ ಸಂಸ್ಥೆಯಲ್ಲಿದ್ದ ರಹೀಂ, ಬಾಸ್ಕೋ ಒಡನೆಯಿರುವ ಬಸವರಾಜು, ಅಭಿವೃದ್ಧಿ ರಂಗದಲ್ಲಿ ಗುರುತಿಸಿಕೊಂಡಿದ್ದ ಮೀರಾ ಮಾಧವ, ಶಿಕ್ಷಕಿಯಾಗಿದ್ದ ಉಮಾದೇವಿ ಸದಸ್ಯರು. ವಿವಿಧ ರೀತಿಯ ತೊಂದರೆ, ಹಿಂಸೆ, ದೌರ್ಜನ್ಯಕ್ಕೆ ಸಿಕ್ಕಿರಬಹುದಾದ ಮಕ್ಕಳನ್ನು ರಕ್ಷಿಸಿ ಅವರ ಪೋಷಣೆ, ಆರೋಗ್ಯ, ಪುನರ್ವಸತಿ ಕೆಲಸ ನಡೆಸುವ ಸರ್ಕಾರದ ಮಕ್ಕಳ ನಿಲಯಗಳ ಉಸ್ತುವಾರಿ ಮತ್ತು ಮಕ್ಕಳಿಗೆ ಶೀಘ್ರವಾಗಿ ನ್ಯಾಯ ಒದಗಿಸಲು ನಡೆಸುವ ಪ್ರಕ್ರಿಯೆಗಳನ್ನು ನಡೆಸುವುದು ಈ ಸಮಿತಿಯ ಕೆಲಸ. ಮುಖ್ಯವಾಗಿ ಮಕ್ಕಳ ಪುನರ್ವಸತಿಯ ಕೆಲಸಗಳನ್ನು ನಡೆಸಲು ಸಹಾಯ ಮಾಡುವ ಗೌರವ ಹುದ್ದೆ. 

ತೀರಾ ಇತ್ತೀಚಿನವರೆಗೂ ನಗರದ ರಸ್ತೆಗಳು, ಬಡಾವಣೆಗಳಲ್ಲಿ ಮಕ್ಕಳು ದೊಡ್ಡ ಚೀಲಗಳನ್ನು ಹಿಡಿದುಕೊಂಡು ಚಿಂದಿ ಆಯುವ ದೃಶ್ಯಗಳು ಸಾಮಾನ್ಯವಾಗಿತ್ತು (ಈಗಲೂ ಇದು ಚಿಕ್ಕ ಚಿಕ್ಕ ಊರುಗಳಲ್ಲಿ, ನಗರದ ಅಂಚುಗಳಲ್ಲಿ ಸಾಮಾನ್ಯ). ಹಾಗೆಯೇ ರೈಲು ಪ್ರಯಾಣ ಮಾಡುವಾಗ ನೂರಾರು ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ರೈಲ್ವೆ ನಿಲ್ದಾಣಗಳಲ್ಲಿ, ಬೋಗಿಗಳಲ್ಲಿ ಓಡಾಡುತ್ತಾ ಭಿಕ್ಷೆ ಬೇಡುವುದು, ಬೋಗಿಯನ್ನು ಗುಡಿಸಿ ಅಥವಾ ಹಾಡು ಹೇಳಿ, ಏನೋ ಸರ್ಕಸ್‌ ಮಾಡಿ ಹಣ ಕೇಳುವುದು ಸಾಮಾನ್ಯವಾಗಿತ್ತು.

ಈ ಮಕ್ಕಳೆಲ್ಲಾ ಅನಾಥರು, ಮನೆಮಠ ಇಲ್ಲದವರು, ಕುಟುಂಬದ ಸಂಪರ್ಕ ಇಲ್ಲದವರು ಎಂದೇ ಜನ ಭಾವಿಸುತ್ತಿದ್ದರು. ಇಂತಹ ಎಷ್ಟೋ ಮಕ್ಕಳು ಅನೇಕ ಬಾರಿ ಮಾದಕ ವಸ್ತುಗಳ ದುಶ್ಚಟಗಳಿಗೆ ಬಲಿಯಾಗುವುದು, ರೋಗಗಳಿಗೆ ಗುರಿಯಾಗುವುದು, ಚಿಕ್ಕಪುಟ್ಟ ಆಪರಾಧಿಕ ಚಟುವಟಿಕೆಗಳಿಗೆ ಸಿಲುಕುವುದು, ಹೊಡೆದಾಡಿಕೊಳ್ಳುವುದು ಅಥವಾ ರೈಲ್ವೆ ನಿಲ್ದಾಣದಲ್ಲಿನ ದೊಡ್ಡವರು ಈ ಮಕ್ಕಳನ್ನು ಬೇರೆ ಬೇರೆ (ಕಾನೂನು ಬಾಹಿರವೂ ಸೇರಿದಂತೆ) ಕೆಲಸಗಳಿಗೆ ಬಳಸುವುದು ಸಾಮಾನ್ಯವೇ ಆಗಿತ್ತು. ಎಷ್ಟೋ ಮಕ್ಕಳು ಅನಾರೋಗ್ಯದಿಂದ ಅಥವಾ ದುಶ್ಚಟಗಳಿಂದಾಗಿ ಸತ್ತರೆ, ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು ರೈಲ್ವೇ ಹಳಿಗಳ ಮೇಲೆ ಹೆಣವಾಗುತ್ತಿದ್ದರು.

ಎಲ್ಲೋ ಕೆಲವರು ಹಾಗೂ ಹೀಗೂ ದೊಡ್ಡವರಾಗಿ ಏನೋ ಒಂದು ಕೆಲಸ ಮಾಡಿಕೊಂಡು ಬದುಕಿನೊಡನೆ ಹೆಣಗಾಡಿರಬಹುದು. ಒಂದಷ್ಟು ಮಕ್ಕಳು ಬೇರೆ ಬೇರೆ ಅವಧಿಯಲ್ಲಿ ತಾವೇ ತಾವಾಗಿ ತಮ್ಮ ಮನೆಗಳಿಗೆ ಹಿಂದಿರುಗಬಹುದು ಅಥವಾ ಪೋಷಕರು ಹುಡುಕಿ ಒಯ್ದಿರಬಹುದು. ಇಲ್ಲವೇ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್‌ ಮತ್ತು ಸ್ವಯಂಸೇವಾ ಸಂಸ್ಥೆಗಳ ನೆರವಿನಿಂದಾಗಿ ತಮ್ಮ ಕುಟುಂಬವನ್ನು ಕಂಡುಕೊಂಡಿರಬಹುದು. ಇಲ್ಲವೇ ಸರ್ಕಾರ ಅಥವಾ ಸ್ವಯಂಸೇವಾ ಸಂಘಟನೆಗಳು ನಡೆಸುವ ಮಕ್ಕಳ ನಿಲಯಗಳಲ್ಲಿ ತಾತ್ಕಾಲಿಕವಾಗಿಯೋ ದೀರ್ಘಾವಧಿಯ ಪುನರ್ವಸತಿಯಲ್ಲಿ ಇದ್ದಿರಬಹುದು. 

ಆ ದಿನ ನಾನು ನಿಮ್ಹಾನ್ಸ್‌ ಹಿಂಬಾಗದಲ್ಲಿರುವ ಬಾಲಕರ ಸರ್ಕಾರೀ ಬಾಲಮಂದಿರಕ್ಕೆ ತಲುಪಿದಾಗ ಕಂಡದ್ದು, ಗಾಬರಿ ಮತ್ತು ನಿರೀಕ್ಷೆಯ ಮುಖಹೊತ್ತು ನಿಂತಿದ್ದ ಒಬ್ಬ ಗಂಡಸು ಮತ್ತು ಹೆಂಗಸು. ಬಾಲಮಂದಿರದ ವ್ಯವಸ್ಥಾಪಕರು ಆಗಲೇ ಅವರಿಬ್ಬರೊಂದಿಗೆ ಮಾತನಾಡಿ ವಿವರಗಳನ್ನು ಸಂಗ್ರಹಿಸಿದ್ದರು. ಹುಡುಗ ಮತ್ತು ಆ ಗಂಡಸು, ಹೆಂಗಸು ಪರಸ್ಪರರನ್ನು ನೋಡಿ ಗುರುತಿಸಿದ್ದರು. ಅವರೇ ತನ್ನ ತಾಯಿತಂದೆಯೆಂದೂ ಅವರೊಡನೆ ಹೋಗಲು ತಾನು ಉತ್ಸುಕನಾಗಿರುವುದನ್ನೂ ಹುಡುಗ ಹೇಳಿದ್ದ.

ಮಕ್ಕಳ ನ್ಯಾಯ ವ್ಯವಸ್ಥೆಯೊಳಗೆ ಯಾವುದಾದರೂ ಮಕ್ಕಳು ಬಂದಾಗ ಆ ಮಕ್ಕಳ ಪೂರ್ವಾಪರ ವಿಚಾರಿಸಿ, ಅವರ ಆರೋಗ್ಯ, ಮಾನಸಿಕ ಪರಿಸ್ಥಿತಿ, ಪೋಷಕರು, ಸಂಬಂಧಿಗಳು, ಶಿಕ್ಷಣ ಇತ್ಯಾದಿ ದಾಖಲಿಸಲಾಗುತ್ತದೆ. ಈ ಹುಡುಗನೊಡನೆಯೂ ಎಲ್ಲವೂ ಆಗಿತ್ತು. ಅವನು ೬ನೇ ತರಗತಿಗೇ ಶಾಲೆ ಬಿಟ್ಟಿದ್ದ. ಮನೆಯಲ್ಲೇ ಇದ್ದವನು ಯಾವುದೋ ಕಾರಣಕ್ಕೆ ಸುಮಾರು ವರ್ಷದ ಹಿಂದೆ ಮನೆ ಬಿಟ್ಟಿದ್ದ. ತಂದೆ ತಾಯಿಯ ಹೆಸರು ಹೇಳುತ್ತಾನೆ. ಎಲ್ಲ ಮಕ್ಕಳಂತೆ ಈಗ ತನಗೆ ಮನೆಗೆ ಹೋಗಲು ಇಷ್ಟ. ಎಲ್ಲಿಗೂ ಕಳುಹಿಸಬೇಡಿ ಎನ್ನುತ್ತಿದ್ದ.

ಆದರೆ ತನ್ನ ಮನೆಯ ವಿಳಾಸ ಸ್ಪಷ್ಟವಾಗಿ ಹೇಳಲು ಬಾರದು. ಶಾಲೆಯ ಹೆಸರು ಹೇಳುತ್ತಾನೆ. ಆದರೆ ಅದರ ವಿಳಾಸ ಹೇಳಲು ಬಾರದು. ಗೂಗಲ್‌ ಪ್ರಯೋಗಿಸಿ ನೋಡಿದರೂ (ಆಗ) ಪ್ರಯೋಜನಕ್ಕೆ ಬಂದಿರಲಿಲ್ಲ. ಮಕ್ಕಳ ನ್ಯಾಯ ಕಾಯಿದೆ ಮತ್ತು ನಿಯಮದಂತೆ ಅವನನ್ನು ಮುಂಬಯಿಗೆ ವರ್ಗಾಯಿಸಬೇಕು. ಸರಿ ಅಲ್ಲಿನ ನಿಲಯದಲ್ಲಿ ಅವನು ಇನ್ನೊಂದಷ್ಟು ದಿನ ಇರಬೇಕಾಗುತ್ತದೆ. ಸರಿ, ಮಾಡಬೇಕಾದ ಎಲ್ಲ ಪ್ರಕ್ರಿಯೆಗಳನ್ನು ಅನುಸರಿಸಲು ಹೇಳಿ, ಆ ಹುಡುಗನಿಗೆ ಒಂದು ಪೋಸ್ಟ್‌ ಕಾರ್ಡ್‌ ಕೊಟ್ಟು, ʼನೀನು ಓದಿದ ಶಾಲೆಯಲ್ಲಿ ನಿನಗೆ ನೆನಪಿರುವ ಯಾರಾದರೂ ಟೀಚರ್‌ಗೆ ಪತ್ರ ಬರಿ. ನೀನು ಇಲ್ಲಿ ಇರುವ ಕುರಿತು ಮತ್ತು ನಿನ್ನ ಪೋಷಕರನ್ನು ಸಂಪರ್ಕಿಸಲು ಕೋರಿಕೋʼ. ಹುಡುಗ ಮರಾಠಿಯಲ್ಲಿ ಬರೆದ. ನನಗೆ ನೆನಪಿರುವಂತೆ ʼಗುಲಾಬಿ ಸ್ಕೂಲ್‌ʼ, ಯಾವುದೋ ಬಡಾವಣೆ. ಯಾವುದೋ ಟೀಚರ್‌ ಹೆಸರಿಗೆ ಪತ್ರ ಬರೆದಿದ್ದ.

ಈ ಹಿಂದೆ ಇಂತಹ ಪತ್ರದ ವಿಧಾನ ಹಲವು ಬಾಲಕ ಬಾಲಕಿಯರ ವಿಚಾರದಲ್ಲಿ ಯಶಸ್ಸು ನೀಡಿತ್ತು. ಮನೆಯೋ, ಹತ್ತಿರದ ದೇವಸ್ಥಾನ, ಶಾಲೆ, ಯಾರೋ ಗೆಳೆಯರ ತಂದೆಯೋ ತಾಯಿಯೋ ದೊಡ್ಡ ಹುದ್ದೆಯಲ್ಲಿರುವವರು, ಇತ್ಯಾದಿ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ (ಈಗ ಸಮಗ್ರ ಮಕ್ಕಳ ಸಂರಕ್ಷಣಾ ಯೋಜನೆ) ಅಥವಾ ಸ್ವಯಂಸೇವಾ ಸಂಘಟನೆಗಳ ಪ್ರತಿನಿಧಿಗಳು ಮನೆ ಹುಡುಕಲು ಸೋತಿದ್ದರೂ ಅದು ಹೇಗೋ ಪೋಸ್ಟ್‌ ಕಾರ್ಡ್‌ ಸಂಬಂಧಿಸಿದವರಿಗೆ ಮುಟ್ಟಿ ಮನೆಯವರು ಬಂದಿದ್ದರು.

ಆದರೆ, ಈ ಬಾರಿ ಮುಂಬೈಗೆ ಬರೆದಿದ್ದ ಆ ಪತ್ರಕ್ಕೆ ಉತ್ತರ ಬರಬಹುದು ಎನ್ನುವ ಯಾವುದೇ ನಿರೀಕ್ಷೆ ನನಗಿರಲಿಲ್ಲ. ಯಾಕೆಂದರೆ ವಿಳಾಸ ಅಷ್ಟು ಅಸ್ಪಷ್ಟವಾಗಿತ್ತು. ಆ ಹುಡುಗನನ್ನ ಮುಂಬೈಗೆ ಒಯ್ಯಲು ಪೊಲೀಸ್‌ ಇಲಾಖೆಗೆ ಬೆಂಗಾವಲಿಗೆ ಬರೆದಾಯಿತು. ಅವರಿಂದ ಉತ್ತರ ಬಂದ ಮೇಲೆ ರೈಲ್ವೆ ಇಲಾಖೆಗೆ ಬರೆದು ಟಿಕೆಟ್‌ ತರೆಸಿಕೊಂಡಾಗಿತ್ತು. ಹುಡುಗ ಪೊಲೀಸರೊಂದಿಗೆ ಮುಂಬೈನ ರೈಲು ಹತ್ತುವುದು ಖಾತರಿಯಾಗಿತ್ತು. ಆದರೆ ಈಗ ಅಚ್ಚರಿಯ ಬೆಳವಣಿಗೆ.  

ಇಲ್ಲಿ ನಿಜವಾಗಿಯೂ ಥ್ಯಾಂಕ್ಸ್‌ ಹೇಳಬೇಕಿರುವುದು ಭಾರತ ಅಂಚೆ ಸೇವೆಯವರಿಗೆ, ಅಲ್ಲಿನ ಸಿಬ್ಬಂದಿಗೆ. ಈ ಕತೆ ಖುಷಿ ಕೊಡಲು ಕಾರಣ… ಈ ಹುಡುಗ ಬರೆದ ಪೋಸ್ಟ್‌ ಕಾರ್ಡ್‌ ಮುಂಬೈ ತಲುಪಿತು, ಅಲ್ಲಿನ ಯಾವುದೋ ಬಡಾವಣೆಗೂ ಹೋಯಿತು (ಗೋವಂಡಿ ಎಂದು ನೆನಪು). ಆದರೆ ಅಲ್ಲೆಲ್ಲೂ ಗುಲಾಬಿ ಸ್ಕೂಲ್‌ ಇಲ್ಲ. ಆದರೆ (ಉದ್ದೇಶಪೂರ್ವಕವಾಗಿ) ಪೋಸ್ಟ್‌ ಕಾರ್ಡಿನಲ್ಲಿ ಬರೆಸುತ್ತಿದ್ದ ವಿಚಾರವಾಗಿದ್ದರಿಂದ ಪತ್ರ ಹಲವರ ಕೈಗೆ ಹೋಯಿತು. ಪೋಸ್ಟ್‌ ಮ್ಯಾನ್‌ ಇರಲಿ ಎಂದು ಹೇಗೆ ಹೇಗೋ ಊಹಿಸಿಕೊಂಡು ʼರೋಸ್‌ ಸ್ಕೂಲ್‌ʼ ಎಂಬಲ್ಲಿಗೆ ತಲುಪಿದನೆಂದು ಕಾಣುತ್ತದೆ.

ಅದು ಸರಿಯಾದ ಹೆಸರು. ಆದರೆ ಆ ಹೊತ್ತಿಗೆ ಹುಡುಗ ಯಾರ ಹೆಸರಿಗೆ ಬರೆದಿದ್ದನೋ, ಆ ಹೆಸರಿನ ಟೀಚರ್‌ ಶಾಲೆ ಬಿಟ್ಟಿದ್ದರು. ಶಾಲೆಯ ರೆಕಾರ್ಡ್‌ಗಳಲ್ಲಿ ಹುಡುಕಿದಾಗ ಸಿಕ್ಕಿದ ವಿಳಾಸದಲ್ಲಿ ಆ ಪೋಷಕರು ಇಲ್ಲ! ಮುಗಿಯಿತು ಕತೆ ಎಂದುಕೊಳ್ಳುವ ಹೊತ್ತಿಗೆ ಯಾರೋ ನೀಡಿದ ಸುಳಿವಿನಿಂದ ಟೀಚರ್‌ ಪತ್ತೆಯಾದರಂತೆ. ಅವರ ಮೂಲಕ ಈ ಹುಡುಗನ ಪೋಷಕರ ಹೊಸ ಮನೆ ಅದು ಹೇಗ್ಹೇಗೋ ಸಿಕ್ಕಿತ್ತು. ಮುಂದಿನದೆಲ್ಲಾ ಕ್ಷಿಪ್ರವಾದ ಬೆಳವಣಿಗೆಗಳು. ಬೀದಿ ಬೀದಿ ಅಲೆದು ಹಳೆ ವಸ್ತುಗಳನ್ನು ಸಂಗ್ರಹಿಸಿ ಮಾರುವ ಅಪ್ಪ, ಯಾರದೋ ಮನೆಯಲ್ಲಿ ಕೆಲಸ ಮಾಡುವ ಅಮ್ಮ. ಹೇಗೋ ಏನೋ ಅಷ್ಟು ಇಷ್ಟು ದುಡ್ಡು ಸಂಗ್ರಹಿಸಿ ಪತ್ರ ತಲುಪಿದ ಮಾರನೇ ದಿನವೇ ಟಿಕೆಟ್‌ ಕೊಂಡು ಮೊದಲ ವಿಮಾನವೇರಿ ಬೆಂಗಳೂರಿಗೆ ಬಂದೇ ಬಿಟ್ಟಿದ್ದರು!

ಹಿಂದೆ ಕೆಲವು ಕುಟುಂಬಗಳಲ್ಲಿ ಮಕ್ಕಳನ್ನು ಬೈಯುವಾಗ ಅಥವಾ ಹೆದರಿಸುವಾಗ ʼರಿಮ್ಯಾಂಡ್‌ ಹೋಂಗೆ ಹಾಕಿಸಿ ಬಿಡ್ತೀನಿ. ಹುಷಾರ್‌!ʼ ಎಂದಿರುವುದನ್ನು ಕೇಳಿರಬಹುದು. ಮಕ್ಕಳಿರಲಿ ದೊಡ್ಡವರಿಗೂ ಹಾಗಂದರೇನೆಂದು ಸ್ಪಷ್ಟತೆ ಬಹುಶಃ ಇರುತ್ತಿರಲಿಲ್ಲ. ನೋಡಿರುವುದೂ ಇಲ್ಲ. ಯಾವುದೋ ಸಿನೆಮಾದಲ್ಲಿ ಅಷ್ಟಿಷ್ಟು ಏನೋ ತೋರಿಸಿದ್ದನ್ನು ನೋಡಿರಬಹುದಷ್ಟೆ.

ಆದರೂ ಮಕ್ಕಳಿಗೆ ಆ ಹೆದರಿಕೆ ಇತ್ತು. (ನನಗೆ ನಮ್ಮಪ್ಪ ಅಮ್ಮ ಹಾಗೆ ಹೇಳಿದ್ದರಾ? ನೆನಪಿಲ್ಲ). ಒಂದಾನೊಂದು ಕಾಲದಲ್ಲಿ ಈ ʼರಿಮ್ಯಾಂಡ್‌ ಹೋಂʼ ಎನ್ನುವ ಕಲ್ಪನೆ ಇತ್ತು. ಅದು ಸಮಾಜದ ಸಿದ್ಧ ನಂಬಿಕೆಗಳು, ಸಿದ್ಧಾಂತಗಳು, ರೂಢಿಗಳನ್ನು ಪ್ರಶ್ನಿಸುವ, ಉಲ್ಲಂಘಿಸುವ, ಹತೋಟಿ ಮೀರಿದ ಮಕ್ಕಳನ್ನು ಪರಿವರ್ತಿಸಲು(!) ಇರಿಸುತ್ತಿದ್ದ (ತಾತ್ಕಾಲಿಕವೆಂದೇ ಹೇಳೋಣ) ಸರ್ಕಾರದ ತಾಣ. [ಬ್ರಿಟಿಷರ ಕೊಡುಗೆಗಳಲ್ಲಿ ಒಂದಾದ ಕಲ್ಪನೆ ಮತ್ತು ವ್ಯವಸ್ಥೆ. ಇಲ್ಲಿಯೂ ಮಕ್ಕಳನ್ನು ನಿರ್ದಿಷ್ಟ ಅವಧಿಗೆ, ಕೆಲವು ತಿಂಗಳುಗಳ ಕಾಲ ಮಾತ್ರ ಇರಿಸಬಹುದಾಗಿತ್ತು.

ಭಾರತದಲ್ಲಿ ಈಗ ರಿಮ್ಯಾಂಡ್‌ ಹೋಂ ಎಂಬ ಪದದ ಬಳಕೆ ಇಲ್ಲ.] ಈ ಹೋಂ ಎಂದರೆ ಮಕ್ಕಳ ಜೈಲು ಎಂದೇ ಭಾವಿಸಲಾಗಿತ್ತು. ವಾಸ್ತವವಾಗಿ ಇವು ʼಸುಧಾರಣಾ ಗೃಹʼಗಳು. ತೀರಾ ಇತ್ತೀಚಿನವರೆಗೂ ತೊಂದರೆಯಲ್ಲಿರುವ ಮಕ್ಕಳು ಮತ್ತು ತೊಂದರೆ ಮಾಡಿರಬಹುದಾದ ಮಕ್ಕಳು, ಇಬ್ಬರನ್ನೂ ಒಟ್ಟಿಗೆಯೇ ಇರಿಸಲಾಗುತ್ತಿತ್ತು. ೧೯೮೬ರ ನಂತರ ಈ ಎರಡು ರೀತಿಯ ಹಿನ್ನೆಲೆಯ ಮಕ್ಕಳಿಗಾಗಿ ಪ್ರತ್ಯೇಕ ವ್ಯವಸ್ಥೆ ಜಾರಿಗೆ ಬಂದಿತು. ೨೦೦೦ದ ನಂತರ ಸಾಕಷ್ಟು ಸುಧಾರಣೆ ಎಲ್ಲೆಡೆ ಆಗುತ್ತಿದೆ. 

ಮಕ್ಕಳ ಹಕ್ಕುಗಳ ಒಡಂಬಡಿಕೆ ೧೯೮೯ರ ಪರಿಚ್ಛೇದ ೨೨ರಂತೆ ನಿರಾಶ್ರಿತ ಮಕ್ಕಳಿಗೆ ಆಶ್ರಯ ಒದಗಿಸುವುದು ಕಡ್ಡಾಯ. ಆದರೆ ಆ ಮಕ್ಕಳಿಗೆ ಎಲ್ಲಿಯೂ ಶೋಷಣೆ ಉಂಟಾಗಬಾರದು ಮತ್ತು ಆದಷ್ಟೂ ಬೇಗನೆ ಆ ಮಕ್ಕಳಿಗೆ ಪುನರ್ವಸತಿ ಕಲ್ಪಿಸಿ ಪರಿಚ್ಛೇದ ೧೦ರಲ್ಲಿ ನಿರ್ದೇಶಿಸಿರುವಂತೆ ಅವರ ಪೋಷಕರೊಡನೆ ಸೇರಿಸುವ ಕೆಲಸಗಳು ಆಗಬೇಕು.

ಅನಾಥಾಲಯ, ಆರ್ಫನೇಜ್‌, ಯತೀಮ್ ಖಾನಾ ಎಂದೆಲ್ಲಾ ಹೆಸರಿನಲ್ಲಿ ಸ್ವಯಂಸೇವಾ ಸಂಘಟನೆಗಳು, ಮಠ, ಮಂದಿರಗಳು, ಚರ್ಚು, ಗುರುದ್ವಾರ, ಮಸೀದಿ ಮದರಸಾಗಳು ಮಕ್ಕಳನ್ನು ಇಟ್ಟುಕೊಂಡು ನಡೆಸುವುದನ್ನು ಕೇಳಿರುತ್ತೀರಿ. ದಿಕ್ಕಿಲ್ಲದ ಮಕ್ಕಳಿಗಾಗಿ ನಡೆಸುವ ಈ ರೀತಿಯ ನಿಲಯಗಳೆಂದೇ ಇವುಗಳನ್ನು ಗುರುತಿಸುವುದು. ಚರಿತ್ರೆಯ ದಾಖಲೆಗಳನ್ನು ಹುಡುಕಿಕೊಂಡು ಹೋದರೆ ಕಂಡುಬರುವುದು ಫ್ರಾನ್ಸ್‌ ʼನಾಗರೀಕ ಹಕ್ಕುʼ ಘೋಷಿಸಿದಾಗ ಮಕ್ಕಳು ಪೋಷಕರ ಆಸ್ತಿ ಎಂದು ದಾಖಲಿಸಿರುವುದು ಕಾಣುತ್ತದೆ. ಆದರೆ ಕುಟುಂಬವಿಲ್ಲದ ಮಕ್ಕಳ ಬಗ್ಗೆ ಅಲ್ಲೇನೂ ಹೇಳಿಲ್ಲ.

ಮುಂದೆ ಕಂಡುಬರುವ ಇನ್ನೊಂದು ಉಲ್ಲೇಖ ಜಗತ್ತಿನ ವಿವಿಧೆಡೆಯಿಂದ ಲಕ್ಷಾಂತರ ಜನ ಹೊಸ ಬದುಕು ಅರಿಸಿಕೊಂಡು ಹಡಗು ಹತ್ತಿ ಅಮೇರಿಕೆಯ ತೀರಗಳಲ್ಲಿ ಬಂದಿಳಿದಾಗ ಅನೇಕರು ತಮ್ಮ ಮಕ್ಕಳನ್ನು ಬೇರೆ ಬೇರೆ ಕಾರಣಗಳಿಂದ ಅಲ್ಲಲ್ಲೇ ಬಿಟ್ಟು ಹೋದರಂತೆ, ಬಹುತೇರಿಗೆ ಅವು ಬೇಡದ ಮಕ್ಕಳು. ಇಂತಹ ಮಕ್ಕಳನ್ನು ಕಾಪಾಡಲು ೧೭೨೯ರಲ್ಲೇ ಅನಾಥಾಲಯಗಳನ್ನು ನ್ಯೂಯಾರ್ಕ್‌ ಮತ್ತು ಅಂತಹ ದೊಡ್ಡ ನಗರಗಳಲ್ಲಿ ಆರಂಭಿಸಲಾಗಿತ್ತಂತೆ. ೧೮೫೪ರಲ್ಲಿ ಚಿಲ್ಡ್ರನ್‌ ಏಡ್‌ ಸೊಸೈಟಿಯವರು ʼಆರ್ಫನ್‌ ಟ್ರೈನ್‌ʼ ಹೆಸರಿನಲ್ಲಿ ಅಮೇರಿಕೆಯ ಪೂರ್ವ ಕರಾವಳಿಯಲ್ಲಿನ ನಗರಗಳಲ್ಲಿ ಅನಾಥರಾಗಿದ್ದ ಮಕ್ಕಳನ್ನು ಹೊತ್ತು ಪಶ್ಚಿಮದತ್ತ ನಡೆದಿದ್ದರು.

ಅದರ ಉದ್ದೇಶ ಕೆಲವು ಮಕ್ಕಳನ್ನು ಮನೆಗೆಲಸಕ್ಕೆ, ತೋಟದ ಕೆಲಸಕ್ಕೆ ಅಥವಾ ದತ್ತು ತೆಗೆದುಕೊಳ್ಳುವುದಕ್ಕೆ ಕೊಡುವುದು ಎಂದು ಹೇಳಲಾಗಿದೆ. ಮತ್ತೆ ನಮಗೆ ಸ್ಪಷ್ಟವಾಗಿ ಸಿಗುವ ಇನ್ನೊಂದು ಉಲ್ಲೇಖ ಚಾರ್ಲ್ಸ್‌ ಡಿಕನ್ಸ್‌ ಅವರ ʼಆಲಿವರ್‌ ಟ್ವಿಸ್ಟ್‌ʼನಲ್ಲಿ ಬರುವ ಪ್ಯಾರಿಷ್‌ ನಡೆಸುತ್ತಿದ್ದ ಅನಾಥಾಲಯದ ಮಕ್ಕಳ ಪ್ರಸಂಗದಲ್ಲಿ. ಆಲಿವರ್‌ ತನಗೆ ಇನ್ನೊಂದು ಬಟ್ಟಲು ಗಂಜಿ ಬೇಕು ಎಂದು ಕೇಳುವುದೇ ಎಲ್ಲರೂ ಕಂಗಾಲಾಗುವಂತೆ ಮಾಡುತ್ತದೆ. ಆಲಿವರ್‌ನನ್ನು ಕೊಂದೇ ಬಿಡುವಂತೆ ಒಂಟಿಯಾಗಿಸಿ ಯಾರಿಗಾದರೂ ದಾಟಿಸಿಬಿಡುವ ಯತ್ನ ಮಾಡುತ್ತಾರೆ.

ಭಾರತದಲ್ಲಿ ೧೯೬೦ರಲ್ಲಿ ಅನಾಥಾಲಯಗಳು ಮತ್ತು ಇತರೆ ಧರ್ಮಾಲಯಗಳ (ಮೇಲ್ವಿಚಾರಣೆ ಮತ್ತು ಹತೋಟಿ) ಕಾಯಿದೆ ಎನ್ನುವುದನ್ನು ಜಾರಿ ಮಾಡಲಾಗಿತ್ತು. ವಿವಿಧ ಕಾರಣಗಳಿಂದ ಮಕ್ಕಳು ಅನಾಥರಾಗುವುದು ಇಲ್ಲವೇ ನಿರ್ಗತಿಕರಾಗುವುದು ಅಥವಾ ಮಕ್ಕಳು ತಮ್ಮ ಮೂಲ ನೆಲೆಗಳಿಂದ, ಮನೆಗಳಿಂದ ತಪ್ಪಿ ಹೋಗುವುದು, ಬಿಟ್ಟು ಹೋಗುವುದು, ಓಡಿ ಹೋಗುವುದು ಆದಲ್ಲಿ ಅಂತಹ ಮಕ್ಕಳು ತಮ್ಮ ಸ್ವಂತ ಕುಟುಂಬಗಳೊಂದಿಗೆ ಸೇರುವ ತನಕ ಪರ್ಯಾಯ ವ್ಯವಸ್ಥೆಯಲ್ಲಿ ಇರಬೇಕಾಗುತ್ತದೆ. ಇಂತಹ ಪರ್ಯಾಯ ವ್ಯವಸ್ಥೆಗಳನ್ನು ನಡೆಸುವ ಸಂಸ್ಥೆಗಳು ಈ ನಿರ್ದಿಷ್ಟ ಕಾಯಿದೆಯಡಿ ದಾಖಲಾಗಬೇಕಿತ್ತು. ಈಗ ಮಕ್ಕಳನ್ನು  ಇಂತಹ ಸಂಸ್ಥೆಗಳನ್ನು ಮಕ್ಕಳ ನ್ಯಾಯ ಕಾಯಿದೆಯಡಿ ಪರಿವೀಕ್ಷಿಸಲು, ಆ ಮೂಲಕ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಅವಕಾಶಗಳಿವೆ. ೨೦೧೫ರಲ್ಲಿ ಹೊರಡಿಸಲಾಗಿರುವ ಮಕ್ಕಳ ನ್ಯಾಯ ಕಾಯಿದೆಯಲ್ಲಿ ಎಲ್ಲ ಮಕ್ಕಳ ಸಂಸ್ಥೆಗಳನ್ನು ದಾಖಲಿಸಬೇಕೆಂಬುದು ಕಡ್ಡಾಯವಾಗಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಇದನ್ನು ಉಸ್ತುವಾರಿ ಮಾಡಬೇಕಿದೆ.

ಈಗ ʼಅನಾಥಾಲಯʼ ಎಂಬ ಪದದ ಬಳಕೆ ಮಾಡುವುದನ್ನು ತಪ್ಪಿಸಲು ಬಹಳ ಯತ್ನಗಳಾಗುತ್ತಿವೆ. ಅನಾಥಾಲಯ ಎಂದು ಫಲಕ ಹಾಕಿ ಮಕ್ಕಳನ್ನು ಇಟ್ಟುಕೊಂಡು ಅವರ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಬಾರದು ಎಂದೂ ಹೇಳಲಾಗುತ್ತಿದೆ.‌ ಈ ಕುರಿತು ಸರ್ಕಾರಿ ಆದೇಶವೂ ಇದೆ. ಕಾರಣ ʼಅನಾಥʼ ಎಂಬ ಪದದ ವ್ಯಾಖ್ಯಾನವನ್ನು ಎದುರಿಟ್ಟು ಆದಷ್ಟೂ ಬೇಗನೆ ಮಕ್ಕಳನ್ನು ಈ ಗುರುತಿಸುವಿಕೆಯಿಂದ ತಪ್ಪಿಸಲು ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ನ್ಯಾಯ ಕಾಯಿದೆ ಒತ್ತಾಯಿಸುತ್ತಿದೆ. ಮಕ್ಕಳ ನ್ಯಾಯ ಕಾಯಿದೆಯ ಸೆ.೨(೪೨)ರ ವ್ಯಾಖ್ಯಾನ ಅನಾಥ ಎಂದರೆ, ನಿಜವಾದ ತಾಯಿತಂದೆಯರು ಇಲ್ಲದ ಅಥವಾ ದತ್ತು ಪೋಷಕರಿಲ್ಲದ ಅಥವಾ ನೋಡಿಕೊಳ್ಳಲು ಯಾರೂ ಮುಂದೆ ಬಾರದ ಪರಿಸ್ಥಿತಿಯಲ್ಲಿರುವ ಮಗು ಎಂದು.

ಅನಾಥರು ಎಂಬ ಹಣೆಪಟ್ಟಿ ಹೊತ್ತು ಯಾರೂ ಇರಬಾರದು ಎಂಬ ನೀತಿಯಂತೆ ಎರಡು ಪ್ರಮುಖ ಕೆಲಸಗಳು ಆಗುತ್ತಿವೆ. ಮೊದಲನೆಯದಾಗಿ ಮಕ್ಕಳ ನ್ಯಾಯ ಕಾಯಿದೆಯ ಸೆ.೩೮ರಂತೆ ಯಾರಿಗೇ ಎಲ್ಲಿಯೇ ಹಿಂದೆ ಮುಂದೆ ಇಲ್ಲದ ಪರಿಸ್ಥಿತಿಯಲ್ಲಿ ಮಕ್ಕಳು ಸಿಕ್ಕರೆ (ಸರ್ಕಾರ ಮತ್ತು ಸರ್ಕಾರೇತರರು) ಎಲ್ಲ ಪ್ರಯತ್ನಗಳನ್ನು ಮಾಡಿ ಮಕ್ಕಳ ಪೋಷಕರನ್ನು ಕಂಡು ಹಿಡಿಯುವ ಯತ್ನ ಆದಷ್ಟೂ ಬೇಗ ಮಾಡಬೇಕು. ಯಾವುದೇ ಪುರಾವೆ ಸಿಗದಿದ್ದರೆ (ಎರಡು ವರ್ಷದೊಳಗಿನ ಮಕ್ಕಳಿಗೆ ಎರಡೇ ತಿಂಗಳಲ್ಲಿ ಮತ್ತು ಎರಡು ವರ್ಷ ದಾಟಿದ ಮಕ್ಕಳಾದರೆ ನಾಲ್ಕು ತಿಂಗಳೊಳಗೆ) ಅಂತಹ ಮಕ್ಕಳನ್ನು ʼದತ್ತುʼ ಹೋಗಲು ಅರ್ಹರು ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಘೋಷಿಸಲಾಗುತ್ತದೆ. ಹೀಗಾಗಿಯೇ ದಿನ ಪತ್ರಿಕೆಗಳಲ್ಲಿ ಆಗಾಗ್ಗೆ ಮಕ್ಕಳ ಫೋಟೋ ಹಾಕಿ, ಪೋಷಕರ ಪತ್ತೆಗೆ ನೆರವಾಗಿ ಎಂದು ಜಾಹೀರಾತು ಬರುತ್ತಿರುತ್ತದೆ.  

ಈ ಹಿನ್ನೆಲೆಯಲ್ಲಿ ಈಗ ಯಾವುದೇ ಮಕ್ಕಳ ಮಂದಿರ/ನಿಲಯಗಳನ್ನು ʼಅನಾಥಾಲಯʼ ಎಂದು ಹೆಸರಿಸಲೇಬಾರದು. ಮಕ್ಕಳು ಅಂತಹ ಪರಿಸ್ಥಿತಿಯಲ್ಲಿದ್ದರೆ ಅವರನ್ನು ಆದಷ್ಟೂ ಬೇಗನೆ ದತ್ತು ನೀಡಬೇಕು ಇಲ್ಲವೇ ಫಾಸ್ಟರ್‌ ಕೇರ್‌ನಲ್ಲಿ ಕುಟುಂಬಗಳೊಡನೆ ಇರಿಸಬೇಕು. ಯಾವುದೇ ಸಂಸ್ಥೆ ʼಮಕ್ಕಳನ್ನು ಅನಾಥರು ಎಂದು ತೋರಿಸಿ ಇವರನ್ನು ಸಾಕಲು ದೇಣಿಗೆ ಸಂಗ್ರಹಿಸುವʼ ಕೆಲಸದಲ್ಲಿ ತೊಡಗಬಾರದು. ವಾಸ್ತವವಾಗಿ ಬಹುತೇಕ ಈಗಲೂ ನಡೆಯುವ ಅನೇಕ ಮಕ್ಕಳ ನಿಲಯಗಳು ʼವಿದ್ಯಾರ್ಥಿ ನಿಲಯಗಳೇ ಅಗಿವೆʼ. ʼದತ್ತು ಹೋಗಲಾಗದ ಮಕ್ಕಳʼ ಪಾಲನೆ ಪೋಷಣೆ ಮಾಡುವ ಸಂಸ್ಥೆಗಳು ಕೆಲವು ಇವೆ. ಇಷ್ಟರ ಮೇಲೆ ಒಂಟಿ ಪೋಷಕರ ಮಕ್ಕಳನ್ನು ನೋಡಿಕೊಳ್ಳುವವರೂ ಈಗಲೂ ʼಅನಾಥಾಲಯʼ ಎಂದು ಹೆಸರಿಸಿಕೊಂಡೇ ಇದ್ದಾರೆ.

ಈಗ ಮಠಮಂದಿರಗಳು, ಚರ್ಚು, ಮಸೀದಿಗಳಲ್ಲಿ ಮಕ್ಕಳು ಬೇಕಿರುವುದು ಅಲ್ಲಿನ ಗುರುಗಳು ನಡೆಸುವ ಪ್ರವಚನಗಳಿಗೆ ಹಿಡಿದಿಟ್ಟ ಕೇಳುಗರಾಗಲು, ಅಲ್ಲಿನ ಚಿಕ್ಕಪುಟ್ಟ ಕೆಲಸಗಳಿಗೆ, ಮುಂದೆ ದೊಡ್ಡ ಭಕ್ತರಾಗಲು ಜೊತೆಗೆ ಮಕ್ಕಳಿದ್ದರೆ ತಾನೆ ದಾನಧರ್ಮ ಬರುವುದು! [ಈಗ ಅವುಗಳನ್ನು ಅನಾಥಾಲಯ ಎಂದು ಹೆಸರಿಸುವುದನ್ನು ಬಿಟ್ಟು, ವಿದ್ಯಾರ್ಥಿ ನಿಲಯಗಳೆಂದು ಹೆಸರಿಸಲೇಬೇಕು. ಇಂತಹ ನೂರಾರು (ಹಳೆಯ) ಅನಾಥಾಲಯಗಳಲ್ಲಿ ಇದ್ದು ಶಿಕ್ಷಣ ಪಡೆದು ಯಶಸ್ವಿಯಾದವರ ಸಂಖ್ಯೆಗಳಿಗೇನೂ ಕಡಿಮೆಯಿಲ್ಲ. ಅಂತಹವರಿಗೆ ಈ ವ್ಯವಸ್ಥೆಗಳನ್ನು ಕುರಿತು ಗೌರವ ಪ್ರೀತಿ ಸಕಾರಣವಾಗಿಯೇ ಇರುತ್ತದೆ.] 

ಈಗಿನ ಹೊಸ ಹೆಸರು, ʼಮಕ್ಕಳ ಪಾಲನಾ ಸಂಸ್ಥೆಗಳುʼ (ಸಿ.ಸಿ.ಐ. – ಚೈಲ್ಡ್‌ ಕೇರ್‌ ಇನ್ಸ್‌ಟಿಟ್ಯೂಷನ್ಸ್‌).

***

ಮಕ್ಕಳ ಮನೆ ಹುಡುಕಾಟದ ಕತೆಗಳು ಅಂತ ಹೆಸರಿಟ್ಟು ಬರೀ ಕಾನೂನು ಕಾಯಿದೆ ಹೇಳಿ ಬೋರು ಹೊಡೆಸಿದೆ ಅಂತ ಅಂದುಕೊಳ್ಳಬೇಡಿ. ಒಂದೆರೆಡು ಪ್ರಾಸಂಗಿಕ ಕತೆಗಳನ್ನ ಹೇಳಿಬಿಡುತ್ತೇನೆ.

ಮೊದಲನೆಯದು, ಗೆಳೆಯ ಶಿವರಾಮ್‌ ಪೈಲೂರು ಸಹಾಯ ಮಾಡಿದ ಕತೆ. ಅದೊಂದು ದಿನ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ನನ್ನೆದುರು ಬಂದ ಹುಡುಗ ಧಾರವಾಡದವನು. ಏನು ಎತ್ತ ಕೇಳಿದ ಮೇಲೆ, ಅವನಿಂದ ಸ್ಪಷ್ಟವಾಗಿ ತಿಳಿದದ್ದು, ಧಾರವಾಡದ ಇಂತಹದೊಂದು ಸ್ಥಳದಲ್ಲಿ ಅವನ ಅಪ್ಪ ಮರದ ಕೆಳಗೆ ಹಣ್ಣು ಮಾರುತ್ತಾನೆ. ತಕ್ಷಣ ನನಗೆ ಹೊಳೆದದ್ದು ಆಗ ಧಾರವಾಡ ಆಕಾಶವಾಣಿ ನಿಲಯದಲ್ಲಿ ವಾರ್ತೆಗಳ ವಿಭಾಗದಲ್ಲಿದ್ದ ಶಿವರಾಮ್‌ ಪೈಲೂರ್.‌ ಕೇಳಿಯೇ ಬಿಡೋಣವೆಂದು ಫೋನಾಯಿಸಿದೆ. ಸ್ಪಂದಿಸಿದ ಪೈಲೂರ್‌ ಬೈಕ್‌ ಏರಿ ಆ ಸ್ಥಳಕ್ಕೆ ಹೋಗಿದ್ದೇ ಅಲ್ಲದೆ, ವ್ಯಕ್ತಿಯನ್ನು ಪತ್ತೆ ಹಚ್ಚಿ ನನಗೆ ಕರೆ ಮಾಡಿ ಅವರಿಗೆ ಮೊಬೈಲ್‌ ಕೊಟ್ಟು ಹುಡುಗನೊಂದಿಗೆ ಮಾತನಾಡಿಸಿಯೇ ಬಿಟ್ಟರು. ಹುಡುಗ ಸುರಕ್ಷಿತವಾಗಿ ಮನೆಗೆ ಹೋದ.

ಇನ್ನೊಂದು ಪ್ರಕರಣ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಕುಳಿತ ನನ್ನ ಮೊದಲ ದಿನದ ಅನುಭವ. ಒಂದು ಹುಡುಗಿ ತೆಲುಗಿನಲ್ಲಿ ಹೇಳುತ್ತಿದ್ದಾಳೆ ಇತರರಿಗೆ ಅರ್ಥವಾಗುತ್ತಿಲ್ಲ. ನಮ್ಮ ಸಮಿತಿಯ ಆಗಿನ ಅಧ್ಯಕ್ಷರಾದ ನೀನಾ ನಾಯಕ್‌ ಅವರಿಂದ ಅನುಮತಿ ಪಡೆದು ನನಗೆ ತೆಲುಗು ಬರುತ್ತದೆಂದು ಹೇಳಿ ಆ ಹುಡುಗಿಯನ್ನು ಮಾತನಾಡಿಸಿದೆ. ಆಕೆ ತನ್ನ ಕುಟುಂಬದೊಡನೆ ತುಮಕೂರಿನಲ್ಲಿ ಯಾವುದೋ ಕಂಪನಿಯ ಕೇಬಲ್‌ ಹಾಕಲು ನೆಲ ಅಗಿಯುವ ಕೆಲಸದಲ್ಲಿದ್ದಳು. ಏನೋ ಮುನಿಸಿಕೊಂಡು ಬೆಂಗಳೂರು ಟ್ರೈನ್‌ ಹತ್ತಿದವಳು ಅಲ್ಲಿ ಇಲ್ಲಿ ಹೋಗಿ ಕೊನೆಗೆ ಬೆಂಗಳೂರಿನ ಬಾಲಕಿಯರ ಬಾಲ ಮಂದಿರಕ್ಕೆ ಸೇರಿದ್ದಳು. ಗೊತ್ತಾಗಿದ್ದಿಷ್ಟು.

ಅವಳ ಕುಟುಂಬ ಈಗ ತುಮಕೂರಿನಲ್ಲಿ ಇರಲು ಸಾಧ್ಯವಿಲ್ಲ. ಯಾರ ಬಳಿಯೂ ಆಗ ಮೊಬೈಲ್‌ ಇರಲಿಲ್ಲ. ಅವರ ಮೂಲ ಊರು ಬಳ್ಳಾರಿಯ ಬಳಿಯ ಯಾವುದೋ ಹಳ್ಳಿ. ನೋಡೋಣವೆಂದುಕೊಂಡು ಬಳ್ಳಾರಿಯ ಗೆಳೆಯ ತಾಜುದ್ದೀನ್‌ಗೆ ಫೋನ್‌ ಮಾಡಿ ಹುಡುಗಿಗೆ ಕೊಟ್ಟೆ. ಅವರು ಅಲ್ಲಿನ ತೆಲುಗಿನಲ್ಲಿ ಮಾತನಾಡಿದಾಗ ಹುಡುಗಿಯ ಮುಖದಲ್ಲಿ ಕಂಡ ಉತ್ಸಾಹ, ಕಣ್ಣಿನಲ್ಲಿನ ಬೆಳಕು ಬಹುಶಃ ಊರು ಸಿಕ್ಕಿತು ಎಂದು ಅನಿಸಿತು.

ತಾಜುದ್ದೀನ್‌ ಅದೇ ಆಗಲೆ ಹೊರಟು, ಬಳ್ಳಾರಿಯ ಅಂಚಿನಲ್ಲಿ ಕರ್ನಾಟಕದ ಗಡಿ ದಾಟಿ ಮಧ್ಯಾಹ್ನದ ಹೊತ್ತಿಗೆ ಹಳ್ಳಿ ಮುಟ್ಟಿ ಈ ಹುಡುಗಿಯ ಅಜ್ಜನನ್ನು ಭೇಟಿ ಮಾಡಿ ಅವರೊಡನೆ ತನ್ನ ಮೊಬೈಲ್‌ನಿಂದ ನನಗೆ ಕರೆ ಮಾಡಿ ಹುಡುಗಿಯೊಡನೆ ಮಾತನಾಡಿಸಿದ. ನಮ್ಮೆಲ್ಲರ ನಡುವೆ ಆದ ಮಾತುಕತೆಯ ಫಲವಾಗಿ ಆ ಹುಡುಗಿಯನ್ನು (ತಾಂತ್ರಿಕವಾಗಿ ಆಂಧ್ರಪ್ರದೇಶಕ್ಕೆ ವರ್ಗ ಮಾಡಿಸಬೇಕಿತ್ತು) ನಮ್ಮಲ್ಲೇ ಇನ್ನೊಂದು ವಾರ ಉಳಿಸಿಕೊಂಡು ಅವರ ಮನೆಯವರು ಬಂದಾಗ ಅವರ ವಶಕ್ಕೆ ನೀಡಲಾಯಿತು.

ಈ ಮನೆ ಹುಡುಕುವ ಕತೆಗಳು ಇಲ್ಲಿಗೇ ಮುಗಿಯುವುದಿಲ್ಲ. ಇವು ಸದಾ ಇಷ್ಟು ಸುಲಭವೂ ಆಗುವುದಿಲ್ಲ. ಮಕ್ಕಳು ಹೇಳುವ ಯಾವುದೋ ಜಾತ್ರೆ, ದೇವಸ್ಥಾನ, ಬೆಟ್ಟ, ದೊಡ್ಡ ಮರ, ಹೊಟೆಲ್‌, ಸ್ಕೂಲ್‌, ಥಿಯೇಟರ್‌ ಅಷ್ಟನ್ನೇ ಗುರುತು ಹಿಡಿದುಕೊಂಡು ಚೈಲ್ಡ್‌ಲೈನ್‌ ೧೦೯೮ ಸಿಬ್ಬಂದಿ, ಸಂಬಂಧಿತ ಪ್ರೊಬೇಷನ್‌ ಅಧಿಕಾರಿಗಳು, ಸ್ವಯಂಸೇವಕರು ಎಲ್ಲೆಲ್ಲೋ ಮಕ್ಕಳ ಮನೆಗಳನ್ನು ಪತ್ತೆ ಮಾಡಿರುತ್ತಾರೆ. ಕೆಲವರಿಗೆ ಮನೆ ಪತ್ತೆ ಹಚ್ಚುವ ಕೆಲಸದಲ್ಲಿ ಪರಿಣಿತಿಯೇ ಬಂದು ಬಿಟ್ಟಿರುತ್ತದೆ. ಆದರೆ ಎಲ್ಲರಿಗೂ ಆ ಅದೃಷ್ಟವಿರುವುದಿಲ್ಲ. ಹತ್ತಾರು ಬಾರಿ ಓಡಾಡಿದರೂ ಮನೆ ಸಿಗದಿರುವ ಪ್ರಸಂಗಗಳಿರುತ್ತವೆ. ಮಕ್ಕಳನ್ನೇ ಕರೆದೊಯ್ದರೂ, ನಗರಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ತಮ್ಮ ಮನೆ ಗುರುತಿಸಲಾಗುವುದಿಲ್ಲ.

ಬೆಂಗಳೂರು ನಗರ ಮಕ್ಕಳ ಕಲ್ಯಾಣ ಸಮಿತಿಯ ಈಗಿನ ಅಧ್ಯಕ್ಷರಾಗಿರುವ ಅಂಜಲಿ ರಾಮಣ್ಣ ಅಸ್ಸಾಂ ರಾಜ್ಯದ ಒಂದು ಮಗುವಿನ ಮನೆಯನ್ನು ಗೂಗಲ್‌ ಮ್ಯಾಪ್‌ ಬಳಸಿ ಪತ್ತೆ ಹಚ್ಚಿದ್ದರ ಬಗ್ಗೆ ಇತ್ತೀಚೆಗೆ ಖುಷಿಯಿಂದ ಹೇಳಿದರು.

ಮಕ್ಕಳು ಕಳೆದು ಹೋದರೆ ಪೊಲೀಸ್‌ ದೂರು ಕೊಡುವುದು ಕಡ್ಡಾಯವಾಗಿದೆ. ಹಿಂದೆ ಮುಂದೆ ಇಲ್ಲದ ಮಕ್ಕಳು ಕಂಡುಬಂದಾಗಲೂ ಪೊಲೀಸ್‌ ಮಾಹಿತಿ ಕಡ್ಡಾಯವಾಗಿದೆ. ಕಳೆದು ಹೋದ ಮಕ್ಕಳನ್ನು ಹುಡುಕಲು ಮತ್ತು ಪೋಷಕರೊಂದಿಗೆ ಸೇರಿಸಲು ಈಗ ತಂತ್ರಜ್ಞಾನದ ನೆರವು ಕೂಡಾ ಇದೆ.

ಇಷ್ಟೆಲ್ಲಾ ಇದ್ದರೂ, ನೇಪಾಳದ ಹುಡುಗನೊಬ್ಬ ತನ್ನ ಮನೆ ಬೆಟ್ಟದ ಕೆಳಗೆಂದೂ (ಪಹಾಡ್‌ಕೆ ನೀಚೇ) ತನ್ನನ್ನು ಅಲ್ಲಿಗೆ ಕರೆದೊಯ್ದರೆ ತೋರಿಸುವೆನೆಂದೂ ಹೇಳುತ್ತಿದ್ದುದು ನನಗೆ ಈಗಲೂ ನೆನಪಿದೆ. ಬಹಳ ಕಷ್ಟಪಟ್ಟು ಅವನನ್ನು ನೇಪಾಳಕ್ಕೆ ಕಳುಹಿಸಲು ಯತ್ನಿಸಿದೆವು. ಆದರೆ ಅಲ್ಲಿನ ಸರ್ಕಾರ ಅಧಿಕೃತವಾಗಿ ಅವನಿಗೆ ಗಡಿ ದಾಟಲು ಬಿಡಲೇ ಇಲ್ಲ. ಹುಡುಗ ಇಲ್ಲೇ ಬೆಂಗಳೂರಿನಲ್ಲಿ ಬೆಳೆದ, ಇಲ್ಲಿಯವನೇ ಆಗಿಬಿಟ್ಟ.

‍ಲೇಖಕರು ವಾಸುದೇವ ಶರ್ಮ

September 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Ramanna Anjali

    ಬಹುಪಾಲು ಮಕ್ಕಳು ಅವರು ಹೇಳಿದ ಜಾಗಕ್ಕೆ ಕರೆದುಕೊಂಡು ಹೋದರೆ ಮನೆ ತೋರಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ಅದಕ್ಕೆ ಇಲಾಖೆಯಲ್ಲಿ ಬಜೆಟ್ ಇಲ್ಲ. ಪಕ್ಕದ ರಾಜ್ಯದ ಮಗುವೊಂದು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತನ್ನ ಭಾಷೆ ಊಟ ಕುಟುಂಬ ಎಲ್ಲವನ್ನೂ ಮರೆತು ಇಲ್ಲಿಯೇ ಇರುವಂತಾಗಿದೆ. 12ವರ್ಷದ ಹಿಂದೆ ಬಿಹಾರಕ್ಕೆ ಹೋದ ಬಾಲಕಿ ರಾಮನಗರದಲ್ಲಿ ತನ್ನ ಮನೆ ಇದೆ ಎಂದು ಅಲ್ಲಿಂದ ಧಿಡೀರ್ ಅಂತ ಬಂದು ನಿಂತಿದ್ದಳು. ಕನ್ನಡ ಮರೆತಿದ್ದಳು. ಅಪ್ರಾಯಸ್ಥ ಗರ್ಭಿಣಿ ಕೂಡ. ಮನೆ ಕುಟುಂಬ ಪತ್ತೆ ಆಗಲೇ ಇಲ್ಲ. ಗಂಡು ಮಗು ಹೆಟ್ಟಿದ್ದಾಳೆ ಎನ್ನುವ ಒಂದೇ ಕಾರಣಕ್ಕೆ ಬಿಹಾರದ ಅವಳ ವಿವಾಹಿತ ಕುಟುಂಬ ಕೊನೆಗೂ ಅವಳನ್ನು ಕರೆಸಿಕೊಂಡಿತು. ಅವಳು ಬಿಹಾರದ ವಿಳಾಸವನ್ನು ಕೂಡ ಮಾರೆತಿದ್ದಳು. ಅದನ್ನು ಪತ್ತೆ ಮಾಡಿದ್ದು ಮತ್ತೊಂದು ಕಥೆ. ಇನ್ನೂ ರಾಶಿ ರಾಶಿ ಅನುಭವ ಇದೆ. ನಿಮ್ಮ ಬರಹ ಎಂದಿನಂತೆ ಒಂದು ಪಠ್ಯ.
    ಅಂಜಲಿ ರಾಮಣ್ಣ

    ಪ್ರತಿಕ್ರಿಯೆ
  2. Sampath Katti

    ಸರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಈ ಅಂಕಣ.. ಕಾನೂನಿನ ಅರಿವಿನ ಜೊತೆ ಜೊತೆ ಒಂದು ವಿಷಯವನ್ನು ಹೆಗೆಲ್ಲಾ ಗ್ರಹಿಸಬಹುದು ಎನ್ನುವ ವಿಚಾರ ತುಂಬಾ ಚೆನ್ನಾಗಿದೆ. ಮುಖ್ಯವಾಗಿ ನನಗೆ ಇಷ್ಟವಾದ ವಿಷಯ ಮಗುವಿನ ವಿಳಾಸ ಪತ್ತೆ ಮಾಡಲು ತಾವು ಪ್ರಯೋಗಿಸಿದ ಆ ಪೋಸ್ಟ್ ಕಾರ್ಡ್ ನಲ್ಲಿ ಅತಿ ನೆಚ್ಚಿನ ವ್ಯಕ್ತಿಗೆ (ಟೀಚರ್) ಪತ್ರ ಬರೆಯುವಂತೆ ಮಾಡಿ ಕೊನೆಗೂ ಆ ಬಾಲಕನ ಹೆತ್ತವರ ಪತ್ತೆ ಮಾಡಿರುವುದು ಮತ್ತು ಅವನ ವಿಳಾಸವನ್ನು ಗುರುತಿಸಿರುವುದು.. ಇಲ್ಲಿ ಆ ಪೋಸ್ಟ್ ಮ್ಯಾನ್ ಅವರ ಪ್ರಯತ್ನವನ್ನು ಮೆಚ್ಚಲೇ ಬೇಕು..!!

    ನಿಮ್ಮ ನೆನಪಿನ, ಅನುಭವದ ಪುಟಗಳಿಂದ ಇಂತಹ ಹತ್ತು ಹಲವಾರು ಬರಹಗಳು ಮೂಡಿ ಬರಲಿ ನನ್ನಂಥ ಸಮಾಜ ಕಾರ್ಯಕರ್ತರಿಗೆ ಇದು ಮಾರ್ಗದರ್ಶನವಾಗಲಿ ಎಂದು ಶುಭ ಹಾರೈಸುತ್ತೇನೆ.

    ಧನ್ಯವಾದಗಳು ಸರ್ ಇಂತಹ ಉತ್ತಮ ಮಾಹಿತಿಗಾಗಿ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: